‘ಕೋಲಾರದಿಂದ ಸ್ಪರ್ಧೆಗೆ ಸಿದ್ಧ: ಸಿದ್ದರಾಮಯ್ಯ

ಹೈಕಮಾಂಡ್ ಒಪ್ಪಿಗೆ ಬೇಕಷ್ಟೇ: ಕಾರ್ಯಕರ್ತರ ಸಮಾವೇಶದಲ್ಲಿ ಘೋಷಣೆ

‘ಕೋಲಾರದಿಂದ ಸ್ಪರ್ಧೆಗೆ ಸಿದ್ಧ: ಸಿದ್ದರಾಮಯ್ಯ

‘ಕೋಲಾರದಿಂದ ಸ್ಪರ್ಧೆಗೆ ಸಿದ್ಧ: ಸಿದ್ದರಾಮಯ್ಯ

ಕೋಲಾರ: ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ನಾನು ಮುಂಬರುವ ವಿಧಾನಸಭಾ  ಚುನಾವಣೆಯಲ್ಲಿ ಕೋಲಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರಾದರೂ, ಹೈಕಮಾಂಡ್‌ ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಎಂಬ ಕಾರಣಕ್ಕೆ ಪಕ್ಷದಲ್ಲಿ ನನಗೊಬ್ಬನಿಗೇ ವಿಶೇಷ ಅವಕಾಶ, ಸೌಲಭ್ಯ ಇಲ್ಲ, ಪಕ್ಷದಲ್ಲಿ ಯಾರೇ ಆಗಲಿ ಎಲ್ಲರೂ ಹೈಕಮಾಂಡ್‌ ನ ಅನುಮತಿ ಪಡೆದು ಸ್ಪರ್ಧೆ ಮಾಡಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಇಲ್ಲಿಂದಲೇ ಚುನಾವಣೆಗೆ ನಿಂತು ನಾನು ಶಾಸಕನಾಗಿ ಆಯ್ಕೆಯಾದರೆ ಇಡೀ ಕೋಲಾರದ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಮಹತ್ವ ಕೊಡುತ್ತೇನೆ. ಪ್ರತೀ ವಾರ ಕೋಲಾರಕ್ಕೆಬರುತ್ತೇನೆ. ಇದರಲ್ಲಿ ಅನುಮಾನವೇ ಬೇಡ ಎಂದು ಸಿದ್ದರಾಮಯ್ಯ ಜನರಿಗೆ ಭರವಸೆ ನೀಡಿದರು.

