ಈ ಐದು ವರ್ಷಗಳ ನಂತರ ಒಂದು ಪುಟ್ಟ ಸಮಾರಂಭ..,  

ʼ ನಿಮ್ಮ ಅಚ್ಚುಮೆಚ್ಚಿನ ʼ ಬೆವರ ಹನಿʼ ದಿನಪತ್ರಿಕೆ ಬಿಡುಗಡೆ ಆದ ನಂತರ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಸಮಾರಂಭವನ್ನು ಮಾಡಲಾಗಿಲ್ಲ, ಈಗ ಆರನೇ ವರ್ಷದಲ್ಲಿ ಒಂದು ಪುಟ್ಟ ಸಮಾರಂಭವನ್ನು ಮುಂದಿನ ನವೆಂಬರ್‌ ಐದರಂದು ತುಮಕೂರು ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ. ಆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬನ್ನಿ, ಆಹ್ವಾನಿತರ ಮಾತು ಕೇಳಿ, ಓದುಗರ ಸಂವಾದದಲ್ಲಿ ಭಾಗವಹಿಸಿ,ಮಧ್ಯಾಹ್ನ ಎಲ್ಲರೊಟ್ಟಿಗೆ  ಊಟ ಮಾಡಿ, ಮರೆಯಬೇಡಿ.

ಈ ಐದು ವರ್ಷಗಳ ನಂತರ ಒಂದು ಪುಟ್ಟ ಸಮಾರಂಭ..,  

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

ಪ್ರಿಯರೆ,

ʼ ಬೆವರ ಹನಿʼ ದಿನ ಪತ್ರಿಕೆಯ ತುಮಕೂರು ಆವೃತ್ತಿ ಇದೇ ತಿಂಗಳ 14ಕ್ಕೆ  ಐದು ವರ್ಷಗಳ ನಿರಂತರ ಪ್ರಕಟಣೆಯನ್ನು ಯಶಸ್ವಿಯಾಗಿ ಪೂರೈಸಿತು. ʼ ಬೆವರ ಹನಿʼ ದಿನಪತ್ರಿಕೆಯ ತುಮಕೂರು ಆವೃತ್ತಿ ಎಂದರೆ ಮತ್ತೊಂದು ಆವೃತ್ತಿ ಇದೆಯೇ ಎಂಬ ಪ್ರಶ್ನೆ ನಿಮ್ಮೊಳಗೆ ಮೂಡಿರಬಹುದು ಅಲ್ವಾ, ಹೌದು ʼ ಬೆವರ ಹನಿʼ ದಿನಪತ್ರಿಕೆ ಕೋಲಾರ ಜಿಲ್ಲಾ ಕೇಂದ್ರದಿಂದಲೂ ಪ್ರತ್ಯೇಕವಾಗಿ ಪ್ರಕಟವಾಗುತ್ತಿದೆ. 2001ರಿಂದ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದ ನಾನು 2017ರಲ್ಲಿ ಮತ್ತೆ ಪತ್ರಿಕಾ ವೃತ್ತಿಗೆ ಮರಳಿದ್ದು ʼ ಬೆವರ ಹನಿʼ ದಿನಪತ್ರಿಕೆಯ ಸಂಪಾದಕ-ಪ್ರಕಾಶಕನಾಗಿಯೇ.

ʼಬೆವರ ಹನಿʼ ದಿನಪತ್ರಿಕೆಯು ಕೋಲಾರ ಜಿಲ್ಲಾ ಕೇಂದ್ರದಿಂದ 2011ರಿಂದಲೂ ಪ್ರಕಟಗೊಳ್ಳುತ್ತ ರಾಜ್ಯ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿ ನಿಯಮಿತವಾಗಿ ಜಾಹಿರಾತುಗಳನ್ನು ಪಡೆದು ಪ್ರಕಟಿಸುತ್ತಿತ್ತು. ಆ ಪತ್ರಿಕೆಯ ಮಾಲೀಕ ಮುರಳೀಧರ ಅವರ ಬಳಿ ಎರಡು ದಿನಪತ್ರಿಕೆಗಳಿದ್ದು ʼ ಬೆವರ ಹನಿ ʼ ದಿನಪತ್ರಿಕೆಯ ಮಾಲಿಕತ್ವವನ್ನು ನನ್ನ ಹೆಸರಿಗೆ ವರ್ಗಾಯಿಸಿಕೊಟ್ಟರು.

