ಹಾದಿ ಬಿಟ್ಟ ತಮ್ಮನ ಖರ್ಚಿನ ಕಾಸಿಗೆ ಮಾರಾಟವಾದ ನನ್ನ ಐಎಎಸ್ ಕನಸು 

ಅಲ್ಲಿ ಅಡ್ಮಿಷನ್ ಮಾಡುವ ಅಧಿಕಾರಿ ಕೇಳಿದ ನಿನಗೆ ಈ ವಿಷಯ, ಕಾಲೇಜು ಸರಿ ಅಂದರೆ ʼಎಸ್ʼ ಎಂದೂ ಇಲ್ಲದಿದ್ದರೆ ʼನೋʼ ಎಂದು ಬರೆ, ʼಎಸ್ʼ ಅಂತ ಬರೆದರೆ ಇಲ್ಲಿ ಅಡ್ಮಿಷನ್ ಆಗುತ್ತೆ ಇಲ್ಲವಾದರೆ, ನಾವು ನಿಮ್ಮ ಲಿಸ್ಟ್ ಬೆಂಗಳೂರಿಗೆ ಕಳಿಸುತ್ತೇವೆ ಅವರು ಪುನಃ ಪರಿಷ್ಕೃತ ಪಟ್ಟಿ ಹಾಕುತ್ತಾರೆ ಆಗ ನಿಮ್ಮ ಕಾಲೇಜು ಅಥವಾ ವಿಷಯ ಎರಡೂ ಬದಲಾಗಬಹುದು. ಯಾಕೆಂದರೆ ಅಲ್ಲಿ ʼನೋʼ ಎಂದಷ್ಟೇ ಆಪ್ಷನ್ ಇದೆ ಅದು ಕಾಲೇಜು ಬದಲಾವಣೆಗಾ ಅಥವಾ ವಿಷಯ ಬದಲಾವಣೆಗಾ ಅಂತ ಅಪ್ಷನ್ ಇಲ್ಲ, ಅಂದರು.

ಹಾದಿ ಬಿಟ್ಟ ತಮ್ಮನ ಖರ್ಚಿನ ಕಾಸಿಗೆ ಮಾರಾಟವಾದ ನನ್ನ ಐಎಎಸ್ ಕನಸು 

ಜೀವದ ಕತೆ-9


ಕೆ.ಬಿ.ನೇತ್ರಾವತಿ


       ನಾನು ಈಗ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಗ್ರೂಪ್ ‘ಬಿ’ ಆಫೀಸರ್ ಆಗಿದ್ದೇನೆ. ಈ ಹುದ್ದೆಗೆ ಬಂದು ಕೇವಲ ಎರಡೂವರೆ ವರ್ಷಗಳಾಗಿವೆ. ಪದವೀಧರೆಯಾದರೂ ಈ ಅಧಿಕಾರಿ ಹುದ್ದೆಗೇನೂ ನಾನು ನೇರವಾಗಿ ನೇಮಕಗೊಂಡಿಲ್ಲ, ಬದಲಿಗೆ 24 ವರ್ಷಗಳ ಹಿಂದೆ ಕಿರಿಯ ಸಹಾಯಕ (ಸೆಕೆಂಡ್ ಡಿವಿಷನ್ ಕ್ಲರ್ಕ್) ಹುದ್ದೆಗೆ ನೇಮಕವಾದವಳು ನಾನು . ಬೆಂಗಳೂರಿನ ವಿಧಾನ ಸೌಧ, ವಿಕಾಸ ಸೌಧ, ಎಂಎಸ್ ಬಿಲ್ಡಿಂಗ್ ಗಳಲ್ಲಿ ಹರಡಿಕೊಂಡಿರುವ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಿರಿಯ ಸಹಾಯಕ ಹುದ್ದೆಗೆ 29.09.2001ರಂದು ವರದಿ ಮಾಡಿಕೊಂಡಿದ್ದೆ. ಕಿರಿಯ ಸಹಾಯಕ ಎಂದರೆ ಎರಡನೇ ದರ್ಜೆ ಗುಮಾಸ್ತೆ, ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಓದಿದ್ದರೆ ಸಾಕು, ಜೊತೆಗೆ ಕೆಪಿಎಸ್‌ಸಿ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯಲ್ಲಿ ಟಾಪರ್ ಆಗಿದ್ದು ಜೊತೆಗೆ ನಿಮ್ಮ ಪ್ರಿಫರೆನ್ಸ್ ಸಚಿವಾಲಯ ಇದ್ದರೆ ನಿಮಗೆ ಇಲ್ಲಿಗೆ ಪೋಸ್ಟಿಂಗ್ ಸಿಗುತ್ತದೆ.


