ಅವರು ನನ್ನ ಜಾತಿ ಕೇಳಿದರೆ ಏನು ಹೇಳಲಿ!?
ಮುಗ್ದ ಬಾಲ್ಯದಲ್ಲಿ ದೊರಕುವ ಗೆಳೆತನವೂ ಅಷ್ಟೇ ಮುಗ್ದವಾಗಿದ್ದರೆ ಜೀವನ ಅದೆಷ್ಟು ಮುದವಾಗಿರುತ್ತದೆ ಅಲ್ವಾ. ಚರ್ಮದ ಬಣ್ಣ , ಹುಟ್ಟಿದ ಜಾತಿಯ ಕಾರಣಕ್ಕೆ ಒಂದನೇ ತರಗತಿಗೇ ಅಪಮಾನದ ದಳ್ಳುರಿಯಲ್ಲಿ ಬೆಂದ ಮುಗ್ದ ಬಾಲಕಿಗೆ ಗೆಳತಿಯೊಬ್ಬಳ ಕುಟುಂಬವು ತಂಗಾಳಿಯAತ ಸ್ನೇಹದ ಚಾಮರ ಬೀಸಿದಾಗ ಹೇಗಿದ್ದೀತು? ಓದಿ - ಸಂಪಾದಕ

ಕೆ.ಬಿ.ನೇತ್ರಾವತಿ
ಶಾಲೆಯಲ್ಲಿ ಪ್ರತಿಮಾ ಬಿಟ್ಟರೆ ನನಗೆ ಯಾರೂ ಅಷ್ಟು ಬೇಗ ಸ್ನೇಹಿತರು ಆಗಲಿಲ್ಲ. ಹೇಮಳಿಗೆ ತಾನು ಬೆಳ್ಳಗಿದ್ದೇನೆ ಎಂದು ಜಂಭ, ಅವಳು ಅಷ್ಟಕಷ್ಟೆ, ಅಪ್ಪ ಮನೆ ಹತ್ತಿರ ಇಂಗ್ಲಿಷ್ ಕಲಿಯಲು ಮನೆ ಟ್ಯೂಷನ್ ಗೆ ಸೇರಿಸಿತು, ಒಬ್ಬರಿಗೇ ಹೇಳಿಕೊಡಲು ಆಗುವುದಿಲ್ಲ ಎಂದು ಅವರು ಹೇಳಿದ್ದಕ್ಕೆ ಹೇಮಳನ್ನು ಜೊತೆ ಮಾಡಿತು. ಫೀಸು ನಾವೇ ಕಟ್ಟುವ ಷರತ್ತಿಗೆ ಅವಳನ್ನೂ ಒಪ್ಪಿಸಿ ಜೊತೆಗೆ ಕಳಿಸುತ್ತಿತ್ತು. ಆ ಟೀಚರ್ ಹೇಳಿಕೊಟ್ಟದ್ದು ನಾನು ಓದಲಿಲ್ಲ ಅಂತ ಅಪ್ಪನ್ನನ ಕರೆದು ನೋಡಿ “ʼಹೇಮʼಳಂತವರಿಗೆ ಎಷ್ಟು ಮಕ್ಳಿಗಾದರೂ ಇಂಗ್ಲಿಷ್ ಹೇಳಿಕೊಡಬಹುದು ನಿಮ್ಮ ಮಗಳಿಗೆ ಹೇಳಿಕೊಡಲು ಆಗುವುದಿಲ್ಲ, ಸಾರಿ” ಅಂತ ಹೇಳಿತು ಆಯಮ್ಮ, ಅಪ್ಪ ಸಿಟ್ಟಿನಿಂದಲೆ ನನ್ನನ್ನ ಕೈಹಿಡಿದು ಎಳೆದುಕೊಂಡು ಬಂದು ಒಂದೇ ಸಮನೆ ಬೈಯಿತು, ನಾನು ಹೇಳಿದೆ “ನನಗೆ ಎಬಿಸಿಡಿನೇ ಬರಲ್ಲ, ಅವರು ಅದನ್ನು ಮೊದಲು ಹೇಳಿಕೊಡಬೇಕಲ್ಲವಾ? ನಾ ಹೇಗೆ ಓದಲಿ” ಅಂದೆ ಆಗ ಸ್ವಲ್ಪ ಅಪ್ಪ ತಣ್ಣಗಾಯಿತು, “ಸರಿ ದಿನಾ ಒಂದ್ಹತ್ತು ಸಾರಿ ಬರಿ” ಅಂತ ಹೇಳಿತು, ಅಳುತ್ತಾ ರೂಮಿಗೆ ನಡೆದೆ ಅಮ್ಮ ಮೂಕ ಪ್ರೇಕ್ಷಕಿ ಎಲ್ಲಾ ವಿಷಯಗಳಲ್ಲಿ ಮುಂದೆ ಇದ್ದ ನಾನು ಇಂಗ್ಲಿಷ್ ನಿಂದಾಗಿ ಎಲ್ಲರಿಂದ ಬೈಸಿಕೊಳ್ಳುವ ಹಾಗಾಗಿತ್ತು, ಇದರಿಂದ ನನಗೆ ಆದ ದುಃಖ ಅವಮಾನ ಎಲ್ಲರಿಂದ ಎಲ್ಲದನ್ನು ಮೆಟ್ಟಿ ನಿಲ್ಲಬೇಕು ಅಂತ ತೀರ್ಮಾನಿಸಿದೆ.
ಟೀಚರ್ ಎಕ್ಸಟ್ರಾ ಕ್ಲಾಸ್ ತೆಗೆದುಕೊಂಡಾಗ ಎರಡು ದಿನ ಎಬಿಸಿಡಿ ನಂತರ ಎ ಫಾರ್ ಆಪಲ್, ವರ್ಡ್ಗಳನ್ನು ಕೂಡಿಸಿ ಓದುವುದು, ಹೀಗೆ ದಿನವೂ ಒಂದರ್ಧ ಗಂಟೆ ಹೇಳಿಕೊಡುತ್ತಾ ಮನೆಗೆ ಎಕ್ಸ್ಟ್ರಾ ಹೋಮ್ ವರ್ಕ ಕೂಡ ಕೊಡುತ್ತಿದ್ದರು ಎಲ್ಲವನ್ನೂ ಶ್ರದ್ಧೆಯಿಂದ ಮಾಡುತ್ತಿದ್ದ ನಾನು ನಾನೇ ಎಕ್ಸ್ಟ್ರಾ ವರ್ಡ್ಗಳನ್ನು ಓದಲು ಕಲಿಯುವುದು, ಅರ್ಥವಾಗದ್ದನ್ನ ಅಪ್ಪನನ್ನ ಕೇಳಿ ಕಲಿಯುವುದು ಮಾಡುತ್ತಿದ್ದೆ, ಅಪ್ಪ ಕೂಡ ಚೆನ್ನಾಗಿ ಇಂಗ್ಲಿಷ್ ಮತ್ತು ಗಣಿತ ಹೇಳಿಕೊಡುತ್ತಿತ್ತು. (ಅಪ್ಪ ಬಿಎಸ್ಸಿ (ಸಿಬಿಝಡ್) ಮೂರನೇ ವರ್ಷದಲ್ಲಿ ಒಂದು ಸಬ್ಜೆಕ್ಟ್ ಉಳಿದಿದ್ದು ಅದನ್ನು ಪಾಸು ಮಾಡದೆ ಕೆಲಸಕ್ಕೆ ಸೇರಿದ್ದರಿಂದ ಬಿಎಸ್ಸಿ ಫೇಲ್)ಈ ಎಲ್ಲ ಪರಿಶ್ರಮದಿಂದ ಆ ಟೀಚರ್ ಒಂದು ತಿಂಗಳು ಎಕ್ಸಟ್ರಾ ಕ್ಲಾಸ್ ಮುಗಿಯುವ ಹೊತ್ತಿಗೆ , ಅವರೇ ನಿನಗೆ ಈಗ ಬರುವ ಇಂಗ್ಲಿಷ್ ಸಾಕು ನೀನೇ ಓದಿಕೋ ಅಂತ ಹೇಳುವಷ್ಟು ಮಟ್ಟಿಗೆ ಚೆನ್ನಾಗಿ ಕಲಿತೆ.
