ಸಂವೇದನೆ -ಕೇಶವ ಮಳಗಿ  ಕಲಾಸಂವೇದನೆಯ ರೂಪಗಳು ಮಿಲನ್‌ ಕುಂದೇರ

ಸಂವೇದನೆ -ಕೇಶವ ಮಳಗಿ  ಕಲಾಸಂವೇದನೆಯ ರೂಪಗಳು ಮಿಲನ್‌ ಕುಂದೇರ

ಸಂವೇದನೆ -ಕೇಶವ ಮಳಗಿ   ಕಲಾಸಂವೇದನೆಯ ರೂಪಗಳು  ಮಿಲನ್‌ ಕುಂದೇರ

 

ಆಧುನಿಕ ಸಮಾಜವು ಸಂವಿಧಾನದಿಂದ ರೂಪಿತಗೊಂಡ ರಾಜ್ಯಾಡಳಿತವನ್ನು, ಕಾನೂನು-ಕಟ್ಟಳೆ ಮತ್ತು ಅವನ್ನು ಅನುಷ್ಠಾನಗೊಳಿಸಲು ಪೊಲೀಸ್ಪಡೆ, ನ್ಯಾಯವ್ಯವಸ್ಥೆ, ಸರ್ವವ್ಯಾಪಿ ಆಡಳಿತ ಯಂತ್ರ, ಸಚಿವರು ಇತ್ಯಾದಿಯನ್ನು ಹೊಂದಿದೆ. ಇಡೀ ವ್ಯವಸ್ಥೆಯು ವ್ಯಕ್ತಿಗಳ ಮೇಲೆ ನೀತಿಸಂಹಿತೆಯನ್ನು ಹೇರುತ್ತದೆ. ಇದು ಕಾರಣವಾಗಿ ಆತನ ನಡವಳಿಕೆಯು ಆತನ ಅಂತರಂಗದಿಂದ ಹೊಮ್ಮುವುದಕ್ಕಿಂತ ಅನಾಮಧೇಮವೂ, ಪರಕೀಯವೂ ಆದ ಶಕ್ತಿಗಳ ಮೂಲಕ ನಿಯಂತ್ರಿತವಾಗಿದೆ. ಇಂತಹ ವಿಶಿಷ್ಟ ಸನ್ನಿವೇಶದಲ್ಲಿ ಕಾದಂಬರಿ ಪ್ರಕಾರವು ಹುಟ್ಟುಪಡೆಯಿತು.

  

ಒಳಿತು-ಕೆಡುಕುಗಳ ನಡುವೆ ಸಿಕ್ಕಿ ಹಾಕಿಕೊಂಡ ಮನುಷ್ಯ ಅವುಗಳೊಂದಿಗೆ ಸೆಣೆಸುತ್ತ ಬಿಡಿಸಿಕೊಳ್ಳುವ ಬದುಕಿನ ಸಂಕಟವನ್ನು ದುರಂತದ ಮೂಲಕ ಅರಿತುಕೊಳ್ಳುವುದು ಬಹುದೊಡ್ಡ ಪರಿಕಲ್ಪನೆ. ಇದರಿಂದಾಗಿ ಮನುಷ್ಯ ನಿರಾಕರಿಸಲಾಗದ ಸತ್ಯಗಳ ಶೋಧನೆಗೆ ಸಾಪೇಕ್ಷ ನೈತಿಕ ಸಿದ್ಧಾಂತ ರೂಪುಗೊಂಡಿತು. `ವೈರಿಗಳೊಂದಿಗೂ ನ್ಯಾಯಪರತೆಯಿಂದಲೇ ನಡೆದುಕೊಳ್ಳಬೇಕೆಂಬಅಂಶವನ್ನಿದು ಸ್ಪಷ್ಟಪಡಿಸಿತು.