ನಗರದಲ್ಲಿ ಸೋಮವಾರ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಿಕ್ಕಿರಿದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ಇಂದಿನ ಸಭೆಯಲ್ಲಿ ಕೆ.ಹೆಚ್‌ ಮುನಿಯಪ್ಪ ಅವರ ಆದಿಯಾಗಿ ಮಾತನಾಡಿದ ಎಲ್ಲಾ ಮುಖಂಡರು ನನಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಕ್ಷೇತ್ರದ ಜನ ಮತ್ತು ಸಭೆಯಲ್ಲಿ ಮಾತನಾಡದ ಕೆಲವರ ಒತ್ತಾಯವೂ ಇದೇ ಆಗಿದೆ. ಕೋಲಾರದಲ್ಲಿ ಜನ ಮತ್ತು ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸ ಗೌಡ ಅವರು ನೀವು ಇಲ್ಲಿಂದ ಸ್ಪರ್ಧೆ ಮಾಡಿದರೆ ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದೆ ನಿಮಗೆ ಬೆಂಬಲ ನೀಡುತ್ತೇನೆ ಎನ್ನುತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡರಾದ ಮುನಿಯಪ್ಪ, ರಮೇಶ್‌ ಕುಮಾರ್, ಕೃಷ್ಣ ಬೈರೇಗೌಡರು, ನಜೀರ್‌ ಅಹಮದ್‌ ಅವರು ಹೀಗೆ ಇಲ್ಲಿನ ಅನೇಕ ನಾಯಕರು ನನಗೆ ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ಇಲ್ಲಿನ ಜನ ಕೂಡ ಅದನ್ನೇ ಹೇಳುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಕೋಲಾರಕ್ಕೆ ಬಂದು ದೇವಾಲಯಗಳಿಗೆ, ಮಸೀದಿಗಳಿಗೆ, ಚರ್ಚ್ ಗಳಿಗೆ ಭೇಟಿ ನೀಡಿ, ಎಲ್ಲಾ ಧರ್ಮಗುರುಗಳೊಂದಿಗೆ ಮಾತನಾಡಿದ್ದೇನೆ, ಅವರೆಲ್ಲರೂ ನೀವು ಕೋಲಾರ ಕ್ಷೇತ್ರದಿಂದಲೇ ನಿಲ್ಲಿ ಎಂದು ಹೇಳುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ನಾನು ಚಾಮುಂಡೇಶ್ವರಿ, ವರುಣಾ, ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕೆಲವರು ನನಗೆ ಕ್ಷೇತ್ರ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿ ದೂರ ಆಯ್ತು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ನಿಮಗಾಗಿ ನಾವು ಒಂದು ಹೆಲಿಕಾಪ್ಟರನ್ನೇ ಖರೀದಿ ಮಾಡಿ ಕೊಡುತ್ತೇವೆ, ನೀವು ಅದರಲ್ಲೇ ವಾರಕ್ಕೊಮ್ಮೆ ಬಂದು ಹೋದರೆ ಸಾಕು ಎಂದು ಒತ್ತಾಯಿಸುತ್ತಿದ್ದಾರೆ.

ಇಂದು ರಾಜ್ಯದಲ್ಲಿ ವಾತಾವರಣ ಕಾಂಗ್ರೆಸ್‌ ಪರವಾಗಿ ಬದಲಾಗುತ್ತಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ನೂರಕ್ಕೆ ನೂರು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೋಲಾರದಲ್ಲಿ ಬಿಜೆಪಿ ಪಕ್ಷವಿಲ್ಲ. ಆದರೂ ಬಿಜೆಪಿ ಪಕ್ಷದ ಬಗ್ಗೆ ಜನ ಎಚ್ಚರವಾಗಿರಬೇಕು. ಅವರು ಕೇವಲ ಅಲ್ಪಸಂಖ್ಯಾತರ ವಿರೋಧಿಗಳು ಮಾತ್ರ ಅಲ್ಲ, ರೈತರು, ಮಹಿಳೆಯರು, ಯುವ ಜನರ ವಿರೋಧಿಗಳು ಎಂದರು.

ದಲಿತರಲ್ಲಿ ಕೈಗಾರಿಕೆ ಮಾಡುವವರಿಗೆ 4% ಬಡ್ಡಿದರದಲ್ಲಿ ಸಾಲ ಸೌಲಭ್ಯ, ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿ ಮಾಡಿದವರು ನಾವು. ಬೇರೆ ರಾಜ್ಯಗಳಲ್ಲಿ ಈ ಸೌಲಭ್ಯ ಇದೆಯಾ? ಮಹಿಳೆಯರಿಗೆ 10ಲಕ್ಷದ ವರೆಗೆ ಬಡ್ಡಿರಹಿತವಾಗಿ ಸಾಲ ನೀಡಿದ್ದು ನಮ್ಮ ಸರ್ಕಾರ. ಇಂಥಾ ಅನೇಕ ವಿಚಾರಗಳು ಇನ್ನೂ ಇದ್ದಾವೆ ಎಂದು ಅವರ ಆಡಳಿತಾವಧಿಯಲ್ಲಿ ಮಾಡಿದ ಸಾಧನೆಗಳನ್ನು ಸಭೆಗೆ ವಿವರಿಸಿದರು.

