ಶ್ರೀದೇವಿ ಆಸ್ಪತ್ರೆಯ 2ನೇ ಕ್ಯಾಥ್ ಲ್ಯಾಬ್ ಉದ್ಘಾಟನೆ  ಪುನೀತ್ ‘ಹೃದಯ ಜ್ಯೋತಿ’ ರಾಜ್ಯಕ್ಕೆ ವಿಸ್ತರಣೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟಣೆ

ಶ್ರೀದೇವಿ ಆಸ್ಪತ್ರೆಯ 2ನೇ ಕ್ಯಾಥ್ ಲ್ಯಾಬ್ ಉದ್ಘಾಟನೆ                                                              ಪುನೀತ್ ‘ಹೃದಯ ಜ್ಯೋತಿ’ ರಾಜ್ಯಕ್ಕೆ ವಿಸ್ತರಣೆ


ಜಿಲ್ಲಾಸ್ಪತ್ರೆಯಲ್ಲಿ ಕೀಮೋಥೆರಪಿ:


ಶ್ರೀದೇವಿ-ಸಿದ್ಧಾರ್ಥ  ಸಹಯೋಗ


       ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೆ-ಕೇರ್ ಕಿಮೋಥೊರಫಿ ಸೌಲಭ್ಯ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಸದ್ಯದಲ್ಲಿಯೇ ಈ ಯೋಜನೆಗೆ ಚಾಲನೆ ನೀಡಲಾಗುವುದು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಜೊತೆಗೂಡಿ ಜನರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ತುಮಕೂರಿನ ಶ್ರೀದೇವಿ ಆಸ್ಪತ್ರೆ ಮತ್ತು ಸಿದ್ದಾರ್ಥ ವೈದ್ಯಕೀಯ ಸಂಸ್ಥೆಗಳಿಗೆ ಡೆ-ಕೇರ್ ಮತ್ತು ಕಿಮೋಥೆರಫಿ ಚಿಕಿತ್ಸಾ ನಿರ್ವಹಣೆಯನ್ನು ವಹಿಸಿಕೊಡುವುದಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಪ್ರಕಟಿಸಿದರು.


ಶ್ರೀದೇವಿ ಆಸ್ಪತ್ರೆಯ 2ನೇ ಕ್ಯಾಥ್ ಲ್ಯಾಬ್ ಉದ್ಘಾಟನೆ 


ಪುನೀತ್ ‘ಹೃದಯ ಜ್ಯೋತಿ’ ರಾಜ್ಯಕ್ಕೆ ವಿಸ್ತರಣೆ


ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟಣೆ

     ತುಮಕೂರು: ರಾಜ್ಯದ 80 ತಾಲ್ಲೂಕು ಆಸ್ಪತ್ರೆಗಳಲ್ಲಿ ಆರಂಭಿಸಿರುವ ‘ಪುನೀತ್ ರಾಜ್‌ಕುಮಾರ್’ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಹಾಗೂ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಪೀಡಿತರಿಗೆ ಡೇ ಕೇರ್‌ ಕೀಮೋ ತೆರಪಿ ಆರಂಭಿಸಲಾಗುವುದು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಪ್ರಕಟಿಸಿದರು.


      ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಅಳವಡಿಸಿರುವ ಅತ್ಯಾಧುನಿಕ ಜಪಾನ್‌ ತಂತ್ರಜ್ಞಾನದ 2ನೇ ಕ್ಯಾಥ್ ಲ್ಯಾಬ್‌ನ್ನು ಬುಧವಾರ  ಉದ್ಘಾಟಿಸಿ, ಮಾತನಾಡಿ, ಹೃದಯಾಘಾತವಾದ ಕೂಡಲೇ ಚಿಕಿತ್ಸೆ ನೀಡುವ ಹಾಗೂ ಹೃದಯಾಘಾತಗಳನ್ನು ತಡೆಗಟ್ಟುವ ಪುನೀತ್‌ ರಾಜಕುಮಾರ್‌ ಹೆಸರಿನಲ್ಲಿ ಆರಂಭಿಸಿದರುವ ಹೃದಯ ಜ್ಯೋತಿ ಸೌಲಭ್ಯದಿಂದ ಈವರೆಗೆ ಸುಮಾರು 250 ಕ್ಕೂ ಹೆಚ್ಚು ಜನರ ಜೀವ ಕಾಪಾಡಲಾಗಿದೆ ಎಂದರು.

      ವೈದ್ಯಕೀಯ ಲೋಕದಲ್ಲಿ ಪ್ರತಿನಿತ್ಯ ಹೊಸ-ಹೊಸ ಬದಲಾವಣೆಗಳಾಗುತ್ತವೆ. ಮುಂದಿನ ದಿನಗಳಲ್ಲ್ಲಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೂ ಪರಿಹಾರ ದೊರಕಲಿದೆ. ಭವಿಷ್ಯದಲ್ಲಿ ಮನುಷ್ಯನ ಆಯಸ್ಸು 120 ವರ್ಷದವರೆಗೂ ಹೋದರೂ ಅಚ್ಚರಿಪಡಬೇಕಿಲ್ಲ ಎಂದು ಅವರು ನುಡಿದರು. ರೋಗಗಳಿಂದಾಗಿ ಮನುಷ್ಯನ ಜೀವ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ವೈದ್ಯರಿಗೆ ಮತ್ತು ದಾದಿಯರಿಗೆ ಜೀವ ಉಳಿಸುವಂತಹ ಶಕ್ತಿಯಿರುತ್ತದೆ. ದೇವರಿಗೆ ಬಿಟ್ಟರೇ ಇತಂಹ ಅದ್ಭುತ ಶಕ್ತಿಯಿರುವುದು ವೈದ್ಯಕೀಯ ಸಮುದಾಯಕ್ಕೆ ಮಾತ್ರ. ಹೀಗಾಗಿ ವೈದ್ಯರು ವೃತ್ತಿ ಧರ್ಮ ಕಾಪಾಡಬೇಕು ಎಂದರು. ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವ ತುಮಕೂರಿನ ಶ್ರೀದೇವಿ ಆಸ್ಪತ್ರೆ ರಾಜ್ಯದ ದೊಡ್ಡ ಆಸ್ತಿಯಾಗಿದ್ದು, ಈ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಭವಿಷ್ಯದಲ್ಲಿ ಉಜ್ವಲ ಉಜ್ವಲ ಸಂಸ್ಥೆಯಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕರಾದ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ದಿನೇಶ್ ಗುಂಡೂರಾವ್ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಸರ್ಕಾರಿ ಆಸ್ಪತ್ರೆಗಳ ಸೇವೆಯ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಾಗುವಂತೆ ಮಾಡಿದ್ದಾರೆ ಅನ್ನಭಾಗ್ಯ ಮತ್ತು ಯಶಸ್ವಿನಿ ಯೋಜನೆ ಜಾರಿಗೊಳಿಸುವಲ್ಲಿ ಸಚಿವರ ಪಾತ್ರ ಬಹಳ ಮುಖ್ಯವಾಗಿತ್ತು. ಈಗಿನ ಕಾಲಘಟ್ಟ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. 2ನೇ ಕ್ಯಾಥ್ ಲ್ಯಾಬ್ ಆರಂಭದಿಂದ ಈ ಭಾಗದ ಜನರಿಗೆ ಇನ್ನೂ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದರು. 

    

     ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಕೆ.ಆರ್.ಕಮಲೇಶ್ ಮಾತನಾಡುತ್ತಾ ದಿವಂಗತ ಮಾಜಿ ಮುಖ್ಯಮುಂತ್ರಿ ಆರ್.ಗುಂಡೂರಾವ್ ಮರೆಯಲಾಗದ ಸಮಾಜಮುಖಿ- ಜನಹಿತ ಕಾರ್ಯಗಳನ್ನು ಮಾಡಿದ್ದು, ಮುಂದಿನ ಪೀಳಿಗೆಗೆ ಇದನ್ನು ಮನವರಿಕೆ ಮಾಡಿಕೊಡುವ ಕೆಲಸ ಮುಖ್ಯವಾಗಿ ಆಗಬೇಕಿದೆ ಎಂದು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ಎಂ.ನಾಗರಾಜ್ ಜೀವನ ಚರಿತ್ರೆ ಕುರಿತು ಡಾ ಕೆ.ಆರ್. ಕಮಲೇಶ್ ಡಾ.ಎಂ.ನಾಗರಾಜ್‌ ಕುರಿತು ರಚಿಸಿದ ಕೃತಿಯ ಇಂಗ್ಲಿಷ್‌ ಅನುವಾದವನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಲೋಕಾರ್ಪಣೆ ಮಾಡಿದರು.

     ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ಬಾಬು, ಜಪಾನಿನ ಸಿಮಾಂಜೋ ಕಂಪನಿಯ ಭಾರತೀಯ ವ್ಯಾಪಾರ ಅಭಿವೃದ್ಧಿಯ ವ್ಯವಸ್ಥಾಪಕ ಉಯಾಮಾ ಡೈಕಿ ಮತ್ತು ಭಾರತೀಯ ಮ್ಯಾನೇಜರ್ (ಸೇಲ್ಸ್) ರಾಜೀವ್ ಝಾ, ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್, ಶ್ರೀದೇವಿ ಆಸ್ಪತ್ರೆ ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸುರೇಶ್.ಎಸ್. ಹಾಗೂ ಡಿ.ಹೆಚ್.ಓ, ಡಾ.ಚಂದ್ರಶೇಖರ್, ಜಿಲ್ಲಾ ಸರ್ಜನ್ ಡಾ.ಅಜ್ಗರ್‌ಬೇಗ್, ಶ್ರೀದೇವಿ ಆಸ್ಪತ್ರೆಯ ನೇತ್ರ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಪಿ.ಲಾವಣ್ಯ, ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿಯಾದ ಶ್ರೀಮತಿ ಅಂಬಿಕಾ ಎಂ ಹುಲಿನಾಯ್ಕರ್, ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಅಧೀಕ್ಷಕರಾದ ಡಾ.ಕೆ.ಮೋಹನ್‌ಕುಮಾರ್, ಶ್ರೀದೇವಿ ವೈದ್ಯಕೀಯ ಆಡಳಿತ ವಿಭಾಗದ ಉಪಪ್ರಾಂಶುಪಾಲರಾದ ಡಾ.ಎಂ.ಎನ್.ಹೇಮಂತ್‌ರಾಜ್, ಶ್ರೀದೇವಿ ಆಸ್ಪತ್ರೆಯ ಸಿ.ಎ.ಓ ಡಾ.ಪ್ರದೀಪ್‌ಕುಮಾರ್ ವೆಗ್ಗಿ, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಭಾಗವಹಿಸಿದ್ದರು.

ʼಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತʼ 


ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 


    ತುಮಕೂರು- ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


    ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಗಟ್ಟಿಯಾಗಿದ್ದಾರೆ. ಅವರ ಬಗ್ಗೆ ಅಗೌರವವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದರು.


     ನಗರದ ಸಿರಾಗೇಟ್ ಬಳಿ ಇರುವ ಶ್ರೀದೇವಿ ಮೆಡಿಕಲ್ ಕಾಲೇಜಿಗೆ ಕ್ಯಾತ್‌ಲಾಬ್ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ವಿನಾ ಕಾರಣ ಪದೇ ಪದೇ ಆ ಬಗ್ಗೆ ಮಾತನಾಡಬಾರದು ಎಂದರು.


    ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರವೂ ಸಹ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಭೇಟಿ ಮಾಡುವುದು, ಕೇಳುವುದು ತಪ್ಪೇನಲ್ಲ. ಆದರೆ ಈ ಎಲ್ಲ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್  ತೀರ್ಮಾನ ಕೈಗೊಳ್ಳುತ್ತದೆ. ಅದಕ್ಕೆ ನಾವೆಲ್ಲರೂ ಬದ್ಧ. ಇದೆಲ್ಲಾ ಸಾರ‍್ವಜನಿಕವಾಗಿ ಚರ್ಚೆ ಮಾಡುವ ವಿಚಾರ ಅಲ್ಲ ಎಂದರು.


    ಗೃಹ ಸಚಿವ ಡಾ. ಜಿ. ಪರಮೇಶ್ವರ್ ದೆಹಲಿಗೆ ಏಕೆ ಹೋಗಿದ್ದಾರೆ ಎಂಬ ಬಗ್ಗೆ ನಮಗೇನು ಗೊತ್ತು, ಸಚಿವರುಗಳು ದೆಹಲಿಗೆ ಹೋಗುವುದು ದೊಡ್ಡ ಸುದ್ದಿಯೇನಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.


     ರಾಜ್ಯದಲ್ಲಿ ಬಾಣಂತಿಯರ ಸಾವುಗಳು ಆಗಿರುವುದು ಗಂಭೀರವಾದ ವಿಷಯ. ಈ ಕುರಿತು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಬಾಣಂತಿಯರ ಸಾವು ಏಕೆ ಆಯ್ತು, ತಡೆಗಟ್ಟಬಹುದಾಗಿತ್ತಾ, ಲೋಪದೋಷಗಳಾಗಿದೆಯಾ ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ಕುರಿತ ತನಿಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ, ತಜ್ಞರನ್ನು ನೇಮಕ ಮಾಡಲಾಗಿದೆ. ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ಬಾಣಂತಿಯರ ಸಾವಿನ ಪ್ರಮಾಣ ಇಳಿಕೆಯಾಗಿದೆ. ಈ ಬಗ್ಗೆ ನಾವು ಹೆಚ್ಚಿನ ಒತ್ತು ನೀಡಿದ್ದೇವೆ ಎಂದು ಅವರು ಹೇಳಿದರು.


    ತುಮಕೂರು ಜಿಲ್ಲಾಸ್ಪತ್ರೆಗೆ ಹೊಸ ಸ್ವರೂಪ ಕೊಡುವಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಈ ಸಂಬಂಧ ಈಗಾಗಲೇ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು.