ಕನ್ನಡದ ಮೊದಲ ಕ್ರಾಂತಿಕಾರಿ ವಾರಪತ್ರಿಕೆ- ಜನಪ್ರಗತಿ

ಏನನ್ನಾದರೂ ಸಾಧಿಸಲು ಅವಕಾಶ ಸಿಗಬೇಕು. ಮತ್ತೆ ಅಂತಹ ಅವಕಾಶ ಪಡೆಯಲು ನಾವೂ ಪ್ರಯತ್ನ ಮಾಡಬೇಕು. ನಮಗೆಲ್ಲಾ ಇಂತಹ ತಿಳಿವಳಿಕೆ, ಆತ್ಮವಿಶ್ವಾಸ ಬೆಳೆಯಲು ಜನಪ್ರಗತಿಯ ಪಾತ್ರವೂ ಇದೆ.

ಕನ್ನಡದ ಮೊದಲ ಕ್ರಾಂತಿಕಾರಿ ವಾರಪತ್ರಿಕೆ- ಜನಪ್ರಗತಿ


-ಡಾ.ಎಲ್.ಹನುಮಂತಯ್ಯ


    ನಾನು ವಿದ್ಯಾರ್ಥಿಯಾಗಿ ಬೆಂಗಳೂರಿಗೆ ಬಂದವನು. ಆಗಿನ ಭಾಷಣ ಸ್ಪರ್ಧೆಗಳಲ್ಲಿ ನೇರ ಮಾತುಗಳ, ಸವಾಲು ಹಾಕುವ ಯುವಕನೆಂದು ಫೇಮಸ್ಸಾಗಿದ್ದೆ. ಪ್ರಗತಿಪರರು, ಕಮ್ಯುನಿಸ್ಟರು ನನಗೆ ನೇರ ಸಂಪರ್ಕಕ್ಕೆ ಸಿಕ್ಕರು. ಆಗ ಕಲ್ಲೆ ಶಿವೋತ್ತಮರಾಯರ ಜನಪ್ರಗತಿ ಈ ವಲಯದಲ್ಲಿ ಬಹಳ ಹೆಸರು ಮಾಡಿದ್ದ ಪತ್ರಿಕೆ. ಅದೊಂದು ಬ್ರಾಹ್ಮಣ ವಿರೋಧಿ ಪತ್ರಿಕೆ ಎಂತಲೂ ಇತ್ತು. ಪುರೋಹಿತಶಾಹಿಯನ್ನು ವಿರೋಧಿಸುವ ಚಿಂತನೆಗಳು ಯಾರ್ಯಾರಿಗೆ ಬೇಕಿತ್ತೋ ಅದನ್ನೇ ಹುಡುಕುತ್ತಿದ್ದ ಕಮ್ಯುನಿಸ್ಟರಿಗೆ ನಮ್ಮಂತಹ ದಲಿತ ಯುವಕರಿಗೆ ಆಹಾರವಾಗಿ ಸಿಗುತ್ತಿದ್ದುದೇ ಜನಪ್ರಗತಿ.


