ಸಾಮಾಜಿಕ ಔನ್ನತ್ಯದ ನೆಲೆಯಲ್ಲಿ ಅಭಿವೃದ್ಧಿ ಪ್ರಗತಿ
ಮುಂದುವರೆದ ಭಾರತದಲ್ಲಿ ಇಂದಿಗೂ ಸಹ ಅಪಮಾನಕ್ಕೊಳಗಾಗುತ್ತಿರುವ ಎರಡು ಜನಸಂಕುಲಗಳೆಂದರೆ ಮಹಿಳಾ ಸಮೂಹ ಮತ್ತು ಶೋಷಿತ-ಅಸ್ಪೃಶ್ಯ ಸಮುದಾಯಗಳು ಎನ್ನುವುದನ್ನು ಈ ಇತ್ತೀಚಿನ ಘಟನೆಗಳು ಮತ್ತೆ ನೆನಪಿಸಿವೆ. ಕಳೆದ ಒಂದು ತಿಂಗಳಲ್ಲಿ ದೇಶದ ವಿವಿಧೆಡೆ ನಡೆದಿರುವ ಮಹಿಳಾ ದೌರ್ಜನ್ಯಗಳು ಮತ್ತು ಜಾತಿ ಹಲ್ಲೆಗಳನ್ನು ಗಮನಿಸಿದರೆ ಪ್ರಜಾಸತ್ತಾತ್ಮಕ ಭಾರತದಲ್ಲಿ ಶೋಷಿತ ವರ್ಗಗಳು ಇನ್ನೂ ಸಮಾನತೆಯ ಕನಸು ಕಾಣುತ್ತಲೇ ಇರಬೇಕೇ ಎಂಬ ಪ್ರಶ್ನೆಯೂ ಮೂಡುತ್ತದೆ. ಬ್ಯಾಡರಹಳ್ಳಿ ಘಟನೆ ಈ ಪ್ರಶ್ನೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ.
ವಿಶ್ಲೇಷಣೆ
ನಾ ದಿವಾಕರ
ಭಾರತ ಒಂದು ಮುಂದುವರೆದ ದೇಶ ಎಂದು ಎದೆತಟ್ಟಿ ಹೇಳಬಹುದು. ಏಕೆಂದರೆ ಕೇವಲ 77 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಅಪ್ರತಿಮ ಸಾಧನೆಗಳಿಗೆ ದೇಶವು ಸಾಕ್ಷಿಯಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಬೌದ್ಧಿಕ ವಿದ್ಯಾಸಂಸ್ಥೆಗಳವರೆಗೆ, ಕುಗ್ರಾಮದಿಂದ ಅಂತರಿಕ್ಷದವರೆಗೆ ಭಾರತದ ಬೌದ್ಧಿಕ ಪ್ರಗತಿ ಅಸಾಧಾರಣವಾದುದು. ಶೀಘ್ರದಲ್ಲೇ ಭಾರತದ ವಿಜ್ಞಾನಿಗಳು ಚಂದ್ರಯಾನ -4 ಸಾಕಾರಗೊಳಿಸಲಿದ್ದಾರೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡುವಂತಹ ವಿಚಾರ. ಆರ್ಥಿಕ ನೆಲೆಯಲ್ಲೂ ಭಾರತದ ಸಾಧನೆ ಅಸಾಧಾರಣವಾಗಿದ್ದು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಮುಂಚೂಣಿ ಸಾಲಿನಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವ ವಿಷಾದದ ನಡುವೆಯೇ ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆ ತಳಮಟ್ಟದವರೆಗೂ ತಲುಪಲು ಸಾಧ್ಯವಾಗಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಚುನಾವಣೆಗಳು ಭಾರತದ ಪ್ರಜಾಪ್ರಭುತ್ವಕ್ಕೆ ಗರಿ ಮೂಡಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಆದರೆ ಮುಂದುವರೆದ ದೇಶ ಅಥವಾ Developed COuntry ಎಂದರೆ ನಮ್ಮ ಕಣ್ಣೋಟ ಈ ಸೀಮಿತ ವ್ಯಾಪ್ತಿಗೆ ನಿಲ್ಲಬೇಕೇ ? ಅಥವಾ ಈ ಭೌತಿಕ/ಬೌದ್ಧಿಕ ಸಾಧನೆಗಳನ್ನು ದಾಟಿ ನಾವು ಬದುಕುತ್ತಿರುವ ಸಮಾಜದತ್ತ ನೋಡುವಂತಾಗಬೇಕೇ ? ಈ ಜಟಿಲ ಪ್ರಶ್ನೆಗೆ ನಮ್ಮ ಅಂತರ್ ಪ್ರಜ್ಞೆಯೇ ಉತ್ತರಿಸಬೇಕಿದೆ. ಏಕೆಂದರೆ 21ನೆಯ ಶತಮಾನದ ಡಿಜಿಟಲ್ ಯುಗದಲ್ಲಿ ನಮ್ಮ ಸಾಮಾಜಿಕ ಜೀವನದಲ್ಲಿ ಗೋಚರಿಸುತ್ತಿರುವ ಅಮಾನುಷತೆ, ಪ್ರಾಚೀನತೆ ಮತ್ತು ಅಸೂಕ್ಷ್ಮತೆಗಳು, ನಮ್ಮ ಭ್ರಮಾಧೀನತೆಯನ್ನು ಭಂಗಗೊಳಿಸುತ್ತದೆ. ಕೆಲವು ಘಟನೆಗಳು ನಾವು ಯಾವ ಯುಗದಲ್ಲಿದ್ದೇವೆ ಎಂಬ ಭಾವನೆಯನ್ನು ಮೂಡಿಸಿದರೆ ಇನ್ನು ಕೆಲವು ನಾವು ಎಂತಹ ಸಮಾಜದಲ್ಲಿದ್ದೇವೆ ಎಂಬ ಜಿಜ್ಞಾಸೆಗೆ ಕಾರಣವಾಗುತ್ತದೆ.
