ಸಮಾನತೆ, ಜೀವನ ಪ್ರೀತಿ, ಧೈರ್ಯ, ಸ್ವಾತಂತ್ರ‍್ಯಗಳ ಪ್ರತೀಕವಾಗಿದ್ದ ಅಮ್ಮ ನೇತ್ರಾವತಿ.ಕೆ.ಬಿ
ಇವತ್ತು ನಾನೇನಾದರೂ ಜೀವಂತವಾಗಿ ಬದುಕುಳಿದು ಹೀಗೆ ಬರೆಯಲು ಅವಕಾಶ ದೊರಕಿದೆ ಎಂದರೆ ಅದಕ್ಕೆ ಅಮ್ಮನ ಇಚ್ಚಾಶಕ್ತಿ ಹಾಗೂ ಕಾಳಜಿಯೇ ಕಾರಣ.

ಜೀವದ ಕತೆ -15
ಕೆ.ಬಿ.ನೇತ್ರಾವತಿ
ಈ ಬರಹದ ಜೊತೆ ಇರುವ ಫೋಟೋವನ್ನೊಮ್ಮೆ ನೋಡಿ, ನಾನಾಗ 4 ಅಥವಾ 5ನೆ ತರಗತಿ, ಅಕ್ಕ 7ನೇ ತರಗತಿ ಇರಬೇಕು, ಅದರಲ್ಲಿರುವ ನಮ್ಮ ವೇಷ ಭೂಷಣ ಗಮನಿಸಿ. ಹೆಣ್ಣುಮಕ್ಕಳ ಸ್ವಾತಂತ್ರ‍್ಯ, ಸಮಾನತೆ, ವಿದ್ಯೆ ಬಗ್ಗೆ ಅಮ್ಮನಿಗೆ ಇದ್ದ ನಿಲುವುಗಳನ್ನು ತೋರಿಸುತ್ತದೆ. ಜೀವನದ ಬಗ್ಗೆ ದೂರದೃಷ್ಟಿ, ಜೀವಿಸಲೇಬೇಕೆಂಬ ಜೀವನ ಪ್ರೀತಿ, ಧೈರ್ಯ, farward thinking , ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ , ಹೆಣ್ಣು ಮಕ್ಕಳಿಗೆ ಇರಬೇಕಾದ ಸ್ವಾತಂತ್ರ‍್ಯ ಇವೆಲ್ಲದರ ಪ್ರತೀಕವಾಗಿದ್ದ ಅಮ್ಮ.
ನಮ್ಮ ಅಪ್ಪ ನಮ್ಮನ್ನ ಬಿಟ್ಟು ದೂರವಾದಾಗ ನಮಗೆ ಧೈರ್ಯ ತುಂಬಿದ ಅಮ್ಮ. ಇನ್ನು ಜೀವನ ಸಾಕು ಅಂತ ನಾನು ಸಾಯಲೆಂದು ಊಟ ಬಿಟ್ಟಾಗ ಅಮ್ಮನ ದೊಡ್ಡಪ್ಪನ ಮಗಳ ಮಗನನ್ನ ಕರೆ ತಂದು ನನಗೆ ಎನ್‌ಜಿಓ ಒಂದರಲ್ಲಿ ಕೆಲಸಕ್ಕೆ ಶಿಫಾರಸ್ಸು ಮಾಡಿಸಿದ ಅಮ್ಮ. (ಕೆಲಸ ಸಿಕ್ಕಿದ್ದು ಶಿಫಾರಸ್ಸಿನ ಜೊತೆಗೆ ನನಗೆ ಅರ್ಹತೆ ಇದೆ ಎಂದು ಕೂಡ-ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಎಂದು) ಆದರೆ ಸಮಾಜದಲ್ಲಿ ಒಂಟಿಯಾಗಿ ಎಲ್ಲವನ್ನು ಎದುರಿಸಿದ ಅಮ್ಮ ಬಹು ಬೇಗ ಕ್ಯಾನ್ಸರ್‌ಗೆ ತುತ್ತಾದರು. ಅಮ್ಮನನ್ನ ಉಳಿಸಿಕೊಳ್ಳಲು ನಾವು ಬಹಳ ಶ್ರಮಪಟ್ಟೆವು.
ಅಮ್ಮ ನನಗೆ ಇಲಿಯೋಸಿಕಲ್ ಟಿಬಿಯಾದಾಗ ಊಟ ಸೇರದೆ ಇದ್ದಾಗ ನನಗೋಸ್ಕರ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕಡಿಮೆ ರೇಟ್ ಅಂತ ಚಿಕನ್ ಲಿವರ್ ತಂದು ಸ್ವಲ್ಪವೇ ಸಾರು ಮಾಡಿ ಟ್ರೈನ್ ಹತ್ತಿರ ಬಂದು ನನ್ನನ್ನು ಕರೆದುಕೊಂಡು ಮನೆಗೆ ಹೋಗಿ ತಾನೇ ಊಟ ತಿನ್ನಿಸುತ್ತಿತ್ತು.,
