ಬಿಗುಮಾನಿಯ ನಿರ್ಗಮನ

ಕೃಷ್ಣರ ತಂದೆಯ ತಂದೆ ಸೋಮನಹಳ್ಳಿ ಚಿಕ್ಕೇಗೌಡರು 1881 ರಲ್ಲಿ ಅಂದಿನ ಮೈಸೂರು ರಾಜಸಂಸ್ಥಾನದಲ್ಲಿ ಸ್ಥಾಪನೆಯಾಗಿದ್ದ ಈಗಿನ ಶಾಸಕರ ಸ್ಥಾನಮಾನ ಹೊಂದಿದ್ದ  ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದವರು.

ಬಿಗುಮಾನಿಯ ನಿರ್ಗಮನ

ಪತ್ರಕರ್ತನ ಕಣ್ಣೋಟ

 

ಪಾರ್ವತೀಶ ಬಿಳಿದಾಳೆ

 

  ತಂದೆ ಚಿಕ್ಕೇಗೌಡರು ತೀರಿಕೊಂಡಾಗ ಕೇವಲ 25 ವರ್ಷದ ಯುವಕರಾಗಿದ್ದ ಸೋಮನಹಳ್ಳಿ ಮಲ್ಲಯ್ಯನವರು   ( ಕೃಷ್ಣರ ತಂದೆ ) ಅದೇ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ತಂದೆಯ ಸ್ಥಾನದ ಉತ್ತರಾಧಿಕಾರಿ ಎಂಬಂತೆ ಮುಂದುವರಿಯುತ್ತಾರೆ.

     ಮಲ್ಲಯ್ಯನವರು ದೂರದೃಷ್ಟಿಯಿದ್ದ ನಾಯಕರು. 1907ರಲ್ಲಿ ಜಾರಿಯಾದ ನ್ಯಾಯ ವಿಧಾಯಕ ಸಭೆಗೆ ಚುನಾಯಿತ ಜನಪ್ರತಿನಿಧಿಗಳೂ ಬರುವಂತೆ ನೋಡಿಕೊಂಡವರು. ಪ್ರಭುತ್ವದ ಖಜಾನೆ ಹಣವು ಜನಸಾಮಾನ್ಯರ ಹಿತಕ್ಕಾಗಿ ಬಳಕೆಯಾಗುವಂತೆ ಯೋಜನೆಗಳನ್ನು ವಿನ್ಯಾಸಗೊಳಿಸಲು ಪ್ರಯತ್ನಿಸಿದ್ದರು. ಹಿಂದುಳಿದ ವರ್ಗದ ಸಮುದಾಯದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಿಗುವಂತೆ ಮಿಲ್ಲರ್ ಆಯೋಗದ ವರದಿಯ ಜಾರಿಯಲ್ಲಿ ಮಲ್ಲಯ್ಯನವರ ಪಾತ್ರವೂ ಇತ್ತು.

ಮೖಸೂರು -ಕೋಲಾರದ ನಡುವಿನ ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಮುಂತಾದ ಅನೇಕ ಕಡೆ ಪಾಲಿಟೆಕ್ನಿಕ್ ಹಾಗೂ ಐಟಿಐ ತಾಂತ್ರಿಕ ತರಬೇತಿ ಕೇಂದ್ರಗಳು ಸ್ಥಾಪನೆಯಾಗುವಂತೆ ನೋಡಿಕೊಂಡರು.

ಪಶುವೖದ್ಯ ಆಸ್ಪತ್ರೆಗಳು, ಅರವಟ್ಟಿಗೆಗಳು, ಮದ್ದೂರು ತಾಲ್ಲೂಕು ರಚನೆ, ಮಂಡ್ಯ ಜಿಲ್ಲಾ ರಚನೆ, ಇರ್ವಿನ್ ನಾಲೆ ನಿರ್ಮಾಣದಲ್ಲೂ ಮಲ್ಲಯ್ಯನವರ ಪಾತ್ರವಿತ್ತು.

ಇವರ ಬದುಕಿನ ಕುರಿತು ನಾಗತಿಹಳ್ಳಿ ರಮೇಶ್ ರವರು ' ಮಾನವತಾವಾದಿ ಮಲ್ಲಯ್ಯ ' ಎಂಬ ಉತ್ತಮ ಮಾಹಿತಿಯ ಪುಸ್ತಕ ಪ್ರಕಟಿಸಿರುವರು. ಸರ್ಕಾರಿ ಹುದ್ದೆಗಳಲ್ಲಿ ಬ್ರಾಹ್ಮಣರಲ್ಲದ ಇತರರಿಗೂ ಸಮಾನ ಅವಕಾಶ ಸಿಗಬೇಕೆಂದು ಮಲ್ಲಯ್ಯ ಮಂತಾದವರು ಪ್ರತಿಪಾದಿಸಿದ ಕಾರಣ 1930 ರಲ್ಲಿ ರಚನೆಯಾದ ಜಿಲ್ಲಾಮಟ್ಟದ ನೇಮಕಾತಿ ಸಮಿತಿಗಳು( District Level Recruitment Committee ) 1985 ರ ವರೆಗೂ ಅಸ್ತಿತ್ವದಲ್ಲಿ ಇದ್ದವು. ಇದು ಮಲ್ಲಯ್ಯನವರ ದೂರದೃಷ್ಟಿಗೊಂದು ಉದಾಹರಣೆ. ಮಲ್ಲಯ್ಯ ಕ್ರಿಯಾಶೀಲ ರಾಜಕಾರಣಿ. ಕಂದಾಯ ಪದ್ಧತಿಯ ಸುಧಾರಣೆ, ರೈತ ವಿಮೆ ಜಾರಿ, ಲಂಚ ನಿರ್ಮೂಲನೆ, ಕಾರ್ಮಿಕ ಕಾಯ್ದೆಗಳ ಜಾರಿ, ವಯಸ್ಕರ ಶಿಕ್ಷಣದ ಬಗ್ಗೆಯೂ ಮಾತನಾಡುತ್ತಿದ್ದರು. ಆಗಿನ ಸರ್ಕಾರಿ ರೆವಿನ್ಯೂ ದಾಖಲೆಗಳಲ್ಲಿ ಶೂದ್ರ ಸಮುದಾಯಗಳ ಹೆಸರುಗಳನ್ನು ಶ್ಯಾನುಭೋಗ ಲಿಪಿಕಾರರು ಏಕವಚನದಲ್ಲಿ ದಾಖಲಿಸುವ ಪದ್ಧತಿ ಇತ್ತು. ಮಲ್ಲಯ್ಯನವರು ಮೇಲ್ಜಾತಿ ಜನರ ಈ ಉದ್ಧಟತನದ ಧೋರಣೆಯನ್ನು ಬದಲಿಸಿದರು. ಅವರು ಮೈಸೂರು ಸಂಸ್ಥಾನದಲ್ಲಿ ಕ್ರಿಯಾಶೀಲ ನಾಯಕರಾಗಿದ್ದಾಗಲೇ ಇಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಟವು ತೀವ್ರ ಗತಿಯಲ್ಲಿ ನಡೆಯುತ್ತಿತ್ತು. ಆದರೆ ಮಲ್ಲಯ್ಯ ಪೂರ್ಣ ರಾಜನಿಷ್ಠ ಮುಖಂಡರು. ಹಾಗಾಗಿ ಸ್ವತಂತ್ರ ಚಳುವಳಿಯಲ್ಲಿ ಅವರ ಪಾತ್ರ ಗೌಣವಾಗಿತ್ತು. ಎಸ್. ಎಂ. ಕೃಷ್ಣ ರವರು 20 ರ ವಯಸ್ಸಿನಲ್ಲಿದ್ದಾಗ ಮಲ್ಲಯ್ಯ ನಿಧನ ಹೊಂದಿದರು.

