“ಅದೂ ಒಂದು ಜಾತಿ,ಈಗ ಗೊತ್ತಾಯ್ತಲ್ಲ ಹೋಗು”

ಕಳೆದ ಭಾನುವಾರದ “ಕಿನ್ನರಿ”ಯಲ್ಲಿ ʼ ಏಯ್‌ ಕರ್ಕಿʼ ಅಂತ ಬರೆಯಲು ಶುರು ಮಾಡಿದ ಕೆ.ಬಿ.ನೇತ್ರಾವತಿ ಈ ವಾರ ಕಾಡೇನಹಳ್ಳಿಯ ಸರಕಾರಿ ಶಾಲೆಯಲ್ಲಿ ಒಂದನೇ ಕ್ಲಾಸ್‌ ಪಾಸು ಮಾಡಿ, ತೋಟದ ಮನೆಯನ್ನು ತೊರೆದು ತಿಪಟೂರಿನ ಟಾಗೋರ್‌ ಶಾಲೆಗೆ ಬಂದು ಸೇರಿದ, ಅಲ್ಲಿ ನಡೆದ ಆಕೆಯ ಜೀವನದ ಮಹತ್ವದ ಸಂಗತಿಗಳನ್ನು ವಿವರಿಸಿದ್ದಾರೆ. ಇಡೀ ಭೂ ಗ್ರಹದಲ್ಲಿ ಇಂಡಿಯಾ ಭೂಖಂಡದಲ್ಲಿ ಮಾತ್ರವೇ ಆಳಕ್ಕೆ ಬೇರು ಬಿಟ್ಟುಕೊಂಡಿರುವ ಜಾತಿ ಎಂಬ ʼ ಭೂತʼವು,  ಆಗ ಹುಟ್ಟಿ, ಕಣ್ಣು ಬಿಟ್ಟು ಪುಟ್ಟ ಪುಟ್ಟ ಹೂಗಳಂತೆ ಅರಳಿ ನಗುವ ಎಳೆ ಕಂದಮ್ಮಗಳ ನವಿರು ಮನಸ್ಸಿನ ಮೇಲೆ ಕಾದ ಕಬ್ಬಿಣದಂತೆ ಹೇಗೆ ಬರೆ ಹಾಕುತ್ತದೆ ಎಂಬುದನ್ನು ಈ ಬರಹ ಓದಿದಾಗ ನಿಮಗೆ ಅರಿವಾಗುತ್ತದೆ. ಓದಿ – ಸಂಪಾದಕ

   “ಅದೂ ಒಂದು ಜಾತಿ,ಈಗ ಗೊತ್ತಾಯ್ತಲ್ಲ ಹೋಗು”

ಕೆ.ಬಿ.ನೇತ್ರಾವತಿ

     ನಾನು ಚಿಕ್ಕನಾಯಕನಹಳ್ಳಿ ಪಟ್ಟಣದಿಂದ ಸುಮಾರು ಎರಡು ಕಿಲೋಮೀಟರ್‌ ದೂರದಲ್ಲಿರುವ ಕಾಡೇನಹಳ್ಳಿ- ತರಬೇನಹಳ್ಳಿಗಳ ನಡುವಣ ತೋಟದಲ್ಲಿ ಬೆಳೆದ ಕಾರಣ ಈ ಜಾತಿ ಅಟ್ರಾಸಿಟಿ ಯಿಂದ ದೂರವೇ ಬೆಳೆದಿದ್ವಿ ಅಂತ ಹೇಳಬೇಕು. ಆದರೂ ಈ ಜಾತಿಯ ʼಭೂತʼ ತನ್ನ ಬೆಂಕಿ ನಾಲಿಗೆ ಚಾಚಿದ್ದು

  ನಾನು ಒಂದನೇ ತರಗತಿ ಓದುವಾಗ. ಆಗ ಅಕ್ಕ ನಾಲ್ಕನೇ ತರಗತಿ, ಆಗ ಒಂದು ಕೊಠಡಿಯ ಆ ಶಾಲೆಯಲ್ಲಿ ಇದ್ದದ್ದೇ ನಾಲ್ಕು ತರಗತಿಗಳು, ಪ್ಲಸ್‌ ಆಕಾರದಲ್ಲಿ ಒಂದನೇ ತರಗತಿಯವರೆಲ್ಲ ಒಂದು ಕಡೆ, ನಂತರ ಎರಡನೇ ತರಗತಿ, ನಂತರ ಮೂರು . ನಂತರ ನಾಲ್ಕು ಹೀಗೆ, ಮಾಸ್ತರರು, ಒಂದನೇ ತರಗತಿಯವರಿಗೆ  ಏನಾದರೂ ಬರೆಯಲು ಹಚ್ಚಿ ಎರಡನೇ ತರಗತಿಗೆ ಪುಟ್ಟ ಪಾಠ ಮಾಡಿ ಅವರಿಗೆ ಬರೆಯಲು ಹೇಳಿ, ಮೂರನೇ ತರಗತಿಗೆ ಬರೆಯಲು ಕೊಟ್ಟು ನಾಲ್ಕನೇ ತರಗತಿಗೆ ಪಾಠ ಮಾಡುತ್ತಿದ್ದರು ಅಷ್ಟು ಹೊತ್ತಿಗೆ ಬರೆದು  ಮುಗಿಸಿರುತ್ತಿದ್ದ ಒಂದನೇ ತರಗತಿಯವರಿಗೆ ಕರೆಕ್ಷನ್‌, ಅದು ಇಂದಿನಂತಲ್ಲ, ಸ್ಲೇಟು ಬಳಪದಲ್ಲಿ ಬರೆದಿದ್ದನ್ನ ರೈಟ್‌ ಮಾರ್ಕ್‌ ಹಾಕಿ ಕೊಡುತ್ತಿದ್ದರು, ಅದನ್ನು ಅಳಿಸಿ ನಂತರ ಕೊಡುವ ವಿಷಯ ಬರೆದು ತಿದ್ದಬೇಕಿತ್ತು , ಬರೆದದ್ದು ತಪ್ಪಿದ್ದರೆ ಅಲ್ಲೇ ಬೋರ್ಡ್‌  ಮೇಲೆ ತಪ್ಪು ಬರೆದವರ ಕೈಯಲ್ಲೇ ತಿದ್ದಿಸಿ ಬರೆಸುತ್ತಿದ್ದರು .  ಆದರೆ ಯಾವತ್ತೂ ನಮಗೆ ನೀವು ಇಂತ ಜನ ನೀವು ಇಲ್ಲೆ ಕೂರಬೇಕು ಅಂತ ಎಂದೂ ತಾಕೀತು ಮಾಡಿರಲಿಲ್ಲ ಮಾಸ್ತರರು.  ಆದ್ದರಿಂದ ಆ ಶಾಲೆಯಲ್ಲಿದ್ದಷ್ಟು ದಿನ ಕೂಡ ನನಗೆ  ಜಾತಿ ಬಗ್ಗೆ ಅರಿವಿರಲಿಲ್ಲ. 