     ಅಲ್ಲಿವರೆಗೂ ಎನ್‌ಜಿಒ ಒಂದರಲ್ಲಿ ಕೆಲ ವರ್ಷ ಕೆಲಸ ಮಾಡುತ್ತಿದ್ದ ನಾನು ಸಚಿವಾಲಯದಲ್ಲಿ ರಿಪೋರ್ಟ್ ಮಾಡಿಕೊಂಡಾಗ ಇಲಿಯೋಸಿಕಲ್ ಟಿಬಿ ಗೆಂದು ಔಷಧಿ ಪಡೆಯುತ್ತಿದ್ದೆ, ನನ್ನ ಆರೋಗ್ಯ ಒಂಚೂರೂ ಚೆನ್ನಾಗಿರಲಿಲ್ಲ, ಆಗ ನಾವು ತುಮಕೂರಿನಲ್ಲಿ ವಾಸವಿದ್ದೆವು. ವಿಧಾನ ಸೌಧಕ್ಕೆ ದಿನವೂ ಟ್ರೇನಿನಲ್ಲಿ ಬರುತ್ತಿದ್ದೆ. ಅನಾರೋಗ್ಯದ ಕಾರಣ ಅಮ್ಮ ನನ್ನ ಜೊತೆ ಆಫೀಸಿಗೆ ಬಂದು ಸಂಜೆವರೆಗೆ ಇದ್ದು ಮತ್ತೆ ಕರೆದುಕೊಂಡು ತುಮಕೂರಿಗೆ ಬರುತ್ತಿತ್ತು, ನನಗೆ ಆಗ ಆ ಮಾತ್ರೆಗಳ ಸೈಡ್ ಎಫೆಕ್ಟ್ನಿಂದಾಗಿ ಊಟ ಸೇರುತ್ತಿರಲಿಲ್ಲ, ಏನು ತಿಂದರೂ ವಾಂತಿಯಾಗುತ್ತಿತ್ತು, ಓಡಾಡಲು ಶಕ್ತಿ ಇರಲಿಲ್ಲ, ಕುಸಿದು ಬಿದ್ದು ಹೋಗುತ್ತೇನೆ ಎನ್ನಿಸುತ್ತಿತ್ತು.ಟ್ರೆನ್‌ನಲ್ಲಿ ಕೂಡ ನಾನು ಬಾಗಿಲ ಬಳಿ ಕುಳಿತು ವಾಂತಿ ಮಾಡುತ್ತಿದ್ದರೆ ಅಮ್ಮ ಹಿಂದಿನಿಂದ ನನ್ನ ಚೂಡೀದಾರ ಹಿಡಿದುಕೊಂಡು ಜೋಪಾನ ಮಾಡುತ್ತಿತ್ತು,.


1969ರಲ್ಲಿ ಚಿಕ್ಕನಾಯಕನಹಳ್ಳಿಗೆ ಸಮೀಪದ ಕಾಡೇನಹಳ್ಳಿಯ ತೋಟವೊಂದರಲ್ಲಿ ಹುಟ್ಟಿ ಅಲ್ಲಿ ಕೆಲ ವರ್ಷ , ನಂತರ ತಿಪಟೂರಿನಂಥ ನಗರದಲ್ಲಿ ಪಿಯುವರೆಗೆ ಓದುತ್ತಾ ಬೆಳೆದು, 1992ರಲ್ಲೇ ದಾವಣಗೆರೆಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದ ನಾನು ಕಡೆಗೆ 2001ರ ಸೆಪ್ಟೆಂಬರ್‌ನಲ್ಲಿ ಕೇವಲ ಎಸ್ ಎಸ್ ಎಲ್ ಸಿ ಆಧಾರದ ಮೇಲೆ ಸಿಗುವ ದ್ವಿತೀಯ ದರ್ಜೆ ಗುಮಾಸ್ತೆಯ ಹುದ್ದೆಗೆ ಸೇರಿದೆ. ಕಂಪ್ಯೂಟರ್ ಸೈನ್ಸ್ ಬಿಇ ಮಾಡಿದ ನಾನು ಯಾವುದಾದರೂ ಕಂಪನಿಗಳಲ್ಲಿ ಟೆಕ್ಕಿ ಆಗಿ ಒಳ್ಳೆ ಸಂಬಳ ಪಡೆದು ಅಥವಾ ಅಮೇರಿಕಾದಲ್ಲಿ ಸೆಟಲ್ ಆಗಬಹುದಿತ್ತು . ಹಾಗೆ ಆಗದೇ ಇರಲು ನಮ್ಮ ಮೇಲು ಕೀಳಿನ ಕ್ಯಾಸ್ಟ್ ಸಿಸ್ಟಮ್ ಹಾಗೂ ಈ ಜಾತಿ ವ್ಯವಸ್ಥೆಯೊಳಗೆ ಅತ್ಯಂತ ಅಮಾನುಷ ಎಂಬಂತಿರುವ ಅಸ್ಫೃಶ್ಯ ಜಾತಿಯೊಳಗೆ ಹುಟ್ಟಿ ಬದುಕುತ್ತಿರುವುದೇ ನಿಜ ಕಾರಣ. 
*****


