ಬಹುಜನ ನಾಯಕ ಕಾನ್ಸಿರಾಮ್

ಕಾನ್ಸಿರಾಮ್ ಬದುಕಿದ್ದರೆ ಅವರಿಗೆ 91 ತುಂಬುತ್ತಿತ್ತು. ಒಬ್ಬ ರಾಜಕೀಯ ವಿದ್ಯಾರ್ಥಿಯಾಗಿ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ನಾನು ಬೆನ್ನಟ್ಟುತ್ತಾ ಬಂದ ರಾಜಕಾರಣಿ ಕಾನ್ಸಿರಾಮ್. ಅವರು ಆರೋಗ್ಯವಂತರಾಗಿ ಇನ್ನೊಂದು 10-15 ವರ್ಷ ಬದುಕಿದ್ದರೆ ದೇಶದ ರಾಜಕೀಯ ಬೇರೆ ದಿಕ್ಕಿನತ್ತ ಹೋಗುತ್ತಿತ್ತು, ಬಹುಷ: ನರೇಂದ್ರಮೋದಿಯವರು ಒಂದೋ ಪ್ರಧಾನಮಂತ್ರಿಯೇ ಆಗುತ್ತಿರಲಿಲ್ಲ, ಇಲ್ಲವೇ ಸ್ವಂತ ಬಲದಿಂದ ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ - ದಿನೇಶ್ ಅಮೀನ್ ಮಟ್ಟು 

ಬಹುಜನ ನಾಯಕ ಕಾನ್ಸಿರಾಮ್

 

ದಿನೇಶ್‌ ಅಮಿನ್‌ ಮಟ್ಟು




      ಕಳೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಒಬ್ಬ ರಾಜಕಾರಣಿಯ ಗೈರುಹಾಜರಿ ಎದ್ದು ಕಂಡಿತ್ತು. ಚುನಾವಣಾ ಫಲಿತಾಂಶ ಹೊರಬಿದ್ದಾಗ ಈ ಗೈರು ಹಾಜರಿಯ ಪರಿಣಾಮವು ಎಲ್ಲರಿಗೂ ಮನವರಿಕೆ ಆಗಿತ್ತು. ಆ ನಾಯಕ- ಬಹುಜನ ಚಳುವಳಿಯ ನೇತಾರ ಕಾನ್ಸಿರಾಮ್. 


   ಈ ಚುನಾವಣೆಯ ಸಮಯಕ್ಕೂ ಕಾನ್ಸಿರಾಮ್ ಬದುಕಿದ್ದರೆ ಅವರಿಗೆ 88 ವರ್ಷವಾಗುತ್ತಿತ್ತು, ಭಾರತದ ರಾಜಕೀಯದಲ್ಲಿ 88 ನಿವೃತ್ತಿಯ ವಯಸ್ಸಲ್ಲ. ನಮ್ಮ ಎಚ್.ಡಿ.ದೇವೇಗೌಡರಿಗೂ 88 ವರ್ಷ. ಕಾನ್ಸಿರಾಮ್ ಬದುಕಿ ರಾಜಕೀಯವಾಗಿ ಸಕ್ರಿಯರಾಗಿ ಇರುತ್ತಿದ್ದರೆ ಕಳೆದ ವರ್ಷ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಖಂಡಿತ ಬೇರೆ ರೀತಿ ಇರುತ್ತಿತ್ತು. ಇನ್ನೂ ಸ್ವಲ್ಪ ಧೈರ್ಯ ಮಾಡಿಕೊಂಡು ಹೇಳುವುದಾದರೆ ದೇಶದ ರಾಜಕೀಯ ಚಿತ್ರ ಕೂಡಾ ಈಗಿನಂತೆ ಇರುತ್ತಿರಲಿಲ್ಲ. 


    ಬಹಳ ಮುಖ್ಯವಾಗಿ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ -ಬಿಎಸ್ ಪಿ ಧೂಳೀಪಟವಾಗುತ್ತಿರಲಿಲ್ಲ. ಬಿಎಸ್ ಪಿ ಸ್ಥಾಪನೆಯಾದ 1984ರಿಂದ ಕಾನ್ಸಿರಾಮ್ ನಿಧನವಾದ 2006 ವರೆಗಿನ ಮತ್ತು ಆ ನಂತರದ ವರ್ಷಗಳ ಉತ್ತರಪ್ರದೇಶದ ರಾಜಕೀಯವನ್ನು ಸೂಕ್ಷವಾಗಿ ಗಮನಿಸುತ್ತಾ ಬಂದವರು ಈ ಅಭಿಪ್ರಾಯವನ್ನು ಒಪ್ಪದೆ ಇರಲು ಸಾಧ್ಯವಿಲ್ಲ. ಇದು ಕಾನ್ಸಿರಾಮ್ ನಿರ್ಗಮನದಿಂದ ಸೃಷ್ಟಿಯಾಗಿರುವ ನಿರ್ವಾತದ ದುರಂತ ಕತೆಯನ್ನು ಹೇಳುತ್ತದೆ.


    ಉತ್ತರಪ್ರದೇಶದ ರಾಜಕೀಯವನ್ನು ಪಕ್ಕಕ್ಕಿಟ್ಟು ಭಾರತದ ರಾಜಕೀಯವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಸಂಖ್ಯೆಯ ಶಾಸಕರು ಮತ್ತು ಸಂಸದರನ್ನು ಹೊಂದಿರುವ ಉತ್ತರಪ್ರದೇಶದ ರಾಜಕೀಯ ಪ್ರಮಾಣದಲ್ಲಿ ಮಾತ್ರವಲ್ಲ ಪರಿಣಾಮದಲ್ಲಿಯೂ ನಿರ್ಣಾಯಕ. 


    ಉತ್ತರಪ್ರದೇಶದಲ್ಲಿ ಗೆದ್ದವರಿಗೆ ದೇಶ ಗೆಲ್ಲುವುದು ಎಷ್ಟು ಸುಲಭವೋ, ಆ ರಾಜ್ಯದಲ್ಲಿ ಸೋತವರಿಗೆ ದೇಶ ಗೆಲ್ಲುವುದು ಅಷ್ಟೇ ಕಷ್ಟ ಎನ್ನುವುದು ದೇಶದ ರಾಜಕೀಯದಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಈ ರಾಜಕೀಯದ ಗುಟ್ಟನ್ನು ಮೊದಲು ಅರ್ಥಮಾಡಿಕೊಂಡವರು ಬಿಎಸ್ ಪಿ ನಾಯಕ ಕಾನ್ಸಿರಾಮ್.


    ದೇಶದಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಸಮುದಾಯವನ್ನು ಹೊಂದಿರುವ ರಾಜ್ಯ ಪಂಜಾಬ್. ಆ ರಾಜ್ಯದಲ್ಲಿ ಹುಟ್ಟಿದ್ದ ಕಾನ್ಸಿರಾಮ್ ತನ್ನ ರಾಜಕೀಯ ಪ್ರಯೋಗಕ್ಕೆ ಮೇಲ್ಜಾತಿ ಜನರ ರಾಜಕೀಯ ಆಡುಂಬೋಲವಾಗಿದ್ದ ಉತ್ತರಪ್ರದೇಶ ರಾಜ್ಯವನ್ನು ಆಯ್ಕೆ ಮಾಡಿಕೊಂಡಾಗ ಹುಬ್ಬೇರಿಸಿದವರೇ ಹೆಚ್ಚು. ಕಾನ್ಸಿರಾಮ್ ಇಲ್ಲದ ಬಿಎಸ್ ಪಿ ಇಂದು ಅದೇ ರಾಜ್ಯದ ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನವನ್ನು ಪಡೆದು ನೆಲಕಚ್ಚಿದೆ ಎನ್ನುವುದು ನಿಜ. ಕಾನ್ಸಿರಾಮ್ ಕಟ್ಟಿ ಬೆಳೆಸಿದ್ದ ಬಿಎಸ್ ಪಿ ಕಳೆದ ನಾಲ್ಕು ದಶಕಗಳಲ್ಲಿ ಆ ರಾಜ್ಯದಲ್ಲಿ ಉಂಟು ರಾಜಕೀಯ ಪಲ್ಲಟಗಳು ಕೂಡಾ ಅಷ್ಟೇ ನಿಜ.


    “ ನಾವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ, ಆದರೆ ಸಾಮಾಜಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಾಬಾಸಾಹೇಬ್ ಅಂಬೇಡ್ಕರ್ ಗುಡುಗಿದ್ದರು. ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಈ ಕಟುಮಾತುಗಳನ್ನು ಆಡಿದ್ದರು.


   ಸಾಮಾಜಿಕವಾದ ಅಸಮಾನತೆಯನ್ನು ಹೋಗಲಾಡಿಸದೆ ದಲಿತ ಸಮುದಾಯ ರಾಜಕೀಯ ಸಮಾನತೆಯನ್ನು ಪಡೆಯಲಾಗದು ಎಂಬ ಎಚ್ಚರಿಕೆ ಅಂಬೇಡ್ಕರ್ ಮಾತುಗಳಲ್ಲಿತ್ತು. ಉತ್ತರಪ್ರದೇಶದ ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ಈಗಲೂ ಬಹಳ ಬದಲಾವಣೆಯಾಗಿಲ್ಲ. ಹೀಗಿದ್ದರೂ ಆ ರಾಜ್ಯವನ್ನು ಒಬ್ಬ ದಲಿತ ಮಹಿಳೆ ನಾಲ್ಕು ಬಾರಿ ಸುಮಾರು ಏಳು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಈ ಸಾಧನೆಯ ರೂವಾರಿ ಸಂಪೂರ್ಣವಾಗಿ ಕಾನ್ಸಿರಾಮ್ ಎಂಬ ಚಾಣಕ್ಯ.


     ಅಂಬೇಡ್ಕರ್ ಚಿಂತನೆಯಿಂದಲೇ ಪ್ರೇರಿತರಾಗಿ ಅದನ್ನೇ ತನ್ನ ಹೋರಾಟದ ಹಾದಿಯ ಕೈಮರವನ್ನಾಗಿ ಮಾಡಿಕೊಂಡಿದ್ದವರು ಕಾನ್ಸಿರಾಮ್. ಇಬ್ಬರೂ ನಾಯಕರ ಗುರಿ ಒಂದೇ ಆಗಿದ್ದರೂ ಗುರಿ ಸೇರಲು ಕಾನ್ಸಿರಾಮ್ ಹಿಡಿದ ದಾರಿ ಬೇರೆಯಾಗಿತ್ತು. ವಿದ್ಯೆಯಲ್ಲಿಯಾಗಲಿ, ವಿದ್ವತ್ ನಲ್ಲಿಯಾಗಲಿ ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕಾರಣಿಯಾಗಿ, ರಾಜನೀತಿಯ ತಂತ್ರನಿರೂಪಕರಾಗಿ ಕಾನ್ಸಿರಾಮ್, ಅಂಬೇಡ್ಕರ್ ಅವರಿಗಿಂತ ಯಶಸ್ವಿ ನಾಯಕ. “ ಬಾಬಾಸಾಹೇಬ್ ಅಂಬೇಡ್ಕರ್ ಪುಸ್ತಕಗಳನ್ನು ಒಟ್ಟು ಮಾಡಿದ್ದಾರೆ, ನಾನು ಜನರನ್ನು ಒಟ್ಟು ಮಾಡಿದ್ದೇನೆ” ಎಂದು ತಮ್ಮಿಬ್ಬರ ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಕಾನ್ಸಿರಾಮ್ ಉತ್ತರಿಸಿದ್ದರು. 


     ಸೂಟುಬೂಟುಧಾರಿ ಬಾಬಾಸಾಹೇಬ್ ಅಂಬೇಡ್ಕರ್ ಎದುರು ಸದಾ ಅರ್ಧತೋಳಿನ ಅಂಗಿ, ಪ್ಯಾಂಟ್ ಮತ್ತು ಕಾಲಿಗೆ ಚಪ್ಪಲಿ ಹಾಕಿಕೊಂಡಿರುತ್ತಿದ್ದ ಕಾನ್ಸಿರಾಮ್ ಅವರನ್ನು ನಿಲ್ಲಿಸಿದರೂ ಆಸಕ್ತಿಗಳಲ್ಲಿನ ಭಿನ್ನತೆ ಎದ್ದು ಕಾಣುತ್ತದೆ. ಕಾನ್ಸಿರಾಮ್ ಸರಳತೆಯಲ್ಲಿ ಮಹಾತ್ಮಗಾಂಧೀಜಿಗೆ ಹತ್ತಿರವಾಗಿದ್ದರು. ಗಾಂಧೀಜಿಯಂತೆಯೇ ಕಿಂಗ್ ಆಗದೆ ಕಿಂಗ್ ಮೇಕರ್ ಆಗಿಯೇ ಉಳಿದಿದ್ದರು.


