ಪ್ರಗತಿ-ವಿಕಾಸದತ್ತ ಸಾಗುತ್ತಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಕುಬ್ಜವಾಗುತ್ತಿರುವ ಸಮಾಜ ನಾ-ದಿವಾಕರ
ವಿಕಾಸಶೀಲ ದೇಶವೂ- ಸಾಮಾಜಿಕ ಅವನತಿಯೂ
ನಾ ದಿವಾಕರ
ಯಾವುದೇ ನಾಗರಿಕತೆಯಲ್ಲಾದರೂ, ದೇಶಕಾಲಗಳನ್ನು ಮೀರಿ ಚರಿತ್ರೆಯೊಳಗೆ ಇಣುಕಿ ನೋಡಿದಾಗ, ಆ ಸಮಾಜದೊಳಗಿನ ಹೊಸ ಹೊಳಹು ಕಾಣುತ್ತದೆ. ಭೌತಿಕವಾಗಿ ಈ ಹೊಳಹು ಕಾಣುವುದು ಸಹಜ. ಆದರೆ ಸಾಂಸ್ಕೃತಿಕವಾಗಿ, ಅಧ್ಯಾತ್ಮಿಕ ನೆಲೆಯಲ್ಲಿ ಅಥವಾ ಸಮಸ್ತ ಸಮಾಜದ ನಿತ್ಯ ಬದುಕಿನ ವಾಸ್ತವಗಳಲ್ಲಿ ಒಂದು ಹೊಸ ಬೆಳಕು, ಭಿನ್ನವಾದ ಹಾದಿ , ಉನ್ನತೀಕರಣಗೊಂಡ ಸಂಸ್ಕೃತಿಯ ಛಾಯೆಯನ್ನು ಕಾಣಬೇಕಾದರೆ, ಅದರ ಒಳಹೊಕ್ಕು ನೋಡಬೇಕು. ಆಧುನಿಕತೆ ಎಂದು ನಾವು ಕರೆಯುವ ನಾಗರಿಕತೆಗಳ ಉನ್ನತ ಹಂತದಲ್ಲಿ ಈ ಛಾಯೆಯೇ ಪ್ರಧಾನವಾಗಿ ಅಷ್ಟದಿಕ್ಕುಗಳಲ್ಲೂ ದಟ್ಟವಾಗಿ ಆವರಿಸಿರುವುದನ್ನು ಅಪೇಕ್ಷಿಸುವುದು ಒಂದು ಸಾಮಾಜಿಕ ಲಕ್ಷಣ.
ಅಂದರೆ ಮನುಷ್ಯ ಸಮಾಜದೊಳಗಿನ ಪರಸ್ಪರ ಸಂಬಂಧಗಳ ನಿರ್ವಚನೆ, ಬದುಕಿನ ಹಂದರದಲ್ಲಿ ಜೊತೆಗೂಡಿ ಸಾಗುವ ಹಾದಿ, ಪ್ರಾಚೀನ ಜೀವ ವಿರೋಧಿ ಮೌಲ್ಯಗಳನ್ನು ತ್ಯಜಿಸಿ ಉನ್ನತ ಜೀವನಾದರ್ಶಗಳನ್ನು ಅಳವಡಿಸಿಕೊಂಡ ಸಮಾಜದ ಒಳಚೌಕಟ್ಟು (Inner frame) ಮತ್ತು ಬಹುಮುಖ್ಯವಾಗಿ ಮಧ್ಯಕಾಲೀನ ಯುಗದ ಜನಾಂಗೀಯ ಭೇದ, ಲಿಂಗ ಭೇದ, ಮತಭೇದ, ಶ್ರಮ ಭೇದ, ಜಾತಿ ಭೇದಗಳನ್ನು ದಾಟಿ ʼ ನಾವು ಮನುಜರು ʼ ಎಂಬ ಸದ್ಭಾವನೆಯನ್ನು ಬಿಂಬಿಸುವ ಆಧ್ಯಾತ್ಮಿಕ ಭೂಮಿಕೆ ಹಾಗೂ ಇವೆಲ್ಲವನ್ನೂ ತನ್ನೊಳಗೆ ಅವಿಸಿಟ್ಟುಕೊಂಡ ಒಂದು ಸಾಂಸ್ಕೃತಿಕ-ಧಾರ್ಮಿಕ ಔದಾತ್ಯ – ಈ ಲಕ್ಷಣಗಳನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯವಾದರೆ ಅಂತಹ ಸಮಾಜವನ್ನು ಮುಂದುವರೆದ ಅಥವಾ ಪ್ರಗತಿಶೀಲ ಸಮಾಜ ಎಂದು ವ್ಯಾಖ್ಯಾನಿಸಲು ಸಾಧ್ಯ.
ಬಹುಶಃ ಸಾವಿರಾರು ವರ್ಷಗಳ ನಾಗರಿಕತೆಯನ್ನು ಪ್ರತಿನಿಧಿಸುವ ವಿಶ್ವ ಸಮುದಾಯದಲ್ಲಿ, ಯಾವುದೇ ದೇಶದಲ್ಲೂ ಈ ಎಲ್ಲ ಲಕ್ಷಣಗಳನ್ನು ಗುರುತಿಸಲು ಸಾಧ್ಯವಿಲ್ಲ. 2025ರಲ್ಲಿ ನಿಂತು ಈ ಮಾತುಗಳನ್ನಾಡುವಾಗ ಮುಜುಗರ-ಲಜ್ಜೆ ಮೂಡಿದರೆ ಅಚ್ಚರಿಯೇನಿಲ್ಲ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೂ ಈ ಲಜ್ಜೆಗೆ ಕಾರಣ. ಆಧುನಿಕ ಜಗತ್ತಿನಲ್ಲಿ ಅಭಿವೃದ್ಧಿ ಅಥವಾ ಪ್ರಗತಿ ಎಂಬ ಕಲ್ಪನೆಯನ್ನು ಭೌಗೋಳಿಕ ರಕ್ಷಣಾ ಸಾಮರ್ಥ್ಯ, ಆರ್ಥಿಕ ಮಾರುಕಟ್ಟೆ ಶಕ್ತಿ ಮತ್ತು ಸಾಮಾಜಿಕ ಐಕ್ಯತೆಯ ಮಸೂರದಿಂದ ನೋಡಲಾಗುತ್ತದೆ. ಈ Spectrum ನಲ್ಲಿ ನೋಡುವಾಗ, ಕಳಾಹೀನ ಸಮಾಜಗಳು, ಅಂಚಿನಲ್ಲಿರುವ ಸಮುದಾಯಗಳು ಹಾಗೂ ಆಧುನಿಕತೆಯಿಂದ ಹೊರತಾದ ಸಾಂಸ್ಕೃತಿಕ ನೆಲೆಗಳು ಕಾಣುವುದಿಲ್ಲ. ಇದನ್ನು ದಾಟಿ ನೋಡುವ ವ್ಯವಧಾನ ಮತ್ತು ಕ್ಷಮತೆ, ಸಾಹಿತ್ಯ-ಕಲಾ ಪ್ರಕಾರಗಳ ಮೂಲಕ ಗ್ರಾಂಥಿಕವಾಗಿ ಕಾಣಬಹುದಾದರೂ, ವಾಸ್ತವದಲ್ಲಿ ಸಮಾಜ ಇಂತಹ ದೂರಗಾಮಿತ್ವಗಳಿಗೆ ವಿಮುಖವಾಗಿರುತ್ತದೆ. ಅಥವಾ ವಿಮುಖವಾಗುವಂತೆ ಮಾಡಲಾಗಿರುತ್ತದೆ.
ವಿಕಾಸದ ಹಾದಿಯ ವ್ಯತ್ಯಯಗಳು
ಈ ದೃಷ್ಟಿಯಿಂದ ನಾವು 2025ರ ನವ ಭಾರತವನ್ನು ಮತ್ತು 2047ರ ಸಂಭಾವ್ಯ ʼ ವಿಕಸಿತ ಭಾರತ ʼದ ಕಡೆಗೆ ನೋಡಬೇಕಿದೆ. ಭಾರತದ ವಿಕಾಸ ಮತ್ತು ಅಭಿವೃದ್ಧಿಯನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಪ್ರಜಾಪ್ರಭುತ್ವ ಆಳ್ವಿಕೆ, ಸಾಂವಿಧಾನಿಕ ನಿರ್ವಹಣೆ ಮತ್ತು ಶತಮಾನಗಳ ಜನಸಂಸ್ಕೃತಿಯನ್ನು ಪ್ರತಿನಿಧಿಸುವ ಸ್ವಾವಲಂಬಿ ದೇಶವೊಂದು, ವಿಕಾಸದ ಕನಸು ಕಾಣುತ್ತಿರುವಾಗ , ಈ ʼ ವಿಕಾಸ ʼ ಎಂಬ ಪದವನ್ನು ಹೇಗೆ ನಿರ್ವಚಿಸುವುದು ? ಒಂದು ದೇಶ ಬೆಳೆಯುವುದು ಭೌಗೋಳೀಕವಾಗಿ ಅಲ್ಲ, ತನ್ನ ಗಡಿಗಳನ್ನು ವಿಸ್ತರಿಸುವ ಸಲುವಾಗಿ ನೆರೆ ರಾಷ್ಟ್ರಗಳನ್ನೂ ಆಕ್ರಮಿಸಿ ಬೆಳೆಯುವುದನ್ನು ವಿಕಾಸ ಎನ್ನಲಾಗುವುದಿಲ್ಲ, ಆಧುನಿಕ ಪರಿಭಾಷೆಯಲ್ಲಿ ಸಾಮ್ರಾಜ್ಯಶಾಹಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಆರ್ಥಿಕವಾಗಿ ವಿಶ್ವ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಉನ್ನತ ಮಟ್ಟಕ್ಕೇರಿಸುವುದನ್ನು ನಿರ್ದಿಷ್ಟವಾಗಿ ವಿಕಾಸ ಎನ್ನಲಾಗುವುದಿಲ್ಲ. ಏಕೆಂದರೆ ಈ ವಿಕಾಸದ ಹಾದಿಯಲ್ಲಿ ಹಣಕಾಸು-ಬಂಡವಾಳ-ಮಾರುಕಟ್ಟೆ ಇವುಗಳಿಂದಾಚೆಗೆ ಸಾಮಾನ್ಯ ಜನಜೀವನ-ಜೀವನೋಪಾಯದ ಛಾಯೆಯೂ ಮಾನ್ಯತೆ ಪಡೆಯುವುದಿಲ್ಲ.
ʼ ವಿಕಾಸ ʼ ಎನ್ನುವ ಮೌಲ್ಯಯುತವಾದ ಪದವನ್ನು ಒಂದು ದೇಶಕ್ಕೆ ಅನ್ವಯಿಸುವಾಗ ಆ ದೇಶವನ್ನು ಪ್ರತಿನಿಧಿಸುವ ಸಮಾಜಗಳು, ಸಂಸ್ಕೃತಿಗಳು, ಸಾಂಸ್ಥಿಕ ಮತಗಳು, ಧಾರ್ಮಿಕ ಕಟ್ಟಳೆಗಳು ಮತ್ತು ಸಾಮಾನ್ಯವಾಗಿ ಅನುಸರಿಸಲ್ಪಡುವ ಜೀವನಶೈಲಿ ಇವೆಲ್ಲವೂ ಪ್ರಧಾನ ಮಾನದಂಡವಾಗುವುದು ಸಹಜ. ಮೊಗ್ಗು ಹೂವಾಗುವ ಹಾಗೆ, ಸೀಮಿತ ಸಂಪನ್ಮೂಲ ಮತ್ತು ಅಲ್ಪಜ್ಞಾನದ ನೆಲೆಯಿಂದ ಸಮೃದ್ಧತೆ ಹಾಗೂ ವಿವೇಕಯುತ ಲೋಕಜ್ಞಾನದ ಕಡೆಗೆ ಸಾಗುವ ಒಂದು ಪ್ರಕ್ರಿಯೆಯನ್ನು ವಿಕಾಸ ಎಂದು ನಿರ್ವಚಿಸಬಹುದು. ಇಲ್ಲಿ ಮಾರುಕಟ್ಟೆ ಮತ್ತು ಆರ್ಥಿಕತೆ ಒಂದು ಅಂಶಿಕ ಭಾಗವಾಗಿ ಮಾತ್ರ ಇರಲು ಸಾಧ್ಯ. ಇದಕ್ಕೆ ತದ್ವಿರುದ್ದವಾಗಿ ಆರ್ಥಿಕತೆಯ ಚೌಕಟ್ಟಿನೊಳಗೇ ʼ ವಿಕಾಸ ʼವನ್ನು ನಿರ್ವಚಿಸಿದಾಗ, ಧರ್ಮ, ಸಂಸ್ಕೃತಿ, ಭಾಷೆ, ಪರಿಸರ ಎಲ್ಲವೂ ಖರೀದಿಸಬಹುದಾದ ಸರಕುಗಳಾಗಿಬಿಡುತ್ತವೆ. ಮಾರುಕಟ್ಟೆ ನೀತಿಯ ಅನುಸಾರ ಕೊಳ್ಳುವವರು ವಾರಸುದಾರರಾಗುತ್ತಾರೆ. ಇದು ಪ್ರಾಚೀನ ಅಥವಾ ಮಧ್ಯಕಾಲೀನ ಯುಗದ ರೂಪಾಂತರದಂತೆ ಕಾಣುತ್ತದೆ.
ವಿಶ್ವಮಾನವತೆ ಮತ್ತು ಅಮಾನುಷ ಸಮಾಜ
ಈ ಜಟಿಲ ಸವಾಲುಗಳ ನಡುವೆ ನಾವು ರಾಷ್ಟ್ರಕವಿ ಕುವೆಂಪು ಅವರ ಸ್ಮರಣೆಯಲ್ಲಿ ವಿಶ್ವಮಾನವ ದಿನ ಆಚರಿಸುತ್ತಿದ್ದೇವೆ. ವಿಶ್ವ ಮಾನವ ಧರ್ಮ ಎಂಬ ಕಲ್ಪನೆಗೂ ಚಾಲನೆ ನೀಡಲಾಗಿದೆ. ವಿಶ್ವ+ಮಾನವ=ವಿಶ್ವಮಾನವ. ಈ ಸೂತ್ರವನ್ನು ಭೇದಿಸಿ ನೋಡಿದಾಗ ನಮಗೆ ಪ್ರತಿಯೊಬ್ಬ ಮಾನವನಲ್ಲೂ ( ಇತ್ತೀಚಿನ ಸ್ತ್ರೀ ಸಾಹಿತ್ಯ ವಿಮರ್ಶೆಗಳಲ್ಲಿ ʼ ಮಾನವ ʼ ಎಂಬ ಪದವೇ ಪುರುಷ ಕೇಂದ್ರಿತ ಎಂದೂ ವ್ಯಾಖ್ಯಾನಿಸಲಾಗುತ್ತಿದೆ ) ಸಹಜೀವಿಯನ್ನು ಸೌಹಾರ್ದತೆಯಿಂದ ಕಾಣುವ ಮನಸ್ಥಿತಿ ಅವಶ್ಯವಾಗಿ ನಿರೀಕಿಸಲಾಗುತ್ತದೆ. ವಿಶ್ವದ ಚರಾಚರ ಜೀವಿಗಳಲ್ಲಿ ತಾನೂ ಒಬ್ಬ/ಒಬ್ಬಳು ಎಂಬ ಆಧ್ಯಾತ್ಮಿಕ ಕಲ್ಪನೆ ಇರಬೇಕಾಗುತ್ತದೆ. ಆದರೆ ಸುತ್ತಲಿನ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಗಮನಿಸಿದಾಗ ಕರ್ನಾಟಕ ಮತ್ತು ಭಾರತವೂ ಸಹ ರವೀಂದ್ರನಾಥ ಠಾಗೋರ್ ಮತ್ತು ಕುವೆಂಪು ಅವರ ವಿಶ್ಮಮಾನವ ಕಲ್ಪನೆಯಿಂದ ಬಹಳ ದೂರ ಉಳಿದಿದೆ ಎನಿಸುತ್ತದೆ.
ಭಾರತದಲ್ಲಿ ಸುನಾಮಿ ದುರಂತ ಸಂಭವಿಸಿದ ನಂತರದಲ್ಲಿ, ವರ್ಷಾಂತ್ಯದಲ್ಲಿ ದುರಂತಗಳು ಸಂಭವಿಸುವುದನ್ನು ಅತೀತ ಶಕ್ತಿಯ ಪ್ರಭಾವ ಎಂಬ ಹುಸಿ ನಂಬಿಕೆ ಜನಮಾನಸದಲ್ಲಿ ಬೇರೂರಿದೆ. ಯಾವುದೇ ದುರ್ಘಟನೆ ನಡೆದರೂ ಈ ಕಾರಣವನ್ನು ಮುಂದೊಡ್ಡಲಾಗುತ್ತದೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರ ಪ್ರವೀಣರ ವ್ಯಾಖ್ಯಾನಗಳೂ ಕಾರಣ ಎನ್ನಬಹುದು. ಆದರೆ 2025 ವರ್ಷಾಂತ್ಯದಲ್ಲಿ ಸಂಭವಿಸಿರುವ ದುರಂತಗಳು ನೈಸರ್ಗಿಕ ಪ್ರಕೋಪದಿಂದಲ್ಲ. ಬದಲಾಗಿ ಮಾನವ ಸಮಾಜದೊಳಗಿನ ಕ್ರೌರ್ಯ, ದೌರ್ಜನ್ಯ, ಹಿಂಸೆ ಮತ್ತು ದ್ವೇಷಗಳಿಂದ. ಯಾವುದೇ ಅನ್ಯಾಯ/ದೌರ್ಜನ್ಯದ ಭೀಕರತೆಯನ್ನು ಸಮಾಜ ನೋಡುವ ಮತ್ತು ಪರಿಭಾವಿಸುವ ರೀತಿ, ಅದರೊಳಗಿನ ಮನುಜ ಸೂಕ್ಷ್ಮತೆ ಮತ್ತು ಮಾನವ ಪ್ರಜ್ಞೆಯ ಸೂಚಕವಾಗಿರುತ್ತದೆ. ಮೈಸೂರಿನ ಅರಮನೆಗೆ ಸಮೀಪದಲ್ಲೇ ಬಲೂನು ಮಾರುವ 9 ವರ್ಷದ ಎಳೆ ಬಾಲೆ ಅತ್ಯಾಚಾರ-ಹತ್ಯೆಗೀಡಾದಾಗ ತಣ್ಣಗಿದ್ದ ಸಮಾಜ, ಬಲೂನಿಗೆ ಹೀಲಿಯಂ ಅನಿಲ ತುಂಬಿಸುವಾಗ ಸಂಭವಿಸಿದ ಸ್ಪೋಟದಿಂದ ಒಬ್ಬ ವ್ಯಕ್ತಿ ಮೃತಪಟ್ಟಾಗ ಧಿಗ್ಗನೆ ಎದ್ದು ಕುಳಿತಿದ್ದು, ಈ ಆಕಸ್ಮಿಕದ ವಿಭಿನ್ನ ಆಯಾಮಗಳ ಬಗ್ಗೆ ಯೋಚಿಸಲಾರಂಭಿಸಿದೆ. ಈ ವೈರುಧ್ಯ ಅಚ್ಚರಿಯೇನಲ್ಲ. ಬಲೂನು ಮಾರುತ್ತಿದ್ದ ಅಮಾಯಕ ಹಸುಳೆ ಯಾರಿಗೂ ಸಲ್ಲದ ಅಲೆಮಾರಿ. ಬಲೂನಿಗೆ ಹೀಲಿಯಂ ತುಂಬುವಾಗ ಪ್ರಾಣತೆತ್ತ ವ್ಯಕ್ತಿ ಚುನಾವಣೆಯ ಬತ್ತಳಿಕೆಗೆ ನೆರವಾಗುವ ಜೀವಿ.
ಈ ಪ್ರಸಂಗಗಳನ್ನು ಮೆಲುಕು ಹಾಕುತ್ತಲೇ ವರ್ಷಾಂತ್ಯದಲ್ಲಿ ನಡೆದ ಘಟನೆಗಳತ್ತ ನೋಡಿದಾಗ ನಮ್ಮ ಸಮಾಜ ಎಷ್ಟು ಕುಬ್ಜವಾಗಿದೆ, ಸಾಮಾಜಿಕ ಮೌಲ್ಯಗಳು ಎಷ್ಟು ಪಾತಾಳಕ್ಕೆ ಕುಸಿದಿವೆ, ಸಾರ್ವಜನಿಕ ನೈತಿಕತೆ ಎಷ್ಟು ಭ್ರಷ್ಟವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಡಿಸೆಂಬರ್ 13ರಂದು ಕೇರಳದ ಅಟ್ಟಾಪ್ಪಳಂ ಗ್ರಾಮದಲ್ಲಿ ಕೂಲಿಗಾಗಿ ಛತ್ತಿಸ್‌ಘಡ್ ರಾಜ್ಯದಿಂದ ವಲಸೆ ಬಂದಿದ್ದ 31 ವರ್ಷದ ರಾಮನಾರಾಯಣ್ ಬಘೇಲ್ ಎಂಬ ಕಾರ್ಮಿಕನನ್ನು ಕಳ್ಳತನದ ಆರೋಪದ ಮೇಲೆ ಒಂದು ಗುಂಪು ಥಳಿಸಿ ಗಂಭೀರವಾಗಿ ಗಾಯಗೊಳಿಸಿದೆ. ಥಳಿಸುವ ಮುನ್ನ ಕಾರ್ಮಿಕನನ್ನು “ ನೀನು ಬಾಂಗ್ಲಾದೇಶಿಯೇ ” ಎಂದು ಕೇಳಿರುವುದು ಮತದ್ವೇಷ ಮತ್ತು ಕುರುಡು ದೇಶಾಭಿಮಾನದ ಸಂಕೇತವಾಗಿ ಕಾಣುತ್ತದೆ.
