ಟ್ಯಾಲೆಂಟ್‌ಗಿಂತ ಟೆಂಪರ್‌ಮೆಂಟ್ ಸರಿಯಿರಬೇಕು...,

ಓರ್ವ ಹಾಡುಗಾರನಾಗಿ ಪುರ್ಯ ಧನಶ್ರೀ ರಾಗವನ್ನು ನಡುಗುತ್ತಾ 'ವಿರಹ' ವನ್ನು ಅನುಭವಿಸುತ್ತಾ ಅಷ್ಟೂ ನೋವನ್ನು ನಮ್ಮೆದೆಗೂ ದಾಟಿಸಿಬಿಡುವ ಆತನದು ನಿಜಕ್ಕೂ ultimate level of acting.

ಟ್ಯಾಲೆಂಟ್‌ಗಿಂತ ಟೆಂಪರ್‌ಮೆಂಟ್ ಸರಿಯಿರಬೇಕು...,

ದಯಾ ಗಂಗನಗಟ್ಟ

  

      ಅದೊಂದು ಸಂಜೆ ಕೆಲಸದ ಒತ್ತಡದಿಂದ ಸುಸ್ತಾಗಿ ಕುಳಿತಿದ್ದಾಗ, ಗೆಳೆಯ " ಇದೊಂದು ಹಾಡು ಕೇಳಿ ನೋಡು, ನಿನ್ನ ಸುಸ್ತೆಲ್ಲಾ ಚಾಪೆಸುತ್ತಿಕೊಂಡು ಓಡದೇ ಇದ್ದರೆ ಕೇಳು" ಎಂದು ಒಂದು ಸಾಂಗ್ನ ವಿಡಿಯೋ ಅನ್ನು ವಾಟ್ಸಪ್ ಮಾಡಿದ. ಓಹ್, ಅದ್ಭುತ ಹಾಡದು. ನಾನದನ್ನು ಕನಿಷ್ಟ ಎಂದರೂ ಹತ್ತಕ್ಕಿಂತ ಹೆಚ್ಚು ಬಾರಿ ಮತ್ತೆ ಮತ್ತೆ ಕೇಳುತ್ತಲೇ ಉಳಿದು ಬಿಟ್ಟೆ. 'ವಿರಹ್' ಎಂಬ ಹಾಡದು. ' ಬಂದಿಷ್ ಬ್ಯಾಂಡಿಸ್ಟ್ ' ಎಂಬ music based love story ಇರುವ ವೆಬ್ ಸೀರೀಸ್ ನದ್ದು. ಹಾಡಿನ ವಿಡಿಯೋ ನೋಡ್ತಾ ನೋಡ್ತಾ ನನಗೆ ಆಶ್ಚರ್ಯವಾಯ್ತು. ಮೂರು ನಿಮಿಷದ ಹಾಡಿನಲ್ಲಿ ಇಷ್ಟೊಂದು ಭಾವನೆಗಳನ್ನು ತುಂಬುವುದು ಹೇಗೆ? ಇದೇನು ಮಾಯೆ , ಸ್ವರ್ಗದ ರಾಗ ಅಂದರೆ ಇದೇನಾ ? ನಾನು ಭೂಮಿಯಲ್ಲೇ ಇದೀನಾ? ಅಂತ ಬೆರಗಾದೆ. I was spellbound.

    ಈ ಹಾಡಿನಲ್ಲಿ ನನಗೆ ಇನ್ನೂ ಇಷ್ಟ ಆಗಿದ್ದು ಅತುಲ್ ಕುಲಕರ್ಣಿ ಎಂಬ ಮಾಯಕಾರ ನಟ. ದಿಗ್ವಿಜಯ ಎಂಬ ಸಂಗೀತಗಾರನನ್ನು ಮೋಹಿನಿಯು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ತನ್ನ ಕಾನೂನುಬದ್ಧವಾಗಿ ವಿವಾಹವಾದ ಪತಿಯನ್ನು ಬಿಡಲಾಗದ ಅಸಹಾಯಕತೆ, ತನ್ನ ಪಾಲಿಗೆ ಮೋಹಿನಿಯೇ ನಿಜವಾದ ಪ್ರೇಮದೇವತೆ ಎಂಬುದನ್ನು ಮಾತುಗಳಲ್ಲಿ ಹೇಳಿದ್ದರೆ ಸರಿಯೇ ಅನಿಸುತ್ತಿರಲಿಲ್ಲವೇನೋ ಎಂಬಂತೆ ದಿಗ್ವಿಜಯ ಆಲಾಪ್‌ಗಳಲ್ಲಿ, ಮುಖದ ಅಭಿವ್ಯಕ್ತಿಯಲ್ಲಿ, ತಬಲಾ, ಸಿತಾರ್, ಓಕಲ್ ಧ್ವನಿಯ ನಡುವೆ, ಕಣ್ಣ ನೋಟದಲ್ಲೇ ಹೇಳಿಬಿಡುವ ರೀತಿ ಅದ್ಭುತ. ಆ ಹಾಡು ಮುಗಿದಾಗ ತಣ್ಣಗೆ ಮೈ ಮನವನ್ನು ಆವರಿಸುವ ನಿಶಬ್ದವಿದೆಯಲ್ಲಾ, ಆಹಾ!. ಅತುಲ್ ಕುಲಕರ್ಣಿ ಎಂಬ ತೀಕ್ಷ್ಣ ಕಣ್ಣಿನ ಸೀರಿಯಸ್ ಮುಖಭಾವದ ನಟ ಅವತ್ತು ನನಗೆ ಹುಚ್ಚು ಹಿಡಿಸಿ ಬಿಟ್ಟಿದ್ದು ಸುಳ್ಳಲ್ಲ. ಓರ್ವ ಹಾಡುಗಾರನಾಗಿ ಪುರ್ಯ ಧನಶ್ರೀ ರಾಗವನ್ನು ನಡುಗುತ್ತಾ 'ವಿರಹ' ವನ್ನು ಅನುಭವಿಸುತ್ತಾ ಅಷ್ಟೂ ನೋವನ್ನು ನಮ್ಮೆದೆಗೂ ದಾಟಿಸಿಬಿಡುವ ಆತನದು ನಿಜಕ್ಕೂ ultimate level of acting.

     ನಟ ಅತುಲ್ ಕುಲಕರ್ಣಿ ಭಾರತೀಯ ಚಿತ್ರರಂಗದ ಶ್ರೇಷ್ಠ ನಟ. ಪ್ರಚಾರ, ಗ್ಲಾಮರ್ ಇತ್ಯಾದಿ ಯಾವ ಸದ್ದೂ ಮಾಡದೇ ತಮ್ಮ ನಟನೆಯಿಂದ ಮಾತ್ರವೇ ಸುದ್ದಿಯಾದ ನಟ. ಅತುಲ್ ಕುಲಕರ್ಣಿ ನಮ್ಮವರೇ. ಕನ್ನಡಿಗ. ಅದೂ ನಮ್ಮ ಬೆಳಗಾವಿಯವರು. ಇದು ಈತನ ಬಗ್ಗೆ ನನಗಿರುವ ಹೆಮ್ಮೆಗೆ ಇನ್ನೊಂದು ಗರಿ. ಕರ್ನಾಟಕದಲ್ಲೇ ಓದಿ, NSD (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ದಿಂದ ಉತ್ತೀರ್ಣರಾದ ಅತುಲ್ 1997 ರಲ್ಲಿ 'ಭೂಮಿ ಗೀತ' ಎಂಬ ಕನ್ನಡ ಚಿತ್ರದ ಮೂಲಕವೇ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದೂ ಕೂಡ. 'ಕ್ಯಾರಿ' ಎಂಬ ಮರಾಠಿ ಚಲನಚಿತ್ರ ಮತ್ತು ಮರಾಠಿ ರಂಗಭೂಮಿಯ ನಂಟು ಇವರ ಪ್ರತಿಭೆಗೆ ವೇದಿಕೆ ಒದಗಿಸಿ ಅಲ್ಲೇ ಹೆಚ್ಚು ಬೇರೂರುವಂತೆ ಮಾಡಿತು. ಹಿಂದಿ, ಮರಾಠಿ, ಇಂಗ್ಲಿಷ್, ತೆಲುಗು, ಮಲಯಾಳಂ, ಇಂಗ್ಲಿಷ್ ಕನ್ನಡ ಹೀಗೆ ಪ್ರತಿಯೊಂದು ಭಾಷೆಯಲ್ಲೂ ಅತುಲ್ ನಟಿಸಿದ್ದಾರೆ. 10ನೇ ವಯಸ್ಸಿನಿಂದ ನಟನೆ ಆರಂಭಿಸಿದ ಅತುಲ್ ಇಂದು ಹಿಂದಿ ಚಿತ್ರರಂಗದ ಟಾಪ್ ನಟ. 2001ರಲ್ಲಿ ಮಧುರ್ ಭಂಡಾರ್ಕರ್ ನಿರ್ದೇಶನದ ‘ಚಾಂದಿನಿ ಬಾರ್’ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟು ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ' ಹೇ ರಾಮ್ 'ಚಿತ್ರದಲ್ಲಿ ಶಾರುಖ್ ಖಾನ್, ರಾಣಿ ಮುಖರ್ಜಿ, ನಾಸಿರುದ್ದೀನ್ ಶಾ, ಗಿರೀಶ್ ಕಾರ್ನಾಡ್, ಓಂ ಪುರಿ ಸೇರಿದಂತೆ ಅನೇಕ ಹಿರಿಯ ನಟರೆಲ್ಲರ ನಡುವೆ ಅತುಲ್ ಕುಲಕರ್ಣಿಯ ಅಭಿನಯವನ್ನು ಪ್ರೇಕ್ಷಕರು ಹೆಚ್ಚು ಮೆಚ್ಚಿದರು. 2006 ರಲ್ಲಿ, 'ರಂಗ್ ದೇ ಬಸಂತಿ' ಅಂತಹ ಕಲ್ಟ್ ಸಿನಿಮಾದ 'ಲಕ್ಷ್ಮಣ್ ಪಾಂಡೆ' ಎಂಬ ಪಾತ್ರ ಹಿಟ್ ಆದ ನಂತರ ಟಿವಿ ಮತ್ತು ಪತ್ರಿಕೆಗಳು ಅಮೀರ್ ಖಾನ್ ಗಿಂತ ಹೆಚ್ಚು ಅತುಲ್ ಅವರನ್ನೇ ಸಂದರ್ಶನ ಮಾಡಿದವು. ಆಗಿನ ಸಂದರ್ಶನವೊಂದರಲ್ಲಿ ಪಾತ್ರವನ್ನು ಆಯ್ಕೆಮಾಡುವ ಮಾನದಂಡದ ಬಗ್ಗೆ ಅತುಲ್ ಕುಲಕರ್ಣಿ, “ನನ್ನ ಗಮನ ಪಾತ್ರಕ್ಕಿಂತ ಇಡೀ ಕಥೆಯ ಮೇಲೆ ಹೆಚ್ಚಾಗಿರುತ್ತದೆ. ಅದನ್ನು ಪ್ರೇಕ್ಷಕರು ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ವೀಕ್ಷಕರ ದೃಷ್ಟಿಕೋನದಿಂದ ಕಥೆಯನ್ನು ಕೇಳುತ್ತೇನೆ. ಸಾಮಾನ್ಯ ಜನರ ನಡತೆಗೆ ಹತ್ತಿರವೆನಿಸುವ ಪಾತ್ರಗಳು ನನಗಿಷ್ಟ. ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಎನ್ನುತ್ತಾರೆ. ಕಾಮಿಡಿ, ಡಾರ್ಕ್ ಹೀಗೆ ಪ್ರತಿಯೊಂದು ಪಾತ್ರವನ್ನು ಹೇಗೆ ಮಾಡಬೇಕೆಂದು ಅತುಲ್ ಗೆ ಚೆನ್ನಾಗಿ ಗೊತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

     ಪ್ರತಿಭಾವಂತ ನಟರುಗಳ ಬಗ್ಗೆ ನಾವೇನಾದರೂ ಮಾತನಾಡುವುದೇ ಆದರೆ ಅದರಲ್ಲಿ ಅತುಲ್ ಹೆಸರನ್ನು ತರದೇ ಇರಲು ಸಾಧ್ಯವೇ ಇಲ್ಲ. ಈತನ ಸಿನಿಮಾಗಳಲ್ಲಿ ಮೂರು ಸಿನಿಮಾಗಳ ಪಾತ್ರಗಳ ಬಗ್ಗೆ ನಾನಿಲ್ಲಿ ಬರೆಯಲೇ ಬೇಕು.

    ಮೊದಲನೆಯದು; ' ದೇವರಾಯಿ' ಎಂಬ ಮರಾಠಿ ಚಿತ್ರದ ' ಶೇಷ್' ನ ಪಾತ್ರ. ದೇವರಾಯಿ ಎಂಬ ಕಾಡನ್ನು ಕಲ್ಪಿಸಿಕೊಂಡು, ಅದು ನಿಜವಾಗಿ ಇದೆ, ತನ್ಬೊಂದಿಗೆ ಮಾತನಾಡುತ್ತದೆ ಎಂದು ಭಾವಿಸುವ, ಸೆನ್ಸಿಟಿವ್ ಮತ್ತು ಬ್ರಿಲಿಯಂಟ್ ಆದ, ಇಲ್ಲಾಜಿಕಲ್ ಆಗಿ ಯೋಚಿಸುವ ವ್ಯಕ್ತಿಯೊಬ್ಬನ ಮಾನಸಿಕ ತಳಮಳವನ್ನು ಅತುಲ್ ತಾವೇ ಅನುಭವಿಸಿದಂತೆ ನಟಿಸಿದ್ದಾರೆ ಇದರಲ್ಲಿ.

    ಎರಡನೆಯದು; 'ಗಾಂಧಿ ವಿರುದ್ಧ ಗಾಂಧಿ' ಎಂಬ ನೀನಾಸಂ ತಿರುಗಾಟ ಅರ್ಪಿಸುವ ರಂಗಪ್ರಯೋಗದ ಸಿನಿಮಾದ ಗಾಂಧಿಯ ಪಾತ್ರ. ಗಾಂಧಿ ಪಾತ್ರವನ್ನ ಅತುಲ್ ಅದೆಷ್ಟು ಆವಾಹಿಸಿಕೊಳ್ಳುತ್ತಾರೆ ಎಂದರೆ ಗಾಂಧಿಯ ಪಾತ್ರವನ್ನ ಈತನಲ್ಲದೇ ಬೇರ್ಯಾರೂ ಮಾಡಲೇ ಬಾರದು ಎಂದು ಅನಿಸದಿರದು.

    ಮೂರನೆಯದು; ಯೂಸುಫ್ ಮಲಾಲ ಎಂಬ ಪಾಕಿಸ್ತಾನದ ಕ್ರಾಂತಿ ಕಿಡಿ ಹುಡುಗಿಯ ಜೀವನ ಚರಿತ್ರೆಯನ್ನು ಹೇಳುವ ' ಗುಲ್ ಮಕೈ ' ಎಂಬ ಹಿಂದಿ‌ ಸಿನಿಮಾದಲ್ಲಿ ಆಕೆಯ ತಂದೆ ಜಿಯಾವುದ್ದೀನನ ಪಾತ್ರ. ಇಲ್ಲಿ ಪಾತ್ರದ ನಟ ಮುಖ್ಯ ಅನಿಸುವುದೇ ಇಲ್ಲ.ತಂದೆಯೇ ಮುಖ್ಯವಾಗಿ ಕಾಣುತ್ತಾನೆ. ಜಾತಿ, ಕುಟುಂಬವನ್ನು ದಾಟಿದರೇ ಹೆಣ್ಣುಮಗಳು ಮನೆಯ ಮಾನ ಕಳೆದಳು ಎಂದು ಬೊಬ್ಬೆಯಿಡುವ ತಂದೆಯರನ್ನು ಕಂಡ ನಮಗೆ ದೇಶಕ್ಕೆ ದೇಶವೇ ಬ್ಯಾನ್ ಮಾಡಿ ಹೊರಹಾಕುವಂತಹ ದಿಟ್ಟ ಕೆಲಸ ಮಾಡಿದ ಮಗಳ ಬಗ್ಗೆ ಹೆಮ್ಮೆ ಪಟ್ಟು ಅವಳ ಕಾರಣದಿಂದಾಗಿ ಹಲವು ಕಷ್ಟಗಳಿಗೆ ಎದೆಯೊಡ್ಡುವ ದಿಟ್ಟ ಅಪ್ಪನ ಒಳತುಡಿತಗಳಿಗೆ ಜೀವತುಂಬುವ ಅತುಲ್ ಕಣ್ಣೀರು ತರಿಸುತ್ತಾರೆ. ಈ ಪಾತ್ರಕ್ಕಾಗಿ ಅತುಲ್ ಮಲಾಲಳ ತಂದೆಯನ್ನು ಭೇಟಿಯಾಗಿ, ಅವರು ಬರೆದಿರುವ ಪುಸ್ತಕವನ್ನು ಓದಿಕೊಂಡು, ಕೆಲದಿನ ಅವರೊಡನೆ ಕಳೆದು, ಅವರ ಬದುಕು, ಹಾವ ಭಾವ‌ ಆಟಿಟ್ಯೂಡ್ ಗಳನ್ನು ಕಲಿತುಕೊಳ್ಳುತ್ತಾರೆ. ಅಷ್ಟರ ಮಟ್ಟಿನ ಬದ್ಧತೆ ಅದೆಷ್ಟು ನಟರಿಗೆ ಇದ್ದೀತು!

     ಅತುಲ್ ಗೆ ಸಾಹಿತ್ಯದಲ್ಲಿ ಬಲು ಆಸಕ್ತಿ. ಆಂತ್ರಪಾಲಜಿ, ಫಿಲಾಸಫಿಯನ್ನು ಹೆಚ್ಚು ಓದಿಕೊಂಡಿರುವ ಈತನ ಪ್ರಕಾರ " ಜೀವನಕ್ಕಿಂತ ಮುಖ್ಯವಾದ ವೃತ್ತಿ ಯಾವುದೂ ಇಲ್ಪ. ಟ್ಯಾಲಟ್ ಗಿಂತ ಟೆಂಪ್ರಮೆಂಟ್ ಸರಿಯಿರಬೇಕು. ಸಹಜವಾಗಿ ಬದುಕಿಬಿಡಬೇಕು. ಮನುಷ್ಯ ಮೊದಲು ಕೇವಲ ಮನುಷ್ಯ ಅಷ್ಟೇ. ತಪ್ಪು ಸರಿ ನೀತಿ ಮೌಲ್ಯ ಇದೆಲ್ಲ ನಾವು ಮಾಡಿಕೊಂಡಿದ್ದೇವೆ. ಆದರೆ ಮೂಲದಲ್ಲಿ ಮನುಷ್ಯ ಗುಣಗಳೇ ಬೇರೆ" ಎನ್ನುತ್ತಾನೆ.

    ಅತುಲ್ ಅವರದ್ದು ಕಲಾವಿದರ ಕುಟುಂಬ. 'ಪಿಯ ಬೆಹರೂಪಿಯ' ಮತ್ತು ' ಗುಲ್ಲಕ್' ಚಿತ್ರಗಳಲ್ಲಿ ನ no-fuss approach ಇರುವ harried house wife ಪಾತ್ರಗಳ ಮೂಲಕ ಹೆಸರು ಮಾಡಿರುವ ರಂಗಭೂಮಿ ಕಲಾವಿದೆ ಗೀತಾಂಜಲಿ ಕುಲಕರ್ಣಿ ಇವರ ಪತ್ನಿ. ಗಂಡ ಹೆಂಡತಿ ಸೇರಿ ಚಿಕ್ಕ ಮಕ್ಕಳಿಗಾಗಿ ಕ್ವೆಸ್ಟ್ ಎಜುಕೇಶನ್ ಸಪೋರ್ಟ್ ಟ್ರಸ್ಟ್ ಎಂಬ NGO ಒಂದನ್ನು ನಡೆಸುತ್ತಾ, 14 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

    ಇತ್ತೀಚೆಗೆ ಚಿತ್ರಕಥೆಗಾರನಾಗಿ ಅವರ ಮೊದಲ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆ ಯಾಯಿತು‌. ಇಂಗ್ಲಿಷ್ ನ 'ಫಾರೆಸ್ಟ್ ಗಂಪ್' ಸಿನಿಮಾ ಕಥೆ ಆಧಾರಿತವಾದ ಇದರಲ್ಲಿ ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಅತುಲ್ ಒಬ್ಬ ಶ್ರೇಷ್ಠ ಬರಹಗಾರ. ಅಮೀರ್ ಖಾನ್ ನನ್ನು ಬೇವಜಾ ವಿರೋಧಿಸುವ ಜನರು ಅವರ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಕುರಿತು ಕುಹಕವಾಡಿದಾಗ. ನನಗೆ ಒಂದು ಭಿನ್ನ ಚಿತ್ರ ದಲ್ಲಿ ನಟಿಸಿದ ಖುಷಿಯಿದೆ. ನಟನೊಬ್ಬನಿಗೆ ಆಯ್ಕೆ ಮುಖ್ಯ. No ಎಂದು ಹೇಳುವವರು ಮಾತ್ರ ಮನುಷ್ಯರು. ಸೋಲು ಗೆಲುವು ಇದ್ದದ್ದೇ. ಓರ್ವ ಸ್ಕ್ರಿಪ್ಟ್ ರೈಟರ್ರಾಗಿ ನಾನು ಎಲ್ಲವನ್ನೂ ಗಮನಿಸುತ್ತೇನೆ" ಎನ್ನುತ್ತಾರೆ. ಈ ಕಾರಣದಿಂದಾಗಿ ಅತುಲ್ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲೂ ಇದ್ದಾರೆ.

    ಸತಾರಾದ ಬಳಿಯ ರಿಮೋಟ್‌ ಏರಿಯಾದಲ್ಲಿ ಇಪ್ಪತ್ತು ಎಕರೆ ಜಮೀನನ್ನು ಖರೀದಿಸಿ ಅದನ್ನ ಅರಣ್ಯವಾಗಿಸುವ ಮೂಲಕ ಪರಿಸರಕ್ಕೊಂದು ಸಣ್ಣ‌ಕೊಡುಗೆ. ಈ ಪ್ರಕೃತಿಯಿಂದ ನಾನು ಸಾಕಷ್ಟು ಕಿತ್ತುಕೊಂಡಿದ್ದೇನೆ‌ ಅದರ ಪರಿಹಾರಾರ್ಥವಾಗಿ ಸ್ವಲ್ಪ ಹಿಂತಿರುಗಿಸುವ ಪ್ರಯತ್ನ ಇದು ಅಷ್ಟೆ. ಇದು ಅತುಲ್ ಕುಲಕರ್ಣಿ ಅವರ ಮಾತು. ಪ್ರತಿಯೊಬ್ಬ ಮನುಷ್ಯನ ಆಸೆ ನಗರದ ಸುಸಜ್ಜಿತ ಜಾಗದಲ್ಲಿ ಒಂದು ಐಷಾರಾಮಿ ಮನೆ ಕಟ್ಟುವುದು. ಇಲ್ಲವೇ ಮನಾಲಿ,ಖಂಡಾಲದಂತಹಾ ಜಾಗದಲ್ಲಿ‌ ವಿಲ್ಲಾ,ರೆಸ್ಟೋರೆಂಟ್ ಕಟ್ಟೋದು. ಆದರೆ ಈ ತರದ ಭಿನ್ನ ಆಸೆಯುಳ್ಳ ವ್ಯಕ್ತಿಯೇ ಅತುಲ್ ಕುಲಕರ್ಣಿ.

     ಸಹ ಕಲಾವಿದ, ಖಳನಾಯಕನಾಗುವ ಮೂಲಕ ಚಲನಚಿತ್ರಗಳಲ್ಲಿನ ಯಶಸ್ಸಿನೊಂದಿಗೆ, ಅತುಲ್ ಕುಲಕರ್ಣಿ 2018 ರಲ್ಲಿ 'ದಿ ಟೆಸ್ಟ್ ಕೇಸ್' ಮೂಲಕ OTT ವೇದಿಕೆಗೆ ಪಾದಾರ್ಪಣೆ ಮಾಡಿದರು. 'ಸಿಟಿ ಆಫ್ ಡ್ರೀಮ್ಸ್', 'ಬಂದಿಶ್ ಬ್ಯಾಂಡಿಟ್ಸ್', 'ರುದ್ರ: ದಿ ಈಸ್ ಆಫ್ ಡಾರ್ಕ್ನೆಸ್' ಸೇರಿದಂತೆ ಹಲವು ಸರಣಿಗಳಲ್ಲಿ ಕಾಣಿಸಿಕೊಂಡರು. ನಿರ್ದೇಶಕ, ನಿರ್ಮಾಪಕ, ಟೆಕ್ನಿಷಿಯನ್, ಸ್ಕ್ರಿಪ್ಟ್ ರೈಟರ್, ಇತ್ಯಾದಿ ಹಲವು ರೂಪಗಳಿರುವ   ಬ್ರೆಕ್ಟ್ ಥಿಯರಿಯ ಎಲ್ಲಾ ಆಯಾಮಗಳನ್ನು ಆವಾಹಿಸಿಕೊಂಡಿರುವ ನಟ.

   ಅತುಲ್ ಕುಲಕರ್ಣಿ ಮತ್ತು ಕನ್ನಡ ಸಿನಿಮಾದ ನಂಟಿನ ಬಗ್ಗೆ ಗಮನಿಸಿದರೆ, ಆ ದಿನಗಳು, ಎದೆಗಾರಿಕೆ, ಆಕಾಶ್, ಮೈತ್ರಿ, ಕಾಫಿಶಾಫ್, ಅಳಿದು ಉಳಿದವರು, ಹೀಗೆ ಹಲವು ಚಿತ್ರಗಳನ್ನು ಹೆಸರಿಸಬಹುದು. ಅಗ್ನಿ ಶ್ರೀಧರ್ ಜೊತೆ ಸೇರಿ ಅವರದೇ ಕ್ಯಾರೆಕ್ಟರ್ ಇರುವ ಪಾತ್ರವನ್ನು 'ಆ ದಿನಗಳು' ಅಲ್ಲಿ ಮಾಡಿದ್ದಾರೆ. ಇದು ಮತ್ತು 'ಎದೆಗಾರಿಕೆ' ಎರಡೂ ಚಿತ್ರಗಳು ಭೂಗತ ಜಗತ್ತಿನ ಕುದಿ ಕುದಿ ಬದುಕನ್ನ ತೆರೆದಿಡುವಂತವು. ಅಗ್ನಿ ಶ್ರೀಧರ್‌ ಅವರು ಬರೆದ ಕಥೆಯ ಆಧಾರಿತ ಚಿತ್ರ. ಈ intriging ಪಾತ್ರಗಳ ಕುರಿತು ಮಾತನಾಡುತ್ತ " ಶ್ರೀಧರ್ ಅವರ ಪಾತ್ರವನ್ನು ಮಾಡುವಾಗ ಮಾತ್ರ ನಾನು ಜೀವಂತ ಪಾತ್ರವನ್ನು ಅನುಕರಣೆ ಮಾಡಲು ಸಾಧ್ಯವಾಗಲಿಲ್ಲ. ಅಂತಹಾ ಕ್ಯಾರೆಕ್ಟರ್ ಅದು, ಆ ಪ್ರಯತ್ನವನ್ನೂ ನಾನು ಪಡಲಿಲ್ಲ" ಎನ್ನುತ್ತಾರೆ. ಇನ್ನು ಮುಂದೆ ಅಗ್ನಿ ಶ್ರೀಧರ್ ಕುರಿತ ಪಾತ್ರವನ್ನೇನಾದರೂ ತರುವುದಾದರೆ ಅದನ್ನು ಅತುಲ್ ಬಿಟ್ಟು ಬೇರ್ಯಾರೂ ಮಾಡಲಾಗುವುದಿಲ್ಲ ಎನಿಸುವಂತಾ ನಟನೆ ಇದರಲ್ಲಿ ಅತುಕ್ವದು. ಅರವಿಂದ ಶಾಸ್ರಿಯವರ ಕಥೆ ಕಟ್ಟುವ ರೀತಿಗೆ ಮರುಳಾಗಿ ಅವರು ನಟಿಸಿದ ಚಿತ್ರ ' ಮೈತ್ರಿ'. ಪರಿಸ್ಥಿತಿಯ ದಾಳಕ್ಕೆ ಬಲಿಯಾಗಿ ರಿಮ್ಯಾಂಡ್ ಹೋಮ್ ಸೇರಿದ ಬಾಲಕ ಮತ್ತು ಆ ರಿಮ್ಯಾಂಡ್ ಹೋಮಿನ ವಾರ್ಡನ್ ನಡುವಿನ ಒಡನಾಟದ ಹಲವು ಆಯಾಮಗಳಲ್ಲಿ ಅಪರಾಧ ಜಗತ್ತಿನ ಬಗ್ಗೆ ಚಿಂತನೆಗೆ ಹಚ್ಚುವ ಕತೆಯಿರುವ ಚಿತ್ರವಿದು. ಶಿಸ್ತು, ಕ್ರೌರ್ಯ, ವ್ಯವಸ್ಥೆಗೆ ಸಿಕ್ಕ ವ್ಯಕ್ತಿಯ ನಡತೆ ಇವೆಲ್ಲವನ್ನೂ ಅತುಲ್ ಈ ಪಾತ್ರದಲ್ಲಿ ನಿರ್ವಹಿಸಿರುವ ರೀತಿ ಭಿನ್ನವಾಗಿದೆ.

    ವರ್ಸಟೈಲ್ ಆಕ್ಟರ್ ಎಂದು ಅತುಲ್ ಕುಲಕರ್ಣಿ ಅವರನ್ನು ಗುರುತಿಸುವಾಗ ಸ್ವಲ್ಪ ಗೊಂದಲ ನನಗೆ ಏಕೆಂದರೆ ಅತುಲ್ ಹಾಸ್ಯ ಮತ್ತು ಲವಲವಿಕೆಯ ರೊಮಾನ್ಸ್ ಪಾತ್ರಗಳಿಗೆ ಅಷ್ಟು ಸೂಕ್ತವಲ್ಲವೇನೋ. ಬಿಗುವಿನ ವಾತಾವರಣದ ಪಾತ್ರಗಳ ಮೂಲಕ ಒಂದು ಭಿನ್ನ ವಾತಾವರಣ ಸೃಷ್ಟಿಸಿ ಅದರ ಮೂಲಕವೇ ರಿಲ್ಯಾಕ್ಸನ್ನೂ ಕೊಡುವ ಸ್ಪೇಸ್ ಇರುವ ನಟ ಅತುಲ್. ಕಮಲಹಾಸನ್ ತರ ಎಲ್ಲದಕ್ಕೂ ಸಲ್ಲುವ ವರ್ಸಟೇಲ್‌ನೆಸ್ ಇವರಿಗಿಲ್ಲ. ಯಾವುದೋ ಒಂದು ಹಂತದಲ್ಲಿ‌ ಗಂಭೀರ, ಬುದ್ಧಿವಂತಿಕೆಯ ಪಾತ್ರಗಳಿಗೆ ಮಾತ್ರ ಕಂಫರ್ಟಾಗಿ ಕೂತು ಬಿಟ್ಟಿರುವುದು ಅತುಲ್ ಗೆ ಇರುವ ಮಿತಿಯೂ ಹೌದು. ಚಿಕೋವ್ ಮಾದರಿಯ 'ಸೈಕೋ ಫಿಸಿಕಲ್' ಅಪ್ರೋಚ್ ಅನ್ನು ಹೆಚ್ಚು ಆವಾಹಿಸಿಕೊಂಡಿರುವ ಅತುಲ್

  'ಸ್ಟ್ಯಾನ್ಸ್‌ಫೋರ್ಡ್ ಮೆಸ್ನ' ಟೆಕ್ನಿಕ್ಕಿಗೂ ಅಂಟಿಕೊಂಡಿದ್ದಾರೆ. ಯಾವುದೇ ನಟನ ಗೆಲುವು ತಾನು ಯಾವುದರಲ್ಲಿ ಹೆಚ್ಚು ಕಂಫರ್ಟ್ ಅಂತ ಗುರುತಿಸುವುದರಲ್ಲಿ ಇರುತ್ತದೆ... ಅತುಲ್‌ಗೆ ಬಹಳಷ್ಟು ಸಲ ಅದೇ ಕಂಫರ್ಟ್ ಶಾಪವಾದದ್ದು ಇದೆ. ಯಾವ ನಟ ಪ್ರೇಕ್ಷಕರ ಮೂಲ ಭಾವನೆಗಳ ಫಾಟ್‌ಫಾರ್ಮ್ ಗಳೊಂದಿಗೇ ಮಾತಾಡಿಕೊಳ್ಳುತ್ತಾ, ಅವರ ಸಾಮಾನ್ಯ ಭಾವನೆಗಳಾದ ಪ್ರೀತಿಯ ಗೊಂದಲ, ದ್ವೇಷ, ಅಸಹಾಯಕತೆ, ಅಪ್ಪನ ಜವಾಬ್ದಾರಿ, ಮಗನ ಉಡಾಳತನ, ಅಧಿಕಾರಿಯ ಒತ್ತಡದ ಬದುಕು ಇತ್ಯಾದಿಗಳನ್ನು ಹಿಡಿದು, ಈ ಎಲ್ಲಾ ಭಾವನೆಗಳು ನನ್ನವೂ ಕೂಡ ಎಂಬಂತೆ ನಟಿಸಿ, ಅದನ್ನ ನೆಗೆಟಿವ್ ಎಂಬಂತೆ ಅನಿಸಲು ಬಿಡದೇ ಅವೆಲ್ಲವೂ ಕೂಡ ವ್ಯಕ್ತಿಯ ಪಾಸಿಟಿವ್ ಭಾವಗಳೇ ಎಂಬಂತೆ ತೆರೆಯ ಮೇಲೆ ತಂದು ಬಿಡುತ್ತಾನೋ ಅವನ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಂತಹಾ ಗೆಲುವಿನ ಹಾದಿಯಲ್ಲಿರುವ ನಟ ಅತುಲ್ ಕುಲಕರ್ಣಿ.