ನಾನು ಎನ್‌ಜಿಓ ದಲ್ಲಿ ಕೆಲಸಕ್ಕೆ ಸೇರುವ ಮೊದಲೇ ನನ್ನ ತಮ್ಮ ಮತ್ತೊಂದು ಮದುವೆಯಾಗಿ (ನನ್ನ ತಮ್ಮನ ಬೆಂಗಳೂರಿನ ಅಂತರ್ಜಾತಿ ಮದುವೆ, ಅದರಿಂದಾದ ಕಷ್ಟ ನಷ್ಟಗಳು ನಮ್ಮ ದಲಿತರ ಬಿಟ್ರೇಯಲ್ ವಿವರ ಬೇರೆ ಎಪಿಸೋಡ್‌ನಲ್ಲಿ ಹೇಳುವೆ) ಆ ಮದುವೆಗೆ ಒಪ್ಪದ ಅಪ್ಪನಿಗೆ ಹೊಡೆದು, ನಮ್ಮ ಅಪ್ಪನನ್ನ ನಮ್ಮಿಂದ ದೂರ ಮಾಡಿ, ತಾನೂ ನಮ್ಮಿಂದ ದೂರವಾಗಿ ಹೆಂಡತಿ ಊರಲ್ಲಿ ಸೆಟಲ್ ಆದ. ನಮಗೆ ನಾವೇ, ನಾವು ಮೂವರು. ಅದೇ ಸಂದರ್ಭದಲ್ಲಿ ನನಗೆ ಇಲಿಯೋಸಿಕಲ್ ಟಿಬಿ ಆಗಿ ಮೆಡಿಸಿನ್ ಮೇಲೆ ಇದ್ದೆ. ಆಗಲೇ ಸರ್ಕಾರಿ ಕೆಲಸ ಕೂಡ ಸಿಕ್ಕಿತು(2001). ಅದೇ ಟ್ರೀಟ್‌ಮೆಂಟ್ನಲ್ಲಿ ಇದ್ದ ಕಾರಣ (ಟಿಬಿಗೆ ಎರಡು ವರ್ಷ ಟ್ರೀಟ್‌ಮೆಂಟ್) ಅಮ್ಮ ತನಗೆ ಬ್ರೆಸ್ಟ್ ಕ್ಯಾನ್ಸರ್ ಇರಬಹುದು ಅಂತ ಅನ್ನಿಸಿದರೂ, ನಮಗೆ ಹೇಳದೆ ಮುಚ್ಚಿಟ್ಟು ನನ್ನ ಖಾಯಿಲೆ ಸುಮಾರು ವಾಸಿಯಾದ ಮೇಲೆ (2002), ಆರೋಗ್ಯದಲ್ಲಿ ತೊಂದರೆ ಆಗಿರುವುದನ್ನು ಮರೆಮಾಚಲಾಗದೆ ನಮಗೆ ತಿಳಿಸಿದಾಗ ಕಾಲ ಮೀರಿತ್ತು. ನನಗೆ ಟಿಬಿಗೆ ಟ್ರೀಟ್‌ಮೆಂಟ್ ಕೊಡುತ್ತಿದ್ದ ಖಾಸಗಿ ಆಸ್ಪತ್ರೆ ಡಾಕ್ಟರ್ ಸರ್ಜನ್ ಅವರಿಗೆ ನಮ್ಮ ಬ್ರೋಕನ್ ಫ್ಯಾಮಿಲಿ ಕಥೆ ಗೊತ್ತಿತ್ತು. ಅವರಿಗೇ ಅಮ್ಮನನ್ನ ತೋರಿಸಿದೆವು. ಕ್ಯಾನ್ಸರ್ 4ನೇ ಹಂತ ಅಂತ ಡಾಕ್ಟರ್ ಹೇಳಿದರು. ಕೂಡಲೇ ಆಪರೇಷನ್ ಮಾಡಬೇಕು. ಇಲ್ಲವಾದರೆ ದೇಹದ ಇನ್ನಷ್ಟು ಭಾಗಕ್ಕೆ ಹರಡುತ್ತೆ ಅಂದರು. ಕಿದ್ವಾಯಿಯಿಂದ ಡಾಕ್ಟರ್ ಕರೆಸಿ ಆಪರೇಶನ್ ಮಾಡಿಸುವುದಾಗಿ ತಿಳಿಸಿದರು, ಖರ್ಚು ಸುಮಾರು 16 ಸಾವಿರ ಅಂದರು, ಆಗ ನನಗೆ ಸಂಬಳ ನಾಲ್ಕೂವರೆ ಸಾವಿರ. ಕೆಜಿಐಡಿ ಇನ್ನಿತರೆ ಅಂತ ಹೋಗಿ 4000 ಕೈಗೆ ಬರುತ್ತಿತ್ತು. ಹೇಗೆ ಹೊಂದಿಸುವುದು.
ಅಮ್ಮ ಅವರ ತಮ್ಮಂದಿರ ಹತ್ತಿರ ಹೋಯಿತು. ನಿಮ್ಮ ಎಲ್ಲ ಕಷ್ಟಗಳಿಗೂ ನಾವೇನಾ ಇರುವುದು ಅಂತ ಗದರಿದರು ಅಂತ ವಾಪಸ್ಸು ಬಂತು (ಇಡೀ ಜೀವನದಲ್ಲಿ ಹೇಳಿಕೊಳ್ಳುವಂತ ಯಾವ ಸಹಾಯವನ್ನೂ ಅವರು ನಮಗೆ ಮಾಡಿರಲಿಲ್ಲ. ಆದರೆ ಅವರ ಮಾತಿನ ಧಾಟಿ ಹಾಗೇ) ಮತ್ತೊಬ್ಬ ಕಸಿನ್ “ನನ್ನ ಬಳಿ ಇರುವುದು ಬರೀ ಒಂದು ಸಾವಿರ ತೆಗೆದುಕೋ” ಅಂತ ಕೊಟ್ಟು ಕಳಿಸಿದ. ಇನ್ನ ನಮ್ಮ ಅಪ್ಪನನ್ನ ನಾನೇ ಹುಡುಕಿಕೊಂಡು ಹೋಗಿ ಕೇಳಿದೆ, “ನನ್ನ ಹತ್ತಿರ ದುಡ್ಡು ಇಲ್ಲ ಯಾರೋ ಕೊಡಬೇಕು ಇನ್ನೆರಡು ದಿನ ಬಿಟ್ಟು ಬಾ” ಅಂತ ಅಂತು . ನಮ್ಮ ಕಚೇರಿಯಲ್ಲಿ ರಜೆ ಕೊಡಲು ಕಷ್ಟ ಇತ್ತು ನಾನು ಕೆಲಸಕ್ಕೆ ಸೇರಿ ನನ್ನ ಅನಾರೋಗ್ಯದ ನಿಮಿತ್ತ ಅದಾಗಲೇ ಒಂದು ವಾರ ಸಿಎಲ್ ಪ್ರೀಪೋನ್ ಮಾಡಿ ಕೊಟ್ಟಿದ್ದರು. ಇಎಲ್‌ಗಳನ್ನೂ ಪಡೆದಿದ್ದೆ ಹಾಗೂ ನಾನು ಎಂಜಿನಿಯರಿಂಗ್ ಓದಿರುವುದರಿಂದ ನನ್ನನ್ನ ಓಓಡಿ ಮೇಲೆ ಪೇಪರ್‌ಲೆಸ್ ಆಫೀಸ್ ಪ್ರಾಜೆಕ್ಟ್ ಮಾಡಲೆಂದು ಡಿಐಟಿಗೆ ಕಳುಹಿಸಿದ್ದರು, ಪ್ರಾಜೆಕ್ಟ್ ಮುಗಿದ ನಂತರ ಇಂಜಿನಿಯರ್ ಆಗಿ ಅಲ್ಲೇ ವಿಲೀನಗೊಳಿಸುವುದು ಇತ್ತು. ಹಾಗಾಗಿ ರಜೆ ಕೊಡುತ್ತಿರಲಿಲ್ಲ. ರಜೆ ಹಾಕಿದರೆ ಸಾಕೆಂದು ಕಾಯುತ್ತಿದ್ದ ಬ್ರಾಹ್ಮಣರೇ ತುಂಬಿದ್ದ ಆ ಪ್ರಾಜೆಕ್ಟ್ ನಲ್ಲಿ ಅದನ್ನೇ ದೊಡ್ಡದು ಮಾಡಿ ನನ್ನನ್ನ ಆ ಪ್ರಾಜೆಕ್ಟ್ನಿಂದ ತೆಗೆಯುವಂತೆಯೂ ಸದಾ ರಜೆ ಮೇಲೆ ತೆರಳುವ ನನ್ನಿಂದ ಅವರಿಗೆ ಏನೂ ಉಪಯೋಗವಿಲ್ಲವೆಂದು ದೂರು ಹೇಳಿದ್ದರು. ಆ ಪ್ರಾಜೆಕ್ಟ್ಗೆ ಒಬ್ಬೊಬ್ಬರಿಗೆ ಎರಡೂವರೆ ಲಕ್ಷದಿಂದ 5 ಲಕ್ಷದವರೆಗೆ ಚಾರ್ಜ್ ಫಿಕ್ಸ್ ಮಾಡಿದ್ದರು ಅದರಲ್ಲಿ ಸ್ವಲ್ಪವಾದರೂ ನನಗೆ ಹಂಚಿಕೊಳ್ಳಬೇಕಲ್ಲ ಅದು ಉಳಿಯುತ್ತೆ ಅಂತ ಅವರ ಆಸೆ. ಜೊತೆಗೆ ಪ್ರೊಬೇಶನರಿ ಇನ್ನೂ ಮುಗಿದಿರಲಿಲ್ಲ. ಆದರಿಂದ ಮತ್ತೆರಡು ದಿನ ಬಿಟ್ಟು ಹೋಗಲು ಆಗಲಿಲ್ಲ.
ನನ್ನ ಕೊಲೀಗ್ ಒಬ್ಬ ಬಡ್ಡಿಗೆ ದುಡ್ಡು ಕೊಡುತ್ತಿದ್ದ. ಆತನ ಮನೆ ಅಲ್ಲೇ ಎಸ್ಎಸ್ ಪುರಂ ಹತ್ತಿರ ಇತ್ತು, ಅವನ ಮನೆ ಹತ್ತಿರ ಅಕ್ಕನನ್ನ ಕರೆದುಕೊಂಡು ಹೋದೆ. ಅವರ ಹೆಂಡತಿ ಅವರು ಆಫೀಸ್ ಟ್ರೈನಿಂಗ್ ಆದ ಮೇಲೆ ಟ್ರಿಪ್ ಹೋಗುತ್ತಾರಲ್ಲ ಹಾಗೆ ಹೋಗಿದ್ದಾರೆ. ನಾಳೆ ಬನ್ನಿ ಅಂದರು. ಸರಿ ಅಂತ ಪುನಃ ಆತನನ್ನ ಕಚೇರಿಯಲ್ಲೇ ಭೇಟಿ ಮಾಡಿ ಕೇಳಿದೆ. ಹತ್ತು ಸಾವಿರ ರೂಗೆ ತಿಂಗಳಿಗೆ 450 ರೂ ಬಡ್ಡಿ ಒಪ್ಪಿ ದುಡ್ಡು ಪಡೆದುಕೊಂಡು ಅಮ್ಮನನ್ನ ನರ್ಸಿಂಗ್ ಹೋಂ ಗೆ ಆಪರೇಷನ್ ಗೆ ಸೇರಿಸಿದೆವು. ಆ ಡಾಕ್ಟರ್ ಗೆ ನನ್ನ ಆರ್ಥಿಕ ಸ್ಥಿತಿ ಗೊತ್ತಿದ್ದರಿಂದ ನಿಮ್ಮ ಕೈಲಿ ಎಷ್ಟಾಗುತ್ತೆ ಅಷ್ಟನ್ನು ಕಟ್ಟಿ ಅಂತ ಹೇಳಿದರು (ಡಾಕ್ಟರರ ಆಪರೇಶನ್ ಚಾರ್ಜ್, ನರ್ಸಿಂಗ್ ಹೋಂ ಚಾರ್ಜ್ ಎಲ್ಲ ಮೈನಸ್ ಮಾಡಿದ್ದರು) ಹನ್ನೊಂದು ಸಾವಿರ ಇದೆ ಅಂತ ಅಷ್ಟನ್ನು ಕಟ್ಟಿ ಉಳಿದ ಎರಡು ಸಾವಿರ ಕೈಲಿ ಖರ್ಚಿಗೆ ಇಟ್ಟುಕೊಂಡೆ. ಆಪರೇಷನ್ ಆಯಿತು.(ಅದು ಡಿಸೆಂಬರ್ 2002) ಅಕ್ಕನಿಗೆ ಆಗಿನ್ನೂ ಕೆಲಸ ಸಿಕ್ಕಿರಲಿಲ್ಲ. ಎಲ್ಲ ಅಕ್ಕನಿಗೆ ವಹಿಸಿ ಆಫೀಸಿಗೆ ತೆರಳಿದೆ, ಆಪರೇಷನ್ ನಂತರ ಡಾಕ್ಟರ್ ಹೇಳಿದರು ಆಪರೇಷನ್ ಸಕ್ಸಸ್ ಆಗಿದೆ (ಒಂದು ಬ್ರೆಸ್ಟ್ ಪೂರ್ಣ ತೆಗೆದುಹಾಕಿದ್ದರು) 15 ದಿನ ಬಿಟ್ಟು ಕೂಡಲೇ ರೇಡಿಯೋಥೆರಪಿ ಕೊಡಿಸಬೇಕು ಅಂತ ʼಸೇಂಟ್ ಜಾನ್ʼ ಗೆ ಚೀಟಿ ಬರೆದುಕೊಟ್ಟರು.
