ಅಜ್ಜನ ಬೇವಿನ ಹೂವಿನ ಗುಲ್ಕನ್,  ಅಜ್ಜಿಯ ತಂಗಡಿ ಹೂವಿನ ಟೀ..,  ನೇತ್ರಾವತಿ.ಕೆ.ಬಿ

ಮತ್ತೊಂದು ಟೀ ತಂಗಡಿ ಹೂವಿನ ಟೀ, ತಂಗಡಿ ಗಿಡದ ಚಿನ್ನದ ಬಣ್ಣದ ಹೂವನ್ನ ಕಿತ್ತು ತಂದು ಟೀ ಕಾಯಿಸಿ ಅದಕ್ಕೆ ಒಂಚೂರು ಹಾಲು ಹಾಕಿ, ಚೂರು ಸಕ್ಕರೆ ಅಥವಾ ಬೆಲ್ಲ ಹಾಕಿ ಟೀ ಥರವೇ ಕುಡಿಯುವುದು. ಅದರ ರುಚಿ ಬಹಳವೇ ಚೆಂದ ಈಗಿನ ಗ್ರೀನ್ ಟೀ ಗಿಂತ ಅದ್ಭುತವಾಗಿರುತ್ತದೆ. 

ಅಜ್ಜನ ಬೇವಿನ ಹೂವಿನ ಗುಲ್ಕನ್,  ಅಜ್ಜಿಯ ತಂಗಡಿ ಹೂವಿನ ಟೀ..,                                                                                      ನೇತ್ರಾವತಿ.ಕೆ.ಬಿ

ಜೀವದ ಕತೆ-11


ಕೆ.ಬಿ.ನೇತ್ರಾವತಿ


      ನಾನಂದುಕೊಂಡಂತೆ ಜಿಆರ್ ಇ, ಟೋಫಲ್ ಪರೀಕ್ಷೆಗಳನ್ನು ಬರೆಯಲಾಗದೆ ನನ್ನ ತಮ್ಮನಿಂದ ಸೃಷ್ಟಿಯಾದ ಚಕ್ರವ್ಯೂಹದೊಳಗೆ ಕಳೆದುಹೋದ ದಿನಗಳಲ್ಲಿ ನಾವು ರಾತ್ರೋರಾತ್ರಿ ಬೆಂಗಳೂರು ತೊರೆದು ಅಬ್ಬೇಪಾರಿಗಳಂತೆ ಮತ್ತೊಮ್ಮೆ ಕೇರಾಫ್ ಕಾಡೇನಹಳ್ಳಿ ಆದೆವು. ಕಾಡೇನಹಳ್ಳಿಯ ಅಜ್ಜಿಯ ತೋಟದಲ್ಲಿ ಒಂಟಿಯಾಗಿ ಕೂತು ತೆಂಗಿನ ಮರ ಮತ್ತು ಚಕ್ಕೋತ ಹಣ್ಣಿನ ಗಿಡದ ನೆರಳಲ್ಲಿ ಮಲಗಿ ಆಕಾಶ ತೆಂಗಿನ ಗಿಡದ ಗರಿಗಳ ಉಯ್ಯಾಲೆ ನೋಡುತ್ತಾ , ಸಾಯುವುದೋ ಬದುಕುವುದೋ ಅಂತ ಚಿಂತಿಸುತ್ತಲೇ ನಿದ್ರೆಗೆ ಜಾರುವ ಮುನ್ನ ನಮ್ಮ ಬದುಕು ಎಷ್ಟು ಸುಂದರವಾಗಿತ್ತು ಅಂತ ಬಾಲ್ಯದಿಂದ ಹಿಡಿದು ಎಲ್ಲಾ ಕಣ್ಣ ಮುಂದೆ ಬಂದು ನಿಂತಿತು..