   ನಮ್ಮ ಅಪ್ಪ ಹೇಳುತ್ತಿದ್ದುದು , ಹೆಣ್ಣು ಮಕ್ಕಳಿಗೆ ಕೂಡ ವಿದ್ಯಾಭ್ಯಾಸ ಕೊಡಬೇಕು, ಅವರಿಗೆ ಕೂಡ ಆಸ್ತಿಯಲ್ಲಿ ಪಾಲು ಕೊಡಬೇಕು, ನೀವು ನನ್ನಂತೆ ಕಡಿಮೆ ಕೆಲಸಕ್ಕೆ ಸೇರಬೇಡಿ ಚೆನ್ನಾಗಿ ಓದಿ ಆಫೀಸರ್‌ಗಳಾಗಬೇಕು, ಎಲ್ಲರೂ ಬಿಎ ತಗೋಳ್ತಾರೆ ಆದರೆ ಸೈನ್ಸ್ ತೆಗೆದುಕೊಂಡು ಓದಬೇಕು ಹೀಗೇ ಸಮಾಜದಲ್ಲಿರುವ ಎಲ್ಲಾ ಉನ್ನತ ಆಶಯಗಳನ್ನು ಅಪ್ಪ ಹೊಂದಿತ್ತು. 


   ಅಪ್ಪನಿಗೆ ಬೇರೆ ಬೇರೆ ಊರುಗಳಿಗೆ ಟ್ರಾನ್ಸ್ಫರ್ ಆಗುತ್ತಿದ್ದರೂ ನಾವು ಓದಿಗಾಗಿ ತಿಪಟೂರಿನಲ್ಲೇ ಇದ್ದೆವು. ಹಾಗಾಗಿ ನಮ್ಮ ಅಪ್ಪ ಆ ಊರುಗಳಲ್ಲಿ ರೂಮು ಮಾಡಿಕೊಂಡು ತಿಪಟೂರಿಗೆ ವಾರಕೊಮ್ಮೆ ತಿಂಗಳಿಗೊಮ್ಮೆ ಬರುತ್ತಿತ್ತು.


     ನಾನು ಎರಡನೇ ಪಿಯು ಸಮಯದಲ್ಲಿ ಸಿಇಟಿಗೆ ಅಪ್ಲಿಕೇಶನ್ ಹಾಕುವ ವೇಳೆ ಅಪ್ಪ ಮನೆಗೆ ಬಂದು 30 ದಿನದ ಮೇಲೆ ಆಗಿತ್ತು. ಸಿಇಟಿ ಬರೆಯುವುದಾ ಬೇಡವಾ, ಬಿಎಸ್ಸಿ ಸೇರಲಾ ಎಂಬ ಉಯ್ಯಾಲೆ, ಕೊನೆಗೆ ಸಿಇಟಿ ಬರೆಯಬೇಕೆಂದು ತೀರ್ಮಾನಿಸಿ ಅಪ್ಲಿಕೇಶನ್ ಹಾಕಿದಾಗ ಮೆಡಿಕಲ್‌ಗೆ ಎಲ್ಲಾ ಸರ್ಕಾರಿ ಕಾಲೇಜುಗಳನ್ನು ಮಾತ್ರ ನಮೂದಿಸಿದ್ದೆ ಮತ್ತು ನಾನು ಇಂಜಿನಿಯರಿಂಗ್‌ನಲ್ಲಿ ಮೊದಲನೆ ಪ್ರಿಫರೆನ್ಸ್ ಮೆಟಲರ್ಜಿ, ಎರಡನೆಯದು ಟೆಕ್ಸ್ಟೈಲ್ಸ್ ಕೊಟ್ಟಿದ್ದೆ (ಈ ಎರಡೂ ವಿಷಯಗಳು ಆಗ ಸುರತ್ಕಲ್ ನಲ್ಲಿ ಮಾತ್ರ ಇತ್ತು) ಪಕ್ಕದ ಮನೆಯ ಎಲ್‌ಐಸಿ ಆಫೀಸರ್ ಕಂಪ್ಯೂಟರ್ ಸೈನ್ಸ್ಗೆ ಹೆಚ್ಚು ಬೆಲೆ ಇದೆ ಅದಕ್ಕೆ ಮೊದಲ ಪ್ರಿಫರೆನ್ಸ್ ಕೊಡು ಅಂತ ಹೇಳಿದ್ದರು. ಆದರೆ ನಾನು ಅದಕ್ಕೆ ಮೂರನೆಯ ಪ್ರಿಫರೆನ್ಸ್ ಕೊಟ್ಟಿದ್ದೆ, ಅಮ್ಮ ಅದನ್ನ ಕಂಡು ಅವರಿಗೆ ಹೋಗಿ ದೂರು ಹೇಳಿತು. ನೋಡಿ ನೀವು ಅಷ್ಟು ಹೇಳಿದ ಮೇಲೂ ಅವಳು ಸಿ.ಎಸ್ ಗೆ ಮೂರನೆ ಆಪ್ಷನ್ ಕೊಟ್ಟಿದ್ದಾಳೆ ಎಂದು, ಆಗ ಆತ ಅಮ್ಮನಿಗೆ ನನ್ನನ್ನು ಅಪ್ಲಿಕೇಶನ್ ಜೊತೆ ಕರೆ ತರುವಂತೆ ಹೇಳಿದ್ದರು, ಅಮ್ಮ ಅಪ್ಲಿಕೇಷನ್ ಜೊತೆ ನನ್ನನ್ನೂ ಕರೆದೊಯ್ದಿತು, ಆತ ಕೂಡಲೇ “ಇದು ಸರಿಯಿಲ್ಲ, ನಿನಗೆ ಅರ್ಥವಾಗದು ಇದನ್ನು ಹರಿದು ಹಾಕು, ಹೊಸ ಅಪ್ಲಿಕೇಶನ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಮೊದಲು ಹಾಕು”ಎಂದು ಅಪ್ಲಿಕೇಷನ್ ಹರಿದು ಹಾಕಿದರು. ನಾನು ವಿಧಿಯಿಲ್ಲದೆ. ಕಂಪ್ಯೂಟರ್ ಸೈನ್ಸ್ ಗೆ ಮೊದಲ ಪ್ರಿಫರೆನ್ಸ್ ಕೊಟ್ಟು ವಿಟಿಯು, ಬೆಂಗಳೂರು, ಬಿಡಿಟಿ ದಾವಣಗೆರೆ, ಮೈಸೂರು ಹೀಗೆ ಆಪ್ಷನ್ ಕೊಟ್ಟಿದ್ದೆ. ನನ್ನ ದುರಾದೃಷ್ಟ ದಾವಣಗೆರೆಯ ಬಿಡಿಟಿ ಕಾಲೇಜಿಗೆ ಸೀಟು ಅನೌನ್ಸ್ ಆಗಿತ್ತು. ಈಗಿನಂತೆ ಆನ್‌ಲೈನ್ ಅಲ್ಲ ಆಗ ನ್ಯೂಸ್ ಪೇಪರ್‌ನಲ್ಲಿ ಹೊರಡಿಸಲಾಗಿತ್ತು, ಅದರ ಪ್ರತಿ ಹಿಡಿದು ನಾವು ಸಂಬಂಧಪಟ್ಟ ಕಾಲೇಜಿನಲ್ಲಿ ಹೋಗಿ ಅಡ್ಮಿಷನ್ ಆಗಬೇಕಿತ್ತು, ಸರಿ ಅಪ್ಪ ಮಾಮೂಲಿಯಾಗಿ ನನಗೆ ಡ್ಯೂಟಿ ಇದೆ. ನಿಮ್ಮ ಸೋದರಮಾವನನ್ನು ಕರೆದೊಯ್ದು ಅಡ್ಮಿಷನ್ ಮಾಡಿಸಿಕೊ ಆತನಿಗೆ ದುಡ್ಡು ನಾ ಕೊಡುವೆ ಎಂದು ಮಾಮನನ್ನು ಜೊತೆ ಮಾಡಿ ದಾವಣಗೆರೆಗೆ ಕಳುಹಿಸಿತು.


