ಕನ್ನಡ ಶಾಲಾ ಕಾಲೇಜುಗಳನ್ನು ಮುಚ್ಚಬೇಡಿ
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಬೋಧನೆ ಮಾಡಲು ಸಂಬಂಧಪಟ್ಟ ವಿಷಯಗಳಿಗೆ ಶಿಕ್ಷಕರ ನೇಮಕಾತಿ ಕಳೆದ 10 ವರ್ಷಗಳಿಂದ ಆಗಿಲ್ಲ. ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಒಂದು ತರಗತಿಯಲ್ಲಿ ಅಂದರೆ ಒಂದು ಸೆಕ್ಷನ್‌ನಲ್ಲಿ ಕಡ್ಡಾಯವಾಗಿ 25 ಮಕ್ಕಳು ಇರಲೇ ಬೇಕೆಂಬ ಮರಣ ಶಾಸನವನ್ನು 1983 ರಲ್ಲಿ ಮಾಡಿದ್ದರು.ಅಲ್ಲಿಂದ ಆ ಸಂಖ್ಯೆ ಬದಲಾವಣೆ ಆಗಿಲ್ಲ. ಎಲ್ಲಾ ಅಧಿಕಾರಿಗಳು ಈ 25 ಮಕ್ಕಳ ಸಂಖ್ಯೆಯನ್ನು ಒಂದು ವಜ್ರಾಯುಧವಾಗಿ ಮಾಡಿಕೊಂಡು ಎಲ್ಲಾ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಆ ಶಿಕ್ಷಕರಿಗೆ ವೇತನ ತಡೆಹಿಡಿಯಲು ನೋಟೀಸ್ ಮೇಲೆ ನೋಟೀಸ್ ಕೊಡುತ್ತಾ ಇದ್ದಾರೆ. ನಮ್ಮ ಶಿಕ್ಷಣ ಇಲಾಖೆಯು ನೋಟೀಸ್ ಕೊಡುವುದರಲ್ಲಿ ಬಹಳ ಮುತುವರ್ಜಿ ವಹಿಸುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಈಗಿರುವ ಒಟ್ಟು ಮಕ್ಕಳ ಸಂಖ್ಯೆಯಲ್ಲಿ ಶೇ. 27ರಷ್ಟು ಮಕ್ಕಳು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿವೆ. ಶೇ. 23ರಷ್ಟು ಮಕ್ಕಳು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿವೆ. 01 ರಿಂದ 10 ನೇ ತರಗತಿವರೆಗೆ ಇವೇ ಹೆಚ್ಚಾಗಿ ಗ್ರಾಮಾಂತರ ಪ್ರದೇಶದಲ್ಲಿವೆ. ಕಡಿಮೆ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿವೆ.ಇನ್ನುಳಿದ ಶೇ.50 ರಷ್ಟು ಮಕ್ಕಳು ಖಾಸಗಿ ಇಂಗ್ಲೀಷ್ ಮಾಧ್ಯಮದ ಅನುದಾನರಹಿತ ಶಾಲೆಗಳಲ್ಲಿವೆ.
ವರ್ತಮಾನ
ಎಂ. ಬಸವಯ್ಯ
ಕನ್ನಡ ಭಾಷೆಗೆ ಎರಡು ಸಾವಿರಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಇದು ಒಂದು ಅಗ್ರಮಾನ್ಯ ದ್ರಾವಿಢ ಭಾಷೆಯಾಗಿದೆ.ನಮ್ಮ ಪೂರ್ವಿಕರು ಕನ್ನಡವನ್ನು ಸಮೃದ್ದಿಗೊಳಿಸಿದ್ದಾರೆ ಬ್ರಿಟೀಷರೂ ಕೂಡ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದರು ಈಗಲೂ ಕನ್ನಡ ಆಡಳಿತ ಭಾಷೆಯಾಗಿದೆ. ಮಕ್ಕಳು ಮಾತೃ ಭಾಷೆ(ಕನ್ನಡದಲ್ಲಿ)ಶಿಕ್ಷಣ ಪಡೆದು ಮೊದಲು ಸ್ವದೇಶೀಯರಾಗಬೇಕು ಎಂಬುದು ಎಲ್ಲಾ ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಗಾಂಧೀಜಿಯವರು ಮಾತೃಭಾಷೆ ಶಿಕ್ಷಣವನ್ನು ಒಂದು ಪ್ರಮುಖ ರಚನಾತ್ಮಕ ಕಾರ್ಯಕ್ರಮವನ್ನಾಗಿಸಿದ್ದಾರೆ.ಅನ್ಯ ಭಾಷೆಗಳಲ್ಲಿ ಮಕ್ಕಳು ಕಲಿಯುವುದಕ್ಕೂ ಮಾತೃ ಭಾಷೆಯಲ್ಲಿ ಕಲಿಯುವುದಕ್ಕೂ ಬಹಳ ವ್ಯತ್ಯಾಸವಿದೆ,ಎಂಬುದನ್ನು ನಾವು ಗಮನಿಸಬಹುದು ಕಳೆದ ಶತಮಾನಗಳಲ್ಲಿ ಕನ್ನಡದಲ್ಲಿದ್ದ ಸಾಹಿತಿಗಳು, ಕವಿಗಳು, ದಾರ್ಶನಿಕರು, ವಿಚಾರವಂತರು, ದೇಶಪ್ರೇಮಿಗಳು, ಚಿಂತಕರು, ಕನ್ನಡದಲ್ಲಿ ಒಳ್ಳೆಯ ವೈಚಾರಿಕತೆಯನ್ನು ಬೆಳಸಿದ್ದಾರೆ. ಕನ್ನಡದ ಪ್ರೌಢಿಮೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಅವರೆಲ್ಲರೂ ಕನ್ನಡ ಶಾಲೆಯಲ್ಲಿ ಓದಿದವರೇ ಆಗಿದ್ದರು.