ಕಾವ್ಯ -ಸುಜಾತಾ

ಕವಿತೆ

ಕಾವ್ಯ -ಸುಜಾತಾ

ಕಾವ್ಯ

ಹೆಚ್. ಆರ್.ಸುಜಾತಾ

 

ನಾವೆಂದೂ....

ಘನ ಕೆಲಸಕ್ಕೆ ಕೈಹಾಕಲಿಲ್ಲ

ಚಿಕ್ಕಚಿಕ್ಕ, ಸಿಕ್ಕಸಿಕ್ಕ ಕೆಲಸಗಳಿಗೆ

ತನುಮನ ಧಾರೆಯೆರೆದೆವು

ಆಗಸದ ಚಿಕ್ಕಿಗಳನು, ಅಂಗಳಕೆ ಕರೆದು

ಹೂವ ಸುಳಿಯೊಳಗೆ ಗಂಧ ತುಂಬಿದೆವು

ಜೇನು ಹುಟ್ಟುಕಟ್ಟಿ ಜೇನುತುಪ್ಪ ಕೊಟ್ಟಿತು

 

ನಾವೆಂದೂ....

ಕೊಡಲಿಯನ್ನಿಡಿದು ಮರ ಕಡಿಯಲಿಲ್ಲ

ಸಸಿನೆಟ್ಟು ನೀರೆರೆದವು

ಮನೆಮಕ್ಕಳು ಹಕ್ಕಿಪಕ್ಕಿ ಹಣ್ಣು ತಿಂದು ನಕ್ಕವು

ಒಲೆಯನ್ನೂದಲು ಗಾಳಿಯಾಡುವ ಪುಪ್ಪಸವನ್ನೇ

ಮನೆಯೊಳಗೆ ಅಡವಿಟ್ಟೆವು

ಇರುಳೊಳಗೆ ನಿದ್ರಾದೇವಿ ಗೊರಕೆಯೊಡೆಯುತ್ತ

ಗುಡುಗುಸಿಡಿಲಿಗೆ ಸೆಡ್ಡು ಹೊಡೆದು

ನಿರುಮ್ಮಳವಾದಳು

 

ನಾವೆಂದೂ....

ಕಿರೀಟವನ್ನು ತಿರುಗಿಯೂ ನೋಡಲಿಲ್ಲ

ತಲೆಬಗ್ಗಿಸಿ ಉಂಡೆಲೆಯ ಬಾಚಿ ಬಳಿದೆವು

ನಾಯಿ, ಕೋಳಿ, ದನಕರುವಿಗೆ ಉಳಿದದ್ದ ಸುರಿದೆವು

ಕೋಳಿಮೊಟ್ಟೆ ಕೊಟ್ಟಿತು, ಹಾಲು ಮಕ್ಕಳನು ಗಟ್ಟಿ ಮಾಡಿತು, ನಾಯಿ ಬಾಗಿಲಲ್ಲೇ ಮಲಗಿ ಬೆನ್ನು ಕಾಯಿತು

ತೆರೆದ ಬಾಗಿಲ ಮನೆಯಲ್ಲಿ ಅಂಗಾತ ಮಲಗಿದೆವು

ಬೇರುಬಿಟ್ಟವರೇ ರೆಂಬೆರೆಂಬೆಗೂ ಬೆಂಬಿಡದೆ ಜೋಲಿ ತೂಗಿಬಿಟ್ಟೆವು, ಹಾಲ ಕರೆದು ಲಾಲಿ ಹಾಡಿದೆವು

ಜಗ ತುಂಬಿ ನಗುವಾಗ ಅಳು ಹೊಂಚು ಹಾಕುತಿತ್ತು

ನಾವಾಗ ....

ಎದ್ದು, ಕೊಡಲಿಯನ್ನೆತ್ತಿ ಅಟ್ಟಕ್ಕೆಸೆದೆವು

ಏಣಿಯನ್ನು ಮುರಿದು ಒಲೆಗಿಟ್ಟೆವು

ಮರ ನಿರುಮ್ಮಳವಾಗಿ ಮುಸಿ ನಕ್ಕು

ಗಾಳಿಯಲ್ಲಿ ಗಿಲಕಿಯಾಡಿಸುತ್ತ

ತಂಬೆಲರ ನಮ್ಮೆಡೆಗೆ ತಳ್ಳಿತು

 

ನಾವಾಗ....

ಹಾಡುತ್ತ ಕೈ ದೀಪ ಹಚ್ಚಿಟ್ಟೆವು

ನಡುಮನೆಯಲೊಂದು ಹೊರಬಾಗಿಲಿಗೊಂದು

ಒಳಹೊರಗಿನ ಕಣ್ಣಕತ್ತಲೆಗೆ ದಾರಿ ತೆರೆದಿಟ್ಟೆವು

 

ನಾವೆಂದೂ.....

ಘನಕೆಲಸಗಳಿಗೆ ಕೈ ಹಚ್ಚುವುದಿಲ್ಲ

ಇತ್ತ ಗುಡ್ಡ ಕಡಿದು ಅತ್ತ ಕಡೆಗೆ ಒಟ್ಟುವುದಿಲ್ಲ