ಜ.23ರಂದು ಬೃಹತ್ ಸಮಾವೇಶ

ಇದು ಕೋಲಾರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಆಗಿದ್ದು, ಇದೇ ತಿಂಗಳ 23ರಂದು ಇನ್ನೂ ದೊಡ್ಡ ಸಮಾವೇಶ ಮಾಡುತ್ತೇವೆ, ಅದಕ್ಕೆ ಇಡೀ ಜಿಲ್ಲೆಯ ಜನ ಬರಬೇಕು. ಆಗ ನಿಮ್ಮೊಂದಿಗೆ ಇನ್ನೂ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತೇನೆ. ಚುನಾವಣೆ ಘೋಷಣೆ ಆಗುವ ಮೊದಲು ಒಮ್ಮೆ ಬರುತ್ತೇನೆ, ಹೋಬಳಿಗಳಿಗೂ ಬರುತ್ತೇನೆ. ಚುನಾವಣೆ ಘೋಷಣೆ ಆದಮೇಲೆ ರಾಜ್ಯ ಪ್ರವಾಸ ಮಾಡಬೇಕು. ಈ ಬಾರಿ ನಾವು ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ.

ಸಿದ್ದರಾಮಯ್ಯ,ವಿರೋಧ ಪಕ್ಷದ ನಾಯಕ            

 

ವೇದಿಕೆಯಲ್ಲಿದ್ದ ನಾಯಕರು

ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಕೋಲಾರ ಶಾಸಕರಾದ ಶ್ರೀನಿವಾಸಗೌಡ, ಭೈರತಿ ಸುರೇಶ್ ,ಮಾಜಿ ಸಚಿವ ಎಂ.ಆರ್.ಸೀತಾರಾಂ, ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್, ಎಂಎಲ್ ಸಿ ಗಳಾದ ನಜೀರ್ ಅಹಮದ್, ಅನಿಲ್ ಕುಮಾರ್, ನಾಗರಾಜ್ ಯಾದವ್, ರಮೇಶ್,

ದಲಿತ ನಾಯಕರಾದ  ಸಿ.ಎಂ.ಮುನಿಯಪ್ಪ, ಸಿ.ಎಂ.ಮುನಿಸ್ವಾಮಿ, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಚಿಂತಾಮಣಿ ಸುಧಾಕರ್, ಸಂಪಂಗಿ, ಮಾಜಿ ಎಂಎಲ್ ಸಿ ಎಂ.ಸಿ.ವೇಣುಗೋಪಾಲ್, ಮಾಜಿ ಸಚಿವ ನಿಸಾರ್ ಅಹಮದ್, ಮಾಜಿ ಸಂಸದ ರಾದ ನಾರಾಯಣಸ್ವಾಮಿ, ಚಂದ್ರಪ್ಪ, ಬ್ಲಾಕ್ ಸಮಿತಿ ಅಧ್ಯಕ್ಷರಾದ ಉದಯಶಂಕರ್, ಪ್ರಸಾದ್ ಬಾಬು, ಎಲ್ ಎ ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಮಂಜುನಾಥ್, ನಾಗರಾಜ್,

 

2 ವರ್ಷದಲ್ಲಿ ಎತ್ತಿನಹೊಳೆ ಪೂರ್ಣ- ಸಿದ್ದು

‘ಕೆ.ಸಿ.ವ್ಯಾಲಿ- ಎನ್ .ಸಿ.ವ್ಯಾಲಿ ಕಾಂಗ್ರೆಸ್ ಸಾಧನೆ’

