ದಲಿತ ಮಹಿಳೆ ಹೊನ್ನಮ್ಮ ಹತ್ಯೆ: ಎಲ್ಲ 21 ಮಂದಿಗೆ ಜೀವಾವಧಿ ಶಿಕ್ಷೆ

ಪ್ರಕರಣದ ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಅಪರಾಧಿಗಳು ಎಂದು ಪರಿಗಣಿಸಿದ ನ್ಯಾಯಾಧೀಶರು ಗುರುವಾರ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 13 ಸಾವಿರ ರೂ ದಂಡ ವಿಧಿಸಿದ್ದಾರೆ.

ದಲಿತ ಮಹಿಳೆ ಹೊನ್ನಮ್ಮ ಹತ್ಯೆ:  ಎಲ್ಲ 21 ಮಂದಿಗೆ ಜೀವಾವಧಿ ಶಿಕ್ಷೆ

      ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2019ರ ಜೂನ್‌ 28ರಂದು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದ ತಾಲೂಕು ಬಿಜೆಪಿ ಉಪಾಧ್ಯಕ್ಷೆ  ಡಾಬಾ ಹೊನ್ನಮ್ಮ(40 ವರ್ಷ) ಎಂಬಾಕೆಯನ್ನು  ಬರ್ಬರ ಹತ್ಯೆ ಮಾಡಿದ ಪ್ರಕರಣದಲ್ಲಿ 27 ಆರೋಪಿಗಳನ್ನೂ ದೋಷಿಗಳೆಂದು ಪರಿಗಣಿಸಿದ ಜಿಲ್ಲಾ ನ್ಯಾಯಾಲಯವು ಅವರಲ್ಲಿ ಜೀವಂತ ಉಳಿದಿರುವ ಇಬ್ಬರು ಮಹಿಳೆಯರು ಸೇರಿ ಎಲ್ಲ 21 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಗುರುವಾರ ವಿಧಿಸಿದೆ ಹಾಗೂ ತಲಾ 5 ಸಾವಿರ ರೂ ದಂಡ ವಿಧಿಸಿದೆ.

     ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ.ನಾಗಿರೆಡ್ಡಿ ಅವರು ಹೊನ್ನಮ್ಮ ಹತ್ಯೆ ಪ್ರಕರಣದಲ್ಲಿ  1) ರಂಗನಾಥ್.ಜಿ.ಎಸ್ ಬಿನ್ ಸುಬ್ಬಣ್ಣ, 2)ಮಂಜುಳ ಕೋಂ ರಂಗನಾಥ, 3)ರಾಜು ಅಲಿಯಾಸ್‌  ದೇವರಾಜು ಬಿನ್ ಅಪ್ಪಯ್ಯ 4)ಶ್ರೀನಿವಾಸ ಬಿನ್ ದೊಡ್ಡಮನೆ ರಾಮಯ್ಯ, 5)ಸ್ವಾಮಿ ಅಲಯಾಸ್ ಆನಂದಸ್ವಾಮಿ ಬಿನ್ ಗಂಗಜ್ಜ, 6)ವೆಂಕಟಸ್ವಾಮಿ ಬಿನ್ ಗಂಗಪ್ಪ, 7) ವೆಂಕಟೇಶ್ ಬಿನ್ ತಿಮ್ಮಣ್ಣ, 8) ನಾಗರಾಜು ಬಿನ್ ಸಿದ್ದರಾಮಶೆಟ್ಟಿ, 9)ರಾಜಪ್ಪ ಅಲಿಯಾಸ್‌ ರಾಮಯ್ಯ ಬಿನ್ ಸಿದ್ದರಾಮಶೆಟ್ಟಿ, 10)ಮೀಸೆ ಹನುಮಂತಯ್ಯ ಬಿನ್ ರಾಮಶೆಟ್ಟಿ. 11) ಗಂಗಾಧರ ಅಲಿಯಾಸ್‌  ಗಂಗಣ್ಣ ಬಿನ್ ಸುಬ್ಬಶೆಟ್ಟಿ, 12) ಸತ್ಯಪ್ಪ ಅಲಿಯಾಸ್‌  ಸತೀಶ ಬಿನ್ ನಂಜಪ್ಪ, 13)ನಂಜುಂಡಯ್ಯ ಬಿನ್ ನಂಜಪ್ಪ, 14) ಚಂದ್ರಶೇಖರ್ ಅಲಿಯಾಸ್ ಚಂದ್ರಯ್ಯ ಬಿನ್ ಕುರುಡ ಗಂಗಪ್ಪ, 15)ರಂಗಣ್ಣಾಲಿಯಸ್‌ ರಾಮಯ್ಯ ಬಿನ್ ಸಿದ್ದರಾಮಶೆಟ್ಟರು. 16) ಉಮೇಶ ಬಿನ್ ರಾಮಯ್ಯ, 17) ಬುಳ್ಳೆ ಹನುಮಂತಯ್ಯ ಬಿನ್ ಸಿದ್ದರಾಮಯ್ಯ, 18)ಚನ್ನಮ್ಮ ಅಲಿಯಾಸ್ ಚಿನ್ನಮ್ಮ ಕೋಂ ರಂಗಯ್ಯ  19) ಜಯಣ್ಣ ಅಲಿಯಾಸ್‌ ಜಯಕುಮಾರ್ ಅಲಿಯಾಸ್ನರಸಿಂಗಯ್ಯ ಬಿನ್ ನರಸಿಂಹಯ್ಯ, 20)ಕೆ.ಜಿ.ಮಂಜು ಬಿನ್ ಜವರಪ್ಪ, ಹಾಗೂ 21) ಸ್ವಾಮಿ ಬಿನ್ ರಾಜಣ್ಣ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

