ಹಿಂದಿ ಹೇರಿಕೆ ವಿರುದ್ದ ಯಾರು ದನಿ ಎತ್ತಬೇಕು?

ಹಿಂದಿ ಹೇರಿಕೆ ವಿರುದ್ದ  ಯಾರು ದನಿ ಎತ್ತಬೇಕು?

ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತ್ರವೇ?

 

ಓದುಗರ ಸಂಪಾದಕೀಯ

-ದಿನೇಶ್‌ ಅಮೀನ್‌ ಮಟ್ಟು

     ಬೇರೆಯವರಿಗೂ ಜವಾಬ್ದಾರಿ ಇದೆಯೇ? ನನಗೆ ತಿಳಿದ ಹಾಗೆ ಹಿಂದಿ ಭಾಷೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನ ಪುರಾತನ ನಿಲುವು ಈಗ ಬದಲಾಗಿದೆ. ಕರ್ನಾಟಕಕ್ಕೆ ನಾಡಧ್ವಜ ಬೇಕೆಂಬ ಕೂಗು ಎದ್ದಾಗ ಪ್ರಾರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಲುವು ಏನಿತ್ತು? ಅದನ್ನು ಆ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಹೇಗೆ ಸಮರ್ಥಿಸಿಕೊಂಡರು?

    ಕೊನೆಗೆ ರಾಹುಲ್ ಗಾಂಧಿಯವರೇ ಭಾಗವಹಿಸಿದ್ದ ಬೆಂಗಳೂರಿನಲ್ಲಿ ನಡೆದ ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣದ ವೇದಿಕೆಯ ಪರದೆಯ ಮೇಲೆ ನಾಡಧ್ವಜವನ್ನು ಹೇಗೆ ಪ್ರದರ್ಶಿಸಲಾಯಿತು. ಈ ಬೆಳವಣಿಗೆಗಳ ಹಿಂದೆ ನಡೆದಿರುವ ವಿದ್ಯಮಾನಗಳಿಗೆ ನಾನು ಪ್ರತ್ಯಕ್ಷ ಸಾಕ್ಷಿ.

   ಈಗ ಕೇಳಬೇಕಾಗಿರುವ ಪ್ರಶ್ನೆ, ಈ ಜವಾಬ್ದಾರಿ ಕೇವಲ ಕಾಂಗ್ರೆಸ್ ಪಕ್ಷದ್ದು ಮಾತ್ರವೇ? ತೆರಿಗೆ ಹಂಚಿಕೆ, ಡಿಲಿಮಿಟೇಷನ್, ಎನ್ಇಪಿ, ಯುಜಿಸಿ ನಿಯಮಗಳಲ್ಲಿ ಬದಲಾವಣೆ …ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಕರ್ನಾಟಕದ ಹಿತಾಸಕ್ತಿ ವಿರುದ್ದ ತೀರ್ಮಾನ ಕೈಗೊಂಡಿರುವುದು    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ.

    ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಸ್ಥಾನದಲ್ಲಿರುವುದು ಕೂಡಾ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು.ರಾಜ್ಯ ಹಿತಾಸಕ್ತಿ ವಿರುದ್ದ ವಿದ್ಯಮಾನಗಳು ಹೊಸ ಬೆಳವಣಿಗೆ ಅಲ್ಲ, ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಕಾಲದಲ್ಲಿಯೂ ನಡೆದಿದೆ, ಪ್ರತಿರೋಧಗಳು ಕೂಡಾ ವ್ಯಕ್ತವಾಗಿವೆ.

     ಆದರೆ ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕ ವಿರೋಧಿ ಕ್ರಮಗಳು ಹೆಚ್ಚುತ್ತಿರುವುದು ಮಾತ್ರವಲ್ಲ ಅದು ಬಿಜೆಪಿಯೇತರ ರಾಜ್ಯ ಸರ್ಕಾರಗಳ ವಿರುದ್ಧದ ಸೇಡಿನ ಕ್ರಮವಾಗಿ ನಡೆಯುತ್ತಿದೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಇದರ ವಿರುದ್ದ ಪಕ್ಷಾತೀತವಾಗಿ ಪ್ರತಿರೋಧಗಳೂ ಕಾಣುತ್ತಿಲ್ಲ.