    ಇನ್ನು ನಮ್ಮ ತೋಟ ಹಾದು  ರಸ್ತೆಯಲ್ಲಿ ಹೋಗುವವರು ಸೈಕಲ್‌   ಇಳಿದು ಬಂದು ನಮ್ಮ ಅಪ್ಪನನ್ನ ಕಂಡು  ಕುಶಲೋಪರಿ ಮಾತಾಡಿ  ಹಾಗೇ ಹೋಗುತ್ತಿದ್ದರು, ನಮ್ಮ ತೋಟಕ್ಕಿಂದ ತುಸು ದೂರದಲ್ಲಿ ಬಸವಣ್ಣನ ಗುಡಿ ಪಕ್ಕದ ತೋಟದಲ್ಲಿದ್ದ ನಮ್ಮ ಅಜ್ಜಿಯ (ಅಮ್ಮನ ಅಮ್ಮ) ಮನೆಯಲ್ಲಿ ಕೂಡ ಹಾಗೇ, ಜನರು ಅವರ ಮನೆಯ ಬತ್ತ, ರಾಗಿ ಹುರುಳಿ, ಹೆಸರುಕಾಳುಗಳ ಮೂಟೆ ಒಟ್ಟಿಡಲು ಮಾಡಿದ್ದ ವರಾಂಡಕ್ಕೆ ಬಂದು ಮರದ ದೊಡ್ಡ ಚೇರ್‌ಗಳ ಮೇಲೆ ಕುಳಿತು ಮಾತಾಡಿ ಹೋಗುತ್ತಿದ್ದರು, ಅವರು ಎಂಥ ಜನ ಅಂತ ನಾವು ತಲೆಕೆಡಿಸಿಕೊಳ್ಳುವ ಕಾಲ ಅದಾಗಿರಲಿಲ್ಲ, ಅಜ್ಜಿ ಮನೆಯಲ್ಲಿ ವಾರಕ್ಕೊಮ್ಮೆ ಬೆಣ್ಣೆ ತೆಗೆಯುತ್ತಿದದರು, ಆಗ ದಾರಿಯಲ್ಲಿ ನಡೆದು ಹೋಗುವ ಹಲವು ಜನ ನಿಂತು “ಬೆಣ್ಣೆ ತೆಗೆದ್ರಾ ಮಜ್ಜಿಗೆ ಕೊಡಿ” ಅಂತ ಕೇಳಿ ಕುಡಿದು ಹೋಗುತ್ತಿದ್ದರು,

ನಾವು ಶಾಲೆ ಹೋಗುವ ಮುನ್ನ ರಸ್ತೆಯಲ್ಲೇ ನಿಂತು ಅಜ್ಜಿ ಶಾಲೆಗೆ ಹೋಗಿ ಬರ್ತೀವಿ ಅಂತ ಕೂಗಿ ಹೇಳಿ ಹೋಗುತ್ತಿದ್ದೆವು, ಅಜ್ಜಿಗೆ ಕೇಳಿಸಿದರೆ ಆಯ್ತು ಅಂತ ಹೇಳುವುದು ಇಲ್ಲದಿದ್ದರೆ ತೋಟದ ಹತ್ತಿರ ಹೋಗಿದ್ದರೆ ಏನೂ ಉತ್ತರ ಬರುತ್ತಿರಲಿಲ್ಲ ನಾವು ಒಂದರ್ಧ ಗಳಿಗೆ ಕಾದು  ಮುಂದೆ ಹೋಗುತ್ತಿದ್ದೆವು, ಶಾಲೆಗೆ ತಿಂಡಿ, ಕುಡಿಯುವ ನೀರನ್ನು ಇವತ್ತಿನಂತೆ ಬುತ್ತಿ ತೆಗೆದುಕೊಂಡು ಹೋಗುವ ಪರಿಪಾಠ ಇರಲಿಲ್ಲ, ಶಾಲೆಯಲ್ಲಿ ಕುಡಿಯಲು ನೀರನ್ನೂ ಇಡುತ್ತಿರಲಿಲ್ಲ ಅಂತ ನೆನಪು.