    ಅಲ್ಲಿ ಅಡ್ಮಿಷನ್ ಮಾಡುವ ಅಧಿಕಾರಿ ಕೇಳಿದ ನಿನಗೆ ಈ ವಿಷಯ, ಕಾಲೇಜು ಸರಿ ಅಂದರೆ ʼಎಸ್ʼ ಎಂದೂ ಇಲ್ಲದಿದ್ದರೆ ʼನೋʼ ಎಂದು ಬರೆ, ʼಎಸ್ʼ ಅಂತ ಬರೆದರೆ ಇಲ್ಲಿ ಅಡ್ಮಿಷನ್ ಆಗುತ್ತೆ ಇಲ್ಲವಾದರೆ, ನಾವು ನಿಮ್ಮ ಲಿಸ್ಟ್ ಬೆಂಗಳೂರಿಗೆ ಕಳಿಸುತ್ತೇವೆ ಅವರು ಪುನಃ ಪರಿಷ್ಕೃತ ಪಟ್ಟಿ ಹಾಕುತ್ತಾರೆ ಆಗ ನಿಮ್ಮ ಕಾಲೇಜು ಅಥವಾ ವಿಷಯ ಎರಡೂ ಬದಲಾಗಬಹುದು. ಯಾಕೆಂದರೆ ಅಲ್ಲಿ ʼನೋʼ ಎಂದಷ್ಟೇ ಆಪ್ಷನ್ ಇದೆ ಅದು ಕಾಲೇಜು ಬದಲಾವಣೆಗಾ ಅಥವಾ ವಿಷಯ ಬದಲಾವಣೆಗಾ ಅಂತ ಅಪ್ಷನ್ ಇಲ್ಲ, ಅಂದರು.


