ವರ್ತಮಾನ ಆರ್.ಹೆಚ್.ನಟರಾಜ್ ಸಂತ್ರಸ್ತರಿಗೆ ಬೇಕಿರುವುದು ಸಾಂತ್ವನ – ಅನ್ಯರ ಆಹಾರದ ವಿವಾದವಲ್ಲ 

ವರ್ತಮಾನ ಆರ್.ಹೆಚ್.ನಟರಾಜ್ ಸಂತ್ರಸ್ತರಿಗೆ ಬೇಕಿರುವುದು ಸಾಂತ್ವನ – ಅನ್ಯರ ಆಹಾರದ ವಿವಾದವಲ್ಲ 

ವರ್ತಮಾನ   ಆರ್.ಹೆಚ್.ನಟರಾಜ್   ಸಂತ್ರಸ್ತರಿಗೆ ಬೇಕಿರುವುದು ಸಾಂತ್ವನ – ಅನ್ಯರ ಆಹಾರದ ವಿವಾದವಲ್ಲ 

ಸರ್ಕಾರ ನೊಂದವರ ನೆರವಿಗೆ ಧಾವಿಸಬೇಕು.ಕಂದಾಯ ಸಚಿವರು ಕೆಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರೆ, ಮುಖ್ಯಮಂತ್ರಿಗಳು ಕೂಡ ಕೆಲವು ಕಡೆ ಪ್ರವಾಸ ಮಾಡಿ ಸಂಕಷ್ಟ ಆಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬಹುತೇಕ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ನೆಪಮಾತ್ರದ ಸಭೆ ಮಾಡಿ ಎಲ್ಲವನ್ನೂ ಅಧಿಕಾರಿಗಳ ಕೈಗೊಪ್ಪಿಸಿ ಬೇರೆ ಕೆಲಸದಲ್ಲಿ ನಿರತರಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ.


ವರ್ತಮಾನ


ಆರ್.ಹೆಚ್.ನಟರಾಜ್


ಸಂತ್ರಸ್ತರಿಗೆ ಬೇಕಿರುವುದು ಸಾಂತ್ವನ – ಅನ್ಯರ ಆಹಾರದ ವಿವಾದವಲ್ಲ 


ಕುರಿ ಕೋಳಿ ಕಿರಿ ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆoಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತಿಯೆಂಬರು
ಅವರೆoತು ಕೀಳು ಜಾತಿಯಾದರು? ಜಾತಿಗಳೇ ನೀವೇಕೆ ಕೀಳಾಗಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು
ಮಾದಿಗರುಂಡದ್ದು ಪುಲ್ಲಿಗೆ, ಬ್ರಾಹ್ಮಣರಿಗೆ ಶೋಭಿತವಾಯಿತು
ಅದೆಂತೆAದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ದವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯ
ಉರಿಲಿಂಗಪೆದ್ದಿಗಳರಸು ಒಲ್ಲನವ್ವ."

ಶ್ರೇಷ್ಠ ವಚನಕಾರ್ತಿ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರಿ ಕಾಳವ್ವೆಯ ಈ ವಚನ ಅಂದು -ಇಂದಿಗೂ ಚಾಲ್ತಿಯಲ್ಲಿರುವ ಆಹಾರ ಪದ್ಧತಿ ಕುರಿತು ಉಲ್ಲೇಖಿಸುತ್ತಲೇ ಯಾವುದು ಶ್ರೇಷ್ಟ ಎನ್ನುವುದನ್ನು ತಿಳಿಸುತ್ತಲೇ ಆಹಾರದ ವಿಷಯವಾಗಿ ಸ್ವಾಭಿಮಾನದ ಪ್ರಶ್ನೆ ಎತ್ತುತ್ತದೆ. 
ಇದು ಒಂದೆಡೆಯಾದರೆ ಭಕ್ತಿ ಭಂಡಾರಿ ಬಸವಣ್ಣ 
"ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ
ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲು
ಅವರನ್ನು ಲಿಂಗನೆoಬೆ, ಸಂಗನೆoಬೆ
ಕೂಡಲ ಸಂಗಮದೇವಾ ಅವರ ಮುಖಲಿಂಗಿಗಳೆoಬೆನು"
...ಎoದಿದ್ದಾರೆ.