ಎಸ್ ಎಂ ಕೃಷ್ಣ (ಜನನ 1932- ಮರಣ 2024)

   30ನೇ ವಯಸ್ಸಿನ ಆಸುಪಾಸಿನಲ್ಲಿ ಚುನಾವಣೆ ಗೆದ್ದು ಶಾಸಕರಾದ ಎಸ್.ಎಮ್. ಕೃಷ್ಣ ನಂತರ ಲೋಕಸಭಾ ಸದಸ್ಯರಾಗಿ, ಅರಸು ಸಂಪುಟದಲ್ಲಿ ರಾಜ್ಯ ಸಚಿವರಾಗಿ ನಂತರ ಕ್ಯಾಬಿನೆಟ್ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷ, ಕರ್ನಾಟಕದ ಮುಖ್ಯಮಂತ್ರಿ, ರಾಜ್ಯಪಾಲ ನಂತರ ಇಂಡಿಯಾ ಒಕ್ಕೂಟ ಸರ್ಕಾರದ ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದರು.

    1999 ರಲ್ಲೆಂದು ಕಾಣುತ್ತದೆ, ಲಂಕೇಶರು ತೀರಿಕೊಳ್ಳುವ ಕೆಲವು ತಿಂಗಳ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣ ಲಂಕೇಶ್ ಪತ್ರಿಕೆ ಕಚೇರಿಗೆ ಬಂದರು. ಅಷ್ಟರಲ್ಲಿ ಕೃಷ್ಣ ಬ್ರೈಟ್ ರಾಜಕಾರಣಿಯಾಗಿ ಬಿಂಬಿತರಾಗಿದ್ದರು. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಮ್ಮ ಪತ್ರಿಕಾ ಕಚೇರಿಗೆ ಬಂದರೆಂಬುದು ನಮಗೊಂತರ ಬೆರಗು.

ಕೃಷ್ಣ ಹೋದ ನಂತರ ಲಂಕೇಶರು ' ಏನ್ರಯ್ಯಾ.. ಈ ಮನುಷ್ಯನಿಗೆ ಕನಸುಗಳೇ ಇದ್ದಂತಿಲ್ಲ ' ಎಂದು ಒಂದೇ ಮಾತು ಹೇಳಿ ಸುಮ್ಮನಾದರು.

ನಿರೀಕ್ಷಿಸಿದಂತೆ ಎಸ್.ಎಮ್. ಕೃಷ್ಣ ಮುಖ್ಯಮಂತ್ರಿಯಾದರು. ಹಿರಿತನ, ಮುತ್ಸದಿತನ, ವ್ಯಕ್ತಿತ್ವ ಮತ್ತು ಕರ್ನಾಟಕದ ಬಗ್ಗೆ ಇದ್ದ ಒಂದು ಮುನ್ನೋಟದ ಮಾನದಂಡದಲ್ಲಿ ಹೇಳಬೇಕೆಂದರೆ ಅವತ್ತಿಗೆ ಕೆ ಹೆಚ್ ರಂಗನಾಥ್ ಮುಖ್ಯಮಂತ್ರಿಯಾಗಬೇಕಿತ್ತು.

ಕೃಷ್ಣರವರ ಜಡ ಬ್ರಿಟಿಷ್ ಶೈಲಿಯ ಆಡಳಿತವು ಜನರ ವಿಶ್ವಾಸವನ್ನು ಪಡೆಯಲಿಲ್ಲ. ಕೃಷ್ಣ ಅದನ್ನು ಲೆಕ್ಕಿಸಲೂ ಇಲ್ಲ. ಮುಸ್ಲಿಮರ ಬಗ್ಗೆ ಕೃಷ್ಣರಿಗೆ ಬಹಳ ಒಲವಿದೆಯೆಂಬುದನ್ನು ಅವರು ನಫೀಸಾ ಫಜಲ್ ರನ್ನು ಮಿನಿಷ್ಟರ್ ಮಾಡುವ ಮೂಲಕ ತೋರಿಸಿಕೊಂಡರು. ಮಂತ್ರಿ ಎಂದರೆ ರಾಜಸೇವೆ ಇರಬಹುದು ಎಂದು ನಂಬಿದಂತಿದ್ದ ನಫೀಸಾ ತಮ್ಮ ಪೆದ್ದು ಮಾತು, ನಡವಳಿಕೆಗಳಿಂದ ಪತ್ರಕರ್ತರಿಗೆ, ಜನರಿಗೂ ಸಾಕಷ್ಟು ಮನರಂಜನೆ ನೀಡಿದರು.