   ನನಗೆ ಖುಷಿಯಾಯಿತು. ನನಗಿಷ್ಟವಿಲ್ಲದ ಕಂಪ್ಯೂಟರ್ ಸೈನ್ಸ್ನಿಂದ ನನ್ನ ಇಷ್ಟದ ಮೆಟಲರ್ಜಿ ಅಥವಾ ಟೆಕ್ಸ್ಟೈಲ್ ವಿಷಯ ಸಿಗುತ್ತದೆ ಎಂದು, ನಾನು ಖುಷಿಯಿಂದ ಸರಿ ಹಾಗಾದ್ರೆ ʼನೋʼ ಎಂದು ಬರೆಯುವೆ ಎಂದು ತಿಳಿಸಿ ಬರೆಯಲು ಮುಂದಾದ ನನ್ನನ್ನು ಅಷ್ಟೇ ರಭಸವಾಗಿ ತಡೆದ ಮಾಮ “ಯಾಕೆ ಕಾಲೇಜು, ವಿಷಯ ಬದಲಾವಣೆಯಾದರೆ ಪುನಃ ನಾನೇ ನಿನ್ನ ಅಡ್ಮಿಷನ್ ಮಾಡಿಸಲು ಬರಬೇಕು ನನಗೇನು ಬೇರೆ ಕೆಲಸವಿಲ್ಲವಾ ನಿಮ್ಮಪ್ಪ ಬರುತ್ತಾನಾ ಅಡ್ಮಿಷನ್ ಮಾಡಿಸಲು ʼಎಸ್ʼ ಅಂತ ಬರಿ ಅಡ್ಮಿಷನ್ ಮುಗಿಸಿಕೊಂಡು ಹೋಗುವಾʼ ಅಂದರು. ಪರವಾಗಿಲ್ಲ ನಾನು ಅಪ್ಪನೆ ಅಡ್ಮಿಷನ್ ಮಾಡಿಸುವಂತೆ ಕೇಳುವೆ ನನಗೆ ಸಿ.ಎಸ್ ಬೇಡ ಅಂದೆ. ಗದರಿಕೊಳ್ಳುತ್ತಾ ಸಿಟ್ಟಿನಿಂದ ʼಎಸ್ʼ ಅಂತ ಬರೆ ಅಂತ ಬೆದರಿಸಿ ಬರೆಸಿದರು. ವಿಧಿಯಿಲ್ಲದೆ ಬೇಸರಿಂದ ದುಃಖದಿಂದ ಅತ್ಯಂತ ನೋವಿನಿಂದ ʼಎಸ್ʼ ಅಂತ ಬರೆದೆ 


ಅಂದೇ ನನ್ನ ಹಣೆಬರಹ ಅಡ್ಡ ಹಾದಿ ಹಿಡಿದಿತ್ತು.


ಅಡ್ಮಿಷನ್ ಆದ ಮೇಲೆ ಕ್ಯಾಂಪಸ್ ಸುತ್ತುವಾಗ ಮಾಮನೇ ಅಲ್ಲಿನ ಹುಡುಗರನ್ನ ವಿಚಾರಿಸಿತು, ಅಲ್ಲಿನ ಟೀಚಿಂಗ್ ಬಗ್ಗೆ ಒಬ್ಬಾತ ಹೇಳಿದ, ಈ ಕಾಲೇಜಲ್ಲಿ ಕಂಪ್ಯೂಟರ್ ಸೈನ್ಸ್ ಬಂದು 3 ವರ್ಷ ಆಗಿದೆ ಅಷ್ಟೆ ಲೆಕ್ಚರ‍್ಸ್ ಇಲ್ಲ, ಆಗಾಗ ಬೇರೆ ಕಾಲೇಜಿಂದ ಕರೆಸಿ ಪಾಠ ಮಾಡಿಸುತ್ತಾರೆ ಮತ್ತೆ ಇದೇ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ, ಎಲೆಕ್ಟ್ರಾನಿಕ್ಸ್ ವಿಭಾಗದ ಕೆಲವು ಉಪನ್ಯಾಸಕರು ಕಂಪ್ಯೂಟರ್ ಸೈನ್ಸ್ ಬಗ್ಗೆ ಪಾಠ ಮಾಡುತ್ತಾರೆ ಎಂದು , ನನಗೆ ದುಃಖ ಒತ್ತರಿಸಿ ಬಂತು ಛೆ, ಲೆಕ್ಚರ‍್ಸ್ ಇಲ್ಲ, ನನಗೆ ಇಷ್ಟವಿಲ್ಲದ ವಿಷಯ, ಹೇಗೆ ಓದಲಿ ಎಂದು . ಮಾಮ “ಹೌದಾ ಸರಿ ಮತ್ತೆ ಬೇರೆ ಕಾಲೇಜಿಂದ ಕರೆಸುತ್ತಾರಂತಲ್ಲಮ್ಮ ನಡಿ ಏನು ಭಯವಿಲ್ಲ” ಅಂತ ಹೇಳಿದ್ದರಿಂದ ತಿಪಟೂರಿನ ಬಸ್ಸು ಹಿಡಿಯಲು ಬಸ್‌ಸ್ಟಾಂಡ್‌ಗೆ ನಡೆದೆವು.