ವೃತ್ತಿಯಿoದ ವೇಶ್ಯೆ,ಚಾಂಡಾಲನೇ ಆಗಿರಲಿ. ಪ್ರವೃತ್ತಿಯಿಂದ ಮಾಂಸಾಹಾರಿ, ಸುರೆ ಸೇವಿಸುವವರಾಗಿರಲಿ, ಅಂಥವರು ಕೂಡಾ ಶರಣ ಸಿದ್ಧಾಂತವನ್ನು ಗೌರವಿಸುವವನಾದರೆ ಸಮಾನತೆಯ ಪ್ರತೀಕವಾದ ಲಿಂಗ ಧರಿಸಿದವರಾದರೆ ಅವರನ್ನು ಸಂಗಯ್ಯನೆoದೇ ಕಾಣುತ್ತೇನೆ ಎಂದು ಈ ವಚನದಲ್ಲಿ ತುಂಬ ಸ್ಪಷ್ಟವಾಗಿ ಬಸವಣ್ಣನವರು ಹೇಳಿದ್ದಾರೆ.


ಈ ವಚನಗಳ ಒಟ್ಟರ್ಥ ಇಷ್ಟೇ ಆಹಾರ ಪದ್ಧತಿ ಅವರವರಿಗೆ ಬಿಟ್ಟಿದ್ದು ಯಾರು ತಮಗೆ ಎನು ಸರಿ ಎನಿಸುತ್ತದೆಯೋ ಅದನ್ನು ತಿನ್ನಲು ಯಾವ ಅಡ್ಡಿಯೂ ಇಲ್ಲ.


ಕೇವಲ ಬಸವತತ್ವ ಮಾತ್ರವಲ್ಲ ಜಗತ್ತಿನ ಬಹುತೇಕ ಎಲ್ಲಾ ಧರ್ಮಗಳು ಆಹಾರ ಪದ್ಧತಿಯ ವಿಷಯದಲ್ಲಿ ಇದನ್ನೇ ಹೇಳುತ್ತವೆ.ಆದರೆ, ಜೈನಧರ್ಮದಂತಹ ಕೆಲ ಕಠಿಣ ಧಾರ್ಮಿಕ ವಿಧಿಗಳನ್ನೊಳಗೊಂಡ ಧರ್ಮಗಳು ಮಾತ್ರ ಅಹಿಂಸೆಯನ್ನು ಬಲವಾಗಿ ಪ್ರತಿಪಾದಿಸುವುದರೊಂದಿಗೆ ಇಂತಹದನ್ನೇ ತಿನ್ನಬೇಕು ಅದು ಇದೇ ಸಮಯದಲ್ಲಿ ಇಷ್ಟೇ ತಿನ್ನಬೇಕು ಎನ್ನುವ ಕಟ್ಟುಪಾಡುಗಳನ್ನು ಅಳವಡಿಸಿವೆ.


ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದರು ಎಂಬ ವಿಷಯವನ್ನು ವಿವಾದವನ್ನಾಗಿ  ಸೃಷ್ಟಿಸುತ್ತಿರುವುದೇ ಕಾರಣವಾಗಿ ಈ ವಿಚಾರ ಹೇಳಬೇಕಾಗಿ ಬಂದಿದೆ. ಇಂತಹ ವಿವಾದ ಇದೇ ಮೊದಲೇನಲ್ಲ.ಈ ಹಿಂದೆ ಮೀನೂಟ ಮಾಡಿ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ತೆರಳಿದ್ದರು ಎಂಬ ವಿವಾದ ಸೃಷ್ಟಿಯಾಗಿತ್ತು.


ಇತ್ತೀಚಿನ ದಿನಗಳಲ್ಲಿ ಆಹಾರ ಸಂಸ್ಕೃತಿಯ ವಿಷಯವಾಗಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ ಅದೂ ಎಲ್ಲಿಯವರೆಗೆ ಹೋಯಿತೆಂದರೆ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನಿವಾರಿಸುವ ಸಲುವಾಗಿ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ನಿರ್ಧಾರ ಕೈಗೊಂಡ ಸಮಯದಲ್ಲೂ ಇಂತಹದೆ ಅಪಸ್ವರ ಕೇಳಿಬಂದವು.


ನದ ಮಾಂಸ ಸೇವನೆ ವಿಷಯದಲ್ಲಂತೂ ದೊಡ್ಡ ರಾದ್ಧಾಂತ ಸೃಷ್ಟಿಸಲಾಗಿದೆ. ಇನ್ನೊಂದು ವಿಷಯ ಬಯಲು ಸೀಮೆಯ ಮುನೇಶ್ವರ, ಕರಾವಳಿಯ ಕೊರಗಜ್ಜ, ಎಲ್ಲೆಡೆ ಕಾಣ ಸಿಗುವ ಮಾರಮ್ಮ, ಚಪಲಮ್ಮ, ದುರ್ಗಮ್ಮ ಮೊದಲಾದ ಶಕ್ತಿ ದೇವತೆಗಳ ಆರಾಧನೆಯಲ್ಲಿ ಮಾಂಸಾಹಾರವೇ ನೈವೇದ್ಯ ಹಾಗಾದರೆ ಇವರು ದೇವರುಗಳಲ್ಲವೆ ಎಂಬುದು ಮುಖ್ಯ ಪ್ರಶ್ನೆ.


ಕರ್ನಾಟಕದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಘಟನಾವಳಿಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ನಮಗೆ ಸಿಗುವ ಅತ್ಯಂತ ದೊಡ್ಡ ಹಾಗೂ ಗಮನಾರ್ಹ ಉದಾಹರಣೆ ಶರಣ ಚಳವಳಿ.ಈ ಚಳವಳಿಯನ್ನು ಬಿಟ್ಟು ಕರ್ನಾಟಕದ ಇತಿಹಾಸವನ್ನು ಊಹಿಸಲು ಅಸಾಧ್ಯ. ಕಲ್ಯಾಣ ಕರ್ನಾಟಕದ ಈ ಚಳವಳಿ ಇಂದಿಗೂ ಜಗತ್ತಿನಾದ್ಯಂತ ವ್ಯಾಪಕ ಚರ್ಚೆ, ಪ್ರಶಂಸೆ ಮತ್ತು ಕುತೂಹಲವನ್ನು ಮೂಡಿಸಿದೆ.


ಇಂತಹ ಚಳವಳಿ ಮತ್ತು ಆಗ ಇದ್ದ ಆಹಾರ ಸಂಸ್ಕೃತಿಯತ್ತ ಒಮ್ಮೆ ಕಣ್ಣು ಹಾಯಿಸುವುದಾದರೆ
 ಶರಣ ಗಣದಲ್ಲಿ ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾoಬಿಕೆಯoಥ ಬೆರಳೆಣಿಕೆಯಷ್ಟು ಜನರನ್ನು ಹೊರತು ಪಡಿಸಿದರೆ ಉಳಿದವರೆಲ್ಲಾ ತಳಸಂಸ್ಕೃತಿಯಿoದ ಬಂದವರಾಗಿದ್ದರು. ಅವರೆಲ್ಲ ತಮ್ಮ ಆಹಾರ ಪದ್ಧತಿಯ ಲಭ್ಯತೆ, ರೂಢಿಯನ್ನು ಅನುಸರಿಸಿಕೊಂಡೇ ಬಂದಿದ್ದರೆ ಹೊರತು ಶುದ್ಧ ಶಾಖಾಹಾರಿಗಳಾಗಿ ಬಂದಿದ್ದರೆoಬ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಮಾಂಸಾಹಾರದ ಹಿನ್ನೆಲೆಯಿಂದ ಬಂದಿದ್ದ ಹಲವಾರು ಶರಣರು ಆ ಕುರಿತು ತಮ್ಮ ವಚನಗಳಲ್ಲಿ ವಿವರಗಳನ್ನು ದಾಖಲಿಸಿದ್ದಾರೆ.ಆಹಾರ ಪದ್ದತಿ ಕುರಿತು ಉರಿಲಿಂಗಪೆದ್ದಿ ಸೇರಿ ಹಲವರ ವಚನಗಳು ನಮ್ಮ ಕಣ್ಣಮುಂದಿವೆ.ಬಸವ ಚಳವಳಿ ಸಮಾನತೆಯ ಚಳವಳಿಯಾಗಿ ಯಾಕೆ ದೊಡ್ಡ ಮಟ್ಟಕ್ಕೆ ಬೆಳೆಯಿತು ಎಂದರೆ ಇಲ್ಲಿನ ಯಾವೊಬ್ಬ ಶರಣರು ಇನ್ನೊಬ್ಬರ ಆಹಾರ ಪದ್ದತಿಯ ಬಗ್ಗೆ ಮಾತನಾಡಲಿಲ್ಲ.ಎಲ್ಲರನ್ನು ತಿನ್ನುವ ಎಲ್ಲಾ ಪದಾರ್ಥಗಳನ್ನು ಗೌರವಿಸಿದ ಪರಿಣಾಮ ಲಿಂಗಾಯತ ಧರ್ಮ, ವಚನ ಚಳವಳಿ ಜನ ಸಾಮಾನ್ಯರ ದನಿಯಾಯಿತು.


ಇದರ ನಡುವೆ ಬಸವಾದಿ ಶರಣರು ಯಾಗ, ಯಜ್ಞಗಳ ಹೆಸರಿನಲ್ಲಿ ನಡೆಸುವ ಪ್ರಾಣಿ ವಧೆಯನ್ನು ವಿರೋಧಿಸಿದರು. ದೇವರು ಧರ್ಮದ ಹೆಸರಿನಲ್ಲಿ ತಾನು ಪ್ರಾಣಿಗಳ ವಧೆ ಮಾಡಿ ಕದ್ದು ಮುಚ್ಚಿ ಮಾಂಸಾಹಾರ ಸೇವಿಸಿ ಶಾಖಾಹಾರ ವೈಭವೀಕರಿಸುವ ಡಂಭಾಚಾರಿಗಳ ಬಣ್ಣ ಬಯಲಿಗೆಳೆದರು. 


ಇನ್ನೂ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ತಮ್ಮ ಆಹಾರ ಯಾವುದಿರಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಇದೆ ಎಂಬ ಮಾತನ್ನು ದೇಶದ ನ್ಯಾಯಾಲಯಗಳು ಹಲವು ಆದೇಶಗಳಲ್ಲಿ ಸ್ಪಷ್ಟವಾಗಿ ಹೇಳಿವೆ. 2017ರ ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಆಹಾರ ಪದ್ಧತಿ ಏನಿರಬೇಕು ಎಂಬುದನ್ನು ಆಯ್ಕೆ ಮಾಡಿ ಕೊಳ್ಳುವುದು ಖಾಸಗಿತನದ ಹಕ್ಕುಗಳ ಒಂದು ಭಾಗ, ಅದನ್ನು ರಕ್ಷಿಸಬೇಕು ಎಂದು ಹೇಳಿದೆ. ಇನ್ನೊಂದು ತೀರ್ಪಿನಲ್ಲಿ ಕೋರ್ಟ್, ‘ವ್ಯಕ್ತಿಯೊಬ್ಬ ಆಹಾರವಾಗಿ ಏನನ್ನು ಸೇವಿಸುತ್ತಾನೆ ಎಂಬುದು ಆತನ ವೈಯಕ್ತಿಕ ವಿಚಾರ. ಅದು ನಮ್ಮ ಸಂವಿಧಾನದ 21ನೆಯ ವಿಧಿಯಲ್ಲಿ ಹೇಳಿರುವ ಖಾಸಗಿತನದ ಸ್ವಾತಂತ್ರ‍್ಯದ ಭಾಗ’ ಎಂದು ಹೇಳಿದೆ.


ಇಂತಹ ಎಲ್ಲಾ ದೃಷ್ಟಾಂತಗಳು ತಮ್ಮ ಕಣ್ಣ ಮುಂದಿರುವಾಗ ಯಾರ ತಟ್ಟೆಯಲ್ಲಿ ಏನಿದೆ ಎಂದು ಇಣುಕಿ ನೋಡುವ ಚಾಳಿ ಅದೇಗೆ ಹುಟ್ಟಿತೋ ಗೊತ್ತಿಲ್ಲ. ಮೇಲೆ ಹೇಳಿದ ಹಾಗೆ ಜೈನ ಧರ್ಮದಂತಹ ಕಠೋರ ಆಚರಣೆಗಳಿರುವ ಕೆಲವು ಧರ್ಮಗಳನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಧರ್ಮ ಇಂತಹದನ್ನೇ ತಿನ್ನಬೇಕು,ಇದನ್ನು ತಿನ್ನಬಾರದು ಎಂದು ಹೇಳಿಲ್ಲ.ಎಲ್ಲವೂ ಹೇಳಿರುವುದು ಸೋದರತ್ವ, ಸಹಬಾಳ್ವೆ,ಪರಸ್ಪರರನ್ನು ಗೌರವಿಸುವುದು ವಸುದೈವ ಕುಟುಂಬ ಎಂಬ ವಿಶಾಲ ಅರ್ಥವನ್ನು.


