ನೀರಿನ ಬಿಕ್ಕಟ್ಟುಗಳು  ಮತ್ತು  ಸಾಧ್ಯತೆಯ ಹುಡುಕಾಟಗಳು

ಬೋರು ಕೊರೆದ ಒಂದೂವರೆ ವರ್ಷಕ್ಕೆ ಬಾವಿ ಬತ್ತಿಹೋಯಿತು. 86ರಲ್ಲಿ ಊರಿಗೆ ಕರೆಂಟು ಬಂತು. ದುಡ್ಡಿರುವವರು ಒಬ್ಬೊಬ್ಬರೆ ತಮ್ಮ ಹೊಲಗಳಲ್ಲಿ ಬೋರು ಕೊರೆಸಿ, ಬೇಸಿಗೆಯಲ್ಲೂ ನೆಲ ನಗುವಂತೆ ಮಾಡಿದರು. ದುಡ್ಡಿಲ್ಲದವರು ಮನೆಯ ಸದಸ್ಯರಂತಿದ್ದ ಆಡು-ಕುರಿ ಹಸು-ಎಮ್ಮೆಗಳನ್ನು ಮಾರಿ ಬಂದ ದುಡ್ಡಿನಲ್ಲಿ ಬಾವಿ ಕೊರೆಸಿದರು.2000ದ ಹೊತ್ತಿಗೆ 120 ಮನೆಯ ಊರಲ್ಲಿ 200ಕ್ಕೂ ಮಿಕ್ಕಿನ ಬೋರುಗಳು ಕೋಟ್ಯಾಂತರ ವರ್ಷಗಳ ನೀರನ್ನು ನೆಲದಾಳದಿಂದ ಬಾಚಿ ಬಾಚಿ ಬರಿದು ಮಾಡತೊಡಗಿದವು. 

ನೀರಿನ ಬಿಕ್ಕಟ್ಟುಗಳು  ಮತ್ತು  ಸಾಧ್ಯತೆಯ ಹುಡುಕಾಟಗಳು

 

ನೆಲದ ಸೊಲ್ಲು


ಡಾ.ನೆಲ್ಲುಕುಂಟೆ ವೆಂಕಟೇಶ್


     ಮೊದ ಮೊದಲ ನೆನಪುಗಳಿವು. ನಮ್ಮ ಊರ ಮಧ್ಯದಲ್ಲೊಂದು ಬಾವಿಯಿತ್ತು. ಅರವತ್ತು ಅಡಿ ಮೀರಿ ಆಳವಿರಬಹುದು. ಹಗ್ಗ ಹೊರುವುದಕ್ಕೇ ಒಂದಾಳು ಬೇಕಿತ್ತು. ಮನೆ ಮನೆಗಳಲ್ಲಿ ಅಕ್ಕಿ ಮತ್ತು ನೀರು ಪೋಲು ಮಾಡದೆ ಬಳಸುವ ವಸ್ತುಗಳಾಗಿದ್ದವು. ಪಶುಪಾಲನೆಯಿಂದ ನಿಧಾನಕ್ಕೆ ಕೃಷಿಗೆ ಹೊರಳುತ್ತಿದ್ದ ಹಾಗೂ ಬಹುಪಾಲು ಒಂದೇ ಸಮುದಾಯವಿದ್ದ ಊರು ನನ್ನದು. ಇತರ ಊರುಗಳಿಗಿಂತ ಎತ್ತರದಲ್ಲಿತ್ತು. ಪಶುಪಾಲನೆ ಮುಖ್ಯವಾಗಿದ್ದ ಕಾರಣಕ್ಕೆ ಎತ್ತರದ ಪ್ರದೇಶಗಳಲ್ಲಿದ್ದರೆನ್ನಿಸುತ್ತದೆ. ಬ್ರಾಹ್ಮಣರು, ಒಕ್ಕಲಿಗರು, ಲಿಂಗಾಯ್ತರು ಕೆರೆ ಹಿಂದಿನ ಊರುಗಳಲ್ಲಿದ್ದರು. ಆಗ ಅಲ್ಲೆಲ್ಲ ಹಸಿರು ಸಿರಿಯುಕ್ಕಿ ಹರಿಯುತ್ತಿತ್ತು. ಕಬ್ಬು , ಬಾಳೆ, ಸೀಬೆ, ತೆಂಗು ತೋಟಗಳು ಸದಾ ನಲಿದಾಡುತ್ತಿದ್ದವು. ಥರಾವರಿ ಹೂವುಗಳ, ಆಲೆಮನೆಯ ಬೆಲ್ಲದ ಸುಗಂಧ ಗಾಳಿಯಲೆಯಲ್ಲಿ ತೇಲುತ್ತಿತ್ತು. ನನ್ನೂರಿನಲ್ಲಿ ನಾಟಿ ಹಸುಗಳು, ಎಮ್ಮೆಗಳು, ಕುರಿ ಮೇಕೆಗಳು ತುಂಬಿ ತುಳುಕುತ್ತಿದ್ದವು. ನಮ್ಮ ಮನೆಯಲ್ಲೇ ಹತ್ತತ್ತಿರ ನೂರೈವತ್ತು ಸಂಖ್ಯೆಯಲ್ಲಿದ್ದವು. ನೀರು ನಲಿಯುತ್ತಿದ್ದ ಊರುಗಳಲ್ಲಿ ಹಾಲಿನ ಡೈರಿಯೂ, ಸೀಮೆ ಹಸುಗಳೂ ಬಂದಿದ್ದವು. ಕೇವಲ ಒಂದೆರಡು ಕಿ.ಮೀ ಅಂತರದಲ್ಲಿದ್ದ ಈ ಊರುಗಳು ಎರಡು ಭಿನ್ನ ಲೋಕಗಳಂತಿದ್ದವು. 