ಮನಸ್ಸಿನಲ್ಲಿ ಅಪ್ಪನ ಬಗ್ಗೆ ಇದ್ದ ಬೇಸರ ಮತ್ತಷ್ಟು ಹೆಚ್ಚಾಗಿತ್ತು. ಸ್ವತಃ ಲೆಕ್ಚರರ್ ಆಗಿದ್ದ ಮಾಮನ ಬಗ್ಗೆ ಕೂಡ ಕೋಪ ಬೇಸರ ಮನೆ ಮಾಡಿತ್ತು, ನನ್ನ ಅಪ್ಪ ಇವರಿಗೆ ಇವರ ಆಸ್ತಿ ಉಳಿಸಿಕೊಳ್ಳಲು ಎಷ್ಟೆಲ್ಲಾ ಸಹಾಯ ಮಾಡಿದೆ. ಎಷ್ಟೆಲ್ಲಾ ಸಹಾಯ ಮಾಡಿದರೂ ಈತನಿಗೆ ಮತ್ತೊಂದು ಬಾರಿ ಬಂದು ಅಡ್ಮಿಷನ್ ಮಾಡಿಸಿದ್ದರೆ ಏನಾಗುತ್ತಿತ್ತು, ಅಥವಾ ಮುಂದಿನ ಬಾರಿ ನಾನು ಹೋಗುವುದಿಲ್ಲ ಅಂತ ತಿಳಿಸಿದರೆ ಅಪ್ಪನೇ ನನ್ನ ಅಡ್ಮಿಷನ್‌ಗೆ ಕರೆದುಕೊಂಡು ಹೋಗುತ್ತಿತ್ತು ಅಂತ ನನ್ನ ನಂಬಿಕೆ. ನನ್ನ ಜೀವನದ ಅತ್ಯಂತ ಕೆಟ್ಟ ದಿನ ಅದಾಗಿತ್ತು. 


      ಅಂತೆಯೇ ಕಾಲೇಜು ಶುರುವಾದ ಮೇಲೆ ಕಾಲೇಜಿನ ಆಡಳಿತ ಮಂಡಳಿಯೇ, ಇರುವ ವಿಷಯ ತಿಳಿಸಿ, ನೋಡಿ ಉಪನ್ಯಾಸಕರು ಇಲ್ಲ, ಕಂಪ್ಯೂಟರ್ ಸೈನ್ಸ್ನವರು ಬ್ರಾಂಚ್ ಛೇಂಜ್‌ಗೆ ಬರೆದುಕೊಡುವುದಿದ್ದರೆ ಕೊಡಿ, ಯಾವ ಬ್ರಾಂಚ್‌ಗಾದರೂ ತೆಗೆದುಕೊಳ್ಳಬಹುದು ಅಂದರು, ಇದೇ ಅವಕಾಶವನ್ನು ಇನ್‌ಸ್ಟುç್ರಮೆಂಟಲ್ , ಎನ್‌ವಿರಾನ್ಮೆಂಟ್, ಎಲೆಕ್ಸ್ಟಾನಿಕ್ಸ್ನವರಿಗೂ ಕೊಟ್ಟಿದ್ದರು, ನಾನು ಮನೆಯಲ್ಲಿ ಕೇಳಿದೆ, ಅಪ್ಪ ʼಯಾಕೆ ಏನಾಗಿದೆ, ಎಷ್ಟು ಜನ ಆ ಥರ ಛೇಂಜ್‌ಗೆ ಬರೆದುಕೊಟ್ಟಿದ್ದಾರೆ ನಿಮ್ಮ ಕ್ಲಾಸಿಂದ ʼ ಅಂತು ಇಬ್ಬರು ಮಾತ್ರ ಅಂದರೆ ಸರಿ ಮತ್ತೆ ಉಳಿದವರು ಹೇಗೆ ಓದುತ್ತಾರೆ ಮತ್ತೆ ಹಾಗೇ ನೀನೂ ಓದು ಅಂತ ತಾಕೀತು ಮಾಡಿತು. 


     ಮನಸ್ಸು ಕೆಲವು ವರ್ಷ ಹಿಂದಕ್ಕೆ ಓಡಿತು, ನಾನು ಐಎಎಸ್ ಮಾಡಬೇಕು ಅದಕ್ಕೆ ಬಿ.ಎ ಮಾಡಲು ಪಿಯುನಲ್ಲಿ ಆರ್ಟ್ಸ್ ತೆಗೆದುಕೊಳ್ತೇನೆ ಅಂದಾಗ ನನ್ನನ್ನ ಹೊಡೆಯಲೆಂದೆ ಕೋಲು ಹಿಡಿದು ಮನೆ ಸುತ್ತಾ ಅಟ್ಟಾಡಿಸಿತ್ತು ಅಪ್ಪ. ಅಪ್ಪನಿಗೆ ಆರ್ಟ್ಸ್ ತೆಗೆದುಕೊಂಡವರನ್ನ ಕಂಡರೆ ಇಷ್ಟ ಇರಲಿಲ್ಲ, ಅದನ್ನು ತೆಗೆದುಕೊಳ್ಳುವವರು, ಸೋಂಬೇರಿಗಳು ಕೈಲಾಗದವರು ಅನ್ನುವ ಅಭಿಪ್ರಾಯ ಅಪ್ಪನದು. ನಮ್ಮ ಜನ ಅದಕ್ಕೆ ಆರ್ಟ್ಸ್ ತೆಗೆದುಕೊಳ್ತಾರೆ, ಅಂತ ಅಪ್ಪನ ಭಾವನೆ. ನೀನು ಸೈನ್ಸ್ ತೆಗೆದುಕೊಳ್ಳಲೇಬೇಕು. ಅಕ್ಕನನ್ನ ನೋಡು ಗಣಿತ ಕಷ್ಟ ಆದರೂ ಅವಳು ಕೂಡ ಸೈನ್ಸ್ ತೆಗೆದುಕೊಂಡಿಲ್ಲವಾ ಹೋಗಿ ಪಿಯುಸಿ ಸೈನ್ಸ್ಗೆ ಅಡ್ಮಿಷನ್ ಮಾಡಿಸಿ ಬಾ ಅಂದಿತ್ತು. ಅಲ್ಲಿವರೆಗೂ ನನಗೆ ತಿಳಿದವರು ಬಿ.ಎ ತಗೊಂಡು ಐಎಎಸ್ ಮಾಡಿದ್ದರಿಂದ ನನಗೆ ಐಎಎಸ್ ಮಾಡಲು ಬಿ.ಎ ಓದಬೇಕೋನೋ ಎಂಬ ಭಾವನೆ ಇತ್ತು . 


