ಶ್ರೇಷ್ಟ ಲೇಖಕರನ್ನು ಕನ್ನಡಕ್ಕೆ ತಂದ ಶ್ರೇಷ್ಟರು

ಶ್ರೇಷ್ಟ ಲೇಖಕರನ್ನು ಕನ್ನಡಕ್ಕೆ ತಂದ ಶ್ರೇಷ್ಟರು

ಎಸ್.‌ ಗಂಗಾಧರಯ್ಯ

 

    ಪುಟ್ಟಸ್ವಾಮಿಯವರು ಕನ್ನಡಕ್ಕೆ ಅನುವಾದಿಸಿರುವ ಜಪಾನಿನ ಬಹು ಮುಖ್ಯ ಕಥೆಗಾರ ಯೂನೊಸ್ ಕೆ ಅಕ್ ತಗವನ 'ರಾಶೊಮನ್' ಕಥೆಗಳನ್ನು ಒಂದೇ ಗುಕ್ಕಿಗೆ ಓದಿ ನಿಬ್ಬೆರಗಾಗಿದ್ದೇನೆ. ಅಕ್ ತಗವನ ನಿರೂಪಣೆಯ ತಂತ್ರ, ಕಥೆಗಳ ವಸ್ತು ಹಾಗೂ ಕಥೆಗಳು ವಾಸ್ತವಕ್ಕೆ ಮುಖಾಮುಖಿ ಆಗುವ ರೀತಿ ಅವನೆಷ್ಟು ದೊಡ್ಡ ಲೇಖಕ ಅನ್ನುವುದನ್ನು ತೋರಾಕುತ್ತವೆ. ಕೇವಲ ಮುವ್ವತ್ತೈದು ವರ್ಷಗಳಷ್ಟೇ ಬದುಕಿದ್ದ ಅಕ್ ತಗವನ ಕಥೆಗಳಲ್ಲಿನ ತಳಮಳಗಳು,ಭಯ,ಭೀಭತ್ಸತೆ ಹಾಗೂ ಭೀತಿಗಳೇ ಸ್ಥಾಯಿಭಾವಗಳಾಗಿ ಓದುಗನೊಳಗೆ ಉಂಟುಮಾಡುವ ಪರಿಣಾಮ ಅವನನ್ನು ಜಗತ್ತಿನ ಶ್ರೇಷ್ಠ ಲೇಖಕರ ಸಾಲಿನಲ್ಲಿ ನಿಲ್ಲಿಸಿದೆ.

    ಕೆ.ಪುಟ್ಟಸ್ವಾಮಿಯವರು ಕನ್ನಡದ ತುಂಬಾ ಒಳ್ಳೆಯ ಓದುಗರಷ್ಟೇ ಅಲ್ಲ ಅದ್ಭುತವಾದ ಅನುವಾದಕರು ಕೂಡಾ. ಅದು ಮತ್ತೊಮ್ಮೆ ಇಲ್ಲಿ ಸಾಬೀತಾಗಿದೆ. ತುಂಬಾ ತಾಳ್ಮೆಯಿಂದ ಹಾಗೂ ತುಂಬಾ ಶ್ರದ್ಧೆಯಿಂದ ಇವುಗಳನ್ನು ಕನ್ನಡಕ್ಕೆ ತಂದಿರುವ ಕೆ.ಪುಟ್ಟಸ್ವಾಮಿಯವರು ನಿಜಕ್ಕೂ ಅಭಿನಂದನಾರ್ಹರು. ಏಕೆಂದರೆ ಕನ್ನಡದ ಮಟ್ಟಿಗೆ ಇದೊಂದು ಹೊಸಾ ಸಂವೆದನೆ. ಅಂತೆಯೇ ಮೊದಲ ಬಾರಿಗೆ ಅಕ್ ತಗವ ಕನ್ನಡದವನಂತೆಯೇ ಕನ್ನಡಕ್ಕೆ ಬಂದಿದ್ದಾನೆ. ಅನುವಾದಕರು ಈ ಕತೆಗಳಿಗೆ ತುಂಬಾ ಉಪಯುಕ್ತವಾದ ಮುನ್ನುಡಿ ಹಾಗೂ ಟಿಪ್ಪಣಿಗಳನ್ನು ಕೊಟ್ಟಿರುವುದರಿಂದ ಅಕ್ ತಗವನ ಕಥಾಲೋಕ ಪ್ರವೇಶಕ್ಕೆ ತುಂಬಾ ಉಪಕಾರಿಯಾಗಿದೆ.