    ಆದರೆ ನನ್ನೂರಿನಲ್ಲಿ ಅಪಾರ ಸಂಖ್ಯೆಯ ಹಲಸು ಮತ್ತು ಮಾವಿನ ಮರಗಳಿದ್ದವು. ಒಂದೊಂದು ಹಲಸಿನ ಮರವೂ ಮುಕ್ಕಾಲು ಎಕರೆ ಭೂಮಿಯನ್ನು ತಬ್ಬಿ ತೊನೆಯುತ್ತಿದ್ದವು.ಹೂತ ಮಾಮರಗಳ ಗುಂಪು ಪಂಪನ ಬನವಾಸಿಯ ಭ್ರಮೆಯುಟ್ಟಿಸುತ್ತಿದ್ದವು. ಅರೆ ಕೆಂಪು, ಕೆನೆಗೆಂಪು ಬಣ್ಣದ ಹೂಗಳು,ಗಿಣಿ ಹಸಿರಿನ,ಕೆಂಪು ಹಸಿರಿನ ಮಾವಿನ ಮರಗಳು ಇಂದು ನನ್ನ ಎದೆಯ ಗೋರಿಯೊಳಗೆ ಕುಂತು ಬಿಕ್ಕಳಿಸುತ್ತಿವೆ.


      ಕೈಚಾಚಿದ ಕಡೆಯೆಲ್ಲ ಜೇನುಗಳು, ಮಳೆಗಾಲದಲ್ಲಿ ನೋಟ ನೆಟ್ಟ ಕಡೆಯೆಲ್ಲ ಬುಟ್ಟಿ ಬುಟ್ಟಿ ಅಣಬೆಗಳು, ಮರ ಮರಗಳಲ್ಲೂ ಹಕ್ಕಿಗಳು. ಕುವೆಂಪು ಕಾದಂಬರಿಗಳನ್ನು ಓದುವಾಗಲೆಲ್ಲ ನಾವು ಪಾತ್ರಗಳಾಗಿ ಬಿಡುವುದು ಈ ನೆನಪುಗಳ ಕಾರಣಕ್ಕೇ ಅನ್ನಿಸುತ್ತದೆ. ಅಣಬೆ ನೆಲದ ಆರೋಗ್ಯವನ್ನು, ಜೇನು-ಹಕ್ಕಿಗಳು ಮರ ಗಿಡಗಳ ಆರೋಗ್ಯವನ್ನು ಸಾರಿ ಹೇಳುವ ಗಂಧರ್ವ ಗೀತೆಯ ಪಾತ್ರಗಳು. ಊರ ಸುತ್ತೆಲ್ಲ ಬಾವಿಗಳಿದ್ದವು. ರಾಟೆಗಳಲ್ಲಿ ಎತ್ತುಗಳ ಗಾಣಗಳಲ್ಲಿ ನೀರುಂಡ ನೆಲ ಬಂಗಾರ ಬೆಳೆಯುತ್ತಿತ್ತು. ಊರಾಚೆ ಕಾಡಿನಲ್ಲಿ ಎಂದೂ ಬತ್ತಲಾರವೆಂಬ ಭ್ರಮೆ ಹುಟ್ಟಿಸುವ ಹಳ್ಳಗಳಿದ್ದವು. ಹಾಲಿನಂಥಾ ನೀರು. ನಾವು ಈಜು ಕಲಿತದ್ದೇ ಅಲ್ಲಿ. ಎಷ್ಟೊಂದು ಹಣ್ಣುಗಳು, ಮರೆಯಲಾಗದೆ ಕೂತು ನೆನಪು ನೇವರಿಸುತ್ತವೆ. [ಗ್ರಾಮಗಳ ಕುರಿತು ಹೀಗೆ ರಮ್ಯವಾಗಿ ಬರೆಯುವಾಗ ಡಾ.ಬಿ.ಆರ್.ಅಂಬೇಡ್ಕರರು ಕೆಂಗಣ್ಣು ಮಾಡಿ ಬಯ್ಯಬಹುದೆಂಬ ಎಚ್ಚರಿಕೆ ಖಂಡಿತ ಇದೆ. ನಮ್ಮ ಊರಿನ ಅಕ್ಕ ಪಕ್ಕದ ಗ್ರಾಮಗಳಲ್ಲೇ ದಲಿತರು ಮತ್ತು ದಲಿತೇತರರ ನಡುವೆ ತಾರತಮ್ಯಗಳನ್ನು ನೋಡಿದ್ದೇನೆ. ದಲಿತರಿಗೆ ಪ್ರತ್ಯೇಕವಾಗಿಯೇ ಇದ್ದ ಬಾವಿಯನ್ನು ನೋಡಿದ್ದೇನೆ. ಅದಕ್ಕಾಗಿ ಮೊದಲಿಗೇ ಬಾಬಾಸಾಹೇಬರ ಕ್ಷಮೆಕೇಳಿ ಮುಂದುವರೆಯುತ್ತೇನೆ. ಫ್ಲೋರೈಡ್ ನೀರು ಕುಡಿದು ಕೈ ಮುರುಟಿದ, ಮಯ್ಯ ಮೂಳೆಗಳೆಲ್ಲ ನೋಡ ನೋಡುತ್ತಲೇ ಸೊರಗಿ ಹೋಗುತ್ತಿರುವ, ಹಲ್ಲುಗಳು ಹಳದಿಯಾಗಿ ಕರಗಿ ಹೋಗುತ್ತಿರುವ ಜನರನ್ನು ನೋಡಿದರೆ, ನಗರೀಕರಣವನ್ನು ಬಾಬಾಸಾಹೇಬರು ಇಂದು ಬೇರೆ ರೀತಿಯೇ ನಿರ್ವಚಿಸುತ್ತಿದ್ದರು ಎಂದು ಅನ್ನಿಸುತ್ತದೆ. ನಗರದ ಸ್ಲಂಗಳಲ್ಲಿ ವಾಸಿಸುತ್ತಿರುವ ಬಹುಪಾಲು ದಲಿತ ಬಂಧುಗಳು ಧಾರುಣ ಸ್ಥಿತಿಯನ್ನು ಎದುರಿಸುತ್ತಿರುವ ಕುರಿತ ಅನೇಕ ವರದಿಗಳಿವೆ. ಒಂದು ವರದಿಯ ಪ್ರಕಾರ ಮುಂಬೈನ ಶೇ.6 ರಷ್ಟು ಭೂಪ್ರದೇಶದಲ್ಲಿ ಶೇ 50 ರಷ್ಟು ಜನ ವಾಸ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಇಂಥ ನಗರೀಕರಣವನ್ನು ತಾನೆ ಬಾಬಾಸಾಹೇಬರು ಹೇಗೆ ಸಮರ್ಥಿಸುತ್ತಾರೆ]. 