   ಹಾಗಾಗಿ ಕಲ್ಲೆಯವರು ನಮಗೆ ಪರಿಚಯ ಆಗಿನ ಕಾಲಕ್ಕೆ ಅವರಿಗೆ ಸರ್ಕಾರದೊಂದಿಗೆ ನಿಕಟ ಸಂಪರ್ಕವಿತ್ತು. ಮುಖ್ಯಮಂತ್ರಿಯವರಿಗೆ ಥಿಂಕ್ ಟ್ಯಾಂಕ್ ತರ ಇದ್ದರು. ಕರ್ನಾಟಕದ ಬಹುತೇಕ ದೊಡ್ಡ ಪತ್ರಿಕೆಗಳನ್ನು ಹೊರತುಪಡಿಸಿದರೆ ಸಣ್ಣ ಪತ್ರಿಕೆ ಅಥವಾ ವಾರಪತ್ರಿಕೆಗಳಲ್ಲಿ ಬಹಳ ಪ್ರಭಾವ ಬೀರಿದ್ದರೆಂದರೆ ಅದು ಕಲ್ಲೆಯವರ ಜನಪ್ರಗತಿ. ಲಂಕೇಶ್ ಪತ್ರಿಕೆ ಬರುವವರೆಗೂ ಬಹಳ ಜನ ಪ್ರಗತಿಪರರು ಜನಪ್ರಗತಿಯ ಕನಸಿನಲ್ಲೇ ಬದುಕುತ್ತಿದ್ದರು. ಆ ತರದ ಇನ್ನೊಂದು ಪತ್ರಿಕೆ ತುಂಬಾ ವಿರಳ, ನಾನು ಆಗ ನೋಡಿರಲೂ ಇಲ್ಲ. ನಾನವರ ಹೆಸರು ಕೇಳಿ ‘ಇದೇನು ಇವರೇ ಬ್ರಾಹ್ಮಣರಾಗಿ, ಬ್ರಾಹ್ಮಣರನ್ನೇ ಹೀಗೆ ಟೀಕಿಸುತ್ತಾರಲ್ಲ’ ಅಂತ ಸೋಜಿಗಗೊಂಡಿದ್ದೆ. ಆನಂತರ ಅವರು ಬಿಲ್ಲವ ಸಮುದಾಯದವರೆಂದು ಗೊತ್ತಾಯಿತು.. ಆ ಕಾಲಘಟ್ಟದಲ್ಲಿ ಬಹುತೇಕ ಎಲ್ಲವೂ ಪುರೋಹಿತಶಾಹಿ ವಿರೋಧಿ ಕಾಲ. ಅದಕ್ಕೊಂದು ಮುಖ್ಯ ಕಾರಣ ಕುವೆಂಪು ಅನಿಸುತ್ತದೆ. ಈ ದೇಶದ ಬೌದ್ಧಿಕ ಬೆಳವಣಿಗೆಗೆ ಅದೊಂದು ತೊಡಕೆಂದು ಅವರು ಬರೆದರು. ಕಲ್ಲೆಯವರ ಬರಹಗಳೂ ಇದಕ್ಕೆ ಪೂರಕವಾಗಿರುತ್ತಿದ್ದವು. ನನ್ನ ಜೊತೆಗಿದ್ದ ಕಮ್ಯೂನಿಸ್ಟರು ಅಂದರೆ ಎಂ.ಕೆ.ಭಟ್, ಡಿ.ಆರ್.ನಾಗರಾಜ್, ಸಿದ್ದಲಿಂಗಯ್ಯನವರು. ಶಿವಮೊಗ್ಗದ ಕಲ್ಲೂರು ಮೇಘರಾಜ್ ಮುಂತಾದವರು ಬಹಳ ಚಟುವಟಿಕೆಯಿಂದ ಇದ್ದರು. ಮೊದಲ ಪಿಯುಸಿ ಓದುತ್ತಿದ್ದ ನಾನು ಡಿಬೆಟ್ಗಳಲ್ಲಿ “ಏನ್ರೀ ಇದು