ಸಂತ ವಿನೋಬಾ ಭಾವೆಯವರ ‘ಭೂದಾನ’ ಆಂದೋಲನಕ್ಕೆ ನಮ್ಮ ಅಳಿಲು ಕಾಣಿಕೆ (ಹಿಂದಿನ ‘ಕಿನ್ನರಿ’ಯಿಂದ)
ಸಂತ ವಿನೋಬಾ ಭಾವೆಯವರ ‘ಭೂದಾನ’ ಆಂದೋಲನಕ್ಕೆ ನಮ್ಮ ಅಳಿಲು ಕಾಣಿಕೆ (ಹಿಂದಿನ ‘ಕಿನ್ನರಿ’ಯಿಂದ) dr-chikkanna-ias-vinoba-bhave-kinnari-bevarahani
ಸಂತ ವಿನೋಬಾ ಭಾವೆಯವರ ‘ಭೂದಾನ’ ಆಂದೋಲನಕ್ಕೆ
ನಮ್ಮ ಅಳಿಲು ಕಾಣಿಕೆ (ಹಿಂದಿನ ‘ಕಿನ್ನರಿ’ಯಿಂದ)
ನಮ್ಮೂರಲ್ಲಿ ಇಬ್ಬರು ಅಳಲೆಕಾಯಿ ಪಂಡಿತರಿದ್ದರು. ಒಬ್ಬರನ್ನು ಪಂಡಿತ ಚೌಡಪ್ಪ ಎಂತಲೂ, ಬೂದಿ ಚೌಡಪ್ಪ ಎಂತಲೂ ಕರೆಯುತ್ತಿದ್ದರು. ಅವರು ನಮ್ಮ ಮನೆಯ ಮುಂದೆ ವಾಸವಾಗಿದ್ದರು. ಇವರು ಹೆಚ್ಚುಕಮ್ಮಿ ಮಂತ್ರವಾದಿಯಂತೆ ಕೆಲಸ ಮಾಡುತ್ತಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರೂ ದೆವ್ವ, ಭೂತ ಬಿಡಿಸೋದು, ಅಂಗೈ ನೋಡಿ ಶಾಸ್ತ್ರ ಹೇಳೋದು, ಮಾಟಮಂತ್ರ ಮಾಡುತ್ತಿದ್ದರು. ಅಂಗೈಯಲ್ಲಿ ಬೂದಿಯನ್ನಿಟ್ಟುಕೊಂಡು ಭೂತಬಿಡಿಸಲು ಬೂದಿಯನ್ನು ಮುಖಕ್ಕೆಲ್ಲಾ ಊದಿ 'ದೆವ್ವ ಹೋಯ್ತು, ಇನ್ನು ಹೋಗು ಎನ್ನುತ್ತಿದ್ದರು. ಆದ್ದರಿಂದಲೇ ಜನ ಅವರನ್ನು ಬೂದಿ ಚೌಡಪ್ಪ ಎಂದು ಕರೆಯುತ್ತಿದ್ದರು.
ಇನ್ನೊಬ್ಬರು ರಂಗನಾಯ್ಕ ಅಂತ. ನಮ್ಮೂರ ಚೌಡಮ್ಮನ ದೇವಸ್ಥಾನದ ಎದುರು, ಶಾನುಭೋಗ ಶಾಮಣ್ಣನವರ ಮನೆಯ ಪಕ್ಕದಲ್ಲಿ ಇವರ ವಾಸ, ನಾನು ಶಾಲೆಗೆ ಬಡವನಹಳ್ಳಿಗೆ ಹೋಗುವಾಗ ಇವರ ಮನೆಯ ಮುಂದೆಯೇ ನಡೆದು ಹೋಗುತ್ತಿದ್ದೆ. ಇವರು ಊರಿನ ಜನಕ್ಕೆ ಯಾವುದೇ ಖಾಯಿಲೆ ಬಂದರೂ ಆಯುರ್ವೇದ ಪದ್ಧತಿಯಲ್ಲಿ ಔಷಧಿಗಳನ್ನು ತಯಾರಿಸಿ ರೋಗಿಗಳಿಗೆ ಕುಡಿಸಿ ಗುಣಪಡಿಸುತ್ತಿದ್ದರು.