ಅಷ್ಟಕ್ಕೂ ನಾನು ಐಎಎಸ್ ಓದಲೆಂದೇ 5ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಕೂಡಿಟ್ಟಿದ್ದ ಪುಸ್ತಕಗಳನ್ನೆಲ್ಲಾ ಅಷ್ಟು ಹೊತ್ತಿಗೆ ಅಡ್ಡ ದಾರಿ ಹಿಡಿದಿದ್ದ ನನ್ನ ತಮ್ಮ ನಾವು ಊರಿಗೆ ಹೋಗಿದ್ದ ಒಂದು ದಿನ ತನ್ನ ಸ್ನೇಹಿತರಿಗೆ ಕಾಸಿಗೊಂದರಂತೆ ಮಾರಿ ಖರ್ಚಿಗೆ ಕಾಸು ಮಾಡಿಕೊಂಡಿದ್ದ. ಸಂಜೆ ಮನೆಗೆ ಬಂದಾಗ ಬುಕ್ಸ್ ರ‍್ಯಾಕ್ ಖಾಲಿ ನೋಡಿ ನನಗೆ ಆದ ಆಘಾತ ಇಂದಿಗೂ ಮರೆಯಲಾಗಿಲ್ಲ ಆತನಿಗೆ ಯಾವ ಶಿಕ್ಷೆ ಕೊಟ್ಟರೂ ನನ್ನ ಪುಸ್ತಕಗಳು ವಾಪಸ್ಸು ಬರುವ ಹಾಗಿರಲಿಲ್ಲ ಅಮ್ಮ ಅವನಿಗೆ ಏನೇ ಹೊಡೆದರೂ ಬೈದರೂ ಆತ ಯಾರಿಗೆ ಕೊಟ್ಟಿದ್ದನೋ ಅವರ ಹೆಸರುಗಳನ್ನು ಹೇಳಲಿಲ್ಲ, ಅಂದಿಗೆ ನನ್ನ ಐಎಎಸ್ ಕನಸು ಬಿಟ್ಟುಬಿಟ್ಟೆ. ಅಂತೆಯೇ ಅಪ್ಪನ ಒತ್ತಾಸೆಯಂತೆ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ.


     ಮೆಡಿಕಲ್ ಸೀಟು ಮೊದಲ ರೌಂಡ್‌ನಲ್ಲಿ ನನಗೆ ಸೀಟು ಸಿಕ್ಕಿರಲಿಲ್ಲ. ಎರಡನೇ ರೌಂಡ್‌ಗೆ ಇಂಟರ್ ವ್ಯೂ/ವೆರಿಫಿಕೇಷನ್ ಗೆ ಪೇಪರ್‌ನಲ್ಲಿ ಅನೌನ್ಸ್ ಮಾಡಲಾಗಿತ್ತು ಅಂತೆಯೇ ಅಟೆಂಡ್ ಮಾಡಿ ಬಂದಿದ್ದೆ ಆನಂತರ ಸೀಟು ಸಿಗಲಿಲ್ಲ ಅಂತ ಅಷ್ಟೇ ಗೊತ್ತು.


ಮುಂದೆ ನಾನು ಬಿಇ ಸೇರಿದಾಗ, ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿಗೆ ಜೆಜೆಎಂ ಮೆಡಿಕಲ್ ಕಾಲೇಜು ಮುಂದೆ ಹಾದು ಹೋಗಬೇಕಿತ್ತು ಹಾಗೆ ಹೋಗುವಾಗ ಮೆಡಿಕಲ್ ಸಿಇಟಿ ಇಂಟರ್‌ವ್ಯೂನಲ್ಲಿ ನನಗಿಂತ ಕಡಿಮೆ ರ‍್ಯಾಂಕ್ ಇದ್ದ ಹುಡುಗಿ ಸಿಕ್ಕಿ ತನಗೆ ಜೆಜೆಎಂ ನಲ್ಲಿ ಸೀಟು ಸಿಕ್ಕಿದೆ, ನಿನಗೆ ಎಲ್ಲಿಗೆ ಸಿಕ್ಕಿದೆ” ಎಂದು ಕೇಳಿದಳು. ನನಗೆ ಆಶ್ಚರ್ಯ, “ಹೌದಾ ನನಗೆ ಸೀಟು ಸಿಗಲಿಲ್ಲ” ಎಂದೆ.