ಕರ್ನಾಟಕದಲ್ಲಿನ ಕೃಷ್ಣರ ನಾಯಕತ್ವದ ವೈಫಲ್ಯವು ಅವರ ಪೊಲಿಟಿಕಲ್ ಕೆರಿಯರ್ ಅನ್ನು ಮಸುಕು ಮಾಡಲಿಲ್ಲ. ಅವರು ನಂತರ ಮಹಾರಾಷ್ಟ್ರದ ರಾಜ್ಯಪಾಲರಾದರು. 2009ರಲ್ಲಿ ಇಂಡಿಯಾ ಒಕ್ಕೂಟದ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರೂ ಆದರು. ಆಗ ನವದೆಹಲಿಯಲ್ಲಿ ಕೃಷ್ಣ ಐಟಿಸಿ ಮೌರ್ಯ ಎಂಬ ಫೈವ್ ಸ್ಟಾರ್ ಹೋಟೆಲ್ ನಲ್ಲಿ ದೀರ್ಘಕಾಲ ವಾಸವಿದ್ದರು. ಸಚಿವರಿಗೆ ನಿಗದಿಯಾಗಿದ್ದ ಐಷಾರಾಮಿ ಬಂಗಲೆ ಇದ್ದರೂ ಸಹ ಅವತ್ತಿನ ಕಾಲಕ್ಕೇ ದಿನಕ್ಕೆ ಒಂದು ಲಕ್ಷ ರೂಪಾಯಿ ಬಾಡಿಗೆಯ ಹೋಟೆಲ್ ನಲ್ಲಿ ಕೃಷ್ಣ ಇರುತ್ತಿದ್ದರು. ಇದೊಮ್ಮೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ಸೋನಿಯಾ ಗಾಂಧಿಯವರ ಗಮನಕ್ಕೆ ಬಂದ ನಂತರ ಅವರು ತೀವ್ರವಾಗಿ ಆಕ್ಷೇಪಿಸಿ ಕೃಷ್ಣ ಹೋಟೆಲ್ ಬಿಡುವಂತೆ ನೋಡಿಕೊಂಡರು. ಕೃಷ್ಣ ಇದರ ಬಗ್ಗೆ ಯಾವುದೇ ಪಶ್ಚಾತಾಪ, ವಿಷಾದ ವ್ಯಕ್ತಪಡಿಸದೆ ಉಳಿದರು. ಸರ್ಕಾರದ ಅಂದರೆ ಸಾರ್ವಜನಿಕರ ತೆರಿಗೆಯ ಹಣದ ಬಗ್ಗೆ ಕೃಷ್ಣಾ ಅವರಿಗೆ ಇದ್ದ ಧೋರಣೆ ಇದು. ತಾನು ಆಳಲೆಂದೇ ಹುಟ್ಟಿರುವುದು ಎಂಬ ಮನಸ್ಥಿತಿಯಿಂದ ಬರುವಂತಹ ಜೀವನಶೖಲಿ ಇದು.

ಇಂಡಿಯಾ ಸರ್ಕಾರದಲ್ಲಿ ಪ್ರಧಾನ ಮಂತ್ರಿಗಳಿಗೆ ಹೇಗೆ ಒಂದು ವಿಶೇಷ ವಿಮಾನವಿರುತ್ತದೆಯೋ ಅದೇ ರೀತಿ ರಕ್ಷಣಾ ಸಚಿವರಿಗೂ ಸಹ ಅವರ ಓಡಾಟಕ್ಕೆಂದೆ ಮೀಸಲಾಗಿರುವ ವಿಮಾನಗಳು ಇರುತ್ತವೆ. ವಿದೇಶಾಂಗ ಸಚಿವರಾಗಿ ಕೃಷ್ಣ ಸಹ ತಮಗೊಂದು ವಿಶೇಷ ವಿಮಾನವನ್ನು ಪಡೆದರು. ಹಲವು ದೇಶಗಳನ್ನು ಸುತ್ತಿದರು.

ಆದರೆ ಆಗಿನ ವಿಶ್ವ ವಿದ್ಯಮಾನಗಳಲ್ಲಿ ಭಾರತದ ಛಾಪನ್ನು ಮೂಡಿಸುವಲ್ಲಿ ವಿಫಲರಾದರು. ಅಷ್ಟು ಮಾತ್ರವಲ್ಲದೆ ವಿಶ್ವದ ವಾಣಿಜ್ಯ ವ್ಯವಹಾರಗಳಲ್ಲಿ ಭಾರತಕ್ಕೆ ಅವಕಾಶಗಳನ್ನು ಸೃಷ್ಟಿಸುವಲ್ಲಿಯೂ ಸಹ ಗಮನಹರಿಸಲಿಲ್ಲ. ಕೃಷ್ಣ ಯಾವುದೇ ದೇಶಕ್ಕೆ ಎಲ್ಲಿಗೆ ಹೋದರೂ ಸಹ ವಿಮಾನದಲ್ಲಿ ಅವರೊಂದಿಗೆ ಉನ್ನತ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಅಳಿಯ ಸಿದ್ದಾರ್ಥ ಜೊತೆಗಿರುವಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ತಮ್ಮ ಅಳಿಯನ ವ್ಯಾಪಾರ ವಹಿವಾಟುಗಳು ಯುರೋಪ್ ಹಾಗೂ ಆಫ್ರಿಕಾ ದೇಶಗಳಲ್ಲಿ ವಿಸ್ತರಿಸಲಿ ಎಂಬ ಬಯಕೆಯಿತ್ತು. ಸಿದ್ದಾರ್ಥರಲ್ಲಿ ದಿನ ಕ್ರಮೇಣ ಅದು ಮಹತ್ವಾಕಾಂಕ್ಷಿಯಾಗಿ ಬದಲಾಯಿತು.

ಕೆಫೆ ಕಾಫಿ ಡೇ, ಮೈಂಡ್ ಟ್ರೀ, ಜಿ ಟಿವಿ, ಲಿಕ್ವಿಡ್ ಕ್ರಿಸ್ಟಲ್, ವೇ ಟು ವೆಲ್ತ್ ಬ್ರೋಕರ್ಸ್, ವೇ ಟು ವೆಲ್ತ್ ಸೆಕ್ಯೂರಿಟೀಸ್ ಮುಂತಾದ ಡಜನ್ ಗಟ್ಟಲೆ ಕಂಪನಿಗಳನ್ನು ಒಂದರ ಹಿಂದೆ ಒಂದರಂತೆ ಸ್ಥಾಪಿಸುತ್ತಲೇ ಹೋದರು. ಅದರ ನಡುವೆ ಎಸ್.ಎಂ. ಕೃಷ್ಣರಿಗೆ ವೈಯಕ್ತಿಕ ಬದುಕಿನಲ್ಲಿ ವಯೋಸಹಜ ಅನಾರೋಗ್ಯ ಬಾಧಿಸತೊಡಗಿತು. ಮತ್ತೊಂದೆಡೆ ವಿದೇಶಾಂಗ ಮಂತ್ರಿಯಾಗಿ ಪೇಲವವಾಗಿ ಕಾಣತೊಡಗಿದರು. ವಿಶ್ವಸಂಸ್ಥೆ ಅಧಿವೇಶನ ಒಂದರಲ್ಲಿ ಬೇರೆಲ್ಲೋ ಓದಬೇಕಾಗಿದ್ದ ಭಾಷಣವನ್ನು, ತಪ್ಪು ತಪ್ಪು ಮಾಹಿತಿಗಳಿರುವ ವಿಚಾರವನ್ನು ಮಂಡಿಸಿ ಪೆಚ್ಚಾದರು. ಭಾರತದ ವಿದೇಶಾಂಗ ಇಲಾಖೆಯ ಒಟ್ಟಾರೆ ಜಡತ್ವವನ್ನು ಆ ಘಟನೆ ತೋರುವಂತಿತ್ತು.

ಆದರೆ ಕೃಷ್ಣ ಅದನ್ನು ಲೆಕ್ಕಿಸದೆ ಸೂಟು ಬೂಟು ಹಾಕಿಕೊಂಡೆ ಗಾಂಭೀರ್ಯ ನಟಿಸುತ್ತಾ ಓಡಾಡಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ನಾಯಕರ ಸಭೆ ಒಂದರಲ್ಲಿ ಭಾಗಿಯಾಗಿದ್ದ ಕೃಷ್ಣ ಸಭೆ ನಡೆಯುವಾಗಲೇ ಕುಳಿತ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡರೆಂತಲು, ಅದನ್ನು ಗಮನಿಸಿದ ಸೋನಿಯಾರವರ ಸೂಚನೆಯ ಮೇರೆಗೆ ಇತರರು ಕೃಷ್ಣರನ್ನು ಹೊರಗೆ ತಂದು ಬಟ್ಟೆ ಬದಲಿಸಿ ಮನೆಗೆ ಕಳುಹಿಸಿದರೆಂದು ಅಂದಿನ ಸಭೆಯಲ್ಲಿದ್ದ ಕಾಂಗ್ರೆಸ್ ನಾಯಕರೊಬ್ಬರು ನನ್ನ ಬಳಿ ಹೇಳಿದ್ದರು. ಬೇರಿನ್ಯಾವ ಕಾರಣಕ್ಕೆ ಅಲ್ಲದೆ ಹೋದರೂ ಸಹ ಕೃಷ್ಣರ ಆರೋಗ್ಯ ಕುಸಿಯತೊಡಗಿತ್ತು ಎಂಬುದಕ್ಕಾಗಿ ಇದನ್ನು ಇಲ್ಲಿ ಹೇಳಿದ್ದೇನೆ. ಈ ರೀತಿ ಹಲವು ಕಾರಣಗಳಿಂದಾಗಿ 2012ರಲ್ಲಿ ಕೃಷ್ಣರ ಸಚಿವಗಿರಿ ಕೊನೆಗೊಂಡಿತು. ವಾಸ್ತವ ಸ್ಥಿತಿಗತಿ ಒಪ್ಪಿಕೊಳ್ಳದ ಕೃಷ್ಣ ಮುನಿಸಿಕೊಂಡೆ ಹೊರಬಂದರು. ಕಾಂಗ್ರೆಸ್ ಪಕ್ಷವು ತನ್ನನ್ನು ಅವಮಾನಿಸಿತು ಎಂಬ ಅನಗತ್ಯ ಕಹಿ ಭಾವನೆಯನ್ನು ಬೆಳೆಸಿಕೊಂಡರು.

ಅದಾದ ನಂತರ 2019ರಲ್ಲಿ ಅಳಿಯ ಸಿದ್ದಾರ್ಥ ನದಿಯಲ್ಲಿ ತಾವಾಗಿಯೇ ಬಿದ್ದು ಸಾವು ತಂದುಕೊಂಡರು. ಅದು ಭಯಾನಕ ಆರ್ಥಿಕ ಬಿಕ್ಕಟ್ಟೇ ಇರಬೇಕು. ಅದರ ವಿವರಗಳು ಈಗಲೂ ಹೆಚ್ಚು ಜನರಿಗೆ ತಿಳಿದಿಲ್ಲ. ನಂತರ ಕೃಷ್ಣ ಬಿಜೆಪಿ ಸೇರಿಕೊಂಡರು. ಅದನ್ನು ಅವರಿಗೆ ಇನ್ನೂ ಇದ್ದ ರಾಜಕೀಯ ಆಕಾಂಕ್ಷೆ ಅಂದುಕೊಳ್ಳುವ ಅಗತ್ಯವಿಲ್ಲ. ಅದು ಆಪರೇಷನ್ ಕಮಲದ ಇನ್ನೊಂದು ರೂಪ ಇರಬಹುದು. ಕೃಷ್ಣರು ತಮ್ಮ ಕುಟುಂಬ ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟು ಅಥವಾ ಬಿಜೆಪಿಯವರ ಇನ್ಕಮ್ ಟ್ಯಾಕ್ಸ್ ನಿಯಮ, ಎನ್ ಫೋರ್ಸ್ಂಟ್ ಡೈರೆಕ್ಟರೇಟ್ ಕಾನೂನುಗಳ ತೊಡಕುಗಳನ್ನು ಬಗೆಹರಿಸಿಕೊಳ್ಳಲು ಬಿಜೆಪಿ ಸೇರಿದ್ದಿರಬಹುದು.

