ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಮೇಲ್ಮನೆಯಲ್ಲಿ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ
ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಮೇಲ್ಮನೆಯಲ್ಲಿ
ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ
ಬೆಂಗಳೂರು: ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗದ ನಡುವೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಮೇಲ್ಮನೆಯಲ್ಲಿ ಶುಕ್ರವಾರ ಅಂಗೀಕರಿಸಲಾಯಿತು.
ವಿಧಾನಸಭೆಯಿAದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಮಂಡಿಸಿದರು.
ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ವಿಧೇಯಕಕ್ಕೆ ನಮ್ಮ ವಿರೋಧವಿದೆ, ಚುನಾವಣಾ ಆಯೋಗಕ್ಕೆ ನೀಡಿದ ಅಧಿಕಾರ ವಾಪಸ್ ಪಡೆದರೆ ಹೇಗೆ? ಇದರಿಂದ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮನಸೋಯಿಚ್ಛೆಯಾಗಲಿದೆ. ಸಂವಿಧಾನದಲ್ಲಿ ಪಾರದರ್ಶಕ ಕೆಲಸಕ್ಕೆ ಚುನಾವಣಾ ಆಯೋಗಗಳನ್ನು ರಚಿಸಲಾಗಿದೆ. ಕ್ಷೇತ್ರ ಪುನರ್ವಿಂಗಡಣೆ, ಮೀಸಲಾತಿ ಅಧಿಕಾರ ವಾಪಸ್ ಪಡೆಯುತ್ತಿರುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿಯಾಗಲಿದೆ. ಹಾಗಾಗಿ ಬಿಲ್ ವಾಪಸ್ಸು ಪಡೆಯಿರಿ ಎಂದರು.
ಜೆಡಿಎಸ್‌ನ ಶ್ರೀಕಂಠೇಗೌಡ ಮಾತನಾಡಿ, ಮೀಸಲಾತಿ ನಿಮಗೆ ಬೇಕಾದ ರೀತಿ ಮಾಡುತ್ತಿದ್ದೀರಿ, ಚುನಾವಣಾ ಗಿಮಿಕ್‌ಗಾಗಿ ತರುತ್ತಿರುವ ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಟೀಕಿಸಿದರು.
ಇದಕ್ಕೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಒಂದೂಕಾಲು ವರ್ಷಕ್ಕೆ ಮೈತ್ರಿ ಸರ್ಕಾರದ ಕಾಲೆಳೆದಿದ್ದೀರಿ ಎಂದು ಟಾಂಗ್ ನೀಡಿದರು. ಸರ್ಕಾರದ ನಿಲುವನ್ನು ಖಂಡಿಸಿದ ಜೆಡಿಎಸ್ ಸದಸ್ಯರು ಬಿಲ್ ವಿರೋಧಿಸಿ ಸಭಾತ್ಯಾಗ ಮಾಡಿದರು.
ಸುದೀರ್ಘ ಚರ್ಚೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಲು ಈ ಕಾಯ್ದೆ ತರಲಾಗಿದೆ. ಹಾಗಾಗಿ ಬಿಲ್ ಪಾಸ್ ಮಾಡಿಕೊಡಿ ಎಂದು ಸದನಕ್ಕೆ ಮನವಿ ಮಾಡಿದರು.
ಸರ್ಕಾರಕ್ಕೆ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಇವರಿಗೆ ನಂಬಿಕೆ ಇಲ್ಲ, ಚುನಾವಣೆ ಮುಂದೂಡುವ ಹುನ್ನಾರದಿಂದ ಈ ಬಿಲ್ ತರಲಾಗಿದೆ, ಸಂವಿಧಾನ ವಿರೋಧಿ ಬಿಲ್ ಇದಾಗಿದ್ದು, ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಸದನದಿಂದ ಹೊರನಡೆದರು.
ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಧ್ವನಿಮತದ ಮೂಲಕ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.
ವಿಧೇಯಕ ಅಂಗೀಕಾರದ ಬಳಿಕ ಸದನವನ್ನು ಸೋಮವಾರ ಬೆಳಗ್ಗೆ ೧೧ ಗಂಟೆವರೆಗೆ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಮುಂದೂಡಿಕೆ ಮಾಡಿದರು.