ಜಾತಿ. ನೀವೆಲ್ಲಾ ಯಾಕ್ರಿ ಜಾತಿ ಆಚರಿಸ್ತೀರಿ?” ಅಂತೆಲ್ಲಾ ಕೋಪದಿಂದ ಪ್ರಶ್ನೆ ಹಾಕುತ್ತಿದ್ದೆ. ದೊಡ್ಡಬಳ್ಳಾಪುರದ ರಾಮೇಶ್ವರ ಅನ್ನುವ ಪುಟ್ಟ ಹಳ್ಳಿಯಿಂದ ಬಂದಿದ್ದ ನನಗೆ ಅವರೆಲ್ಲಾ ಬಹಳ ಪ್ರೋತ್ಸಾಹ ನೀಡಿದರು. ಆಗ ಚಂದ್ರಮೋಹನ್ ಅಂತ ಲೆಕ್ಚರರ್ “ಏಯ್, ಈ ಹುಡುಗನ್ನ ಬಹುಮಾನಕ್ಕೆ ಸೆಲೆಕ್ಟ್ ಮಾಡಿ. ಚೆನ್ನಾಗಿ ಮಾತಾಡ್ತಾನೆ” ಅಂತ ಹೇಳಿದ್ದರು. ನಾನು ಬೇರೆ ಬೇರೆ ಕಾಲೇಜುಗಳಿಗೆ ಹೋಗಿ ಮಾತಾಡುವುದು ನಡೆಯುತ್ತಿತ್ತು. ಡಿ.ಆರ್.ನಾಗರಾಜ್, ನಾನು ಅವರೂರು ದೊಡ್ಡಬಳ್ಳಾಪುರದವನೆಂದು ತಿಳಿದು ಆಶ್ಚರ್ಯಪಟ್ಟಿದ್ದರು. ಅವರು ಬಹಳ ಓದಿಕೊಂಡಿದ್ದರು. ಬರಗೂರು, ಲಂಕೇಶ್ ತರದವರನ್ನೂ ಬಿಡದೆ ಚರ್ಚೆಯ ಡಿಕ್ಕಿ ಕೊಡುತ್ತಿದ್ದರು. ಎಸ್‌ಎಸ್‌ಎಲ್‌ಸಿ ಫೇಲಾಗಿದ್ದ ಅವರು ಮುಂದೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾದರು. ನಮಗೆ ಅದೆಲ್ಲಾ ಆಶ್ಚರ್ಯ. ಹಳ್ಳೀಲಿ ಹುಟ್ಟಿಬೆಳೆದು, ಕನ್ನಡ ಎಂ.ಎ. ಮಾಡಿದವರು ಅದು ಹೇಗೆ ಶಿಕಾಗೊ ವಿವಿಗೆ ಹೋಗಲು ಸಾಧ್ಯವಾಯಿತು ಅಂತ! ನಾನು ರಾಜ್ಯಸಭಾ ಮೆಂಬರ್ ಆದಾಗಲೂ ‘ಹನುಮಂತಯ್ಯಗೆ ಹಿಂದಿ ಇಂಗ್ಲೀಷ್ ಬರಲ್ಲ. ಕನ್ನಡ ಮಾತಾಡಿದರೆ ದೆಹಲಿಯಲ್ಲಿ ಯಾರೂ ಕೇಳಲ್ಲ. ಅದೇನು ಮಾಡುತ್ತಾನೋ” ಅಂತ ಮಾತಾಡಿದವರು ಉಂಟು. ಆಮೇಲೆ ನಾನೇ ಇಂಗ್ಲೀಷ್ ರೂಢಿಸಿಕೊಂಡ ಮೇಲೆ “ಲೇ ಇವ್ನಿಗೆ ಇಂಗ್ಲೀಷೂ ಬರುತ್ತೆ ಕಣ್ರಿ” ಅಂತನ್ನಲು ಶುರು ಮಾಡಿದರು.