ದೌರ್ಜನ್ಯಗಳ ಜಾತಿ-ಲಿಂಗತ್ವ ನೆಲೆಗಳು ಕೊಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತರಬೇತಿ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಹತ್ಯೆ ದೇಶದ ಮಹಿಳಾ ಸಮೂಹದ ಅಂತರ್ ಪ್ರಜ್ಞೆಯನ್ನು ಮತ್ತೆ ಘಾಸಿಗೊಳಿಸಿದ್ದರೆ, ಬಿಹಾರದ ನಾವ್ಡಾ ಜಿಲ್ಲೆಯ ಕೃಷ್ಣಾ ನಗರ ಗ್ರಾಮದಲ್ಲಿ ಭೂವಿವಾದವೊಂದರ ಹಿನ್ನೆಲೆಯಲ್ಲಿ ನಲವತ್ತಕ್ಕೂ ಹೆಚ್ಚು ದಲಿತರ ಗುಡಿಸಲುಗಳನ್ನು ಸುಟ್ಟುಹಾಕಿರುವ ಘಟನೆ, ದಲಿತ ಪ್ರಜ್ಞೆಯನ್ನು ಮತ್ತೊಮ್ಮೆ ಘಾಸಿಗೊಳಿಸಿದೆ. ಈ ಘಟನೆಯಲ್ಲಿ ಆರೋಪಿಗಳ ನಡುವೆ ದಲಿತರೂ ಇರುವುದು ಜಾತಿ ಸಮಾಜದ ಸಂಕೀರ್ಣತೆ ಮತ್ತು ಒಳಬಿರುಕುಗಳನ್ನು ಸೂಚಿಸುತ್ತದೆ. ಜಾತಿ ಶ್ರೇಷ್ಠತೆ ಮತ್ತು ಶೋಷಣೆಯ ನೆಲೆಗಳು ತನ್ನ ಪಾರಂಪರಿಕ ಸಾಮಾಜಿಕ ಗಡಿಗಳನ್ನು ದಾಟಿರುವುದನ್ನು ಇದು ಸೂಚಿಸುತ್ತದೆ.
ಸೆಪ್ಟಂಬರ್ 11ರಂದು ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದ ಘಟನೆ ನಗರೀಕೃತ ಸಮಾಜದೊಳಗೂ ಇರಬಹುದಾದ ಪ್ರಾಚೀನ ಮನಸ್ಥಿತಿಯ ದ್ಯೋತಕವಾಗಿ ಕಾಣುತ್ತದೆ. ಸುಶಿಕ್ಷಿತ ಕುಟುಂಬವೊಂದು ಪೌರಕಾರ್ಮಿಕ ಮಹಿಳೆಯರ ಮೇಲೆ ನಡೆಸಿರುವ ದೈಹಿಕ ಹಲ್ಲೆ ಮತ್ತು ಈ ಮಹಿಳಾ ಶ್ರಮಿಕರ ವಿರುದ್ಧ ಬಳಸಿರುವ ಅವಾಚ್ಯ/ಅಸಭ್ಯ ಭಾಷೆ, ಜಾತಿ ಸೂಚಕ ನಿಂದನೆ ಮತ್ತು ಅಪಮಾನಕರ ಮಾತುಗಳು ʼಸಿಲಿಕಾನ್ ಸಿಟಿ ʼ ಯನ್ನು ಬೆತ್ತಲೆಗೊಳಿಸುವಂತೆ ಕಾಣುತ್ತದೆ. ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳಿಂದ ಸಭ್ಯತೆ/ಸಂಯಮ/ಸೌಜನ್ಯ ಮುಂತಾದ ಉನ್ನತಾದರ್ಶಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ ಆದರೂ, ಬಿಜೆಪಿ ಶಾಸಕ ಮುನಿರತ್ನ ಅವರಾಡಿರುವ ಮಾತುಗಳು, ಈಗಾಗಲೇ ವರದಿಯಾಗಿರುವಂತೆ, ರಾಜ್ಯ ರಾಜಕಾರಣದ ನೈತಿಕ ಅಧಃಪತನಕ್ಕೆ ಕನ್ನಡಿ ಹಿಡಿದಂತೆ ಕಾಣುತ್ತದೆ. ಈ ಎರಡೂ ಪ್ರಕರಣಗಳಲ್ಲಿ ನಮಗೆ ಎದ್ದು ಕಾಣುವುದು ಮಹಿಳಾ ದ್ವೇಷ ಮತ್ತು ಜಾತಿ ದ್ವೇಷ.
