ಅದಾನಿ ಲಂಚ- ಲೋಕಾಯುಕ್ತರ ವರದಿಯಲ್ಲೇ ಇದೆ ಸಾಕ್ಷ್ಯ

ಕರ್ನಾಟಕದಲ್ಲಿ 2003-04ರಿಂದ ಮ್ಯಾಂಗನೀಸ್‌ ಅದಿರನ್ನು ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ರಫ್ತು ಮಾಡಿದ ಹಗರಣದಲ್ಲಿ ಸಿಪ್ಪೆ ನೆಕ್ಕಿದವರು ಸಿಕ್ಕಿಹಾಕಿಕೊಂಡಿದ್ದು ಹಣ್ಣು ತಿಂದವರು ತಪ್ಪಿಸಕೊಂಡರು ಎಂಬ ಮಾತು ನಿಜವಾಗಿದೆ. ಈ ಹಗರಣದಲ್ಲಿ ಬೇಲಿಕೇರಿ ಬಂದರನ್ನು ಗುತ್ತಿಗೆ ಆಧಾರದ ಮೇಲೆ 2003-04ರಿಂದಲೂ ನಿರ್ವಹಿಸುತ್ತಿದ್ದ ಮೆ.ಅದಾನಿ ಎಂಟರ್‌ಪ್ರೈಸಸ್‌ ಪಾತ್ರವೂ ಇದೆ ಎಂದು 2010-11ರಲ್ಲೇ ಲೋಕಾಯುಕ್ತರು ಪತ್ತೆ ಹಚ್ಚಿ ವರದಿ ಸಲ್ಲಿಸಿದ್ದಾರೆ, ಆದ್ದರಿಂದ ಅದಾನಿ ಕಂಪನಿ ವಿರುದ್ಧವೂ ಕ್ರಮ ವಹಿಸಿ ಎನ್ನುವುದು ವಿಧಾನ ಪರಿಷತ್‌ನ ಸದಸ್ಯ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಅವರ ಆಗ್ರಹ . ಈ ಕುರಿತು ʼ ಬೆವರ ಹನಿʼ ದಿನಪತ್ರಿಕೆಯೂ ವಿವರವಾದ ವರದಿ ಪ್ರಕಟಿಸಿದ್ದನ್ನು ನೆನಪಿಸಿಕೊಳ್ಳಬಹುದು.

   ಅದಾನಿ ಲಂಚ- ಲೋಕಾಯುಕ್ತರ ವರದಿಯಲ್ಲೇ ಇದೆ ಸಾಕ್ಷ್ಯ

 

 

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇರ ಬೆಂಬಲದೊಂದಿಗೆ ದೇಶದ ಸಂಪನ್ಮೂಲಗಳ ಮೇಲೆ ಪ್ರಬಲ ಹಿಡಿತ ಸಾಧಿಸುತ್ತಿರುವ ಉದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಸಮೂಹದ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ. ಭಾರತದ ಐದು ರಾಜ್ಯಗಳಲ್ಲಿ 2021 ಮತ್ತು 2022ರ ಅವಧಿಯಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮತ್ತು ಮಾರಾಟದ ಗುತ್ತಿಗೆ ಪಡೆಯಲು 2,100 ಕೋಟಿ ರೂಪಾಯಿಗಳಷ್ಟು ಲಂಚವನ್ನು ಭಾರತದ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಅದಾನಿ ಸಮೂಹ ನೀಡಿದೆ ಎಂಬ ಆರೋಪ ಅಮೆರಿಕದ ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿ ಅಲ್ಲಿನ ಸರ್ಕಾರದ ಅಟಾರ್ನಿಯೇ ಆರೋಪಪಟ್ಟಿ ಸಲ್ಲಿಸಿದ್ದಾರೆ.