    ಈ ಅನ್ಯಾಯಗಳ ಹೊರತಾಗಿಯೂ ರಾಜ್ಯದಲ್ಲಿ ನಡೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದ ಮತದಾರರು  ಬಹುಸಂಖ್ಯೆಯಲ್ಲಿ ಬಿಜೆಪಿಯ ಸದಸ್ಯರನ್ನೇ ಆರಿಸಿ ಲೋಕಸಭೆಗೆ ಕಳಿಸಿದ್ದಾರೆ. ( 2019- 17 ಸ್ಥಾನ, 51% ಮತಪ್ರಮಾಣ,  2024 - 17 ಬಿಜೆಪಿ, 2 ಜೆಡಿಎಸ್ - 46%+ 9.6% ಮತಪ್ರಮಾಣ) ಹೆಚ್ಚು ಕಡಿಮೆ ರಾಜ್ಯದ ಅರ್ಧದಷ್ಟು ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತಹಾಕಿದ್ದಾರೆ. ಇವರಿಂದ ಆರಿಸಿ ಬಂದಿರುವ ಸಂಸದರು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ದ ಬಾಯಿ ಬಿಡದಿರುವುದು ಮಾತ್ರವಲ್ಲ ನಿರ್ಲಜ್ಜರಾಗಿ ಕೇಂದ್ರ ಸರ್ಕಾರದ ನಿಲುವುಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರಿಗೆ ಮತ್ತು ಇವರನ್ನು ಆರಿಸಿ ಕಳಿಸಿರುವ ಕನ್ನಡಿಗ ಮತದಾರರಿಗೆ  ಕನ್ನಡ- ಕರ್ನಾಟಕ ಬೇಡವೇ?

    ಸಾಮಾನ್ಯವಾಗಿ ನೆಲ,ಜಲ,ಭಾಷೆಯ ಹಿತಾಸಕ್ತಿಯ ರಕ್ಷಣೆಯ ಪರವಾಗಿ ಗಟ್ಟಿ ದನಿ ಎತ್ತುತ್ತಾ ಬಂದಿರುವುದು ಪ್ರಾದೇಶಿಕ ಪಕ್ಷಗಳು. ಅವುಗಳಿಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಹಂಗು ಇರುವುದಿಲ್ಲ. ಈ ಕಾರಣದಿಂದಾಗಿಯೇ ಇಂದು ಡಿಎಂಕೆ ಮುಂಚೂಣಿಯಲ್ಲಿ ನಿಂತು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವುದು.

  ಕರ್ನಾಟಕದಲ್ಲಿ ಈ ಕೆಲಸ ಮಾಡಬೇಕಾಗಿರುವುದು ಜಾತ್ಯತೀತ ಜನತಾ ದಳ ಎಂಬ ಪ್ರಾದೇಶಿಕ ಪಕ್ಷ ಅಲ್ಲವೇ? ಹೆಚ್ .ಡಿ.ದೇವೇಗೌಡರು ಈ ಇಳಿವಯಸ್ಸಿನಲ್ಲಿಯೂ ರಾಜ್ಯಸಭೆಯಲ್ಲಿ ಸಕ್ರಿಯರಾಗಿದ್ದಾರೆ. ಮಾಜಿ ಪ್ರಧಾನಿ ಮತ್ತು ಮಿತ್ರಪಕ್ಷದ ನಾಯಕರೆನ್ನುವ ಕಾರಣಕ್ಕೆ ಅವರ ಮಾತನ್ನು ಕೂಡಾ ಕೇಂದ್ರ ಸರ್ಕಾರ ತಲೆ ತಗ್ಗಿಸಿ ಕೇಳುತ್ತಿದೆ. ಆದರೆ ಇವರು ಕೂಡಾ ತೆರಿಗೆ ಹಂಚಿಕೆ, ಡಿಲಿಮಿಟೇಷನ್, ಎನ್ ಇಪಿ ಯಲ್ಲಿ ಆಗುತ್ತಿರುವ ಮತ್ತು ಆಗಲಿರುವ ಅನ್ಯಾಯದ ಬಗ್ಗೆ ಸೊಲ್ಲೆತ್ತುವುದಿಲ್ಲ ಯಾಕೆ?

     ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರಿಂದ ಈ ವಿಷಯಗಳ ಬಗ್ಗೆ ಒಂದೇ ಒಂದು ಪೋಸ್ಟ್ ಕಂಡಿಲ್ಲ ಯಾಕೆ?