ಅಲ್ಲಿ ಕೇಳಿದರೆ ರೇಡಿಯೋಥೆರಪಿಗೆ 12 ಸಾವಿರ ಅಂದರು ಎಲ್ಲಿಂದ ತರುವುದು. ಮೊದಲಿಗೆ ನನ್ನ ಕೊಲೀಗ್‌ಗಳ ಸಜೆಶನ್ “ಕಿದ್ವಾಯಿಗೆ ತೋರಿಸು ಅಲ್ಲಿ ಕಡಿಮೆಗೆ ಆಗುತ್ತೆ, ನಮ್ಮ ಬ್ಯಾಚ್ ಮೇಟ್ ತುಮಕೂರಿಂದ ಬರುತ್ತಾರಲ್ಲ, ಕಾನೂನು ಇಲಾಖೆಯಲ್ಲಿ ಇದ್ದಾರಲ್ಲ, ಅವರಿಗೆ ಅಲ್ಲಿನ ಐಎಫ್ಎ ಗೊತ್ತು, ಅವರನ್ನ ಕೇಳು” ಅಂತ. ಕೆಲಸಕ್ಕೆ ಸೇರಿದಾಗಿನಿಂದ ಎಂದೂ ಆತನನ್ನ ಮಾತನಾಡಿಸದ ನಾನು ಒಲ್ಲದ ಮನಸ್ಸಿಂದ ಹೋಗಿ ಪರಿಚಯ ಮಾಡಿಕೊಂಡೆ, ಹೀಗೆ ಕಿದ್ವಾಯಿಯಲ್ಲಿ ಯಾರಾದ್ರು ಪರಿಚಯ ಇದ್ರೆ ಕಡಿಮೆಗೆ ರೇಡಿಯೋಥೆರಪಿ ಆಗುತ್ತೆ ಅಂತ ಸಹಾಯ ಕೇಳಿದೆ. ಆತ ಹೌದು ನನ್ನ ಸ್ನೇಹಿತರೊಬ್ಬರು ಅಲ್ಲಿ ಐಎಫ್ಎ ಆಗಿದ್ದಾರೆ. ಕಿದ್ವಾಯಿಗೆ ನಾಳೆ ಹೋಗುವಾ ಅಂದರು. ಅಂತೆಯೇ ಅವರೊಂದಿಗೆ ಕಿದ್ವಾಯಿಗೆ ತೆರಳಿದೆ. ಥೆರಪಿಗೆ ಬರೀ ಎರಡು ಸಾವಿರ ಅಂದರು ಅವರ ಫ್ರೆಂಡ್ ಐಎಫ್ಎ ಶಿಫಾರಸ್ಸಿನಂತೆ. ಟೀಮ್ ʼಎʼ ರವರು ನಾವು ಪೇಶೆಂಟ್ ನೋಡಬೇಕು, ಅವರನ್ನ ಕರೆ ತನ್ನಿ. ಅಲ್ಲಿ ಮಾಡಿರುವ ಸ್ಲೈಡ್ ನಾವು ಒಪ್ಪಲ್ಲ ನಾವು ಪುನಃ ಸರ್ಜರಿ ಮಾಡಿರುವ ಸ್ಥಳವನ್ನ ಓಪನ್ ಮಾಡಿ ಪುನಃ ಸ್ಲೈಡ್ ಮಾಡುತ್ತೇವೆ ಅಂತ. ಅದು ನನ್ನಲ್ಲಿ ಹೆದರಿಕೆಯನ್ನೇ ಮೂಡಿಸಿತು. ಅದು ಸರಿ ಇಲ್ಲ ಅನಿಸಿ ಮತ್ತೊಂದು ದಿನ ಮತ್ತೊಂದು ಟೀಮ್‌ಗೆ ಚೀಟಿ ಬರೆಸಿದರೆ ಅವರು ಆಪರೇಷನ್ ಆಗಿ ಕನಿಷ್ಟ ಎರಡು ತಿಂಗಳು ನಾವು ರೇಡಿಯೋಥೆರಪಿ ಕೊಡಲ್ಲ, ಜೊತೆಗೆ ನಾವು ಮತ್ತೊಮ್ಮೆ ಪರೀಕ್ಷೆ ಮಾಡಲೇಬೇಕು ಅಂತ, ಎರಡೂ ಸರಿ ಇಲ್ಲ ಅನ್ನಿಸಿತು, ಡಾಕ್ಟರರ ಕೆಲಸದಲ್ಲಿ ನಾವು ಮೂಗು ತೋರಿಸಲು ಆಗಲ್ಲ ಅವರು ಹೇಳಿದಂಗೆ ಕೇಳಬೇಕು ದುಡ್ಡು ವಿಷಯದಲ್ಲಿ ಹೆಲ್ಪ್ ಮಾಡಬಹುದಷ್ಟೇ ಅಂದರು ಐಎಫ್ಎ. ನರ್ಸಿಂಗ್ ಹೋಂ ಡಾಕ್ಟರರಿಗೆ ತಿಳಿಸಿದಾಗ ರೇಗಿಯೇ ಬಿಟ್ಟು “ನಾ ಹೇಳಿದಂತೆ ಕೇಳದಿದ್ದರೆ ನನ್ನ ಹತ್ತಿರ ಯಾಕೆ ಬಂದ್ರಿ ಮೊದಲು ರೇಡಿಯೋಥೆರಪಿ ಕೊಡಿಸಿ, ಇಲ್ಲವಾದರೆ ಮೈಗೆಲ್ಲಾ ಹರಡುತ್ತೆ” ಅಂತ ಕೂಗಾಡಿದರು.