ಕೃಷ್ಣರ ಬದುಕಿನ ಕೊನೆಯ ವರ್ಷಗಳಲ್ಲೂ ಸಹ ಅವರ ಬ್ರಿಟಿಷ್ ಶೖಲಿಯ ಶ್ರೀಮಂತ ಜೀವನ, ಅನಗತ್ಯ ಗಾಂಭೀರ್ಯ, ಮುಂತಾದವು ಅಭಾದಿತವಾಗಿ ಮುಂದುವರೆದವು. ಕುಟುಂಬದಲ್ಲಿನ ಸಾವು ಇತ್ಯಾದಿಗಳು ಖಂಡಿತ ಅವರನ್ನು ನೋಯಿಸಿರುತ್ತವೆ.

ಒಂದೆರಡು ವರ್ಷದ ಹಿಂದೆ ನಾನವರನ್ನು ಭೇಟಿಯಾಗಲು ಸದಾಶಿವನಗರದ ಮನೆಗೆ ಹೋದೆ. ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾಯರನ್ನು ಕುರಿತು ಪುಸ್ತಕ ಬರೆಯುತ್ತಿದ್ದಾಗ ಅವರನ್ನು ಬಲ್ಲ ಕೃಷ್ಣರವರನ್ನು ಮಾತನಾಡಿಸುವ ಉದ್ದೇಶ ನನಗಿತ್ತು. ನಾನು ನಿಗದಿತ ಸಮಯಕ್ಕೆ ಸರಿಯಾಗಿ ಹೋದೆ. ಆಗ ತೊಂಬತ್ತು ಪ್ಲಸ್ ಆಗಿದ್ದ ಕೃಷ್ಣ ಸಹ ಸಮಯಕ್ಕೆ ಸರಿಯಾಗಿ ಸಂದರ್ಶಕರ ಕೊಠಡಿಗೆ ಬಂದರು. ಎಂದಿನಂತೆ ಅಚ್ಚುಕಟ್ಟಾದ ಉಡುಗೆ ತೊಡುಗೆ, ಸುಲಲಿತವಾಗಿ ಮಾತನಾಡುವ ಬದಲಾಗಿ, ಮಾತುಗಳನ್ನು ಮನಸ್ಸಿನಲ್ಲಿ ಮೊದಲೇ ಜೋಡಿಸಿಕೊಂಡು ನಂತರ ಉಚ್ಚರಿಸುವ ಜಡ ಶೈಲಿ. ಒಂದು ಸಣ್ಣ ಶಿಷ್ಟಾಚಾರವನ್ನು ಸಹ ಮರೆಯದಂತಹ ಉನ್ನತ ವರ್ಗದವರ ಅದೇ ಧೋರಣೆಗಳು ಉದ್ದಕ್ಕೂ ವ್ಯಕ್ತವಾದವು.

ಲಂಕೇಶರನ್ನು ಹಲವು ಬಾರಿ ನೆನೆಸಿಕೊಂಡರಾದರೂ ಪ್ರತಿಬಾರಿಯೂ ಮಿಸ್ಟರ್ ಪಿ. ಲಂಕೇಶ್ ಎಂದು ಇಲ್ಲವೆ ಪ್ರೊ. ಲಂಕೇಶ್ ಎಂದು ಉಚ್ಚರಿಸುತ್ತಿದ್ದರೆ ವಿನಹ ಬೇರೆಯ ಪದ ಬಳಸಲಿಲ್ಲ. ಕಲ್ಲೆಯವರ ಬಗ್ಗೆಯೂ ' ಮಿಸ್ಟರ್ ಶಿವೋತ್ತಮರಾವ್ ' ಎಂದೇ ಮಾತನಾಡಿದರು. ಯಾವುದನ್ನೂ ತನ್ನ ಭಾವಕೋಶದೊಳಗೆ ಬಿಟ್ಟುಕೊಳ್ಳದೆ, ಅಂತರದಲ್ಲಿರಿಸಿ ಯಂತ್ರದಂತೆ ನೋಡುವ ಪರಿಯದು. ನನಗೊ ಶಿಷ್ಟಾಚಾರ ಬಿಟ್ಟು ' ಆವ್ನು ಲಂಕೇಶು ಚೆನ್ನಾಗಿ ಬರೀತಿದ್ದ ' ಅಂಥನ್ನುವವರೇ ಇಷ್ಟ.

ಬರಡು ಮಾತು, ಒಣೋಪಚಾರ, ಔಪಚಾರಿಕ ಮಾತೆಲ್ಲವೂ ಬೋರು..