     ಮನೆಗಾದರೂ ಪೇಟೆಯಿಂದ ಏನು ಬರುತ್ತಿತ್ತು? ಕತ್ತೆಗಳ ಮೇಲೆ ಉಪ್ಪಿನ ಮೂಟೆಗಳು ಬರುತ್ತಿದ್ದವು. ಬೆಂಕಿಪೊಟ್ಟಣ, ಟೆರಿಲಿನ್ ಬಟ್ಟೆ, ಕಾಯಿಲೆ ಬಂದರೆ ಔಷಧಿ.. ನೆನಪಿಗೆ ದಕ್ಕಿ ಬರುವುದು ಇಷ್ಟೆ. ತರಕಾರಿ,ಕಾಳು-ಕಡಿ,ಮುಂತಾದವುಗಳನ್ನು ಪೇಟೆಯಿಂದ ತಂದರೆ ಮನೆ ಭಿಕಾರಿಯಾಗುತ್ತದೆಂದು ನಂಬಿ ಬದುಕುತ್ತಿದ್ದರು. ಅಮ್ಮ ನಾಟಿ ಕೋಳಿಗಳ ಮೊಟ್ಟೆ ಮಾರಿಯೇ ಹೊಲ ಕೊಂಡ ಉದಾಹರಣೆ ನಮ್ಮ ಮನೆಯಲ್ಲಿದೆ. ಇದು ಯಾವುದೋ ಶತಮಾನದ ಕಥೆಯಲ್ಲ. ಈ ದೇಶಕ್ಕೆ ತುರ್ತು ಪರಿಸ್ಥಿತಿ ಘೋಷಿಸಿದ ನಾಲ್ಕು ಗಂಟೆಗಳ ನಂತರ ಹುಟ್ಟಿದವನು ನಾನು. ಇವತ್ತಿಗೆ ಸುಂದರವೆನ್ನಿಸುವ ನೆನಪುಗಳೆಲ್ಲ ನನಗೆ ಇಪ್ಪತ್ತು ವರ್ಷಗಳಾಗುವವರೆಗೆ ಹಾಗೇ ಇದ್ದವು. ಹಾಗೆಂದು ಎಲ್ಲವೂ ಸರಿಯಾಗಿದ್ದವೆಂದೇನೂ ಅಲ್ಲ. 75 ಕ್ಕೆ ಮೊದಲು ತೀವ್ರ ಹಸಿವಿತ್ತು. ಅನ್ನಕ್ಕೆ ಹಾತೊರೆದ ನೆನಪುಗಳಿದ್ದವು.ಮಾತೆತ್ತಿದರೆ ಪುಷ್ಪಕ ವಿಮಾನದ ಬಗ್ಗೆ ಮಾತನಾಡುವ ನಾವು ಬೆಳೆದಿದ್ದನ್ನು ಸರಿಯಾಗಿ ಕಾಪಿಡಲು ಸೂಕ್ತವಾದ ಕಣಜಗಳಿರಲಿಲ್ಲ. ಹಗೇವುಗಳಲ್ಲಿ ಕೂಡಿಟ್ಟು ಮಳೆ ನೀರು ನುಗ್ಗಿ ದವಸ ಧಾನ್ಯಗಳೆಲ್ಲ ಕೊಳೆತು ಹಾಳಾಗುತ್ತಿದ್ದ ನೆನಪು ಹಲವರಿಗಿದೆ. ಸಾವಿರಗಟ್ಟಲೆ ವರ್ಷಗಳಿಂದ ಮರದ ನೇಗಿಲಿನಲ್ಲಿ ಎರಡು ಇಂಚು ನೆಲ ಉಳುತ್ತಾ ಬೆವರು ಬಸಿಯುತ್ತಾ ಜನ ದುಡಿಯುತ್ತಿದ್ದರು. 


     ಕಳೆದ ಶತಮಾನದ 90 ರ ದಶಕವೆಂಬುದು ದೇಶದ ಚರಿತ್ರೆಯಲ್ಲಿ ಅನೇಕ ಪಲ್ಲಟಗಳು ಸಂಭವಿಸಿದ ದಶಕ. ದೇಶದ ರಾಜಕಾರಣದಲ್ಲಿ ಮಂದಿರ ಮಸೀದಿಗಳು ರಂಗಸ್ಥಳಕ್ಕೆ ಬಂದವು. ಇಲ್ಲಿನ ಸಕಲ ಆಗು ಹೋಗುಗಳಲ್ಲಿ ಅಂತರರಾಷ್ಟ್ರೀಯ ಶಕ್ತಿಗಳು ಕೇಂದ್ರ ಶಕ್ತಿ ಎನ್ನಿಸಿಕೊಂಡವು. ಜಗತ್ತಿನ ದುಡ್ಡಿರುವ ಜನರು ಕೊಳ್ಳಬಹುದಾದ್ದೆಲ್ಲವನ್ನು ಮಾರಲು ಬೇಕಾದ ವೇದಿಕೆಯೊಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಿದ್ಧವಾಯಿತು. ನೀರು ಕೂಡ ಮಾರಾಟದ ವಸ್ತುವಾಯಿತು. ಈ ಸಂದರ್ಭದಲ್ಲಿ ವೇಗಗೊಂಡ ನಗರೀಕರಣದ ಪರಿಣಾಮ ನೇರವಾಗಿ ಕೃಷಿಯ ಮೇಲಾಯಿತು. ಬಹುಸಂಖ್ಯೆಯ ಜನರು ನಗರಗಳ ಕಡೆಗೆ ಮುಖಮಾಡಿದರು.ಮಕ್ಕಳು ಕಾನ್ವೆಂಟ್ ಶಾಲೆಗಳ ಕಡೆಗೆ ಹೊರಳಿ ‘ರೈನ್ ರೈನ್ ಗೋ ಅವೇ’ಎಂಬ ಹಾಡುಗಳನ್ನು ಹಾಡಲಾರಂಭಿಸಿದರು.’ಬಾರೋ ಬಾರೋ ಮಳೆರಾಯ’ ಹಾಡುವ ಮಕ್ಕಳೆದೆಯೊಳಗೆ ಕೀಳರಿಮೆಯೊಂದು ಸಣ್ಣಗೆ ಕೊರೆಯಲಾರಂಭಿಸಿತು. ಹೋಗು ಮಳೆಯೇ ಹೋಗು ಎಂಬ ಇಂಗ್ಲಿಷ್ ಕಲಿವ ಮಕ್ಕಳ ವೃಂದಗಾನಕ್ಕೆ ಹೆದರಿದಂತೆ ಕಂಡ ಮೋಡಗಳು ಮಳೆ ಸುರಿಸದೇ ಹಾರಲಾರಂಭಿಸಿದವು. ಹವಾಮಾನ ವೈಪರೀತ್ಯದ ಸಮಸ್ಯೆ ಜೋರಾಗತೊಡಗಿತು. ಎಂದೂ ಆತ್ಮಹತ್ಯೆ ಮಾಡಿಕೊಳ್ಳದ ರೈತರು ನೇಣಿನ ಕುಣಿಕೆಗೆ, ವಿಷದ ಬಾಟಲಿಗೆ ಕೈಯೊಡ್ಡಿದರು. ಕೃಷಿ ನಿಧಾನಕ್ಕೆ ಭೀಕರವಾದ ಸಂಕಷ್ಟಕ್ಕೆ ಸಿಕ್ಕಿಕೊಳ್ಳಲಾರಂಭಿಸಿತು. ಟಿ.ವಿ ಕಾರಣದಿಂದ ಸಮುದಾಯ ಪ್ರಜ್ಞೆ ಕುಸಿಯತೊಡಗಿತು.ಕೆರೆ ಕೊಳ್ಳಗಳ ನಿರ್ವಹಣೆ ಸರ್ಕಾರದ್ದು ಎಂಬ ನಿಲುವು ಬೆಳೆಯಿತು. 