ನನ್ನ ಆ ಕೊಲೀಗ್‌ಗೆ ಹೇಳಿದೆ, “ಬಿಡಿ ನಾನು ಸೇಂಟ್ ಜಾನ್‌ಗೆ ಕರೆದುಕೊಂಡು ಹೋಗುತ್ತೇನೆ” ಅಂತ . ಅಂತೆಯೇ ಪುನಃ ಅಪ್ಪನ ಹತ್ತಿರ ಹುಳಿಯಾರಿಗೆ ಹೋಗಿ ಕೇಳಿದೆ. ಅಂದು ದುಡ್ಡು ಇತ್ತು ಅಪ್ಪನ ಹತ್ತಿರ. ಹತ್ತು ಸಾವಿರ ಹಾಗೇ ತೆಗೆದು ಕೊಟ್ಟರು. (ಆದರೆ ಪುನಃ ಪುನಃ ದುಡ್ಡಿಗೆಂದು ಬರಬೇಡ ಅಂತಲೂ ಇಷ್ಟೇ ನಾನು ಕೊಡುವುದು ಅಂತ ತಾಕೀತು ಮಾಡಿದರು.) ತಕ್ಷಣವೇ ಅಮ್ಮನನ್ನ ಸೇಂಟ್ ಜಾನ್‌ಗೆ ಸೇರಿಸಿದೆ ಅವರು ತುಮಕೂರಿನ ಡಾಕ್ಟರರ ಶಿಫಾರಸಿನ ಮೇರೆಗೆ ಹತ್ತು ಸಾವಿರಕ್ಕೆ ರೇಡಿಯೋಥೆರಪಿಗೆ ಒಪ್ಪಿ ಕೂಡಲೇ ಟ್ರೀಟ್‌ಮೆಂಟ್ ಶುರು ಮಾಡಿದರು.
ಇದರ ನಡುವೆ ನನ್ನ ಓಓಡಿ ಕ್ಯಾನ್ಸಲ್ ಮಾಡಿ ಸಚಿವಾಲಯಕ್ಕೆ ಪುನಃ ಕಳಿಸಿಕೊಡುವಂತೆ ಬರೆದು ಕೊಟ್ಟಿದ್ದೆ, ಕಾರಣ ನನಗೆ ಅಮ್ಮನ ನೋಡಿಕೊಳ್ಳಲು, ಹಣ ಹೊಂದಾಣಿಕೆ ಮಾಡಲು ರಜೆ ಅವಶ್ಯಕತೆ ಇತ್ತು. ಆ ಐಎಎಸ್ ಆಫೀಸರ್ ಕೂಗಾಡಿದ “ನಿಮ್ಮಂಥ ಇಂಜಿನಿಯರಿಂಗ್ ಗ್ರಾಜುಯೇಟ್‌ಗಳು ಹೀಗೆಲ್ಲ ಹಿಂದೆ ಸರಿಯುವುದರಿಂದಲೆ ನಮ್ಮ ದೇಶ ಹೀಗಾಗಿರುವುದು” ಅಂತ. ಅಮ್ಮನ ಕ್ಯಾನ್ಸರ್ ವಿಷಯ ಹೇಳಿದೆ, ನನ್ನ ಕೈಲಿದ್ದ ಮನವಿ ಪಡೆದು ಸಿಟ್ಟಿನಲ್ಲೇ ಸಹಿ ಮಾಡಿ ಥ್ರೋ ಮಾಡುವಂತೆ ಟೇಬಲ್ ಮೇಲೆ ತಳ್ಳಿದ. ನಾನು ಅಲ್ಲೇ ಇದ್ದು ಪ್ರಾಜೆಕ್ಟ್ ಮುಗಿಸಿದ್ದರೆ ಇಂಜಿನಿಯರ್ ಹುದ್ದೆಗೆ ವಿಲೀನಮಾಡಿಕೊಳ್ಳುತ್ತಿದ್ದರು. ಜೀವನದಲ್ಲಿ ಮೂರನೇ ಬಾರಿ ಇಂಜಿನಿಯರ್ ಆಗುವ ಅವಕಾಶದಿಂದ ವಂಚಿತಳಾದೆ.
ಒಂದೂವರೆ ತಿಂಗಳು ಅಮ್ಮನನ್ನ ನನ್ನ ಜೊತೆ ಟ್ರೈನ್‌ನಲ್ಲಿ ಕರೆದುಕೊಂಡು ಬಂದು ಸಿಟಿ ಬಸ್‌ಸ್ಟಾಂಡ್‌ನಲ್ಲಿ ಸೇಂಟ್ ಜಾನ್‌ಗೆ ಹೋಗುವ ಬಸ್ ಹತ್ತಿಸುತ್ತಿದ್ದೆ. ಸೇಂಟ್ ಜಾನ್‌ನಲ್ಲಿ ಟ್ರೀಟ್‌ಮೆಂಟ್ ಮುಗಿಸಿ ನಂತರ ಒಂದು ಜೂಸ್ ಕುಡಿದು ಪುನಃ ಸಿಟಿಬಸ್ ಹತ್ತಿ ಮೆಜೆಸ್ಟಿಕ್‌ಗೆ ಬಂದು ತುಮಕೂರಿಗೆ ತೆರಳುವಂತೆ ಹೇಳಿ ಅಫೀಸಿಗೆ ತೆರಳುತ್ತಿದ್ದೆ. ಅಕ್ಕನನ್ನ ಕರೆದುಕೊಂಡು ಬಂದರೆ ದುಡ್ಡು ಜಾಸ್ತಿಯಾಗುತ್ತೆ ಅವಳಿಗೆ ಕಷ್ಟ ಬೇಡ ಅಂತ ಅಮ್ಮ. (ಆಗ ಈಗಿನಂತೆ ಸಿಎಂ ಸಿದ್ದರಾಮಯ್ಯನವರ ʼಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆʼ ಇರಲಿಲ್ಲ). ಅಮ್ಮ ಹಾಗೇ ಎಷ್ಟೇ ಕಷ್ಟ ಬಂದರೂ ನಮಗೆ ಹೆಚ್ಚಿನ ಕಷ್ಟ ಕೊಡಬಾರದು ಅಂತ ತಾನೇ ಎಲ್ಲ ನಿಭಾಯಿಸುತಿತ್ತು.