 

ಸಂವೇದನೆ -ಕೇಶವ ಮಳಗಿ

 ಕಲಾಸಂವೇದನೆಯ ರೂಪಗಳು

ಮಿಲನ್‌ ಕುಂದೇರ

ಮನುಷ್ಯ ಇನ್ನೊಬ್ಬರ ಕುರಿತು ತೋರುವ ಅನುಕಂಪ ಅಥವ ಜುಗುಪ್ಸೆಗೆ ಗಹನವಾದ ಕಾರಣವನ್ನು ನಾವೆಲ್ಲಿ ಹುಡುಕಬಹುದು? ಅವೆರಡೂ ಏಕೆ ಹೊಂದಿಕೊಂಡಿರಲಾರವು? ಇವು ಒಟ್ಟಿಗಿರುವುದೇ ದುಸ್ತರ, ಅಸಾಧ್ಯ! ಈ ಎರಡೂ ಭಾವಗಳು ಅಂಕೆಯಲ್ಲಿಲ್ಲದ ನಿರಂಕುಶಮತಿಗಳು. ಹಿತಾಸಕ್ತಿಗಳ ತಿಕ್ಕಾಟದಿಂದ ಹುಟ್ಟುವಂಥವು. ಕೆಲವೊಮ್ಮೆ ರಾಜಕೀಯ-ಧರ್ಮ- ಸಿದ್ಧಾಂತ ಹೀಗೆ ಯಾವೊಂದೂ ಕಾರಣವನ್ನು ಹೊಂದಿಲ್ಲದಿರುವುದರಿಂದ ಅವುಗಳ ಮೂಲವನ್ನು ಹುಡುಕುವುದೇ ಕಠಿಣ. ಇದಕ್ಕಾಗಿ ಮನುಷ್ಯರ ಅತ್ಯಂತ ಆದಿಮ ಕಲಾಪ್ರಜ್ಞೆಯನ್ನೇ ಕೆದಕಬೇಕಾಗಬಹುದು! ‘ಕಲಾಪ್ರಕಾರಗಳಲ್ಲಿಯೇ ’ಸಂಗೀತವು’, ಭಾವಗೀತೆಗಿಂತಲೂ ಭಾವೋನ್ಮಾದಕವಾಗಿರುವುದು ಇದಕ್ಕೆ ಕಾರಣವಿರಬಹುದೆಂದು’ ತತ್ತ್ವಶಾಸ್ತ್ರಜ್ಞ ಹೆಗೆಲ್‌ ಊಹಿಸುತ್ತಾರೆ. ಈ ಭಾವೋದ್ವೇಗದಿಂದಲೇ ತನ್ನೆದುರಿನ ವ್ಯಕ್ತಿಯ ಸಹಾನುಭೂತಿ ಇಲ್ಲವೇ ಜುಗುಪ್ಸೆ ಹುಟ್ಟುವುದು ಎಂಬುದು ಹೆಗೆಲ್‌ರ ಅಂಬೋಣ!

ಕಲಾಸಂವೇದನೆಯ ಕುರಿತ ಪರಿಕಲ್ಪನೆಗಳು ಅವುಗಳ ಬೇರುಗಳ ಅಸ್ತಿತ್ವವನ್ನು ಗುರುತಿಸಿದಮೇಲಷ್ಟೇ ನನಗೆ ಅವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಮನುಷ್ಯರು ಮುಗ್ಧರೋ-ಜಾಣರೋ ಅಂತೂ ಬದುಕನ್ನು ನಿರಂತರವಾಗಿ ಅದರೆಲ್ಲ ಸೊಗಸು-ಹೊಲಸು, ಉದಾತ್ತತೆ-ನಿಕೃಷ್ಟತೆ, ವಿನೋದ-ದುರಂತ, ಭಾವುಕ-ನಾಟಕೀಯ, ವಿಪರ್ಯಾಸ, ಭಾವಸ್ಫೋಟ ಗಳನ್ನೊಳಗೊಂಡಂತೆ ಎದುರುಗೊಳ್ಳುತ್ತಾರೆ. ಕೆಲವೊಮ್ಮೆ ವಿನೋದಪ್ರಜ್ಞೆಯ ಲೇಪ, ಬೆಡಗು, ಅಸಭ್ಯತೆಯ ಸೋಕು ಇಲ್ಲದೆ ತಾತ್ವಿಕ ವಿಷಯಗಳನ್ನು ಅತ್ಯಂತ ಶುಷ್ಕ ರೀತಿಯಲ್ಲವರು ವ್ಯಕ್ತಪಡಿಸಿರಬಹುದು. ಆದರೆ, ಈ ಎಲ್ಲ ಪರಿಕಲ್ಪನೆಗಳು ಅಥವ ರಸಗಳು ತಾವು ಅಸ್ತಿತ್ವದಲ್ಲಿದ್ದೇವೆ, ಎಂಬುದನ್ನು ನಿರೂಪಿಸುತ್ತವೆ. ಇವನ್ನು ಬೇರಾವ ರೀತಿಯಿಂದಲೂ ವ್ಯಕ್ತಪಡಿಸಲು ಸಾಧ್ಯವಿಲ್ಲ.