ಸರ್.ಎಂ.ವಿಶ್ವೇಶ್ವರಯ್ಯ,ಸಿ.ವಿ.ರಾಮನ್, ರಾಜರಾಮಣ್ಣ,ಸಿ.ಎನ್.ಆರ್.ರಾವ್ ಮುಂತಾದ ವಿಜ್ಞಾನಿಗಳು ಕನ್ನಡ ಶಾಲೆಯಲ್ಲಿ ಓದಿದವರಾಗಿದ್ದಾರೆ. ರಾಷ್ಟçಕವಿ ಕುವೆಂಪುರವರು ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತರ ಶಿಕ್ಷಣದವರೆಗೂ ಕನ್ನಡ ಮಾಧ್ಯಮದಲ್ಲೇ ಆಗಬೇಕೆಂಬ ದೃಢ ನಿರ್ಧಾರದಿಂದ ಸಾಹಿತ್ಯ, ವಿಜ್ಞಾನ, ಇತಿಹಾಸ, ಅರ್ಥಶಾಸ್ತç, ಸಮಾಜಶಾಸ್ತç ಮುಂತಾದ ಪ್ರಮುಖ ವಿಷಯವನ್ನು ಕನ್ನಡದಲ್ಲೇ ಬೋಧನೆ ಮಾಡುವಂತೆ ಮಾಡಿದರು ಈಗಲೂ ವಿಶ್ವವಿದ್ಯಾನಿಲಯದಲ್ಲಿ ಎಲ್ಲಾ ವಿಷಯಗಳನ್ನು ಕನ್ನಡದಲ್ಲೇ ಬೋಧನೆ ಮಾಡುತ್ತಿದ್ದಾರೆ.ಆದರೆ ಈಗ ಪರದೇಶಿ ವ್ಯಾಮೋಹಕ್ಕೆ ಒಳಗಾದ ಪೋಷಕರು ಮತ್ತು ಮಕ್ಕಳು ಪ್ರೈಮರಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಬೇಕೆಂಬ ಆಸೆಯಿಂದ ಶಿಶುವಿಹಾರದಿಂದಲೇ ಇಂಗ್ಲೀಷ್‌ನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುತ್ತಿದ್ದಾರೆ.ಶಾಲಾ ವಾತಾವರಣವೇ ಬೇರೆ ಸಮಾಜದ ವಾತಾವರಣವೇ ಬೇರೆಯಾಗಿದೆ.ಆ ಮಕ್ಕಳಲ್ಲಿ ನಿಜ ಜೀವನದಲ್ಲಿ ಅಂತಹ ಪ್ರತಿಭಾನ್ವಿತರಾಗಲು ಸಾಧ್ಯವಿಲ. ಎಲ್ಲಾ ಶಿಕ್ಷಣ ತಜ್ಞರು ಮಕ್ಕಳಿಗೆ ಮಾತೃಭಾಷೆ ಶಿಕ್ಷಣವೇ ಶ್ರೇಷ್ಠವೆಂದು ಅಭಿಪ್ರಾಯ ಪಟ್ಟಿದ್ದಾರೆ.ಇದನ್ನೆಲ್ಲಾ ಗಮನಿಸಿದ ಹಿಂದಿನ ಸರ್ಕಾರವೂ ಕರ್ನಾಟಕದಲ್ಲಿ ಸುಮಾರು 8000 ಕನ್ನಡ ಮಾಧ್ಯಮದ ಶಾಲೆಗಳನ್ನು ತೆರೆದು ಮಕ್ಕಳಿಗೆ ಒಳ್ಳೆಯ ಪರಿಣಾಮಕಾರಿಯಾದ ಶಿಕ್ಷಣವನ್ನು ಕೊಟ್ಟಿದ್ದಾರೆ.ಅದರ ಫಲವೇ ಕನ್ನಡ ನಾಡಿನಲ್ಲಿ ಸುಪ್ರಸಿದ್ದ ಸಾಹಿತಿಗಳು,ವಿಚಾರವಂತರು ಬಂದು ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.ಈಗ ಕೈಗಾರಿಕಾ ಕ್ರಾಂತಿಯಿಂದ ಇಂಗ್ಲೀಷ್ ಮಾಧ್ಯಮದ ಹುಚ್ಚು ಹೆಚ್ಚಾಗುತ್ತಾ ಬಂದಿದೆ. ಶಿಕ್ಷಣ ಪಡೆದ ನೂರು ಮಕ್ಕಳಲ್ಲಿ 5% ವೈದ್ಯರಾಗಬಹುದು,5% ಇಂಜಿನೀಯರ್ ಆಗಬಹುದು, 1% ವಿಜ್ಞಾನಿಯಾಗಬಹುದು,ಉಳಿದವರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಹಾಗೂ ಕೆಲಸದಲ್ಲಿ ಕನ್ನಡದಲ್ಲಿ ವ್ಯವಹರಿಸಬೇಕಾಗಿದೆ. ಏನೇ ಆಗಲಿ 1 ರಿಂದ 10ನೇ ತರಗತಿವರೆಗೂ ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕೆಂದು ಎಲ್ಲಾ ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಕರ್ನಾಟಕದಲ್ಲಿ ಇತ್ತೀಚೆಗೆ ಮಕ್ಕಳ ಜನನ ಪ್ರಮಾಣ ಬಹಳ ಕಡಿಮೆಯಾಗುತ್ತಿದೆ.ಹಿಂದೆ ಒಂದು ಮನೆಯಲ್ಲಿ 3-4-5 ಮಕ್ಕಳಿರುತ್ತಿದ್ದರು ಈಗ ಅದು ಒಂದು ಅಥವಾ ಎರಡಕ್ಕೆ ಸೀಮಿತವಾಗಿದೆ.ಇದನ್ನು ಪ್ರಮುಖ ಅಂಶವನ್ನಾಗಿ ಗಮನದಲ್ಲಿಟ್ಟುಕೊಂಡು ನಾವು ಕನ್ನಡ ಮಾಧ್ಯಮ ಶಾಲೆ ಬಗ್ಗೆ ವಿಚಾರ ಮಾಡಬೇಕಾಗಿದೆ.ಈಗ ನಾವು ವಾಸ್ತವಿಕ ವಿಚಾರಕ್ಕೆ ಬರೋಣ.