2017ರ ಜುಲೈ 31ರಂದು ಸರ್ಕಾರಿ ಸೇವೆಯಿಂದ ಸ್ವ ಇಚ್ಚಾ ನಿವೃತ್ತಿ ಪಡೆದು, ಆಗಸ್ಟ್-ಸೆಪ್ಟೆಂಬರ್‌ನಲ್ಲಿ ʼ ಬೆವರ ಹನಿʼ ದಿನಪತ್ರಿಕೆಯನ್ನು ನನ್ನ ಹೆಸರಿನಲ್ಲಿ ಆರಂಭಿಸಿದೆ. ಕೋಲಾರ ಆವೃತ್ತಿಯನ್ನೇ ಬೆಂಗಳೂರು ಹಾಗೂ ನಾನು ಚಿಕ್ಕಂದಿನಿಂದ ಓದಿ,ಬೆಳೆದ ತುಮಕೂರಿನಲ್ಲಿ ವಿತರಿಸತೊಡಗಿದೆ. 1988ರಿಂದ ನನ್ನ ಬರವಣಿಗೆಯನ್ನು ಗಮನಿಸಿದ್ದ ತುಮಕೂರಿನ ಓದುಗರು ನಮಗೆ ಅನ್ಯ ಊರುಗಳ ಸುದ್ದಿ ಬೇಡ, ಎಂದಿನಂತೆ ಇಡೀ ಜಿಲ್ಲೆಗೆ ಮೀಸಲಾದ ಪತ್ರಿಕೆ ಬೇಕು ಎನ್ನತೊಡಗಿದರು, ಹಾಗಾಗಿ ಹೊಸದಿಲ್ಲಿಯ ಆರ್‌ಎನ್‌ ಐನಿಂದ ಹೊಸದೊಂದು ನೊಂದಣಿ ಸಂಖ್ಯೆ ಪಡೆದು 2018ರ ಅಕ್ಟೋಬರ್‌ 14ರಂದು ತುಮಕೂರು ಆವೃತ್ತಿಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ʼ ಬೆವರ ಹನಿʼ ದಿನಪತ್ರಿಕೆಗೆ ಎರಡು ಪ್ರತ್ಯೇಕ ಆವೃತ್ತಿಗಳು ಸೃಷ್ಟಿಯಾದವು. ಕೋಲಾರದ ʼ ಬೆವರ ಹನಿʼಗೀಗ ಹನ್ನೆರಡು ವರ್ಷ.