ಮಹಾಕಾವ್ಯಗಳ ಭಾವ ಬುನಾದಿ

ಮಹಾಕಾವ್ಯಗಳ ಕಟ್ಟೋಣವು ‘ಕ್ರಿಯೆ’ಯನ್ನು ಅವಲಂಬಿಸಿದೆ. ಮಹಾನಾಯಕರ ಪರಿಕಲ್ಪನೆಯ ಗ್ರೀಕ್‌ ಸಮಾಜದಲ್ಲಿ ಈ ಕ್ರಿಯೆಯು ‘ವ್ಯಕ್ತಿಗತ ಸ್ವಾತಂತ್ರ್ಯ’ದ ಪರಾಕಾಷ್ಠೆಯನ್ನು ಎತ್ತಿ ಹಿಡಿಯುತ್ತಿತ್ತೆಂದು ಹೆಗೆಲ್‌ ಹೇಳುತ್ತಾರೆ. ‘ಇಲಿಯಡ್‌’ ಮಹಾಕಾವ್ಯದ ಮೂಲಕ ಹೆಗೆಲ್‌ ತಮ್ಮ ಪ್ರಮೇಯವನ್ನು ವಿವರಿಸುತ್ತಾರೆ. ಇಲಿಯಡ್‌ ಮಹಾಕಾವ್ಯದಲ್ಲಿ ‘ಅಗಮ್ಮೆಮ್ನಾನ್‌’ ಚಕ್ರವರ್ತಿಯಾದರೂ ಉಳಿದ ಅರಸರು, ರಾಜಕುವರರು ಆತನ ಬಣ ಸೇರುವ, ಸೇರದಿರುವ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸ್ವತಂತ್ರರಾಗಿದ್ದರು. ಈ ಸ್ವಾತಂತ್ರ್ಯವಿದ್ದುದರಿಂದಲೇ 'ಅಖಿಲಸ್‌' ರಣರಂಗದಿಂದಲೇ ಹಿಂಸರಿದ!

ಇದೇ ರೀತಿಯಲ್ಲಿ ಜನರೂ ತಮ್ಮ ಮೆಚ್ಚಿನ ರಾಜರನ್ನು ಸ್ವ-ಇಚ್ಛೆಯಿಂದ ಹಿಂಬಾಲಿಸುತ್ತಿದ್ದರು. ಅವರ ಮೇಲೆ ಯಾವುದೇ ನೈತಿಕ ಒತ್ತಡವಿರುತ್ತಿರಲಿಲ್ಲ. ಜನರ ವರ್ತನೆಯು ಸಂಪೂರ್ಣವಾಗಿ ಅವರ ಹಿತಾಸಕ್ತಿ, ಗೌರವ-ಪ್ರತಿಷ್ಠೆ-ಘನತೆಗಳನ್ನು ಅವರು ಗ್ರಹಿಸುತ್ತಿದ್ದ ರೀತಿ, ಮಹಾಶಕ್ತಿಶಾಲಿಯಾದ ವ್ಯಕ್ತಿಗೆ ಅವರು ತೋರುತ್ತಿದ್ದ ವಿನಯ, ನಾಯಕನ ಕಲಿತನ-ಪರಾಕ್ರಮಗಳ ಬಗೆಗೆ ಇರುತ್ತಿದ್ದ ಆಕರ್ಷಣೆ ಇತ್ಯಾದಿಗಳು ಆಯ್ಕೆಯ ಹಿಂದೆ ಕೆಲಸ ಮಾಡುತ್ತಿದ್ದವು. ಪ್ರತಿ ವ್ಯಕ್ತಿಗೆ ಕದನದಲ್ಲಿ ಭಾಗಿಯಾಗುವ, ನಿರಾಕರಿಸುವ ಸ್ವಾತಂತ್ರ್ಯವು ದತ್ತವೂ, ಅಬಾಧಿತವೂ ಆಗಿತ್ತು. ಈ ಅಂಶಗಳೇ ವ್ಯಕ್ತಿಗತ ನೆಲೆಯ ಗುಣಾತ್ಮಕತೆ ಮತ್ತು ಅದರ ಕಾವ್ಯಾಂಶವನ್ನು ಕಾಪಿಡುತ್ತಿತ್ತು. (*)