ಮುಂದುವರೆದ ಭಾರತದಲ್ಲಿ ಇಂದಿಗೂ ಸಹ ಅಪಮಾನಕ್ಕೊಳಗಾಗುತ್ತಿರುವ ಎರಡು ಜನಸಂಕುಲಗಳೆಂದರೆ ಮಹಿಳಾ ಸಮೂಹ ಮತ್ತು ಶೋಷಿತ-ಅಸ್ಪೃಶ್ಯ ಸಮುದಾಯಗಳು ಎನ್ನುವುದನ್ನು ಈ ಇತ್ತೀಚಿನ ಘಟನೆಗಳು ಮತ್ತೆ ನೆನಪಿಸಿವೆ. ಕಳೆದ ಒಂದು ತಿಂಗಳಲ್ಲಿ ದೇಶದ ವಿವಿಧೆಡೆ ನಡೆದಿರುವ ಮಹಿಳಾ ದೌರ್ಜನ್ಯಗಳು ಮತ್ತು ಜಾತಿ ಹಲ್ಲೆಗಳನ್ನು ಗಮನಿಸಿದರೆ ಪ್ರಜಾಸತ್ತಾತ್ಮಕ ಭಾರತದಲ್ಲಿ ಶೋಷಿತ ವರ್ಗಗಳು ಇನ್ನೂ ಸಮಾನತೆಯ ಕನಸು ಕಾಣುತ್ತಲೇ ಇರಬೇಕೇ ಎಂಬ ಪ್ರಶ್ನೆಯೂ ಮೂಡುತ್ತದೆ. ಬ್ಯಾಡರಹಳ್ಳಿ ಘಟನೆ ಈ ಪ್ರಶ್ನೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಏಕೆಂದರೆ ಇಲ್ಲಿ ಹಲ್ಲೆಗೊಳಗಾದ ದಲಿತ ಮಹಿಳಾ ಕಾರ್ಮಿಕರಿಗೆ ದಃಸ್ವಪ್ನವಾಗಿ ಕಂಡಿದ್ದು ಮತ್ತೋರ್ವ ಮಹಿಳೆಯೇ. ಅಂದರೆ ಜಾತಿ ಶ್ರೇಷ್ಠತೆಯ ಪ್ರಜ್ಞೆ ಲಿಂಗತ್ವ ಪ್ರಜ್ಞೆಯನ್ನೂ ದಾಟಿ ತನ್ನ ಮೇಲರಿಮೆಯನ್ನು ಸಾಧಿಸುತ್ತದೆ ಎನ್ನುವ ಪಿತೃಪ್ರಧಾನತೆಯ ಧೋರಣೆಯನ್ನು ಇಲ್ಲಿ ಗುರುತಿಸಬಹುದಾಗಿದೆ.