ಕರ್ನಾಟಕ ರಾಜ್ಯದಲ್ಲಿ ಈಗಿರುವ ಒಟ್ಟು ಮಕ್ಕಳ ಸಂಖ್ಯೆಯಲ್ಲಿ ಶೇ. 27ರಷ್ಟು ಮಕ್ಕಳು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿವೆ. ಶೇ. 23ರಷ್ಟು ಮಕ್ಕಳು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿವೆ. 01 ರಿಂದ 10 ನೇ ತರಗತಿವರೆಗೆ ಇವೇ ಹೆಚ್ಚಾಗಿ ಗ್ರಾಮಾಂತರ ಪ್ರದೇಶದಲ್ಲಿವೆ. ಕಡಿಮೆ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿವೆ.ಇನ್ನುಳಿದ ಶೇ.50 ರಷ್ಟು ಮಕ್ಕಳು ಖಾಸಗಿ ಇಂಗ್ಲೀಷ್ ಮಾಧ್ಯಮದ ಅನುದಾನರಹಿತ ಶಾಲೆಗಳಲ್ಲಿವೆ. ಈ ಶಾಲೆಗಳ ಬಗ್ಗೆ ಸರ್ಕಾರ ಯಾವುದೇ ಚಿಂತೆ ಮಾಡಬೇಕಾಗಿಲ್ಲ.ಅವರು ಅನುದಾನವನ್ನೂ ಕೇಳಲ್ಲ, ಸರ್ಕಾರದಿಂದ ಅನುಮತಿ ಮತ್ತು ಮಾನ್ಯತೆ ಮಾತ್ರ ಕೇಳುತ್ತಾರೆ.ಇನ್ನು ಅನುದಾನಿತ ಮತ್ತು ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳಿಗೆ ಸರ್ಕಾರದಿಂದ ಶಿಕ್ಷಕರನ್ನು ನೇಮಿಸಲು ಪೋಷಕರು ಮತ್ತು ಸಾರ್ವಜನಿಕರು ಅದರಲ್ಲೂ ಗ್ರಾಮಾಂತರ ಪ್ರದೇಶದವರು ಹೆಚ್ಚು ಒತ್ತಾಯ ಮಾಡುತ್ತಿದ್ದಾರೆ.
ಈ ವರ್ಷ 50 ನೇ ಕರ್ನಾಟಕ ರಾಜ್ಯೋತ್ಸವಕ್ಕಾಗಿ ಸರ್ಕಾರ ಬಹಳಷ್ಟು ದುಡ್ಡನ್ನು ಖರ್ಚು ಮಾಡುತ್ತಿದೆ. ಆದರೆ ಪೂರ್ಣ ಪ್ರಮಾಣದ ಶಿಕ್ಷಕರನ್ನು ಈ ಶಾಲೆಗಳಿಗೆ ನೇಮಿಸಲು ಸರ್ಕಾರಕ್ಕೆ ಆಗುತ್ತಿಲ್ಲ.ಕೇಳಿದರೆ ನಮ್ಮಲ್ಲಿ ಹಣ ಇಲ್ಲ ಎಂದು ಅಧಿಕಾರಿಗಳು ಒಂದೇ ಮಾತಿನಲ್ಲಿ ಕೈಚೆಲ್ಲಿ ಬಿಡುತ್ತಾರೆ.ಇನ್ನು ಶಿಕ್ಷಣ ಮಂತ್ರಿಗಳು ಹಾಗೂ ಮುಖ್ಯ ಮಂತ್ರಿಗಳನ್ನು ಕೇಳಿದರೆ ಸದ್ಯಕ್ಕೆ ತಕ್ಷಣ ಕನ್ನಡ ಮಾಧ್ಯಮ ಶಾಲೆಗಳಿಗೆ (ಸರ್ಕಾರಿ ಮತ್ತು ಅನುದಾನಿತ) ಶಿಕ್ಷಕರುಗಳನ್ನು ಖಾಯಂ ಆಗಿ ನೇಮಿಸಲು ಹಣಕಾಸಿನ ತೊಂದರೆ ಇದೆ ಎಂದು ಬಹಳ ಸಮಾಧಾನವಾಗಿ ಹೇಳುತ್ತಾರೆ. ಈ ಶಾಲೆಗಳಿಗೆ ಖಾಯಂ ಶಿಕ್ಷಕರಿಲ್ಲದಿದ್ದರೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಅಂದರೆ ಮುಂದಿನ ತಲೆಮಾರಿಗೆ ಶಾಶ್ವತವಾಗಿ ತುಂಬಲಾರದ ಅನ್ಯಾಯ ಮತ್ತು ನಷ್ಟವಾಗುತ್ತದೆ.ಈಗಾಗಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಅಧಿಕಾರಿಗಳು ಹೇಳುವಂತೆ ಸ್ಕಾçಪ್ ಅಂದರೆ ನಿಷ್ಪçಯೋಜಕ ಮಕ್ಕಳು ಎಲ್ಲರೂ ದಡ್ಡರೆ. ಬುದ್ದಿವಂತರು, ಶ್ರೀಮಂತರು,ಸರ್ಕಾರಿ ಅಧಿಕಾರಿಗಳ ಮಕ್ಕಳು ಯಾರೂ ಕನ್ನಡ ಶಾಲೆಗೆ ಬರುವುದಿಲ್ಲ.ಕನ್ನಡ ಮಾಧ್ಯಮ ಮಕ್ಕಳಿಗೆ ಕನ್ನಡವೂ ಬರುವುದಿಲ್ಲ.ಇಂಗ್ಲೀಷ್ ಬರುವುದಿಲ್ಲ,ಗಣಿತ,ವಿಜ್ಞಾನವೂ ತಿಳಿದಿಲ್ಲ.