ಠಾಗೂರ್ ಶಾಲೆಯ ಹೆಗ್ಗಳಿಕೆ ಎಂದರೆ ಬಿಎಡ್ ಓದಿದವರು, ಎಂಎ ಓದಿದವರು, ಆ ಶಾಲೆಗೆ ತಮಗೆ ಸರ್ಕಾರಿ ಕೆಲಸ ಸಿಗುವವರೆಗೆ ಎಂದು ಟೀಚರ್ ಗಳಾಗಿ ಬಂದು ಸೇರಿ ಕೊಳ್ಳುತ್ತಿದ್ದರು, ಅವರ ಜ್ಞಾನವನ್ನು ನಮಗೆ ಚೆನ್ನಾಗಿ ಹಂಚುತ್ತಿದ್ದರು, ಅವರಿಗೆ ಇದ್ದಂತಹ ಕಳಕಳಿ ಇಂದಿನ ಟೀಚರ್ ಗಳಲ್ಲಿ ಕಾಣೆ. ಉದಾಹರಣೆಗೆ ನಮಗೆ ಸೋಷಿಯಲ್ ಸ್ಟಡೀಸ್ ತೆಗೆದು ಕೊಳ್ಳುತ್ತಿದ್ದ ಟೀಚರ್ ಆಗ ತಾನೆ ಎಂಎ (ಹಿಸ್ಟರಿ) ಓದಿದ್ದವರಾಗಿದ್ದರು, ಅವರಿಗೆ ಪಾಠ ಹೇಳಿಕೊಡುವುದರ ಬಗ್ಗೆ, ಶಿಕ್ಷಕ ವೃತ್ತಿ ಬಗ್ಗೆ ಬಹಳವೇ ಆಸಕ್ತಿ,ಗೌರವ ಇತ್ತು. ಇಂದಿನವರಂತೆ ಅದು ಉದ್ಯೋಗದ ಒಂದು ಭಾಗವಾಗಿರಲಿಲ್ಲ ಬರೀ ದುಡ್ಡಿಗಾಗಿ ಕೆಲಸಕ್ಕೆ ಬಂದವರಾಗಿರಲಿಲ್ಲ. ಆದ್ದರಿಂದಲೇ ನನ್ನ ಇಂಗ್ಲಿಷ್ ಟೀಚರ್ ಎಕ್ಸಟ್ರಾ ಕ್ಲಾಸ್ ತೆಗೆದುಕೊಂಡಿದ್ದನ್ನ ಇಂದಿನ ಶಿಕ್ಷಕರಲ್ಲಿ ಊಹಿಸಲೂ ಸಾಧ್ಯವಿಲ್ಲ. ಅಷ್ಟೇ ಏಕೆ ದುಡ್ಡು ಕೊಡುವೆನೆಂದರೂ ಮನೆಪಾಠ ಹೇಳಿಕೊಡದ ಟೀಚರ್!.
ಮೂರನೇ ತರಗತಿಯ ರಿಸಲ್ಟ್ ಏಪ್ರಿಲ್ 10ರಂದು , ಹೆದರಿಕೆಯಿಂದಲೇ ಹೋದೆ, ಅಂದು ನನ್ನ ಜನ್ಮ ದಿನ ಕೂಡ, ಏನಾದ್ರು ಫೇಲ್ ಆಗಿ ಬಿಟ್ಟರೆ, ಛೇ ನನ್ನ ಹುಟ್ಟಿದ ದಿನದಂದು ದುಃಖ ಬೇಡ ಅಂತ ಮನಸ್ಸು ಬೇಡಿಕೊಳ್ಳುತ್ತಿತ್ತು. ಮಾರ್ಕ್ಸ್ ಕಾರ್ಡ್ ಕೈಗೆ ಕೊಡುವ ಮುನ್ನ ಅಲ್ಲಿ ಬೋರ್ಡ್ನಲ್ಲಿ ರ‍್ಯಾಂಕ್ ಪಡೆದವರ ಹೆಸರುಗಳನ್ನು ಬೋರ್ಡ್ನಲ್ಲಿ ಹಾಕಲಾಗಿತ್ತು ನಾನು ಅಕ್ಕನಿಗೆ “ನೋಡು ಅದು ನನ್ನ ಹೆಸರಲ್ಲವಾ?” ಅಂದೆ. “ ಏಯ್ ನೀನು ಹೇಗೆ ರ‍್ಯಾಂಕ್ ಬಂದಿರುವೆ ಅಲ್ಲ ಬಿಡು” ಅಂದಳು.