ಬಾಕ್ಸ್
ಮಾಧುಸ್ವಾಮಿಯಲ್ಲಿ ನಜೀರ್‌ಸಾಬ್‌ರನ್ನ ಕಾಣುತ್ತಿದ್ದೇನೆ
ನಾನು ಮಾಧುಸ್ವಾಮಿಯಲ್ಲಿ ನಜೀರ್ ಸಾಬ್ ಅವರನ್ನು ಕಾಣುತ್ತಿದ್ದೇನೆ. ಮಾಧುಸ್ವಾಮಿ, ಸಿಎಂ ಬೊಮ್ಮಾಯಿ ಸಮಾಜವಾದಿ ಹಿನ್ನೆಲೆಯವರು, ನಾವು ನಿಮ್ಮಿಂದ ಒಳ್ಳೆಯದನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಹೇಳಿದರು. ಆಡಳಿತ ನಡೆಸುವವರು ಶಾಶ್ವತ ಅಲ್ಲ, ಸಾಂವಿಧಾನಿಕ ಸಂಸ್ಥೆಗಳು ಶಾಶ್ವತ. ಹಾಗಾಗಿ ಇವನ್ನು ಉಳಿಸಬೇಕಿದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ನನ್ನಲ್ಲಿ ನಜೀರ್ ಸಾಬ್ ಅವರನ್ನು ನೋಡುತ್ತಿದ್ದೀರಿ. ಅಂದು ನಜೀರ್ ಸಾಬ್ ಅವರಿಗೂ ಇದೇ ಸ್ಥಿತಿ ಇತ್ತು. ಡಿಲಿಮಿಟೇಷನ್‌ಗೂ ಎಲೆಕ್ಷನ್ ಕಮೀಷನ್‌ಗೂ ಸಂಬAಧ ಇಲ್ಲ. ಒಬ್ಬ ಸಮಿತಿ ಬದಲು ಹಲವು ಸದಸ್ಯರನ್ನು ಒಳಗೊಂಡ ಅಡ್‌ಹಾಕ್ ಸಮಿತಿ ರಚಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ಹೆಗಡೆ, ಗೌಡರ ಕಾಲದಲ್ಲಿದ್ದುದನ್ನೇ ಮಾಡ್ತಿದೇವೆ: ಮಾಧುಸ್ವಾಮಿ
ಅವೈಜ್ಞಾನಿಕವಾಗಿ ಮರುವಿಂಗಡಣೆ ಮಾಡಲಾಗಿದೆ. ಇದರಿಂದ ತಕರಾರು ಅರ್ಜಿ ಹೆಚ್ಚಾಗುತ್ತಿವೆ. ಹೀಗಾದಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೆಗಡೆ, ನಜೀರ್ ಸಾಬ್, ದೇವೇಗೌಡರ ಕಾಲದಲ್ಲಿ ಏನಿತ್ತೋ ಅದನ್ನೇ ನಾವು ಈಗ ಬಿಲ್‌ನಲ್ಲಿ ಇಟ್ಟಿದ್ದೇವೆ, ಚುನಾವಣೆ ಆಯೋಗವೇ ಚುನಾವಣೆ ಮಾಡಲಿದೆ. ಚುನಾವಣಾ ಆಯೋಗ ಮೀಸಲಾತಿ ಮಾಡಲು ಸಾಧ್ಯವಿಲ್ಲ. ಅದನ್ನು ಸರ್ಕಾರವೇ ಕೊಡಬೇಕಿದೆ ಎಂದು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಬಿಲ್ ಸಮರ್ಥಿಸಿಕೊಂಡರು.
ಸ್ವತAತ್ರ ಭಾರತದ ಇತಿಹಾಸದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳ ದುರ್ಬಳಕೆ ಈಗ ಆಗುತ್ತಿದೆ. ಸಂವಿಧಾನಾತ್ಮಕ ಸಂಸ್ಥೆಗಳ ಕಾಲು, ಕೈ, ಕುತ್ತಿಗೆ ತೆಗೆಯುವ ಕೆಲಸ ಮಾಡುತ್ತಿದ್ದೀರಿ. ನೀವು ತಿದ್ದುಪಡಿ ಮೂಲಕ ಚುನಾವಣಾ ಆಯೋಗಕ್ಕೆ ಅಗೌರವ ತೋರುತ್ತಿದ್ದೀರಿ. ಇದರಿಂದ ನಿಮಗೆ ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲ ಎನ್ನುವಂತಾಗಲಿದೆ.
ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್