     ಒಮ್ಮೆ ಹೀಗೆ ಶಾಲೆಯಲ್ಲಿ ಆಟಕ್ಕೆಂದು ಬ್ರೇಕ್‌ ಕೊಟ್ಟಾಗ ಅಕ್ಕನ ತರಗತಿಯ  ಹುಡುಗಿ, “ಬಾ ನಮ್ಮ ಮನೆಗೆ ಹೋಗಿ ಬರೋಣ”  ಅಂತ ಮುಸ್ಲಿಂ ಹುಡುಗಿಯರನ್ನ ಹಾಗೂ ಅಕ್ಕನನ್ನು ಕರೆದಳು,  ಎಲ್ಲರೂ ಹೊರಟಾಗ ನಾನೂ ಅವರೊಟ್ಟಿಗೆ ಹೊರಟೆ, ಅವಳು ಮನೆ ಒಳಗೆ ಹೋಗಿ  ಏನೋ ತಿಂದು, ನೀರು ಕುಡಿದು ಹೊರ ಬಂದಳು. ಅಷ್ಟರಲ್ಲಿ ಮುಸ್ಲಿಂ ಹುಡುಗಿಯರಲ್ಲಿ ಒಬ್ಬಳು “ಕುಡಿಯಲು ನೀರು ಕೊಡು” ಅಂತ ಕೇಳಿದಳು, ಅವಳು “ ಸರಿ” ಅಂತ  ಒಳಹೋಗಿ ತಂಬಿಗೆಯಲ್ಲಿ ನೀರು ಹಾಗೂ ಒಂದು ಲೋಟ ತೆಗೆದುಕೊಂಡು ಬಂದು ಲೋಟಕ್ಕೆ ನೀರು ಸುರಿದು ಕೊಟ್ಟಳು, ಅವರು ಒಬ್ಬರಾದ ಮೇಲೆ ಒಬ್ಬರು ಕುಡಿದರು. ನನ್ನ ಅಕ್ಕ ಕೂಡ ಲೋಟಕ್ಕೆ ಕೈ ಒಡ್ಡಿದಳು, ಆದರೆ ಅಕ್ಕನ ಸಹಪಾಠಿ ಮುಸ್ಲಿಂ ಹುಡುಗಿಯ ಕೈಯಿಂದ ಪುಸಕ್ಕನೆ ಲೋಟ ಕಿತ್ತುಕೊಂಡು,  “ನಿಮ್ಮ ಜನಕ್ಕೆ ಲೋಟದಲ್ಲಿ ನೀರು ಕೊಡುವ ಹಾಗಿಲ್ಲ, ಬೊಗಸೆ ಹಿಡಿ ನೀರು ಹಾಕುವೆ”  ಎಂದಳು, ಮುಸ್ಲಿಂ ಹುಡುಗಿಯರು ಗೊಳ್ಳನೆ ನಕ್ಕರು, ಅಕ್ಕನಿಗೆ ಕೂಡ ಅದು ಊಹಿಸಲು ಸಾಧ್ಯವಿರದ ಘಟನೆ. ಆದರೆ ಅದ್ಯಾಕೋ ಅವಳು ಕೈ ಒಡ್ಡಿ ನೀರು ಕುಡಿಯಲ್ಲಿಲ್ಲ. ಅದಕ್ಕೆ ಅವಳ ಸಹಪಾಠಿ “ ಕೈ ಒಡ್ಡಲ್ಲ ಅಂದ್ರೆ ಕೆರೆಯಲ್ಲಿ ಹೋಗಿ ನೀರು ಕುಡಿಯಿರಿ” ಅಂದಳು.

     ನಾವಿಬ್ಬರೂ ಅಲ್ಲಿಂದ ನಡೆದು ಬರುತ್ತಾ ಯಾಕೆ ಹೀಗೆ?, “ ನಿಮ್ಮ ಜನಕ್ಕೆ” ಅಂದರೆ ಏನರ್ಥ, ನಮಗೆ ಯಾಕೆ ಲೋಟದಲ್ಲಿ  ನೀರು ಕೊಡಲ್ಲ, ಹೀಗೆ ಯೋಚಿಸುತ್ತಾ ಅವರೆಲ್ಲರಿಗಿಂತ ಮುಂದೆ ನಡೆದು ಶಾಲೆ  ಸೇರಿದೆವು. ಆದರೆ ಅಕ್ಕನಿಗೆ ನೀರು ಕುಡಿಯಬೇಕಿತ್ತಲ್ಲ, “ ಬಾ ಹಾಗಾದ್ರೆ ಕೆರೆ ಹತ್ತಿರ ಹೋಗಿ ನೀರು ಕುಡಿಯುವಾ” ಅಂತ ಅಂದಳು, ಕೆರೆ ನಮ್ಮ ಶಾಲೆಯ  ತುಸು ಹಿಂಭಾಗದಲ್ಲಿ ಇತ್ತು, ಸರಿ ಅಂತ ಅಲ್ಲಿ ಹೋದರೆ, ಅಲ್ಲಿ ಹಸು, ಎಮ್ಮೆಗಳಿಗೆ ಮೈ ತೊಳೆಯುತ್ತಿದ್ದವ “ಏಯ್‌ ಇಲ್ಲಿ ಯಾಕೆ ಬಂದ್ರಿ”ಅಂತ ಗದರಿದ. “ನೀರು ಕುಡಿಯಲು”ಎಂದಳು ಅಕ್ಕ.

   “ನೀವು ಇಲ್ಲಿ ನೀರು ಕುಡಿಯುವ ಹಾಗಿಲ್ಲ ಅಗೋ ಅಲ್ಲಿ ಆ ಕಡೆ ಕೊನೆಗೆ ಹೋಗಿ” ಅಂದ,

ಸರಿ ಅಂತ ಅಕ್ಕ ಅವನು ತೋರಿಸಿದ ಕಡೆಗೆ ನಡೆದಳು. ತುಸು ದೂರ ನಡೆದರೂ ಒಪ್ಪದ ಆತ “ಅಲ್ಲಲ್ಲ ಇನ್ನೂ ಆ ಕಡೆ” ಅಂತ ನೀರು ಕೋಡಿ ಹರಿದು ಹೋಗುವ ದಂಡೆಯ ಕಡೆಗೆ ಕಳುಹಿಸಿದ . ಆ ಕಡೆ ಸಾಗುತ್ತ ಸಾಗುತ್ತ ಹೇಲು, ಕಕ್ಕಸ್ಸುಗಳ ವಾಸನೆ ಮೂಗಿಗೆ ತಾಗಿ ಹೊಟ್ಟೆ ತೊಳಸಿ ಬಂತು,

“ಥೂ” ಅಂತ ಕೆಳಕ್ಕೆ ಉಗಿದೆ ನಾನು.

 ಅವನು “ ಹಾಂ, ಅಲ್ಲೇ ಅಲ್ಲಿ ನೀರು ಕುಡಿಯಿರಿ” ಅಂದ.