ಮಾರ್ಕ್ಸ್ ಕಾರ್ಡ್ ಕೊಟ್ಟಾಗ ಅರೇ 6ನೇ ರ‍್ಯಾಂಕ್ , ಖುಷಿಯಿಂದ ಕುಪ್ಪಳಿಸುವಷ್ಟು ಮುಖಾರವಿಂದ ಅರಳಿತ್ತು, ಅಕ್ಕನಿಗೆ ತೋರಿಸಿದೆ. ಅದಕ್ಕೆ ಅವಳು “ಸರಿ ಬಿಡು” ಅಂದಳು. ಅವಳಿಗೆ ಅಷ್ಟೇನು ಖುಷಿಯಾದಂತೆ ಅನ್ನಿಸಲಿಲ್ಲ. ಅವಳದು ಸಾಧಾರಣ ಫಸ್ಟ್ ಕ್ಲಾಸ್ ಬಂದಿತ್ತು, ಅಪ್ಪನಿಗೆ ಮಾರ್ಕ್ಸ್ ಕಾರ್ಡ್ ತೋರಿಸಿದಾಗ ಅಪ್ಪನಿಗೂ ಖುಷಿ, ಅಂದಿನಿAದ ನನಗೆ ಬಹಳವೇ ಹುಡುಗಿಯರು ಸ್ನೇಹಿತೆಯರಾದರು, ಅದರಿಂದ ನನಗೆ ಅರ್ಥ ಆಗಿದ್ದು, ಚೆನ್ನಾಗಿ ಓದಿದರೆ ನಿನ್ನ ಬಣ್ಣ, ಜಾತಿ ಮೀರಿ ಎಲ್ಲರೂ ಸ್ನೇಹಿತರಾಗುತ್ತಾರೆ ಅಂತ?!
*****
ಹೇಮಳ ಸಿಟ್ಟು, ಜಂಭ ಅಂದಿಗೆ ಮುಗಿಯಿತು ಅಂದು ಕೊಂಡರೆ ಮುಗಿಯಲಿಲ್ಲ , ಅವಳು ಬೇರೆಯೇ ಗುಂಪು ಸೇರಿಕೊಂಡಳು ನಾಲ್ಕನೇ ತರಗತಿಯ ಪ್ರಾರಂಭದಲ್ಲಿ ನಾನು ಆಗಲೇ ಹೇಳಿದಂತೆ ಪ್ರತಿಮಾ ಪ್ರಭು , ಮಂಜುಳ, ಅನಿತಾ, ಸುನಂದ, ಹೀಗೆ ಹಲವು ಸ್ನೇಹಿತೆಯರ ಒಂದು ಗುಂಪು ಇತ್ತು, ಪ್ರತಿಮಾ ಮಂಗಳೂರಿನವಳು, ಅವಳ ಅಪ್ಪ “ಪ್ರಭುʼ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮ್ಯಾನೇಜರ್, ಅವಳು ಮತ್ತು ಅವಳ ತಮ್ಮ ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಅವಳ ಅಕ್ಕ ಮಂಗಳೂರಿನಲ್ಲಿ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು.
ಪ್ರತಿಮಾ ಒಂದು ಸಲ ನನ್ನನ್ನ ಅವರ ಮನೆಗೆ ಊಟಕ್ಕೆ ಕರೆದಳು. ಅಷ್ಟು ಹೊತ್ತಿಗೆ ಜಾತಿ ಕೀಳರಿಮೆ ನನ್ನನ್ನು ಆವರಿಸಿತ್ತು, ಯಾರಾದ್ರೂ ಪುನಃ ನನ್ನ ಜಾತಿ ಕೇಳಿ ಅವಮಾನ ಮಾಡಬಹುದು ಎನ್ನುವ ಆತಂಕದಿAದ ನಾನು ಯಾರ ಮನೆಗೂ ಹೋಗುತ್ತಿರಲಿಲ್ಲ, “ಬೇಡ ಬರಲ್ಲ” ಅಂದೆ.