    ಏನನ್ನಾದರೂ ಸಾಧಿಸಲು ಅವಕಾಶ ಸಿಗಬೇಕು. ಮತ್ತೆ ಅಂತಹ ಅವಕಾಶ ಪಡೆಯಲು ನಾವೂ ಪ್ರಯತ್ನ ಮಾಡಬೇಕು. ನಮಗೆಲ್ಲಾ ಇಂತಹ ತಿಳಿವಳಿಕೆ, ಆತ್ಮವಿಶ್ವಾಸ ಬೆಳೆಯಲು ಜನಪ್ರಗತಿಯ ಪಾತ್ರವೂ ಇದೆ.


    ಕಲ್ಲೆಯವರ ಬಳಿ ಒಳ್ಳೆಯ ಪುಸ್ತಕಗಳಿವೆ. ಅವರದನ್ನು ಓದುತ್ತಿದ್ದರು, ಅನೇಕ ವಿಚಾರಗಳ ಬಗ್ಗೆ ಅವರಿಗೆ ಆಳವಾದ ತಿಳುವಳಿಕೆ ಇತ್ತು. ಬಹುಶಃ ಲಂಕೇಶ್ ಬಿಟ್ಟರೆ ಚೆನ್ನಾಗಿ ಬರೆಯುತ್ತಿದ್ದ ಪತ್ರಕರ್ತರೆಂದರೆ ಕಲ್ಲೆಯವರು. 1973 ರಿಂದಲೇ ನಾನು ಬೀದಿ ಭಾಷಣಕಾರ. ಡಿಎಸ್‌ಎಸ್ ಕಾರಣಕ್ಕೆ. ಕಲ್ಲೆಯವರು ಇರುತ್ತಿದ್ದ ಸಭೆಗಳಲ್ಲೂ ನಾನೇ ಅಂಬೇಡ್ಕರ್ ಬಗ್ಗೆ ಭಾಷಣ ಮಾಡುತ್ತಿದ್ದೆ. ಆಗ ನಾನು ಓಡಾಡದ ಸ್ಥಳ ಕರ್ನಾಟಕದಲ್ಲಿರಲಿಲ್ಲ. ಕಲ್ಲೆ ಆಗೆಲ್ಲಾ ನಮ್ಮನ್ನು ಪ್ರೀತಿಯಿಂದ, ವಿಶ್ವಾಸದಿಂದ ಕಾಣುತ್ತಿದ್ದರು. ನಾವುಗಳು ಆರ್ಟ್ಸ್ ಓದಿ ಬರೀ ಕನ್ನಡ ಮೇಷ್ಟ್ರಾಗದೆ ಸೈನ್ಸೂ ಓದಿ ಸೈಂಟಿಸ್ಟ್ ಆಗಬೇಕು ಎನ್ನುವವರು ಕಲ್ಲೆ ಬಳಗದಲ್ಲಿದ್ದರು. ನಾವೆಲ್ಲಾ ಬಂಡಾಯ ಸಾಹಿತ್ಯ ಆಂದೋಲನ ಶುರು ಮಾಡಿದಾಗ ಕಲ್ಲೆಯವರು “ಇದೆಲ್ಲಾ ದೊಡ್ಡಮಟ್ಟದಲ್ಲಿ ಆಗಬೇಕು” ಎಂದು ಉತ್ತೇಜಿಸುತ್ತಿದ್ದರು. ಆಗ ನಾನು ಎಸ್‌ಎಫ್‌ಐನಲ್ಲಿದ್ದೆ. ಕಮ್ಯೂನಿಸ್ಟರ ಸಂಘಟನೆ ಅದು. ನಾವು ಸೋಶಲಿಸ್ಟರನ್ನು ಗೇಲಿ ಮಾಡುವುದು, ಅವರು ನನ್ನನ್ನು ಏನಾದರೂ ಅನ್ನುವುದಿತ್ತು. ಪ್ರೊ.ಎಂ.ಡಿ.ನಂಜಂಡಸ್ವಾಮಿಯವರು ಒಮ್ಮೆ ದಲಿತ ಚಳವಳಿಯನ್ನು “ಏನು ಹದಿನೆಂಟು ಪರ್ಸೆಂಟ್ನಿಂದಲೇ ನೀವು ಕ್ರಾಂತಿ ಮಾಡಿಬಿಡ್ತೀರಾ, ನಮ್ಮನ್ನು ನಿಮ್ ಜೊತೆ ಸೇರಿಸಿಕೊಳ್ಳಿ” ಅಂದಿದ್ದರು.


    ಆಗ ಓದುಗರ ಸಂಖ್ಯೆ ಕಡಿಮೆ. ಇದ್ದವರು ಪ್ರಗತಿಪರ ಓದುಗರು ಮಾತ್ರ. ಅವರ ನಡುವೆ ಜನಪ್ರಗತಿ ಕನ್ನಡದ ನಂಬರ್ ಒನ್ ಪತ್ರಿಕೆಯಾಗಿತ್ತು. ಆಮೇಲೆ ರೂಪ ಪಡೆದದ್ದು ಲಂಕೇಶ್ ಪತ್ರಿಕೆ. ಜನಪ್ರಗತಿಯು ಒಂದು ರೀತಿಯಲ್ಲಿ ಲಂಕೇಶ್ ಪತ್ರಿಕೆಯ ಚಿಮ್ಮು ಹಲಗೆ ಅಂತನ್ನಬಹುದು. ಕರ್ನಾಟಕದಲ್ಲಿ ಲಂಕೇಶ್ ಪತ್ರಿಕೆ ಬರುವವರೆಗೂ ಏನು ಇರಲಿಲ್ಲ ಅಂತ ಯಾರಾದರೂ ಹೇಳಿದರೆ ಅದು ಮೂರ್ಖತನ. ಲಂಕೇಶರು ಪ್ರಜಾವಾಣಿಯಲ್ಲಿ ‘ಬಂ, ಗುಂ’ ಅಂತೆಲ್ಲಾ ಬರೆದಾಗ ಇಡೀ ಕರ್ನಾಟಕವೇ ಥ್ರಿಲ್ ಆಗಿಹೋಗಿತ್ತು. ಅಧಿಕಾರಸ್ಥರನ್ನು, ಒಬ್ಬ ಮುಖ್ಯಮಂತ್ರಿಯನ್ನು ಹೀಗೆ ಬರೆಯಬಹುದೇ ಅಂತ ಜನ ಆಶ್ಚರ್ಯಪಟ್ಟರು. ಲಂಕೇಶರು ಆ ದೊಡ್ಡ ವ್ಯಕ್ತಿಗಳನ್ನು ತಮ್ಮ ಬರಹಗಳಲ್ಲಿ ಎಳೆತಂದು ಜನಸಾಮಾನ್ಯರ ಮಟ್ಟಕ್ಕೆ ತಂದು ನಿಲ್ಲಿಸಿದ್ದರು.