 ನಾನು ಅಕ್ಕನ ಮುಖ ನೋಡಿದೆ ಅವಳಿಗೂ ವಾಂತಿ ಬರುವ ಸೂಚನೆ, ಬಾಯಿ ಹಿಡಿದು ಕೊಂಡು ತಡೆದುಕೊಂಡಿದ್ದಳು,. ಥೂ ಇನ್ನೆಂದೂ ಇಲ್ಲಿ ನೀರು ಕುಡಿಯಬಾರದು ಅಂತ ಅಲ್ಲಿಂದ ಒಂದೇ ಉಸುರಿಗೆ ಓಡಿ ಬಂದು ಶಾಲೆ ಸೇರಿಕೊಂಡೆವು,

ಶಾಲೆ ಮುಗಿದು, ಮನೆಗೆ ಬರುತ್ತಿದ್ದಂತೆ ನಡೆದದ್ದನ್ನ ಅಮ್ಮಂಗೆ ಹೇಳಿ, “ಅಮ್ಮ ಹಿಂಗಾಯ್ತು,  ಅವರು ಏಕೆ ನಮಗೆ ನೀರು ಕುಡಿಯಲು ಲೋಟ ಕೊಡಲ್ಲ, ಬೊಗಸೆ ಹಿಡಿ ಅಂತ ಅಂದ್ಳು,  ಮುಸ್ಲಿಂ ಹುಡುಗಿಯರಿಗೆ ಲೋಟದಲ್ಲಿ ನೀರು ಕೊಟ್ಟರು, ಅವರಿಗಿಂತ ನಾವು ಕಡಿಮೆಯಾ ? ಅಂತ ಕೇಳಿದೆ.

ಅದಕ್ಕೆ ಅಮ್ಮ “ನೀವ್ಯಾಕ್‌ ಹೋಗಿದ್ರಿ ಅವರ ಮನೆಗೆ, ಇಷ್ಟು ದಿನ ಇಲ್ಲದಿದ್ದದ್ದು ಇವತ್ತು ಏನು ಬಂತು”, ಅಂತ ನಮ್ಮನ್ನೇ  ಗದರುತ್ತಾ  “ ಹೂಂ, ಮುಸ್ಲಿಮರು  ಈ ದೇಶನ ಆಳಿದ್ದಾರಂತೆ, ನಮ್ಮ ಜನ ದೇಶ ಆಳಿಲ್ವಂತೆ ಅದಕ್ಕೆ”  ಅಂತು ನನಗೆ ತಲೆ ಬುಡ ಅರ್ಥ ಆಗಲಿಲ್ಲ. ಓ ದೇಶ ಆಳಿದವರಿಗೆ  ಲೋಟದಲ್ಲಿ ನೀರು ಕೊಡಬಹುದೇನೋ  ಹಾಗಾದ್ರೆ ನಮ್ಮ ಜನ ಯಾಕೆ ದೇಶ ಆಳಲಿಲ್ಲ ಅಂತ ಯೋಚಿಸುತ್ತಾ ಆಟಕ್ಕೆ ನಡೆದೆ.

*****

ನನ್ನ ಒಂದನೇ ತರಗತಿ ಮುಗಿಯುವ ಹೊತ್ತಿಗೆ ಅಪ್ಪನಿಗೆ ಚಿಕ್ಕ ನಾಯಕನಹಳ್ಳಿಯಿಂದ ತಿಪಟೂರಿಗೆ ವರ್ಗ ಆಗಿತ್ತು ಅಮ್ಮ “ನಾನು ಹೆಣ್ಣು ಮಕ್ಕಳನ್ನ ಓದಿಸಬೇಕು, ಅನು ಈಗ ಐದನೇ ತರಗತಿ , ಅವಳನ್ನ ಒಬ್ಬಳನ್ನೇ ಚಿನಾ ಹಳ್ಳಿಗೆ ಕಳಿಸಲು ಆಗೋಲ್ಲ ತಿಪಟೂರಲ್ಲಿ ಮನೆ ಮಾಡು ಎಲ್ಲರೂ ಅಲ್ಲಿಗೆ ಹೋಗುವಾ ಅಂತ ಒಂದೇ ಸಮನೆ ಹಠ ಹಿಡಿಯಿತು.

ಅಪ್ಪ ಒಲ್ಲದ ಮನಸ್ಸಿನಿಂದ, ಒಪ್ಪಿ ಒಂದು ಮನೆ ಮಾಡಿ ಸಾಮಾನೆಲ್ಲ ಕಟ್ಟಿ ಒಂದು ದಿನ ತಿಪಟೂರಿಗೆ ಕರೆದುಕೊಂಡು ಹೋಯ್ತು.  ರೈಲ್ವೆ ಸ್ಟೇಷನ್‌ ಗೆ ಹತ್ತಿರವಿದ್ದ ಹೆಂಚಿನ ಮನೆ, ಸಾಮಾನೆಲ್ಲ ಮನೆ ಒಳಗೆ ಇಟ್ಟು ಮನೆಯೆಲ್ಲಾ ನೋಡುತ್ತಾ ಅಮ್ಮ ಹಿಂದಿನ ಬಾಗಿಲು ತೆಗೆಯಿತು, ಮನೆ ಹಿಂದಿನ ಚರಂಡಿಯಲ್ಲಿ ನೀರಿನ ಜೊತೆ ಲೆಟ್ರಿನ್‌ ಹರಿದುಕೊಂಡು ಹೋಗುತ್ತಿತ್ತು ಒಂದಷ್ಟು ಅಲ್ಲೇ ನಿಂತಿತ್ತು. ಹೌಹಾರಿದ ಅಮ್ಮ “ಛೀ ಇಂಥ ಮನೆನಾ ನೋಡೋದು, ಬೇರೆ ಒಳ್ಳೆ ಮನೆ ಸಿಗಲಿಲ್ಲವಾ, ನಾನಿಲ್ಲಿ ಇರಲ್ಲ” ಅಂತ ರೇಗಿದಾಗ ಅಪ್ಪ ಕೂಡ ಸಿಟ್ಟಿನಲ್ಲಿ “ನಮ್ಮ ಜನಕ್ಕೆ ಯಾರು ಮನೆ ಕೊಡ್ತಾರೆ ಇಂಥದೇ ಸಿಕ್ಕಿದ್ದು” ಅಂತು.