ಕಾರಣ ಏನೆಂದರೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಬೋಧನೆ ಮಾಡಲು ಸಂಬಂಧಪಟ್ಟ ವಿಷಯಗಳಿಗೆ ಶಿಕ್ಷಕರ ನೇಮಕಾತಿ ಕಳೆದ 10 ವರ್ಷಗಳಿಂದ ಆಗಿಲ್ಲ.ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಒಂದು ತರಗತಿಯಲ್ಲಿ ಅಂದರೆ ಒಂದು ಸೆಕ್ಷನ್‌ನಲ್ಲಿ ಕಡ್ಡಾಯವಾಗಿ 25 ಮಕ್ಕಳು ಇರಲೇ ಬೇಕೆಂಬ ಮರಣ ಶಾಸನವನ್ನು 1983 ರಲ್ಲಿ ಮಾಡಿದ್ದರು.ಅಲ್ಲಿಂದ ಆ ಸಂಖ್ಯೆ ಬದಲಾವಣೆ ಆಗಿಲ್ಲ. ಎಲ್ಲಾ ಅಧಿಕಾರಿಗಳು ಈ 25 ಮಕ್ಕಳ ಸಂಖ್ಯೆಯನ್ನು ಒಂದು ವಜ್ರಾಯುಧವಾಗಿ ಮಾಡಿಕೊಂಡು ಎಲ್ಲಾ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಆ ಶಿಕ್ಷಕರಿಗೆ ವೇತನ ತಡೆಹಿಡಿಯಲು ನೋಟೀಸ್ ಮೇಲೆ ನೋಟೀಸ್ ಕೊಡುತ್ತಾ ಇದ್ದಾರೆ.ನಮ್ಮ ಶಿಕ್ಷಣ ಇಲಾಖೆಯು ನೋಟೀಸ್ ಕೊಡುವುದರಲ್ಲಿ ಬಹಳ ಮುತುವರ್ಜಿ ವಹಿಸುತ್ತಿದೆ.
ಇದರ ಪರಿಣಾಮ ಮುಂದೆ ಕನ್ನಡದ ಗತಿ ಏನಾಗಬಹುದು ಎಂಬುದನ್ನು ನಮ್ಮ ಸಾಹಿತಿಗಳು ಸಾಹಿತ್ಯ ಪರಿಷತ್ತಿನವರು ಕನ್ನಡ ಸಂಘಗಳು ಹಾಗೂ ಸಾರ್ವಜನಿಕರು ಯೋಚನೆ ಮಾಡುವಷ್ಟು ಸೌಜನ್ಯವನ್ನು ಕೂಡ ತೋರುತ್ತಿಲ್ಲ.
ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲು ರೌಲೆಟ್ ಆಕ್ಟ್ (ಬ್ರಿಟೀಷ್ ಕಾಲದ ನಿಯಮ)ದಂತಹ ಎಕಾನಮಿ ಆರ್ಡರ್‌ನ್ನು ಮುಖ್ಯ ಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿಗಳು ಜಾರಿ ಮಾಡಿ ಬಿಡುತ್ತಾರೆ.ಈಗಲೂ ಕೂಡ ಈ ಕರಾಳ ಶಾಸನವನ್ನು ಜಾರಿ ಮಾಡುತ್ತಲೇ ಇದ್ದಾರೆ.ಗ್ರಾಮಾಂತರ ಪ್ರದೇಶದ ಶ್ರೀಮಂತರ ಮಕ್ಕಳು ಖಾಸಗೀ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ತಮ್ಮ ಊರಿಂದ ಹೋಗಲು ಬಸ್ಸುಗಳನ್ನು ಹತ್ತುತ್ತಾರೆ.ಬಡವರ ಮಕ್ಕಳು ಊರಲ್ಲಿರುವ ಪುರಾತನ ಕನ್ನಡ ಶಾಲೆಗಳಿಗೆ ಅಥವಾ ಅನುದಾನಿತ ಕನ್ನಡ ಶಾಲೆಗೆ ಬಹಳ ನಿರಾಸಕ್ತಿಯಿಂದ ಹೋಗುತ್ತಾರೆ.ಆ ಶಾಲೆಗಳಲ್ಲಿ ಯಾವುದೇ ಜೀವ ಕಳೆ ಇಲ್ಲ,ಅದನ್ನು ತುಂಬಲು ಅಲ್ಲಿ ಏಕೋಪಾಧ್ಯಾಯರೇ ಇದ್ದಾರೆ.ಪಾಪ ಅವರೇನು ಮಾಡಬೇಕು? ಶಿಕ್ಷಣಾಧಿಕಾರಿಗಳಿಗೆ ಮೀಟಿಂಗ್ ಮಾಡುವುದರಲ್ಲೇ ಸಮಯ ಮುಗಿದು ಹೋಗುತ್ತಿದೆ,ನೋಟೀಸ್ ಕೊಡುವ ಕೆಲಸವನ್ನು ಶಿಕ್ಷಣಾಧಿಕಾರಿಗಳು ಬಹಳ ಮುತುವರ್ಜಿಯಿಂದ ಮಾಡುತ್ತಿದ್ದಾರೆ.ಇವರಿಗೆ ಕಾನೂನನ್ನು ಅಕ್ಷರಶಃ ಪಾಲನೆ ಮಾಡುವುದು ಅಷ್ಟೇ ಕೆಲಸ,ಆ ಕಾನೂನಿನಲ್ಲಿರುವ ಸ್ಪಿರಿಟ್‌ನ್ನು ನೋಡುವ ಗೋಜಿಗೇ ಹೋಗುವುದಿಲ್ಲ.ಶಿಕ್ಷಣ ಇಲಾಖೆಯಲ್ಲಿರುವ ಐ.ಎ.ಎಸ್ ಅಧಿಕಾರಿಗಳಂತೂ ತಮ್ಮ ಯಾವುದೇ ವಿವೇಚನೆಯನ್ನೂ ಉಪಯೋಗಿಸದೆ ಗುಮಾಸ್ತರುಗಳು ಹೇಳಿದ್ದನ್ನೇ ರಾಮಬಾಣವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.ಇದರಿಂದ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿರುವ ಕೆಳ ಮದ್ಯಮ ಮತ್ತು ದಲಿತವರ್ಗ ಹಾಗೂ ದುರ್ಬಲ ವರ್ಗದ ಬಡ ಕುಟುಂಬಗಳಿAದ ಶಿಕ್ಷಣಕ್ಕಾಗಿ ಕನ್ನಡ ಮಾದ್ಯಮ ಶಾಲೆಗಳಿಗೆ ಬಂದ ಮಕ್ಕಳಿಗೆ ತುಂಬಲಾರದಷ್ಟು ನಷ್ಟವಾಗುತ್ತಿದೆ.
ನಾವೆಲ್ಲಾ ಕನ್ನಡಾಭಿಮಾನಿಗಳು ನಮ್ಮ ಕೈಯಲ್ಲಿ ಕನ್ನಡ ದ್ವಜ ಇದೆ.ನಾವು ಜೈ ಭುವನೇಶ್ವರಿ ಎಂದು ಹೇಳುತ್ತಾ ಒಂದು ದೊಡ್ಡ ದಂಡನ್ನೇ ಕಟ್ಟಿಕೊಂಡು ಕನ್ನಡದ ಹೆಸರಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳುತ್ತೇವೆ.ಪಾಪ ಆ ವೀರಾವೇಶದಲ್ಲಿ ದಲಿತ ಮತ್ತು ದುರ್ಬಲ ವರ್ಗದ ಕುಟುಂಬಗಳಿಂದ ವ್ಯಾಸಂಗ ಮಾಡುವ ಮಕ್ಕಳ ಕ್ಷೇಮ ಅವರಿಗೆ ಬೇಕಾಗಿಲ್ಲ.
ಇನ್ನು ಸಾಹಿತ್ಯ ಪರಿಷತ್‌ನವರು ವಿದ್ವತ್‌ನ್ನು ಹಾಗೂ ವಿದ್ವಾಂಸರನ್ನೂ ವೈಭವೀಕರಿಸುವಲ್ಲಿ ಕಾಲಹರಣ ಮಾಡುತ್ತಿದ್ದಾರೆ.ಕನ್ನಡದ ಜಾತ್ರೆ ಮಾಡಲು ಕೋಟ್ಯಾಂತರ ರೂಪಾಯಿಯನ್ನು ಸರ್ಕಾರದಿಂದ ಪಡೆದು ವಿದ್ವತ್ ಮತ್ತು ವಿದ್ವಾಂಸರನ್ನು ವೈಭವೀಕರಿಸುತ್ತಿದ್ದಾರೆ.ಈಗಾಗಲೇ ಕನ್ನಡದ ಶಕ್ತಿ ಯುವ ಜನರಲ್ಲಿ ಬಹಳ ಕುಂದಿ ಹೋಗಿದೆ.ಅವರಿಗೆ ಕನ್ನಡದಲ್ಲಿ ಏನೂ ಬರೆಯಲು ಬರುತ್ತಿಲ್ಲ ಕನ್ನಡದ ವೃತ್ತ ಪತ್ರಿಕೆಯನ್ನು ಪುಸ್ತಗಳನ್ನು ಓದಲು ಅವರಿಗೆ ಮನಸ್ಸೇ ಇಲ್ಲ. ಕೈಯಲ್ಲಿರುವ ಮೊಬೈಲ್ ಸಾಕು ದೇವರೇ ಗತಿ ಇನ್ನೆಷ್ಟು ಹೇಳುವುದು? ಸರ್ಕಾರ ವಿದಾನಸೌಧದ ಮುಂದೆ ಕೋಟಿ ಕೋಟಿ ಖರ್ಚು ಮಾಡಿ ಭುವನೇಶ್ವರಿ ವಿಗ್ರಹವನ್ನು ಸ್ಥಾಪಿಸುತ್ತಿದ್ದಾರೆ ಒಳ್ಳೆಯದು.ಆ ಭುವನೇಶ್ವರಿ ದುರ್ಬಲ ವರ್ಗದ ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಬಲಿಷ್ಟಗೊಳಿಸುವಂತೆ ಆಶೀರ್ವದಿಸಲಿ. ಸರ್ಕಾರಕ್ಕೆ ಕನ್ನಡ ಮಾಧ್ಯಮದ ಮಕ್ಕಳಿಗೆ ಉಚಿತವಾಗಿ ನೀಡುವಂತಹ ಯಾವುದೇ ಯೋಜನೆಗಳು ಇಲ್ಲ.ಸರ್ಕಾರ ಆ ಬಗ್ಗೆ ತಲೆಕಡಿಸಿಕೊಳ್ಳುವುದಿಲ್ಲ.ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರತಿ ತರಗತಿಯಲ್ಲಿ 25 ಮಕ್ಕಳಿರಬೇಕೆಂದು 1983 ರಲ್ಲಿ ಸರ್ಕಾರದವರು ನಿಯಮ ಮಾಡಿದರು.ಆಗ ಒಂದು ಮನೆಯಲ್ಲಿ 3 ರಿಂದ 5, 6 ಮಕ್ಕಳಿರುತ್ತಿದ್ದರು.ಆ ಮಕ್ಕಳಿಗಾಗಲೀ ಆ ಪೋಷಕರಿಗಾಗಲೀ ಯಾವುದೇ ಇಂಗ್ಲೀಷ್ ವ್ಯಾಮೋಹ ಇರಲಿಲ್ಲ.ಅದು ಆ ಧರ್ಮದ ಕಾಲ,ಈಗ ಪೋಷಕರಿಗಾಗಲೀ ಮಕ್ಕಳಿಗಾಗಲೀ ಕನ್ನಢಾಭಿಮಾನ ಇಲ್ಲ.