ಪತ್ರಿಕೆಯ ಪ್ರಸಾರ ಹೆಚ್ಚಿದಂತೆ ಸ್ವಂತ ಮುದ್ರಣಾಲಯದಲ್ಲಿ ಮುದ್ರಿಸಬೇಕಾಗುತ್ತದೆ, ಹಾಗಾಗಿ 2018ರ ಜನವರಿಯಲ್ಲಿ ತುಮಕೂರಿನ ಅಂತರಸನಹಳ್ಳಿ ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ಬಾಡಿಗೆ ಕಟ್ಟಡ ಪಡೆದು ನಾಲ್ಕು ಪುಟಗಳನ್ನು ಮುದ್ರಿಸಬಲ್ಲ ವೆಬ್‌ ಆಫ್‌ ಸೆಟ್‌ ಪ್ರೆಸ್‌ ಅರಂಭಿಸಿದೆ. ಮೊದಲ ಮೂರೂವರೆ ವರ್ಷ ಪತ್ರಿಕೆ ಕಪ್ಪು ಬಿಳುಪಿನಲ್ಲಿ ಮುದ್ರಣವಾಗುತ್ತಿತ್ತು. ತುಮಕೂರು ನಗರದಲ್ಲಿರುವ ನಿವೇಶನದಲ್ಲಿ ಮನೆ ಕಟ್ಟಿಸಿ ಸೆಟ್ಲ್‌ ಆಗಿಬಿಡೋಣ ಅಂತ ಅನ್ನಿಸಿ, ಮನೆಯ ಪ್ಲಾನ್‌ ಮಾಡಿಸಿ, ಲೈಸೆನ್ಸ್‌ ಪಡೆದು ಬ್ಯಾಂಕ್‌ ಸಾಲಕ್ಕೆ ಪ್ರಯತ್ನಿಸುತ್ತಿದ್ದಾಗ  ಹಿರಿಯ ಉದ್ಯಮಿಯೊಬ್ಬರು “ ಮನೆ ಯಾವತ್ತು ಬೇಕಿದ್ದರೂ ಸಿಗುತ್ತೆ, ಮೊದಲು ಕಲರ್‌ ಪ್ರೆಸ್‌ ಮಾಡಿ” ಅಂದರು. ಅದೇ ನಿವೇಶನವನ್ನು ಅಡಮಾನ ಮಾಡಿ ದೊಡ್ಡ ಮೊತ್ತದ ಸಾಲ ಮಾಡಿ ಒಟ್ಟು ಎಂಟು ಪುಟ ಮುದ್ರಿಸುವ ಸಾಮರ್ಥ್ಯವುಳ್ಳ ಮಲ್ಟಿಕಲರ್‌ ವೆಬ್‌ ಆಫ್‌ ಸೆಟ್‌ ಯಂತ್ರ ಹಾಗೂ ಪ್ಲೇಟ್‌ ಮೇಕಿಂಗ್‌ ಯಂತ್ರವನ್ನು ಸ್ಥಾಪಿಸಿದೆ. ಪುಟ್ಟ ಬಾಡಿಗೆ ಕಟ್ಟಡದಿಂದ ದೊಡ್ಡ ಬಾಡಿಗೆ ಕಟ್ಟಡಕ್ಕೆ “ ಮೈತ್ರೇಯ ಬುದ್ಧ ಪ್ರೆಸ್‌” ಶಿಫ್ಟ್‌ ಆಯಿತು. ಬಾಡಿಗೆ ಎರಡೂವರೆ ಪಟ್ಟು ಹೆಚ್ಚಾಯಿತು, ವಿದ್ಯುತ್‌ ಬಿಲ್‌ ಎಂಟು ಪಟ್ಟು ಹೆಚ್ಚಿತು. ಸಿಬ್ಬಂದಿ ಸಂಖ್ಯೆಯೂ ಅಷ್ಟೇ, ಸಾಲದ ಕಂತು ಬೇರೆ ಸೇರಿ ಹೊರೆಯಾಯಿತು. ಆದರೆ ಪ್ರತಿ ಮುಂಜಾನೆ ʼಬೆವರ ಹನಿʼ ದಿನಪತ್ರಿಕೆ ಬಣ್ಣದಲ್ಲಿ ಪ್ರಕಟವಾಗುತ್ತಿರುವುದನ್ನು ಕಂಡಾಗ ಎಲ್ಲ ಕಷ್ಟಗಳೂ ಪಕ್ಕಕ್ಕೆ ಸರಿದುಬಿಡುತ್ತವೆ.

ಕಳೆದ ಮಾರ್ಚಿ ತಿಂಗಳಿಂದ ʼಬೆವರ ಹನಿʼ ನಾಲ್ಕು ಪುಟಗಳಿಂದ ಎಂಟು ಪುಟಗಳಿಗೆ ಹಿಗ್ಗಿರುವುದು ನಿಮ್ಮ ಗಮನಕ್ಕೆ ಬಂದಿದೆ. ಪ್ರಸಾರ ವ್ಯಾಪ್ತಿಯೂ ಅಷ್ಟೇ, ತುಮಕೂರನ್ನು ಮೂಲ ಜಿಲ್ಲೆಯನ್ನಾಗಿ ಮಾಡಿಕೊಂಡು, ಅಕ್ಕಪಕ್ಕದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಪ್ರಸಾರ ವಿಸ್ತರಿಸಿದೆ, ಈಗ ʼಬೆವರ ಹನಿʼ ದಿನಪತ್ರಿಕೆ ಪ್ರಾದೇಶಿಕ ದಿನಪತ್ರಿಕೆ ಎಂಬ ಹೆಸರು ಪಡೆದುಕೊಂಡಿದೆ. ಈ ಎಲ್ಲ ಜಿಲ್ಲೆಗಳ ಸುದ್ದಿಗಳೂ ಏಕಕಾಲಕ್ಕೆ ಒಂದೇ ಆವೃತ್ತಿಯಲ್ಲಿ ಪ್ರಕಟಗೊಳ್ಳುತ್ತಿವೆ.ನಿಯಮ ಇರುವುದೇ ಹಾಗೆ, ಆದರೆ ಅವರಿವರ ಮುಂದೆ ಬಗ್ಗಿ ಡೊಗ್ಗು ಸಲಾಮು ಹೊಡೆಯುತ್ತ, ನಿಯಮಗಳನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಂಡು ಲಾಭ ಗಿಟ್ಟಿಸಿಕೊಳ್ಳುವುದರಲ್ಲಿ ಪರಿಣಿತಿ ಹೊಂದಿರುವ ಅವಕಾಶವಾದಿಗಳೂ ಇಲ್ಲಿದ್ದಾರೆ.

“ ಅಯ್ಯೋ ನಾನು ಮುಳುಗಿಹೋದೆ, ಸಿಬ್ಬಂದಿ ಸಂಬಳ ಕೊಡಲಾಗುತ್ತಿಲ್ಲ, ಬಾಡಿಗೆ ಕಟ್ಟಲಾಗುತ್ತಿಲ್ಲ, ಸಾಲ ತೀರಿಸುವುದಿರಲಿ ಬಡ್ಡಿಯನ್ನೂ ಕಟ್ಟಲಾಗುತ್ತಿಲ್ಲ ಅಂತ ಪತ್ರಿಕೆಯನ್ನು ಪ್ರಕಟಿಸುವ ಕಷ್ಟನಷ್ಟಗಳನ್ನು ಹೇಳಿಕೊಂಡು ಎದುರು ಬಂದವರನ್ನು ಗೋಳು ಹುಯ್ದುಕೊಳ್ಳುತ್ತ ಜಾಹಿರಾತಿಗಾಗಿ ಸಾವಿನ ಮನೆಯಲ್ಲೂ ಅವರ ಅಡಿಗೆ ಮನೆಯ ಸಾಸಿವೆ ಡಬ್ಬದಲ್ಲಿರಬಹುದಾದ ಚಿಲ್ಲರೆ ಕಾಸು ಪೀಕುವ ಆಸಾಮಿ ನಾನಲ್ಲ. ಕಷ್ಟದಲ್ಲಿರುವವರ ಎಷ್ಟೋ ಜನರ ಜಾಹಿರಾತುಗಳನ್ನು ಪ್ರಕಟಿಸಿದ ಮೇಲೆ ಬಿಲ್‌ ಕೊಡಲು ನನ್ನ ಮನಸ್ಸು ಒಪ್ಪುವುದಿಲ್ಲ.

ಎಂಟು ಪುಟಗಳ ಪತ್ರಿಕೆಯನ್ನು ಸುದ್ದಿ ಸಂಗ್ರಹಿಸಿ, ಸಂಪಾದಿಸಿ, ಪುಟ ವಿನ್ಯಾಸಗೊಳಿಸಿ, ಮುದ್ರಿಸಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ಕಡಿಮೆ ಎಂದರೂ ಹದಿನಾರು ರೂಪಾಯಿ ಖರ್ಚು ಬರುತ್ತದೆ, ಆದರೆ ಬಿಡಿ ಪ್ರತಿಯ ಮುಖ ಬೆಲೆ ರೂ. 3.00 ಮಾತ್ರ , ಈ ಮೊತ್ತದಲ್ಲಿ ಅರ್ಧದಷ್ಟು ಪತ್ರಿಕೆ ಹಂಚುವ ಖರ್ಚು.ಹಾಗಾಗಿ ಉಳಿದ ಎಲ್ಲ ಮೊತ್ತವನ್ನು ಜಾಹಿರಾತಿನಿಂದಲೇ ಭರಿಸಿಕೊಳ್ಳಬೇಕು. ಈ ಕಾರಣದಿಂದಲೇ ಪತ್ರಿಕಾ ವೃತ್ತಿ ಈ ಸಮಾಜದ ಇತರ ವೃತ್ತಿ ಅಥವಾ ಉದ್ಯಮಗಳಂತೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಮೊನ್ನೆ ವಿಶೇಷ ಸಂಚಿಕೆಗೆ ಲೇಖನ ಕೇಳಲು ಕರೆ ಮಾಡಿದಾಗ ಹಿರಿಯ ಪತ್ರಕರ್ತ ಹಿತೈಷಿಯೊಬ್ಬರು, “ಪತ್ರಿಕೋದ್ಯಮಿ ಆದಾಗ ಪತ್ರಿಕೆಯನ್ನು ಉಳಿಸಿ,ಬೆಳೆಸಲು ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗುತ್ತದೆ” ಎಂದರು. ಆದರೆ ನನ್ನ 36 ವರ್ಷಗಳ ಪತ್ರಿಕಾ ವೃತ್ತಿ ಅನುಭವದಲ್ಲಿ ಇಂಥ ರಾಜಿಗಳು ನಮ್ಮ ಘನತೆಯನ್ನು ಕುಗ್ಗಿಸುತ್ತವೆ, ಜೊತೆಗೆ ನಾವು ಜೀವನವಿಡೀ ಅಕ್ರಮಗಳನ್ನು ಮಾಡಿ ಸಂಪತ್ತು ಕೂಡಿಟ್ಟುಕೊಂಡವರ ಮನೆ ಬಾಗಿಲಿನ ಕಾಲೊರೆಸುವ ಬಟ್ಟೆಯಂತಾಗಿ ಬಿಡುತ್ತೇವೆ ಎಂಬುದು ನನಗೆ ಅರಿವಾಗಿದೆ. ಒಂದು ಪತ್ರಿಕೆಯ ಆರಂಭ ಮತ್ತು ಅಂತ್ಯಗಳೆರಡೂ ಓದುಗನಿಂದಲೇ ಎಂಬುದು ಅಂತಿಮ ಸತ್ಯ. ಮಿಕ್ಕಿದ್ದೆಲ್ಲ ಜರ್ನಲಿಸ್ಟಿಕ್‌ ಗಿಮಿಕ್‌ ಮಾತ್ರ.

ಕಳೆದ ಐದಾರು ವರ್ಷದಲ್ಲಿ ʼ ಬೆವರ ಹನಿʼ ದಿನಪತ್ರಿಕೆ ನಿಮ್ಮ ಗಮನ ಸೆಳೆದಿದೆ, ನಿಮ್ಮ ಮನದಲ್ಲಿ ನೆಲೆ ಕಂಡುಕೊಂಡಿದೆ. ನಿಮ್ಮ ಮನೆ ಅಂಗಳದಲ್ಲಿ ಪ್ರತಿ ಮುಂಜಾನೆ ಹಾಜರಾಗುತ್ತಿದೆ. ಜನಪರ, ನೇರ, ದಿಟ್ಟ, ನಿರಂತರ ಎಂಬ ಬೊಗಳೆ ಹೊಡೆಯುವುದಿಲ್ಲ. ತನ್ನ ಕೈಲಾದಷ್ಟು ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ಆ ಹಾದಿಯಲ್ಲಿ ಎದುರಾಗುವ ಯಾರನ್ನೂ , ಯಾವುದನ್ನೂ ಕೇರು ಮಾಡುವುದಿಲ್ಲ ಎಂಬುದು ʼ ಬೆವರ ಹನಿʼ ದಿನಪತ್ರಿಕೆಯ ಓದುಗರಿಗೆ ಅರ್ಥವಾಗಿದೆ ಅಂತ ಭಾವಿಸುತ್ತೇನೆ. ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಬೆಂಬಲಿಸುತ್ತಿರುವ ನನ್ನ ಕುಟುಂಬದ ಸದಸ್ಯರು, ಸಿಬ್ಬಂದಿ ಹಾಗೂ ಎಲ್ಲ ಹಿತೈಷಿಗಳಿಗೂ, ಎಲ್ಲ ಓದುಗರು ಹಾಗೂ ಜಾಹಿರಾತುದಾರರಿಗೂ ನಾನು ರುಣಿಯಾಗಿರಬಯಸುತ್ತೇನೆ.

ಕಡೇ ಮಾತು, ʼ ನಿಮ್ಮ ಅಚ್ಚುಮೆಚ್ಚಿನ ʼ ಬೆವರ ಹನಿʼ ದಿನಪತ್ರಿಕೆ ಬಿಡುಗಡೆ ಆದ ನಂತರ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಸಮಾರಂಭವನ್ನು ಮಾಡಲಾಗಿಲ್ಲ, ಈಗ ಆರನೇ ವರ್ಷದಲ್ಲಿ ಒಂದು ಪುಟ್ಟ ಸಮಾರಂಭವನ್ನು ಮುಂದಿನ ನವೆಂಬರ್‌ ಐದರಂದು ತುಮಕೂರು ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ. ಆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬನ್ನಿ, ಆಹ್ವಾನಿತರ ಮಾತು ಕೇಳಿ, ಓದುಗರ ಸಂವಾದದಲ್ಲಿ ಭಾಗವಹಿಸಿ,ಮಧ್ಯಾಹ್ನ ಎಲ್ಲರೊಟ್ಟಿಗೆ  ಊಟ ಮಾಡಿ, ಮರೆಯಬೇಡಿ.

ಎಂದಿಗೂ ನಿಮ್ಮವ

ಕುಚ್ಚಂಗಿ ಪ್ರಸನ್ನ