    ಇಂತದ್ದೆಲ್ಲಾ ಸಾಧ್ಯವಾಗಿದ್ದು, ಪೀಠಿಕೆ ಹಾಕಿದ್ದು ಜನಪ್ರಗತಿ ಹಾಗೂ ಕಲ್ಲೆಯವರು ಕರ್ನಾಟಕದ ಪತ್ರಿಕಾ ಇತಿಹಾಸದಲ್ಲಿ ಜನಪ್ರಗತಿಯ ಪಾತ್ರ ದೊಡ್ಡದಿದೆ. ಜನರಿಗಾಗಿ ಏನೂ ಇರದ ಕಾಲದಲ್ಲಿ ಅವರು ಪತ್ರಿಕೆ ನಡೆಸಿದರು ಎನ್ನುವುದೇ ಮುಖ್ಯ. ಯಾರೇ ಯುವಕ ಯುವತಿಯರು ಆಗ ಜನಪ್ರಗತಿ ಓದುತ್ತಿದ್ದಾರೆ ಅವರ ಜೀವನದ ದಿಕ್ಕೇ ಬದಲಾಗಿ ಬಿಡುವಂತಿರುತ್ತಿತ್ತು. ಲಂಕೇಶ್ ಪತ್ರಿಕೆ ಕಾಲದಲ್ಲೂ ಆ ತರ ಇತ್ತು. ಕಾವ್ಯದಲ್ಲಿ ಒಂದು ಹೊಸ ತಲೆಮಾರನ್ನು ಕಾವ್ಯದಲ್ಲಿ ಸೃಷ್ಟಿಸಿದವರೆಂದು ನಾವು ಅಡಿಗರ ಬಗ್ಗೆ ಹೇಳುತ್ತೇವೆ. ನಂಬಿಕೆಗಳಲ್ಲಿ ಅಡಿಗರು ಕೋಮುವಾದಿ ಅನಿಸಿದರೂ ಸಹ ಅವರ ಕಾವ್ಯದಲ್ಲಿ ಬಲವಾಗಿ ಅದಿಲ್ಲ. ‘ನಾನು ಹಿಂದೂ’ ಆ ತರದ ಕೆಲವು ಪದ್ಯಗಳು ಅಲ್ಲಲ್ಲಿ ಸಿಗುತ್ತವೆ ಅನ್ನುವುದೂ ನಿಜ.