     ಹೌದು ನಾವು ತೋಟದಲ್ಲಿದ್ದಾಗ ನಮಗೆ ಗೊತ್ತಿದ್ದದ್ದು ಕೆಲವೇ ತಿನಿಸು ತಿಂಡಿಗಳಾದರೂ ಅವೆಲ್ಲ ವಿಶಿಷ್ಟವಾದುದೇ ಆಗಿತ್ತು. ಅದರಲ್ಲಿ ನನಗಿಷ್ಟವಾದ ಹಲವುಗಳು.. ಅಮ್ಮ ನಾನು ತಿಂಡಿ ತಿನ್ನದೆ ಸಿಟ್ಟು ಮಾಡಿಕೊಂಡು ಹೋಗಿ ಮರ ಹತ್ತಿ ಕುಳಿತಾಗ ನನಗಿಷ್ಟದ ಆಲೂಗಡ್ಡೆ ಬೇಯಿಸಿಕೊಂಡು ನನ್ನ ಹೆಸರು ಕೂಗುತ್ತಾ ಹುಡುಕುತ್ತಾ ಬಂದಾಗ ಅಮ್ಮನ ಹಿಂದೆಯೇ ಬರುತ್ತಿದ್ದ ನನ್ನ ತಮ್ಮ ಅಕ್ಕನಿಗೆ ಅಮ್ಮ ಆ ಆಲೂಗಡ್ಡೆ ಕೊಟ್ಟು ಬಿಟ್ಟರೆ ಅಂತಾ ಮರದ ಮೇಲಿಂದ ಕೆಳಗೆ ಹಾರಿ ಅಮ್ಮನ ಕೈಯಿಂದ ಆ ಬೆಂದ ಉಪ್ಪು ಹಿಡಿದ ಆಲೂಗಡ್ಡೆ ಕಸಿದುಕೊಂಡು ತಿನ್ನುತ್ತಿದ್ದೆ, ನಮ್ಮ ತೋಟದಲ್ಲಿ ಮುಸುಕಿನ ಜೋಳ ಬೆಳೆದಾಗ ಅಮ್ಮ ಅದನ್ನ ರವೆ ಮಾಡಿಸಿ ಉಪ್ಪಿಟ್ಟನ್ನು ರಾತ್ರಿಯ ಊಟಕ್ಕೆ ಅಥವಾ ಮುಸ್ಸಂಜೆ ತಿಂಡಿಗೆಂದು ಮಾಡಿದಾಗ ಮನೆಯಿಂದ ಈಚೆ ಚಾಪೆ ಹಾಸಿಕೊಂಡು ಚಂದ್ರನ ಬೆಳಕಲ್ಲಿ ತಿನ್ನುತ್ತಿದ್ದುದೇ ಒಂದು ಆನಂದ, ಹೊಲದಲ್ಲಿ ಬೆಳೆಯುತ್ತಿದ್ದ ಹುರುಳಿಕಾಳನ್ನು ಬಸ್ಸಾರಿಗೆಂದು ಬೇಯಿಸಿದಾಗ ಸ್ವಲ್ಪ ಜಾಸ್ತಿಯೇ ಬೇಯಿಸಿ ಅದನ್ನ ಕಾಯಿ ಬೆಲ್ಲ ಹಾಕಿ ರುಬ್ಬಿ ಉಂಡೆ ಕಟ್ಟಿ ತಿನ್ನಲೆಂದು ಎಲ್ಲರಿಗೂ ಒಂದೊಂದು ಉಂಡೆ ಮಾಡಿ ಕೊಡುತ್ತಿತ್ತು ಅಮ್ಮ ಅದು ನನ್ನ ಫೇವರಿಟ್‌ಗಳಲ್ಲಿ ಒಂದು. 


     ಇನ್ನು ʼಕಾರʼ ಹಬ್ಬಕ್ಕೆಂದು ಮಾಡುತ್ತಿದ್ದ ʼಖಿಚಡಿʼ ಮತ್ತೊಂದು ಫೇವರಿಟ್ . ʼಖಿಚಡಿʼ ಎಂದಾಕ್ಷಣ ಎಲ್ಲರೂ ಖಾರ ಅಂದು ಕೊಳ್ಳುತ್ತಾರೆ ಆದರೆ ನನಗೆ ಗೊತ್ತಿದ್ದದ್ದು ಸಿಹಿ ಖಿಚಡಿ. ಅದನ್ನು ಹೇಗೆ ಮಾಡುವುದೆಂದರೆ, ಅನ್ನಕ್ಕೆ ಒಂದು ಈರುಳ್ಳಿ ಹೆಚ್ಚಿ ಹಾಕಿ, ಐದಾರು ಬೆಳ್ಳುಳ್ಳಿ ಪಪ್ಪು ಸುಲಿದು ಹಾಕಿ , ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅನ್ನ ಮಾಡುವುದು. ಅದಕ್ಕೆ ಬೆಲ್ಲ, ತೆಂಗಿನ ಕಾಯಿ ,ಏಲಕ್ಕಿ, ಬೇಕಿದ್ದರೆ ಒಂಚೂರು ಗಸಗಸೆ ಒಟ್ಟಿಗೆ ರುಬ್ಬಿದ ಕಾಯಿ ಹಾಲು ರುಬ್ಬುವುದು, ಅವಶ್ಯವಿದ್ದಲ್ಲಿ ಕಾಯಿಹಾಲನ್ನ ಸ್ವಲ್ಪ ಬಿಸಿಮಾಡಬಹುದು ಇಲ್ಲವೆಂದರೆ ಹಾಗೇ ಬಳಸಬಹುದು.


     ಬಿಸಿ ಅನ್ನದ ಮೇಲೆ ಕಾಯಿ ಹಾಲು ಸುರಿದು, ಏಲಕ್ಕಿ ಬಾಳೆ ಹಣ್ಣು ಸುಲಿದು, ತುಪ್ಪ ಹಾಕಿಕೊಂಡು ಕಲಸಿ ತಿನ್ನುವುದು. (ಇದನ್ನೆಲ್ಲ ಕಲಸಿ ಹಸುವನ್ನು ಮನೆ ಒಳಗೆ ಕರೆಸಿಕೊಂಡು ಬಂದು ಅದಕ್ಕೆ ತಿನ್ನಿಸಿದ ತಟ್ಟೆಯಲ್ಲಿ ಉಳಿದ ತುತ್ತನ್ನು ಪ್ರಸಾದದಂತೆ ಕೊಡುತ್ತಿದ್ದರು) ಅದರ ರುಚಿ ಎಷ್ಟೆಂದರೆ ಈಗಲೂ ಈ ಸಿಹಿ ಖಿಚಡಿಯನ್ನು ಮನೆಯಲ್ಲಿ ಮಾಡಿ ಆನಂದಿಸುವುದೇ ಒಂದು ವೈಭೋಗ. 