      ಇವರನ್ನು ಬುಧವಾರವೇ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.   ಪ್ರಕರಣದ ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಅಪರಾಧಿಗಳು ಎಂದು ಪರಿಗಣಿಸಿದ ನ್ಯಾಯಾಧೀಶರು ಗುರುವಾರ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 13 ಸಾವಿರ ರೂ ದಂಡ ವಿಧಿಸಿದ್ದಾರೆ. ಪ್ರಕರಣದ ಉಳಿದ ಆಪಾದಿತರಾಗಿದ್ದ ಹನುಮಂತಯ್ಯ (ಪರಿಶಿಷ್ಟ ಜಾತಿ), ವೆಂಕಟೇಶ್, ರಾಮಯ್ಯ, ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ ಈ ಆರು ಮಂದಿ ಈಗಾಗಲೇ ಕಾರಣಾಂತರಗಳಿಂದ ಮರಣ ಹೊಂದಿರುವುದರಿಂದ ಅವರನ್ನು ಹೊರತು ಪಡಿಸಲಾಗಿದೆ.

     ಪ್ರಕರಣದ ತನಿಖೆಯನ್ನು ಡಿವೈಎಸ್‌ಪಿ ಶಿವರುದ್ರಪ್ಪ ಅವರು ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಸುದೀರ್ಘ 14 ವರ್ಷ ನಡೆದ ವಿಚಾರಣೆಯ ಅವಧಿಯಲ್ಲಿ ಕ್ರಮವಾಗಿ ಬಿಕ್ಕಣ್ಣವರ್‌, ನಾಗರತ್ನ, ರಾಜಣ್ಣ ಹಾಗೂ ಬಿ.ಎಸ್.‌ ಜ್ಯೋತಿ  ಸರ್ಕಾರಿ ಅಭಿಯೋಜಕರಾಗಿ ಪ್ರಕರಣದಲ್ಲಿ ವಾದ ಮಂಡಿಸಿದ್ದಾರೆ.

 

ಹೊನ್ನಮ್ಮ ಹತ್ಯೆ ನಡೆದದ್ದು ಹೇಗೆ?

 

     ಗೋಪಾಲಪುರ ಗ್ರಾಮದ ಮಾದಿಗ ಸಮುದಾಯಕ್ಕೆ ಸೇರಿದ ಹೊನ್ನಮ್ಮನಿಗೆ ಚಿಕ್ಕ ವಯಸ್ಸಿಗೇ ಮದುವೆಯಾಗಿದ್ದು ಮಂಜುನಾಥ ಎಂಬ ಮಗ ಇದ್ದು, ಆಕೆಯ ಪತಿ ಮಗ ಜನಿಸಿದ ಕೆಲವೇ ವರ್ಷಗಳಲ್ಲಿ ದೂರವಾಗಿದ್ದ. ಹೊನ್ನಮ್ಮ ಅದೇ ಊರಿನ ಈಡಿಗರ ನಾಗರಾಜ ಎಂಬಾತನ ಡಾಬದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಊರಿನಲ್ಲಿ ನಡೆಯುತ್ತಿದ್ದ ಅನ್ಯಾಯ , ಅಕ್ರಮಗಳ ವಿರುದ್ದ ದನಿ ಎತ್ತುತ್ತ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂಚೂಣಿಯಲ್ಲಿದ್ದರು. ಆಕೆಯ ದಿಟ್ಟ ನಡವಳಿಕೆಯನ್ನು ಸಹಿಸದ ಊರಿನ ಇತರ ಪ್ರಬಲ ಜಾತಿಯವರು ಆಕೆಯ ನಡತೆಯನ್ನು ಶಂಕಿಸಿ ಮಾತನಾಡುತ್ತಿದ್ದರು.

   ಚಿಕ್ಕನಾಯಕನಹಳ್ಲಿ ತಾಲೂಕು ಬಿಜೆಪಿ ಉಪಾಧ್ಯಕ್ಷೆಯೂ ಆಗಿ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಹೊನ್ನಮ್ಮ 2009ರಲ್ಲಿ ಅತಿ ಮಳೆಯಿಂದ ಉಂಟಾದ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಧರಣಿಯನ್ಣು ನಡೆಸಿದ್ದು ಆಗಿನ ಶಾಸಕ ಸಿ.ಬಿ.ಸುರೇಶಬಾಬು ಸ್ಥಳಕ್ಕೆ ಧಾವಿಸಿ ಪರಿಹಾರ ನೀಡುವ ಭರವಸೆ ನೀಡಿ ಧರಣಿಯನ್ನು ಅಂತ್ಯಗೊಳಿಸಿದ್ದರು.