ಸಾಮಾಜಿಕ ವ್ಯಸನದ ಚಾರಿತ್ರಿಕ ಲಕ್ಷಣ
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯು ಸಮಾಜದಲ್ಲಿ ಸೃಷ್ಟಿಸುವಂತಹ ಈ ಶ್ರೇಷ್ಠತೆಯ ಅಹಮಿಕೆ ಮತ್ತು ಸಾಂಸ್ಕೃತಿಕ ಪಾರಮ್ಯದ ಅಹಂಭಾವಗಳೇ ಪ್ರಜ್ಞಾವಂತ ಸಮಾಜದಲ್ಲಿ ಇರಬೇಕಾದ ಅಂತಃಕರಣ ಮತ್ತು ಸಂವೇದನೆಗಳನ್ನು ವ್ಯವಸ್ಥಿತವಾಗಿ ಹೊಸಕಿಹಾಕಿಬಿಡುತ್ತದೆ. ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿ ವಾಸಿಸುವ ಸಮಾಜದ ಮೇಲ್ವರ್ಗದ, ಮೇಲ್ಪದರದ ಒಂದು ಸಮುದಾಯ ತನ್ನ ಹಿತವಲಯದ ಪ್ರಭಾವಳಿಯಿಂದ ಹೊರಬರಲಾರದೆ, ಸಮಾಜದ ಕೆಳಸ್ತರದ ವೃತ್ತಿಯನ್ನು, ಕಸುಬುಗಳನ್ನು, ವ್ಯಕ್ತಿಗಳನ್ನು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಸಮುದಾಯಗಳನ್ನೇ ಕೀಳಾಗಿ ಕಾಣುವ ಮನಸ್ಥಿತಿಯನ್ನು ರೂಢಿಸಿಕೊಂಡಿರುತ್ತದೆ. ಈ ಹಿತವಲಯದ ಸಮಾಜವು ದಕ್ಕಿಸಿಕೊಂಡಿರುವ ಸಾಂವಿಧಾನಿಕ ಸವಲತ್ತುಗಳು, ಉನ್ನತ ಶಿಕ್ಷಣ ಹಾಗೂ ಸೋ ಕಾಲ್ಡ್ ಆಧುನಿಕತೆಯ ಚಹರೆಗಳು ಅದರೊಳಗಿನ ಪ್ರಾಚೀನ ಮನಸ್ಥಿತಿಯನ್ನು ಕಿಂಚಿತ್ತೂ ಅಲುಗಾಡಿಸುವುದಿಲ್ಲ ಎಂಬ ವಾಸ್ತವವನ್ನು ಬ್ಯಾಡರಹಳ್ಳಿ ಎತ್ತಿತೋರಿಸುತ್ತದೆ.
ತನ್ನೆದುರಿನ ಸಮಾಜವನ್ನು ಜಾತಿಯ ನೆಲೆ ಮತ್ತು ಸಾಮಾಜಿಕ ಅಂತಸ್ತಿನ ದೃಷ್ಟಿಯಿಂದಲೇ ನೋಡುವ ಗಣ್ಯ ಸಮಾಜದ ದೃಷ್ಟಿಯಲ್ಲಿ ಕೆಳಸ್ತರದ ದೈಹಿಕ ಶ್ರಮದಲ್ಲಿ ನಿರತರಾದ ಶ್ರಮಜೀವಿಗಳು ಸದಾ ನಿಕೃಷ್ಟರಾಗಿಯೇ ಕಾಣುವುದು ಚಾರಿತ್ರಿಕ ಸತ್ಯ. ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆಯ ಆಚರಣೆ ಇದಕ್ಕೆ ಮತ್ತೊಂದು ಹೀನ ಆಯಾಮವನ್ನು ಒದಗಿಸುತ್ತದೆ. ಈ ಗಣ್ಯ ಸಮಾಜವು ಪಡೆದುಕೊಳ್ಳುವ ಬೌದ್ಧಿಕ ಜ್ಞಾನ ಅದರೊಳಗಿನ ಸಾಮಾಜಿಕ ಅರಿವನ್ನು, ಮಾನವೀಯ ಪ್ರಜ್ಞೆಯನ್ನು ಮೊನಚುಗೊಳಿಸುವುದೇ ಇಲ್ಲ. ಬದಲಾಗಿ ನಗರೀಕರಣಕ್ಕೊಳಗಾಗಿ ತಮ್ಮದೇ ಆದ ಕೋಶಗಳೊಳಗೆ ಸೇರಿಕೊಂಡು, ಆಧುನಿಕ ಅಗ್ರಹಾರಗಳನ್ನು ಕಟ್ಟಿಕೊಳ್ಳುವ ಈ ವರ್ಗ, ತನ್ನ ಶ್ರೇಷ್ಠತೆಯ ಅಹಮಿಕೆಯನ್ನು ಮತ್ತಷ್ಟು ಆಳಕ್ಕೆ ಇಳಿಸಿಕೊಳ್ಳುತ್ತದೆ. ಹಾಗಾಗಿಯೇ ತಾವು ಆರೋಗ್ಯಕರವಾಗಿ ಬದುಕುವ ಸಲುವಾಗಿಯೇ ನಗರವನ್ನು ಸ್ವಚ್ಛವಾಗಿರಿಸಲು ತಮ್ಮ ವೈಯುಕ್ತಿಕ ಆರೋಗ್ಯವನ್ನೂ ಲೆಕ್ಕಿಸದೆ, ದಿನವಿಡೀ ದುಡಿಯುವ ಸ್ವಚ್ಛತಾ ಕಾರ್ಮಿಕರು, ಪೌರ ಕಾರ್ಮಿಕರನ್ನು ಈ ಸಮಾಜದ ಒಂದು ವರ್ಗ ನಿಕೃಷ್ಟವಾಗಿ ಕಾಣುತ್ತದೆ.