  ಮತ್ತೊಂದು ಫೇವರಿಟ್ ಕಡಲೆ ಬೇಳೆ ದಾಲ್. ದಾಲ್ ಈಗಿನ ಭಾಷೆ ಆಗ ʼಕಡಲೆ ಬೇಳೆ ಪಲ್ಯʼ ಅಂತ ಕರೆಯುತ್ತಿದ್ದೆವು. ನಮ್ಮ ಕಡೆ ಕಡಲೆ ಕಾಳು, ಹೆಸರುಕಾಳು, ಹುರುಳಿಕಾಳು ಮುಸುಕಿನ ಜೋಳ , ಜೋಳ, ರಾಗಿ, ಭತ್ತ, ತೊಗರಿ ಕಾಳು, ಹೀಗೇ.. ಬಹಳಷ್ಟು ಹೇರಳವಾಗಿ ಬೆಳೆಯುತ್ತಿದ್ದ ವಸ್ತುಗಳನ್ನ ಬಳಸಿ ಮಾಡುತ್ತಿದ್ದ ಅಡುಗೆಗಳೆ ಜಾಸ್ತಿ. 


    ಕಡಲೆ ಬೇಳೆ ದಾಲ್ ಮಾಡುವುದು ಹೇಗೆಂದರೆ.. ಹಿಂದಿನ ರಾತ್ರಿ ಕಡಲೆ ಬೇಳೆ ನೆನೆಸುವುದು. ಬೆಳಗ್ಗೆ ನೀರನ್ನ ಬಸಿದು ಮತ್ತೊಮ್ಮೆ ಚೆನ್ನಾಗಿ ತೊಳೆದು ಮನೆ ಎದುರುಗಡೆ ಬೆಳೆದಿರುತ್ತಿದ್ದ ಕೈತೋಟದಿಂದ ಅಥವಾ ತೋಟದಿಂದ ಟೊಮೊಟೊ ಕಾಯಿ, ಹಸಿ ಮೆಣಸಿನ ಕಾಯಿ, ಕರಿಬೇವಿನ ಸೊಪ್ಪು, ಕೊತ್ತೊಂಬರಿ ಸೊಪ್ಪು ಎಲ್ಲವನ್ನೂ ಆಗ ಕಿತ್ತು ತಂದು ಈರುಳ್ಳಿ ಹೆಚ್ಚಿಕೊಂಡು ಒಗ್ಗರಣೆ ಹಾಕುವುದು. ಅದಕ್ಕೆ ಬೇಳೆ , ಅರಿಸಿನ ಹಾಕಿ ಕೈಯಾಡಿಸಿ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ, ಮನೆಯಲ್ಲಿ ಮಾಡಿಕೊಂಡಿರುವ ಸಾಂಬಾರು ಪುಡಿ ಹಾಕಿ ಬೇಯಿಸುವುದು. ಅಲ್ಲಿಗೆ ರೆಡಿ ನಮ್ಮ ಕಡಲೆ ಬೇಳೆ (ದಾಲ್) ಪಲ್ಯ. ದಿಡೀರ್ ಅಂತ ಆಗುವ ತಿಂಡಿ ದೋಸೆಗೆ ಇಡ್ಲಿಗೆ, ಚಪಾತಿಗೆ ಚೆನ್ನಾಗಿ ಹೊಂದುವ ಪಲ್ಯ. ಇದರ ರುಚಿ ಬಹಳ . 


   ಆಗೊಮ್ಮೆ ಈಗೊಮ್ಮೆ ಅಕ್ಕಿ ತರಿ ಉಪ್ಪಿಟ್ಟು, ರಾಗಿ ಶ್ಯಾವಿಗೆ, ಮಳೆ ಗಾಲದಲ್ಲಿ ಚೆನ್ನಾಗಿ ಸಿಡಿಲು ಬಡಿದಾಗ ನಾವು ಹೊಲಕ್ಕೆ ಬೆಣಚು ಕಲ್ಲು ಹುಡುಕಿಕೊಂಡು ಹೋಗಿ ತರುತ್ತಿದ್ದೆವು, ಬೆಣಚುಕಲ್ಲಿನ ಒಗ್ಗರಣೆ ಮಾಡಿದ ಸಾರು, ಮೊಸರನ್ನದ ರುಚಿಯೇ ಬೇರೆ. ಹುಣಸೆ ಚಿಗುರು ಕಾಲದಲ್ಲಿ ಎಲ್ಲಾ ಹುಳಿ ಬದಲಿಗೆ ಹುಣಸೆ ಚಿಗುರು ಹಾಕಿ ಬೇಳೆ ಸಾರು ಮತ್ತು ಇನ್ನಿತರ ಸಾರುಗಳನ್ನು ಮಾಡುತ್ತಿತ್ತು ಅಮ್ಮ. ಹುಣಸೆ ಚಿಗುರು ತರುವ ಕೆಲಸ ನಮ್ಮದು. ಅಜ್ಜಿ ಯಾವ ಒಗ್ಗರಣೆ ಇಲ್ಲದೆ ಸಾರು ಮಾಡುತ್ತಿತ್ತು ಅದರ ರುಚಿ ಇಂದಿಗೂ ನಮಗೆ ಮಾಡಲು ಬಂದಿಲ್ಲ. 