     2000ನೇ ಇಸ್ವಿಯ ಹೊತ್ತಿಗೆ ಊರ ಸೂತ್ರವೆಲ್ಲ ತಾರಾ ಮಾರಾ ಆಗತೊಡಗಿತು. ಅಲ್ಲಿಂದ ಬರೀ ಬಿಸಿಯುಸಿರು. ಆತ್ಮಹತ್ಯೆಗಳು,ಬರಡು ಬರಡಾಗುತ್ತಿರುವ ನೆಲ, ಎಂದೂ ಕಾಣದ ತಲ್ಲಣ. ನನಗೆ ನೆನಪಿರುವಂತೆ ಇದಕ್ಕೆ 15 ವರ್ಷಗಳ ಚರಿತ್ರೆಯಿದೆ. 1984-85 ರ ಹೊತ್ತಿಗೆ ಊರ ಮಧ್ಯೆ ಮಾಯಾರೂಪಿ ಬೃಹದಾಕಾರದ ಲಾರಿಗಳೆರಡು ಬಂದು ನಿಂತವು. ಬಂದು ನೆಲವನ್ನು ಗರಗರಾ ಕೊರೆದು ಹಾಕಿತು. ಅವತ್ತಿಗೆ 120 ಅಡಿ ಮೀರಿ ಕೊರೆಯಲಾಗದೆ ನಿಲ್ಲಿಸಿದರು. ಲಾರಿಯನ್ನೆ ಎತ್ತಿ ಎಸೆಯುವಂತೆ ನೀರು ನುಗ್ಗುತ್ತಿತ್ತು. ನೀರು ಕಂಡು ಊರು ಸಂಭ್ರಮಿಸಿತು. ಹೊಸ ಕೊಳವೆಯೇ ನವ ಗಂಗೆಯೆಂದು ಜನ ಪೂಜೆ ಮಾಡಿ ಸಂಭ್ರಮಿಸಿದರು.ವಾರೊಪ್ಪತ್ತಿನಲ್ಲಿ ಕೈಪಂಪು ಕೂರಿಸಿದರು. ಅವತ್ತಿಗೆ ಹಗ್ಗ ಗಿಗ್ಗಗಳೆಲ್ಲ ಮೂಲೆ ಸೇರಿಹೋದವು. ಜನರ ನಿಷ್ಕರುಣೆಗೆ ಹಗ್ಗ ಮಾತ್ರವಲ್ಲ ಹಗ್ಗ ಹೊಸೆವವರೂ ಕೊರಗಿದರು. ಶತಮಾನಗಳ ಅವಲಂಬನೆಯೊಂದು ಈ ಮೂಲಕ ಮುರಿದು ಬಿತ್ತು. ತಮ್ಮ ಕಷ್ಟಕ್ಕೆ ದೇವರು ನೀಡಿದ ವರವೆಂದು ಹೆಂಗಸರು ಹಿಗ್ಗಿದರು. ಮಜ್ಜನದ್ವೇಷಿ ಒಂದಿಷ್ಟು ಮಕ್ಕಳಿಗೆ ಇದೊಂದು ಶಾಪವಾಯಿತಷ್ಟೆ. 


     ಬೋರು ಕೊರೆದ ಒಂದೂವರೆ ವರ್ಷಕ್ಕೆ ಬಾವಿ ಬತ್ತಿಹೋಯಿತು. 86ರಲ್ಲಿ ಊರಿಗೆ ಕರೆಂಟು ಬಂತು. ದುಡ್ಡಿರುವವರು ಒಬ್ಬೊಬ್ಬರೆ ತಮ್ಮ ಹೊಲಗಳಲ್ಲಿ ಬೋರು ಕೊರೆಸಿ, ಬೇಸಿಗೆಯಲ್ಲೂ ನೆಲ ನಗುವಂತೆ ಮಾಡಿದರು. ದುಡ್ಡಿಲ್ಲದವರು ಮನೆಯ ಸದಸ್ಯರಂತಿದ್ದ ಆಡು-ಕುರಿ ಹಸು-ಎಮ್ಮೆಗಳನ್ನು ಮಾರಿ ಬಂದ ದುಡ್ಡಿನಲ್ಲಿ ಬಾವಿ ಕೊರೆಸಿದರು.2000ದ ಹೊತ್ತಿಗೆ 120 ಮನೆಯ ಊರಲ್ಲಿ 200ಕ್ಕೂ ಮಿಕ್ಕಿನ ಬೋರುಗಳು ಕೋಟ್ಯಾಂತರ ವರ್ಷಗಳ ನೀರನ್ನು ನೆಲದಾಳದಿಂದ ಬಾಚಿ ಬಾಚಿ ಬರಿದು ಮಾಡತೊಡಗಿದವು. ತರಕಾರಿ ಹಣ್ಣುಗಳಿಂದ ಊರ ಮನೆಗಳಲ್ಲಿ ದುಡ್ಡು ಹರಿಯತೊಡಗಿತು. ನಾಗರಿಕತೆ ಹೊಸ ದಿಕ್ಕಿಗೆ ಹೊರಳತೊಡಗಿತು. 