ಶ್ರೇಣೀಕೃತ ಸಮಾಜದಲ್ಲಿ ಆರ್ಥಿಕ ಸ್ಥಿತ್ಯಂತರಗಳು ಹಾಗೂ ಸಾಮಾಜಿಕ ಅಂತಸ್ತು ಎರಡೂ ಒಟ್ಟಿಗೇ ಸಾಮಾಜಿಕ ವರ್ತನೆಯನ್ನು ನಿರ್ದೇಶಿಸುವುದರಿಂದ, ಅತಿ ಶ್ರೀಮಂತರ ಹಾಗೂ ಮಧ್ಯಮ ವರ್ಗಗಳ ದೃಷ್ಟಿಯಲ್ಲಿ ಕಸ ತೆಗೆಯುವವರು, ಗಟಾರಗಳನ್ನು, ಹೇಲುಗುಂಡಿಗಳನ್ನು ಸ್ವಚ್ಛಗೊಳಿಸುವವರು, ನಿತ್ಯ ಕಸ ಸಂಗ್ರಹಣೆ ಮಾಡುವವರು ಇವರೆಲ್ಲರೂ ಬಹಿಷ್ಕೃತರಾಗಿಯೇ ಪರಿಗಣಿಸಲ್ಪಡುತ್ತಾರೆ. ಈ ಶ್ರಮಿಕರ ಬಗ್ಗೆ ಅನುಕಂಪ ಇರಬಹುದಾದರೂ ಸಹಾನುಭೂತಿ ಇರುವುದಿಲ್ಲ. ಅವರಿಗೂ ಒಂದು ವೈಯುಕ್ತಿಕ ಘನತೆ ಮತ್ತು ಬದುಕು ಇದೆ ಎನ್ನುವುದನ್ನು ಈ ವರ್ಗದ ಒಂದು ವಲಯ ಸ್ವೀಕರಿಸುವುದೇ ಇಲ್ಲ. ಹಾಗಾಗಿಯೇ ಈ ಹಿತವಲಯದವರ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ಶಿಸ್ತಿನಿಂದ ಮುಂಜಾನೆಯೇ ಬಂದು ಸಂಗ್ರಹಿಸುವ ಅಥವಾ ಅವರ ಮನೆಗಳ ಮುಂದೆ ಎಸೆಯಲಾಗಿರುವ ತ್ಯಾಜ್ಯವನ್ನು ಗುಡ್ಡೆ ಹಾಕಿ ವಾಹನಗಳಲ್ಲಿ ತುಂಬಿಸಿ ಕೊಂಡೊಯ್ಯುವ ಪೌರ ಕಾರ್ಮಿಕರು ಸದಾ ನಿಕೃಷ್ಟ ಜೀವಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ.
ಮೇಲ್ಪದರದ ಎಲೈಟ್ ಜನರಿಗೆ ಕಸ ಎಸೆಯುವುದು, ಹರಡುವುದು ತಿಳಿದಿರುತ್ತದೆ ಆದರೆ ಅದನ್ನು ಎತ್ತಿಹಾಕುವ ಮನಸ್ಥಿತಿ ಇರುವುದಿಲ್ಲ. ಇದಕ್ಕಾಗಿ ಮತ್ತೊಬ್ಬರು ಬರುತ್ತಾರಲ್ಲಾ !!! ಎನ್ನುವ ಮನೋಭಾವ ಇದ್ದೇ ಇರುತ್ತದೆ. ಇದು ಭಾರತೀಯ ಸಮಾಜವೇ ಸೃಷ್ಟಿಸಿರುವಂತಹ ಒಂದು ಮನಸ್ಥಿತಿ. ತಾವೇ ಎಸೆದ ಕಸವನ್ನು ತಿರುಗಿ ನೋಡಲೂ ಹಿಂಜರಿಯುವ ಮೇಲ್ವರ್ಗಗಳಿಗೆ ಅದನ್ನು ಮತ್ತೊಬ್ಬರು ಬಂದು ಕೈಗಳಿಂದಲೇ ಬಾಚಿ ಶುಚಿಗೊಳಿಸುವಾಗ ಕೊಂಚ ಮಟ್ಟಿಗಾದರೂ ಸಹಾನುಭೂತಿ ಮೂಡಬೇಕಲ್ಲವೇ ? ದುರದೃಷ್ಟವಶಾತ್ ಬೆಂಗಳೂರಿನಂತಹ ನಗರಗಳಲ್ಲಿ ತಮ್ಮ ಎಲೈಟ್ ಸ್ಥಾನಮಾನಗಳನ್ನು ದೈವದತ್ತ ಕೊಡುಗೆ ಎಂದೇ ಭಾವಿಸುವ ಮೇಲ್ವರ್ಗದ, ಮೇಲ್ಜಾತಿಯ, ಮೇಲ್ಪದರದ ಜನರು ಈ ಕಾರ್ಮಿಕರನ್ನು ತಿರಸ್ಕಾರದಿಂದ ನೋಡುವುದೇ ಹೆಚ್ಚು. ಅವರಿಗೆ ನೀಡುವ ಹಳಸಿದ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರುಗಳಲ್ಲಿ ನೀಡುವುದರಿಂದ ಹಿಡಿದು, ಕುಡಿಯಲು ನೀರು ಕೇಳಿದರೆ ಓವರ್‌ಹೆಡ್ ಟ್ಯಾಂಕಿನ ನೀರನ್ನು ಪ್ಲಾಸ್ಟಿಕ್ ಬಾಟಲುಗಳಲ್ಲಿ ನೀಡುವವರೆಗೆ ಈ ತಿರಸ್ಕಾರದ ನೋಟ ವಿಸ್ತರಿಸುತ್ತದೆ.