    ಕಲ್ಲೆಯವರು ಪೂರ್ಣ ಕತ್ತಲಿದ್ದ ಕಾಲದಲ್ಲಿ ಒಂದು ಜ್ವಾಲೆಯಾಗಿ ಉರಿದವರು, ಬೆಳಕಿದ್ದಾಗ ನೀವೊಂದು ಇನ್ನೂ ದೊಡ್ಡ ಬೆಳಕಾಗುವುದು ಬೇರೆ. ಅದು ಲಂಕೇಶ್ ಪತ್ರಿಕೆ. ಆಗ ಬೆಳಕಿತ್ತು. ಅಂತಲ್ಲಿ ಪ್ರಜ್ವಲಿಸುವುದು ಬೇರೆ. ಆದರೆ ಕತ್ತಲೆ ಕಾಲ ಅದು. ಅವತ್ತು ಲೋಕಜ್ಞಾನ ಎಲ್ಲಿತ್ತು… ನಾನು ಬೆಂಗಳೂರಿಗೆ ಬಂದ ಮೇಲೆ ಬಸವಲಿಂಗಪ್ಪನವರ ಮಾತುಗಳನ್ನು ಕೇಳಿದ ಮೇಲೆ ನನ್ನ ಜೀವನದ ದಿಕ್ಕೇ ಬದಲಾಗಿ ಹೋಯಿತು. ಅಲ್ಲೀತನಕ ನನ್ನ ಹಳ್ಳಿಯ ಮೇಷ್ಟ್ರು “ಪ್ರಜಾವಾಣಿ ಪೇಪರ್ ಓದು. ಬಸವಲಿಂಗಪ್ಪನವರ ಸ್ಟೇಟ್ಮೆಂಟ್ ಬಂದಿದೆ” ಅಂದರೆ ನನಗದರ ಮಹತ್ವ ಅರ್ಥವಾಗುತ್ತಿರಲಿಲ್ಲ. ಆಮೇಲೆ ನಮಗೆಲ್ಲಾ ಜೀವನದ ಗುರಿ, ಅರ್ಥ ತಿಳಿಯತೊಡಗಿತು. ನಮ್ಮ ಮೇಷ್ಟ್ರೊಬ್ಬರು ನನಗೆ “ನೋಡಯ್ಯ, ನೀನು ಚೆನ್ನಾಗಿ ಓದ್ತೀಯಾ. ಏನಾದರೂ ಮಾಡಿ ಈ ಸ್ಕೂಲಿಗೇ ನೀನು ಮೇಷ್ಟ್ರಾಗಿ ಬರಬೇಕು” ಅಂತ ಹೇಳುತ್ತಿದ್ದರು. ಅವರ ಜೀವನಾನುಭವದಲ್ಲಿ, ದೃಷ್ಟಿಯಲ್ಲಿ ಅದೇ ದೊಡ್ಡದು ಎಂಬಂತಿರುತ್ತಿತ್ತು. ಆದರೆ ನಮ್ಮ ಓದು, ಇತರ ಚಟುವಟಿಕೆಗಳು ನಮ್ಮ ಜಗತ್ತನ್ನು ವಿಶಾಲಗೊಳಿಸಿದವು.


   ಆಗ ನಾವಿದ್ದ ಹಾಸ್ಟೆಲ್ನಲ್ಲಿ ವಾರ್ಡನ್ ರಾಮು ಅಂತ ಇದ್ದರು. ಅವರು ರಾಜ್ಕುಮಾರ್ ತರ ಆಗಬೇಕೆಂದ ಎಸ್ಟಿ ಸಮುದಾಯದ ಅವರು ಶ್ರೀ ಕಲಾದರ್ಶಿ ಅಂತ ಹೆಸರಿಟ್ಟುಕೊಂಡು ಗಾಂಧಿನಗರ ಎಲ್ಲಾ ಓಡಾಡಿ ಮೇಷ್ಟ್ರಾಗಿ ವಾಪಸ್ ಬಂದಿದ್ದರು.


   ಹಾಸ್ಟೆಲ್ ಮುಂದಿನ ಗೋಡೆಯ ಮೇಲೆ “ಧರ್ಮರಕ್ಷಿತನ ಧರ್ಮ ರಕ್ಷಿಪುದು” ಎಂದು ದೊಡ್ಡದಾಗಿ ಬರೆಸಿದ್ದರು. ಆಗೊಮ್ಮೆ ಹಾಸ್ಟೆಲ್ಗೆ ಬಂದಿದ್ದ ಬಸವಲಿಂಗಪ್ಪನವರು “ಯಾರಯ್ಯ ಇದನ್ನು ಬರೆಸಿದ್ದು.. ಅಲ್ಲಯ್ಯಾ ದಲಿತರು ಸಾವಿರಾರು ವರ್ಷದಿಂದ ಧರ್ಮಾನ ರಕ್ಷಿಸಿಕೊಂಡೇ ಬಂದಿದ್ದಾರೆ. ಆ ಧರ್ಮ ನಮ್ಮನ್ನು ರಕ್ಷಿಸಿದೆಯಾ?” ಅಂತ ಕೇಳಿದರು. ಆ ಮಾತು ಕೇಳಿ ನನಗೆ ಒಂದೇ ಸಾರಿ ಕಣ್ ತೆರೆದಂತಾಗಿ ಹೋಯಿತು. ನಾನು ನಿಂತ ನೆಲಕ್ಕೇ ಬಾಂಬಿಟ್ಟಂತಾಯಿತು. ನಮಗೆ ನಿತ್ಯ ಹಿಂಸೆ ಕೊಡುವ ಧರ್ಮ, ಇದ್ಯಾವ ಧರ್ಮ ಅನ್ನಿಸಿತು.


ಕಲ್ಲೆಯವರು ಈ ವಿಚಾರಗಳನ್ನೇ ಬಹಳ ಸೂಕ್ಷ್ಮವಾಗಿ ಬರೆಯುತ್ತಿದ್ದರು. ಹಾಗಾಗಿ ಜನಪ್ರಗತಿಯು ಕನ್ನಡದ ಮೊದಲ ಕ್ರಾಂತಿಕಾರಿ ಪತ್ರಿಕೆ. ಒಬ್ಬ ಮನುಷ್ಯ ಹಣವಿರದಿದ್ದ ಕಾಲದಲ್ಲಿ ವೈಯಕ್ತಿಕ ಸಾಹಸದ ರೀತಿ ಅಂತಾದ್ದೊಂದು ಪತ್ರಿಕೆ ಮಾಡಿದ್ದು ದೊಡ್ಡ ಸಾಹಸ. ಅದು ಹುಡುಗಾಟದ ಮಾತಲ್ಲ. ಸರ್ವಜ್ಞನು..


‘ಸರ್ವರಿಂದಲೂ ಒಂದೊಂದು ನುಡಿ ಕಲಿತು’ ಅಂದಿರುವಂತೆ ನಾವೆಲ್ಲಾ ಕಲ್ಲೆಯವರಿಂದ ಅನೇಕ ವಿಷಯಗಳನ್ನು ಕಲಿತೆವು. ಕಲ್ಲೆಯವರಿಗಿಂತಾ ವಿ.ಟಿ.ರಾಜಶೇಖರ್ ಬ್ರಾಹ್ಮಣರನ್ನು ಜಾಸ್ತಿ ದ್ವೇಷಿಸುತ್ತಿದ್ದರು. ಅಂತದ್ದು ನಮ್ಮ ಒಂದು ಕಣ್ಣನ್ನು ಮುಚ್ಚಿಸಿಬಿಡುತ್ತದೆ. ಪೆರಿಯಾರ್ರವರ ಚಿಂತನೆಗಳು ದ್ರಾವಿಡ ಸಂಸ್ಕೃತಿ, ಪರಂಪರೆಯ ನೆಲೆಯಿಂದ ಮೂಡಿದಂತವು.


    ಕರ್ನಾಟಕವು ಇಡೀ ಇಂಡಿಯಾದಲ್ಲಿ ಪ್ರಗತಿಪರ ಚಿಂತನೆಗಳಲ್ಲಿ ಯಾವತ್ತೂ ಮೊದಲ ಸ್ಥಾನದಲ್ಲಿರುವ ರಾಜ್ಯವಾಗಿದೆ. ಮೀಸಲಾತಿ ಕಲ್ಪಿಸಿದ್ದು, ಮಲ ಹೊರುವ ಪದ್ಧತಿ ನಿಷೇಧ, ಬೀದಿ ಬದಿಯ ಚಮ್ಮಾರರಿಗೆ ಚರ್ಮ ಕುಟೀರಗಳನ್ನು ಒದಗಿಸಿದ್ದು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದು, ಭೂಸುಧಾರಣೆ ಮುಂತಾದವನ್ನು ಒಪ್ಪಿ ಜಾರಿಗೊಳಿಸಿದೆ. ದೇವರಾಜ ಅರಸು ಹಾಗೂ ಬಿ.ಬಸವಲಿಂಗಪ್ಪನವರ ಕಾಲದಲ್ಲಿ ಕಲ್ಲೆ ಅವರಿಗೆ ನೈತಿಕ ಬೆಂಬಲವಾಗಿದ್ದರು. ಕುವೆಂಪುರವರ ವೈಚಾರಿಕ ಚಿಂತನೆಗಳಿಗೂ ಕಲ್ಲೆ ಶಿವೋತ್ತಮರಾಯರಿಂದ ಪ್ರೇರಣೆ ಸಿಕ್ಕಿರಬಹುದು ಎಂದು ನನ್ನ ಅನಿಸಿಕೆ. ಏಕೆಂದರೆ ಕುವೆಂಪುರವರಿಗಿAತ ಮೊದಲೇ ಅಂದರೆ 1960 ರ ದಶಕದಲ್ಲೇ ಕಲ್ಲೆಯವರಲ್ಲಿ ಈ ರೀತಿಯ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸಿದ್ದರು. ಕುವೆಂಪುರವರ ವ್ಯಕ್ತಿತ್ವ ಹಾಗೂ ಇಮೇಜ್ ಇಡೀ ಕರ್ನಾಟಕದಲ್ಲಿ ಹರಡುವಲ್ಲಿ ಕಲ್ಲೆಯವರ ಹಾಗೂ ಜನಪ್ರಗತಿಯದ್ದು ದೊಡ್ಡ ಪಾತ್ರವಿದೆ. ಅಂತಾದೊಂದು ಕಾಲದಲ್ಲಿ ಕರ್ನಾಟಕದಲ್ಲಿ ಇಂತಾದ್ದೊAದು ಪತ್ರಿಕೆ ಆರಂಭಿಸಿದ್ದು ಚಿಂತನೆಯ ದೃಷ್ಟಿಯಿಂದಲೂ ಹೊಸದು ಮತ್ತು ಕಾರ್ಯತತ್ಪರತೆಯ ದೃಷ್ಟಿಯಿಂದಲೂ ಹೊಸದಾಗಿತ್ತು.


    ನೆಟ್ಟಕಲ್ಲಪ್ಪನವರು ದೊಡ್ಡ ಮೊತ್ತದ ಹಣ ಹಾಕಿ ಪ್ರಜಾವಾಣಿ ಮಾಡಿದರು. ಕಲ್ಲೆಯವರು ಸಣ್ಣ ಮೊತ್ತದಲ್ಲಿ ಜನಪ್ರಗತಿ ನಡೆಸಿದರು. ಎರಡೂ ಶೂದ್ರರಿಂದಲೇ ನಡೆದ ಪತ್ರಿಕೆಗಳೂ ನನ್ನ ಪ್ರಕಾರ ಅವೆರಡೂ ಸಮವೇ. ಮೈಸೂರಿನಲ್ಲಿ ನಡೆವ ಸಾಹಿತಿ ಕಲಾವಿದರ ಸಮಾವೇಶದಲ್ಲಿ ಕಲ್ಲೆಯವರು ಭಾಷಣ ಮಾಡುತ್ತಾ “ಬ್ರಾಹ್ಮಣರಾದ ಮಾಸ್ತಿ ಕನ್ನಡದ ಆಸ್ತಿ, ಬೇಂದ್ರೆ ಗಾರುಡಿಗ, ಕಾರಂತರು ಕಡಲ ತೀರದ ಭಾರ್ಗವ…. ಹಾಗಾದರೆ ಬ್ರಾಹ್ಮಣರಲ್ಲದ ಸಾಹಿತಿಗಳೆಲ್ಲಾ ಯಾರು? ಎಂದು ಘರ್ಜಿಸಿದ್ದರು. ಅದಾದ ಕೆಲವೇ ವರ್ಷಗಳಲ್ಲಿ ಲಂಕೇಶರು ‘ಪ್ರಜಾವಾಣಿ’ಯಲ್ಲಿ ಬರೀ ಬ್ರಾಹ್ಮಣರೇ ತುಂಬಿಕೊAಡಿದ್ದಾರೆ, ಯಾಕೆ ನಾವ್ಯಾರೂ ಸಾಹಿತಿಗಳಲ್ಲವಾ ಎಂದು ಸಿಟ್ಟಿಗೆದ್ದು ಹೊರಬಂದು ತಮ್ಮದೇ ಪತ್ರಿಕೆ ಆರಂಭಿಸಿದರು.


    ಕರ್ನಾಟಕದಲ್ಲಿ ಹೀಗೆ ವೈಚಾರಿಕ ಪರಂಪರೆ, ಸಾಮಾಜಿಕ ನ್ಯಾಯ, ಪ್ರಾತಿನಿಧ್ಯದ ದನಿ ಎತ್ತುವ ಪರಂಪರೆ ಬಹಳ ಕಾಲದಿಂದಲೂ ಇದೆ. ಕಲ್ಲೆ ಶಿವೋತ್ತಮರಾವ್ ಆ ಪರಂಪರೆಯ ಪ್ರಮುಖ ಸಂಪರ್ಕ ಸೇತು.