ಮಕ್ಕಳನ್ನು ಮುದ್ದು ಮಾಡಿ ಬೆಳೆಸುವ ಪೋಷಕರಿಗಾಗಿ ಸುಕುಮಾರಸ್ವಾಮಿಯ ರಕ್ತದ ಜಾಡನ್ನು ಹಿಡಿದ ನರಿಗಳು...
ಪೋಷಕರ ಜವಾಬ್ದಾರಿಯ ಕುರಿತಂತೆ ನಮಗೆ ಹಳಗನ್ನಡದ 'ವಡ್ಡಾರಾಧನೆ' ಕೃತಿಯಲ್ಲಿ ಬರುವ 'ಸುಕುಮಾರಸ್ವಾಮಿಯ ಕತೆ' ಬಹಳ ಉತ್ತಮ ಉದಾಹರಣೆ ಅನಿಸುತ್ತದೆ.

- ದಯಾ ಗಂಗನಗಟ್ಟ
ಮಕ್ಕಳ ಪೋಷಣೆ ಮಕ್ಕಳಾಟವಲ್ಲ,ಬಹಳ ಗಂಭೀರವಾದ,ವಿಶಾಲ ವ್ಯಾಪ್ತಿ ಇರುವ ವಿಷಯ, ಇವತ್ತಿನ ಮಗು ಮುಂದಿನ ಸಮಾಜದ ಓರ್ವ ವ್ಯಕ್ತಿ,ಅವನ ನಡತೆಗಳು ಎಷ್ಟು ವೈಯಕ್ತಿಕವೋ ಅಷ್ಟೇ ಸಾಮಾಜಿಕವೂ ಹೌದು,ಮಗುವೊಂದು ಹುಟ್ಟಿದಾಗ ಒಂದು ಕುಟುಂಬಕ್ಕೆ ತೆರೆದುಕೊಳ್ಳುತ್ತದೆ ಹಾಗೇ ಬೆಳೆಯುತ್ತಾ ಹೋದಂತೆ ಸಮಾಜಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತದೆ, ಕುಟುಂಬವೊಂದರಲ್ಲಿ ಮಗುವಿಗೆ ಸಿಗುವ ರಕ್ಷಣಾತ್ಮಕ ವಾತಾವರಣ ಸಮಾಜದಲ್ಲೂ ಅಷ್ಟೇ ಸುಲಭವಾಗಿ ಸಿಗುವುದಿಲ್ಲ, ಹೀಗಿರುವಾಗ ಮಗುವೊಂದನ್ನ ಬೆಳೆಸುವಲ್ಲಿ ಪೋಷಕರ ಪಾತ್ರ ಎಂತಹದ್ದು? ಇದು ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ವಿಷಯ, ಪೋಷಕರ ಜವಾಬ್ದಾರಿಯ ಕುರಿತಂತೆ ನಮಗೆ ಹಳಗನ್ನಡದ 'ವಡ್ಡಾರಾಧನೆ' ಕೃತಿಯಲ್ಲಿ ಬರುವ 'ಸುಕುಮಾರಸ್ವಾಮಿಯ ಕತೆ' ಬಹಳ ಉತ್ತಮ ಉದಾಹರಣೆ ಅನಿಸುತ್ತದೆ.
ಉಜ್ಜೇನಿ ಎಂಬ ಪಟ್ಟಣದಲ್ಲಿ ಯಶೋಭದ್ರೆ, ಸೂರದತ್ತ ಎಂಬ ಆಗರ್ಭ ಶ್ರೀಮಂತ ದಂಪತಿಗಳಿದ್ದರು, ಸಾಕಷ್ಟು ವರ್ಷಗಳು ಮಕ್ಕಳೇ ಇರದ ಅವರಿಗೆ ಕೊನೆಗೊಬ್ಬ ಮಗ ಹುಟ್ಟುತ್ತಾನೆ ಅವನೇ ಸುಕುಮಾರಸ್ವಾಮಿ, ಆಗ ಒಬ್ಬ ಜೋಯಿಸನು ‘ಇವನ ಅಪ್ಪ ಈಗ ದೇಶಾಂತರ ಹೋಗುತ್ತಾನೆ, ಮುಂದೆ ಈ ಮಗು ಯಾರಾದರೂ ಋಷಿಗಳ ರೂಪವನ್ನು ನೋಡಿದರೆ ಅವತ್ತೇ ಇವನೂ ದೇಶಾಂತರ ಹೋಗಿಬಿಡುತ್ತಾನೆ ’ ಎಂದು ಭವಿಷ್ಯ ನುಡಿಯುತ್ತಾನೆ, ಅದನ್ನು ನಿಜ ಮಾಡುವಂತೆ ಮಗ ಹುಟ್ಟಿದ ದಿನವೇ ಸೂರದತ್ತ ಸೆಟ್ಟಿಯು ತಪಸ್ಸಿಗೆ ಹೋಗಿಬಿಡುತ್ತಾನೆ. ಏನೆಲ್ಲಾ ಪ್ರಯತ್ನಪಟ್ಟರೂ ಗಂಡನನ್ನು ತಡೆಯಲಾಗದ ಯಶೋಭದ್ರೆ, ಬಯಸೀ ಬಯಸೀ ಪಡೆದ ಮಗನೂ ಕೈಬಿಟ್ಟು ಹೋದರೆ ಗತಿಯೇನು ಎಂದು ಯೋಚಿಸಿ, ಅವತ್ತಿನಿಂದ ಸುಕುಮಾರಸ್ವಾಮಿಯನ್ನು ಬಹಳ ಮುಚ್ಚಟೆಯಲ್ಲಿ ಬೆಳೆಸತೊಡಗುತ್ತಾಳೆ, ಸಕಲ ಸೌಲಭ್ಯಗಳೂ ಇರುವ ಬಂಗಲೆಯೊಂದರ ಮೂರನೇ ಮಹಡಿಯಲ್ಲಿ ಮಗನನ್ನು ಇರಿಸಿ ಹೊರಗಿನ ಪ್ರಪಂಚವೇ ಅರಿವಿಗೆ ಬರದಂತೆ ಸುಖದ ಸುಪ್ಪತ್ತಿಗೆಯಲ್ಲಿ ಮಗನನ್ನು ಸಾಕುತ್ತಾಳೆ, ಮಗನು ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದಾಗ ಅವನಿಗೆ ದೇವತಾಸ್ತ್ರೀಯನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರನ್ನು ಮದುವೆ ಮಾಡಿಸುತ್ತಾಳೆ,ಮುಂದೆ ಸುಕುಮಾರಸ್ವಾಮಿಯು ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು ಇತ್ಯಾದಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು, ಹಾಗೆಯೇ ಕಾಲ ಕಳೆಯಿತು.
ಒಮ್ಮೆ ಆ ಊರಿನ ರಾಜನಿಗೆ ಸುಕುಮಾರಸ್ವಾಮಿಯ ಶ್ರೀಮಂತಿಕೆಯ ಬಗ್ಗೆ ತಿಳಿಯುತ್ತದೆ, ತನಗಿಂತ ಶ್ರೀಮಂತರಾದ ಅವರ ವೈಭೋಗವನ್ನು ನೋಡಲು ಅವರ ಮನೆಗೆ ಹೋಗುತ್ತಾನೆ, ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ,ಎನ್ನುತ್ತಾಳೆ, ಆಗ ಸುಕುಮಾರಸ್ವಾಮಿ ಆಶ್ಚರ್ಯದಿಂದ ರಾಜರು ಅಂತ ಇರುತ್ತಾರೆಯೆ? (ರಾಜರೆಂಬರುಮೊಳರೆ?) ಅಂತ ಕೇಳಿದನಂತೆ, ಅಷ್ಟರಮಟ್ಟಿಗೆ ಅವನು ಹೊರ ಪ್ರಪಂಚಕ್ಕೆ ಅಪರಿಚಿತನಾಗಿರುತ್ತಾನೆ!
ಮತ್ತೆ ಅವನು “ರಾಜರೆಂದರೆ ಯಾರು ?"ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು" ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ?" ಎನ್ನುತ್ತ ಆಶ್ಚರ್ಯಪಡುತ್ತಾನೆ. ತಾಯಿಯ ಮಾತನ್ನು ವಿರೋದಿಸಲಾರದೆ ಕೆಳಗೆ ಬರುತ್ತಾನೆ. ರಾಜನಿಗಾಗಿ ಯಶೋಭದ್ರೆಯು ಬಗೆಬಗೆಯ ರೇಷ್ಮೆಯ ದಿವ್ಯವಾದ ಬಟ್ಟೆಗಳನ್ನು ಹಾಸಿಸುತ್ತಾಳೆ. ಸೇವಕರು ರಾಜ ಮತ್ತು ಸುಕುಮಾರಸ್ವಾಮಿಗೆ ಆರತಿ ಎತ್ತಿ, ಬಿಳಿ ಸಾಸಿವೆಗಳನ್ನು ಮಂಗಳಕರವೆಂದು ಮಂತ್ರಾಕ್ಷತೆಯನ್ನು ಹಾಕುತ್ತಾರೆ,ಆಗ ರಾಜನ ಪಕ್ಕ ಕೂತಿದ್ದ ಸುಕುಮಾರ ಸ್ವಾಮಿ ಕೂತಿದ್ದಲ್ಲೇ ಒಸಕಾಡುತ್ತಾ ಸೊಂಟ ಅಲ್ಲಾಡಿಸಿ ಒದ್ದಾಡುತ್ತಾನೆ, ಅಲ್ಲಿ ಬೆಳಕಿಗಾಗಿ ಹಚ್ಚಿದ್ದ ದೀಪ ನೋಡಿದಾಗ ಅವನ ಕಣ್ಣಲ್ಲಿ ನೀರು ಸುರಿಯುತ್ತದೆ, ಇದನ್ನು ಕಂಡು ರಾಜ ಈತನಿಗೆ ಏನೋ ರೋಗ ಇರಬಹುದು ಎಂದುಕೊಳ್ಳುತ್ತಾನೆ, ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಉಣ್ಣುತ್ತಿರುವಾಗ ಸುಕುಮಾರನು ಅರ್ಧ ಅನ್ನವನ್ನು ನುಂಗುತ್ತಿದ್ದನು, ಇನ್ನುಳಿದ ಅರ್ಧ ಅನ್ನವನ್ನು ಉಗುಳುತ್ತಿದ್ದನು, ಅದನ್ನು ರಾಜನು ನೋಡಿ “ಇದೊಂತರ ಊಟದ ಮೇಲೆ ರುಚಿಯಿಲ್ಲದ ರೋಗ" ಎಂದುಕೊಂಡನು. ಊಟವಾದ ನಂತರ ರಾಜನು ಯಶೋಭದ್ರೆಯನ್ನು ಕುರಿತು “ಅಮ್ಮಾ ,ಸುಕುಮಾರನಿಗೆ ಸೊಂಟದ ರೋಗಕ್ಕೂ,ಕಣ್ಣೀರು ಸುರಿಯುವುದಕ್ಕೂ, ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? ಎಂದು ಕೇಳುತ್ತಾನೆ,ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸಿವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು. ಉಳಿದ ಅನ್ನವನ್ನು ಉಗುಳುತ್ತಿದ್ದನು" ಎಂದು ಹೇಳಿದಳು. ಅರಸನು ಇದನ್ನು ಕೇಳಿ ಆಶ್ಚರ್ಯಪಟ್ಟು ಹೀಗೂ ಉಂಟೆ ಎಂದುಕೊಂಡು ಹಿಂದಿರುಗುತ್ತಾನೆ.
ಮುಂದೆ ಒಂದು ದಿವಸ ಯಶೋಭದ್ರೆಯ ಸಹೋದರರಾದ ದಯಾಭದ್ರರೆಂಬ ಋಷಿಗಳು ಉಜ್ಜಯಿನಿಗೆ ಬಂದು ಸುಕುಮಾರಸ್ವಾಮಿಯ ಮನೆಯ ಹಿಂದಣ ಉದ್ಯಾನದೊಳಗಿರುವ ಜಿನಾಲಯದಲ್ಲಿ ಯೋಗಸ್ಥರಾಗಿರುತ್ತಾರೆ, ಮಹಡಿಯ ಮೇಲಿಂದ ಅವರ ಪೂಜೆ ಇತ್ಯಾದಿಗಳನ್ನ ನೋಡಿ ಆಕರ್ಶಿತನಾದ ಸುಕುಮಾರ,ಮಂಚದಿಂದ ಇಳಿದು, ಮನೆಯಲ್ಲಿದ್ದ ಬಟ್ಟೆಗಳನ್ನೆಲ್ಲ ತೆಗೆದುಕೊಂಡು, ಒಂದರ ತುದಿಗೆ ಒಂದು ಬಟ್ಟೆಯನ್ನು ಕಟ್ಟಿ, ಅದನ್ನು ಹಿಡಿದು ಕೆಳಗಿಳಿದು ಜಿನಾಲಯಕ್ಕೆ ಬಂದು, ಆ ಋಷಿಗಳನ್ನೇ ಹಿಂಬಾಲಿಸಿ ಹೋಗಿಬಿಡುತ್ತಾನೆ, ಸುಕುಮಾರಸ್ವಾಮಿ ಇದುವರೆಗೂ ರತ್ನಮಯವಾದ ಜಗಲಿಯ ಮೇಲೆ ಹಾಸಿದ ರೇಷ್ಮೆ ವಸ್ತ್ರದ ಮೇಲೆ ನಡೆದವನು, ತನ್ನ ಮೆತ್ತಗಾದ ಮತ್ತು ಚೆಲುವಾದ ಎರಡು ಪಾದಗಳಲ್ಲಿ ಹಿಂದೆ ಎಂದೂ ನೆಲದ ಮೇಲೆ ಕಾಲಿಟ್ಟೂ ಅರಿಯದವನು,ಅಂತವನು ಈಗ ಕಠಿಣವಾದ ನೆಲದಲ್ಲಿ ನಡೆಯುವಾಗ, ಹರಳುಕಲ್ಲುಗಳೂ, ಹೆಂಟೆ ಗಳೂ ಅವನ ಕಾಲಿಗೆ ನಾಟಿಕೊಂಡು, ಗುಳ್ಳೆಯೆದ್ದು ಒಡೆದು ರಕ್ತವು ನಿರಂತರವಾಗಿ ಸುರಿಯುತ್ತದೆ. ಸುಸ್ತಾಗಿ ಸ್ಮಶಾನದ ನೆಲದ ಮೇಲೆ ಕುಸಿದು ಬೀಳುತ್ತಾನೆ,ಅವನ ರಕ್ತದ ವಾಸನೆಯ ಜಾಡು ಹಿಡಿದು ಬರುವ ನರಿಗಳು ಅವನ ಎರಡೂ ಕಾಲುಗಳನ್ನು ಪಾದದಿಂದ ಪ್ರಾರಂಭಿಸಿ ಮೊಣಕಾಲುಗಳವರೆಗೆ ತಿಂದುಬಿಡುತ್ತವೆ. ಎರಡನೆಯ ದಿವಸ ಮೊಣಕಾಲುಗಳಿಂದ ಪ್ರಾರಂಭಿಸಿ ಸೊಂಟದವರೆಗೆ ತಿನ್ನುತ್ತವೆ, ಮೂರನೆಯ ದಿವಸ ಹೊಟ್ಟೆಯನ್ನು ಸೀಳಿ ಕರುಳನ್ನು ತೋಡಿ ತಿನ್ನುತ್ತವೆ, ಹೀಗೆ ಸುಕುಮಾಸ್ವಾಮಿಯು ಸಾವನ್ನಪ್ಪುತ್ತಾನೆ.
ಜೈನ ಕತೆಗಳಲ್ಲಿ ಇದು ಅವನ ಜೈನ ದೀಕ್ಷೆ, ಮೋಕ್ಷದ ದಾರಿ ಇತ್ಯಾದಿಯಾಗಿ ಹೇಳುತ್ತಾರೆ, ಅದು ಬೇರೆಯ ವಿಷಯ. ಇಲ್ಲಿ ನಾನು ಇದನ್ನು ಒಂದು 'ರಾಂಗ್ ಪೇರೆಂಟಿಂಗ್' ಗೆ ಬಲಿಯಾದ ಮಗುವಿನ ಕತೆಯಾಗಷ್ಟೇ ನೋಡುತ್ತೇನೆ, ನಾವು ಮಕ್ಕಳನ್ನು ಸಾಕುತ್ತೇವೆ ನಿಜ, ಆದರೆ ಅದಷ್ಟೇ ನಮ್ಮ ಕರ್ತವ್ಯವಲ್ಲ, ಅದರ ಜೊತೆಜೊತೆಗೇ ಅವರಿಗೆ 'ಲೈಫ್ ಸ್ಕಿಲ್ಸ್' ಗಳನ್ನೂ ಕಲಿಸುವುದೂ ನಮ್ಮದೇ ಜವಾಬ್ದಾರಿ.

ಆರ್ಥಿಕವಾಗಿ ಬಲವಾಗಿರುವ ಪೋಷಕರು ತಮ್ಮ ಮಗುವನ್ನ ಬಹಳ ಸುಖವಾಗಿ ಬೆಳೆಸುವ ಖಯಾಲಿಯನ್ನ ತಲೆಗೆ ಹತ್ತಿಸಿಕೊಂಡು ಬಹಳಾ ಪ್ಯಾಂಪರ್ ಮಾಡಿ ಮಕ್ಕಳನ್ನು ಸಾಕುತ್ತಿರುತ್ತಾರೆ,'ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ' ಎಂದು ಎಲ್ಲವನ್ನೂ ಒದಗಿಸುತ್ತಾರೆ,ಹೀಗೆ ಬೆಳೆದ ಮಗು ಮುಂದೊಮ್ಮೆ ಬದುಕನ್ನ ತಾನೇ ಎದುರಿಸುವಂತಾದಾಗ ಗತಿಯೇನು? ಮಗುವೊಂದಕ್ಕೆ ಮೀನು ತಿನ್ನಿಸುವುದರ ಜೊತೆಗೇ ಮೀನು ಹಿಡಿಯುವುದನ್ನೂ ಕಲಿಸಬೇಕು, ಪ್ರೀತಿಯನ್ನು ಕೊಟ್ಟಷ್ಟೇ ಬದುಕನ್ನು ಎದುರಿಸಲು ಬೇಕಾದ ತರಬೇತಿಯನ್ನೂ ಕೊಡಬೇಕು, ಈ ನಿಟ್ಟಿನಲ್ಲಿ ಯೋಚಿಸಿದರೆ ಮಕ್ಕಳನ್ನು ಮುಂದಿನ ಬದುಕಿಗೆ ಸಿದ್ಧಗೊಳಿಸುವುದು ಪೋಷಕರ ಬಹು ಮುಖ್ಯ ಕರ್ತವ್ಯವಾಗುತ್ತದೆ.
bevarahani1