     2010ರ ಮೇ ತಿಂಗಳಲ್ಲಿ ಗೋಪಾಲಪುರದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುತ್ತಿದ್ದ ರಸ್ತೆ ಹಾಗು ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಹೊನ್ನಮ್ಮ ಪ್ರತಿಭಟನೆ ಮಾಡಿದ್ದು, ಕೆಲವರು ಕಾಮಗಾರಿಗೆ ಸಂಬಂಧಿಸಿದ ಸಿಮೆಂಟ್‌ ಮೊದಲಾದ ಸಾಮಗ್ರಿಗಳನ್ನು ಆಕೆಯ ಮನೆಯಲ್ಲಿ ಕದ್ದು ಇರಿಸಿದ್ದು ಆಕೆಯ ಮೇಲೆ ಕಳುವಿನ ಆರೋಪ ಹೊರಿಸುತ್ತಾರೆ. ಈ ಸುಳ್ಳು ಕಳವು ಪ್ರಕರಣದಲ್ಲಿ ಜಾಮೀನು ಪಡೆದು ಜೂನ್‌ 28ರಂದು ಸಂಜೆ 7.30 ಸುಮಾರಿಗೆ ಊರಿಗೆ ಹಿಂದಿರುಗಿದ ಹೊನ್ನಮ್ಮ ನೇರವಾಗಿ ತಮ್ಮ ಗೆಳತಿ ಮೀನಾಕ್ಷಮ್ಮ ಅವರನ್ನು ಕಾಣಲು ಬರುತ್ತಾರೆ. ಹೊನ್ನಮ್ಮ ಊರಿಗೆ ಹಿಂದಿರುಗಿದ ಸುದ್ದಿ ತಿಳಿದ ಚೌಳಕಟ್ಟೆ ಗ್ರಾಮ ಪಂಚಾಯಿತಿ ಅಂದಿನ ಅಧ್ಯಕ್ಷರಾಗಿದ್ದ ಮಂಜುಳಾ ಪತಿ ರಂಗಸ್ವಾಮಿ ಹಾಗೂ ರಾಜ, ಅಪ್ಪಣ್ಣ, ವೆಂಕಟೇಶ್‌, ಮುತ್ಯಾಲಪ್ಪ, ಉಮೇಶ, ಮೀಸೆ ವೆಂಕಟಸ್ವಾಮಿ, ಈಡಿಗರ ನಂಜುಂಡ, ಸತ್ಯ ಹಾಗೂ ಹೊನ್ನಮ್ಮ ಸಂಬಂಧಿಕರಾದ ರಂಗ ಹಾಗೂ ಸುಬ್ಬ ಈ ಎಲ್ಲರೂ ಸೇರಿದ 20ರಿಂದ 30 ಜನರ ಗುಂಪು ಹೊನ್ನಮ್ಮನ ಮೇಲೆ ದಾಳಿ ಮಾಡುತ್ತದೆ. ಆಕೆಯ ಬಟ್ಟೆಗಳನ್ನು ಹರಿದು ಆಕೆಯನ್ನು ಬೆತ್ತಲೆ ಗೊಳಿಸಿ ಕೈ ಗೆ ಸಿಕ್ಕ ವಸ್ತುಗಳಿಂದ ಹೊಡೆಯುತ್ತಾರೆ. ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನಂತರ ಹಲ್ಲೆ ಮಾಡಿ ಅಲ್ಲಿಯೇ ಇದ್ದ ಬಾಕ್ಸ್ ಚರಂಡಿಗೆ ಎಳೆದು ಹೊನ್ನಮ್ಮಳ ಮೇಲೆ ಆರೋಪಿತರು ಕಲ್ಲುಗಳನ್ನು ತಲೆಯ ಮೇಲೆ ಹಾಗೂ ಹೊಟ್ಟೆಯ ಮೇಲೆ ಎತ್ತಿ ಹಾಕಿ ಕೊಲ್ಲುತ್ತಾರೆ. ಆಕೆಯ ನೆರವಿಗೆ ಬಂದ ಡಾಬಾ ನಾಗರಾಜನನ್ನೂ ಗುಂಪು ಕೊಲ್ಲುವುದಾಗಿ ಬೆದರಿಸಿ ದೂರ ಓಡಿಸುತ್ತದೆ ಎಂದು ಘಟನೆ ನಡೆದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಸತ್ಯಶೋಧನಾ ಸಮಿತಿ ದಾಖಲಿಸಿದೆ.

     ಸತ್ಯಶೋಧನಾ ಸಮಿತಿಯಲ್ಲಿ ಇತ್ತೀಚೆಗೆ ನಿಧನರಾದ ಮಾದಿಗ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿ.ಎಸ್.‌  ಪಾರ್ಥಸಾರಥಿ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಕುಂದೂರು ತಿಮ್ಮಯ್ಯ, ಭರತ್‌ ಕುಮಾರ್‌ ಬೆಲ್ಲದಮಡುಗು, ಜನಾರೋಗ್ಯ ಆಂದೋಲನ ಕರ್ನಾಟಕದ ಕೆ.ಬಿ.ಓಬಳೇಶ್‌ ಇದ್ದರು.

     ಹೊನ್ನಮ್ಮ ಸಂಬಂಧಿ ಕರಿಯಮ್ಮ ಕೋಂ ಕುಮಾರಯ್ಯ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸ್ ಠಾಣೆಯ .ಎಸ್. ಗಂಗಾಧರಯ್ಯ ಕೇಸು ದಾಖಲಿಸಿದ್ದರು.ಹೊನ್ನಮ್ಮ ಹತ್ಯೆ ಸಂಬಂಧ 18 ಜನರನ್ನು ಬಂಧಿಸಲಾಗಿತ್ತು ಹಾಗೂ 23 ಕ್ಕೂ ಹೆಚ್ಚು ಮಂದಿ ಮೇಲೆ ಕೇಸು ದಾಖಲಿಸಲಾಗಿತ್ತು, ದಸಂಸ ಪ್ರತಿಭಟನೆ ನಡೆಸಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಹೊನ್ನಮ್ಮನವರಿಗೆ ಸೂಕ್ತ ರಕ್ಷಣೆ ನೀಡದ ಪೊಲೀಸ್‌ ನಿರ್ಲಕ್ಷ್ಯವನ್ನು ಖಂಡಿಸಿದ್ದರು.