ನಾನವತ್ತು ಕೃಷ್ಣರ ಮನೆಯಲ್ಲಿ ಇದ್ದಾಗ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಸುಮಾರು 15ಕ್ಕೂ ಹೆಚ್ಚು ಪೊಲೀಸರು ಅಲ್ಲೆಲ್ಲ ಓಡಾಡಿಕೊಂಡು ಇರುವುದನ್ನು ನೋಡಿದೆ. ಮಾಜಿ ಮುಖ್ಯಮಂತ್ರಿ ಎಂಬ ಪ್ರೋಟೋಕಾಲ್ ಇದೆಯೆಂದರೂ ಸಹ ಆವರ ರಕ್ಷಣೆಗೆಂದು ಇಬ್ಬರೋ ಇಲ್ಲಾ ನಾಲ್ವರು ಪೊಲೀಸರಿದ್ದರೆ ಅದು ಸಹಜ. ಆದರೆ ಅಲ್ಲಿದ್ದವರು 15 ಮಂದಿ. ಅವರಲ್ಲಿ ಬಹುತೇಕರು ಗೃಹ ಕೃತ್ಯದ ಕೆಲಸಗಳನ್ನು ಮಾಡುತ್ತಿದ್ದರು. ಇಬ್ಬರು ಪೊಲೀಸರು ಅದೇ ತಾನೇ ಮಾರುಕಟ್ಟೆಗೆ ಹೋಗಿ ಕೃಷ್ಣರ ಮನೆಗೆ ಬೇಕಾಗಿದ್ದ ತರಕಾರಿ, ಸೊಪ್ಪು, ವಿವಿಧ ಬಗೆಯ ಹಣ್ಣು ಮುಂತಾದವುಗಳನ್ನು ತಂದಿರಿಸಿ ಜೋಡಿಸುತ್ತಿದ್ದರು. ಇನ್ನೂ ಕೆಲವರು ವಾಹನಗಳನ್ನ ಅತ್ತಿಂದಿತ್ತ ನಿಲ್ಲಿಸುವುದು, ಲಾನ್- ಗಿಡಮರ ಉಪಚರಿಸುವುದು ಹೀಗೆ ಏನೇನೋ ಮನೆ ಕೆಲಸದಲ್ಲಿದ್ದರು. ದೇಶ ಸೇವೆ ಮಾಡುವಷ್ಟೇ ಶ್ರದ್ಧೆ ಭಕ್ತಿಗಳಿಂದ ಕೃಷ್ಣರ ಮನೆ ಕೆಲಸ ಮಾಡುತ್ತಿದ್ದರು. ನಾನು ಆ ದೃಶ್ಯಗಳನ್ನು ನೋಡುತ್ತಿದ್ದಾಗ, ಕೃಷ್ಣರವರು ಕರ್ನಾಟಕದ ಉಪಮುಖ್ಯಮಂತ್ರಿಗಳ ಬೀಗರೂ ಸಹ ಆಗಿರುವುದರಿಂದಾಗಿ ಅವರಿಗೆ ಈ ಉಚಿತ ರಾಜಸೇವೆ ಸಿಗುತ್ತಿರಬಹುದು ಎಂದು ಅಂದಾಜಾಯಿತು.

ಆಳಲೆಂದೇ ಹುಟ್ಟಿರುವವರಿಗೆ ಒಂದು ವೇಳೆ ರಾಜ್ಯ ಸಿಗದಿದ್ದರೂ ಪರವಾಗಿಲ್ಲ ಆದೇಶಗಳನ್ನು ಪಾಲಿಸುವ, ಸದಾ ಕೖಕಟ್ಟಿ ನಿಲ್ಲುವ ಒಂದಷ್ಟು ರಾಜಸೇವಕರು ಸಿಕ್ಕರೂ ಸಾಕಲ್ಲವೆ ?

ಇರಲಿ,

ಅಂದು ಕೃಷ್ಣರು ಒಂದೊಳ್ಳೆ ಟೀ ಕೊಡಿಸಿದರು. ನಮ್ಮ ಮಾತು ಸ್ವಲ್ಪ ಹೆಚ್ಛು ಸಮಯ ತೆಗೆದುಕೊಂಡಿರಬೇಕು, ಮನೆಯ ಒಳಗಿನಿಂದ ಸೂಚನೆ ಬಂತು, ಕೃಷ್ಣರ ಆರೋಗ್ಯದ ಬಗೆಗಿನ ಕಳಕಳಿಯದು, ನಾನು ಬರುವೆನೆಂದು ಹೇಳಿ ಹೊರಟು ಕಾರ್ ತಲುಪುವಷ್ಟರಲ್ಲಿ ನನಗೂ ಒಂದಿಬ್ಬರು ಅಪರಿಚಿತ ಪೋಲೀಸರು ನಮಸ್ಕರಿಸಿದ್ದರು

....ಅರೇ ಪರವಾಗಿಲ್ಲವೆನಿಸಿತು.

ಪವರ್ ಸೆಂಟರ್ ಗಳ ಆಜುಬಾಜು ಓಡಾಡಿಕೊಂಡಿದ್ದರೆ ಲಾಭವಿದೆ !

ಕೃಷ್ಣರ ಕುಟುಂಬವು ಕಳೆದ ಒಂದು ನೂರಾ ಇಪ್ಪತ್ತೖದು ವರ್ಷಗಳಿಂದ ಕನ್ನಡ ನಾಡಿನಲ್ಲಿ ರಾಜಕೀಯ ಅಧಿಕಾರ ಅನುಭವಿಸುತ್ತಾ ಬಂದಿದೆ.

ತಾತ ಚಿಕ್ಕೇಗೌಡರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ತಂದೆ ಮಲ್ಲಯ್ಯನವರ ಕೊಡುಗೆ ಇತ್ಯಾದಿ ಹೇಳಿರುವೆ. ಕೃಷ್ಣರ ಇತಿಮಿತಿ, ಅತಿಗತಿಗಳ ಕುರಿತೂ ನೋಡಿದ್ದೇವೆ.