   ನನಗೆ ಕುರೋಸಾವನ ಸಿನೇಮಾಗಳು ತುಂಬಾ ಇಷ್ಟ. 'ರಾಶೋಮಾನ್'ನಾನು ಮತ್ಮತ್ತೆ ನೋಡುವ ಸಿನೆಮಾಗಳಲ್ಲಿ ಒಂದು. ಆದರೆ ಇದನ್ನು ಬರೆದ ಕಥೆಗಾರನ ಹೆಸರು ಮಾತ್ರ ಅಷ್ಟಾಗಿ ನನ್ನೊಳಗೆ ದಾಖಲಾಗಿರಲಿಲ್ಲ.

ಹಂಗೆ ನೋಡಿದರೆ ಇದೇ ಜಪಾನಿನ ಮುರಕಮಿ,ಯೂಕೋ ಒಗಾವ ತುಂಬಾ ಇಷ್ಟದ ಲೇಖಕರು.ಮರಕಮಿಯ,Kafka on the shore,Blind willow sleeping woman,Men without women ಯುಕೋ ಒಗಾವಳThe memory police,ಅದೇರೀತಿ ಕುರೊಸಾವನ ಆತ್ಮಕಥೆ Something like an autobiography ('ನೆನಪಿನೋಣಿಯಲ್ಲಿ'ಕನ್ನಡಕ್ಕೆ ಹೇಮಾ ಹೆಬ್ಬಗೋಡಿ)ಇಷ್ಟದ ಕೃತಿಗಳು.

ಇದು ಕಳೆದ ವರ್ಷವೇ ಪ್ರಕಟಗೊಂಡಿದ್ದರೂ ಸಹ ಎಲ್ಲಿಯೂ ಈ ಕೃತಿಯ ಬಗ್ಗೆ ಒಂದು ವಾಕ್ಯವೂ ಬಂದಿಲ್ಲ !ಜೊತೆಗೆ ನನ್ನ ಕಣ್ಣಿಗೂ ಬಿದ್ದಿರಲಿಲ್ಲ. ನಿನ್ನೆಯಿಂದ ಈ ಯೂನೊಸ್ ಕೆ ಅಕ್ ತಗವನ ಕಥೆಗಳ ಲೋಕದಲ್ಲಿದ್ದ ನನಗೆ ಒಬ್ಬ ಕಥೆಗಾರನಾಗಿ ಒಂದು ಹೊಸಾ ಅನುಭವವನ್ನು ನೀಢಿದೆ. ಗ್ರಹಿಕೆಯ ಕ್ರಮ ಹಾಗೂ ಬರೆಯುವ ಬಗೆಗಿನ ಹೊಸ ದಾರಿಗಳಗನ್ನು ಕಂಡುಕೊಳ್ಳದೇ ಹೋದಲ್ಲಿ ಲೇಖಕನಾದವನು ಅದೇ ನಿರೂಪಣೆ,ಅದೇ ಹಳಸಲುಗಳಿಂದ ಹೇಗೆ ಜಡ್ಡುಗಟ್ಟಿಬಿಡಬಲ್ಲ ಎಂಬುದರ ಮನವರಿಕೆಗಾದರೂ ಬರೆಯುವ ಬದುಕಿನಲ್ಲಿರುವ ಪ್ರತಿಯೊಬ್ಬರೂ ಓದಲೇಬೇಕಾದ ಲೇಖಕ. ಅದೇರೀತಿ ಇವನ ಕಥೆಗಳೊಳಗಿನ ನಾವಿನ್ಯತೆ,ವಸ್ತುಗಳ ಸಮಕಾಲೀನತೆ ಒಬ್ಬ ಒಳ್ಳೆಯ ಓದುಗನಿಗೆ ತಾಕಿ ಹೊಸದೊಂದು ಸಂವೇದನೆಯನ್ನು ಹುಟ್ಟಾಕುತ್ತಲೇ ಒಳ್ಳೆಯ ಮತ್ತು ಕೆಟ್ಟ ಲೇಖಕರ ನಡುವಿನ ವ್ಯತ್ಯಾಸವನ್ನು ತೋರಾಕುತ್ತದೆ.

ಅಕಿರಾ ಕುರೋಸಾವನ 'ರಾಶೋಮಾನ್' ಪ್ರಪಂಚದಲ್ಲಿ ಕುರೋಸಾವನಿಗೆ ತುಂಬಾ ಹೆಸರನ್ನು ತಂದುಕೊಟ್ಟ ಸಿನೇಮಾ. ಇದರೊಂದಿಗೆ ಈ ಕಥೆಯನ್ನು ಬರೆದಿದ್ದ ಯೂನೋಸ್ ಕೆ ಅಕ್ ತಗವಗೆ ಕೂಡ ಜಾಗತಿಕ ಸಾಹಿತ್ಯದಲ್ಲಿ ಅಪಾರ ಮನ್ನಣೆಯನ್ನು ತಂದುಕೊಟ್ಟಿತ್ತು. ಅಕ್ ತಗವನ 'ರಾಶೋಮನ್' ಹಾಗೂ 'ಒಂದು ತೋಪಿನಲ್ಲಿ' ಎರಡೂ ಕಥೆಗಳೂ ಸೇರಿ'ರಾಶೋಮನ್'ಸಿನೇಮಾವಾಗಿತ್ತು.

ಯೂನಸ್ ಕೆ ಅಕ್ ತಗವ(1892-1927)ಜಪಾನಿನ ಆಧುನಿಕ ಕಥಾಸಾಹಿತ್ಯದ ಪಿತಾಮಹ ಇದ್ದಂತೆ.ಕಲ್ಪನಾಲೊಕದ ಕಥೆ ಮತ್ತು ವಿವರಗಳು ಅಥವಾ ವೈಯಕ್ತಿಕ ಅನುಭವಗಳ ಜಡ ನಿರೂಪೆಯಲ್ಲಿ ಬಳಲಿದ್ದ ಜಪಾನಿನ ಕಥನ ಸಾಹಿತ್ಯಕ್ಕೆ ಹೊಸದೊಂದು ತಿರುವು ನಿಡಿದವನು. ಪುರಾಣ, ಜಾನಪದ ಮತ್ತು ಐತಿಹಾಸಿಕ ಸಂಗತಿಗಳಿಗೆ ಆಧುನಿಕ ಸಂವೇದನೆಗಳನ್ನು ಬೆಸೆದು ನಿರೂಪಣೆಯಲ್ಲಿ ಮಾಂತ್ರಿಕತೆಯನ್ನು ಮೆರೆದ ಗಾರುಡಿಗ.

ಇಪ್ಪತ್ತನೆಯ ಶತಮಾನದಲ್ಲಿ ಜಾಗತಿಕ ಓದುಗರ ಮತ್ತು ವಿಮರ್ಶಕರ ಗಮನ ಸೆಳೆದ ಮೊದಲ ಜಪಾನಿ ಕಥೆಗಾರ.

-ಕೆ.ಪುಟ್ಟಸ್ವಾಮಿ