ನನ್ನನ್ನು ಇಲಿಯೋಸಿಕಲ್ ಟಿಬಿಯಿಂದ ಉಳಿಸಿದ ಅಮ್ಮನಿಗೆ ಇಂದು ನಾನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲಾಗದೆ ಇದ್ದದ್ದು ನನಗೆ ಬಹಳವೇ ದುಃಖ ಉಂಟುಮಾಡುತ್ತಿತ್ತು. ಅಮ್ಮನನ್ನ ಒಂಟಿಯಾಗಿ ಸಿಟಿ ಬಸ್ ಹತ್ತಿಸುವಾಗ ನನಗೆ ಮನಸ್ಸಿಗೆ ಆಗುತ್ತಿದ್ದ ನೋವು ನನಗೆ ಮಾತ್ರ ಗೊತ್ತು. ಅದೇ ರೀತಿ ಸುಮಾರು ಒಂದೂವರೆ ತಿಂಗಳು ಅಮ್ಮ ತಾನೇ ಟ್ರೀಟ್‌ಮೆಂಟ್ ಪಡೆದು ಜೂಸ್ ಕುಡಿದು ಪುನಃ ಟ್ರೈನ್‌ನಲ್ಲಿ ಮನೆಗೆ ಹೋಗುತ್ತಿತ್ತು. ಅಂತೂ ನನ್ನ ಓಓಡಿ ಕ್ಯಾನ್ಸಲ್ ಆಗಿ ಪುನಃ ಸಚಿವಾಲಯಕ್ಕೆ ಬಂದೆ. ಆನಂತರ ತುಮಕೂರಿನ ಡಾಕ್ಟರ್ ಹೇಳಿದರು ನೋಡಿ ಈಗ ಏನೂ ಭಯ ಇಲ್ಲ ಇನ್ನು ಕೀಮೋಥೆರಪಿ ಆಗಬೇಕಷ್ಟೆ ಅಂತ .
ಅಷ್ಟು ಹೊತ್ತಿಗೆ ಅಕ್ಕನಿಗೆ ಯೂನಿವರ್ಸಿಟಿಯಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಬಿಎಸ್ಸಿ ಆಧಾರದ ಮೇಲೆ ಅಪ್ಲೈ ಮಾಡಿಸಿದ್ದೆ. ಕೆಲಸ ಸಿಕ್ಕಿ 2003ರ ಮಾರ್ಚ್ ಮೂರರಂದು ಕೆಲಸಕ್ಕೆ ಹಾಜರಾದಳು.
ಅಮ್ಮನಿಗೆ ಡಾಕ್ಟರ್ ಇಂಜೆಕ್ಷನ್ ಬರೆದುಕೊಟ್ಟರು. ಅದನ್ನು ಕಿದ್ವಾಯಿಯಿಂದ ತಂದು ಕೊಡುವುದು, ಅಮ್ಮನನ್ನ ಒಂದು ದಿನ ಅಡ್ಮಿಟ್ ಮಾಡಿಕೊಂಡು ಇಂಟ್ರಾವೀನಸ್ ಡ್ರಿಪ್ಸ್ ಮುಖಾಂತರ ಇಡೀ ದಿನ ಕೊಡುವುದು ಪ್ರೊಸೀಜರ್ ಎಂದು ಹೇಳಿದರು. ಒಂದು ಇಂಜೆಕ್ಸನ್ 5 ಸಾವಿರ ಅಂತಹ 5 ಇಂಜೆಕ್ಷನ್ ಕೊಡಬೇಕು, ಪ್ರತಿ ತಿಂಗಳು ಒಂದು ಇಂಜೆಕ್ಷನ್. ಎಲ್ಲಿಂದ ತರುವುದು. ಅವರೇನೋ ಚೀಟಿ ಬರೆದುಕೊಟ್ಟರು. ಅಂತೂ ಅಕ್ಕನ ಸಂಬಳ ಬರುವುದು ಗಟ್ಟಿಯಾದಾಗ ಅಪೆಕ್ಸ್ ಬ್ಯಾಂಕಿನಲ್ಲಿ ಸಂಬಳದ ಮೇಲೆ ಕೊಡುವ ಪರ್ಸನಲ್ ಲೋನ್ ಮೂವತ್ತು ಸಾವಿರ ಪಡೆದೆ. ಅದರಲ್ಲಿ ನಾನು ಮಾಡಿದ್ದ ಕೈ ಸಾಲಗಳನ್ನೆಲ್ಲಾ ತೀರಿಸಿದೆ. ಉಳಿದ ಹಣದಲ್ಲಿ ಅಮ್ಮನಿಗೆ ಕೀಮೋಥೆರಪಿ ಕೊಡಿಸಿದೆ. ಅಂತೂ ಮುಂದೆ ಅಕ್ಕನ ಸಂಬಳ ಬರಲು ಶುರುವಾದಾಗ ಎಲ್ಲಾ ಒಂದು ನೆಲೆಗೆ ಬಂದು ನಿಂತಿತು .
