ದಲಿತ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ: ಮೂಗಿನ ನೇರಕ್ಕೆ ನಡೆದ ನಾಯಕರು

  ವರ್ತಮಾನ  ವರ್ತಮಾನ - ವಿ.ಎಲ್.ನರಸಿಂಹಮೂರ್ತಿ

ದಲಿತ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ:  ಮೂಗಿನ ನೇರಕ್ಕೆ ನಡೆದ ನಾಯಕರು

 

ದಲಿತ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ:

ಮೂಗಿನ ನೇರಕ್ಕೆ ನಡೆದ ನಾಯಕರು

ಡಿಸೆಂಬರ್ 6ರ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ದಲಿತರಲ್ಲಿನ ಎಡಗೈ-ಬಲಗೈ ಸಮುದಾಯಗಳ ನಡುವಿನ ಬಿರುಕನ್ನ ಕಡಿಮೆ ಮಾಡಿ ಒಟ್ಟಿಗೆ ತೆಗೆದುಕೊಂಡು ಹೋಗುವ ಭರವಸೆ ಮೂಡಿಸಿತ್ತು. ಈ ಭರವಸೆಗೆ ಮುನ್ನುಡಿಯಂತೆ ಐಕ್ಯಗೊಳ್ಳುತ್ತಿರುವ ಸಂಘಟನೆಗಳಲ್ಲಿ ಎಡಗೈ ಸಮುದಾಯದ ಸಂಘಟನೆಗಳ ಪ್ರಾತಿನಿಧ್ಯ ಇರುವಂತೆ ಪ್ರಜ್ಞಾಪೂರ್ವಕವಾಗಿಯಾದರೂ ಪ್ರಯತ್ನಿಸಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಎಂದಿನಂತೆ ದಲಿತರೊಳಗಿನ ಎಡಗೈ-ಬಲಗೈ ಬಿರುಕನ್ನು ಸರಿಯಾಗಿ ಗ್ರಹಿಸುವುದಕ್ಕಾಗದ ದಸಂಸದ ಹಿರಿಯರಿಗೆ ಎರಡೂ ಸಮುದಾಯಗಳ ಹಿರಿಯರನ್ನ ಒಟ್ಟಿಗೆ ತರಲಾಗಿಲ್ಲ. ಹಿರಿಯರ ಕತೆ ಪಕ್ಕಕ್ಕಿಟ್ಟು ಕನಿಷ್ಠ ಎರಡೂ ಸಮುದಾಯಗಳ ಕಿರಿಯರನ್ನಾದರೂ ಒಟ್ಟಿಗೆ ತಂದಿದ್ದರೆ ಕನಿಷ್ಠ ಹೊಸ ತಲೆಮಾರು ಬೇರೆ ರೀತಿಯಲ್ಲಿ ಚಳುವಳಿ ಮುನ್ನೆಡೆಸಲು ದಾರಿ ಹಾಕಿದ ಹಾಗೆ ಆಗುತ್ತಿತ್ತು. ಆದರೆ ತಮ್ಮ ಮೂಗಿನ ನೇರಕ್ಕೆ ನಡೆದು ಎಡವಿದ್ದಾರೆ. ಈ ಎಡವುವಿಕೆ ಈ ಎರಡೂ ಸಮುದಾಯಗಳ ನಡುವೆ ಈಗಿರುವ ಬಿರುಕನ್ನು ಇನ್ನಷ್ಟು ಹೆಚ್ಚು ಮಾಡದಿರಲಿ.

ಎಡಗೈ-ಬಲಗೈ ಸಮುದಾಯಗಳ ನಡುವಿನ ಬಿರುಕಿಗೆ ಕಾರಣವಾಗಿರುವ ಒಳಮೀಸಲಾತಿ ಹಂಚಿಕೆಯ ಜಗಳ ಎಲ್ಲಿಗೂ ಮುಟ್ಟದೇ ಎಲ್ಲಿದಿಯೊ ಅಲ್ಲಿಯೇ ‌ನಿಂತಿದೆ. ಇದು ಆದಷ್ಟು ಬೇಗ ಇತ್ಯರ್ಥವಾಗಬೇಕು. ಸಮಾನತೆಗಾಗಿ ದಲಿತರ ಒಳಗೆ ಒಳಮೀಸಲಾತಿ ಜಾರಿಯಾಗುವುದು ಅಗತ್ಯ ಎನ್ನುವುದನ್ನು ಅರ್ಥಮಾಡಿಕೊಂಡೇ ಈ ಸಮುದಾಯಗಳು ಒಟ್ಟಾಗಿ ಹೋರಾಡಬೇಕಿದೆ. ಇದಕ್ಕೆ ಎರಡೂ ಸಮುದಾಯಗಳ ನಾಯಕತ್ವ ಸ್ವಲ್ಪ ವಿಶಾಲ ಹೃದಯವಂತಿಕೆಯನ್ನು ತೋರಿಸಬೇಕಿದೆ. ಏಕೆಂದರೆ ಇವತ್ತು ಕೇವಲ ಮೀಸಲಾತಿ ಹಂಚಿಕೆಯ ಸಮಸ್ಯೆ ‌ಮಾತ್ರ ದಲಿತ ಸಮುದಾಯದ ಮುಂದೆ ಇಲ್ಲ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಆದರೆ ಪೋಲಿಸ್ ಸ್ಟೇಷನ್, ನ್ಯಾಯಾಲಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಿಲ್ಲದೆ ಬಿದ್ದು ಹೋಗುತ್ತಿವೆ.