    ಮಳೆ ಗಾಲದಲ್ಲಿ ಹೊಲದಲ್ಲಿ ಬೆಳೆಯುತ್ತಿದ್ದ ಅಣಬೆ ಹುಡುಕಿ ತರುವುದು ನಮ್ಮ ಮತ್ತೊಂದು ಕೆಲಸ. ಆ ಕಾಲದಲ್ಲಿ ಅದರ ಸಾರೇ ಹೆಚ್ಚು ಮಾಡುತ್ತಿತ್ತು ಅಮ್ಮ. ಹುತ್ತದ ಅಣಬೆ ಹಾಗೂ ಹೊಲದ ಅಣಬೆ ಇವುಗಳ ರುಚಿ ಇಂದು ಬೆಳೆಯುವ ಯಾವ ಅಣಬೆಗೂ ಬರುವುದಿಲ್ಲ. ಅಜ್ಜಿಯ ಫೇವರಿಟ್ ಬದನಕಾಯಿ ಬಜ್ಜಿ, ಅಣ್ಣೆ ಸೊಪ್ಪಿನ ಬಸ್ಸಾರು, ಮುದ್ದೆ...


     ಇನ್ನ ನಮ್ಮ ಮತ್ತೊಂದು ಇಷ್ಟ ತಿನಿಸುಗಳು ಹತ್ತಿ ಹಣ್ಣು, ಸೀಬೆ ಕಾಯಿ, ನೇರಳೆ ಹಣ್ಣು, ಹುಣಿಸೆ ಹಣ್ಣು, ಮಾವಿನಕಾಯಿ, ಬೆಟ್ಟ ನೆಲ್ಲಿ ಕಾಯಿ, ಎರದೆ ಹಣ್ಣು, ಹೀಗೆ ಪಟ್ಟಿ ಉದ್ದ. ಆದರೆ ಅಮ್ಮ ಹೇಳುತ್ತಿದ್ದ ಹಾಗೆ ನಾನು ಹೊಂಗೆ ಗಿಡದ ಕಾಯನ್ನ ಚಚ್ಚಿ ಬೀಜವನ್ನ ತಿನ್ನುತ್ತಿದ್ದೆನಂತೆ, ಅದು ಕಹಿ, ಆದರೂ ಅದೇಕೆ ಹಾಗೆ ತಿನ್ನುತ್ತಿದ್ದೆನೋ ತಿಳಿಯದು. ಅಮ್ಮ ಹೊಡೆದೂ ಹೊಡೆದೂ ಹೊಂಗೆ ಬೀಜ ತಿನ್ನುವ ಅಭ್ಯಾಸ ಬಿಡಿಸಿತು, ಮತ್ತೊಂದು ಅಭ್ಯಾಸ ನಿಂಬೆ ಕಾಯನ್ನ ಕಿತ್ತಲೆ ಹಣ್ಣಿನ ಥರ ಸಿಪ್ಪೆ ಸುಲಿದು ತಿನ್ನುವುದು. ಇದನ್ನೂ ಅಮ್ಮ ಬೈದು ಬೈದು ಬಿಡಿಸಿತು. ಅಷ್ಟು ಹುಳಿ ಹೇಗೆ ತಿನ್ನುತ್ತಿದ್ದೆನೋ ಈಗ ನೆನಸಿಕೊಂಡರೆ ಭಯಂಕರ, ಮೈ ಎಲ್ಲ ಜುಮ್ ಎನ್ನುತ್ತದೆ. ನಮ್ಮ ತೋಟದ ಬಾವಿಯಲ್ಲಿ ಬೆಳೆದ ಮೀನುಗಳನ್ನ ಅಡುಗೆಗೆಂದು ಬಳಸುತ್ತಿರಲಿಲ್ಲ. 
*****
   ನಾವು ತೋಟದಲ್ಲಿ ಇದ್ದಷ್ಟು ದಿನ ಖಾಯಿಲೆಗೆಲ್ಲಾ ಆಸ್ಪತ್ರೆಗೆ ಹೋದ ನೆನಪಿಲ್ಲ. ಎಲ್ಲಕ್ಕೂ ಮನೆ ಔಷಧಿ. ಅಜ್ಜಿ ಮತ್ತು ಅಜ್ಜ ಔಷಧಿ ಕೂಡ ಕೊಡುತ್ತಿದ್ದರು.


     ಅವುಗಳಲ್ಲಿ ನನಗಿಷ್ಟವಾದದ್ದು ಅಜ್ಜ ಮಾಡುತ್ತಿದ್ದ ಬೇವಿನ ಹೂವಿನ ಗುಲ್ಕನ್ , ಇದನ್ನು ಔಷಧಿಗಾಗಿ ಮಾಡುತ್ತಿದ್ದರು ಹೇಗೆ ಮಾಡುವುದು ಅಂತ ಗೊತ್ತು ಆದರೆ ಯಾವ ಖಾಯಿಲೆಗೆ ಉಪಯೋಗಿಸುತ್ತಿದ್ದರು ಅಂತ ಗೊತ್ತಿಲ್ಲ. ನಮಗೆ ಗುಲಾಬಿಯಿಂದ ಮಾಡಿದ ಗುಲ್ಕನ್ ತಿನ್ನಲು ಕೊಡುತ್ತಿದ್ದರು. ಆದರೂ ನಮಗೆ ಒಮ್ಮೆ ಬೇವಿನ ಹೂವಿನ ಗುಲ್ಕನ್ ಟೇಸ್ಟ್ ನೋಡಿದ್ದ ನಮಗೆ ಅದೇ ಚೆಂದ ಈ ಗುಲಾಬಿಯ ಗುಲ್ಕನ್ ಗಿಂತ ಅನ್ನಿಸಿ ಕಾಡಿ ಬೇಡಿ ಅದನ್ನ ಪಡೆದು ತಿನ್ನುತ್ತಿದ್ದೆವು, 


   ಅಜ್ಜಿ ಜೊತೆ ಹೆಚ್ಚು ತಿರುಗುತ್ತಿದ್ದ ನನಗೆ ಒಮ್ಮೆ ಒಂದು ಬಳ್ಳಿ ಕಂ ಗಿಡದ ಥರ ಚೂಪು ಎಲೆ ಹೊಂದಿರುವುದನ್ನ ತೋರಿಸಿತ್ತು ಇದು ಟೀ ನೆಲದಲ್ಲಿ ಬೆಳೆಯುವ ಟೀ ಗಿಡದ ಥರ ಇದರ ಎಲೆ ಹಾಕಿ ಟೀ ಮಾಡಿ ಕುಡಿದರೆ ಟೀ ರುಚಿಯೇ ಇರುತ್ತದೆ ಆದರೆ ಔಷಧಿ ಗುಣವೂ ಇರುತ್ತದೆ ಎಂದು ಆಗಾಗ ನನ್ನನ್ನು ಕರೆದುಕೊಂಡು ಹೋಗಿ ಅದನ್ನ ಕಿತ್ತು ತಂದು ಟೀ ಮಾಡಿ ಕುಡಿಯುತ್ತಿದ್ದೆವು. ನಾವಿಬ್ಬರೂ ಟೀ ಪಾರ್ಟನರ್ಸ್ ಅದಕ್ಕಾಗಿ ಅಮ್ಮನಿಂದ ಅಜ್ಜಿ ಬೈಸಿಕೊಂಡದ್ದು ಉಂಟು. ಮತ್ತೊಂದು ಟೀ ತಂಗಡಿ ಹೂವಿನ ಟೀ, ತಂಗಡಿ ಗಿಡದ ಚಿನ್ನದ ಬಣ್ಣದ ಹೂವನ್ನ ಕಿತ್ತು ತಂದು ಟೀ ಕಾಯಿಸಿ ಅದಕ್ಕೆ ಒಂಚೂರು ಹಾಲು ಹಾಕಿ, ಚೂರು ಸಕ್ಕರೆ ಅಥವಾ ಬೆಲ್ಲ ಹಾಕಿ ಟೀ ಥರವೇ ಕುಡಿಯುವುದು. ಅದರ ರುಚಿ ಬಹಳವೇ ಚೆಂದ ಈಗಿನ ಗ್ರೀನ್ ಟೀ ಗಿಂತ ಅದ್ಭುತವಾಗಿರುತ್ತದೆ. 


   ನಾವು ಬಿದ್ದು ಗಾಯ ಮಾಡಿಕೊಂಡರೆ, ಕೈ ಕುಯ್ದುಕೊಂಡರೆ ʼಗುಪ್ಪಟ್ಟೆ ಸೊಪ್ಪಿನ ಗಿಡʼ ಅದರ ಗಿಡದಲ್ಲಿ ಕಾಯಿ ಮೇಲಿಂದ ಕೆಳಗೆ ಎಲೆಗಳ ಕೆಳಗೆ ಜೋತು ಬಿದ್ದಿರುತ್ತದೆ ಘಂಟೆಯ ಥರ ಇರುತ್ತದೆ, ತೆಳುವಾದ ಎಲೆಯ ಕವರಿಂಗ್‌ನೊಂದಿಗೆ. ಈ ಗುಪ್ಪಟೆ ಸೊಪ್ಪಿನ ರಸ ಹಾಕಿದರೆ ಸಾಕು ಹೇಳ ಹೆಸರಿಲ್ಲದ ಹಾಗೆ ಗಾಯ ಮಾಯುತ್ತಿತ್ತು. 


    ಇನ್ನ ಊಟ ಸೇರದೆ ಊಟ ಕಂಡರೆ ವಾಕರಿಕೆ ಬರುವವರಿಗೆ ಕೈಮಸಗು ಆಗಿರುವವರಿಗೆ ಅಂತ ಅಜ್ಜಿ ಬ್ಯಾಟೆ ಗಿಡದ ಚಿಗುರು ಎಲೆಗಳನ್ನು ಬೆಳಗ್ಗೆ ಯಾರಿಗೂ ಕಾಣದಂತೆ ಕಿತ್ತು ತಂದು ನೀರು ಹಾಕದಂತೆ ಕುಟ್ಟಿ ಮೂರು ಉಂಡೆ ಮಾಡಿ ಖಾಲಿ ಹೊಟ್ಟೆಗೆ ತಿನ್ನಬೇಕು ಎನ್ನುತ್ತಿತ್ತು.ಈ ಥರ ಮೂರು ದಿನ ತಿನ್ನಬೇಕು. ನಿಮ್ಮ ಎಲ್ಲ ವಾಕರಿಕೆ ಹೋಗಿ ಊಟ ತಿನ್ನುವಂತಾಗುತ್ತದೆ.


    ನನಗೊಮ್ಮೆ ಕಾಲಲ್ಲಿ ಇಸುಬು ಅಂಟಿ ಕೊಂಡಿತ್ತು ಅದು ಇಸುಬು ಅಂತ ನನಗೆ ತಿಳಿಯದು. ಟ್ಯೂಶನ್ ಮನೆಯಲ್ಲಿ ಎಲ್ಲರೊಟ್ಟಿಗೆ ನೆಲದಲ್ಲಿ ಒತ್ತೊತ್ತಾಗಿ ಕೂತು ಕೊಂಡಿರುವಾಗ ಅಂಟಿಕೊಂಡಿತ್ತು. ಅಜ್ಜಿ ತಿಪಟೂರಿಗೆ ಬಂದಾಗ ನಾನು ಕಾಲು ಕೆರೆದುಕೊಳ್ಳುವ ಜಾಗ ನೋಡಿ ಇದು ಇಸುಬು ನಾನು ಔಷಧಿ ಹೇಳುತ್ತೇನೆ ಹಾಗೆ ಮಾಡು, ಐದು ದಿನಕ್ಕೆ ವಾಸಿ ಆಗುತ್ತೆ ಅಂತ ಹೇಳಿತ್ತು.


    ಕಡ್ಡಿ ಕಳ್ಳಿ ಚಿಗುರು ಕಿತ್ತು ತಂದು ಒಣಗಿದ ಬಟ್ಟೆಯಲ್ಲಿ ಧೂಳು ಒರೆಸಿ ನೀರು ಸೋಗದಂತೆ ಕಲ್ಲಿನ ಮೇಲೆ ಹಾಕಿ ಕಲ್ಲಿಂದ ಜಜ್ಜಿಕೊಂಡು ನುಣ್ಣಗೆ ಮಾಡಿಕೊಂಡು ಅದಕ್ಕೆ ನಂತರ ಅರಿಸಿನಪುಡಿ ಹಾಕಿ ಜಜ್ಜಿಕೊಂಡು ಅದನ್ನ ಒಂದು ಬಟ್ಟಲಿಗೆ ತೆಗೆದುಕೊಂಡು ಅದಕ್ಕೆ ಮನೆಯಲ್ಲೆ ಕಾಯಿಸಿದ ಹರಳೆಣ್ಣೆ ಹಾಕಿ (ಅದರಲ್ಲಿ ಎಣ್ಣೆ ಅಂಶ ಜಾಸ್ತಿ ಕಾಣಿಸುವಷ್ಟು) ಕಲಸಿ ಬಾಯಿ ಮುಚ್ಚಿ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಇಸುಬು ಇರುವ ಜಾಗಕ್ಕೆ ಅದನ್ನ ದಪ್ಪಗೆ ಹಚ್ಚಿ ಅದನ್ನು ವೀಳ್ಯದೆಲೆ ಹಾಕಿ ಮುಚ್ಚಿ ಅದನ್ನು ಬಿಳಿ ಬಟ್ಟೆಯಲ್ಲಿ ಹಾಕಿ ಕಟ್ಟುವುದು , ಬೆಳಗ್ಗೆ ಎದ್ದ ತಕ್ಷಣ ಅದನ್ನು ತೆಗೆದರೆ ಆ ಸೊಪ್ಪು ಬಟ್ಟೆ ಎಲ್ಲ ಒಟ್ಟಿಗೇ ಕೈಗೆ ಬರುತ್ತದೆ ಅದನ್ನು ಗುಂಡಿ ತೋಡಿ ಮುಚ್ಚಬೇಕು ಬೇರೆಯವರಿಗೆ ತಾಗದಂತೆ ಅದರಲ್ಲಿ ಆ ಬ್ಯಾಕ್ಟೀರಿಯಾ ಇರುತ್ತದೆ ಎಂದು. ಔಷಧಿ ಹಾಕಿದ ಜಾಗವನ್ನ ಕಡಲೆ ಹಿಟ್ಟು ಹಚ್ಚಿ ತೊಳೆಯಬೇಕು ಅದಕ್ಕೆ ಸೋಪು ತಾಗುವಂತಿಲ್ಲ, ಸೋಪು ತಾಗಿದರೆ ಇಸುಬು ಪುನಃ ಜಾಗೃತವಾಗುತ್ತದೆ ಎಂದು ಈ ರೀತಿ ಮೂರು ದಿನ ಮಾಡಿದರೆ ಸಾಕಂತೆ ಸ್ವಲ್ಪ ಇರುವ ಗಾಯಕ್ಕೆ, ರಣ ಆದ ಗಾಯಕ್ಕೆ 5 ದಿನವಂತೆ ಆದರೆ ಅಜ್ಜಿ ನನಗೆ ಐದು ದಿನ ಮಾಡು ಆಮೇಲೆ ವಾಸಿಯಾಗದಿದ್ದರೆ ನಿನ್ನಮ್ಮ ನನ್ನ ಬೈತಾಳೆ ಅಂತ ಹೇಳಿತ್ತು ಅದಕ್ಕೆ ಐದು ದಿನ ಹಚ್ಚಿದೆ ಅಷ್ಟೆ, 3ನೇ ದಿನಕ್ಕೆ ಕಡಿಯುವುದು ನಿಂತಿತು, 7 ನೇ ದಿನಕ್ಕೆ ಕಪ್ಪು ಎಲ್ಲ ಮಾಯ ಹೊಸ ಚರ್ಮದಂತೆ ಫಳಫಳ ಹೊಳೆಯುತ್ತಿತ್ತು ನನ್ನ ಕಾಲು. ಅಷ್ಟು ಸ್ಟ್ರಾಂಗು ಅಜ್ಜಿ ನೀಡುತ್ತಿದ್ದ ಔಷಧಿ ಈ ಔಷಧಿಯನ್ನು ಸುಮಾರು ಜನಕ್ಕೆ ನೀಡಿತ್ತು ಅಜ್ಜಿ. ಅದೇ ರೀತಿ ನನ್ನ ಥೈರಾಡ್ ಗೆ ಕೂಡ ಮೆಡಿಸಿನ್ ಮಾಡುವೆ ಅಂತು, ಆದರೆ ಅಮ್ಮ ಒಪ್ಪಲಿಲ್ಲ ಅಂತ ಸುಮ್ಮನಾಗಿತ್ತು. 