ಎಲ್ಲರೂ ಆಂಗ್ಲ ಮಾಧ್ಯಮದಲ್ಲಿ ಕಲಿಯಬೇಕು.ಇಂಗ್ಲೀಷ್ ಕಲಿಯದಿದ್ದರೆ ಕರ್ನಾಟಕದಲ್ಲಿರುವ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಮನಃಸ್ಥಿತಿ ಪೋಷಕರಲ್ಲಿ ಬಲವಾಗಿ ಬಂದುಬಿಟ್ಟಿದೆ.ಇದರ ಲಾಭವನ್ನು ಅರಿತ ಶೇ 50 ರಷ್ಟು ಮಕ್ಕಳನ್ನು ಹೊಂದಿರುವ ಇಂಗ್ಲೀಷ್ ಮಾಧ್ಯಮದ ಮಾಲೀಕರು ಆ ಮಕ್ಕಳನ್ನು ಪೋಷಕರ ಮನೆ ಬಾಗಿಲಿನಿಂದ ಶಾಲೆಗೆ ಕರೆದು ತರಲು, ಒಂದೊಂದು ಹಳ್ಳಿಗೆ 2 ರಿಂದ 4 ಬಸ್‌ಗಳನ್ನು ಕಳುಹಿಸುತ್ತಿದ್ದಾರೆ. ಶ್ರೀಮಂತರ ಮಕ್ಕಳು ಠೀವಿಯಿಂದ ಬಸ್ ಹತ್ತುತ್ತಿದ್ದಾರೆ. ಬಡವರ ಮಕ್ಕಳು ನಮಗೂ ಆ ಅನುಕೂಲ ಇಲ್ಲವೇ,ಎಂದು ನೊಂದು ಕೊಳ್ಳುತ್ತಿದ್ದಾರೆ.ಇದೆಲ್ಲಾ ವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆ ಅಲ್ಲವೇ?ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ಸಮಾನ ಅವಕಾಶ ಮತ್ತು ಸಮಾನ ಸೌಕಾರ್ಯನುಕೂಲ ಭಾವನೆ ಬರುವಂತೆ ಮಾಡಬೇಕಾದ ಆದ್ಯ ಕರ್ತವ್ಯ ಸರ್ಕಾರದ್ದು.ಅದನ್ನು ಇತ್ತೀಚೆಗೆ ಜ್ಞಾನೋದಯವನ್ನು ಪಡೆದ ಘನ ಸರ್ಕಾರ ಪಬ್ಲಿಕ್ ಶಾಲೆಗಳನ್ನು ಕೋಟ್ಯಾಂತರ ರೂಪಾಯಿ ಖರ್ಚುಮಾಡಿ,ಕಟ್ಟಡ.ಪೀಠೋಪಕರಣ ಮತ್ತು ಶಿಕ್ಷಕರನ್ನು ನೇಮಿಸಿ ಈ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಮುಕ್ತ ಅವಕಾಶವನ್ನು ಕಲ್ಪಿಸಿದೆ.ಎಂದು ಬನ್ನಿಬನ್ನಿ ಎಂದು ಕರೆದರೆ ಈಗಾಗಲೇ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಸರ್ಕಾರದ ಬಗ್ಗೆ ಯಾವುದೇ ಭರವಸೆ ಇಲ್ಲದಿರುವುದರಿಂದ ಆ ಮಕ್ಕಳು ಖಾಸಗೀ ಶಿಕ್ಷಣ ಮಾಲೀಕರು ನಡೆಸುವ ಶಾಲೆಗಳಿಗೆ ಹೋಗುತ್ತಿದ್ದು, ಪಬ್ಲಿಕ್ ಶಾಲೆಗಳತ್ತ ತಿರುಗಿಯೂ ನೋಡದೆ ಹೋಗುತ್ತಿದ್ದಾರೆ. ಕಾರಣ ಸರ್ಕಾರ ಶಿಕ್ಷಣದ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಮತ್ತು ಭರವಸೆಯನ್ನು ಕಳೆದುಕೊಂಡಿದೆ.