“ಯಾಕೆ” ಅಂದಳು. ಗೊತ್ತಿಲ್ಲ ಅಂದೆ, ಅದಕ್ಕೆ ಉತ್ತರ ಹುಡುಕುತ್ತಾ ಸುಮಾರು ವರ್ಷ ತಲೆಕೆಡಿಸಿಕೊಂಡೆ, ಆ ನಂತರ ನನಗೆ ಹೊಳೆದದ್ದು, ನಾನು ಬರೀ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಹಾಕಿದ್ದದ್ದು ಅಂತ ಹೊಳೆಯಿತು ನಾನು ಕೂಡ ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಹಾಕಿದ್ದರೆ ಖಂಡಿತಾ ಸೀಟು ಸಿಕ್ಕಿರುತ್ತಿತ್ತು.?!.


***


ಇನ್ನು ಇಂಜಿನಿಯಿರಿಂಗ್ ಕಾಲೇಜಲ್ಲಿ ಅವರು ಭರವಸೆ ಕೊಟ್ಟಂತೆ ಉಪನ್ಯಾಸಕರನ್ನು ಕರೆಸಿ ಪಾಠ ಮಾಡಲಿಲ್ಲ, ಎಲ್ಲರಿಗೂ ಅವರ ಜಾತಿ ಬಲವಿತ್ತು, ಇಡೀ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಬ್ಬರು ಮಾತ್ರ ಎಸ್‌ಸಿ ಹುಡುಗಿಯರಿದ್ದದ್ದು ನಾನು ಮತ್ತು ಮತ್ತೊಬ್ಬ ಹುಡುಗಿ ತಮಿಳಿಯನ್, ಆಕೆ ತಮಿಳು ಎಂದು ನಮ್ಮ ಕನ್ನಡದವರು ಹೆಚ್ಚು ಪ್ರೀತಿಯಿಂದ ಅವಳು ಕೇಳಿದ್ದನ್ನ ಹೇಳಿಕೊಡುತ್ತಿದ್ದರು, ನಾನು ಎಸ್‌ಸಿ ಎಸ್ಸಿ ಎಂದು ತಿಳಿದ ನಂತರ ಆಕೆ ನನ್ನೊಟ್ಟಿಗೆ ಗುರುತಿಸಿಕೊಳ್ಳುತ್ತಿರಲಿಲ್ಲ, ನಾನು ಏನೇ ಕೇಳಿದರೂ ಹೆಚ್ಚು ಉತ್ತರ ಕೊಡುತ್ತಿರಲಿಲ್ಲ. ಇನ್ನು ಲೋಕಲೈಟ್‌ಗಳೆಲ್ಲ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಪರಿಚಯದವರಿಂದ ನೋಟ್ ಪುಸ್ತಕಗಳನ್ನು ಪಡೆದು ಗುಟ್ಟಾಗಿ ಓದುತ್ತಿದ್ದರು. ಇನ್ನ ಬ್ರಾಹ್ಮಣರು ಲಿಂಗಾಯಿತರಿಗೆ ಅವರ ಕಸಿನ್ಸ್ಗಳ ಪುಸ್ತಕ ನೋಟ್‌ಬುಕ್‌ಗಳು, ಬಾಪೂಜಿ ಕಾಲೇಜಿನ ಅದೇ ಸಮುದಾಯದವರ ಸಹಾಯ ಇತ್ತು ನನಗೆ ಅರ್ಥವಾಗದ್ದನ್ನ ಕೇಳಿದರೆ ಅಯ್ಯೋ ನೇತ್ರ ನನಗೂ ಅದು ಅರ್ಥವಾಗಿಲ್ಲ ನಾನಿನ್ನೂ ಓದಬೇಕಷ್ಟೆ ಅನ್ನುವ ಸಬೂಬು ಹೇಳುತ್ತಿದ್ದರು. ನನಗೆ ನನ್ನ ನೆಂಟರಲ್ಲಿ ಅಥವಾ ನಮ್ಮ ಸಮುದಾಯದವರಾಗಲೀ ಇಂಜಿನಿಯರಿಂಗ್ ಓದುತ್ತಿದ್ದವರು ಯಾರೂ ಇರಲಿಲ್ಲ. ಕಡೆಗೆ ಉಳಿದದ್ದು ಬರೀ ಪುಸ್ತಕವನ್ನು ಅವಲಂಬಿಸಿ ಓದುವುದು, ಅದನ್ನೇ ಓದಿದೆ. ನನಗೆ ಅರ್ಥವಾಗುವಷ್ಟು, ನಾನೂ ಮೇಲ್ಜಾತಿ ಯಲ್ಲಿ ಹುಟ್ಟಿದ್ದರೆ ಜೀವನ ಇಷ್ಟು ಕಷ್ಟಮಯವಾಗಿರುತ್ತಿರಲಿಲ್ಲ ಅನ್ನಿಸುತ್ತಿತ್ತು ಮತ್ತು ಅದು ನಿಜವೂ ಆಗಿತ್ತು.
----------------------------