ಬೆಂಗಳೂರನ್ನು ಸಿಂಗಪೂರ್ ಮಾಡಲು ಹೆಚ್ಛು ಅಸಕ್ತರಾಗಿದ್ದರು, ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸಿ ಕಾರ್ಪೋರೇಟ್ ಮುಖ್ಯಸ್ಥರ ' ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ' ರಚಿಸಿ ನಗರದ ಆಡಳಿತದ ಖಾಸಗೀಕರಣಕ್ಕೆ ಮುಂದಾಗಿದ್ದರು. 1970 ರ ಕಾಲದಲ್ಲೇ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ನಿರ್ಮಾಣದ ಕಲ್ಪನೆಯ ಹಿಂದೆ ಕೃಷ್ಣರ ಕೊಡುಗೆಯೂ ಇದ್ದಿರಬಹುದು, ಏಕೆಂದರೆ ಆಗ ಆವರೇ ಕೖಗಾರಿಕಾ ಇಲಾಖೆಯ ರಾಜ್ಯ ಸಚಿವರು.

ಬೆಂಗಳೂರು ಈಗ ವಿಶ್ವ ಸಾಫ್ಟ್ ವೇರ್ ಕ್ಷೇತ್ರದ ಪ್ರಮುಖ ನಗರವಾಗಿದೆ. ಇಂಡಿಯಾದ ಒಟ್ಟು ಕಂಪ್ಯೂಟರ್ ಪರಿಣಿತರಲ್ಲಿ ಕರ್ನಾಟಕದವರ ಪ್ರಮಾಣವು ಶೇ 10 ರಷ್ಟಿದೆಯಂತೆ. ಇದು ಕಡಿಮೆ ಎನ್ನುವವರೂ ಇದ್ದಾರೆ, ಆದರೆ ಈಗಿರುವಷ್ಟಕ್ಕೆ ಕೃಷ್ಣರೂ ಕಾರಣ ಎನ್ನಲಡ್ಡಿಯಿಲ್ಲ, ಅದೇ ವೇಳೆ ಬೆಂಗಳೂರಿನ ಜೀವನ ವೆಚ್ಚ ಹೆಚ್ಚಿದ್ದು ಮಧ್ಯಮ ವರ್ಗದ ಬದುಕು ನಡೆಸಲೂ ತಿಂಗಳಿಗೆ ಐವತ್ತು ಸಾವಿರ ರೂಪಾಯಿ ಬೇಕಾಗುವ ದುಃಸ್ಥಿತಿ ತಲುಪುವಲ್ಲಿಯೂ ಅವರ ಪಾತ್ರವಿದೆ.

ಗಮನಿಸಬೇಕಾದ ಒಂದು ಸಂಗತಿ ಏನೆಂದರೆ ಯಾರೇ ವ್ಯಕ್ತಿ ಮುಂಚೂಣಿಗೆ ಬರುವಾಗ,ಇಲ್ಲವೆ ಸಮುದಾಯವೊಂದು ಪ್ರವರ್ಧಮಾನಕ್ಕೆ ಏರುವಾಗ ಅದೇ ಸಮಾಜದ ಉಳಿದ ಹಲವು ಉತ್ತಮಾಂಶಗಳು ಕಳಚಿ ಬೀಳುವಂತಾಗುವುದು.

ಮಲ್ಲಯ್ಯನವರು ಇದ್ದಾಗಲೇ ಚೇತೋಹಾರಿ ವ್ಯಕ್ತಿತ್ವ ಹೊಂದಿದ್ದ ಕಟ್ಟೆಮಂಚಿ ರಾಮಲಿಂಗಾ ರೆಡ್ಡಿ, ಸಂತೇ ಬಾಚಳ್ಳಿ ನಂಜಪ್ಪ, ಭಾಷ್ಯಂ, ಜಗಳೂರು ಇಮಾಂ ಸಾಬ್ ಮುಂತಾದವರು ಮೂಡಿಸಿದ್ದ ಛಾಪು ಕ್ರಮೇಣ ಮಂಕಾಯಿತು. ಬಹುತೇಕರಿಗೆ ಇವರುಗಳ ಬದುಕಿನ, ಕೊಡುಗೆಯ ಕುರಿತು ಕುತೂಹಲವೂ ಇಲ್ಲವೆನಿಸುತ್ತದೆ.

ಅದೇ ರೀತಿಯಾಗಿ ಕೃಷ್ಣರು ರಾಜಕೀಯ ಪ್ರವರ್ಧಮಾನಕ್ಕೆ ಬರುವಾಗ ಆಗಿನ ವೖಬ್ರೆಂಟ್ ನಾಯಕ ಹೆಚ್. ಕೆ ವೀರಣ್ಣ ಗೌಡರಂತವರನ್ನೂ ಸೋಲಿಸಿ, ಬುಲ್ಡೋಜ್ ಮಾಡಿಕೊಂಡು ಬಂದರು. ನಂತರ ಕೆ. ಹೆಚ್ ರಂಗನಾಥ್ ಮುಂತಾದವರನ್ನು ಸಿಎಂ ಸ್ಥಾನದ ರೇಸ್ ನಿಂದ ಮೂಲೆಗೆ ತಳ್ಳುವ ಸರದಿಯಾಯಿತು. ' ಚಿತ್ರಗುಪ್ತ ' ಎಂಬ ಪತ್ರಿಕೆಯ ಸಂಪಾದಕರು ಹಾಗೂ ಉತ್ತಮ ಆಡಳಿತಗಾರರೂ ಆಗಿದ್ದು ಈ ವೀರಣ್ಣಗೌಡರ ವ್ಯಕ್ತಿತ್ವ ಎಂಥದೆಂದು ತಿಳಿಯಲು ಒಂದು ಘಟನೆ ಇದೆ.

ವಿಧಾನಸೌಧದ ಕಟ್ಟೋಣ ಮುಗಿದ ನಂತರ ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ಮುಖ್ಯ ದ್ವಾರದ ಮೇಲುಭಾಗದಲ್ಲಿ ' ಸರ್ಕಾರಿ ಕೆಲಸ ದೇವರ ಕೆಲಸ ' ವೆಂದು ಬರೆಸಿದ್ದರಂತೆ. ನಂತರ ಲೋಕೋಪಯೋಗಿ ಸಚಿವರಾದ ವಿಚಾರವಾದಿ ವೀರಣ್ಣಗೌಡರು ಆದನ್ನು ಒಪ್ಪದೆ ತೆಗೆಸಿ ಹಾಕಿದರು. ಇದರಿಂದ ಆಗಿದ್ದ ಸಿಎಂ ಸಿಟ್ಟಾಗಿ ಜಟಾಪಟಿಯೂ ಆಯಿತೆನ್ನಲಾಗಿದೆ.

ಡೆಮಾಕ್ರಸಿಯಲ್ಲಿ ಸರ್ಕಾರವು ಜನರ ಕೆಲಸ ಮಾಡಬೇಕು, ದೇವರ ಕೆಲಸವನ್ನಲ್ಲ ಎಂಬುದು ವೀರಣ್ಣಗೌಡರ ಖಚಿತ ನಿಲುವಾಗಿತ್ತು. ಹ. ಕ ರಾಜೇಗೌಡರು ಸಂಪಾದಿಸಿರುವ ಕನ್ನಡ ಪತ್ರಿಕೋದ್ಯಮದ ಇತಿಹಾಸ ದಾಖಲಿಸಿರುವ ಅಪರೂಪದ ' ಚಿತ್ರಗುಪ್ತ ಸ್ಮರಣೆ ' ಸಂಪುಟದಲ್ಲಿ ಇದರ ಕೆಲವು ವಿವರಗಳಿವೆ.

ಎಸ್. ಎಂ. ಕೃಷ್ಣರು ತಮ್ಮ ಮೊದಲ ಎಲೆಕ್ಷನ್ ನಲ್ಲಿ ಇಂತಹ ವೀರಣ್ಣಗೌಡರನ್ನು ಸೋಲಿಸಿದರು.ಆದೇ ಕೃಷ್ಣರು ಮುಂದೆ ವಿಕಾಸಸೌಧ ಕಟ್ಟಿಸಿದರು.

ಆದರೆ ಅದರ ಮುಖ್ಯದ್ವಾರದಲ್ಲಿ ' ಸರ್ಕಾರಿ ಕೆಲಸ - ರಾಜಸೇವಾ ಕೆಲಸ ' ಎಂದು ಬರೆಸಲು ಮರೆತರೆನ್ನಿಸುತ್ತದೆ, ನಂತರ ಕುಮಾರಸ್ವಾಮಿರವರು ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿಸುವಾಗ ಅದರ ಮೇಲೆ ' ಸರ್ಕಾರಿ ಕೆಲಸ - ಕುಟುಂಬದ್ದೇ ಕೆಲಸ ' ಎಂದು ಬರೆಸುವುದನ್ನು ಮರೆತ ಹಾಗೆ..!

ನಿರ್ಗಮಿಸಿರುವ ಕೃಷ್ಣರು ಗಂಭೀರರು, ಆಡಳಿತಗಾರರ ವಂಶಸ್ಥರು, ವಿಕಾಸಸೌಧದ ನಿರ್ಮಾತೃರು ಎಂಬುದೆಲ್ಲಾ ನಿಜ. ಎತ್ತರಕ್ಕೆ ಕಾಣುವಂತೆ ವಿಕಾಸಸೌಧವೂ ದೊಡ್ಡದಾಗಿದೆ ನಿಜ. ಆದರೆ ಆದಕ್ಕೆ ಜೀವವಿಲ್ಲ, ಮಿಡಿತವಿಲ್ಲ, ಜನಸಾಮಾನ್ಯರಿಗೆ ಪ್ರವೇಶ ಸುಲಭಸಾದ್ಯವೂ ಅಲ್ಲ.

ಇಷ್ಟಾದರೂ ಅದಲ್ಲಿರುವುದು ಸುಳ್ಳೂ ಅಲ್ಲ. ವಿದಾಯ ಮಿ. ಸೋಮನಹಳ್ಳಿ ಮಲ್ಲಯ್ಯ ಕೃಷ್ಣ.

 

ಎಸ್.ಎಂ. ಕೃಷ್ಣ ಕುಟುಂಬ

 

ಒಂದು ನೂರು ವರ್ಷಗಳ ಬ್ರಿಟಿಷ್ ಅಧಿಕಾರದ ಛಾಪು , ಮದ್ದೂರು ಸಮೀಪದ ಸೋಮನಹಳ್ಳಿಯ ಶ್ರೀಮಂತ ಪಟೇಲ್ ಕುಟುಂಬದ ಹಿನ್ನೆಲೆ.

 ಚಿಕ್ಕೇಗೌಡರು ( ಜನನ ತಿಳಿಯದು ಮರಣ 1921 )

ಕೃಷ್ಣರ ತಂದೆಯ ತಂದೆ ಸೋಮನಹಳ್ಳಿ ಚಿಕ್ಕೇಗೌಡರು 1881 ರಲ್ಲಿ ಅಂದಿನ ಮೈಸೂರು ರಾಜಸಂಸ್ಥಾನದಲ್ಲಿ ಸ್ಥಾಪನೆಯಾಗಿದ್ದ ಈಗಿನ ಶಾಸಕರ ಸ್ಥಾನಮಾನ ಹೊಂದಿದ್ದ  ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದವರು. ಚಿಕ್ಕೇಗೌಡರು 1921 ರಲ್ಲಿ ಮರಣಿಸುತ್ತಾರೆ.  ಇವರ ಬದುಕು ಹಾಗೂ ಸಾರ್ವಜನಿಕ ಜೀವನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ.

...........

2) ಸೋಮನಹಳ್ಳಿ ಮಲ್ಲಯ್ಯ( ಕೃಷ್ಣರ ತಂದೆ )

1896 - 1952

ಮೈಸೂರು ರಾಜ್ಯದ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರು

3) ಎಸ್. ಎಂ. ಕೃಷ್ಣ 1932 -2024

ಶಾಸಕ,ಸಂಸದ, ಮುಖ್ಯಮಂತ್ರಿ, ವಿದೇಶಾಂಗ ಸಚಿವ, ರಾಜ್ಯಪಾಲ, ಸ್ಪೀಕರ್‌,

****