     ಕೋಲಾರ : ಜಿಲ್ಲೆಗೆ ತಮ್ಮ ಆಡಳಿತಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, “ಕೆ.ಸಿ ವ್ಯಾಲಿ ಯೋಜನೆಗೆ 1400 ಕೋಟಿ ಅನುದಾನ ನೀಡಿ ಯೋಜನೆ ಜಾರಿ ಮಾಡಿದ್ದೆವು, ಎನ್‌.ಸಿ ವ್ಯಾಲಿ ಯೋಜನೆ ಜಾರಿ ಮಾಡಿದ್ದೆವು. ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಭೂಮಿ ಪೂಜೆ ಮಾಡಿದ್ದು ನಮ್ಮ ಕಾಲದಲ್ಲಿ. ಮತ್ತೆ ನಾವೇ ಅಧಿಕಾರಕ್ಕೆ ಬಂದಿದ್ದರೆ ಈ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದೆವು ಆದರೆ ಅಧಿಕಾರಕ್ಕೆ ಬರದಿದ್ದ ಕಾರಣಕ್ಕೆ ಯೋಜನೆ ಪೂರ್ಣಗೊಂಡಿಲ್ಲ. ಮುಂದೆ ನಾವು ಮತ್ತೆ ಅಧಿಕಾರಕ್ಕೆ ಬಂದರೆ 2 ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧರಿದ್ದೇವೆ. ಈಗ ಅದರ ಯೋಜನಾ ವೆಚ್ಚ 24,000 ಕೋಟಿ ಆಗಿದೆ, ಅದನ್ನು ಖರ್ಚು ಮಾಡುತ್ತೇವೆ. ಮೊನ್ನೆ ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷ ಘೋಷಣೆ ಮಾಡಿದಂತೆ ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರ ಜಮೀನಿಗೆ ನೀರು ಕೊಡುವ ಕೆಲಸ ಮಾಡುತ್ತೇವೆ” ಎಂದರು.

      ಕೋಲಾರದಲ್ಲಿ ಕೃಷಿ ಮೇಲೆ ಅವಲಂಬಿತರಾದ ಜನ ಹೆಚ್ಚು. ಅದೇ ಕಾರಣಕ್ಕೆ ಸಕಲೇಶಪುರದ ಬಳಿ ನೇತ್ರಾವತಿ ನದಿ ನೀರನ್ನು ಎತ್ತಿ ಈ ಭಾಗದ ಕೆರೆಗಳನ್ನು ತುಂಬಿಸಲು ಕೆ.ಸಿ ವ್ಯಾಲಿ ಯೋಜನೆ ಮಾಡಿದ್ದು. ಈಗಾಗಲೇ ಸಾಕಷ್ಟು ಕೆರೆಗಳು ತುಂಬಿವೆ. ಮೊನ್ನೆ ನರಸಾಪುರದ ಕೆರೆಗೆ ಬಾಗೀನ ಅರ್ಪಿಸಲು ಹೋಗಿದ್ದೆ.

     ಕೋಲಾರದ ಜನ ಶ್ರಮ ಜೀವಿಗಳು. ಇಲ್ಲಿ ತರಕಾರಿ, ಹಾಲು ಉತ್ಪಾದನೆ, ರೇಷ್ಮೆ, ರಾಗಿ ಮುಂತಾದ ಕೃಷಿ ಚಟುವಟಿಕೆಗಳನ್ನು ನಂಬಿರುವ ಜನ ಬಹಳಷ್ಟು ಇದ್ದಾರೆ. ಈ ಎಲ್ಲಾ ರೈತರಿಗೆ ನೀರು ಕೊಡುವ ಕೆಲಸವನ್ನು ಮುಂದೆ ನಾವು ಮಾಡುತ್ತೇವೆ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ವರ್ಗದವರು, ಹಿಂದುಳಿದವರು ಹಾಗೂ ದಲಿತರಿಗಾಗಿ ನಮ್ಮ ಸರ್ಕಾರ ಇದ್ದಾಗ ಹಲವು ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆ, ನಾವು ಅಧಿಕಾರದಿಂದ ಇಳಿದ ಮೇಲೆ ಅವೆಲ್ಲವನ್ನೂ ನಿಲ್ಲಿಸಿದ್ದಾರೆ. ಕೋಲಾರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಮನವಿ ಮಾಡಿದ್ದಾರೆ, ನಾವು ಅಧಿಕಾರಕ್ಕೆ ಬಂದ ತಕ್ಷಣ ಆಸ್ಪತ್ರೆಯನ್ನು ಮಂಜೂರು ಮಾಡಿ ಸ್ಥಾಪನೆ ಮಾಡುವ ಕೆಲಸ ಮಾಡುತ್ತೇವೆ. ನಮ್ಮದು ನುಡಿದಂತೆ ನಡೆಯುವ ಸಿದ್ಧಾಂತ.