   *    ಅದಾನಿ ಗ್ರೀನ್‌ ಸಮೂಹದ ಭಾಗವಾಗಿರುವ ಅಜ್ಯೂರ್‌ ಪವರ್‌ ಗ್ಲೋಬಲ್‌ ಎಂಬ ಕಂಪನಿ 2021-2022ರ ಅವಧಿಯಲ್ಲಿ ಅಮೆರಿಕೆದಲ್ಲಿ 1,750 ಲಕ್ಷ ಡಾಲರ್‌ ಸೇರಿದಂತೆ 7,500 ಲಕ್ಷ ಡಾಲರ್‌ ಅನ್ನು ಹೂಡಿಕೆದಾರರಿಂದ ಸಂಗ್ರಹಿಸಿತ್ತು. ಆ ಹಣದಲ್ಲೇ ಭಾರತದ ಐದು ರಾಜ್ಯಗಳ ಅಧಿಕಾರಿಗಳು, ರಾಜಕಾರಣಿಗಳಿಗೆ 2,100 ಕೋಟಿ ರೂಪಾಯಿಗಳಷ್ಟು ಲಂಚ ನೀಡಿದೆ ಎಂಬುದು ಅಮೆರಿಕದ ತನಿಖಾ ಸಂಸ್ಥೆ ಮಾಡಿರುವ ಆರೋಪ. ತನ್ನ ದೇಶದ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಭಾರತದಲ್ಲಿ ಲಂಚ ನೀಡಲು ಬಳಸಿದ ಆರೋಪದ ಮೇಲೆ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ, ಸಾಗರ್‌ ಅದಾನಿ ಸೇರಿದಂತೆ ಹಲವರ ವಿರುದ್ಧ ವಿಚಾರಣಾ ಪ್ರಕ್ರಿಯೆಯನ್ನು ಆರಂಭಿಸಿದೆ.

 

    *   ಈ ಪ್ರಕರಣದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಮತ್ತು ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿ ನಮ್ಮ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಂಸತ್ತಿನ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅದಾನಿ ರಕ್ಷಣೆಗೆ ನಿಂತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚರ್ಚೆ, ತನಿಖೆ ಎರಡರಿಂದಲೂ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದಾನಿ ಸಮೂಹವು ಪರಮ ಪ್ರಾಮಾಣಿಕ ಉದ್ಯಮ ಸಮೂಹ ಎಂಬ ಪಟ್ಟ ಕಟ್ಟಿ ಸತ್ಯವನ್ನು ಮುಚ್ಚಿಡಲು ಕೇಂದ್ರ ಸರ್ಕಾರದ ನೇತೃತ್ವ ವಹಿಸಿರುವವರೇ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಸರ್ಕಾರದ ಎಲ್ಲ ಅಂಗಗಳನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

    *    ಅದಾನಿ ಸಮೂಹವು ಅಕ್ರಮಗಳನ್ನು ಎಸಗಲು ಮತ್ತು ತನ್ನ ಕೆಲಸಗಳನ್ನು ಮಾಡಿಸಿಕೊಳ್ಳಲು ಅಧಿಕಾರಿಗಳು, ಸಂಸದರು, ಶಾಸಕರು ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಲಂಚ ಕೊಡುವುದನ್ನು ದೀರ್ಘ ಕಾಲದಿಂದಲೂ ಮಾಡಿಕೊಂಡು ಬಂದಿದೆ ಎಂಬುದಕ್ಕೆ ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅವರು 2011ರ ಜುಲೈ 27ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ನೇರವಾದ ಸಾಕ್ಷ್ಯಗಳಿವೆ. ಅದಿರು ಕಳ್ಳಸಾಗಣೆ, ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರಿನ ಕಳವು ಮತ್ತು ರಫ್ತು, ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ವರದಿ ಸಲ್ಲಿಕೆಯಾಗಿ 13 ವರ್ಷಗಳು ಕಳೆದರೂ ಅದಾನಿ ಸಮೂಹದ ವಿರುದ್ಧ ತನಿಖೆಯಾಗಲೀ, ವಿಚಾರಣೆಯಾಗಲೀ ನಡೆದಿಲ್ಲ. ಅದಾನಿ ಸಮೂಹದ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆಯು ಮಾಡಿರುವ ಲಂಚದ ಆರೋಪಕ್ಕೆ ಸಾಮ್ಯತೆ ಇರುವ ಪ್ರಕರಣದಲ್ಲಿ ಅದಾನಿ ಕಂಒನಿ 2010ರ ಆಸುಪಾಸಿನಲ್ಲೇ ಭಾಗಿಯಾಗಿರುವುದು ಲೋಕಾಯುಕ್ತರ ತನಿಖೆಯಲ್ಲಿ ಪತ್ತೆಯಾಗಿತ್ತು. ಈಗ ಅದಾನಿ ಸಮೂಹ ಮತ್ತು ಅದರ ಪರವಾಗಿರುವ ಕೇಂದ್ರ ಸರ್ಕಾರವು ಅದಾನಿಯ ರಕ್ಷಣೆಗಾಗಿ ಸುಳ್ಳು ಹೇಳುತ್ತಿದೆ ಎಂಬುದಕ್ಕೆ ಲೋಕಾಯುಕ್ತರ ವರದಿಯಲ್ಲೇ ಸಾಕ್ಷ್ಯಗಳಿವೆ.

ಲೋಕಾಯುಕ್ತರ ವರದಿಯಲ್ಲಿ ಏನಿದೆ?

      * ಬೇಲೆಕೇರಿ ಬಂದರಿನಲ್ಲಿ ನಾಲ್ಕು ಕಂಪನಿಗಳಿಗೆ ಸರಕುಗಳ ರಫ್ತು ಚಟುವಟಿಕೆ ನಿರ್ವಹಿಸಲು ಸ್ಥಳವನ್ನು ಗುತ್ತಿಗೆಗೆ ನೀಡಲಾಗಿತ್ತು.  ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌, ಅದಾನಿ ಎಂಟರ್‌ಪ್ರೈಸಸ್‌, ಸಲಗಾಂವ್ಕರ್‌ ಮೈನಿಂಗ್‌ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್ ಮತ್ತು ರಾಜಮಹಲ್‌ ಸಿಲ್ಕ್ಸ್‌ ಈ ಕಂಪನಿಗಳು.‌

    * ಬೇಲೆಕೇರಿ ಬಂದರಿನ ಮೂಲಕ 2006-07ರಿಂದ 2010ರ ಏಪ್ರಿಲ್-ಮೇ ಅವಧಿಯಲ್ಲಿ 2.30 ಕೋಟಿ ಟನ್‌ ಕಬ್ಬಿಣದ ಅದಿರನ್ನು ವಿದೇಶಗಳಿಗೆ ರಫ್ತು ಮಾಡಲಾಗಿತ್ತು. ಈ ಅವಧಿಯಲ್ಲಿ ಬೇಲೆಕೇರಿ ಬಂದರಿಗೆ 1.26 ಕೋಟಿ ಟನ್‌ ಕಬ್ಬಿಣದ ಅದಿರನ್ನು ಸಾಗಿಸಲು ಮಾತ್ರ ಪರವಾನಗಿ ನೀಡಲಾಗಿತ್ತು. 77.38 ಲಕ್ಷ ಟನ್‌ ಕಬ್ಬಿಣದ ಅದಿರನ್ನು ಬೇಲೆಕೇರಿ ಬಂದರಿಗೆ ಸಾಗಿಸಿ, ಕಳ್ಳಸಾಗಣೆ ಮಾಡಲಾಗಿತ್ತು ಎಂಬುದು ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿರುವ ತನಿಖಾ ವರದಿಯಲ್ಲಿದೆ.