ರಂಗನಾಯ್ಕರನ್ನು ಕಂಡರೆ ನಮ್ಮ ತಾಯಿಯವರಿಗೆ ತುಂಬಾ ಗೌರವ, ತಂದೆಯವರಿಗೂ ಅಷ್ಟೇ, ಆದರೂ ವ್ಯಕ್ತ ಮಾಡುತ್ತಿರಲಿಲ್ಲ. ನನಗೆ ಬಾಲ್ಯದಲ್ಲಿ ಖಾಯಿಲೆ ಕಸಾಲೆ ಬಂದರೆ ಸೀದ ಕರೆದುಕೊಂಡು ಹೋಗುತ್ತಿದ್ದು ರಂಗನಾಯ್ಕರಲ್ಲಿಗೆ ನಾನು ಹುಟ್ಟಿದ ಮೊದಲೆರಡು ವರ್ಷ ಬಿಸಿಲಿಗೆ ಕಣ್ಣು ಬಿಡಲಾಗುತ್ತಿರಲಿಲ್ಲವಂತೆ. ಅದಕ್ಕೆ ಸರಾ ಮನೆಯ ಕತ್ತಲೆ ಕೋಣೆಯಲ್ಲಿಯೇ ಇರುತ್ತಿದ್ದೆ ಎಂದು ಅಮ್ಮ ನನಗೆ ಹೇಳುತ್ತಿದ್ದರು. ರಂಗನಾಯ್ಕ ಅವರು ಕತ್ತೆ ಹಾಲನ್ನು ನನ್ನ ಹೊಟ್ಟೆಗೆ ಕುಡಿಸಿ, ಕಣ್ಣಿಗೆ ಪಟ್ಟು ಮಾಡಿ ಕಟ್ಟುತ್ತಿದ್ದರೆಂದು, ಮೂರನೇ ವರ್ಷಕ್ಕೆ ಔಷಧೋಪಚಾರಗಳಿಂದ ಈ ಖಾಯಿಲೆ ವಾಸಿಯಾಯಿತೆಂದು ಅಮ್ಮನ ಅಂಬೋಣ,
ರಂಗನಾಯ್ಕರ ಪತ್ನಿ ರಂಗವ್ವ ದೇವತೆಯಂತಹ ಹೆಂಗಸು. ಅವರಿಗೆ ಒಬ್ಬನೇ ಮಗ. ನನಗಿಂತ ಹಿರಿಯ, ಶಾಲೆಗೆ ಮಾತ್ರ ಕಳುಹಿಸುತ್ತಿರಲಿಲ್ಲ. ಅವರು ಮಗನಿಗಿಂತಲೂ ಹೆಚ್ಚು ನನ್ನನ್ನು ಪ್ರೀತಿಸುತ್ತಿದ್ದರು, ಕಾರಣ ಗೊತ್ತಿಲ್ಲ. ವಾರಕ್ಕೊಮ್ಮೆ ಬಾಡು ಬೇಸೋರು. ಕಾಡಿನಲ್ಲಿ ಮೊಲ, ಹಂದಿ ಬೇಟೆಯಾಡೋರು. ದೊಡ್ಡ ಹಳ್ಳದಲ್ಲಿ ಯಥೇಚ್ಛವಾಗಿ ನೀರು ಹರಿದು ಮಳೆ ಮೀನುಗಳ ಸಂತತಿ ಹೆಚ್ಚಾದಾಗ ಎರಡು ಮೂರು ಬಲೆ ಹಾಕಿ ಮೀನು ಹಿಡಿದು ಶುದ್ಧಿ ಮಾಡಿ, ಸಾರು ಮಾಡಿ ರಾತ್ರಿ ನಮ್ಮ ಮನೆಗೆ ತಪ್ಪದೆ ಕಳುಹಿಸುತ್ತಿದ್ದರು. ಖುಷಿಯಿಂದ ನಾವು ಊಟ ಮಾಡುತ್ತಿದ್ದೆವು.