ಇದಾದ ಕೆಲವೇ ದಿನಗಳ ಅಂತರದಲ್ಲಿ ಒಡಿಷಾದ ಸಂಬಾಲ್‌ಪುರ್ ಜಿಲ್ಲೆಯಲ್ಲಿ 30 ವರ್ಷದ ಜೂಯೆಲ್ ಷೇಕ್ ಎಂಬ ವಲಸೆ ಕಾರ್ಮಿಕನ ಮೇಲೆ ಗುಂಪು ಥಳಿತ ನಡೆದಿದೆ. ಕಟ್ಟಡ ಕಾರ್ಮಿಕರಾಗಿ ಪಶ್ಚಿಮ ಬಂಗಾಲದಿಂದ ವಲಸೆ ಬಂದಿದ್ದ ಜುಯೇಲ್ ತನ್ನ ಸಹವರ್ತಿಗಳೊಡನೆ ರಾತ್ರಿ ಮನೆಗೆ ಹಿಂತಿರುಗುತ್ತಿದಾಗ ಆರು ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದ್ದು, ತದನಂತರ ಚಿಕಿತ್ಸೆಯ ವೇಳೆ ಆತ ಮೃತಪಟ್ಟಿದ್ದಾನೆ. ಬಂಗಾಲಿ ಮಾತನಾಡುವ ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶೀಯರು ಎಂದು ಭಾವಿಸುವ ಒಂದು ವಿಷಪೂರಿತ ವಾತಾವರಣವನ್ನು ರಾಜಕೀಯವಾಗಿ ನಿರ್ಮಿಸಿರುವುದು ಈ ಗುಂಪುಥಳಿತ ಮತ್ತು ಹತ್ಯೆಗಳಿಗೆ ಕಾರಣವಾಗಿದೆ. ಬಾಂಗ್ಲಾದೇಶದ ಅಥವಾ ಮತ್ತಾವುದೇ ಪ್ರದೇಶದ ಶ್ರಮಿಕನೊಬ್ಬನನ್ನು ʼಅಸ್ಮಿತೆʼಯ ಆಧಾರದಲ್ಲಿ ಹತ್ಯೆ ಮಾಡುವ ಸಮಾಜಕ್ಕೆ, ಅವರ ಬೆವರಿನ ದುಡಿಮೆಯಿಂದ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಯಾವುದೇ ಆಕ್ಷೇಪ ಇರುವುದಿಲ್ಲ. ಇದು ಮಾನವ ಸಮಾಜದೊಳಗಿನ ಒಂದು ವಿರೋಧಾಭಾಸ. ಇದಕ್ಕೆ ಬಲಿಯಾಗುತ್ತಿರುವುದು ವಲಸೆ ಕಾರ್ಮಿಕರು.
ದ್ವೇಷ ಅಸೂಯೆಯ ಆಧುನಿಕ ಅವತಾರ
ಮತದ್ವೇಷ ಮತ್ತು ರಾಜಕೀಯ ವೈಷಮ್ಯ ಮನುಷ್ಯ ಸಮಾಜವನ್ನು ಎಷ್ಟು ಅಮಾನುಷಗೊಳಿಸುತ್ತದೆ ಎನ್ನುವುದಕ್ಕೆ ಕಳೆದ ಒಂದು ದಶಕದಲ್ಲೇ ನೂರಾರು ನಿದರ್ಶನಗಳನ್ನು ಕಾಣಬಹುದು. ಇದರ ಮತ್ತೊಂದು ಭೀಕರ ಆಯಾಮವನ್ನು ಈ ವರ್ಷದ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕ್ರಿಸ್‌ಮಸ್ ಆಚರಣೆಯ ಭಾಗವಾಗಿ ಕರೋಲ್ ಗೀತೆಯನ್ನು ಹಾಡುತ್ತಿದ್ದ ಮಕ್ಕಳ ಗುಂಪಿನ ಮೇಲೆ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತನೊಬ್ಬ ದಾಳಿ ನಡೆಸಿರುವುದು ವರದಿಯಾಗಿದೆ. ಕರೋಲ್ ಹಾಡುತ್ತಿದ್ದ ಮಕ್ಕಳನ್ನು ಥಳಿಸಿ, ಸಂಗೀತ ಉಪಕರಣಗಳನ್ನು ಧ್ವಂಸ ಮಾಡಿರುವುದೂ ವರದಿಯಾಗಿದೆ. ಮನದಾಳದಲ್ಲಿ ಬೇರೂರಿರುವ ದ್ವೇಷ ಸ್ಫೋಟಿಸಿದಾಗ, ಹಿಂಸಾತ್ಮಕ ದಾಳಿಗೆ ಗುರಿಯಾಗುವವರ ವಯೋಮಾನ ಗಣನೆಗೆ ಬರುವುದಿಲ್ಲ. ಇದು ಕೋಮುಸಂಘರ್ಷದ ಚರಿತ್ರೆಯಲ್ಲಿ ದಾಖಲಾಗಿರುವ ವಾಸ್ತವ. ಈ ಘಟನೆಯಲ್ಲಿ ಮಕ್ಕಳೇ ದಾಳಿಗೊಳಗಾಗಿದ್ದಾರೆ.