ಅದಕ್ಕೆ ಅವಳು “ಇಲ್ಲ ಅಮ್ಮ ಹೇಳಿದಾರೆ, ನಿನಗೆ ಫ್ರೆಂಡ್ ಆಗಿರುವವರು ಚೆನ್ನಾಗಿ ಓದುವವರನ್ನ ಮನೆಗೆ ಕರೆದುಕೊಂಡು ಬಾ ಅಂತ. ಅದಕ್ಕೆ ನಿನ್ನ ಬಗ್ಗೆ ಹೇಳಿದೆ, ನೀನು ನನ್ನ ಬೆಸ್ಟ್ ಫ್ರೆಂಡ್ ಅಲ್ವಾ , ಮತ್ತೆ ನೀನು ಈ ಬಾರಿ ರ‍್ಯಾಂಕ್ ಕೂಡ ಬಂದಿರುವೆ, ಅದಕ್ಕೇ ಅಮ್ಮನಿಗೆ ಹೇಳಿದೆ ನೇತ್ರ ಎನ್ನುವವಳು ನನಗೆ ಬೆಸ್ಟ್ ಫ್ರೆಂಡ್ ಅವಳು ರ‍್ಯಾಂಕ್ ಕೂಡ ಬಂದಿದಾಳೆ ಅಂತ, ಅದಕ್ಕೆ ಅಮ್ಮ ನಿನ್ನನ್ನ ಕರೆದುಕೊಂಡು ಬರಲೇ ಬೇಕು ಅಂತ ಹೇಳಿದಾರೆ” ಅಂತ ಹಠ ಹಿಡಿದು ಅವರಮ್ಮ ಹೇಳಿದಂತೆ ಅದೇ ಶನಿವಾರ ಶಾಲೆ ಮುಗಿದ ನಂತರ ಮಧ್ಯಾಹ್ನದ ಊಟಕ್ಕೆ ಮನೆಗೆ ಕರೆದುಕೊಂಡು ಹೋದಳು.
ನನಗೋ ಮನದಲ್ಲೆ ಅಳುಕು, ಅವರು ನನ್ನ ಜಾತಿ ಕೇಳಿದರೆ ಏನು ಹೇಳಲಿ, ಏನು ಮಾಡಲಿ ಅಂತ ಆ ದುಗುಡದಲ್ಲೇ ಅವರ ಮನೆಗೆ ಹೋದೆ, ಅವಳು, ಅವರಮ್ಮ ಊಟಕ್ಕೆ ಬಡಿಸಲು ತಯಾರು ಮಾಡುವವರೆಗೆ ಅವರು ಕನ್ಯಾಕುಮಾರಿ ಹಾಗೂ ಕೇರಳದ ಕೆಲವು ಊರುಗಳಿಗೆ ಪ್ರವಾಸ ಹೋಗಿದ್ದ ಫೋಟೋ ಆಲ್ಬಮ್ ತೋರಿಸಿದಳು. ಅವರದು ಬಾಡಿಗೆ ಮನೆಯಾದರೂ 2 ಬೆಡ್ ರೂಂನ ದೊಡ್ಡ ಮನೆ.ಮನೆಯನ್ನ ಒಂದು ಸುತ್ತು ಸುತ್ತಿಸಿ ಬಂದಳು. ಊಟಕ್ಕೆ ಕೂತಾಗ ಅವರಮ್ಮ ಕೇಳಿದ ಪ್ರಶ್ನೆಗೆಲ್ಲ ತಲೆ ಬಗ್ಗಿಸಿ ನೆಲ ನೋಡಿಕೊಂಡೇ ಉತ್ತರ ಕೊಡುತ್ತಾ ಊಟ ಮಾಡುತ್ತಿದ್ದೆ, ಅವರಮ್ಮ “ಸಂಕೋಚ ಬೇಡ, ನಿಧಾನವಾಗಿ ಊಟ ಮಾಡು” ಅಂದಾಗ ಅವರ ಪ್ರೀತಿ ಕಂಡು ನನಗೆ ಇನ್ನೂ ಸಂಕೋಚ ಜಾಸ್ತಿ ಆಯಿತು. ಅವರಮ್ಮ ಹೇಳಿದರು “ನಿಮ್ಮ ಅಮ್ಮನನ್ನ ಕೂಡ ಮನೆಗೆ ಕರೆದುಕೊಂಡು ಬಾ” ಅಂತ, “ ಆಯ್ತು” ಅಂದೆ.
“ಇವಳಿಗೆ ಅರ್ಥವಾಗದ್ದನ್ನ ಹೇಳಿಕೊಡು” ಅಂದರು.” ಆಗಲಿ” ಅಂದೆ, ಅವರು ಬಡಿಸಿದ ಊಟದಲ್ಲಿ ಅವರೂರ ಕಡೆ ಮಾಡುವ ಎಷ್ಟೋ ತಿಂಡಿ ತಿನಿಸುಗಳಿದ್ದು, ಅವುಗಳನ್ನು ಹೇಗೆ ತಿನ್ನಬೇಕೆಂದು ತಿಳಿಯದೆ ಪ್ರತಿಮಾಳತ್ತ ನೋಡಿದಾಗ, ಅವರಮ್ಮನೇ ಹೇಗೆ ತಿನ್ನಬೇಕೆಂದು ಹೇಳಿಕೊಟ್ಟರು, ನಮ್ಮ ಕಡೆ ರಾಗಿ ರೊಟ್ಟಿ, ಅನ್ನ ಮುದ್ದೆ, ಬಸ್ಸಾರು, ಒತ್ತು ಶ್ಯಾವಿಗೆ, ಉಪ್ಪಿಟ್ಟು, ಚಿತ್ರಾನ್ನ, ದೋಸೆ, ಇಡ್ಲಿ , ಖಿಚಡಿ ಹೀಗೆ ಕೆಲವೇ ತಿನಿಸುಗಳು ನನಗೆ ಗೊತ್ತಿದ್ದದ್ದು, ಈಗಿನ ಪಲಾವ್, ಬಾತ್, ಬಿಸಿಬೇಳೆ ಬಾತ್, ಬಿರಿಯಾನಿ, ಫ್ರೈಡ್ ರೈಸ್, ಚಪಾತಿ, ಜೋಳದ ರೊಟ್ಟಿ ಹೀಗೆ ಹಲವು ತಿನಿಸುಗಳು ನನಗೆ ತಿಳಿದಿರಲಿಲ್ಲ. ಅವರು ಮಾಡಿದ್ದ ಅಡುಗೆಯಲ್ಲಿ ಹೋಳಿಗೆ (ಕಡಲೆ ಬೇಳೆ, ಸಕ್ಕರೆ) ಹೋಳಿಗೆಗೆ ಎಣ್ಣೆ ಹಾಕದೆ ಬೇಯಿಸಿದ್ದು, ತುಪ್ಪ ಹಾಕಿ ನೀಡಿದ್ದರು, ಕಾಯಿ ಅನ್ನ ಅದರಲ್ಲಿ ನನಗೆ ತಿಳಿದದ್ದು, ಕಾಯಿ, ಸಾಸಿವೆ, ಅನ್ನ , ಪಲ್ಯ, ಮಂಗಳೂರು ಸೌತೆ ಸಾರು, ಕಪ್ಪಗೆ ದುಂಡಗೆ ಒಂದು ತಿಂಡಿ ಇತ್ತು ಬಹುಶಃ ಕರದಂಟು ಇರಬೇಕು? ಹಲಸಿನ ಹಪ್ಪಳ, ಉಪ್ಪಿನಕಾಯಿ, ಹೀಗೇ ಹಲವು ತಿಂಡಿಗಳ ಹೆಸರು ನನಗೆ ತಿಳಿಯದು, ನನಗೊಬ್ಬಳಿಗೆ ಅಷ್ಟು ಅಡುಗೆ ಮಾಡಿ ಉಣ ಬಡಿಸಿದ್ದು, ನನಗೆ ನಂಬಲಸಾಧ್ಯವಾಗಿತ್ತು, ನನ್ನ ಜಾತಿಯ ಬಗ್ಗೆ ಅವರೇ ಮೊದಲೇ ತಿಳಿದುಕೊಂಡಿದ್ದರೋ ಅಥವಾ ಅವರಿಗೆ ಮುಖ್ಯವಾಗಿರಲಿಲ್ಲವೋ ಗೊತ್ತಿಲ್ಲ, ಆದರೆ ಅವರು ಅಪ್ಪಿ ತಪ್ಪಿಯೂ ನನ್ನ ಜಾತಿ ಬಗ್ಗೆ ಕೇಳಲಿಲ್ಲ.
( ಮುಂದಿನ ʼ ಕಿನ್ನರಿʼಗೆ)