    ಕಾನ್ಸಿರಾಮ್ ಹುಟ್ಟಿದ್ದು ಪಂಜಾಬ್ ನಲ್ಲಿ, ರಾಜಕೀಯ ದೀಕ್ಷೆ ಪಡೆದಿದ್ದು ಪುಣೆಯಲ್ಲಿ, ರಾಜಕೀಯದ ಕರ್ಮಭೂಮಿಯಾಗಿ ಆರಿಸಿಕೊಂಡದ್ದು ಉತ್ತರಪ್ರದೇಶ ರಾಜ್ಯವನ್ನು. ಶೇಕಡಾ ಮೂವತ್ತರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆ ಇರುವ ಪಂಜಾಬ್ ನಲ್ಲಿ ರವಿದಾಸಿಯಾ ದಲಿತ ಕುಟುಂಬದಲ್ಲಿ ಹುಟ್ಟಿದ್ದ ಕಾನ್ಸಿರಾಮ್ ಆ ರಾಜ್ಯದಲ್ಲಿ ಯಾಕೆ ರಾಜಕೀಯಕ್ಕೆ ಇಳಿಯಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕರ್ಮಭೂಮಿಯಾಗಿದ್ದ ಮಹಾರಾಷ್ಟ್ರದಲ್ಲಿ ರಾಜಕೀಯ ದೀಕ್ಷೆ ಪಡೆದರೂ ಅಲ್ಲಿ ಯಾಕೆ ರಾಜಕೀಯ ಪಕ್ಷ ಕಟ್ಟಲಿಲ್ಲ ಎಂಬ ಪ್ರಶ್ನೆಗೆ ಅವರ ರಾಜಕೀಯ ಬದುಕಿನ ಘಟನಾವಳಿಗಳಲ್ಲಿಯೇ ಉತ್ತರ ಇದೆ.


    ಕಾನ್ಸಿರಾಮ್ ಅವರು ಓದಿದ್ದು ವಿಜ್ಞಾನವಾದರೂ ಅನುಭವದ ಮೂಲಕವೇ ಕರಗತಮಾಡಿಕೊಂಡಿದ್ದು ಸಮಾಜ ವಿಜ್ಞಾನವನ್ನು. ದೇಶದ ಜಾತಿಗಳ ಗುಣ-ಸ್ವಭಾವಗಳನ್ನು ಅವರಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಂಡ ರಾಜಕೀಯ ನಾಯಕರು ಕಡಿಮೆ. ಜಾತಿ ವಿನಾಶವೇ ಅಂಬೇಡ್ಕರ್ ಹೋರಾಟದ ಮೂಲ ಉದ್ದೇಶವಾಗಿದ್ದರೆ ಕಾನ್ಸಿರಾಮ್ ‘ಜಾತಿ ರಹಿತ ಸಮಾಜ ನಿರ್ಮಾಣವಾಗುವವರೆಗೆ ಜಾತಿಯನ್ನು ಅಸ್ತ್ರವಾಗಿ ಬಳಸಿದರೆ ತಪ್ಪಿಲ್ಲ’’ ಎಂದು ವಾದಿಸುತ್ತಿದ್ದರು. 


    ಪಂಜಾಬ್ ನಲ್ಲಿ ಪರಿಶಿಷ್ಟ ಜಾತಿಯವರು ಶೇಕಡಾ ಮೂವತ್ತರಷ್ಟಿದ್ದರೂ ಕಾನ್ಸಿರಾಮ್ ಅವರ ಚಮ್ಮಾರ ಜಾತಿ ಜನಸಂಖ್ಯೆ ಕಡಿಮೆ. ಉತ್ತರಪ್ರದೇಶದಲ್ಲಿ ಶೇಕಡಾ 21ರಷ್ಟು ಮಾತ್ರ ಪರಿಶಿಷ್ಟ ಜಾತಿಯವರಿದ್ದರೂ ಚಮ್ಮಾರ ಜಾತಿ ಜನ ಶೇಕಡಾ ಹನ್ನೊಂದರಷ್ಟಿದ್ದರು. ತನ್ನ ರಾಜಕೀಯ ಪ್ರಯೋಗಕ್ಕೆ ಉತ್ತರಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳಲು ಅವರೊಳಗಿನ ಈ ಜಾತಿ ಗಣಿತವೂ ಕಾರಣ.


   ಪದವೀಧರರಾದ ನಂತರ ಪುಣೆಯ ಸರ್ಕಾರಿ ಸ್ಪೋಟಕ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಗಲೇ ಕಾನ್ಸಿರಾಮ್ ರಿಪಬ್ಲಿಕನ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಆದರೆ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣ ಬಹುದೂರ ಸಾಗಲಾರದು ಎಂದು ಅವರಿಗೆ ಅನಿಸಿತ್ತು. ಆಗಲೇ ಅವರೊಳಗೆ ಮೂಡಿದ್ದ ‘ಬಹುಜನರ’ ಚಿತ್ರ ಸ್ಪಷ್ಟವಾಗಿತ್ತು. ಅವರು ಪ್ರಾರಂಭದಲ್ಲಿ ಕಟ್ಟಿದ ‘ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ (ಃಂಒSIಇಈ), ಅದರ ನಂತರ ಸ್ಥಾಪಿಸಿದ್ದ ದಲಿತ್ ಶೋಷಿತ್ ಸಮಾಜ ಸಂಘರ್ಷ ಸಮಿತಿ (ಡಿಎಸ್4) ಮತ್ತು ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷ ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.


     ಬಿಎಸ್ ಪಿಯ ಬ್ಯಾನರ್, ಪೋಸ್ಟರ್, ಇಲ್ಲವೇ ಲೆಟರ್ ಹೆಡ್ ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೊತೆಯಲ್ಲಿ ಜ್ಯೋತಿಬಾ ಪುಲೆ, ಸಾಹುಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಕಡ್ಡಾಯಗೊಳಿಸಿದ್ದರು.