ಅಮ್ಮ “ಅವೆಲ್ಲ ನನಗೆ ಗೊತ್ತಿಲ್ಲ ನಾನಿಲ್ಲಿ ಇರಲ್ಲ ಬೇರೆ ಮನೆ ಮಾಡಿ ಕರಿ ಬರುತ್ತೀನಿ” ಅಂತ ನಮ್ಮ ಮೂವರ ಕೈಹಿಡಿದು ಒಂದು ಬಟ್ಟೆ ಬ್ಯಾಗು ಹಿಡಿದು ನಡೆದುಕೊಂಡು ಬಸ್‌ ಸ್ಟಾಂಡಿಗೆ ಕರೆದುಕೊಂಡು ಬಂದು ಬಸ್‌ ಹತ್ತಿ ಅಜ್ಜಿ ಮನೆಗೆ ಕರೆದುಕೊಂಡು ಹೋಯಿತು.  ನಮ್ಮ ತೋಟದ ಮನೆಯಲ್ಲಿ ಯಾವುದೇ ಸಾಮಾನು ಇರದ ಕಾರಣ,ಅಜ್ಜಿ ಮನೆಗೆ ನೇರವಾಗಿ ಹೋಗಿದ್ದೆವು. ನಮ್ಮನ್ನು ಕಂಡು,  ಆಶ್ಚರ್ಯ ಹಾಗೂ ಬೇಸರದಿಂದಲೇ, “ ಯಾಕೆ ಏನಾಯ್ತು?” ಅಂತು. ಅಮ್ಮ ಇದ್ದ ವಿಷಯ ಹೇಳಿ ಬಾವಿ ಕಡೆ ನಡೆಯಿತು ಅಜ್ಜಿ ನಿಟ್ಟುಸಿರು ಬಿಡುತ್ತಾ ಅಡಿಗೆ ಮನೆಗೆ ನಡೆಯಿತು.  ನಾವು ಎಂದಿನಂತೆ ಆಟ ಆಡಲು ತೋಟದ ಕಡೆ ಓಡಿದೆವು,

ಅತ್ತ ಸ್ವಲ್ಪ ದಿನಕ್ಕೆ ಶಾಲೆಗಳು ಶುರುವಾದವು, ಯಾವುದೇ ಮನೆ ಸಿಗದ ಕಾರಣ,  ಹೌಸಿಂಗ್‌ ಬೋರ್ಡ್‌ನಲ್ಲಿ ಮನೆ ಮಾಡಿಕೊಂಡು ವಾಸವಿದ್ದ ಅಮ್ಮನ ಅಣ್ಣ ಭೀಮಾಶಂಕರನ ಮನೆಯಲ್ಲಿ  ಒಂದು ತಿಂಗಳ ಮಟ್ಟಿಗೆ ಇರಲು ಅವಕಾಶ ಕೊಟ್ಟ ಕಾರಣ ಅಲ್ಲಿಗೆ ಹೋದೆವು. ನಮ್ಮ ಮನೆ ಸಾಮಾನು ಕೂಡಾ ರೈಲ್ವೇಸ್ಟೇಷನ್‌ ನ ಅದೇ ಮನೆಯಲ್ಲಿತ್ತು. ಒಂದು ತಿಂಗಳು ಕಳೆದರೂ ಅಪ್ಪನಿಗೆ ಒಳ್ಳೆ ಮನೆ ಸಿಗಲಿಲ್ಲ. ಮನೆಗಾಗಿ ಭೀಮ ಶಂಕರ ಮತ್ತು ನಮ್ಮಪ್ಪನ  ಮಧ್ಯೆ ಜಗಳವಾಯಿತು. ಅಪ್ಪ  ರಾತ್ರೋ ರಾತ್ರಿ ವಠಾರದ ಮನೆಯೊಂದನ್ನು ಹುಡುಕೊಂಡು ಬಂತು.  ಅಲ್ಲಿಗೆ ತೆರಳಿದೆವು ಅಲ್ಲಿ ಕೆಲವು ಕಂಡಿಷನ್‌ ಇತ್ತು, ನಾವು ಬಾಗಿಲಿಗೆ ನೀರು ಹಾಕುವ  ಹಾಗಿಲ್ಲ, ಬರೀ ಬಟ್ಟೆಯಲ್ಲಿ ಒರೆಸಿಕೋ ಬೇಕು, ಕಾಮನ್‌ ಟಾಯ್ಲೆಟ್‌, ಅಲ್ಲಿ ಕೂಡ ಲೆಟ್ರಿನ್‌ ಚರಂಡಿಯಲ್ಲೇ  ಹರಿದು ಹೋಗುವುದು ಆದರೆ ಆ ಚರಂಡಿ ನಮಗೆ ಕಾಣದ ಹಾಗೆ ಆಳೆತ್ತರರದ ಗೋಡೆ ಕಟ್ಟಲಾಗಿತ್ತು. ಅಂತೂ ನಮಗೊಂದು ಮನೆ ಸಿಕ್ಕಿತ್ತು,

ಅಷ್ಟು ಹೊತ್ತಿಗೆ ನಮ್ಮನ್ನೆಲ್ಲ ಇಂಗ್ಲಿಷ್‌ ಶಾಲೆಗೆ ಸೇರಿಸಬೇಕು ಅನ್ನುವ ಅಮ್ಮನ ಹಂಬಲದಂತೆ ನನ್ನ ತಮ್ಮನನ್ನ ಠಾಗೂರ್‌ ಶಾಲೆಗೆ ಅಮ್ಮ ಸೇರಿಸಿತ್ತು, ನಾಲ್ಕನೇ ತರಗತಿ ಪಾಸಾಗಿದ್ದ ಅಕ್ಕನ ಟಿಸಿಯನ್ನು ಕೈಗೇ ಕೊಟ್ಟಿದ್ದರಿಂದ ಅಪ್ಪನ ವಿರೋಧದ ನಡುವೆಯೂ ಅವಳನ್ನೂ ಅದೇ ಶಾಲೆಗೆ ಸೇರಿಸಿತ್ತು. ಆದರೆ ನನ್ನ ಟಿಸಿಯನ್ನು ಕೈಗೆ ಕೊಡೆದ ಕಾರಣ ಶಾಲೆಗೆ ಸೇರಿಸಿ ನಂತರ ಪತ್ರ ಬರೆಸಬೇಕಿತ್ತು, ಅಂತೆಯೇ ನನ್ನನ್ನ ಅಪ್ಪ ತನ್ನ ಇಷ್ಟದಂತೆ ಮನೆಗೆ ಹತ್ತಿರದಲ್ಲಿದ್ದ ಸರ್ಕಾರಿ ಶಾಲೆಗೆ ಸೇರಿಸಿತ್ತು.