ಇದನ್ನೂ ಮೀರಿಸುವ ಮತ್ತೊಂದು ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಫೈತಾ ಕಾರ್ತಿಕ್ ಎಂಬ ಅಂಧ ಮಹಿಳೆ ಇಲ್ಲಿನ ಪ್ರಿನ್ಸ್ ಆಫ್ ಪೀಸ್ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿಯ ಜಿಲ್ಲಾ ಅಧ್ಯಕ್ಷೆಯಿಂದ ದೈಹಿಕ ದಾಳಿಗೊಳಗಾಗಿದ್ದಾರೆ. 200ಕ್ಕೂ ಹೆಚ್ಚು ಅಂಧ ಮಕ್ಕಳು ನೆರೆದಿದ್ದ ಭೋಜನ ಕೂಟದ ಸಂದರ್ಭದಲ್ಲಿ ನಡೆದ ಈ ದಾಳಿಯ ರೂವಾರಿಯಾದ ಬಿಜೆಪಿ ನಾಯಕಿ ಅಂಜು ಭಾರ್ಗವ, ಹಲ್ಲೆಗೊಳಗಾದ ಅಮಾಯಕ ಮಹಿಳೆ ಮುಂದಿನ ಜನ್ಮದಲ್ಲೂ ಅಂಧಳಾಗಿ ಜನಿಸಲಿ ಎಂದು ಶಾಪವನ್ನೂ ನೀಡಿರುವುದಾಗಿ ವರದಿಯಾಗಿದೆ. ಲೌಕಿಕ ಪ್ರಪಂಚವನ್ನು ಕಣ್ತೆರೆದು ನೋಡುವ ಶಕ್ತಿ ಕಳೆದುಕೊಂಡಿರುವ ಮಕ್ಕಳೂ ಸಹ ಮತದ್ವೇಷದ ಕ್ರೌರ್ಯಕ್ಕೆ ಗುರಿಯಾಗುವುದು, ನಮ್ಮ ಸಮಾಜದ ಹಿಮ್ಮುಖ ನಡಿಗೆಗೆ ಸಾಕ್ಷಿಯಾಗಿ ಕಾಣುತ್ತದೆ. ಇಲ್ಲಿ ಅಂಧರು ಆ ಮಕ್ಕಳಲ್ಲ ಎನ್ನುವುದು ವಾಸ್ತವ.
ಈ ಘಟನೆಗಳೆಲ್ಲವೂ ನಿರ್ದಿಷ್ಟವಾಗಿ ಪ್ರಚೋದಿತ ಅಲ್ಲ ಎಂಬ ವ್ಯಾಖ್ಯಾನವನ್ನು ಒಪ್ಪುವುದು ಬಿಡುವುದು ನಮ್ಮ ವಿವೇಕ ಮತ್ತು ವಿವೇಚನೆಗೆ ಬಿಟ್ಟ ಪ್ರಶ್ನೆ. ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಚರ್ಚ್‌ಗೆ ಭೇಟಿ ನೀಡಿ, ಕ್ರೈಸ್ತ ಧರ್ಮದ ಬಗ್ಗೆ ತಮ್ಮ ಅಪರಿಮಿತ ವಿಶ್ವಾಸ ಮತ್ತು ಆದರವನ್ನು ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲೇ ಇತ್ತ ಭಾರತದಲ್ಲಿ ಕ್ರೈಸ್ತರ ಮೇಲೆ ಈ ರೀತಿಯ ದಾಳಿ ನಡೆಯುತ್ತಿರುವುದು ವಿಡಂಬನೆ ಎನಿಸಬಹುದು. ಆದರೆ ಇದು ವಿಡಂಬನೆ ಅಲ್ಲ, ಹಲವು ವರ್ಷಗಳಿಂದ ಪೋಷಿಸಿಕೊಂಡು ಬಂದಿರುವ ಅನ್ಯಮತ ದ್ವೇಷ ಮತ್ತು ಈ ದ್ವೇಷಾಸೂಯೆಯನ್ನು ಸಾರ್ವಜನಿಕ ಜೀವನದಲ್ಲಿ ವ್ಯಕ್ತಪಡಿಸಲೆಂದೇ ಸೃಷ್ಟಿಸಲಾಗಿರುವ ತುಡುಗು ಪಡೆಗಳ (Fringe Elements) ಚಟುವಟಿಕೆಗಳ ಹಿಂದಿರುವ ತಾತ್ವಿಕ ಭೂಮಿಕೆ. ಈ ತಾತ್ವಿಕತೆಗೆ ರಾಜಕೀಯ ಸ್ಪರ್ಶ ದೊರೆತಾಗ, ಅಧಿಕಾರ ರಾಜಕಾರಣದ ಬತ್ತಳಿಕೆಯಲ್ಲಿ ಒಂದು ಅಸ್ತ್ರವಾಗುತ್ತದೆ. ಧಾರ್ಮಿಕ ಸೋಂಕು ತಗುಲಿದಾಗ ಮತಾಂಧರಿಗೆ ಅಸ್ತ್ರವಾಗಿ ಪರಿಣಮಿಸುತ್ತದೆ.
ಈ ಘಟನೆಗಳ ಮತ್ತೊಂದು ಆಯಾಮವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಧಾರವಾಡದ ಸಮೀಪ ನಡೆದಿರುವ ಮರ್ಯಾದೆಗೇಡು ಹತ್ಯೆಯಲ್ಲಿ ಕಾಣಬಹುದು. ಹುಬ್ಬಳ್ಳಿ ಧಾರವಾಡ ಸಮೀಪದ ಇನಾಂ ವೀರಾಪುರ ಗ್ರಾಮದಲ್ಲಿ ಅನ್ಯ ಜಾತಿಯ ಹುಡುಗನೊಂದಿಗೆ ಮದುವೆಯಾಗಿದ್ದ ಮಾನ್ಯ ದೊಡ್ಡಮನಿ ಎಂಬ 19 ವರ್ಷದ, ಆರು ತಿಂಗಳ ಗರ್ಭಿಣಿ ಯುವತಿಯನ್ನು ಆಕೆಯ ತಂದೆಯೇ ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಆ ಹೆಣ್ಣು ಮಗಳು ಮಾಡಿದ ಅಪರಾಧ( ! ), ದಲಿತ ಯುವಕನನ್ನು ಮದುವೆಯಾಗಿರುವುದು. ತನ್ನ ಒಡಲ ಕುಡಿಯನ್ನೇ, ಆ ಕುಡಿಯ ಗರ್ಭದೊಳಗಿದ್ದ ಕುಡಿಯೊಂದಿಗೇ, ಒಬ್ಬ ತಂದೆ ಕೊಲೆ ಮಾಡುವುದು ಅಮಾನುಷ ಪದವನ್ನು ಮೀರಿದ ಕ್ರೌರ್ಯ. ಈ ಹತ್ಯೆಗೆ ಕಾರಣ ಜಾತಿ ಶ್ರೇಷ್ಠತೆ ಎನ್ನುವುದು ಸಾಮಾಜಿಕ ಕ್ರೌರ್ಯ. ಇದನ್ನು ಹೇಗೆ ವ್ಯಾಖ್ಯಾನಿಸುವುದು ?
ಸಾಮಾಜಿಕ ವ್ಯಾಧಿ ವ್ರಣವಾಗದಿರಲಿ
ಈ ಘಟನೆಗಳನ್ನು ದಾಟಿ, ಭಾರತದ ಸಾಮಾಜಿಕ ವ್ಯವಸ್ಥೆಯ ಕಡೆಗೆ ಹೊರಳಿದಾಗ ನಮಗೆ ಉನ್ನಾವೋದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೊಳಗಾದ ಹೆಣ್ಣು ಮಗು ಮತ್ತು ತನ್ನ ಮನೆಯಲ್ಲಿಟ್ಟಿದ್ದ ಆಹಾರದ ಕಾರಣದಿಂದಾಗಿ ಕೊಲೆಗೀಡಾದ ಅಕ್ಲಾಖ್ ಎಂಬ ನತದೃಷ್ಟ ವ್ಯಕ್ತಿ ಕಣ್ಣೆದುರು ಹಾದು ಹೋಗುತ್ತಾರೆ. ಉನ್ನಾವೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಮಾಜಿ ಬಿಜೆಪಿ ಸೆಂಗಾರ್ ಶಿಕ್ಷೆಯನ್ನು ರದ್ದುಪಡಿಸಿ ಜಾಮೀನು ನೀಡಿರುವುದು ಆಘಾತಕಾರಿ ಘಟನೆಯಾಗಿದೆ. ಈಗ ಸಂತ್ರಸ್ತೆಯ ಕುಟುಂಬದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಮತ್ತೊಂದು ಘಟನೆಯಲ್ಲಿ ಮನೆಯಲ್ಲಿ ಗೋಮಾಂಸ ಇಟ್ಟಿರುವುದಾಗಿ ಶಂಕಿಸಿ ತುಡುಗುಪಡೆಗಳಿಂದ ಹತ್ಯೆಗೀಡಾದ ಅಕ್ಲಾಖ್‌ನ ಕುಟುಂಬದವರೂ ಸುಪ್ರೀಂ ಕೋರ್ಟ್ ಹೊಸ್ತಿಲಲ್ಲಿದ್ದಾರೆ. ಏಕೆಂದರೆ ಅಕ್ಲಾಖ್ ಹಂತಕರ ಮೇಲಿದ್ದ ಮೊಕದ್ದಮೆಯನ್ನು ಉತ್ತರಪ್ರದೇಶ ಸರ್ಕಾರವೇ ಹಿಂಪಡೆದಿದೆ. ಹಂತಕರನ್ನು , ಅತ್ಯಾಚಾರಿಗಳನ್ನು ಸಂಸ್ಕಾರವಂತರೆಂದು ಸಾರ್ವಜನಿಕವಾಗಿ ಸನ್ಮಾನಿಸಿದ ಪ್ರಸಂಗವನ್ನು ಇಲ್ಲಿ ಸ್ಮರಿಸಬಹುದು.