ಹೀಗಿರುವಾಗ, ನಾನು 7ನೇ ಕ್ಲಾಸಿನಲ್ಲಿದ್ದು ಶಾಲೆಗೆ ಇನ್ನೇನು ರಜೆ ಕೊಡ್ತಾರೆ ಎಂದು ಅಂದುಕೊಳ್ತಾ ಇರುವಾಗ, ಶಾಲೆಗೆ ಹೋಗುತ್ತಿದ್ದ ಮೂವರು ಹುಡುಗರಿಗೆ ಗದ್ದಬಾಲಮ್ಮ ಖಾಯಿಲೆಯ ವೈರಸ್ (ರೋಗಾಣು) ಅಂಟಿಕೊಂಡಿತು. ನನಗೆ, ನಮ್ಮ ಚಿಕ್ಕಣ್ಣ ಕಾಕನ ಮಗ ಒಬ್ಬನಿಗೆ, ಮತ್ತೊಬ್ಬ ಚಿಕ್ಕಪ್ಪನ ಮಗ ಒಬ್ಬನಿಗೆ. ನಮ್ಮ ಮನೆಯ ಮುಂದಿನ ದನಕಟ್ಟುವ ಚಪ್ಪರದ ಕೆಳಗೆ ಸುತ್ತ ಬೇವಿನ ಸೊಪ್ಪಿನ ಹಾಸಿಗೆ ಮಾಡಿದ್ದರು. ನಮಗೆಲ್ಲಾ ಮೈತುಂಬಾ ಬೇವಿನ ಸೊಪ್ಪನ್ನು ಅರೆದು ಲೇಪಿಸಿ, ಎರಡು ಅಡಿ ಅಂತರದಲ್ಲಿ ನಮ್ಮನ್ನು ರಂಗನಾಯ್ಕರ ನೇತೃತ್ವದ ತಂಡ ಮಲಗಿಸಿ Quarantaine ಮಾಡಿದರು. ನಮ್ಮ ಗಲ್ಲ ಊದಿಕೊಂಡು, 5 ದಿನ ಬಿಡದೆ ಜ್ವರ ಬರುತ್ತಿತ್ತು. ಬೀಜಗಳ ಬಾವು ಬಂದು ಮೂತ್ರ ವಿಸರ್ಜನೆಗೂ ಕಷ್ಟವಾಗುತ್ತಿತ್ತು. ನಮ್ಮ ಹತ್ತಿರ ಯಾರೂ ಸುಳಿಯದಂತೆ, ನಮ್ಮ ಉಸಿರು ಇತರರನ್ನು ಸೋಕದಂತೆ ಎಚ್ಚರ ವಹಿಸಿದರು. ಹೊಟ್ಟೆಗೆ ಗಂಜಿ ಎಳನೀರು ಇಷ್ಟೇ ಆಹಾರ, ಅಮ್ಮ ದಿನಾಲೂ ಅಳೋರು, ಅಕ್ಕನೂ ಅವರ ಜೊತೆ ಸೇರಿಕೊಳ್ಳೋರು. ಅವರ ಜತೆ ನಮ್ಮ ಚಿಕ್ಕಮ್ಮಗಳೂ ಸೇರಿಕೊಳ್ಳೋರು. ಮುಂದೇನು? ಅಂತ ನಮ್ಮಮ್ಮ ರಂಗನಾಯ್ಕರನ್ನು ಕೇಳಿದಾಗ ಈ ರೋಗಕ್ಕೆ ಮದ್ದಿಲ್ಲವ್ವ, ಅದರಷ್ಟಕ್ಕೆ ಅದೆ 7 ದಿನ ಇದ್ದು ಬಿಟ್ಟೋಯ್ತದೆ. ತಿಪ್ಪನಹಳ್ಳಿ ಚೌಡಮ್ಮ, ಮಧುಗಿರಿ ಮಾರಮ್ಮ, ಧರ್ಮಸ್ಥಳದ ಮಂಜುನಾಥನಿಗೆ ಮೀಸಲು ಕಟ್ಟಿ ಎಂದು ಹೇಳಿ ಈ ಖಾಯಿಲೆ ಬಂದವರಿಗೆ ಮಕ್ಕಳಾಗೋದು ಅನುಮಾನ ಎಂದರು. ಅದು ನನ್ನ ವಿಷಯದಲ್ಲಿ ನಿಜವೂ ಆಯಿತು.
ಒಂದು ವಾರದ ನಂತರ ಈ ಖಾಯಿಲೆಯಿಂದ ನಾವೆಲ್ಲ ಗುಣಮುಖರಾಗಿದ್ದೆವು. ಅಷ್ಟರಲ್ಲಿ ಶಾಲೆಗೆ ಬೇಸಿಗೆ ರಜೆ ಬಂತು, ಗದ್ದಬಾಲಮ್ಮ ಖಾಯಿಲೆ ಸೋಂಕಿದ ನಂತರ, ಊರಿಗೆ ಬಂದಿದ್ದ ಅಕ್ಕ, ನಾನು ಆದ್ದರಿಂದ ಪರಿಪೂರ್ಣ ಗುಣಮುಖನಾಗುವ ತನಕ 15 ದಿನಗಳವರೆಗೂ ಶಿವನಹಳ್ಳಿಯಲ್ಲಿ ಇದ್ದು ನನ್ನ ಆರೈಕೆ ನೋಡಿಕೊಂಡರು. ಭಾವ ವಕೀಲಪ್ಪನವರು ಬಂದು ಹೋಗಿ ಮಾಡುತ್ತಿದ್ದರು. ಹೀಗೆ ಬರುವಾಗ ಒಂದೆರಡು ಆಳುಗಳನ್ನು ಭಕ್ತರಹಳ್ಳಿಯಿಂದ ಕರೆದುಕೊಂಡು ಬಂದು ನಮ್ಮ ವ್ಯವಸಾಯ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದರು. ಅವರ ಸಹಾಯದಿಂದ ಆ ವರ್ಷ ಬಳೆಹಳ್ಳಿ ಹತ್ತಿರದ 30 ಗುಂಟೆ ಜಮೀನಿನಲ್ಲಿ ಭತ್ತದ ಗದ್ದೆ ಮಾಡಿದ್ದೆವು. ಸೊಂಪಾಗಿ ಬೆಳೆದಿದ್ದ ಹೊಂಗೆ ಸೊಪ್ಪಿನ ಕೊಂಬೆಗಳನ್ನು ಕಡಿಸಿ ಮಡಿಮಾಡಿದ ಗದ್ದೆಗೆ ತುಳಿದು, ನಂತರ ಪೈರು ನಾಟಿ ಮಾಡಿದ್ದರಿಂದ ಗದ್ದೆ ಹುಲುಸಾಗಿ ಬೆಳೆಯಿತು. ಜೂನ್ ತಿಂಗಳಲ್ಲಿ ಕಟಾವು ಮಾಡಿದಾಗ 30 ಪಲ್ಲ ಭತ್ತ ಒದಗಿ, 5 ಪಲ್ಲ ಕಣದಲ್ಲಿ ಕೆಲಸ ಮಾಡಿದವರಿಗೂ, ಪರಿವಾರದವರಿಗೂ ಹಂಚಿ 25 ಚೀಲ ಭತ್ತವನ್ನು ಮನೆಗೆ ಸಾಗಿಸಿದೆವು. ಕಣಜ, ವಾಡೆ ಎಲ್ಲ ತುಂಬಿಸಿ 10 ಚೀಲಕ್ಕಾಗುವಷ್ಟು ಭತ್ತವನ್ನು ಗೋಣಿ ಚೀಲದಲ್ಲಿ ತುಂಬಿ ನಡುಮನೆಯಲ್ಲಿ ಜೋಡಿಸಿದ್ದೆವು. ಬರೀ ರಾಗಿ ಮುದ್ದೆ, ನವಣೆ ಮುದ್ದೆ, ಆರಕದ ಅನ್ನ ತಿಂದು ಬಾಯಿ ಕೆಟ್ಟಿದ್ದ ನಮಗೆ ನೆಲ್ಲಕ್ಕಿ ಅನ್ನ ಉಣ್ಣುವ ಯೋಗ ಬಂದಿತು.
ಭತ್ತದ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡ ನಂತರ ಕಾಕತಾಳೀಯವೋ ಎಂಬಂತೆ ಅಕ್ಕ ಗರ್ಭವತಿಯಾದರು. ಮೂರು ಗಾಡಿಗಳಲ್ಲಿ ನಮ್ಮ ಬಂಧು-ಬಳಗದವರು ಭಕ್ತರಹಳ್ಳಿಗೆ ಹೋಗಿ ವಿಜೃಂಭಣೆಯಿಂದ ಸೀಮಂತ ಮಾಡಿ, ಮಾರನೆ ದಿನ ಅವರನ್ನು ತಿಪ್ಪನಹಳ್ಳಿಗೆ ಕರೆದುಕೊಂಡು ಬಂದೆವು.
1956ಲ್ಲಿ ಸಂತ ವಿನೋಬಾ ಭಾವೆಯವರು ಬಡವನಹಳ್ಳಿಗೆ ಬಂದು ಕ್ಯಾಂಪ್ ಮಾಡಿದ್ದರು. ಅವರು 'ಭೂದಾನ' ಎಂಬ ಚಳುವಳಿಯ ಮುಖೇನ ಹೆಚ್ಚು ಭೂಮಿ ಇರುವವರಿಂದ ಭೂಮಿಯನ್ನು ದಾನವಾಗಿ ಪಡೆದು, ಅದನ್ನು ಭೂರಹಿತ ಕೃಷಿಕಾರ್ಮಿಕರಿಗೆ ಹಂಚುತ್ತಿದ್ದರು. ನಮ್ಮ ತಂದೆಯವರು ಅವರ ಮನವಿಯಂತೆ ದೊಡ್ಡ ಮನಸ್ಸು ಮಾಡಿ, ದಂಡಿನದಿಬ್ಬದ ವಡ್ಡರಹಟ್ಟಿಯ ಹತ್ತಿರದ ಎರಡು ಎಕರೆ ದಿನ್ನೆ ಜಮೀನನ್ನು ಭೂದಾನ ಮಾಡಿ ಹಾರ ಹಾಕಿಸಿಕೊಂಡರು. ನಂತರ ಅದನ್ನು ಸರ್ಕಾರ ಯಾರಿಗೆ ನೀಡಿತು ಎನ್ನುವ ಮಾಹಿತಿ ನಮಗಿಲ್ಲ. ಪಬ್ಲಿಕ್ ಪರೀಕ್ಷೆ 8ನೇ ತರಗತಿಯ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ ಇದೆ. ಸ್ಕೂಲಿಗೆ ಒಳ್ಳೇ ಫಲಿತಾಂಶ ಬರಬೇಕು, ನೀವೆಲ್ಲಾ ಹುಡುಗರನ್ನು ತಯಾರು ಮಾಡಿ ಎಂದು ಹೆಡ್ ಮಾಸ್ತರ್ ಕೆ.ಜಿ. ರಂಗಯ್ಯನವರು ಎಲ್ಲಾ ಉಪಾಧ್ಯಾಯರಿಗೆ ಸೂಚನೆ ನೀಡಿದರು. ನಮ್ಮ ಕ್ಲಾಸ್ ಟೀಚರ್ ಆಗಿದ್ದ ರಂಗಶಾಮಯ್ಯನವರಿಗೂ ಸಹ ಇಂಥದ್ದೇ ಸೂಚನೆ ನೀಡಿ ಶನಿವಾರ-ಭಾನುವಾರ ಸ್ಪೆಷಲ್ ಕ್ಲಾಸ್‌ಗೆ ವ್ಯವಸ್ಥೆ ಮಾಡಿದ್ದರು. ಬಡವನಹಳ್ಳಿಯಲ್ಲಿ ದೊಡ್ಡ ಸಂತೆ ಪ್ರತಿ ಸೋಮವಾರ ನಡೆಯುತ್ತಿತ್ತು. ಊರಿನ ಪೂರ್ವಕ್ಕೆ ಇದ್ದ ಗುಂಡುತೋಪಿನ ನೆರಳಿನಲ್ಲಿ ಸಂತೆ. ಸಂತೆಯಲ್ಲಿ ಮಾರುತ್ತಿದ್ದ ಪಕೋಡ ವಾಸನೆ ಸ್ವಲ್ಪ ದೂರದಲ್ಲಿದ್ದ ಶಾಲೆಯವರೆಗೂ ಹರಡುತ್ತಿತ್ತು. ಹೆಂಗಾದರೂ ಮಾಡಿ ಹಣ ಹೊಂದಿಸಿಕೊಂಡು ಸಂತೆ ದಿನ ಪಕೋಡ ಕಟ್ಟಿಸಿಕೊಂಡು ನಾನು, ಜಯಣ್ಣ, ಉಪೇಂದ್ರ, ಫಕ್ರು ಎಲ್ಲ ಸೇರಿ ಬಡವನಹಳ್ಳಿಯಿಂದ ತಿಪ್ಪನಹಳ್ಳಿಯವರೆಗೂ ತಿನ್ನುತ್ತಾ ಬಾಯಿ ಚಪ್ಪರಿಸುತ್ತಾ ಮನೆ ಸೇರುತ್ತಿದ್ದೆವು. ಮಿಕ್ಕ ದಿನ ಮನೆಗೆ ಬಂದು ನೆಲುವು, ಮಣ್ಣಿನ ಸೋರೆ ಎಲ್ಲ ತಡಕಿ, ಅಮ್ಮ ಏನಾದರೂ ಇಟ್ಟಿದ್ದಾರಾ ಎಂದು ಹುಡುಕಾಡುತ್ತಿದ್ದೆವು. ಬೆಳಗ್ಗೆ ಮುದ್ದೆ ಮಾಡಿದ್ದ ಮಡಕೆಯ ಬಾಯನ್ನು ಒಲೆಯ ಬಿಸಿ ತಾಗುವಂತೆ ಗುಬರು ಹಾಕಿ ಹೊಲಕ್ಕೆ ಹೋಗುವ ಅಭ್ಯಾಸ ಅಮ್ಮನದು. ಆ ಮಡಕೆಯನ್ನು ತೆರೆದು ನೋಡಿದರೆ, ಬಿಸಿಗೆ ಮುದ್ದೆ ಮಾಡಿ ತಳದಲ್ಲಿ ಅಂಟಿಕೊಂಡಿದ್ದ ಹಿಟ್ಟು ರೊಟ್ಟಿಯ ತರಹ ಚಕ್ಕಳವಾಗಿ ಬೀಳುತ್ತಿತ್ತು. ಇದನ್ನು ಕೆಲವು ಕಡೆ `ಸೀಕು' ಅಂತಾರೆ. ಸೀಕಿನಂತಹ ಈ ರೊಟ್ಟಿಯನ್ನು ಉಪ್ಪಿನ ಕಾಯಿ ಜೊತೆ ತಿಂದು ಹಸಿವು ಇಂಗಿಸಿಕೊಂಡ ಬಾಲ್ಯದ ಸವಿನೆನಪಿನ ಅನೇಕ ಉದಾಹರಣೆಗಳಿವೆ.
(ಮುಂದಿನ ‘ಕಿನ್ನರಿ’ಗೆ)