ಎಲ್ಲಾ ಮಕ್ಕಳೂ ಸರ್ಕಾರಿ ಶಾಲೆಗಳಿಗೆ ಬನ್ನಿ ಎಂದು ಹೇಳುವ ಮಹಾಶಯರ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ ಇದರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಕೆಲವು ಜನ ಟೀಕೆ ಮಾಡುವುದೇ ಅವರ ಕಸುಬಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇನ್ನು ಶಿಕ್ಷಣ ಇಲಾಖೆಯಲ್ಲಿ ಅನುದಾನಿತ ಕನ್ನಡ ಮಾದ್ಯಮ ಶಾಲೆಗಳು ಮತ್ತು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಎಂಬ 2 ವರ್ಗಗಳಿವೆ.ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಯಾವುದೇ ನಿಯಮ ಅನ್ವಯಿಸುವುದಿಲ್ಲ.ಕಟ್ಟಡ ಚಿಂತಾಜನಕ ಸ್ಥಿತಿಯಲ್ಲಿದ್ದರೂ ಶಾಲೆಯಲ್ಲಿ ಶಿಕ್ಷಕರು ಇರಲಿ ಬಿಡಲಿ ಅವುಗಳನ್ನು ಮುಚ್ಚುವ ಗೋಜಿಗೇ ಹೋಗುವುದಿಲ್ಲ.ಆದರೆ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರತಿ ವಿಭಾಗದಲ್ಲಿ 25 ಮಕ್ಕಳು ಇರಲೇ ಬೇಕು ಅಕಸ್ಮಾತ್ 24,23,22,21,20 ಇತ್ಯಾದಿ ಇದ್ದಲ್ಲಿ ಆ ಶಾಲೆಯನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಬಿಡುತ್ತಾರೆ.ಇದು ಸರ್ಕಾರ ಅನುಸರಿಸುತ್ತಿರುವ ಒಂದು ಕರಾಳ ನಿಯಮ ಆಗಿದೆ.25 ಕ್ಕಿಂತ ಕಡಿಮೆ ಮಕ್ಕಳಿದ್ದರೆ ಆ ಶಾಲೆಯನ್ನು ಮುಚ್ಚಿದರೆ ಅದರಲ್ಲಿ ಓದುತ್ತಿರುವಂತಹ ಇನ್ನುಳಿದ ಮಕ್ಕಳ ಭವಿಷ್ಯವೇನು?ಎಂಬ ಸಾಮಾನ್ಯ ಪರಿಜ್ಞಾನವೇ ಇಲ್ಲ.ಇದೇ ರೀತಿ ನೂರಾರು ಶಾಲೆಗಳನ್ನು ಮುಚ್ಚಿದ್ದಾರೆ.ಕೆಲವು ಅನುದಾನಿತ ಶಾಲೆಗಳಿಗೆ ಒಳ್ಳೆ ಕಟ್ಟಡ ಇದೆ ಕೆಲವು ಶಿಕ್ಷಕರೂ ಇದ್ದಾರೆ.ಕೆಲವರು ನಿವೃತ್ತಿ ಆಗಿದ್ದಾರೆ.ಆ ಜಾಗಕ್ಕೆ ಬೇರೆಯವರನ್ನು ತುಂಬಲು ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ಕೊಡುವುದಿಲ್ಲ.ಇದು 1 ಅಥವಾ 2 ವರ್ಷದ ಕಥೆಯಲ್ಲ ಕಳೆದ 10 ವರ್ಷದಿಂದ ಈ ಪರಿಸ್ಥಿತಿ ಕರ್ನಾಟಕಲ್ಲಿದೆ.ದೀನ,ದುರ್ಬಲ ಹಾಗೂ ಬಡ ಮಕ್ಕಳು ಇಂಗ್ಲೀಷ್ ಕಲಿಯಲು,ಗಣಿತ ಕಲಿಯಲು,ವಿಜ್ಞಾನ ಕಲಿಯಲು ಶಿಕ್ಷಕರಿಲ್ಲದೆ ಎಸ್.ಎಸ್.ಎಲ್.ಸಿವರೆಗೂ ಶಾಲೆಗೆ ಹೋಗದೆ ಮಧ್ಯದಲ್ಲಿಯೇ ಶಾಲೆಗಳನ್ನು ಬಿಟ್ಟು ಕೂಲಿ,ದನ,ಕುರಿ ಕಾಯಲು ಹೋಗುತ್ತಿದ್ದಾರೆ.ಅವರಿಗೆ ಈ ಜೀವಮಾನದಲ್ಲಿ ಯಾವುದೇ ವಿಧವಾದ ಏಳಿಗೆ ಸಾಧ್ಯವಿಲ್ಲ.
ಇದೆಲ್ಲಾ ನಮಗೇಕೆ ಬೇಕು? ನಮ್ಮ ಮಕ್ಕಳು ಚೆನ್ನಾಗಿದ್ದರೆ ಸಾಕು.ಎಂದು ಅಧಿಕಾರಿಗಳು, ಮಂತ್ರಿಗಳು ಮತ್ತು ಶ್ರೀಮಂತ ಸಾರ್ವಜನಿಕರು ಬಹಳ ನಾಜೂಕಾಗಿ ಈ ಸಮಸ್ಯೆಯನ್ನು ಕೈಬಿಡುತ್ತಾರೆ. ತತ್ಪರಿಣಾಮ ಯಾವ ಕಾಲದಲ್ಲೂ ಇರದೇ ಇರುವಂತಹ ಡ್ರಾಪ್‌ಔಟ್‌ನ್ನು ಶಾಲಾ ವಲಯದಲ್ಲಿ ನಾವು ಕಾಣಬಹುದು.ಈ ಬಗ್ಗೆ ಎಲ್ಲರೂ ಯೋಚಿಸಿ ಸರ್ಕಾರಕ್ಕೆ ಒತ್ತಡ ಹಾಕಬೇಕಾಗುತ್ತದೆ.ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದು ಸೆಕ್ಷನ್‌ಗೆ 25 ಮಕ್ಕಳು ಇರಲೇ ಬೇಕು ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಸೆಕ್ಷನ್‌ಗೆ 40 ಮಕ್ಕಳು, ಪದವಿ ಕಾಲೇಜಿನಲ್ಲಿ ಒಂದು ಸೆಕ್ಷನ್‌ಗೆ 15 ವಿದ್ಯಾರ್ಥಿಗಳು ಇರಲೇ ಬೇಕೆಂಬ ಕರಾಳ ನಿಯಮವನ್ನು ಕರ್ನಾಟಕ ಸುವರ್ಣ ಮಹೋತ್ಸವದ ಈ ವರ್ಷ ರದ್ದು ಮಾಡಬೇಕೆಂದು ನಾವೆಲ್ಲರೂ ಒತ್ತಾಯಿಸೋಣ.