ವಸ್ತು ಸ್ಥಿತಿ ಹೀಗಿರುವಾಗ ಇಲ್ಲದ ವಿಷಯವನ್ನಿಟ್ಟುಕೊಂಡು ಅದನ್ನು ವಿವಾದ ಮಾಡಿ ಗಾಳಿಯಲ್ಲಿ ಗುಂಡು ಹೊಡೆದು ಅದು ಗುರಿಮುಟ್ಟಿ ತಮ್ಮ ಉದ್ದೇಶ ಈಡೇರಬೇಕೆನ್ನುವ ದುರಾಲೋಚನೆ ಹೊರತು ಬೇರೆನೂ ಅಲ್ಲ.
ಪ್ರತಿ ಪಕ್ಷ ನಾಯಕರಾಗಿ ಸಿದ್ದರಾಮಯ್ಯ ನೆರೆ ಸಂತ್ರಸ್ತರು,ಮಳೆ ಹಾನಿಯಿಂದ ಪರಿತಪಿಸಿದವರ ಸಂಕಷ್ಟ ಕೇಳಲು ಹೋಗಿದ್ದಾರೆ. ಆಡಳಿತ ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಬೇಕು.ಇದು ಸರ್ಕಾರದ ಜವಾಬ್ದಾರಿ ಕೂಡಾ.


ಮಳೆಯಿಂದಾಗಿ 64 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 18,280 ಹೆಕ್ಟೇರ್ ಕೃಷಿ ಬೆಳೆ, 4,565 ಹೆಕ್ಟೇರ್ ತೋಟಗಾರಿಕೆ ಬೆಳೆ, 1,730 ಕಿ.ಮೀ. ಲೋಕೋಪಯೋಗಿ ರಸ್ತೆ, 5,419 ಗ್ರಾಮೀಣ ರಸ್ತೆಗಳು, 899 ಕಿರು ಸೇತುವೆಗಳು, 4,324 ಶಾಲೆಗಳು, 55 ಆರೋಗ್ಯ ಕೇಂದ್ರಗಳು, 2,146 ಅಂಗನವಾಡಿಗಳು, 16,510 ವಿದ್ಯುತ್ ಕಂಬಗಳು, 1,880 ವಿದ್ಯುತ್ ಪರಿವರ್ತಕಗಳು ಹಾಗೂ 61 ಕೆರೆಗಳು ಹಾನಿಗೊಳಗಾಗಿವೆ. 8,057 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ 6,933 ಮಂದಿ ನೆಲೆ ಕಂಡುಕೊಂಡಿದ್ದಾರೆ ಎಂದು ಕಂದಾಯ ಇಲಾಖೆಯ ದಾಖಲೆಗಳು ಹೇಳುತ್ತವೆ.


ಇದು ವಸ್ತುಸ್ಥಿತಿ,ಇಂತಹ ಸಮಯದಲ್ಲಿ ಸರ್ಕಾರ ನೊಂದವರ ನೆರವಿಗೆ ಧಾವಿಸಬೇಕು.ಕಂದಾಯ ಸಚಿವರು ಕೆಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರೆ, ಮುಖ್ಯಮಂತ್ರಿಗಳು ಕೂಡ ಕೆಲವು ಕಡೆ ಪ್ರವಾಸ ಮಾಡಿ ಸಂಕಷ್ಟ ಆಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬಹುತೇಕ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ನೆಪಮಾತ್ರದ ಸಭೆ ಮಾಡಿ ಎಲ್ಲವನ್ನೂ ಅಧಿಕಾರಿಗಳ ಕೈಗೊಪ್ಪಿಸಿ ಬೇರೆ ಕೆಲಸದಲ್ಲಿ ನಿರತರಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ.


ಹಾಗಾದರೆ ಅಧಿಕಾರಿಗಳು ಏನೂ ಮಾಡುತ್ತಿಲ್ಲವಾ ಎಂದು ಕೇಳುವುದಲ್ಲ.ಅಧಿಕಾರಿ ವರ್ಗ ತಮಗಿರುವ ಮಿತಿಗಳ ನಡುವೆ ಒಂದಷ್ಟು ಕೆಲಸ ಮಾಡುತ್ತಿದೆ.ಇಲ್ಲಿ ಬೇಕಾಗಿರುವುದು ಸಂತ್ರಸ್ತರಿಗೆ ಜನ ಪ್ರತಿನಿಧಿಗಳ ಸಾಂತ್ವನದ ನುಡಿಗಳು, ನೆರವಿನ ಹಸ್ತ. ಇದಾಗುತ್ತಿಲ್ಲ ಎಂದು ಎಚ್ಚರಿಸುವ ಕೆಲಸವನ್ನು ಪ್ರತಿಪಕ್ಷ ನಾಯಕರು ಮಾಡಲು ಹೋದಾಗ ಅವರು ಏನೋ ತಿಂದರು ಎಂದು ಹೇಳುತ್ತಾ ಅವರ ಊಟದ ತಟ್ಟೆಯಲ್ಲಿ ಇಣುಕುವ ಕೆಲಸವಾಗಬಾರದು.