ತಮ್ಮ ಮನೆಯ ಹೇಲುಗುಂಡಿಯನ್ನು ಮತ್ತಾರೋ ಬಂದು ಶುಚಿಗೊಳಿಸುವಾಗ ನಮ್ಮೊಳಗಿನ ಮನುಜ ಸಂವೇದನೆಗೆ ಕೊಂಚಮಟ್ಟಿಗಾದರೂ ನಾಟಬೇಕಲ್ಲವೇ ? 50 ವರ್ಷಗಳ ಹಿಂದೆ ಇದು ಸಹಜ ಸಾಮಾಜಿಕ ಚಟುವಟಿಕೆ ಎಂದೆನಿಸುತ್ತಿತ್ತೇನೋ. ಆದರೆ ಈಗ ಭಾರತ ಆಧುನಿಕತೆಯ ಹಾದಿಯಲ್ಲಿ ಬಹುದೂರ ಸಾಗಿಬಂದಿದೆ. ನಾವು 21ನೇ ಶತಮಾನದಲ್ಲಿದ್ದೇವೆ ಅಲ್ಲವೇ?ಕನ್ಸರ್‌ವೆನ್ಸಿಗಳ ಹೇಲುಗುಂಡಿ-ಹೇಲುತೊಟ್ಟಿಗಳ ಹಂತದಿAದ ನವಿರಾದ ಅತ್ಯಾಧುನಿಕ ಕಮೋಡ್ಗಳ ಹಂತಕ್ಕೆ ತಲುಪಿದ್ದೇವೆ ಅಲ್ಲವೇ ? ಅತ್ಯಾಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗದಲ್ಲಿದ್ದೇವೆ ಅಲ್ಲವೇ ? ಚಂದ್ರನ ಮೇಲೆ ಕಾಲಿರಿಸಿದ್ದೇವೆ ಅಲ್ಲವೇ ? ಯಾವ ಪುರುಷಾರ್ಥಕ್ಕೆ ಈ ಸಾಧನೆಗಳು ? ಈ ಪ್ರಶ್ನೆಗೆ ಉತ್ತರ ಶೋಧಿಸುವಾಗ ಮತ್ತೆ ನಾವು ನಮ್ಮ ಸಾಮಾಜಿಕ ವ್ಯವಸ್ಥೆಯ ಒಳಹೊಕ್ಕು ನೋಡಬೇಕಾಗುತ್ತದೆ. ಏಕೆಂದರೆ ಇಂದಿಗೂ ತಲೆಯ ಮೇಲೆ ಮಲ ಹೊರುವ ಪದ್ದತಿ ನಮ್ಮಲ್ಲಿ ಜಾರಿಯಲ್ಲಿದೆ. ಚರಂಡಿಗಳನ್ನು, ಹೇಲುಗುಂಡಿಗಳನ್ನು ಸ್ವಚ್ಛಗೊಳಿಸುವ ಶ್ರಮಿಕರು ಸಾಯುತ್ತಲೇ ಇದ್ದಾರೆ.
ಜಾತಿ ವ್ಯವಸ್ಥೆಯ ಗಟ್ಟಿ ಬೇರುಗಳು
ಇದಕ್ಕೆ ಕಾರಣ ಜಾತಿ ವ್ಯವಸ್ಥೆ ಕಲ್ಪಿಸುವಂತಹ ಶ್ರೇಷ್ಠತೆಯ ಅಹಮಿಕೆಯು ನಮ್ಮ ಸಮಾಜದ ಬೌದ್ಧಿಕ ವಿಕಸನಕ್ಕೆ ಅವಕಾಶವನ್ನೇ ನೀಡುವುದಿಲ್ಲ. ʼ ಅವರು ʼ ಇರುವುದೇ ಅದಕ್ಕಾಗಿ ಅಥವಾ ʼ ಇರಬೇಕಾದುದೇ ಹಾಗೆ ʼ ಎನ್ನುವ ಪೂರ್ವಗ್ರಹ ಪೀಡಿತ ಆಲೋಚನೆಗಳಿಂದ ಸುಶಿಕ್ಷಿತರೂ ಪ್ರಭಾವಿತರಾಗಿರುತ್ತಾರೆ. ಮಹಿಳಾ ದೌರ್ಜನ್ಯಗಳ ಸಂದರ್ಭದಲ್ಲಿ ಕಾಣುವಂತೆಯೇ ಈ ಮನೋಭಾವವನ್ನು ಬಿಬಿಎಂಪಿ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಜಾತಿ ದೌರ್ಜನ್ಯಗಳಲ್ಲೂ ಕಾಣಬಹುದು. ಇದರ ಪ್ರಾತ್ಯಕ್ಷಿಕೆಯನ್ನು ಶಾಸಕರೊಬ್ಬರು ಮಾತುಗಳ ಮೂಲಕ ಕೊಟ್ಟಿದ್ದರೆ ಬೆಂಗಳೂರಿನ ಒಂದು ಸುಶಿಕ್ಷಿತ ಹಿತವಲಯದ ಕುಟುಂಬ ಪೌರ ಕಾರ್ಮಿಕ ಮಹಿಳೆಯರನ್ನು, ಅಸಭ್ಯ, ಅಶ್ಲೀಲ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ, ದೈಹಿಕವಾಗಿ ಹಲ್ಲೆ ನಡೆಸುವ ಮೂಲಕ ನೀಡಿದೆ. ಈ ಪ್ರಸಂಗಗಳನ್ನು ವ್ಯಕ್ತಿಗತ ನೆಲೆಯಲ್ಲಿ ನೋಡುವುದಕ್ಕಿಂತಲೂ, ವಿಶಾಲ ದೃಷ್ಟಿಯಿಂದ ನೋಡಿದಾಗ, ಜಾತಿಶ್ರೇಣೀಕರಣ/ಪಿತೃಪ್ರಧಾನತೆ ಸೃಷ್ಟಿಸುವ ಅಸಮಾನತೆಯ ನೆಲೆಗಳು ಮತ್ತು ಅದರಿಂದಲೇ ಉದ್ಭವಿಸುವ ತಾರತಮ್ಯ, ದೌರ್ಜನ್ಯ, ಅಸಹನೆ ಮತ್ತು ಕ್ರೌರ್ಯದ ಪರಿಚಯವಾಗುತ್ತದೆ.
ಮಹಿಳಾ ಪೌರ ಕಾರ್ಮಿಕರು ಎರಡು ದಿಕ್ಕುಗಳಿಂದ ಅಪಮಾನ ಎದುರಿಸುತ್ತಾರೆ. ಮೊದಲು ಮಹಿಳೆಯರಾಗಿ ಮತ್ತು ಎರಡನೆಯದು ಅವರು ಹುಟ್ಟಿದ ಜಾತಿಯ ಕಾರಣಕ್ಕಾಗಿ. ಸಮಾಜದಲ್ಲಿ ಇಂದಿಗೂ ಬೇರೂರಿರುವ ಜಾತಿ ಶ್ರೇಷ್ಠತೆಯ ಮನಸ್ಥಿತಿ ಮತ್ತು ವ್ಯಕ್ತಿಗತವಾಗಿ ರೂಢಿಸಿಕೊಂಡಿರುವ ಪಿತೃಪ್ರಧಾನತೆಯ ಅಹಂಭಾವ ಎರಡೂ ಇಲ್ಲಿ ಒಟ್ಟಿಗೇ ಕೆಲಸ ಮಾಡುತ್ತದೆ. ಮಹಿಳೆಯನ್ನು ಅಧೀನಳನ್ನಾಗಿಯೇ ನೋಡುವ ಇದೇ ಸಮಾಜ ಆಕೆಯ ಜಾತಿಯನ್ನು ನಿಕೃಷ್ಟವಾಗಿ ಕಾಣುವುದರ ಮೂಲಕ, ಯಾವುದೇ ಹಿಂಜರಿಕೆ, ಮುಜುಗರ ಇಲ್ಲದೆ ಅವಮಾನಿಸಲು ಮುಂದಾಗುತ್ತದೆ. ಮಹಿಳಾ ಪೌರಕಾರ್ಮಿಕರ ಮೇಲೆ ನಡೆದಿರುವ ಅಮಾನುಷ ದಾಳಿ ಮತ್ತು ಅಸಹ್ಯಕರ ವಾಗ್ದಾಳಿಯನ್ನು ಈ ದೃಷ್ಟಿಯಿಂದ ನೋಡಿದಾಗ ನಮ್ಮ ಸಮಾಜ ಇನ್ನೂ ಸಹ ಅಧುನಿಕ ನಾಗರಿಕತೆಯನ್ನು ಮೈಗೂಡಿಸಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಇದಕ್ಕಿಂತಲೂ ನಮ್ಮ ಸಾರ್ವಜನಿಕ ಪ್ರಜ್ಞೆಯನ್ನು ಕಾಡಬೇಕಾದ ಅಂಶ ಎಂದರೆ ನಾಗರಿಕ ವಲಯದ ನಿಷ್ಕ್ರಿಯ ಮೌನ. ಇಂತಹ ಅಮಾನುಷ ಘಟನೆಗಳನ್ನು ಖಂಡಿಸುವುದು, ಪ್ರತಿಭಟಿಸುವುದು, ನ್ಯಾಯಕ್ಕಾಗಿ ಆಗ್ರಹಿಸುವುದು ಇವೆಲ್ಲವೂ ವೃತ್ತಿಪರ ಹೋರಾಟಗಾರರ, ಸಂಘಟನೆಗಳ ಬಾಧ್ಯತೆ ಅಗಿಬಿಟ್ಟಿದೆ. ಕಣ್ಣೆದುರಿನಲ್ಲೇ ನಡೆಯುವ ಅನ್ಯಾಯ ದೌರ್ಜನ್ಯಗಳಿಗೆ ಕುರುಡಾಗುವ ಒಂದು ವರ್ಗ ಮತ್ತಾವುದೋ ದೇಶದ ಒಂದು ಘಟನೆಯನ್ನು 50 ಸೆಕಂಡುಗಳ ರೀಲ್ಸ್ನಲ್ಲಿ ಹಂಚುವ ಮೂಲಕ ನೋವು ವ್ಯಕ್ತಪಡಿಸುತ್ತದೆ. ಯಾವುದೇ ಸಮಾಜದಲ್ಲಾದರೂ ಮತ್ತೊಬ್ಬರ ಮೇಲೆ ನಡೆಯುವ ಅನ್ಯಾಯ ದೌರ್ಜನ್ಯ ಅಪಮಾನ ಮತ್ತು ತಾರತಮ್ಯಗಳನ್ನು ಮೌನವಾಗಿ ಸಹಿಸಿಕೊಳ್ಳುವ ಮನಸ್ಥಿತಿ ಅಪೇಕ್ಷಣೀಯವಲ್ಲ. ಅದು ಸಮಾಜದ ನೈತಿಕ ಅಧಃಪತನವನ್ನು ಮತ್ತಷ್ಟು ಚುರುಕುಗೊಳಿಸುತ್ತದೆ. ಆಧುನಿಕ ಭಾರತ ಇಂತಹ ಒಂದು ಸಾಮಾಜಿಕ ವರ್ಗವನ್ನು ಸೃಷ್ಟಿಸಿರುವುದು ವರ್ತಮಾನದ ದುರಂತ.
ಇನ್ನೆರಡು ವಾರಗಳಲ್ಲಿ ಗಾಂಧಿ ಜಯಂತಿ ಆಚರಿಸುತ್ತಿದ್ದೇವೆ. ಕೊಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿಯಿಂದ ಬ್ಯಾಡರಹಳ್ಳಿಯ ಕಾರ್ಮಿಕ ಮಹಿಳೆಯರವರೆಗೆ ಗಾಂಧಿ ಪರಿಭಾವಿಸಿದ, ಅಂಬೇಡ್ಕರ್ ಸಾಕ್ಷಾತ್ಕರಿಸಿದ ಸಾಮಾಜಿಕ ನ್ಯಾಯ, ಸಂವೇದನೆ, ಲಿಂಗಸೂಕ್ಷ್ಮತೆ, ಸಮಾನತೆ ಮತ್ತು ಮಾನವ ಘನತೆಯ ಔನ್ನತ್ಯದ ಧ್ವನಿ ನಮಗೆ ಕೇಳಿಸಲೇಬೇಕಲ್ಲವೇ ? ಕೇಳಿಸುವುದೇ ಆದರೆ ನಮ್ಮ ಆಧುನಿಕತೆಯ ಬಗ್ಗೆ ಹೆಮ್ಮೆ ಪಡಬಹುದು. ಇಲ್ಲವಾದರೆ ?????? ಯೋಚಿಸಿ !
-0-0-0-0-0-