ದಲಿತರು ಮೀಸಲಾತಿಯ ಒಳಹಂಚಿಕೆಗೆ ಗುದ್ದಾಡುತ್ತಿರುವಾಗ ಎಷ್ಟೊ ವರ್ಷಗಳಿಂದ ಭರ್ತಿಯಾಗದ ಬ್ಯಾಕ್‌ಲಾಗ್ ಹುದ್ದೆಗಳು ಸರ್ಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸರ್ಕಾರಗಳು ಎಲ್ಲ ಕೆಲಸಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿ ದಲಿತರಿಗೆ ಸಿಗಬೇಕಾದ ಉದ್ಯೋಗದ ಹಕ್ಕುಗಳನ್ನು ವಂಚಿಸುತ್ತಿವೆ. ಮೀಸಲಾತಿ ಹಂಚಿಕೆಯ ಜಗಳದಲ್ಲಿ ಮಾಯವಾಗುತ್ತಿರುವ ಉದ್ಯೋಗಗಳ ಕಡೆ ಗಮನ ಹರಿಸುವುದು ಯಾವಾಗ?

ಇವತ್ತು ಪ್ರತಿನಿತ್ಯದ ಸಾಮಾನ್ಯ ಸುದ್ದಿಯಾಗಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತಾಗಲಿ, ಮೀಸಲಾತಿಯ ಹಿಂದಿರುವ ಸಮಾನತೆಯ ಆಶಯವನ್ನು ಅಣಕಿಸುತ್ತಿರುವ EWS ಕುರಿತಾಗಲಿ, ಕೋಮುವಾದದ ಮುಖವಾಡ ಹೊತ್ತಿರುವ ಬ್ರಾಹ್ಮಣಶಾಹಿಯ ಅಟ್ಟಹಾಸದ ವಿರುದ್ಧವಾಗಲಿ ದಿಟ್ಟ ಪ್ರತಿರೋಧ ಒಡ್ಡಲು ದಲಿತ ಸಮುದಾಯಕ್ಕೆ ಸಾಧ್ಯವಾಗದಿರುವುದು ದಲಿತರೊಳಗಿನ ಒಗ್ಗಟ್ಟಿನ ಕೊರತೆಯಿಂದಾಗಿದೆ.

ಬಹುತೇಕ ಬಲಗೈ ಸಮುದಾಯದ ನಾಯಕರೆ ತುಂಬಿರುವ ಐಕ್ಯತಾ ಸಮಾವೇಶದ ಸಂಚಾಲನ ಸಮಿತಿ ಸ್ವಲ್ಪ ವಿಶಾಲ ಹೃದಯವಂತಿಕೆಯನ್ನು ತೋರಿಸಿ ತಮ್ಮ ಸೋದರ ಸಮುದಾಯವನ್ನು ಒಳಗೊಳ್ಳಬೇಕಿತ್ತು. ಎಡಗೈ-ಬಲಗೈ ಬಿಕ್ಕಟ್ಟನ್ನು ನಿರ್ಲಕ್ಷ್ಯ ಮಾಡಿದಷ್ಟೂ ಒಡಕು ಜಾಸ್ತಿಯಾಗುವುದೇ ವಿಮಃ ಕಡಿಮೆಯಾಗುವುದಿಲ್ಲ. ಆದರೆ ದಸಂಸದ ಐಕ್ಯ ಸಮಾವೇಶ ಎಡವಿರುವ ಕಾರಣಕ್ಕೆ ಸಮಾವೇಶವನ್ನು ಧಿಕ್ಕರಿಸುವುದು ಸರಿಯಾದ ನಡೆಯಲ್ಲ‌. ಏಕೆಂದರೆ ಈ ನಡೆಗಳನ್ನು ನಾಯಕತ್ವದ ಬಿಕ್ಕಟ್ಟುಗಳೆಂದು ನೊಡಬೇಕೆ ಹೊರತು ಸಮುದಾಯಗಳ ಬಿಕ್ಕಟ್ಟುಗಳನ್ನಾಗಿಸಬಾರದು.

ಬಾಬಾಸಾಹೇಬರು ಅಗಲಿದ ಡಿಸೆಂಬರ್ 6 ನೇ ತಾರೀಕು ನಡೆಯುವ ಸಮಾವೇಶ ಬಾಬಾಸಾಹೇಬರ ಕಾರಣಕ್ಕಾಗಿ ಮಹತ್ವದ್ದು‌‌. ಎಡಗೈ-ಬಲಗೈ ಸಮುದಾಯಗಳ ನಡುವೆ ಎಷ್ಟೇ ಅಸಮಾಧಾನಗಳಿದ್ದರೂ ಬಾಬಾಸಾಹೇಬರ ಆಶಯಕ್ಕಾಗಿ ಯಾರೇ ಒಗ್ಗೂಡುವ ಮಾತಾಡಿದರು ಅದನ್ನು ಬೆಂಬಲಿಸಿ ಜೊತೆಗೂಡಬೇಕಾದ ಅಗತ್ಯ ಎರಡೂ ಸಮುದಾಯಗಳಿಗಿದೆ. ಮತ್ತು ಇದು ಈ ಕಾಲಕ್ಕೆ ಅನಿವಾರ್ಯ ಕೂಡ.

ಈ ಸಮಾವೇಶದಿಂದ ಯಾರಿಗೋ ಆಗಬಹುದಾದ ರಾಜಕೀಯ ಲಾಭ ನಷ್ಟಗಳಿಗಿಂತ ಸಮಾವೇಶ ದಲಿತ ಸಮುದಾಯಕ್ಕೆ ತರಬಹುದಾದ ಚೈತನ್ಯ ನನಗೆ ಬಹಳ ಮುಖ್ಯ.

ದಸಂಸ ಕರ್ನಾಟಕದಲ್ಲಿ ತಳಸಮುದಾಯಗಳಿಗೆ ಆತ್ಮಗೌರವವನ್ನು ತಂದುಕೊಡಲು ದುಡಿದ ಸಂಘಟನೆ. ಮಹಾರಾಷ್ಟ್ರದ ನೆಲದಲ್ಲಿ ದಲಿತ ಚಳುವಳಿ ಹುಟ್ಟಿದ ಮೂರೇ ವರ್ಷಕ್ಕೆ ಒಡದು ಹೋದ ಇತಿಹಾಸವಿದೆ. ಆದರೆ ಕರ್ನಾಟಕದಲ್ಲಿ ಎಡಗೈ-ಬಲಗೈ ಸೇರಿದಂತೆ ಎಲ್ಲ ದಲಿತ-ದಮನಿತರು, ಸಮಾನತೆಯ ಆಶಯವುಳ್ಳ ಎಲ್ಲ ಸಮುದಾಯದ ಜನ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ದಸಂಸವನ್ನು ಒಗ್ಗೂಡಿ ನಡೆಸಿದ್ದಾರೆ. ಆ ದಶಕಗಳ ದಸಂಸದ ಬಗ್ಗೆ ಈ ತಲೆಮಾರಿನವರು ಗೌರವ, ಕೃತಜ್ಞತೆ ಇಟ್ಟುಕೊಂಡೆ ಈ ಸಮಾವೇಶವನ್ನು ನೋಡಬೇಕಿದೆ.

ವೈಯುಕ್ತಿಕವಾಗಿ ನನಗೆ ಈ ಸಮಾವೇಶವನ್ನು ಆಯೋಜಿಸುತ್ತಿರುವ ರೀತಿಯ ಬಗ್ಗೆ ಅಸಮಾಧಾನವಿದೆ. ಆದರೆ ಸಮಾವೇಶದ ಹಿಂದಿರುವ ಆಶಯದ ಬಗ್ಗೆ ಗೌರವ ಇದೆ. ಹಾಗಾಗಿ ಈ ಸಮಾವೇಶ ಯಶಸ್ವಿಯಾಗಲಿ ಎಂದು ಬಯಸುತ್ತೇನೆ.