ಶಾಲೆಯ ಮೊದಲ ದಿನ, ಆಗಲೇ ಕ್ಲಾಸ್‌  ಶುರುವಾಗಿತ್ತು, ತರಗತಿಗೆ ಎಂಟ್ರಿ ಆದ ನನ್ನನ್ನು  ಟೀಚರ್‌ ಕನ್ನಡ ಪಾಠ ಓದಲು ಹೇಳಿದರು ಯಾವ ತಪ್ಪೂ ಇಲ್ಲದೆ ಕನ್ನಡ ಪಾಠ ಓದಿದೆ, ಒಳ್ಳೆಯದು ಚೆನ್ನಾಗಿ ಓದಿದೆ ಎಂದು ಪ್ರಶಂಸಿಸಿ, ಮತ್ತೊಬ್ಬ ಹುಡುಗನಿಗೆ ಪಾಠ ಓದಲು ಹೇಳಿದರು. ಆತ ಕೂಡ ನಿರರ್ಗಳವಾಗಿ ಪಾಠ ಓದಿದ್ದನ್ನು “ನೋಡಿ ಇವರಿಬ್ಬರ ಹಾಗೆ ಪಾಠ ಚೆನ್ನಾಗಿ ಓದುವುದ ಕಲಿಯಿರಿ ಅಂತ ಹೇಳಿದರು. ನಂತರ ಆ ಟೀಚರ್‌ ಹೋಗು ಅಲ್ಲಿ ಕೂತುಕೋ ಅಂತ ಹುಡುಗಿಯರ ಸಾಲುಗಳತ್ತ  ತೋರಿಸಿದರು, ( ಹುಡುಗರು ಒಂದು ಕಡೆ -ಹುಡುಗಿಯರು ಮತ್ತೊಂದು ಕಡೆ ಕುಳಿತಿದ್ದರು), ನಾನು ಅವರತ್ತ ನಡೆಯುತ್ತಿದ್ದ ಹಾಗೆ ಎರಡನೇ ಬೆಂಚಿನ ಹುಡುಗಿಯರು ಕರೆದು ಜಾಗ ಬಿಟ್ಟು ಅವರ ಹತ್ತಿರ ಕೂರಿಸಿಕೊಂಡರು,  ಅವರು ಕೊನೆ ಬೆಂಚಲ್ಲಿ ಕೂತಿರುವ ಒಬ್ಬಳೇ ಒಬ್ಬಳು ಹುಡುಗಿಯನ್ನ ತೋರಿಸಿ ಹೇಳಿದ  ಮಾತು ನನಗೆ ಶಾಕಿಂಗ್‌ ಆಗಿತ್ತು. “ನೋಡು ಅಲ್ಲಿ, ಅವಳು  ಏನಾದ್ರು ಕೊಟ್ಟರೆ ನೀನು ತಿನ್ನಬೇಡ. ಅವಳು ದನದ ಮಾಂಸ ತರ್ತಾಳೆ ಬ್ಯಾಗಲ್ಲಿ ಅವಳನ್ನ ಮುಟ್ಟಿಕೋ ಬೇಡ”

ನಾನು ಅವರು ತೋರಿಸಿದ ಕಡೆ ನೋಡಿದೆ, ಕಪ್ಪಗಿನ ಒಬ್ಬಳು ಹುಡುಗಿ ಇವರ ಮಾತು ಕೇಳಿಸಿದರೂ ಕೇಳಿಸದವಳಂತೆ ನಿರ್ಲಿಪ್ತಳಾಗಿ ಕೂತಿದ್ದಳು. ನ್ನನ್ನನ್ನು ಮತ್ತು ಅವರನ್ನು ಒಂದು ಬಾರಿ ನೋಡಿ ಸುಮ್ಮನಾದಳು .

ನಾನು ಶಾಲೆ ಮುಗಿಸಿ ಮನೆಗೆ ಹೋದ ತಕ್ಷಣ  “ ಅಮ್ಮ ಆ ಹಡುಗಿಯರು ಹಂಗಂದ್ರು, ದನದ ಮಾಂಸನೂ  ತಿಂತಾರ?” ಅಂತ ಕೇಳಿದೆ. ಅಮ್ಮ , “ ಹೂಂ ತಿನ್ನುವವರು ತಿಂತಾರೆ ಆದರೆ ನಾವು ತಿನ್ನೊಲ್ಲ,  ಹೋಗು ಆಟ ಆಡಿಕೋ “ಅಂದಾಗ ನಮ್ಮ ಮನೆಗೆ ಅಪ್ಪ ಕೋಳಿ ಮಾಂಸ, ಮೇಕೆ ಮಾಂಸ , ಮೀನು ತರುತ್ತಿದ್ದುದರಿಂದ ಅವುಗಳನ್ನು ತಿಂದು ಗೊತ್ತಿದ್ದ ನನಗೆ  “ಅಬ್ಬಾ ನಾವು ದನದ ಮಾಂಸ ತಿನ್ನೊಲ್ಲ, ಹಾಗಾಗಿ ಶಾಲೆಯಲ್ಲಿ ನನ್ನನ್ನು ಆ ಹುಡುಗಿಯಂತೆ ದೂರ ಕೂರಿಸಲ್ಲ” ಅಂತ ಮನಸ್ಸು ನಿರಾಳವಾಯಿತು,

ಆದರೆ ಆ ಶಾಲೆಯಲ್ಲಿ ಇರುವಷ್ಟು ದಿನ ನನಗೆ ಯಾರೂ ನಿನ್ನ ಜಾತಿ ಯಾವುದು ಅಂತ ಕೇಳಲಿಲ್ಲ. ನಾನೂ ಕೂಡಾ ಕೊನೇ ಬೆಂಚಿನ ಹುಡುಗಿಯಂತೆ ಕಪ್ಪಗೇ ಇದ್ದರೂ, ಅದಕ್ಕೆ ಕಾರಣ ನಾನು  ಚೆನ್ನಾಗಿ ಓದುತ್ತಿದ್ದುದಾ ಅಥವಾ ನಾನು ತೊಡುತ್ತಿದ್ದ ಉತ್ತಮ ಗುಣಮಟ್ಟದ ಉಡುಪುಗಳಾ” ನನಗೆ ಗೊತ್ತಿಲ್ಲ. (ಆ ಕಪ್ಪಗಿದ್ದ ಕೊನೆ ಬೆಂಚಿನಲ್ಲಿ ಒಬ್ಬಳೇ ಕೂರುತ್ತಿದ್ದ ಹುಡುಗಿ ʼ ಹೊಲೆಯʼ ಜಾತಿಗೆ ಸೇರಿದ್ದವಳು ಅಂತ ಕೆಲ ವರ್ಷಗಳ ಬಳಿಕ ಅವಳ ಅಕ್ಕ ನನ್ನ ಅಕ್ಕನ ಸ್ನೇಹಿತೆಯಾದ ಬಳಿಕ ಗೊತ್ತಾಯಿತು).

ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿಗೆ ಹೋಗಲು ಶುರುಮಾಡಿ ಒಂದು ತಿಂಗಳು ಕಳೇದಿತ್ತು, ಹೌಸಿಂಗ್‌ ಬೋರ್ಡ್‌ನಲ್ಲಿ ಒಂದು ಮನೆ ಬಾಡಿಗೆಗೆ ಸಿಕ್ಕಿ ಅಲ್ಲಿಗೆ ಶಿಫ್ಟ್‌ ಆದೆವು,  ಆ ಮನೆ ಕೊಡಿಸಿದ್ದ ಹೌಸಿಂಗ್‌ ಬೋರ್ಡಿನ ಮೇಲಸ್ತುವಾರಿಯವನು ಕೂಡ ನಮ್ಮ ದೂರದ ನೆಂಟನೇ ಅಂತೆ. ನಮಗೆ ಮನೆ ಕೊಡಿಸಬೇಡ ಅಂತ ಆತನಿಗೆ ನಮ್ಮ ಸೋದರಮಾವ ಭೀಮಾಶಂಕರ ತಿಳಿಸಿದ್ದನಂತೆ, ಆದರೂ ನಮ್ಮ ಮಾವನ ಮಾತನ್ನು ಮೀರಿ ಆತ ನಮಗೆ ಮನೆ ಕೊಡಿಸಿದ್ದ, ಅಂತ ಆಮೇಲೆ ತಿಳಿಯಿತು,

ಎರಡನೆ ತರಗತಿ ಮುಗಿದ ನಂತರ  ಅಮ್ಮ ನನ್ನನ್ನು ಕೂಡ ಠಾಗೂರ್‌ ಶಾಲೆಗೆ ಸೇರಿಸಿತ್ತು, ಅಲ್ಲೂ ಎಲ್ಲ ವಿಷಯ ಕನ್ನಡದಲ್ಲಿತ್ತು, ಇಂಗ್ಲಿಷ್‌  ಮೂರು ಸಬ್ಜೆಕ್ಟ್‌ ಇತ್ತು, ಆ ಶಾಲೆಯಲ್ಲಿ  ಹಿಂದೆ ಇಂಗ್ಲೀಷ್‌ ಮೀಡಿಯಂ ಇತ್ತಂತೆ , ಮಕ್ಕಳಿಗೆ ಕಷ್ಟ ಅಂತ ಇಂಗ್ಲಿಷ್‌  ಮೀಡಿಯಂ ತೆಗೆದು ಈ ಥರ ವಿಷಯಗಳನ್ನು ಮಾತ್ರ ಉಳಿಸಿದ್ದರು, ಎಬಿಸಿಡಿ ಕಲಿಯದ ನಾನು ಓದುವುದು ಹೇಗೆ ಎನ್ನುವುದೇ ದೊಡ್ಡ ಸವಾಲಾಗಿತ್ತು, ಆ ತರಗತಿಯಲ್ಲಿ ನಮ್ಮ ಮನೆ ಹಿಂದುಗಡೆ ಸಾಲಿನಲ್ಲಿ ನಮ್ಮ ಸೋದರಮಾವನ ಮನೆ ಪಕ್ಕಕ್ಕೆ ಇದ್ದ ಗೌಡರ ಫ್ಯಾಮಿಲಿಯ ಕೊನೆ ಮಗಳು ಇದ್ದಳು. ಅವಳ ಊರು ಹಾಸನದ ಹತ್ತಿರ ಮಲ್ಲಾಪುರ. ಓದಲೆಂದು ಅವರ ಅಪ್ಪ ಅವರಿಗೆ ತಿಪಟೂರಿನಲ್ಲಿ  ಮನೆ ಮಾಡಿಕೊಟ್ಟಿದ್ದರು, ಅವಳು ನನ್ನ ನೋಡಿ ಒಂದು ಸಣ್ಣ ಸ್ಮೈಲ್‌ ಕೊಟ್ಟಳು ಅಷ್ಟೆ,  ಆತ್ಮೀಯವಾಗಿ ಏನೂ ಮಾತಡನಾಡಿಸಲಿಲ್ಲ.

ಶಾಲೆಗೆ ಸೇರಿದ ಮಾರನೆ ದಿನ ಟೀಚರ್‌ ಇಂಗ್ಲಿಷ್‌ ಓದಲು ಹೇಳಿದ್ರು, “ನನಗೆ ಎಬಿಸಿಡಿ ಬರಲ್ಲ” ಅಂದೆ, ತರಗತಿಯವರು ಹಹ್ಹಾ ಅಂತ ನಕ್ಕರು, ಮಿಸ್‌ “ಸೈಲೆನ್ಸ್‌” ಅಂತ ಕೂಗಿ, “ ಆಯ್ತು ಕೂತ್ಕೋ ಕ್ಲಾಸ್‌ ಮುಗಿದ ಮೇಲೆ ಎಕ್ಸ್‌ಟ್ರಾ ಕ್ಲಾಸ್‌ ತಗೊಂಡು ಹೇಳಿಕೊಡ್ತೀನಿ ಕಲಿತುಕೋ” ಅಂದರು. ಬಹಳವೇ ಖುಷಿಯಿಂದ “ಆಯ್ತು ಮಿಸ್‌” ಅಂತ ಹೇಳಿ ಕುಳಿತೆ, ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರತಿಮಾ ಅನ್ನುವ ಬಿಳಿ ಜಿರಲೆ ಯಷ್ಟು ಬೆಳ್ಳಗಿದ್ದ ಹುಡುಗಿ ನಗುತ್ತಾ ನಾನು ಕೂಡ ಹೇಳಿಕೊಡತೀನಿ ಅಂದಳು.ನನ್ನ ಖುಷಿ ಇಮ್ಮಡಿಯಾಯತು. ಅದು ಕೋ ಎಜುಕೇಷನ್‌ ಶಾಲೆ,  ಮಾರನೆ ದಿನ ನಮ್ಮ ಬೆಂಚಿನ ಹಿಂದಿನ ಸಾಲಿನಲ್ಲಿ ಕೂತಿದ್ದ ಹುಡುಗ  ಜಿತೇಂದ್ರ ನನ್ನತ್ತ ನೋಡಿ “ಏಯ್‌ ನೀವು ಯಾವ ಜಾತಿ” ಅಂತ ಕೇಳಿದ.

“ ಜಾತಿನಾ, ಹಂಗಂದರೆ ಏನು” ಅಂತ ಕೇಳಿದೆ.

ಅದಕ್ಕೆ ಆತ ಕೈ ತೋರಿಸಿ “ಏಯ್‌ ನೋಡ್ರೋ ಜಾತಿ ಅಂದ್ರೆ ಇವಳಿಗೆ ಗೊತ್ತಿಲ್ಲವಂತೆ” ಅಂತ ನಕ್ಕ.  ಅವನ ಜೊತೆ ಎಲ್ಲ ಹುಡುಗರು ನಕ್ಕರು, ನನಗೆ ಮುಜುಗರವಾದರೂ ಅವರ ಮುಖ ಸುಮ್ಮನೆ ನೋಡುತ್ತಿದ್ದೆ ಅದಕ್ಕೆ ಅವರು ನಾಳೆ ನಿಮ್ಮ ಅಮ್ಮನ್ನ  ಕೇಳಿಕೊಂಡು ಬಾ ಅಂದರು,

ಮನೆಗೆ ಬಂದು ಅಮ್ಮನ್ನ ಕೇಳಿದರೆ ಅಮ್ಮ “ಏಯ್‌ ಯಾವನು ಹಂಗೆ ಕೇಳಿದೋನು, ಗೌಡ್ರು ಅಂತ ಹೇಳೋಗು” ಅಂತು.

ಅಮ್ಮ ಹೇಳಿ ಕೊಟ್ಟಂತೆ ಅವರು ಮಾರನೆ ಬೆಳಿಗ್ಗೆ ಶಾಲೆಯಲ್ಲಿ ಜ್ಞಾಪಕ ಇಟ್ಟುಕೊಂಡು ಕೇಳದ ಜಿತೇಂದ್ರನಿಗೆ  “ ನಾವು ಗೌಡ್ರು” ಅಂತ  ಕೇಳಿದಾಗ ನನ್ನ ಉತ್ತರ ಕೇಳಿ ಆತ, ನಮ್ಮ ಮನೆಯ ಹಿಂದಿನ ಸಾಲಿನ ಹೇಮಳಿಗೆ “ಏಯ್‌ ಇವರು ಗೌಡ್ರೇನೆ?” ಅಂತ ಕ್ಲಾರಿಫಿಕೇಶನ್‌ ಕೇಳಿದ , ಅವಳು ಇಲ್ಲ ಇವರು ನಮ್ಮ ಜಾತಿ ಅಲ್ಲ ಅಂದಳು. ಜಿತೇಂದ್ರನೂ ಗೌಡ ಅಂತ ಆಗ ನನಗೆ ಗೊತ್ತಾಯಿತು. “ ನೋಡ್ರೋ ಇವಳು ಜಾತಿಯನ್ನ ಸುಳ್ಳು ಹೇಳ್ತಿದ್ದಾಳೆ.  ಏಯ್‌ ನಿನ್ನ ಜಾತಿನ ಕರೆಕ್ಟಾಗಿ ಕೇಳಿ ತಿಳಕೋ, ಇನ್ನು ಮೇಲೆ ಹಿಂಗೆ ಸುಳ್ಳು ಜಾತಿ,ಅದರಲ್ಲೂ ಗೌಡ್ರು ಅಂತ ಹೇಳಬೇಡ” ಅಂತ ರೌಡಿ ಥರ ರೋಫ್‌ ಹಾಕಿದ.

ಕಣ್ಣ ಅಂಚಲ್ಲಿ ಬಂದ ನೀರನ್ನ ತಡೆ ಹಿಡಿದುಕೊಂಡೆ. ಎಲ್ಲರೂ ನನ್ನ ಅಣಕಿಸುವ ದೃಷ್ಟಿಯಿಂದ ನೋಡುತ್ತಾ ನಗುತ್ತಿದ್ದರೆ  ನನಗೆ ಈಗ ಏನು ಮಾಡಲಿ ಅಂತ ಗೊತ್ತಾಗದೆ ಅಲ್ಲಿಂದ ಎದ್ದು ಹೋಗುವಷ್ಟು ಧೈರ್ಯವಿಲ್ಲದೇ ಸುಮ್ಮನೆ ಅವಮಾನದಿಂದ ತಲೆ ತಗ್ಗಿಸಿ ಕೂತೆ.  ಅಷ್ಟು ಹೊತ್ತಿಗೆ ಮಿಸ್‌ ಬಂದದ್ದರಿಂದ ಆ ವಿಷಯ ಅಲ್ಲಿಗೆ ನಿಂತಿತು.

 ಸಂಜೆ ಮನೆಗೆ ಹೋಗಿ, ಒಂದೇ ಸಮನೆ ಅಳುತ್ತಾ ಅಮ್ಮನ್ನ “ಯಾಕೆ ಹಾಗೆ ಸುಳ್ಳು ಹೇಳಿದೆ, ನಿನ್ನಿಂದ ನನಗೆ ಎಷ್ಟು ಅವಮಾನ ಆಯ್ತು ಗೊತ್ತಾ. ಅಷ್ಟಕ್ಕೂ ನಮ್ಮ ಜಾತಿ ಯಾವುದು” ಅಂದೆ..

ಅಮ್ಮ  ʼಮಾದಿಗʼ ಅಂತು

“ಹಂಗಂದ್ರೆ ಏನು ಜಾತಿ?” ಅಂತ ಕೇಳಿದೆ.

 “ಅದೂ ಒಂದು ಜಾತಿ,ಈಗ ಗೊತ್ತಾಯ್ತಲ್ಲ ಹೋಗು” ಅಂತ ಗದರಿತು ಅಮ್ಮ.