    ದನ ಕರುಗಳನ್ನು ಹೀಗೆ ನಿಷ್ಕರುಣೆಯಿಂದ ಮಾರಿಬಿಡಲು ಕಾರಣ ಹಣದ ಸಮಸ್ಯೆಯೊಂದೇ ಅಲ್ಲ.ಅವುಗಳನ್ನು ಮೇಯಿಸುವುದು ದಂಡವೆಂದು ಭಾವಿಸಿದ್ದೂ ಕಾರಣವಾದರೆ, ಅವು ಕಂಡ ಕಂಡವರ ತೋಟಗಳಿಗೆ ನುಗ್ಗಿ ಜಗಳವೇಳುತ್ತದೆಂಬುದು ಇನ್ನೊಂದು ಕಾರಣವಾಗಿತ್ತು.ಮೊದಲಾಗಿದ್ದರೆ ಹೊಲ ಕುಯಿಲು ಮುಗಿದ ನಂತರ ಅವುಗಳನ್ನು ಯಾರೂ ಹಿಂದೆ ಬಿದ್ದು ಮೇಯಿಸುತ್ತಿರಲಿಲ್ಲ.ತಮ್ಮ ಪಾಡಿಗೆ ತಾವು ಮೇಯ್ದು, ಹಳ್ಳಕೊಳ್ಳಗಳಲ್ಲಿ ನೀರು ಕುಡಿದು ಕಾಡು ಮೇಡುಗಳಲ್ಲಿ ಕರು ಹಾಕಿ, ದೊಡ್ಡ ದೊಡ್ಡ ಹಲಸಿನ ಮರದ ಕೆಳಗೆ ಮಲಗಿ ಮೆಲುಕು ಹಾಕಿ ಸಂಜೆಯಾದೊಡನೆ ಸಾಲುಗಟ್ಟಿ ಮನೆ ಸೇರುತ್ತಿದ್ದ ಹಸುಗಳು ಕೊಳವೆ ಬಾವಿಗಳು ಬಂದ ಐದು ವರ್ಷಕ್ಕೆ ಸಾವಿರಾರು ವರ್ಷಗಳ ಒಡನಾಡಿ ಮನುಷ್ಯರ ಹೊಸ ದಾಹದ ನಿಷ್ಕರುಣೆಗೆ ಸಿಕ್ಕಿ ನಾಮಾವಶೇಷವಾಗಿ ಹೋದವು. ಇಲ್ಲ ತಮ್ಮ ಒಡಲನ್ನು ಯಾವುದೋ ದೇಶದ ಹೋರಿಗಳ ವೀರ್ಯಕ್ಕೆ ಜಾಗಕೊಟ್ಟು ಹಾಲು ಕರೆವ ಯಂತ್ರಗಳಿಗೆ ಜನ್ಮಕೊಟ್ಟು ಮರೆಯಾದವು. ಹೊಲದ ಬದುಗಳಲ್ಲಿದ್ದ ದೊಡ್ಡ ದೊಡ್ಡ ಹಲಸು,ಬೇವು ಮುಂತಾದ ಮರಗಳು ಬೆಳೆಗಳಿಗೆ ಅಡ್ಡಿಯೆಂದೂ ಹಕ್ಕಿ ಮಂಗಗಳಂತ ಬೆಳೆ ಪೀಡಕಗಳಿಗೆ ಆವಾಸಸ್ಥಾನವೆಂದು ಕಡಿದು ಮಾರಿದರು. ತರಕಾರಿ ಮಾರಿ ದುಡ್ಡು ಬಂದ ಕಾರಣಕ್ಕೆ ಮರ ಕಡಿದು ತೊಲೆ ಮಾಡಿ ಕಾಂಕ್ರೀಟು ಮನೆ ಕಟ್ಟಿ ಪ್ರತಿಷ್ಟೆ ಹೆಚ್ಚಿತೆಂದು ಖುಷಿಪಟ್ಟರು. ಊರಾಚೆಯ ಹೊಲಗಳಿಗೆ ನೀಲಗಿರಿ ಕಳೆನೆಟ್ಟು ಹುಲ್ಲು ಹುಲ್ಲಾದ ಭೂಮಿಯನ್ನು ಬೋಳು ಬೋಳಾಗಿಸಿದರು. ಇದಿಷ್ಟು ನಡೆವ ಹೊತ್ತಿಗೆ ಊರ ಮಧ್ಯದ ಕೈಬೋರು ಕೆಸರು ಮಣ್ಣೆತ್ತಿತೂರತೊಡಗಿತು. ಮಣ್ಣಿನೆರಡು ಕಣಗಳ ಬೆರೆಸಿ ಜೀವ ತುಂಬಿದ ಅಂಟು ಬೂದಿಯಾಗಿದೆ. ನೀರೆಂದರೆ ಬರೀ ನೀರೇ?ನೀರೆಲ್ಲ ಊ ತೀರ್ಥವೇ!. ದುರಂತವೆಂದರೆ ಕೆರೆ ಮೇಲಿನವರೂ, ಕೆರೆ ಕೆಳಗಿನವರೆಲ್ಲರೂ ನಿಧಾನಕ್ಕೆ ಸಮಾನ ದುಃಖಿಗಳಾಗತೊಡಗಿದರು.ಈಗ ಯಾರ ಬೋರಲ್ಲೂ ನೀರಿಲ್ಲ.