     2013ರ ಚುನಾವಣೆಯಲ್ಲಿ ನಾವು 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಇದರ ಜೊತೆಗೆ 30 ಹೆಚ್ಚುವರಿ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಈಗ ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್‌, ವಿದ್ಯಾಸಿರಿ, ಕೃಷಿ ಹೊಂಡ, ಶಾದಿ ಭಾಗ್ಯ ಇವು ಯಾವುವಾದರೂ ಈಗ ಇದೆಯಾ? ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ ಅನುದಾನ ಖರ್ಚು ಮಾಡಬೇಕು ಎಂದು ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆ ಜಾರಿಗೆ ತಂದು, ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ 30,000 ಕೋಟಿ ರೂ. ಗೂ ಅಧಿಕ ಹಣ ನೀಡಿದ್ದೆ. ಅದಕ್ಕೂ ಮೊದಲು ಬಿಜೆಪಿ ಸರ್ಕಾರ ಇದ್ದಾಗ ಪೂರ್ತಿ 5 ವರ್ಷಗಳಲ್ಲಿ ಈ ವರ್ಗದ ಅಭಿವೃದ್ಧಿಗೆ ಖರ್ಚು ಮಾಡಿದ್ದ ಹಣ 22,000 ಕೋಟಿ. ನಾವು ಈ ಕಾನೂನು ಜಾರಿಗೆ ತಂದ ಮೇಲೆ ನಮ್ಮ ಸರ್ಕಾರದ 5 ವರ್ಷಗಳಲ್ಲಿ ಖರ್ಚು ಮಾಡಿದ ಹಣ 88,000 ಕೋಟಿ ರೂ.

    ನಾವು ಅಧಿಕಾರಕ್ಕೆ ಬರುವ ಮೊದಲು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಗಳಿಗೆ ನೀಡುತ್ತಿದ್ದ ಅನುದಾನ 400 ಕೋಟಿ ರೂ. ಇತ್ತು. ಅದನ್ನು ನಾನು 3,000 ಕೋಟಿ ಮಾಡಿದ್ದೆ. 800 ಕೋಟಿ ರೂ. ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ವಾಸಿಸುವ ಕೇರಿ/ಏರಿಯಾಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ನೀಡಿದ್ದೆ. ಬಡ ಜನರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೆ. ಈಗ ಬಸವರಾಜ ಬೊಮ್ಮಾಯಿ ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ ಎನ್ನುತ್ತಿದ್ದಾರೆ. ಬೊಮ್ಮಾಯಿ ಅವರೇ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದವರು ಯಾರು? ನಿಮ್ಮ ವಾಜಪೇಯಿ ಅವರ ಸರ್ಕಾರ ಅಲ್ಲ, ಮನಮೋಹನ್‌ ಸಿಂಗ್‌ ಅವರ ಸರ್ಕಾರ. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ಮುಂತಾದ ರಾಜ್ಯದಲ್ಲಿ ಯಾಕಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಿದ್ಧುಗಾಗಿ ಮುನಿಸು ಮರೆತ  ಕೆ.ಹೆಚ್.ಮುನಿಯಪ್ಪ!?

-ಕುಚ್ಚಂಗಿ ಪ್ರಸನ್ನ

   ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದರೆಂಬ ಕಾರಣಕ್ಕೆ ಬದ್ಧ ವೈರಿಗಳಾಗಿರುವ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರೊಂದಿಗೆ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪನವರ ಮುನಿಸನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ತುಸು ಶಮನಗೊಳಿಸಿದಂತೆ ಕಂಡಿತು.

  ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತಂತೆ ಸೋಮವಾರ ನಗರದ ಕಾರ್ಯಕರ್ತರ ಸಮಾವೇಶದಲ್ಲಿ ಸಿದ್ದರಾಮಯ್ಯ ಘೋಷಿಸುವ ನಿರೀಕ್ಷೆ ಇತ್ತು (ಮಧ್ಯಾಹ್ನ ಎಲ್ಲರ ನಿರೀಕ್ಷೆಯನ್ನು ಸಿದ್ದರಾಮಯ್ಯ ಹುಸಿ ಮಾಡಲಿಲ್ಲ) ಕೋಲಾರದಿಂದ ಕಣಕ್ಕಿಳಿಯಿರಿ, ನಾವು ಕೆಲಸ ಮಾಡಿ ಗೆಲ್ಲಿಸಿಕೊಡುತ್ತೇವೆ ಎಂದು ಶ್ರೀನಿವಾಸಪುರ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಅವರ ಬೆಂಬಲಿಗರು ಸಿದ್ದರಾಮಯ್ಯನವರಿಗೆ ಬಲವಾದ ಬೆಂಬಲ ನೀಡಿದ್ದರು ಎಂಬುದೇನೋ ಸರಿ, ಆದರೆ ರಮೇಶ್ ಕುಮಾರ್ ಮುಖ ಕಂಡರಾಗದ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪನವರ ಬೆಂಬಲವೂ ಸಿದ್ದರಾಮಯ್ಯನವರಿಗೆ ಅತ್ಯವಶ್ಯಕ ಎಂದು ಈ ಪ್ರಸ್ತಾಪ ಬಂದಾಗಿನಿಂದಲೂ ಮಾತುಗಳು ಕೇಳಿ ಬರುತ್ತಿದ್ದವು.

   ಸೋಮವಾರ ಬೆಳಗಿನ ತನಕ ಮುನಿಯಪ್ಪನರ ಬಣವನ್ನು ಸಿದ್ದರಾಮಯ್ಯ ಮಾತನಾಡಿಸೇ ಇಲ್ಲ ಎಂಬಂತಿತ್ತು ರಾಜಕೀಯ ವಾತಾವರಣ. ಆದರೆ ಸಿದ್ದರಾಮಯ್ಯನವರು ಬೆಂಗಳೂರಿನ ತಮ್ಮ ನಿವಾಸದಿಂದ ಕೋಲಾರಕ್ಕೆ ಹೊರಡುವ ಮುನ್ನ ಸೀದಾ ಸಂಜಯನಗರದಲ್ಲಿರುವ ಕೆ.ಹೆಚ್. ಮುನಿಯಪ್ಪನವರ ಮನೆಗೆ ಪಾದ ಬೆಳೆಸೇಬಿಟ್ಟರು. ಮಾಜಿ ಸಚಿವ ಎಂ.ಆರ್. ಸೀತಾರಾಂ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ನಾರಾಯಣ ಸ್ವಾಮಿ, ಕೋಲಾರ ವಿಧಾನಸಭೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್ ಜೊತೆಯಲ್ಲಿದ್ದರು.

    ಮುತ್ಸದ್ದಿತನ ಹಾಗೂ ರಾಜಕೀಯ ತಂತ್ರಗಾರಿಕೆಯಲ್ಲಿ ಪಳಗಿದ ಸಿದ್ದರಾಮಯ್ಯ ಮುನಿಯಪ್ಪನವರ ಮುನಿಸನ್ನು ತುಸು ತಗ್ಗಿಸಿ ಕೋಲಾರಕ್ಕೆ ಬರುವಂತೆ ಮಾಡಿದರು, ರಮೇಶ್ ಕುಮಾರ್ ಇದ್ದ ವೇದಿಕೆಗೇ ಹತ್ತಿ ಕೂರುವಂತೆ ಮಾಡಿದರು. ಎರಡೂ ಬಣಗಳವರು ಒಂದೇ ವೇದಿಕೆ ಹಂಚಿಕೊಂಡದ್ದು ಕಂಡ ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು.