ನೀರವ ಮೌನದ ಹಾದಿ ಹಿಡಿದ ಮಾನವತೆ

ಜೀವರಕ್ಷಣೆಯಿಂದ ವಂಚನೆಗೊಳಗಾದ ದೇಶವಾಸಿಗಳಿಗೆ ಹಾಗೂ ಆಳುವ ಸರ್ಕಾರಕ್ಕೆ ನೈತಿಕ ಧೈರ್ಯ-ಸ್ಥೈರ್ಯ-ಬೆಂಬಲ ನೀಡಬೇಕಾದ ರಾಜಕಾರಣಿಗಳು ಕರಾಳಕತ್ತಲಲ್ಲಿ ನಿಂತು ಬೆಳಕು ಕಾಣಲು ಹಂಬಲಿಸುತ್ತಿರುವ ಸಂತ್ರಸ್ತರತ್ತ ಸಹಾಯ ಹಸ್ತ ನೀಡುವುದಿರಲಿ, ಸ್ವಾಂತನ ಹೇಳುವಷ್ಟು ಸೌಜನ್ಯ ಕಳೆದುಕೊಂಡಿರುವುದು ವಿಪರ್ಯಾಸ!

ನೀರವ ಮೌನದ ಹಾದಿ ಹಿಡಿದ ಮಾನವತೆ


ವರ‍್ತಮಾನ 


ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ

    ‘ಭಾರತದ ಆತ್ಮ’ ನವದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಕಾರು ಬಾಂಬ್ ಸ್ಫೋಟಿಸುವುದರ ಮೂಲಕ ರಕ್ತದೋಕುಳಿ ಆಟವಾಡಿದ ಧರ್ಮಾಂಧರಿಂದಾಗಿ ಅಮಾಯಕ ನಾಗರಿಕರು ಮೃತಪಟ್ಟಿರುವುದು, ಹಲವರು ಗಾಯಗೊಂಡು ನರಳುತ್ತಿರುವುದು ವಿಧಿಯಾಟವಲ್ಲ! ರಕ್ತಬೀಜಾಸುರರ/ರಕ್ತಪಿಪಾಸುಗಳ ಕಪಟ ಆಟ!! ಇಂಥವರ ಸಂತತಿ ಅಳಿದುಹೋಗಲೆಂದು ಅದೆಷ್ಟೋ ಜೀವಗಳು ಪ್ರಾರ್ಥಿಸುತ್ತಿವೆ! 


    ಸದಾ ಶಾಂತಿ ಬಯಸುವ ರಾಷ್ಟ್ರವಾಸಿಗಳನ್ನು ಹೇಡಿಯಂತೆ ಬೆನ್ನಹಿಂದೆ ನಿಂತು ಸಾಯಿಸುವ ನೀತಿಸಂಹಿತೆ ಯಾವ ಧರ್ಮಗ್ರಂಥಗಳಲ್ಲಿಯೂ ಹೇಳಿಲ್ಲ. ಆದರೂ ‘ಧರ್ಮಾಂಧತೆ’ಯ ಮೌಢ್ಯಕ್ಕೆ ಜೋತು ಬಿದ್ದು ತನ್ನನ್ನೂ, ತಮ್ಮವರನ್ನೂ, ಪರರನ್ನೂ ಹಿಂಸಾತ್ಮಕವಾಗಿ ಸಾಯಿಸುವ ದರ‍್ವರ‍್ತನೆಯಲ್ಲಿ ಯಾವ ತಾತ್ವಿಕ, ಸೈದ್ಧಾಂತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳಿವೆ ಎಂಬುದು ದುರುಳರಿಗೆ ಸ್ಪಷ್ಟವಾಗಿ ತಿಳಿದಿದ್ದರೆ, ಅವರು ಇಂತಹ ಕೃತ್ಯಗಳಿಗೆ ಕೈಹಾಕುತ್ತಿರಲಿಲ್ಲವೇನೋ!