ಅಂದರೆ ವಿಕಾಸದತ್ತ ಸಾಗುತ್ತಿರುವ ನವ ಭಾರತದ ಸಮಾಜದಲ್ಲಿ ಹಂತಕರು, ಅತ್ಯಾಚಾರಿಗಳು ಕ್ಷಮಾರ್ಹರಾಗುತ್ತಿದ್ದಾರೆ. ಜೀವ ಕಳೆದುಕೊಂಡ ನಿರ್ಭಾಗ್ಯ ಅಮಾಯಕರು ನಗಣ್ಯವಾಗುತ್ತಿದ್ದಾರೆ. ಕೆಲವೊಮ್ಮೆ ಅಪರಾಧಿಗಳೂ ಆಗುತ್ತಿದ್ದಾರೆ. ʼಅನ್ಯʼರ ಸಾವುಗಳನ್ನು ಸಂಭ್ರಮಿಸಲಾಗುತ್ತಿದೆ. ಬೇರೂರಿದ ದ್ವೇಷಾಸೂಯೆಗಳು ಮಾನವ ಸಮಾಜವನ್ನು ಪ್ರಾಚೀನತೆಯೆಡೆಗೆ ಕರೆದೊಯ್ಯುತ್ತಿವೆ. ಅಮಾಯಕರ ಅಸಹಜ ಸಾವು, ಅತ್ಯಾಚಾರ-ಹತ್ಯೆಗಳಿಗೆ ಕಣ್ಣು ಮುಚ್ಚಿ ಕೂರುವುದು, ಅಪರಾಧಕ್ಕಿಂತಲೂ ಕ್ರೂರವಾದ ನಡವಳಿಕೆ. ಈ ಅಮಾನುಷತೆಯನ್ನು ಸಾಪೇಕ್ಷವಾಗಿ ನೋಡುವುದು ಕ್ರೌರ್ಯವನ್ನೂ ಮೀರಿದ ಮೃಗೀಯ ಧೋರಣೆ. ಆದರೆ ನಾವು ಕ್ರಮೇಣ ಈ ಕ್ರೌರ್ಯ-ಹಿಂಸೆ ಮತ್ತು ದೌರ್ಜನ್ಯಗಳನ್ನು ಸಹಜ ಪ್ರಕ್ರಿಯೆಗಳಂತೆ ಭಾವಿಸುವ ಕಡೆಗೆ ನಡೆಯುತ್ತಿದ್ದೇವೆ.
ವಿಶ್ವಮಾನವ ಕಲ್ಪನೆಯ ಕಡೆಗೆ
ತತ್ಪರಿಣಾಮವಾಗಿ ಭೌತಿಕವಾಗಿ ಬಲಿಷ್ಠವಾಗುತ್ತಿರುವ ದೇಶದಲ್ಲಿ, ಸಮಾಜ ಭೌತಿಕವಾಗಿ ಕುಬ್ಜವಾಗುತ್ತಿದೆ, ಆಂತರಿಕವಾಗಿ ಕೊಳೆಯಲಾರಂಭಿಸಿದೆ. ನೈತಿಕತೆ ಮತ್ತು ಮಾನವೀಯ ಮೌಲ್ಯಗಳು, ಮಾರುಕಟ್ಟೆಯ ವಿನಿಮಯ ಸರಕುಗಳಂತಾಗಿದ್ದು, ಅನುಕೂಲಕ್ಕೆ ತಕ್ಕಂತೆ ನಿರ್ವಚಿಸುವ ಸಾಧಾರಣ ಪದೋಚ್ಛಾರಣೆಗಳಾಗುತ್ತಿವೆ. ವಿಕಾಸದ ಹಾದಿಯಲ್ಲಿರುವ ದೇಶದ ಸಮಾಜ ತನ್ನ ಬೌದ್ಧಿಕ ವಿಕಾಸದತ್ತ ಗಮನ ನೀಡದೆ ಹೋದರೆ, ಜಾತಿ ಶ್ರೇಷ್ಠತೆ, ಮತದ್ವೇಷ, ಪಿತೃಪ್ರಧಾನತೆ, ಊಳಿಗಮಾನ್ಯ ಧೋರಣೆಗಳು ವ್ಯಾಧಿಯ ಹಂತವನ್ನು ದಾಟಿ ವ್ರಣವಾಗುವ ಸಾಧ್ಯತೆಗಳಿವೆ.
ಉನ್ನಾವೋದ ಸಂತ್ರಸ್ತರು, ಅಕ್ಲಾಖ್‌ನ ಕುಟುಂಬ, ಕರೋಲ್ ಹಾಡುವ ಅಂಧ ಮಕ್ಕಳು ನಮ್ಮ ಕಡೆ ದಿಟ್ಟಿಸುತ್ತಿದ್ದಾರೆ. ಅವರಿಗೆ ಎದೆಮುಟ್ಟಿ ಸಾಂತ್ವನ ಹೇಳುವ ನೈತಿಕ ಸ್ಥೈರ್ಯವನ್ನೂ ಕಳೆದುಕೊಂಡು ನಾವು ಬೆತ್ತಲಾಗಿದ್ದೇವೆ. ಒಂದು ಕಡೆ ಸಾಂವಿಧಾನಿಕ ಮೌಲ್ಯಗಳು ಕುಸಿಯುತ್ತಿವೆ ಇದಕ್ಕೆ ಪೈಪೋಟಿ ನೀಡುವ ಹಾಗೆ ಮಾನವೀಯ ಮೌಲ್ಯಗಳ ಪಾತಾಳ ಕುಸಿತಕ್ಕೆ ಸಾಕ್ಷಿಯಾಗುತ್ತಿದ್ದೇವೆ.
ಈ ಜಟಿಲ ಸಿಕ್ಕುಗಳನ್ನು ಬಿಡಿಸಲು ಸಂಕಲ್ಪ ಮಾಡುತ್ತಲೇ, ಇದು ಸೆಮಿನಾರ್ ಹಾಲ್‌ಗಳ ವಿದ್ವತ್ ಪೂರ್ಣ ಉಪನ್ಯಾಸಗಳಿಂದ ಮಾತ್ರ ಸಾಧ್ಯವಿಲ್ಲ ಎಂಬ ಅರಿವೂ ನಮ್ಮೊಳಗೆ ಮೂಡಬೇಕಿದೆ.
-೦-೦-೦-೦-
bevarahani1