ಆದರೂ ಹಠತೊಟ್ಟಂತೆ ಭೂಗರ್ಭ ಸೀಳುವ ಕೆಲಸ ಮುಂದುವರೆಯುತ್ತಲೇ ಇದೆ. ಸಾವಿರದೈನೂರು ಅಡಿ ಮೀರಿ ಕೊರೆದರೂ ತೇವದ ಪಸೆಯಿಲ್ಲ. ಸೀಮೆಂಟಿನಂಥ ಧೂಳು ನೆಲಗರ್ಭದಿಂದ ಆಕ್ರಂದಿಸುತ್ತಾ ಹಾರುತ್ತದೆ. ಈಗ ಎಲ್ಲವೂ ಬರಡು. ಗಿಳಿ ಗುಬ್ಬಿಗಳು ಬುಟ್ಟಿಗಟ್ಟಲೆ ಅಣಬೆಗಳು ಎಲ್ಲಿಹೋದವೋ?ಮನೆತನಕ್ಕೊಂದು ಆತ್ಮಹತ್ಯೆ ಕುಣಿಯುತ್ತಿದೆ. ಹೊಲಕ್ಕೊಂದು ಕೇಸು ಬಿದ್ದಿದೆ. ಊರ ಹೆಂಗಸರನೇಕರು ಯಾವುದೋ ಬಟ್ಟೆ ಫ್ಯಾಕ್ಟರಿಗಳಲ್ಲಿ ಜುಜುಬಿ ದುಡ್ಡಿಗೆ ಬೆವರು ಹರಿಸುತ್ತಿದ್ದಾರೆ. ಊರ ಗೂಡಂಗಡಿಗಳಿಂದ ದೇಶ ದೇಶಾಂತರಕ್ಕೆ ನನ್ನ ಜನರ ದುಡಿಮೆ ಹರಿದು ಹೋಗುತ್ತಿದೆ. ಸಾಯುವುದಕ್ಕೆ ಕೊಂಡ ವಿಷದ ಬಾಟಲಿಯ ದುಡ್ಡೂ ಸೇರಿ. ಬೀದಿ ಗೊಂದಿಗಳಲ್ಲಿ ಹೆಂಡ ಮಾರುವುದು ಹೆಚ್ಚಿ ಹೋಗಿದೆ. ಊರು ಸಾವಿನ ಕುಲುಮೆಯಂತೆ ಕಾಣುತ್ತಿದೆ. ಇದಿಷ್ಟರ ನಡುವೆ ನಾಡಿನುದ್ದಗಲಕ್ಕೂ ಊರೂರ ತುಂಬ ಇಂದ್ರನರಮನೆಯಂಥಾ ದೇವಾಲಯ, ಮಸೀದಿ, ಚರ್ಚುಗಳು ಜಿದ್ದಿಗೆ ಬಿದ್ದಂತೆ ತಲೆಯೆತ್ತುತ್ತಿವೆ. ಮನುಷ್ಯತ್ವವೆಂಬುದು ಕೊಳೆತು ನಾರುತ್ತಿದೆ. ನಮ್ಮ ಹಿರಿಯರಿಗೆ ದೇವಸ್ಥಾನಗಳಿಗಿಂತ ಕೆರೆ-ಕಟ್ಟೆಕುಂಟೆ, ನೆಟ್ಟ ಮರಗಳು ನಿಜದ ದೇವರ ಜಾಗಗಳೆಂದು ಅನ್ನಿಸಿದ್ದವು. ಮೈಮಾರಿ ಬದುಕಿದ್ದ ಹೆಂಗಸರೂ ಕೆರೆ ಕಟ್ಟಿಸಿ ಪುಣ್ಯ ಬೇಡಿದ ನಾಡು ನಮ್ಮದು. ಬೊಗಸೆ ನೀರು ಮತ್ತು ನೆರಳುಗಳಲ್ಲಿ ದೇವರ ಭಾವಿಸಿ ಬದುಕಿದ ಜನಪದಗಳ ವಾರಸುದಾರರು ನಾವು. ಊರ ಸುತ್ತಲು ಇರುವ ಹತ್ತಿಪ್ಪತ್ತು ಕಟ್ಟೆಗಳಿಗೆ ಊರ ಹಿರಿಯರ ಹೆಸರುಗಳಿವೆ. ಎಲ್ಲವೂ ಬತ್ತಿ ಹೋಗಿವೆ. ಮರುಜೀವಕ್ಕೆ ಹಾತೊರೆಯುತ್ತಿವೆ. ಅದ ಬಿಟ್ಟು ಬದುಕುತ್ತಿರುವ ನಮಗೆಂಥ ದರಿದ್ರದ ರೋಗ ಅಂಟಿಕೊಂಡಿದೆ? ಸತ್ತ ಹಸುಗಳನ್ನು ಹೂತು ಬಸವಣ್ಣನೆಂದು ಸಮಾಧಿ ಪೂಜೆ ಮಾಡುತ್ತಾರೆ. ಯಾರನ್ನೂ ದ್ವೇಷಿಸದೆ ಎಲ್ಲರನ್ನೂ ಒಳಗೊಂಡು ಊರುಕಟ್ಟಿದ್ದರು, ಹಿರಿಯರು. ಕೆರೆ-ಕಟ್ಟೆ,ಗಿಡ-ಗಂಟೆಗಳ ಉಸ್ತುವಾರಿ ಬಿಳಿ ಬಟ್ಟೆಯವರದೆಂಬ ಭಾವ ಜನರೊಳಗಿದೆ. ಊರುಗಳ ನೋಡಿದರೆ ಪುರೋಹಿತರು, ದಲ್ಲಾಳಿಗಳು, ಬಿಳಿ ಬಟ್ಟೆಯವರು ಮಾತ್ರ ಒಂದಿಷ್ಟು ಸುಖವಾಗಿರುವಂತೆ ಕಾಣುತ್ತಾರೆ. ಇಂಥ ಹೊತ್ತಲ್ಲಿ ಚೀನಾದ ತಾವೋಗಳು ನೆನಪಾಗುತ್ತಾರೆ. ಅವರ ತಾತ್ವಿಕ ದರ್ಶನವಿದು. 