    ಮತ್ತೊಂದು ಘಟನೆ ನಾವು ಆಗ ಬೆಂಗಳೂರಲ್ಲಿ ಇದ್ದೆವು ನನಗೆ ಇದ್ದಕ್ಕಿದ್ದಂತೆ ಪಾದಗಳೆರಡೂ ಊದಿಕೊಂಡು ಓಡಾಡಲು ಆಗದಂತೆ ಆಯಿತು. ಆಗ ಮಯ್ಯಾಸ್ ನರ್ಸಿಂಗ್ ಹೋಂನಲ್ಲಿ ತೋರಿಸಿದ್ದೆ ಎಲ್ಲ ಟೆಸ್ಟ್ ಮಾಡಿದರೂ ಏನೆಂದು ಡಾಕ್ಟರರಿಗೆ ಸರಿಯಾಗಿ ತಿಳಿಯಲಿಲ್ಲ ಎಲ್ಲ ಟೆಸ್ಟ್ ನಾರ್ಮಲ್ ಆಗಿತ್ತು ಡಾಕ್ಟರರ ಅನುಮಾನ ಪ್ರೊಟಿನೀಮಿಯಾ ಇರಬೇಕು ಅಂತ ಮಾತ್ರೆ ಕೊಟ್ಟರು, ಉಹೂಂ ಯಾವುದೇ ಬದಲಾವಣೆ ಆಗಲಿಲ್ಲ.ಎಷ್ಟೋ ಡಾಕ್ಟರರಿಗೆ ತೋರಿಸಿದೆವು ವಾಸಿ ಆಗಲಿಲ್ಲ. ನಾನು ಟಾಯ್ಲೆಟ್ ಗೆ ಹೋಗಲು ಕೂಡ ಯಾರಾದರೂ ನನ್ನನ್ನು ಕರೆದುಕೊಂಡು ಹೋಗಬೇಕಿತ್ತು ,ಕಾಲು ಎತ್ತಿಡಲಾಗದೆ ಬೀಳುವಂತಾಗುತ್ತಿತ್ತು ನನಗೆ. ಓ ಇಲ್ಲಿಗೆ ನನ್ನ ಜೀವನ ಮುಗಿಯಿತು ಏನು ಮಾಡಲಿ ಅಂತ ಅನ್ನಿಸಿ ದಿನವೆಲ್ಲಾ ಅತ್ತುಬಿಟ್ಟೆ. ಅಮ್ಮ ನನ್ನ ಅಳು ನೋಡಿ ಊರಿಗೆ ಹೋಗಿ ಅಜ್ಜಿಯನ್ನ ಕರೆ ತಂದಿತು.


     ಅಜ್ಜಿ ಹೇಳಿದ್ದು ಒಂದೇ ಔಷಧಿ ಕಿರ್ಕಸಾಲೆ (ಸಿಲ್ಕರವೆ) ಸೊಪ್ಪು, ಆ ಸೊಪ್ಪಿನ ಬೇಯಿಸಿದ ರಸವನ್ನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿ ಅಂತ (ದೇಹದಲ್ಲಿ ಯಾವುದೇ ಗಡ್ಡೆಗಳಿದ್ದರೂ ,ಊತ ಇದ್ದರೂ ತೆಗೆಯುತ್ತದೆ ಅಂತ) ಮೂರು ದಿನ ಕುಡಿದೆ,ಊತ ಸ್ವಲ್ಪ ಕಡಿಮೆಯಾಯಿತು. ಎದ್ದು ನಿಲ್ಲುವಂತಾದೆ, 5ನೇ ದಿನಕ್ಕೆ ಪೂರ್ಣ ಊತ ಹೋಗಿ ಓಡಾಡುವಂತಾಯಿತು. ಅಜ್ಜಿ ಇದನ್ನ ಒಂದು ತಿಂಗಳು ಕುಡಿ ಯಾವ ಸೈಡ್ ಎಫೆಕ್ಟ್ ಇಲ್ಲ ಹಾಗೇ ಕುಡಿದರೆ ಔಷಧಿ , ಉಪ್ಪು ಹಾಕಿ ಕುಡಿದರೆ ಮಾಮೂಲಿ ಸೊಪ್ಪಿನ ರಸ ಅಷ್ಟೆ ಅಂತ ಹೇಳಿ ಊರಿಗೆ ಹೊರಟು ಹೋಯಿತು. ಹಾಗೇ ಮಾಡಿದೆ ಜೀವನದಲ್ಲಿ ಮತ್ತೆಂದೂ ಅಂತಹ ಖಾಯಿಲೆ ಬರಲಿಲ್ಲ. ಡಾಕ್ಟರರ ಔಷಧಿಗೆ ವಾಸಿಯಾಗದ ಏನೆಂದೇ ತಿಳಿಯಲು ತಿಣುಕುತ್ತಿದ್ದ ಡಾಕ್ಟರರ ಊಹೆಗೂ ಮೀರಿ ಅಜ್ಜಿಯ ಸಿಂಪಲ್ ಔಷಧಿಯಿಂದ ನನ್ನ ಖಾಯಿಲೆ ವಾಸಿಯಾಗಿತ್ತು. ಇಂತಹ ಅದೆಷ್ಟೋ ಅದ್ಭುತ ಔಷಧಗಳ ಆಗರವಾಗಿದ್ದ ಅಜ್ಜಿಯಿಂದ ಎಲ್ಲ ಔಷಧಿಗಳನ್ನು ಕೇಳಿ ಬರೆದಿಟ್ಟುಕೊಳ್ಳಬೇಕೆಂದು ತುಂಬಾ ಲೇಟಾಗಿ ತಲೆಗೆ ಹೊಳೆಯಿತು. ನನ್ನ ತಮ್ಮನ ವಿಷವ್ಯೂಹದಲ್ಲಿ ಸಿಲುಕಿದ್ದ ನನಗೆ ಅದರಿಂದ ಆಚೆ ಬರುವ ಹೊತ್ತಿಗೆ ಅಜ್ಜಿ ಬದುಕಿರಲಿಲ್ಲ.