ಆಧುನಿಕ ಮನುಷ್ಯನ ಈ ಪುರಾತನ ಲೋಕದ ಮಹಾಕಾವ್ಯಕ್ಕೆ ಸಂವಾದಿಯಾಗಿ ಹೆಗೆಲ್‌ ತಾವು ಬದುಕಿದ್ದ ಸಮಕಾಲೀನ ಸಮಾಜವನ್ನು ಮುಖಾಮುಖಿಯಾಗಿಸುತ್ತಾರೆ.

ಆಧುನಿಕ ಸಮಾಜವು ಸಂವಿಧಾನದಿಂದ ರೂಪಿತಗೊಂಡ ರಾಜ್ಯಾಡಳಿತವನ್ನು, ಕಾನೂನು-ಕಟ್ಟಳೆ ಮತ್ತು ಅವನ್ನು ಅನುಷ್ಠಾನಗೊಳಿಸಲು ಪೊಲೀಸ್‌ಪಡೆ, ನ್ಯಾಯವ್ಯವಸ್ಥೆ, ಸರ್ವವ್ಯಾಪಿ ಆಡಳಿತ ಯಂತ್ರ, ಸಚಿವರು ಇತ್ಯಾದಿಯನ್ನು ಹೊಂದಿದೆ. ಈ ಇಡೀ ವ್ಯವಸ್ಥೆಯು ವ್ಯಕ್ತಿಗಳ ಮೇಲೆ ನೀತಿಸಂಹಿತೆಯನ್ನು ಹೇರುತ್ತದೆ. ಇದು ಕಾರಣವಾಗಿ ಆತನ ನಡವಳಿಕೆಯು ಆತನ ಅಂತರಂಗದಿಂದ ಹೊಮ್ಮುವುದಕ್ಕಿಂತ ಅನಾಮಧೇಮವೂ, ಪರಕೀಯವೂ ಆದ ಶಕ್ತಿಗಳ ಮೂಲಕ ನಿಯಂತ್ರಿತವಾಗಿದೆ. ಇಂತಹ ವಿಶಿಷ್ಟ ಸನ್ನಿವೇಶದಲ್ಲಿ ಕಾದಂಬರಿ ಪ್ರಕಾರವು ಹುಟ್ಟುಪಡೆಯಿತು.

ಈ ಹಿಂದೆ ಮಹಾಕಾವ್ಯಗಳನ್ನು ಕ್ರಿಯೆಕಾರ್‍ಯದ ಬುನಾದಿಯ ಮೇಲೆ ಕಟ್ಟಿದಂತೆಯೇ ಹೊಸ ಯುಗದ ಕಾದಂಬರಿಯ ತಳಪಾಯವೂ ಕ್ರಿಯೆ ಕಾರ್ಯದ  ಮೇಲೆಯೇ ಅವಲಂಬಿತವಾಗಿತ್ತು. ವ್ಯತ್ಯಾಸವಿದ್ದುದು ಕಾದಂಬರಿಯ ಕ್ರಿಯೆ ಕಾರ್ಯವನ್ನು ಸಮಸ್ಯಾತ್ಮಕವಾಗಿ ಮಾಡಿ ಅನೇಕ ಸ್ತರದ ಪ್ರಶ್ನೆಗಳಾಗಿ ಕಾಣಿಸಿಕೊಂಡಿದ್ದರಲ್ಲಿ ಮಾತ್ರ. ಕ್ರಿಯೆಯು ಕೇವಲ ವಿಧೇಯತೆಯ ಪರಿಣಾಮವಾಗಿ ಹೊಮ್ಮುತ್ತಿದ್ದರೆ ಅದನ್ನು ಕ್ರಿಯೆ ಎಂದು ಕರೆಯಬಹುದೆ? ಸತತವಾಗಿ ಜರುಗುವ ಲಕ್ಷಣವಾಗಿ ನಡೆಯುವ ಕ್ರಿಯೆಯನ್ನು ಗುರುತಿಸುವುದಾದರೆ ಹೇಗೆ? ಸಂಪೂರ್ಣವಾಗಿ ಅಧಿಕಾರಶಾಹಿಮಯವಾಗಿ, ಪೆಡುಸಾಗಿ ಕಾಣುತ್ತ, ಕ್ರಿಯೆಯ ಅವಕಾಶವೇ ನಗಣ್ಯವಾಗಿರುವಾಗ ವ್ಯಕ್ತಿ ‘ಸ್ವಾತಂತ್ರ್ಯ’ ಎನ್ನುವ ಪದದ ಅರ್ಥವಾದರೂ ಏನು?

ಈ ಪ್ರಶ್ನೆಗಳನ್ನು ಮೂಲೆಯ ಅಂಚಿಗೆ ನಿಲ್ಲಿಸಿ ಜೇಮ್ಸ್‌ ಜಾಯ್ಸ್‌ ಮತ್ತು ಕಾಫ್ಕ ತಮ್ಮ ಕೃತಿಗಳಲ್ಲಿ ಕೇಳಿಕೊಂಡರು. ಕಾಫ್ಕನ ‘ಕ್ಯಾಸಲ್‌’ ಕಾದಂಬರಿಯಂತೂ ಆಧುನಿಕ ಕಾಲದ ಇಲಿಯಡ್‌ ಎಂದು ಕರೆಯಬಹುದಾಗಿದೆ. (**)

ಗಂಟು ಹುಬ್ಬಿನ ಮಡಿವಂತ ಮುಸುಂಡಿಗಳು

ಅಥವ ವಿನೋದಪ್ರಜ್ಞೆ ಅರಿಯದವರು

"ಆತನ ಪ್ರತಿ ಹತ್ತು ನಗೆಹನಿಗಳು ನೂರು ವೈರಿಗಳನ್ನು ಸೃಷ್ಟಿಸುತ್ತಿದ್ದವು. ಅವರ ಹಗೆತನದಿಂದ ಆತ ಕುಗ್ಗಿ ಹೋಗುತ್ತಿದ್ದ. ತನ್ನ ಖಡ್ಗವನ್ನು ಕೈಯಿಂದ ಚೆಲ್ಲಿ ಹೃದಯ ಒಡೆದುಕೊಂಡು ಸಾಯುತ್ತಿದ್ದ", ಇವು ಕಾದಂಬರಿಯೊಂದರ ಸಾಲುಗಳು. ನಿಜ, ಆತ ‘ವಿನೋದಪ್ರಜ್ಞೆಯ ಗೈರುಹಾಜರಿ’ಯಿಂದ ನರಳುವ ‘ಮಡಿವಂತ ಮುಸುಂಡಿ’ಗಳ ಹೊಡೆತಕ್ಕೆ ನರಳಿ ಬಲಿಯಾಗುತ್ತಿದ್ದ! ವಿಡಂಬನೆ, ಶೃಂಗಾರ ಲೇಪಿತ ರಸಿಕ ಮಾತುಗಳೆಂದರೆ ಬೆಚ್ಚಿ ಬೀಳುವ ಇಂತಹ ಜನರನ್ನು ಗ್ರೀಕರು ‘ಮಡಿವಂತ ಮುಸುಂಡಿಗಳು’ (Neologism Rabelais) ಎಂದು ಕರೆದರು. ಹಾಸ್ಯಪ್ರಜ್ಞೆಯಿಲ್ಲದ, ವಿನೋದ ಅರ್ಥವಾಗದ ಇವರಿಗೆ ನಗು ಅಪರಿಚಿತ.

ಕೆಲವರ ಬುದ್ಧಿವಂತಿಕೆಯನ್ನು ನಾನು ಬಹುವಾಗಿ ಮೆಚ್ಚುತ್ತೇನೆ. ಅವರ ಸಭ್ಯತೆಗೆ ತಲೆಬಾಗುತ್ತೇನೆ. ಆದರೆ, ಅಂಥವರೊಂದಿಗೆ ನಿರಾಳವಾಗಿರಲು ನನಗೆ ಸಾಧ್ಯವಾಗುವುದಿಲ್ಲ. ಅಪಾರ್ಥ ಮಾಡಿಕೊಳ್ಳಬಹುದೆಂದು, ಸಿನಿಕನೆಂದುಕೊಂಡಾರೆಂದೂ ಅವಿವೇಕದಿಂದ ಆಡಬಹುದಾದ ಮಾತುಗಳಿಗೆ ಕತ್ತರಿ ಹಾಕುತ್ತೇನೆ. ಅವರಿಗೆ ಹಾಸ್ಯದೊಂದಿಗೆ ಜೀವಿಸಲಾಗುವುದಿಲ್ಲ, ಅಷ್ಟೇ! ಅದಕ್ಕಾಗಿ ಅವರನ್ನು ದೂಷಿಸಲಾರೆ. ಬದುಕೆಲ್ಲ ಭಯ ತುಂಬಿಕೊಂಡವರಿಗೆ ಸದಾ ಆತಂಕ. ಆದ್ದರಿಂದಲೇ ಅವರ ಪ್ರತಿಕ್ರಿಯೆಯಲ್ಲಿ ಇರುಸುಮುರುಸು ಮನೆ ಮಾಡಿರುತ್ತದೆ. ವಿನೋದವು ಅವರ ಆತ್ಮಗೌರವಕ್ಕೆ ಧಕ್ಕೆ ಒದಗಿಸುತ್ತಿದೆ ಎಂದೇ ಅಂಥವರು ಬಗೆಯುತ್ತಾರೆ. ಆದರೆ, ವಿನೋದ, ಹಾಸ್ಯ, ವಿಡಂಬನೆ, ಶೃಂಗಾರ ಲೇಪಿತ ರಸಿಕ ಮಾತುಕತೆ ಗಳಿಗೆಯೊಂದರಲ್ಲಿ ಮಿಂಚಿ ಹೋಗುವಂಥದ್ದಲ್ಲ. ವಿಶಾಲವಾದ ಬದುಕಿನಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿರುವಂಥದ್ದು.

ದುರಂತ ಪರಿಕಲ್ಪನೆಯ ದುರಂತ

ಒಳಿತು-ಕೆಡುಕುಗಳ ನಡುವೆ ಸಿಕ್ಕಿ ಹಾಕಿಕೊಂಡ ಮನುಷ್ಯ ಅವುಗಳೊಂದಿಗೆ ಸೆಣೆಸುತ್ತ ಬಿಡಿಸಿಕೊಳ್ಳುವ ಬದುಕಿನ ಸಂಕಟವನ್ನು ದುರಂತದ ಮೂಲಕ ಅರಿತುಕೊಳ್ಳುವುದು ಬಹುದೊಡ್ಡ ಪರಿಕಲ್ಪನೆ. ಇದರಿಂದಾಗಿ ಮನುಷ್ಯ ನಿರಾಕರಿಸಲಾಗದ ಸತ್ಯಗಳ ಶೋಧನೆಗೆ ಸಾಪೇಕ್ಷ ನೈತಿಕ ಸಿದ್ಧಾಂತ ರೂಪುಗೊಂಡಿತು. `ವೈರಿಗಳೊಂದಿಗೂ ನ್ಯಾಯಪರತೆಯಿಂದಲೇ ನಡೆದುಕೊಳ್ಳಬೇಕೆಂಬ’ ಅಂಶವನ್ನಿದು ಸ್ಪಷ್ಟಪಡಿಸಿತು.

ಲೋಕ ಮತ್ತು ಮನುಷ್ಯನ ಬದುಕು ದೇವ-ದಾನವರಿಬ್ಬರ ನಿಯಂತ್ರಣಕ್ಕೆ ಸೇರಿದ ಅವಿನಾಶಿಯಾದ ಧಾರಣಶಕ್ತಿಯನ್ನು ಹೊಂದಿದೆ. ರಂಗಪ್ರಯೋಗಗಳಲ್ಲಿ ಈ ಬಗೆಯ ಚಮತ್ಕಾರಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಯುದ್ಧ ಮುಗಿದಾಗ ಪ್ರಾಗ್‌ ನಗರದಲ್ಲಿ ಪ್ರದರ್ಶನಗೊಂಡ ‘ಅಂತಿಗೊನೆ’ ನಾಟಕದಲ್ಲಿ ನಾನು ಇಂಥ ಪ್ರಯೋಗಶೀಲತೆ ಕಂಡೆ. ನಿರ್ದೇಶಕ ಕಥಾನಾಯಕಿಯನ್ನು ಸ್ವಾತಂತ್ರ್ಯಕ್ಕೆ ತುಡಿವ ತರುಣಿಯನ್ನಾಗಿ ಮಾಡಿದ್ದ. ಆಕೆಯ ಎದುರಾಳಿ ದುರುಳನಾದ ಫ್ಯಾಸಿಸ್ಟ್‌ನ ರೂಪವನ್ನ ಪಡೆದಿದ್ದ.

ಎರಡನೆಯ ಮಹಾಯುದ್ಧದ ಬಳಿಕ ‘ಅಂತಿಗೊನೆ’ಯನ್ನು ಈ ರೀತಿಯ ರಾಜಕೀಯ ಆಯಾಮದಲ್ಲಿ ವ್ಯಾಖ್ಯಾನಿಸುವುದು ಸಾಮಾನ್ಯವಾಗಿತ್ತು. ಹಿಟ್ಲರ್‌ ಇಡಿಯ ಯುರೋಪಿನ ಮೇಲೆ ಬಣ್ಣಿಸಲಾಗದ ಭಯಾನಕತೆಯನ್ನು ಮಾತ್ರ ಸೃಷ್ಟಿಸಿರಲಿಲ್ಲ. ಬದಲಿಗೆ, ದುರಂತದ ಕುರಿತು ಆವರೆಗಿದ್ದ ಕಲ್ಪನೆಯನ್ನೇ ಚಿಕಣಾಚೂರಾಗಿಸಿದ್ದ. ಹೀಗಾಗಿಯೇ, ನಾಜೀ಼ ಸಿದ್ಧಾಂತದ ವಿರುದ್ಧದ ಹೋರಾಟದ ಇತಿಹಾಸವನ್ನು ಲೋಕವು ಒಳಿತು-ಕೆಡಕುಗಳ ನಡುವಿನ ಸಂಘರ್ಷವೆಂದೇ ವ್ಯಾಖ್ಯಾನಿಸಲಾಯಿತು.

ಯುದ್ಧ, ನಾಗರಿಕ ಅಂತರ್ಯುದ್ಧ, ಕ್ರಾಂತಿ ಮತ್ತು ಪ್ರತಿಕ್ರಾಂತಿ, ರಾಷ್ಟ್ರೀಯ ಹೋರಾಟ, ಪ್ರತಿರೋಧ ಮತ್ತು ಅವುಗಳ ಹತ್ತಿಕ್ಕುವಿಕೆಗಳು ದುರಂತದ ಪರಿಕಲ್ಪನೆಯಿಂದಲೇ ಹೊರಹೊಮ್ಮಿ ಶಿಕ್ಷೆ ನೀಡಲು ಕಾತರಿಸಿ ಕುಳಿತ ನ್ಯಾಯಾಧೀಶರೆಡೆ ತಳ್ಳಿಸಿಕೊಂಡಂಥವು. ಇದು ಹಿಂಚಲನೆಯೆ? ದುರಂತಪೂರ್ವದ ದುಸ್ಥಿತಿಗೆ ಮಾನವಕುಲವನ್ನಿದು ನೂಕುತ್ತಿದೆಯೆ? ಹಾಗಿದ್ದರೆ, ಹಿಂಚಲಿಸುತ್ತಿರುವವರು ಯಾರು? ಅಪರಾಧಿಗಳಿಂದ ಕಿಕ್ಕಿರಿದಿರುವ ಇತಿಹಾಸವೇ ಹಿಂಚಲನೆಯಲ್ಲಿದೆಯೆ? ಅಥವ ನಾವು ಇತಿಹಾಸವನ್ನು ಅರ್ಥ ಮಾಡಿಕೊಳ್ಳುತ್ತಿರುವ ವಿಧಾನವೇ ಇದಾಗಿದೆಯೆ? ದುರಂತವು ನಮ್ಮನ್ನು ಕೈಬಿಟ್ಟಿದೆ ಮತ್ತು ಇದೇ ನಮಗೆ ಸಿಗುತ್ತಿರುವ ನಿಜವಾದ ಶಿಕ್ಷೆಯಾಗಿದೆ, ಎಂದೇ ಅನೇಕ ಸಲ ನನಗನ್ನಿಸಿದೆ.