      ತಾವೋ ಪ್ರಕಾರ ‘’ಆಳುವ ಮಂದಿ ಕುಗ್ಗಿರುವಾಗ ಅಥವಾ ಖಿನ್ನರಾಗಿರುವಾಗ ಜನತೆಯು ಸುಖವಾಗಿರುತ್ತದೆ, ಸಮಾಧಾನದಿಂದಿರುತ್ತದೆ: ಆಳುವವನು ಪುಟಿಯುವಂತಿದ್ದರೆ ಮತ್ತು ಸ್ವಯಂ ದೃಢವಾಗಿದ್ದರೆ ಜನತೆಯು ಗೊಣಗುತ್ತಿರುತ್ತದೆ, ಅತೃಪ್ತಿಯಿಂದಿರುತ್ತದೆ”.[ಚೀಣಾದಲ್ಲಿ ತತ್ವಶಾಸ್ತ್ರ .ರಾಮಕೃಷ್ಣ.ಪು.49,ನವಕರ್ನಾಟಕ-2015] ನಮ್ಮ ಪರಿಸ್ಥಿತಿಗೂ ಇದು ಯಥಾವತ್ತು ಅನ್ವಯವಾಗುವಂತಿದೆ. ಜನರ ಕಷ್ಟವೇ ಆಳುವವರ ಆಧಾರವಾಗಿರುವಂತೆ ಕಾಣುತ್ತಿದೆ. ಬಯಲು ಸೀಮೆಯ ಬಲು ದೊಡ್ಡ ಕಷ್ಟ ನೀರಿನ ಕೊರತೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರನ್ನು ಗಮನಿಸಿದರೆ ಅತಿ ನೀರಿನ ಲಭ್ಯತೆಯೂ ಶಾಪವೇ. ಇಬ್ಬರೂ ಕಷ್ಟ ಪರಿಹಾರಕ್ಕಾಗಿ ದೊಡ್ಡ ಹೊಟ್ಟೆಯ ಟಿ.ವಿ ಯ ಜ್ಯೋತಿಷಿಗಳ ಮುಂದೆ ಕೂತಿದ್ದಾರೆ. ಜನರು ತಮ್ಮ ವಿವೇಕದ, ಜ್ಞಾನದ ಪಂಚೇಂದ್ರಿಯಗಳನ್ನು ಒತ್ತೆಯಿಟ್ಟು ದುಡಿದದ್ದೆಲ್ಲವನ್ನೂ ಈ ನಿಸರ್ಗ ವಿರೋಧಿಗಳ ಹುನ್ನಾರಗಳಿಗೆ ನೈವೇದ್ಯ ಅರ್ಪಿಸುತ್ತಿದ್ದಾರೆ. ಇಂಥ ಕತ್ತಲ ನಡುವೆ ಭರವಸೆಯ ದೊಂದಿಗಳು,ಮಿಂಚು ಹುಳುಗಳು ಅಲ್ಲಲ್ಲಿ ಕಾಣುತ್ತಿವೆ. ನೆಲ-ನೀರು,ಪ್ರಾಣಿ-ಮನುಷ್ಯರನ್ನು ಏಕ ಘಟಕವೆಂದು ಭಾವಿಸಿ ಚಿಂತಿಸುವುದೇ ಆಧ್ಯಾತ್ಮ. ನಿಜದ ದೇವರ ಹುಡುಕಾಟ, ನಿಜ ಧಾರ್ಮಿಕತೆ, ನಿಜ ರಾಜಕೀಯ ಎಂದು ಮಾತನಾಡುವವರು ಅಲ್ಲಲ್ಲಿ ಕಾಣಿಸುತ್ತಿದ್ದಾರೆ. ಗಾಂಧಿ, ಫುಕುವೋಕಾ, ವಿಟ್ಮನ್, ಪಾಳೇಕರ್, ರಾಜೇಂದ್ರಸಿಂಗ್, ಬಹುಗುಣ, ತಿಮ್ಮಕ್ಕ, ಬೀರಜ್ಜ ಹೀಗೆ ಎಣಿಸುತ್ತಾ ಹೋಗಬಹುದಾದ ದೊಂದಿಗಳು ಉರಿಯಲಾರಂಭಿಸಿವೆ. 


(ಅಪೂರ್ಣ)