    ನಮ್ಮೂರು ಕಾಡೇನಹಳ್ಳಿ ಅಂತ ಲೆಕ್ಕಕ್ಕೆ ಇದ್ದರೂ ನಮ್ಮಜ್ಜಿಯ ತೋಟ ಹಾಗೂ ಆ ತೋಟದೊಳಗಿನ ಮನೆ ಇದ್ದದ್ದು ಬಸವಣ್ಣನ ಗುಡಿ ಹತ್ರ. ತೋಟಕ್ಕೆ ಬಲಗಡೆ ಇದ್ದ ಬಸವಣ್ಣನ ಗುಡಿಗೆ ಅಜ್ಜಿ ದಿನವೂ ಹೋಗಿ ಬಾಗಿಲಿಗೆ ನೀರು ಹಾಕಿ ರಂಗೋಲೆ ಹಾಕಿ ಹೂವ ಇಟ್ಟು ಬರುತ್ತಿತ್ತು. 


     ಅಜ್ಜಿ ಆ ತೋಟದ ಮನೆಗೆ ಬಂದ ಹೊಸತರಲ್ಲಿ ಬಸವಣ್ಣನ ಗುಡಿಯ ಪಕ್ಕದಲ್ಲಿದ್ದ ತಂಗು ದಾಣಕ್ಕೆ ಬಂದು ತಂಗಿದ್ದ ಒಬ್ಬ ಕಣ್ಣು ಕಾಣದ ಸಾಧು, ಅಜ್ಜಿಯ ಚಪ್ಪಲಿ ಕಾಲ ಸಪ್ಪಳ ಕೇಳಿ ಅಜ್ಜಿಯ ಕಾಲ ಚಪ್ಪಲಿ ನೀಡುವಂತೆ ಕೋರಿದಾಗ, ಅರಿವು ಮೂಡಿದ ಅಜ್ಜಿ “ತಪ್ಪಾಯಿತು ಗುರುಗಳೆ, ಕ್ಷಮಿಸಿ ಇನ್ನು ಮುಂದೆ ನಾನು ಪಾದರಕ್ಷೆ ತೊಡುವುದಿಲ್ಲ” ಎಂದು ಹೇಳಿತಂತೆ . ಮತ್ತು ಆ ದಿನದಿಂದ ಅಜ್ಜಿ ಕಾಲಿಗೆ ಚಪ್ಪಲಿ ತೊಡಲಿಲ್ಲ. ಹಾಗೂ ನಾನ್ ವೆಜ್ ಕೂಡಾ ತಿನ್ನುತ್ತಿರಲಿಲ್ಲ. ಆದರೆ ಅಜ್ಜಿನಿಗೆ ಮಾಂಸದ ಅಡಿಗೆ ಮಾಡಿಕೊಡುತ್ತಿತ್ತು. ಲಿಂಗ ದೀಕ್ಷೆ ಪಡೆದಿದ್ದ ಅಜ್ಜಿ ಎರಡೂ ಹೊತ್ತು ಲಿಂಗ ಪೂಜೆ ಮಾಡುತ್ತಿತ್ತು ಅದನ್ನು ನನಗೂ ಹೇಳಿಕೊಟ್ಟಿತ್ತು. ಆದ್ದರಿಂದ ನನಗೆ ಲಿಂಗ ಪೂಜೆ, ಕರಡಿಗೆ, ಪಂಚ ಪಾತ್ರೆ ಇಂತಾ ಪದಗಳ ಬಗ್ಗೆ ತಿಳಿದಿದೆ ಎಂದರೆ ಆಶ್ಚರ್ಯ ಪಡುವವರೇ ಹೆಚ್ಚು. ಇಂತಾ ಬಸವಣ್ಣ ಗುಡಿಯ ನಮ್ಮ ಅಜ್ಜಿ ಗೋಡೆಕೆರೆಯ ಸಿದ್ದರಾಮೇಶ್ವರ ಹಾಗೂ ಮಲ್ಲಿಕಾರ್ಜುನನಿಗೂ ನಡೆದುಕೊಳ್ಳುತ್ತಿತ್ತು.
. *****