     ದೇವರ ಆಜ್ಞೆಯನ್ನು ಶಿರಸಾ ಪಾಲಿಸುವ ‘ವೈಟ್ ಕಾಲರ್’ ಮೂಲಭೂತವಾದಿಗಳು ಅಮಾಯಕರನ್ನು ಸಾಯಿಸುವ ಅಧಿಕಾರವನ್ನು ಆ ದೇವರಿಗೇ ಬಿಟ್ಟುಬಿಡಲಿ! ದೇವರಿಗೆ ‘ಪಾಪಿ’ ಯಾರು? ‘ಪುಣ್ಯಾತ್ಮ’ ಯಾರು ಎಂದು ಗುರುತಿಸುವ ಸಾಮರ್ಥ್ಯ ಇರುವುದಿಲ್ಲವೇ? ಜನರ ಪ್ರಾಣ ರಕ್ಷಿಸಬೇಕಾದ ಮೂಲಭೂತವಾದಿ ವೈದ್ಯರು ಸ್ಫೋಟಕಗಳ ಮೂಲಕ ಮತ್ತು ‘ರೈಸಿನ್’ ಎಂಬ ವಿಷವನ್ನು ಮಾನವಕುಲಕ್ಕೆ ಕುಡಿಸಿ ಸಾಯಿಸಬೇಕು ಎಂಬ ಆದೇಶ ಯಾವ ದೇವರು ನೀಡಿದ್ದಾನೆ? ಇವರು ತಮ್ಮ ವೈರಿಗಳೆಂದು ಭ್ರಮಿಸಿ-ಭಾವಿಸಿಕೊಂಡವರನ್ನು ಕೊಲ್ಲಲು ಹೋಗಿ ಜೊತೆಗೆ ತಮ್ಮ ಮತದವರನ್ನೂ ಕೊಂದುಹಾಕುವುದರ ಅರಿವು ಕಿಂಚಿತ್ತಾದರೂ ಇದೆಯೇ? ಇವರೆಲ್ಲ ಆರಂಕಿಗಳ ಸಂಬಳ ಪಡೆಯುವ ವೈದ್ಯರು ನಿರುದ್ಯೋಗಿಗಳೇ? ಮಾತೆತ್ತಿದರೆ, ಪಾಕಿಸ್ತಾನವು ‘ನಿರುದ್ಯೋಗ ಕಾರಣದಿಂದ ಯುವಕರು ಭಯೋತ್ಪಾದನೆಯತ್ತ ಹೊರಳುತ್ತಿದ್ದಾರೆ’ ಎನ್ನುವ ಹೇಳಿಕೆಗೆ ಮೊನ್ನೆ ನಡೆದ ಬಾಂಬ್ ಸ್ಫೋಟದ ರೂವಾರಿಗಳೇ ನಿಜಸಂಗತಿಯ ಉತ್ತರದಾಯಿಯಾಗುತ್ತಾರೆ.


* * *
    ದೆಹಲಿ ಕಾರ್ ಬಾಂಬ್ ಸ್ಫೋಟದ ನಂತರ ಕೇಂದ್ರದ ಗೃಹ ಸಚಿವಾಲಯ ತನ್ನ ಎಂದಿನ ಸಂಪ್ರದಾಯದಂತೆ ದೇಶದಾದ್ಯಂತ ‘ಹೈ ಅಲರ್ಟ್’ ಘೋಷಿಸಿದೆ! ಮಾರುಕಟ್ಟೆ, ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಜನರನ್ನು ತಪಾಸಿಸುತ್ತಿದ್ದಾರೆ! ಈ ಹೇಯಕೃತ್ಯ ನಡೆಯುವುದಕ್ಕಿಂತ ಮುಂಚೆಯೇ ‘ಕಟ್ಟೆಚ್ಚರ’ ವಹಿಸುವಂತೆ ತನ್ನ ಭದ್ರತೆ ಮತ್ತು ಗುಪ್ತಚರ ಇಲಾಖೆಗಳನ್ನು ಎಚ್ಚರಿಸಿದ್ದರೆ ಈ ದುರಂತ ನಡೆಯಲು ಆಸ್ಪದವಿರಲಿಲ್ಲ. ಹಿಂದಿನ ದಿನಗಳಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳ ನೆನಪೋಲೆಗಳು ಗೃಹಸಚಿವಾಲಯ ಮತ್ತು ಗುಪ್ತಚರ ಇಲಾಖೆಗಳ ಪಡಸಾಲೆಗೆ ತಲುಪಿಲ್ಲವೇ? ಮಾಧ್ಯಮಗಳೂ ಸಹಿತ ಪದೇ ಪದೇ ಆಂತರಿಕ ಭದ್ರತೆ ಮತ್ತು ಗುಪ್ತಚರ ವೈಫಲ್ಯದ ಬಗ್ಗೆ ಅನುಮಾನ ಮೂಡಿಸಿರುವುದನ್ನು ಸಚಿವಾಲಯ ಗಂಭೀರವಾಗಿ ಇಂದು-ಮುಂದೆಯೂ ಪರಿಗಣಿಸದಿದ್ದರೆ ಹೇಗೆ? ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಲ್ಲವೂ ಮುಗಿದುಹೋದ ಮೇಲೆ ‘ಹೈ ಅಲರ್ಟ್’ ಉದ್ಘಾರ ಎಂಬುದು ‘ಯುದ್ಧಕಾಲೇ ಶಸ್ತಾçಭ್ಯಾಸ’ ಎನ್ನುವಂತಾಗಿ ತನ್ನ ಗಾಂಭೀರ್ಯತೆಯನ್ನು ಕಳೆದುಕೊಂಡಿದೆ. ಇನ್ನಾದರೂ ‘ಹೈ ಅಲರ್ಟ್’ ಎಂಬುದು ಘಟನಾಪೂರ್ವ ಬ್ರಹ್ಮಾಸ್ತ್ರವಾಗಿ ಭಾರತೀಯರನ್ನು ರಕ್ಷಿಸಲಿ!


* *
       ಒಂದು ಕಡೆ ಕಾರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ನರಳುತ್ತಿರುವ ಅಮಾಯಕರು, ಇನ್ನೊಂದು ಕಡೆ ಧರ್ಮಾಂಧರಿಗೆ ನೆರಳಾಗಿ ನಿಂತು ಬೆಂಬಲಕೊಡುವ ಭಾರತದ ಮತಿಗೆಟ್ಟ ರಾಜಕಾರಣಿಗಳು, ಈ ದುರ್ಘಟನೆಯನ್ನು ತಮ್ಮ ದರಿದ್ರ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದೇ ಬಹುತ್ವ ಭಾರತ ನಿತ್ಯ ಎದುರುಗೊಳ್ಳುತ್ತಿರುವ ಬಹು ದೊಡ್ಡ ದುರಂತ! ಜೀವರಕ್ಷಣೆಯಿಂದ ವಂಚನೆಗೊಳಗಾದ ದೇಶವಾಸಿಗಳಿಗೆ ಹಾಗೂ ಆಳುವ ಸರ್ಕಾರಕ್ಕೆ ನೈತಿಕ ಧೈರ್ಯ-ಸ್ಥೈರ್ಯ-ಬೆಂಬಲ ನೀಡಬೇಕಾದ ರಾಜಕಾರಣಿಗಳು ಕರಾಳಕತ್ತಲಲ್ಲಿ ನಿಂತು ಬೆಳಕು ಕಾಣಲು ಹಂಬಲಿಸುತ್ತಿರುವ ಸಂತ್ರಸ್ತರತ್ತ ಸಹಾಯ ಹಸ್ತ ನೀಡುವುದಿರಲಿ, ಸ್ವಾಂತನ ಹೇಳುವಷ್ಟು ಸೌಜನ್ಯ ಕಳೆದುಕೊಂಡಿರುವುದು ವಿಪರ್ಯಾಸ!


* *
    ಸ್ವಾತಂತ್ರ್ಯೋತ್ತರ ಭಾರತವನ್ನು ಎಪ್ಪಂತ್ತೆಂಟು ವರ್ಷಗಳಿಂದಲೂ ಬಾಧಿಸುತ್ತಿರುವ ಈ ಮೂಲಭೂತವಾದದ ಬೇರನ್ನು ಕಿತ್ತು ಹಾಕುವುದು ಅಷ್ಟು ಸುಲಭವಲ್ಲ ಎಂಬ ಸಂದೇಶವನ್ನು ಭಯೋತ್ಪಾದಕರು ತಮ್ಮ ದೆಹಲಿ ಸ್ಫೋಟದ ಮೂಲಕ ಮತ್ತೊಮ್ಮೆ ಭಾರತ ಸರ್ಕಾರಕ್ಕೆ ರವಾನಿಸಿದೆ ಎಂದೇ ಅರ್ಥೈಸಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಮ್ಮ ನಂಬಿಗಸ್ಥ ಇಲಾಖೆಗಳ ಮೂಲಕ ದೇಶವಾಸಿಗಳ ಜೀವರಕ್ಷಣೆಯನ್ನು ತನ್ನ ಆಡಳಿತದ ಮೊದಲ ಆದ್ಯತೆಯಾಗಿ ಪರಿಗಣಿಸುವುದು ಈ ಹೊತ್ತಿನ ತುರ್ತು.


* *
ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ?
ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ?
ಅಕಟಕಟಾ, ಎನ್ನವನೆನ್ನವನೆನ್ನಯ್ಯಾ
ಕೂಡಲಸಂಗಮದೇವಯ್ಯಾ

     ‘ದೇವರು ಹುಟ್ಟಿಸಿದಲ್ಲಿ ಹುಟ್ಟಿ, ಅವನು ಸಾಯಿಸಿದಲ್ಲಿ ಸಾಯುವುದು ಅನಿವಾರ್ಯ. ಅವನು ಇರಿಸಿದಂತೆ ಇರಬೇಕಲ್ಲದೆ ನಾವು ಬಯಸಿದಂತೆ ಇರಲಾಗುವುದಿಲ್ಲ. ದೇವರೇ ಇದೆಂತಹ ಸ್ಥಿತಿ ತಂದೆ ಎಂದು ಗೋಳಾಡದೆ ನಿನ್ನ ಕೃಪೆ ಇದ್ದಂತಾಗಲಿ. ನನ್ನ ಅಳಿವು, ಉಳಿವು ನಿನ್ನದೇ’ ಎಂಬ ಬಸವಣ್ಣನವರ ವಚನ ಸಂದೇಶ ಸ್ಫೋಟದ ಸ್ಥಳದಲ್ಲಿ ಮೌನವಾಗಿ ಉಸುರುತ್ತಿತ್ತು. ಮೂಲಭೂತವಾದಿಗಳ ಮನದಲ್ಲಿ ಅಟ್ಟಹಾಸ ಕೇಕೆ ಹಾಕುತ್ತಿತ್ತು !!! ದೇಶ-ಭಾಷೆ-ಧರ್ಮಗಳ ನಡುವಿನ ವಿವೇಕರಹಿತ ಮೂಲಭೂತವಾದದಿಂದ ‘ಧರ್ಮಾಂಧತೆ’ಯ ಕಂದಕ ಸೃಷ್ಟಿಯಾಗಿದೆ; ಮಾನವತೆ ನೀರವ ಮೌನದ ಹಾದಿ ಹಿಡಿದಿದೆ!!