      1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಚೊಚ್ಚಲ ಬಜೆಟ್ ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಿಗೂ ನೀಡಬೇಕೆಂಬ ಉತ್ತರಪ್ರದೇಶದ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿಯವರು ಜಾರಿಗೊಳಿಸಿದ್ದರು. ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿರುವ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಯವರಿದ್ದರು. ಉಳಿದ ಶೇಕಡಾ 34ರಷ್ಟ ಹಿಂದುಳಿದ ಜಾತಿಗಳು ಮತ್ತು ಶೇಕಡಾ 18ರಷ್ಟು ಮುಸ್ಲಿಮರಿದ್ದರು. ಆಂತರಿಕ ಪ್ರಜಾಪ್ರಭುತ್ವವೇ ಇಲ್ಲವೆನ್ನುವಷ್ಟು ಏಕಚಕ್ರಾಧಿಪತ್ಯವಿದ್ದರೂ ಪಕ್ಷದ ಪದಾಧಿಕಾರಿಗಳನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿತ್ತು. 


     ಈ ಎಲ್ಲ ನೀತಿ ಮತ್ತು ಕಾರ್ಯಕ್ರಮಗಳ ರೂವಾರಿ ಕಾನ್ಸಿರಾಮ್ ಆಗಿದ್ದರು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ‘ ಜಿನ್ ಕಿ ಜಿತಿನಿ ಸಂಖ್ಯಾ ಬಾರಿ, ವುನ್ ಕಿ ವುತ್ ನಿ ಹಿಸ್ಸೇದಾರಿ ( ಯಾರ ಸಂಖ್ಯೆ ಎಷ್ಟಿದೆಯೋ ಅಷ್ಟು ಅವರ ಪಾಲು) ಎನ್ನುವುದು ಅವರ ಘೋಷಣೆಯಾಗಿತ್ತು. ನುಡಿದಂತೆಯೇ ನಡೆದಿದ್ದರೂ ಕೂಡಾ. ಉತ್ತರಪ್ರದೇಶದ ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಯಾದವೇತರ ಹಿಂದುಳಿದ ಜಾತಿಗಳ ಸಂಘಟನೆಯ ರೂವಾರಿ ಕೂಡಾ ಕಾನ್ಸಿರಾಮ್ ಆಗಿದ್ದರು.

 
    ಕುರ್ಮಿ ಸಮುದಾಯದ ಸೋನೇಲಾಲ್ ಪಟೇಲ್, ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಓಂ ಪ್ರಕಾಶ್ ರಾಜಭರ್, ಫ್ಹಾಸಿ ಸಮುದಾಯದ ಆರ್ ಕೆ.ಚೌದರಿ, ಈ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ತೊರೆದು ಎಸ್ ಪಿ ಸೇರಿ ಸೋತು ಹೋಗಿರುವ ಸ್ವಾಮಿ ಪ್ರಸಾದ್ ಮೌರ್ಯ ಮೊದಲಾದವರೆಲ್ಲರೂ ಒಂದು ಕಾಲದಲ್ಲಿ ಕಾನ್ಸಿರಾಮ್ ಶಿಷ್ಯರಾಗಿದ್ದರು, ರಾಜಕೀಯವಾಗಿ ಅವರ ಗರಡಿಯಲ್ಲಿಯೇ ಪಳಗಿದವರು. ಕಾನ್ಸಿರಾಮ್ ನಿಧನಾನಂತರ ಅವರೇ ಬೆಳೆಸಿದ್ದ ಅನೇಕ ದಲಿತೇತರ ನಾಯಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಮಾಯಾವತಿಯವರಿಗೆ ಸಾಧ್ಯವಾಗದೆ ಹೋಗಿರುವುದು ಕೂಡಾ ಬಿಎಸ್ ಪಿಯ ಇಂದಿನ ಸ್ಥಿತಿಗೆ ಕಾರಣ.


     “ಹೊಸ ಪಕ್ಷ ಮೊದಲು ಸೋಲುತ್ತದೆ, ಎರಡನೇ ಬಾರಿ ಗಮನ ಸೆಳೆಯುತ್ತದೆ ಮೂರನೇ ಬಾರಿ ಗೆಲ್ಲುತ್ತದೆ’’ ಎಂದು ಹೇಳುತ್ತಿದ್ದ ಕಾನ್ಸಿರಾಮ್ ಚತ್ತೀಸ್ ಘಡದ ಚಂಪಾ ಲೋಕಸಭಾ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಸೋತಿದ್ದರು, 1989ರಲ್ಲಿ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ವಿರುದ್ದ ಸ್ಪರ್ಧಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಕೊನೆಗೆ 1991ರಲ್ಲಿ ಈಟಾವದಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.1996ರಲ್ಲಿ ಮತ್ತೆ ಹೋಷಿಯಾರ್ ಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.


     1984ರಲ್ಲಿ ಬಿಎಸ್ ಪಿ ಸ್ಥಾಪನೆಯಾದ ಕಾಲದಲ್ಲಿ ಉತ್ತರಪ್ರದೇಶದಲ್ಲಿ ಪ್ರಬಲ ಪಕ್ಷವಾಗಿದ್ದದ್ದು ಕಾಂಗ್ರೆಸ್. ಸಹಜವಾಗಿಯೇ ಕಾನ್ಸಿರಾಮ್ ಅವರ ಗುರಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಾಗಿತ್ತು. ಆ ಗುರಿಯಲ್ಲಿ ಅವರೂ ಯಶಸ್ವಿಯಾಗಿದ್ದರು. 1985ರಲ್ಲಿ ಕಾಂಗ್ರೆಸ್ ಪಕ್ಷದ ಮತಪ್ರಮಾಣ ಶೇಕಡಾ 48, ಆ ವರ್ಷ ಬಿಎಸ್ ಪಿ ಎದುರಿಸಿದ ಮೊದಲ ಚುನಾವಣೆಯಲ್ಲಿ ಪಡೆದಿದ್ದ ಮತಪ್ರಮಾಣ ಕೇವಲ ಶೇಕಡಾ 2.8 ಮಾತ್ರ. 


    ಮಾಯಾವತಿಯವರೂ ಸೇರಿದಂತೆ ಬಿಎಸ್ ಪಿ ಯ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 2002ರಲ್ಲಿ ಕಾಂಗ್ರೆಸ್ ಮತಪ್ರಮಾಣ ಶೇಕಡಾ 8.96, ಬಿಎಸ್ ಪಿಯ ಮತಪ್ರಮಾಣ ಶೇಕಡಾ 23.6. 
ಕಾನ್ಸಿರಾಮ್ ಅವರ ನಂತರದ ಗುರಿ ಬಿಜೆಪಿಯಾಗಿತ್ತು. ಇದಕ್ಕಾಗಿ ಅವರು ಕಣ್ಣಿಟ್ಟಿದ್ದು ಉತ್ತರಪ್ರದೇಶದಲ್ಲಿ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣರ ಮೇಲೆ. ಬಿಜೆಪಿ ಜೊತೆಗಿನ ಮೈತ್ರಿಗಳಿಂದಾಗಿ ಆ ಸಮುದಾಯದ ಜೊತೆ ಒಡನಾಟ ಹೊಂದಿದ್ದ ಕಾನ್ಸಿರಾಮ್, 2000ನೇ ವರ್ಷದ ಪ್ರಾರಂಭದಲ್ಲಿಯೇ ಅವರು ಇನ್ನೊಂದು ಯುಟರ್ನ್ ಮಾಡಿ ದಲಿತ್-ಬ್ರಾಹ್ಮಣ್ ಭಾಯಿಚಾರಾ ಚಳುವಳಿಯನ್ನು ಹಳ್ಳಿಗಳಲ್ಲಿ ಪ್ರಾರಂಭಿಸಿದ್ದರು. 


     1991ರಲ್ಲಿ ಶೇಕಡಾ 31.45ರಷ್ಟು ಮತಗಳಿಸಿ 221 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಮತಪ್ರಮಾಣ 2012ರಲ್ಲಿ ಶೇಕಡಾ 15ಕ್ಕೆ ಕುಸಿದಿತ್ತು, ಗೆದ್ದದ್ದು 47 ಸ್ಥಾನಗಳನ್ನು ಮಾತ್ರ. ಬಿಜೆಪಿ ಮತ್ತೆ ಚಿಗುರುತ್ತಾ ಬಂದಿರುವುದು ಕಾನ್ಸಿರಾಮ್ ಅವರ ಗೈರುಹಾಜರಿಯ ದಿನಗಳಲ್ಲಿ ಎನ್ನುವುದು ಅವರ ಹಾಜರಿಯ ಮಹತ್ವವನ್ನು ಹೇಳುತ್ತದೆ.


     1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪುಣೆಯ ಪಾರ್ವತಿ ದೇವಸ್ಥಾನ ಮತ್ತು. ನಾಸಿಕ ಕಾಳರಾಮ್ ದೇವಸ್ಥಾನ ಪ್ರವೇಶದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳುವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನು ಸ್ಥಾಪಿಸಿ ಚುನಾವಣಾ ರಾಜಕೀಯಕ್ಕೆ ಧುಮುಕಿದರೂ ಅವರಿಗೆ ಯಶಸ್ಸು ಸಿಗಲಿಲ್ಲ. ಈ ವೈಫಲ್ಯಕ್ಕೆ ಉಳಿದ ಪಕ್ಷಗಳ ದಲಿತ ಪೂರ್ವಗ್ರಹ ಮುಖ್ಯ ಕಾರಣವಾದರೂ, ಇದರಲ್ಲಿ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಪಾಲೂ ಇದೆ. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.


     1991ರ ಡಿಸೆಂಬರ್ ನಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಘಟನೆ ಈ ದೇಶದ ರಾಜಕೀಯ ಮಾತ್ರವಲ್ಲ ಸಾಮಾಜಿಕ ಕ್ಷೇತ್ರದಲ್ಲಿ ಕೂಡಾ ಬಹುದೊಡ್ಡ ಭೂಕಂಪನಕ್ಕೆ ಕಾರಣವಾಗಿತ್ತು. ಈ ಭೂಕಂಪನದ ಕೇಂದ್ರ ಉತ್ತರಪ್ರದೇಶವಾಗಿದ್ದರೂ ಕಂಪನದ ಅಲೆಗಳು ನಂತರದ ದಿನಗಳಲ್ಲಿ ಇಡೀ ದೇಶದ ರಾಜಕೀಯದ ಗಣಿತವನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದ ಬಿಜೆಪಿ ದೇಶಾದ್ಯಂತ ರಾಜಕೀಯ ಲಾಭ ಪಡೆದರೂ ಉತ್ತರಪ್ರದೇಶದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು 26 ವರ್ಷ ಸಂಘರ್ಷ ನಡೆಸಬೇಕಾಯಿತು. ಬಿಜೆಪಿಯ ಜೈತ್ರಯಾತ್ರೆಗೆ ಅಡ್ಡಗಾಲಾಗಿದ್ದವರು ಬಿಜೆಪಿ ಜೊತೆ ಮೈತ್ರಿಮಾಡಿಕೊಂಡು ಆ ಪಕ್ಷವನ್ನು ಬೆಳೆಸಿದರು ಎಂಬ ಆರೋಪಕ್ಕೆ ಒಳಗಾಗಿರುವ ಇದೇ ಕಾನ್ಸಿರಾಮ್.


     ಬಾಬರಿ ಮಸೀದಿ ಧ್ವಂಸದ ನಂತರ ವಜಾಗೊಂಡ ಬಿಜೆಪಿ ಸರ್ಕಾರ 1993ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸೋತು ಹೋಗಿತ್ತು ಎನ್ನುವುದು ಬಹಳ ಮಂದಿಗೆ ನೆನಪಿರಲಾರದು. ಆ ಪಕ್ಷದ ಸ್ಥಾನಗಳು 221ರಿಂದ 177ಕ್ಕೆ ಸ್ಥಾನಗಳು ಕುಸಿದಿತ್ತು. ಇದಕ್ಕೆ ಕಾರಣ ಅಂದಿನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಕಾನ್ಸಿರಾಮ್ ಅವರು ಸಮಾಜವಾದಿ ಪಕ್ಷದ ಜೊತೆ ಮಾಡಿಕೊಂಡ ರಾಜಕೀಯ ಮೈತ್ರಿ. ಇದರಿಂದಾಗಿ ಬಿಎಸ್ ಪಿ ಮತ್ತು ಎಸ್ ಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾದರು.


     ಉತ್ತರಪ್ರದೇಶದಲ್ಲಿ ಬಹುಜನ ಚಳುವಳಿ ಜನಪ್ರಿಯವಾಗಿ ಬೆಳೆಯುತ್ತಿದ್ದರೂ ಬಿಎಸ್ ಪಿಗೆ ನಿರೀಕ್ಷಿತ ರಾಜಕೀಯ ಯಶಸ್ಸು ಕಾಣಲು ಸಾಧ್ಯವಾಗಿರಲಿಲ್ಲ. 1991ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಗಳಿಸಿದ್ದು 12 ಸ್ಥಾನಗಳನ್ನು ಮಾತ್ರ. ಇದೇ ರೀತಿ ಜನತಾದಳದಿಂದ ಪ್ರತ್ಯೇಕಗೊಂಡು ಸ್ವಂತ ಪಕ್ಷ ಸ್ಥಾಪಿಸಿದ್ದ ಮುಲಾಯಂಸಿAಗ್ ಯಾದವ್ ಅವರಿಗೂ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ಮೈತ್ರಿ ಅಗತ್ಯವಾಗಿತ್ತು. 1991ರ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಗಳಿಸಿದ್ದು ಕೇವಲ 34 ಸ್ಥಾನಗಳಾದರೂ ಅವರ ಎಂ-ವೈ (ಮುಸ್ಲಿಮ್-ಯಾದವ್) ಕೂಟದ ನೆಲೆ ಗಟ್ಟಿಯಾಗಿತ್ತು. 


    1989ರ ನವಂಬರ್ ಎರಡರಂದು ಕರಸೇವಕರನ್ನು ತಡೆಯಲು ಮುಲಾಯಂಸಿಂಗ್ ಸರ್ಕಾರ ನಡೆಸಿದ ಗೋಲಿಬಾರ್ ಮತ್ತು ಬಾಬರಿ ಮಸೀದಿಧ್ವಂಸವನ್ನು ತಡೆಯಲು ವಿಫಲವಾದ ಕಾಂಗ್ರೆಸ್ ಬಗೆಗಿನ ಅಸಮಾಧಾನ ಮುಸ್ಲಿಮರನ್ನು ಇನ್ನಷ್ಟು ಸಮಾಜವಾದಿ ಪಕ್ಷದ ಸಮೀಪಕ್ಕೆ ತಂದಿತ್ತು. ಈ ಕಾರಣಗಳಿಂದಾಗಿ 1993ರ ವಿಧಾನಸಭಾ ಚುನಾವಣೆಯಲ್ಲಿ ಎಸ್ ಪಿ-ಬಿಎಸ್ ಪಿ ಮೈತ್ರಿಕೂಟ 176 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂತು. ಬಿಜೆಪಿ 177 ಸ್ಥಾನಗಳನ್ನು ಗಳಿಸಿದ್ದರೂ ಬಾಬರಿ ಮಸೀದಿ ಧ್ವಂಸದ ನಂತರ ರಾಜಕೀಯವಾಗಿ ಸಂಪೂರ್ಣ ಅಸ್ಪೃಶ್ಯವಾಗಿದ್ದ ಆ ಪಕ್ಷದ ಜೊತೆ ಮೈತ್ರಿಗೆ ಯಾವ ಪಕ್ಷವೂ ಸಿದ್ದ ಇರಲಿಲ್ಲ.


     ಕೇವಲ ಎರಡೇ ವರ್ಷಗಳ ಅವಧಿಯಲ್ಲಿ ಎಸ್ ಪಿ-ಬಿಎಸ್ ಪಿ ಮೈತ್ರಿ 1995ರ ಗೆಸ್ಟ್ ಹೌಸ್ ಪ್ರಕರಣದೊಂದಿಗೆ ಕೊನೆಗೊಂಡಿದ್ದು ದೊಡ್ಡ ದುರಂತ. ಈ ಮೈತ್ರಿಕೂಟದ ಕಾಲದಲ್ಲಿ ನಡೆಯುತ್ತಲೇ ಇದ್ದ ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ಬೆಂಬಲ ಹಿಂದೆಗೆದುಕೊಳ್ಳಲು ಒಂದು ಕಾರಣವಾದರೆ, ಮಾಯಾವತಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂಬ ಕಾರ್ಯತಂತ್ರದ ಭಾಗವಾಗಿ ಕಾನ್ಸಿರಾಮ್ ಉರುಳಿಸಿದ್ದ ರಾಜಕೀಯ ದಾಳಗಳೂ ಇನ್ನೊಂದು ಕಾರಣ. ‘ಗೆಸ್ಟ್ ಹೌಸ್’ ಪ್ರಕರಣದ ಮರುದಿನ ಕೇಂದ್ರ ಸರ್ಕಾರ ಮುಲಾಯಂ ಸಿಂಗ್ ಸರ್ಕಾರ ವಜಾಗೊಳಿಸಿದರೆ, ಅದೇ ದಿನ ಸಂಜೆ ಬಿಜೆಪಿ ಬೆಂಬಲದೊಂದಿಗೆ ಬಿಎಸ್ ಪಿಯ ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದರು. 


    ಬಹುಜನ ಚಳುವಳಿಯ ಇತಿಹಾಸದಲ್ಲಿ ಅದೊಂದು ಐತಿಹಾಸಿಕ ದಿನ. ಜಾತಿಯ ನಂಜು ಮತ್ತು ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯದಲ್ಲಿ ಅದ್ದಿ ಹೋಗಿರುವ ಉತ್ತರಪ್ರದೇಶ ಎಂಬ ರಾಜ್ಯದಲ್ಲಿ ದಲಿತ ಮಹಿಳೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿದ್ದರು. 24 ಗಂಟೆಗಳ ಅವಧಿಯ ಇಂತಹದ್ದೊAದು ಪವಾಡವನ್ನು ಕಾನ್ಸಿರಾಮ್ ಅವರಂತಹ ಚಾಣಕ್ಯನಿಗೆ ಮಾತ್ರ ಮಾಡಲು ಸಾಧ್ಯ ಇತ್ತು. ಮೇಲ್ನೋಟಕ್ಕೆ ಇದು ದಿಡೀರನೇ ನಡೆದ ರಾಜಕೀಯ ಬೆಳವಣಿಗೆಯಂತೆ ಕಂಡರೂ ಇದರ ಹಿಂದೆ ಯೋಜಿತ ಕಾರ್ಯತಂತ್ರ ಇತ್ತು ಎನ್ನುವುದು ಕಾನ್ಸಿರಾಮ್ ಅವರನ್ನು ಬಲ್ಲವರಿಗೆ ಗೊತ್ತಿತ್ತು.


    ಗಂಟೆಗಳ ಮೊದಲು ಬಿಜೆಪಿಯನ್ನು ‘ಮನುವಾದಿ ಪಕ್ಷ’ ಎಂದು ತುಚ್ಛೀಕರಿಸುತ್ತಿದ್ದ ಕಾನ್ಸಿರಾಮ್ ಮರುಗಳಿಗೆಯಲ್ಲಿ ಆ ಪಕ್ಷದ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದು ವ್ಯಾಪಕ ಟೀಕೆಗಳಿಗೆ ಕಾರಣವಾಗಿತ್ತು. ಇದು ಅವಕಾಶವಾದಿತನದ ರಾಜಕಾರಣ ಅಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ್ದ ಕಾನ್ಸಿರಾಮ್ “ ಬ್ರಾಹ್ಮಣರು ಅವಕಾಶವಾದಿತನವನ್ನು ಕಾರ್ಯತಂತ್ರ ಮಾಡಿಕೊಂಡು ಯಶಸ್ಸು ಕಾಣಲು ಸಾಧ್ಯವಾದರೆ ದಲಿತರು ಯಾಕೆ ಹಿಂಜರಿಯಬೇಕು? ಎಂದು ಉತ್ತರಿಸಿ ಬಾಯಿ ಮುಚ್ಚಿಸಿದ್ದರು. ಇದು ಕಾನ್ಸಿರಾಮ್ ಮತ್ತು ಅಂಬೇಡ್ಕರ್ ಅವರ ನಡುವಿನ ಮುಖ್ಯ ವ್ಯತ್ಯಾಸ. 


    ಅಂಬೇಡ್ಕರ್ ಅವರ ರಾಜಕೀಯದಲ್ಲಿ ಅಳವಡಿಸಿಕೊಂಡಿದ್ದ ಬಿಗಿಯಾದ ನೈತಿಕನಿಷ್ಠೆ ಕಾನ್ಸಿರಾಮ್ ಅವರಿಗೆ ಇರಲಿಲ್ಲ. ಒಂದಿನಿತೂ ರಾಜೀಯಾಗದ ಕಡು ನೈತಿಕತೆಯ ಕಾರಣದಿಂದಾಗಿಯೇ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಮರೀಚಿಕೆಯಾಗಿ ಹೋಗಿತ್ತು ಎಂಬುದನ್ನು ಅರಿತಿದ್ದ ಕಾನ್ಸಿರಾಮ್, ಅಂಬೇಡ್ಕರ್ ಅವರು ಇಟ್ಟುಕೊಂಡಿದ್ದ ಗುರಿಯನ್ನು ಮರೆಯದೆ ದಾರಿಯನ್ನು ಸ್ವಲ್ಪ ಬದಲಿಸಿದ್ದರು. ಈ ಬದಲಾದ ದಾರಿಯ ಮೂಲಕವೇ ಕಾನ್ಸಿರಾಮ್ ಅವರು ಮಾಯಾವತಿಯವರನ್ನು ಬಿಜೆಪಿ ಜೊತೆಗಿನ ಮೈತ್ರಿಯ ಬಲದಿಂದಲೇ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು, ಜೊತೆಗೆ ನಾಲ್ಕನೇ ಬಾರಿ ಸ್ವಂತ ಬಲದಿಂದಲೇ ಮಾಯಾವತಿಯವರು ಮುಖ್ಯಮಂತ್ರಿಯಾಗಲು ಭೂಮಿಕೆ ಸಿದ್ದಗೊಳಿಸಿದ್ದರು. ಆ ದಿನವನ್ನು ಕಾಣಲು ಕಾನ್ಸಿರಾಮ್ ಜೀವಂತ ಇರಲಿಲ್ಲ.


    ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಗಳ ದಪ್ಪದಪ್ಪ ಶಬ್ದಗಳ ಮೂಲಕ ಕಾನ್ಸಿರಾಮ್ ಅವರ ಹೋರಾಟವನ್ನು ವ್ಯಾಖ್ಯಾನಿಸುವುದು ಕಷ್ಟ. ಕಾನ್ಸಿರಾಮ್ ಅವರು ಹುಟ್ಟುಹಾಕಿದ್ದ ಸಮಾಜೋರಾಜಕೀಯ ಚಳುವಳಿಯನ್ನು ಶುದ್ದ ಸೈದ್ಧಾಂತಿಕ ಚೌಕಟ್ಟಿನಲ್ಲಿ ಕೂರಿಸಲು ಸಾಧ್ಯವೂ ಇಲ್ಲ. ಕಾಲದ ಕರೆಗೆ ಓಗೊಡುತ್ತಾ ಸಾಗಿದ ಕಾನ್ಸಿರಾಮ್ ಅವರು ಅವಸರದಲ್ಲಿದ್ದಂತೆ ಕಾಣುತ್ತಿದ್ದರು. ಇದರಿಂದಾಗಿ ತಾನು ಕಟ್ಟಿದ ಚಳುವಳಿಯನ್ನು ದೀರ್ಘಕಾಲ ಮುನ್ನಡೆಸಿಕೊಂಡು ಹೋಗುವಂತಹ ನಾಯಕರು ಮತ್ತು ಕಾರ್ಯಕರ್ತರ ಪಡೆಯನ್ನು ಕಟ್ಟಲು ಅವರಿಂದ ಆಗಲಿಲ್ಲ. ಉತ್ತರಪ್ರದೇಶದಲ್ಲಿ ಮಾಯಾವತಿಯವರನ್ನು ತನ್ನ ಉತ್ತರಾಧಿಕಾರಿಯೆಂದು ಘೋಷಿಸಿದ್ದ ಕಾನ್ಸಿರಾಮ್ ಆ ರಾಜ್ಯದಲ್ಲಿ ಬಿಎಸ್ ಪಿಯ ಭವಿಷ್ಯದ ಸಂಪೂರ್ಣ ಹೊಣೆಗಾರಿಕೆಯನ್ನು ಅವರ ಮೇಲೆ ಹೊರಿಸಿದ್ದರು.


   ವಿಷಾದದ ಸಂಗತಿಯೆಂದರೆ ಚಳುವಳಿಯನ್ನೇ ಬದುಕಿದ ಕಾನ್ಸಿರಾಮ್ ಹೋರಾಟದ ಆಳವಾದ ಅಧ್ಯಯನ ಇಂದಿಗೂ ನಡೆದಿಲ್ಲ. ಪ್ರಾರಂಭದಿಂದಲೂ ಮಾಧ್ಯಮಗಳಿಂದ ಅಂತರವನ್ನು ಕಾಪಾಡಿಕೊಂಡು ಬಂದಿದ್ದ ಕಾರಣಕ್ಕೆ ಅವರ ಯೋಜನೆ-ಆಲೋಚನೆಗಳು ದಾಖಲಾಗಿದ್ದು ಕಡಿಮೆ. ಸಂದರ್ಶನವೊಂದರಲ್ಲಿ ‘ನಿಮಗೆ ಪ್ರಧಾನ ಮಂತ್ರಿಯಾಗುವ ಕನಸಿದೆಯೇ? ಎಂಬ ಒಬ್ಬ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ್ದ ಕಾನ್ಸಿರಾಮ್ “ ತಮ್ಮ ಮುಂದಿನ ಗುರಿ ರಾಜಸ್ತಾನ, ಚತ್ತೀಸ್ ಘಡ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿ ಕುರ್ಚಿಯಲ್ಲಿ ಬಿಎಸ್ ಪಿ ಮುಖ್ಯಮಂತ್ರಿಯನ್ನು ಕೂರಿಸುವುದು ಎಂದು ಹೇಳಿದ್ದರು. ಅದೇ ಪತ್ರಕರ್ತ ಮತ್ತೆ ಕೆಣಕಿದಾಗ ನನ್ನ ಉತ್ತರಾಧಿಕಾರಿ ಮಾಯಾವತಿ ಎಂದಷ್ಟೇ ಹೇಳಿ ಸುಮ್ಮನಾಗಿದ್ದರು. ಕಾನ್ಸಿರಾಮ್ ಅಂತಿಮ ಗುರಿ ದೆಹಲಿ ಗದ್ದುಗೆ ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಆ ಗದ್ದುಗೆ ಏರುವ ಆಲೋಚನೆ ಅವರಲ್ಲಿತ್ತೇ? ಈ ಪ್ರಶ್ನೆಗೆ ಉತ್ತರಿಸಲು ಅವರು ನಮ್ಮೊಡನೆ ಇಲ್ಲ.


    ಅವರ ಬದುಕನ್ನು ಶೋಧಿಸುತ್ತಾ ಹೋದ ಹಾಗೆ ಮತ್ತೆ ಮತ್ತೆ ನೆನಪಾಗುವುದು ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವಸರದ ಕ್ರಾಂತಿ ಮಾಡಿದ್ದ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು. ಒಬ್ಬ ಮನುಷ್ಯ ತನ್ನ ಒಂದು ಬದುಕಿನಲ್ಲಿ ಗರಿಷ್ಠವಾಗಿ ಏನೆಲ್ಲಾ ಮಾಡಲು ಸಾಧ್ಯವಿತ್ತೋ ಅವೆಲ್ಲವನ್ನೂ ಇವರಿಬ್ಬರೂ ಮಾಡಿದ್ದರು. ಆದರೆ ಅವರು ಚಾಲನೆ ನೀಡಿದ್ದ ಪರಿವರ್ತನೆಯ ಬಂಡಿಯನ್ನು ಮುನ್ನಡೆಸಬಲ್ಲ ನಾಯಕರು ಮತ್ತು ಕಾರ್ಯಕರ್ತರ ಪಡೆಯನ್ನು ಕಟ್ಟಲು ಅವರಿಂದಾಗಲಿಲ್ಲ ಎಂದು ಹೇಳಬಹುದು, ಇದನ್ನೇ ಇನ್ನೊಂದು ರೀತಿಯಲ್ಲಿ ಅವರು ಬೆಳೆಸಿದ ನಾಯಕರು ಮತ್ತು ಕಾರ್ಯಕರ್ತರು ತಮ್ಮ ನಾಯಕನನ್ನು ಮತ್ತು ಅವರು ತೋರಿಸಿದ್ದ ಹಾದಿಯನ್ನು ಮರೆತಿದ್ದರು ಎಂದೂ ಹೇಳಬಹುದು.


    2006ನೇ ಅಕ್ಟೋಬರ್ 14ರಂದು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ 2002ನೇ ವರ್ಷದಲ್ಲಿ ಕಾನ್ಸಿರಾಮ್ ಘೋಷಿಸಿದ್ದರು. ಅಂದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರಗೊAಡು ಐವತ್ತು ವರ್ಷಗಳು ಪೂರ್ಣಗೊಳ್ಳುತ್ತಿತ್ತು. ಮತಾಂತರಕ್ಕೆ ನಿಗದಿಗೊಳಿಸಿದ ದಿನಕ್ಕಿಂತ ಐದು ದಿನಗಳ ಮೊದಲು ಅವರು ನಿಧನರಾದರು. ಕೇಂದ್ರದಲ್ಲಿ ಬಿಎಸ್ ಪಿ ಅಧಿಕಾರಕ್ಕೆ ಬಂದ ನಂತರ ಬೌದ್ಧಧರ್ಮಕ್ಕೆ ಮತಾಂತರವಾಗುವ ಕಾನ್ಸಿರಾಮ್ ಕನಸನ್ನು ನನಸುಮಾಡುವುದಾಗಿ ನಂತರದ ದಿನಗಳಲ್ಲಿ ಮಾಯಾವತಿಯವರು ಘೋಷಿಸಿದ್ದರು. 


    ಕೇಂದ್ರದಲ್ಲಿ ಅಧಿಕಾರ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ –ಇವೆರಡೂ ಕಾನ್ಸಿರಾಮ್ ಕನಸಾಗಿಯೇ ಉಳಿಯಲಿದೆಯೇ?