*

* ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳಲ್ಲಿಯೂ ನಾವು ಈ ಅಂಶವನ್ನು ಗಮನಿಸಬಹುದು. ಮಹಾಭಾರತದ ಹದಿನೆಂಟು ದಿನಗಳ ಯುದ್ಧದಲ್ಲಿ ಪಾಲ್ಗೊಂಡ ಅರಸರು, ಬುಡಕಟ್ಟು ನಾಯಕರು ತಮ್ಮ ತಮ್ಮ ಮನೋಧರ್ಮಕ್ಕೆ ಅನುಗುಣಕ್ಕೆ ಪಾಂಡವರ ಇಲ್ಲವೇ ಕೌರವರ ಪಕ್ಷವನ್ನು ಸೇರಿಕೊಂಡರು. ಇದರ ಹಿಂದೆ ಯಶಸ್ವಿ ರಾಯಭಾರದ, ರಾಜನೀತಿ ತಂತ್ರವೂ ಅಡಗಿತ್ತು. ಕೃಷ್ಣ, ಪಾಂಡವರ ಪಕ್ಷ ವಹಿಸಿದ್ದರೆ, ಆತನ ಸೋದರ ಬಲರಾಮ ಕೌರವರೊಂದಿಗೆ ಮೃದು ಭಾವವನ್ನು ಹೊಂದಿದ್ದರೂ ತಟಸ್ಥನಾಗಿ ಉಳಿದ. ಅಷ್ಟೇಕೆ ಸ್ವತಃ ಕೃಷ್ಣ ತನ್ನ ಖಾಸಗಿ ಸೇನೆಯಾದ 'ನಾರಾಯಣೀಯ'ರನ್ನು ಕೌರವರಿಗೆ ಸಹಾಯ ಮಾಡಲು ಕಳುಹಿಸಿದರೆ, ತಾನು ಸ್ವಯಂ ಪಾಂಡವರು ಸಾರಥ್ಯವನ್ನು ವಹಿಸಿದ.

ಗಾಂಧಾರಿಯ ದಾಸಿಯಾಗಿದ್ದ ಸುಗದಳಿಗೆ ಧೃತರಾಷ್ಟ್ರನ ಮೂಲಕ ಹುಟ್ಟಿದ ಯುಯುತ್ಸು ಯುದ್ಧದಲ್ಲಿ ಪಾಂಡವರೊಂದಿಗೆ ಸೇರಿಕೊಂಡ.

ರಾಮಾಯಣದಲ್ಲಿಯೂ ವಾನರರು, ರಾವಣನ ಸೋದರ ವಿಭಿಷಣ ವಹಿಸಿದ ಪಕ್ಷವನ್ನು ನಾವೆಲ್ಲ ಬಲ್ಲೆವು.

** ಯಶವಂತ ಚಿತ್ತಾಲರ `ಶಿಕಾರಿ' ಕಾದಂಬರಿ ವ್ಯೂಹದಲ್ಲಿ ಸಿಲುಕಿದ ಆಧುನಿಕ ಮನುಷ್ಯನ ತಲ್ಲಣಗಳನ್ನು ಹೇಳುತ್ತದೆ. ಅಂತೆಯೇ, ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕಥೆ' ಅಧಿಕಾರಶಾಹಿಯ ಗೊಂಡಾರಣ್ಯದಲ್ಲಿ ವ್ಯಕ್ತಿಯೊಬ್ಬನ ಘೋರ ಹೋರಾಟವನ್ನು ಅತ್ಯಂತ ಪರಿಣಾಮಕಾರಿ ತೆರೆದಿಡುತ್ತದೆ. ಆ ಅರ್ಥದಲ್ಲಿ ಇವೆರಡು ಕೃತಿಗಳನ್ನು `ಜಾಯಿಸ್‌' ಮತ್ತು `ಕಾಫ್ಕಾಯಿಸ್‌'ಎಂದು ಕರೆಯಬಹುದೇನೋ.