ಪುನೀತ್‍ಗೆ ಹೃದಯಾಘಾತ: ಕನ್ನಡದ ಕೋಟಿ ಹೃದಯಗಳಿಗೆ ಆಘಾತ
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿವರೆಗೆ ಅಭಿಮಾನಿಗಳಿಗೆ ದರ್ಶನ:
ಭಾನುವಾರ ಅಪ್ಪ ಅಮ್ಮನ ಮಗ್ಗುಲಲ್ಲಿ ಚಿರನಿದ್ರೆ
ಪುನೀತ್ಗೆ ಹೃದಯಾಘಾತ:
ಕನ್ನಡದ ಕೋಟಿ ಹೃದಯಗಳಿಗೆ ಆಘಾತ
ತುಮಕೂರು: ಪರಿಪಕ್ವ ಅಭಿನಯದಿಂದ ಮಾತ್ರವಲ್ಲದೇ ತಮ್ಮ ಸರಳ, ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದ ಪುನೀತ್ ರಾಜ್ಕುಮಾರ್(ಲೋಹಿತ್) ಶುಕ್ರವಾರ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. 46 ವರ್ಷ ಸಾಯುವ ವಯಸ್ಸಲ್ಲ ಎಂಬ ಸಂಗತಿ ಪುನೀತ್ ಹೃದಯಕ್ಕೆ ಅರಿವಾಗಬೇಕಿತ್ತು ಎಂಬುದು ಅವರ ಅಭಿಮಾನಿಗಳ ತೀರದ ನೋವು.
ಸಿನಿಮಾ ನಾಯಕನಾಗಿ ಅಂಗ ಸೌಷ್ಟವಕ್ಕೆ ಒತ್ತು ನೀಡಿದ್ದ ಪುನೀತ್ ಶುಕ್ರವಾರ ಮುಂಜಾನೆ ಅವರ ಸದಾಶಿವನಗರದ ನಿವಾಸದಲ್ಲಿ ಎಂದಿನಂತೆ ಜಿಮ್ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತೆಂದೂ, ಅಲ್ಲಿಂದ ಅವರ ಕುಟುಂಬದ ವೈದ್ಯ ಡಾ.ರಮಣರಾವ್ ಅವರ ಕ್ಲಿನಿಕ್ಗೆ ಕರೆದೊಯ್ದು ಪ್ರಾಥಮಿಕ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಯಿತೆಂದೂ ಅಲ್ಲಿ ಇನ್ನಷ್ಟು ಅವರಿಗೆ ಎದೆನೋವು ಇನ್ನಷ್ಟು ತೀವ್ರಗೊಂಡು ಹೆಚ್ಚಿನ ಚಿಕಿತ್ಸೆಗೆ ಬೆಳಗಿನ 11.30ರ ಸುಮಾರಿಗೆ ವಸಂತನಗರದ ಮಿಲ್ಲರ್ ಕೆರೆ ರಸ್ತೆಯಲ್ಲಿನ ವಿಕ್ರಮ್ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರೆಂದು ಮಧ್ಯಾಹ್ನ ಅಧಿಕೃತವಾಗಿ ಪ್ರಕಟಿಸುವ ಹೊತ್ತಿಗಾಗಲೇ ನಿಧನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಬಿಟ್ಟಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಹುಪಾಲು ಗಣ್ಯರು ಆಸ್ಪತ್ರೆಗೆ ಧಾವಿಸಿದರು.
3.25ರ ಹೊತ್ತಿಗೆ ಪುನೀತ್ ಅವರ ಕಳೇಬರವನ್ನು ಸದಾಶಿವನಗರದ ಅವರ ಮನೆಗೆ ಒಯ್ಯಲಾಯಿತು. ಸದಾಶಿವನಗರದ ಎಲ್ಲ ರಸ್ತೆಗಳಿಗೂ ಸಾರ್ವಜನಿಕ ಪ್ರವೇಶ ಬಂದ್ ಮಾಡಲಾಗಿದ್ದು ಕುಟುಂಬದ ಸದಸ್ಯರು ಹಾಗೂ ಆತ್ಮೀಯರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಇತ್ತ ಸಂಪಂಗಿರಾಮನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆಗೊಳಿಸಲಾಯಿತು.
ಈ ದಿನ ರಾಜ್ ಪರಿವಾರ ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ಕರಾಳ ಶುಕ್ರವಾರ ಎನಿಸಿತು. ಬಹಳಷ್ಟು ಮಂದಿಗೆ ಏನನ್ನೂ ಹೇಳಿಕೊಳ್ಳಲಾಗದ ತಲ್ಲಣ, ದುಗುಡ ಎದೆಯಲ್ಲಿ ಮಡುಗಟ್ಟಿ ನಿಂತಿತ್ತು. ಆಸ್ಪತ್ರೆಯ ಸುತ್ತಮುತ್ತಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.
ಕಂಠೀರವ ಕ್ರೀಡಾಂಗಣದಲ್ಲಿ ಗಣ್ಯರಿಗೆ ಹಾಗೂ ದುಃಖತಪ್ತ ಅಭಿಮಾನಿಗಳಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಿದ್ದರೂ ಆಕ್ರೋಶಭರಿತರಾದ ಜನರು ಪುನೀತ್ ಅಂತಿಮ ದರ್ಶನಕ್ಕೆ ನುಗುತ್ತಲೇ ಇದ್ದರು. ಕ್ರೀಡಾಂಗಣ ಅಕ್ಷರಶಃ ಜನಸಾಗರದಿಂದ ತುಂಬಿ ತುಳುಕುತ್ತಿತ್ತು.
2006ರ ಏಪ್ರಿಲ್ 12ರಂದು ಡಾ.ರಾಜ್ ಮರಣಿಸಿದ ಸಂದರ್ಭದಲ್ಲಿ ನಡೆದ ನೂಕು ನುಗ್ಗಲು, ಹಿಂಸಾಚಾರ ಮತ್ತು ಸಾವಧಾನವಾಗಿ ಕುಟುಂಬದ ಸದಸ್ಯರು ಅಂತ್ಯ ಕ್ರಿಯೆ ನಡೆಸಲು ಸಾಧ್ಯವಾಗದೇ ಇದ್ದ ಕಹಿ ನೆನಪಿನಲ್ಲಿ ಎಲ್ಲ ಕಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮದ್ಯದ ಮಾರಾಟ ಸ್ಥಗಿತಗೊಳಿಸಲಾಗಿದೆ.
ಶನಿವಾರ ರಾತ್ರಿವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಿದ್ದು, ಪುನೀತ್ ಹಿರಿಮಗಳು ಅಮೆರಿಕೆಯಿಂದ ಬರಬೇಕಾಗಿರುವ ಕಾರಣ ಭಾನುವಾರ ವರನಟ ರಾಜ್ ಮತ್ತು ಪಾರ್ವತಮ್ಮನವರ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಆವರಣದಲ್ಲೇ ಪುನೀತ್ ಚಿರನಿದ್ರೆಗೆ ಸರ್ಕಾರ ಅವಕಾಶ ಮಾಡಿಕೊಡಲಾಗಿದೆ.