ಅಮ್ಮ ಮೊದಲಿನಂತೆ ಓಡಾಡಲು ಶುರು ಮಾಡಿದರು, ಅಮ್ಮನ ಆರೋಗ್ಯ ವಿಚಾರಿಸಲು ಒಂದೆರಡು ಬಾರಿ ಮನೆಗೆ ಬಂದಿದ್ದ ಅದೇ ಕಾನೂನು ಇಲಾಖೆಯ ನನ್ನ ಸೆಕ್ರೆಟರಿಯೇಟ್ ಸಹೋದ್ಯೋಗಿ ಹತ್ತಿರ ಅಪ್ಪನಿಂದ ಆಸ್ತಿ ಪಡೆಯುವ ಬಗ್ಗೆ ನಿಮಗೆ ಯಾರಾದರೂ ಲಾಯರ್ ಗೊತ್ತಿದ್ದರೆ ಹೇಳಿ ನನಗೆ ಫೀಸು ಕೊಡುವುದು ಕಷ್ಟ. ಆಸ್ತಿ ಬಂದ ನಂತರ ಫೀಸು ಕೊಡುವೆ ಎಂದು ಅದಕ್ಕೆ ತನ್ನ ಲಾಯರ್ ಸ್ನೇಹಿತನ ಭೇಟಿ ಮಾಡಿಸಲು ಪ್ರೆಸ್ ಕ್ಲಬ್ ಹತ್ತಿರ ಕರೆದೊಯ್ದರು. ಆ ಲಾಯರ್ ಸ್ನೇಹಿತ ತುಂಬ ಎಳಸು, ಟಿಪಿಕಲ್ ಬುಕ್ ವರ್ಮ್ ಅಂತ ಅಂದು ಅವರ ಮಾತಿನಿಂದ ತಿಳಿದು ನಕ್ಕು ಅಲ್ಲಿಂದ ಹೊರಟಿದ್ದೆ. ಮತ್ತೆ ನನ್ನ ಎನ್‌ಜಿಓದಲ್ಲಿ ಕಲೀಗ್ ಆಗಿದ್ದ ದಲಿತ ಲಾಯರ್‌ನ ಕೇಳಿದೆ, ಆತ ಮೊದಲು ಅಡ್ವಾನ್ಸ್ ಆಮೇಲೆ ಕೇಸ್ ಅಂದ. ಸರಿ ಅಂತ ಆಸ್ತಿ ಪಡೆಯುವ ಸಾಹಸಕ್ಕೆ ದೊಡ್ಡ ಫುಲ್ ಸ್ಟಾಪ್ ಇಟ್ಟೆ. (ಆ ಆಸ್ತಿಗಳು ಏನು ? ಯಾವುವು ಎಂಬುದನ್ನ ಮುಂದೊಮ್ಮೆ ಹೇಳುವೆ) ಅದಾದ ನಂತರ ಅಮ್ಮ ನಮ್ಮ ಜೊತೆ ಚೆನ್ನಾಗಿ ಇರುತ್ತಾರೆ ಅನ್ನುವ ಹೊತ್ತಿಗೆ ಸುಮಾರು ಮೇ –ಜೂನ್ 2003ರ ಹೊತ್ತಿಗೆ ಈ ಸಮಾಜ ನನ್ನ ಮೇಲೆ ಇಲ್ಲ ಸಲ್ಲದ ಗಾಳಿ ಮಾತನ್ನ ತೇಲಿಬಿಟ್ಟು ನನ್ನ ಜೀವನವನ್ನ ದುರ್ಭರ ಮಾಡಿಬಿಟ್ಟಿತು.
ಅಮ್ಮನಿಗೆ ಸರ್ಜರಿ ನಂತರದ ಟ್ರೀಟ್‌ಮೆಂಟ್‌ಗೆ ಹೆಲ್ಪ್ ಮಾಡಿದ ನನ್ನ ಕಾನೂನು ಇಲಾಖೆ ಕೊಲೀಗ್ ತನ್ನದೇ ಸ್ವಂತ ಕಾರಣಗಳಿಂದಾಗಿ ಆತನ ಪತ್ನಿಯಿಂದ ಡೈವೋರ್ಸ್ ಪಡೆಯುವ ಪ್ರಯತ್ನದಲ್ಲಿದ್ದು, ಅದಕ್ಕೆ ನಾನು ಕಾರಣ ಎಂಬಂತೆ ಎಲ್ಲ ಕಡೆ ಮಾತನಾಡತೊಡಗಿದರು. ಆಗ ಕ್ಯಾನ್ಸರ್ ಟ್ರೀಟ್‌ಮೆಂಟ್ ಪಡೆಯುತ್ತಿದ್ದ ಅಮ್ಮನ ಜೀವಕ್ಕಿಂತ ನನಗೆ ನನ್ನ ವೈಯಕ್ತಿಕ ಜೀವನ ಮುಖ್ಯವಾಗಿತ್ತೇ? ಹೊರಗಿನಿಂದ ನೋಡುವ ಜನಕ್ಕೆ ಕಾಣುವುದೆಲ್ಲಾ ಹಳದಿಯೆ?!. ನನ್ನ ಆಫೀಸಿನ ಮೇಲಧಿಕಾರಿಗಳು ನನ್ನ ಕೊಲೀಗ್‌ಗಳು, ಕಾನೂನು ಇಲಾಖೆಯ ಕೊಲೀಗ್ ಸ್ನೇಹಿತರು ನನ್ನ ಮೇಲಿನ ಈ ಗಾಳಿಮಾತನ್ನ ನಿಜವೆಂದು ನಂಬಿ ಎಲ್ಲರೂ ಮಾನಸಿಕ ಹಿಂಸೆ ಕೊಟ್ಟರು. ಈ ಜನರು ಹಾಗೂ ಈ ಸಮಾಜ ಎಲ್ಲವನ್ನೂ ಸಹಿಸಿಕೊಂಡೆ. ಆದರೆ ಅಮ್ಮ ಅಕ್ಕನೂ ಇದನ್ನ ನಿಜವೆಂದು ನಂಬಿ ನೀಡಿದ ಮಾನಸಿಕ ಹಿಂಸೆ ನನಗೆ ತಡೆದುಕೊಳ್ಳಲಾಗಲಿಲ್ಲ.
ಆಗ ಇವಳು ಮದುವೆ ಆಗದಿರುವುದರಿಂದ ತಾನೇ ಇದೆಲ್ಲ ಸಮಸ್ಯೆ ಅಂತ ಅಮ್ಮ ನನಗೆ ಮದುವೆ ಮಾಡಲೆಂದು ತುಮಕೂರಿನ ನನ್ನ ಎನ್‌ಜಿಓ ಕಲೀಗ್ ದಲಿತ ವಕೀಲನಿಗೆ ಹೇಳಿ ಗಂಡು ಹುಡುಕಿಸಿದಾಗ ಆ ಕಲೀಗ್ ಕೇಳಿದ ಮಾತು, “ ಆರ್ ಯು ಸ್ಟಿಲ್ ವರ್ಜಿನ್ ? ನಿನ್ನ ಬಗ್ಗೆ ಏನೇನೋ ಮಾತು ಕೇಳಿದೆ”
ಜೀವನ ಪೂರ್ತಿ ಹೋರಾಟ ಮಾಡುತ್ತಾ ಜೀವಿಸಲೇ ಬೇಕು ಅಂತ ನಾ ನಡೆದುಬಂದ ಹಾದಿ ನನಗೆ ನನ್ನವರು ನನ್ನನ್ನ ಅರ್ಥ ಮಾಡಿಕೊಂಡವರು ಯಾರೂ ಇಲ್ಲ ಅನ್ನಿಸಿ ಯಾಕೆ ಬದುಕಿರಬೇಕು? ಯಾರಿಗೋಸ್ಕರ ಬದುಕಿರಬೇಕು? ಸಾಯಲೇಬೇಕು ಎನ್ನುವ ಹಂಬಲವನ್ನ ಹತ್ತಿಕ್ಕುವ ಪ್ರಯತ್ನದಲ್ಲಿ, ನಾನೇಕೆ ಸಾಯಬೇಕು ಈ ಸಮಾಜ ನನ್ನ ಮೇಲೆ ಹೊರಿಸಿರುವ ಸುಳ್ಳನ್ನೇ ನಿಜ ಮಾಡಿಬಿಡುವ ಅನ್ನುವ ಮಟ್ಟಕ್ಕೆ ಬಂದೆ. ಮುಂದೆ ನಾನು ಮದುವೆಯಾದ ನನ್ನ ತುಮಕೂರಿನ ಕಲೀಗ್ ಡೈವೋರ್ಸ್ ಪಡೆದದ್ದಕ್ಕೂ ನನಗೂ ಸಂಬಂಧವಿರಲಿಲ್ಲ ಎನ್ನುವುದು ಮಾತ್ರ ನಿಜ. ಆತ ತನ್ನ ಡೈವೋರ್ಸ್ಗೆ ನಿಜ ಕಾರಣ ಏನು ಎಂಬುದನ್ನು ಆಗ ಆತನ ಪೋಷಕರಲ್ಲಿ ಹಾಗೂ ಸ್ನೇಹಿತರಲ್ಲಿ ಹೇಳಿಕೊಂಡಿಲ್ಲದೇ ಇದ್ದುದೂ ನನ್ನನ್ನು ವಿಲನ್ ಮಾಡಲು ಮುಖ್ಯ ಕಾರಣವಾಗಿತ್ತು.
ಇದಾದ ಕೆಲವೇ ವರ್ಷಗಳಲ್ಲಿ ಅಂದರೆ 2009ರಲ್ಲಿ ಅಮ್ಮ ಪುನಃ ಕ್ಯಾನ್ಸರ್‌ನ ಸೆಕಂಡರೀಸ್ ನಿಂದ ಬೆಡ್ ರಿಡನ್ ಆದರು. ಬ್ರೈನ್ ನಲ್ಲಿ ಮೂರು ಲೆಷನ್ಸ್ ಹಾಗೂ ಲಂಗ್ಸ್ ನಲ್ಲಿ ಒಂದು ಹೀಗೆ ಕಾಣಿಸಿಕೊಂಡಿತ್ತು. ಅಮ್ಮ ಜ್ಞಾನ ತಪ್ಪಿ ಬೀಳುವವರೆಗೆ ಅದರ ಸುಳಿವು ನಮಗೆ ಇರಲಿಲ್ಲ. ಕಾರಣ ಏನೇ ಟ್ರೀಟ್‌ಮೆಂಟ್ ಕೊಟ್ಟರೂ ಬ್ರೈನಿಗೆ ತಲುಪುವ ಔಷಧ ಕಡಿಮೆಯೇ, ಜೊತೆಗೆ ಮೂರು ಕಡೆ ಗಂಟುಗಳಿರುವುದರಿಂದ ಸರ್ಜರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು.
2003 ರಿಂದ 2009 ರವರೆಗೆ ಅಮ್ಮ ಸುಖವಾದ ಜೀವನ ನಡೆಸಿದರು. 2010ರ ಫೆಬ್ರವರಿ 8 ಅಮ್ಮ ನಮ್ಮನ್ನು ಬಿಟ್ಟು ಅಗಲಿದರು. ಇವತ್ತು ನಾನೇನಾದರೂ ಜೀವಂತವಾಗಿ ಬದುಕುಳಿದು ಹೀಗೆ ಬರೆಯಲು ಅವಕಾಶ ದೊರಕಿದೆ ಎಂದರೆ ಅದಕ್ಕೆ ಅಮ್ಮನ ಇಚ್ಚಾಶಕ್ತಿ ಹಾಗೂ ಕಾಳಜಿಯೇ ಕಾರಣ.
ಓದುಗರ ಪ್ರಶ್ನೆಗೆ ಸ್ಪಷ್ಟನೆ
ʼಇಷ್ಟು ಕಷ್ಟ ಪಟ್ಟು ಯಾಕೆ ಬದುಕಿದ್ದೀರಾ........” ಎಪಿಸೋಡ್ ನಲ್ಲಿ ನಾನು ಮದುವೆ ಬಗ್ಗೆ ಬರೆದಿದ್ದೆ “" ನಾನು ಮದುವೆಯೇ ಆಗಬಾರದು ಅದರಲ್ಲೂ ನಮ್ಮ ದಲಿತರನ್ನ ಮದುವೆಯಾಗಬಾರದು ...." ಅಂತ ಬರೆದಿರುವುದರ ಬಗ್ಗೆ ಓದುಗರೊಬ್ಬರು ಪ್ರಶ್ನೆ ಮಾಡಿದರು ಅಂತಹ ಹಲವರಿರಬಹುದು ಅವರಿಗೆ ಈ ಉತ್ತರ. ಆ ವಾಕ್ಯವೇ ಹೇಳುತ್ತದೆ ಅದರ ಇನ್ನೊಂದು ರೂಪದಲ್ಲಿ ಅಕಸ್ಮಾತ್ ಮದುವೆಯಾದರೆ ದಲಿತರನ್ನಂತೂ ಮದುವೆಯಾಗಬಾರದು ಎನ್ನುವುದು ಅದರ ಅರ್ಥ. ಹೌದು ಜೀವನದಲ್ಲಿ ನಾನು ಮದುವೆಯೇ ಆಗಬಾರದು ಅಂತ 23 ನೇ ವಯಸ್ಸಿನಿಂದ ಅಂದರೆ 1992 ರಿಂದ 2003 ರವರೆಗೆ ಹಾಗೇ ಉಳಿದಿದ್ದ ನನಗೆ ನನ್ನ ಈ ನಿರ್ಧಾರವನ್ನು ಬದಲಿಸುವಂತೆ ಮಾಡಿದ್ದು ಜೀವನದ ಕೆಲವು ಘಟನೆಗಳು, ಮಾನಸಿಕ ಹಿಂಸೆ ನೀಡಿದ ಈ ಸಮಾಜದ ಹಲವು ಮಂದಿ ಹಾಗೂ ನನ್ನ ಸಹೋದ್ಯೋಗಿಗಳು ಕಾರಣ.