     * 2010ರ ಫೆಬ್ರುವರಿ 20ರಂದು ಲೋಕಾಯುಕ್ತ ಪೊಲೀಸರು ಬೇಲೆಕೇರಿ ಬಂದರಿನ ಮೇಲೆ ದಾಳಿಮಾಡಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಗುತ್ತಿಗೆದಾರ ಕಂಪನಿಗಳ ಕಚೇರಿಗಳಲ್ಲಿ ಶೋಧ ನಡೆಸಿರುತ್ತಾರೆ. ಅದರಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಕಚೇರಿಯೂ ಒಂದು. ಆ ಕಚೇರಿಗಳಲ್ಲಿದ್ದ ಕಂಪ್ಯೂಟರ್‌ಗಳು, ಹಾರ್ಡ್‌ ಡಿಸ್ಕ್‌ಗಳು ಸೇರಿದಂತೆ ಡಿಜಿಟಲ್‌ ಸಾಕ್ಷ್ಯಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುತ್ತಾರೆ.

    * ಅದಾನಿ ಎಂಟರ್‌ಪ್ರೈಸಸ್‌ ಕಚೇರಿಯಿಂದ ವಶಕ್ಕೆ ಪಡೆದ ಕಂಪ್ಯೂಟರ್‌ ಒಂದರಲ್ಲಿ ಸಂಗ್ರಹವಾಗಿದ್ದ ದತ್ತಾಂಶದಲ್ಲಿ ʼCash a/cʼ ಹೆಸರಿನ ಇ-ಮೇಲ್‌ ಒಂದು ಪತ್ತೆಯಾಗಿರುತ್ತದೆ. ಅದನ್ನು 2008ರ ಮಾರ್ಚ್‌ 28ರಂದು ಅದಾನಿ ಎಂಟರ್‌ಪ್ರೈಸಸ್‌ನ ಪ್ರವೀಣ್‌ ಬಾಜಪೇಯಿ ಎಂಬುವವರು ಅದಾನಿ ಎಂಟರ್‌ಪ್ರೈಸಸ್‌ನ ಸ್ಯಾಮ್ಯುಯೆಲ್‌ ಡೇವಿಡ್‌, ಮಿತ್ತಲ್‌ ಮತ್ತು ಮನೋಜ್‌ ಝಾ ಎಂಬುವವರಿಗೆ ಕಳುಹಿಸಿರುತ್ತಾರೆ.

     * ಕಬ್ಬಿಣದ ಅದಿರಿನ ಕಳ್ಳಸಾಗಣೆ ಮತ್ತು ಅಕ್ರಮವಾಗಿ ರಫ್ತು ಮಾಡಲು ಸಹಕಾರ ನೀಡುತ್ತಿದ್ದ ಬಂದರು ಅಧಿಕಾರಿಗಳು, ಕಸ್ಟಮ್ಸ್‌, ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಶಾಸಕರು ಮತ್ತು ಸಂಸದರಿಗೆ ಅದಾನಿ ಕಂಪನಿಯಿಂದ ಲಂಚ ನೀಡಿದ ವಿವರಗಳು ಆ ಇ-ಮೇಲ್‌ನಲ್ಲಿದ್ದವು. ಹಣ ಪಾವತಿಗೆ ಅನುಮತಿ ಪಡೆಯುವುದಕ್ಕಾಗಿ ಪ್ರವೀಣ್‌ ಬಾಜಪೇಯಿ ಇ-ಮೇಲ್‌ ಕಳಿಸಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು.

    * ಅದಿರು ಸಾಗಣೆಯ ಪ್ರತಿ ಹಡಗಿನ ಲೆಕ್ಕದಲ್ಲಿ, ಸಾಗಿಸಿದ ಅದಿರಿನ ಪ್ರಮಾಣಕ್ಕೆ ಅನುಸಾರವಾಗಿ, ತಿಂಗಳ ಲೆಕ್ಕದಲ್ಲಿ, ಏಕ ಗಂಟಿನಲ್ಲಿ ಹೀಗೆ ಬೇರೆ ಬೇರೆ ಸ್ವರೂಪದಲ್ಲಿ ಕೋಟ್ಯಂತರ ರೂಪಾಯಿ ಲಂಚ ನೀಡಿರುವ ದಾಖಲೆಗಳು ಲೋಕಾಯುಕ್ತರ ತನಿಖಾ ವರದಿಯೊಂದಿಗೆ ಇದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಶಿಫಾರಸು ಮಾಡಲಾಗಿತ್ತು. ಈವರೆಗೆ ಯಾವ ಕ್ರಮವೂ ಆಗಿರುವುದಿಲ್ಲ.

    * ಕರ್ನಾಟಕದಲ್ಲಿನ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಲೋಕಾಯುಕ್ತರಾಗಿದ್ದ ಎನ್.‌ ಸಂತೋಷ್‌ ಹೆಗ್ಡೆ ಅವರು 2011ರ ಜುಲೈ 27ರಂದು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ್ದ ಎರಡನೇ ವರದಿಯ Chapter-2  EXPORT OF ILLICIT IRON ORES FROM BELEKERI PORT ರಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಅದಿರು ಕಳ್ಳಸಾಗಣೆಗೆ ಹೇಗೆ? ಯಾರಿಗೆಲ್ಲ ಲಂಚ ನೀಡುತ್ತಿತ್ತು? ಎಂಬ ವಿವರ ದಾಖಲೆಗಳ ಸಹಿತ ಇದೆ. ಪುಟ 51ರಿಂದ 56ರವರೆಗೆ ಸಂಪೂರ್ಣ ವಿವರಗಳಿವೆ. ಹಿರಿಯ ಐಎಫ್‌ಎಸ್‌ ಅಧಿಕಾರಿ ಡಾ.ಯು.ವಿ. ಸಿಂಗ್‌ ಅವರು ಸಲ್ಲಿಸಿದ್ದ Annexure Report-6 Chapter-2ರಲ್ಲಿ ಅದಾನಿ ಲಂಚ ಪ್ರಕರಣದ ಸಂಪೂರ್ಣ ವಿವರಗಳಿವೆ.

    * ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರಿನ ಕಳ್ಳಸಾಗಣೆ ನಡೆಯುತ್ತಿರುವ ಆರೋಪದ ಮೇಲೆ ಬಂದರಿನಲ್ಲಿ 2010ರ ಮಾರ್ಚ್‌ 20ರಂದು ಪರಿಶೀಲನೆ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು 8,05,991.083 ಟನ್‌ ಅದಿರನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

     * ಮುಟ್ಟುಗೋಲು ಹಾಕಿಕೊಂಡಿದ್ದ ಅದಿರಿನಲ್ಲಿ ದೊಡ್ಡ ಪ್ರಮಾಣವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂಬುದು 2010ರ ಜೂನ್‌ನಲ್ಲಿ ಗೊತ್ತಾಗಿತ್ತು. ಆಗ ಲೋಕಾಯುಕ್ತ ತನಿಖಾ ತಂಡ ಮತ್ತು ಸಿಐಡಿ ಪೊಲೀಸರು ಸ್ಥಳ ತಪಾಸಣೆ ಮಾಡಿದಾಗ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರಿನಲ್ಲಿ 6,10,810 ಟನ್‌ ಅದಿರನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡಿರುವುದು ಪತ್ತೆಯಾಗಿತ್ತು. 2,72,713 ಟನ್‌ ಅದಿರು ಮಾತ್ರ ಬಂದರಿನಲ್ಲಿ ಉಳಿದಿತ್ತು. ಲೋಕಾಯುಕ್ತ ವರದಿಯ EXPORT OF ILLICIT IRON ORES FROM BELEKERI PORT ಶೀರ್ಷಿಕೆಯ Chapte-2 ರಲ್ಲಿ ಪುಟ ಸಂಖ್ಯೆ 49-50ರಲ್ಲಿ ಈ ಕುರಿತು ಸ್ಪಷ್ಟವಾದ ಉಲ್ಲೇಖ ಮತ್ತು ವಿವರಗಳು ಇವೆ.

 

    *  ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌, ಅದಾನಿ ಎಂಟರ್‌ಪ್ರೈಸಸ್‌, ಸಲಗಾಂವ್ಕರ್‌ ಮೈನಿಂಗ್‌ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್ ಮತ್ತು ರಾಜಮಹಲ್‌ ಸಿಲ್ಕ್ಸ್‌ ಈ ಕಂಪಿನಿಗಳು ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡಿರುವುದು ಲೋಕಾಯುಕ್ತರ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಎಲ್ಲ ಕಂಪನಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಲೋಕಾಯುಕ್ತರು ಶಿಫಾರಸು ಮಾಡಿದ್ದರು.

    * ಉಳಿದ ಮೂರೂ ಕಂಪನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಜನಪ್ರತಿನಿಧಿಗಳ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು, ಕಾರವಾರ ಶಾಸಕ ಸತೀಶ್‌ ಸೈಲ್‌ ಸೇರಿದಂತೆ ಹಲವರಿಗೆ ನ್ಯಾಯಾಲಯ ಜೈಲು ಶಿಕ್ಷೆ, ದಂಡ ವಿಧಿಸಿದೆ. ಸದ್ಯ ಶಿಕ್ಷೆಯನ್ನು ಹೈಕೋರ್ಟ್‌ ಅಮಾನತ್ತಿನಲ್ಲಿ ಇರಿಸಿದೆ.

    ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ನ್ಯಾಯಮೂರ್ತಿ ಎನ್.‌ ಸಂತೋಷ್‌ ಹೆಗ್ಡೆ ಅವರು ರಾಜ್ಯ ಸರ್ಕಾರಕ್ಕೆ 2011ರ ಜುಲೈ 27ರಂದು ಬೃಹತ್‌ ವರದಿ ಸಲ್ಲಿಸಿದ್ದರು. ಆ ವರದಿ ಆಧರಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.‌ ಹಿರೇಮಠ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ ಆದೇಶದಂತೆ ಹಲವರ ವಿರುದ್ಧ ಸಿಬಿಐ ತನಿಖೆ ನಡೆದರೆ, ಇನ್ನೂ ಹಲವರ ವಿರುದ್ಧ ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಬೇಲೇಕೇರಿ ಬಂದರಿನ ಮೂಲಕ ಅದಿರು ಕಳ್ಳ ಸಾಗಣೆ ಹಾಗೂ ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರು ಕಳವು ಮಾಡಿ, ರಫ್ತು ಮಾಡಿದ್ದ ಆರೋಪದಡಿ ಮೂರು ಕಂಪನಿಗಳ ವಿರುದ್ಧ ತನಿಖೆಯೂ ಮುಗಿದು, ಸಂಬಂಧಿಸಿದವರಿಗೆ ಶಿಕ್ಷೆಯೂ ಆಗಿದೆ. ಆದರೆ, ಆ ಮೂವರಿಗಿಂತಲೂ ಘೋರವಾದ ಆರೋಪಗಳನ್ನು ಎದುರಿಸುತ್ತಿರುವ ಅದಾನಿ ಎಂಟರ್‌ಪ್ರೈಸಸ್‌ ವಿರುದ್ಧ ಈವರೆಗೆ ಏಕೆ ಯಾವುದೇ ತನಿಖೆ ನಡೆದಿಲ್ಲ? ಅಕ್ರಮ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪ್ರಭಾವಿ ವ್ಯಕ್ತಿಗಳಿಗೆ ಅದಾನಿ ಸಮೂಹ ಲಂಚ ನೀಡುತ್ತಿತ್ತು ಎಂಬುದಕ್ಕೆ ಪ್ರಬಲವಾದ, ನೇರ ಸಾಕ್ಷ್ಯಗಳಿದ್ದರೂ ಏಕೆ ತನಿಖೆ ನಡೆದಿಲ್ಲ?

     * ನಮ್ಮ ನಾಯಕರಾದ ರಾಹುಲ್‌ ಗಾಂಧಿಯವರು ಅದಾನಿ ಸಮೂಹದ ವಿರುದ್ಧ ಏನು ಹೇಳುತ್ತಿದ್ದಾರೋ ಅದಕ್ಕೆ ಲೋಕಾಯುಕ್ತರ ವರದಿಯಲ್ಲಿ ಸಾಕ್ಷ್ಯಗಳಿವೆ. ಈಗ ನಮ್ಮ ಪಕ್ಷದ ನೇತೃತ್ವದ ಸರ್ಕಾರವೇ ರಾಜ್ಯದಲ್ಲಿದೆ. 13 ವರ್ಷಗಳಿಂದಲೂ ತನಿಖೆಯಿಂದ ತಪ್ಪಿಸಿಕೊಂಡಿರುವ ಅದಾನಿ ಎಂಟರ್‌ಪ್ರೈಸಸ್‌ ವಿರುದ್ಧ ಲೋಕಾಯುಕ್ತ ವರದಿಯಲ್ಲಿರುವ ಆರೋಪಗಳ ಕುರಿತು ತಕ್ಷಣ ತನಿಖೆಗೆ ಆದೇಶಿಸುವಂತೆ ಮತ್ತು ಅದಕ್ಕಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ. ನ್ಯಾಯಮೂರ್ತಿ ಎನ್.‌ ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿರುವ ವರದಿ ಮತ್ತು ಅದಕ್ಕೆ ಪೂರಕವಾಗಿ ಐಎಫ್‌ಎಸ್‌ ಅಧಿಕಾರಿ ಡಾ.ಯು.ವಿ. ಸಿಂಗ್‌ ಸಲ್ಲಿಸಿರುವ ವರದಿಗಳೆಲ್ಲವೂ ರಾಜ್ಯ ಸರ್ಕಾರದ ಬಳಿಯೇ ಇವೆ. ಅದಾನಿ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಸರ್ಕಾರ ಇನ್ನೂ ವಿಳಂಬ ಮಾಡಬಾರದು.

    * ಅದಾನಿ ಸಮೂಹದ ಮುಖ್ಯಸ್ಥರ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಅಲ್ಲಿನ ತನಿಖಾ ಸಂಸ್ಥೆ ದಾಖಲಿಸಿರುವ ಆರೋಪಪಟ್ಟಿಗೂ ಲೋಕಾಯುಕ್ತರ ವರದಿಯಲ್ಲಿರುವ ಅದಾನಿ ಲಂಚ ಪ್ರಕರಣಕ್ಕೂ ಸಾಮ್ಯತೆಗಳಿವೆ. ಲೋಕಾಯುಕ್ತರ ವರದಿಯ ಪ್ರತಿಗಳನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಬ್ಬರಿಗೂ ಅಂಚೆ ಮೂಲಕ ರವಾನಿಸುತ್ತೇನೆ. ಒಮ್ಮೆ ಲೋಕಾಯುಕ್ತರ ವರದಿಯನ್ನು ಓದಿ ನೋಡುವಂತೆ ಇಬ್ಬರನ್ನೂ ಕೋರುತ್ತೇನೆ. ಆ ಬಳಿಕ ಅದಾನಿ ವಿರುದ್ಧದ ಆರೋಪಗಳ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಹಾಗೂ ತನಿಖೆಗೆ ಆದೇಶಿಸುವಂತೆ ಮೋದಿಯವರನ್ನು ಆಗ್ರಹಿಸುತ್ತೇನೆ.