ಈ ಶುಭ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಕನ್ನಡ ಶಾಲೆ ಹಾಗೂ ಅನುದಾನಿತ ಕನ್ನಡ ಮಾದ್ಯಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರ ವರ್ಷಕ್ಕೆ 1000 ರಿಂದ 5000 ರವರೆಗೆ ಸ್ಕಾಲರ್‌ಶಿಪ್ ಮತ್ತು ಹಳ್ಳಿಯ ಮಕ್ಕಳು ಶಾಲೆಗಳಿಗೆ ಹೋಗಲು ಸೈಕಲ್‌ನ್ನು,ಸಮವಸ್ತçವನ್ನು ಕೊಟ್ಟು ಪ್ರೋತ್ಸಾಹಿಸಬೇಕೆಂದು ಎಲ್ಲರೂ ಒತ್ತಾಯಿಸಿದರೆ ಅದನ್ನು ಕಾರ್ಯ ರೂಪಕ್ಕೆ ತಂದರೆ ಅದು 50 ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ ಆಗುವುದು ಅಲ್ಲವೇ?ಆಗ ನಾವೆಲ್ಲರೂ ಜೈ ಭುವನೇಶ್ವರಿ ಜೈ ಕರ್ನಾಟಕ ಎಂದು ಹೇಳೋಣವೇ?
ಲೇಖಕರ ಪರಿಚಯ
ಮೂಲತಃ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ, ಪ್ರಸ್ತುತ ತುಮಕೂರಿ ಹಿರಿಯ ಜೀವ ಎಂ. ಬಸವಯ್ಯ ಅವರು ಮಹಾತ್ಮ ಗಾಂಧೀಜಿ ಅವರಿಂದ ಸ್ಫೂರ್ತಿ ಪಡೆದು ತಮ್ಮ ಇಡೀ ಜೀವನವನ್ನು ಬಾಪೂ ಚಿಂತನೆ ಅನುಷ್ಟಾನ ಹಾಗೂ ಪ್ರಸಾರಕ್ಕಾಗಿ ಮೀಸಲಿಟ್ಟವರು. ವಿದ್ಯಾಭ್ಯಾಸದ ನಂತರ ಸರ್ಕಾರಿ ನೌಕರಿಗೆ ಹಂಬಲಿಸದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡವರು. ಶಂಕರ್ ಟ್ಯುಟೋರಿಯಲ್ ಆರಂಭಿಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೋಚಿಂಗ್ ಆರಂಭಿಸಿದರು. ಮಹಾತ್ಮ ಗಾಂಧೀಜಿ ಜನ್ಮಶತಮಾನೋತ್ಸವದ ಸ್ಮರಣೆಯಲ್ಲಿ 1969 ರಲ್ಲಿ ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಅದರ ಆಶ್ರಯದಲ್ಲಿ ಹಂತ ಹಂತವಾಗಿ ಬಾಪೂಜಿ ಪ್ರೌಢಶಾಲೆ, ಅನಾಥ ಮಕ್ಕಳಿಗಾಗಿ ಬಾಪೂ ವಿಕಾಸ ಮಂದಿರ, ಬಾಪೂಜಿ ಸಂಸ್ಕೃತ ಪಾಠಶಾಲೆ, ಬಾಪೂಜಿ ಪಿ ಯು ಕಾಲೇಜು, ಬಾಪೂಜಿ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಿದರು. ರವೀಂದ್ರ ಕಲಾನಿಕೇತನ ಹೆಸರಿನಲ್ಲಿ ಕಲಾ ಶಾಲೆ ಆರಂಭಿಸಿದರು. ಜೊತೆಗೆ ಗಾಂಧಿ ಸ್ಮೃತಿ ಮತ್ತು ದರ್ಶನ ಕೇಂದ್ರ ಹಾಗೂ ಸರ್ವೋದಯ ಸಾಹಿತ್ಯ ಭಂಡಾರ ಸ್ಥಾಪನೆ ಮಾಡಿದರು. ಭಾರತ್ ಸೇವಾ ದಳದ ಸಕ್ರಿಯ ಕಾರ್ಯಕರ್ತರು. ಮಹಾತ್ಮ ಗಾಂಧೀಜಿ ಅವರಿಗೆ ಸಂಬಂಧಿಸಿದ ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯಬೇಕು, ಕನ್ನಡ ಶಾಲೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು, ಜನರೂ ಬೆಂಬಲ ನೀಡಬೇಕು ಎಂದು ಬರೆಹ ಭಾಷಣಗಳ ಮೂಲಕ ಜನಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.ಬಸವಯ್ಯನವರ ಕಳಕಳಿ ಈ ಬರಹದಲ್ಲಿ ಒಡಮೂಡಿದೆ. - ಸಂಪಾದಕ