      ತೆರಿಗೆ ಹಂಚಿಕೆ, ಬರಪರಿಹಾರ, ಡಿಲಿಮಿಟೇಷನ್, ಎನ್ಇಪಿ ವಿಷಯಗಳಲ್ಲಿ  ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ  ವಿರುದ್ದ ಮುಖ್ಯಮಂತ್ರಿಗಳು ಮಾತನಾಡುತ್ತಲೇ ಬಂದಿದ್ದಾರೆ. ತೆರಿಗೆ ಹಂಚಿಕೆಯಲ್ಲಿನ ಅನ್ಯಾಯದ ವಿರುದ್ದ ದೆಹಲಿ ಸಂಸತ್ ಭವನದ ಎದುರಿಗೆ ಹೋಗಿ ಪ್ರತಿಭಟಿಸಿದ್ದಾರೆ. ಇದರ ಬಗ್ಗೆ ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳಲ್ಲಿ ತನ್ನ ಅಭಿಪ್ರಾಯವನ್ನು ದೇಶದ ಮುಂದಿಟ್ಟಿದ್ದಾರೆ. ಹೌದು ಸ್ವಾಮಿ, ಮುಖ್ಯಮಂತ್ರಿಗಳೇ ಖುದ್ದು ಟೈಪ್ ಮಾಡಿದ್ರಾ? ಅವರ ಎಡ್ಮಿನ್ ಗಳು ಮಾಡಿದ್ರಾ? ಅದು ಇಲ್ಲಿ ಚರ್ಚೆಯ ಪ್ರಶ್ನೆ ಅಲ್ಲ.  ಅದು ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಭಿಪ್ರಾಯ ಅಷ್ಟೆ.

ಮೋದಿ ಮತ್ತು ಕುಮಾರಸ್ವಾಮಿಯವರೇನು ಮೊಬೈಲ್ ಕೈಯಲ್ಲಿ ಹಿಡಿದು ಅಕ್ಷರಗಳನ್ನು ಕುಟ್ಟುತ್ತಿದ್ದಾರಾ?

      ಕುಮಾರಸ್ವಾಮಿಯವರು ತನ್ನ ಸೋಷಿಯಲ್ ಮೀಡಿಯಾ ನಿರ್ವಹಣೆಗೆ ದೊಡ್ಡ ತಂಡವನ್ನೆ ಇಟ್ಟಿದ್ದಾರೆ. ಅದರಲ್ಲಿ ಸಾರ್ವಜನಿಕವಾಗಿ ತಮ್ಮನ್ನು ಜಾತ್ಯತೀತರು, ವಿಶ್ವಮಾನವರು ಎಂದು ತಿಳಿದುಕೊಂಡವರಲ್ಲಿ ಬಹಳ ಮಂದಿಯೂ ಅಲ್ಲಿಯೂ ಸಲಹೆಗಾರರು. ಇವರೂ ಒಂದಿಷ್ಟು ಸಲಹೆಗಳನ್ನು ಕೊಟ್ಟು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಪ್ರತಿಭಟನೆಯನ್ನು ಸೋಷಿಯಲ್ ಮೀಡಿಯಾಗಳಲ್ಲಿಯಾದರೂ ಪ್ರತಿರೋಧ ದಾಖಲಿಸಬಹುದಲ್ಲಾ?  ಕನಿಷ್ಠ ಬಹಿರಂಗವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹಿಪಾಕ್ರಟಿಕ್ ನಡವಳಿಕೆಗಳನ್ನು ಪ್ರಶ್ನಿಸಬಹುದಲ್ಲಾ?

     ಇವರೆಲ್ಲ ಯಾಕೆ ಮಾತುಮಾತಿಗೆ ಕೇವಲ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಟ್ಟುಕೊಂಡು ಕ್ಯಾಂಪೇನ್ ಮಾಡುತ್ತಿದ್ದಾರೆ. ಇದು ಕೂಡಾ ಒಂದು ಟೂಲ್ ಕಿಟ್ ನ ಭಾಗವೇ?

    ಕೊನೆಯದಾಗಿ ನಮ್ಮ ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ?

   ತೆರಿಗೆ ಹಂಚಿಕೆ, ಡಿಲಿಮಿಟೇಷನ್, ಬರಪರಿಹಾರ, ಶಿಕ್ಷಣ  ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಅಲ್ಲವೇ? ಇದರ ವಿರುದ್ದ ಇವರು ದನಿ ಎತ್ತಬೇಕಲ್ಲವೇ? ಇವರೆಲ್ಲರೂ ಸೇರಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಸಂಸದರ ಮನೆ ಮುಂದೆ ಕೂತು ಯಾಕೆ ಪ್ರತಿಭಟನೆ ನಡೆಸಬಾರದು? ಇವರು ಯಾಕೆ ತಣ್ಣಗಾಗಿದ್ದಾರೆ?

ಉತ್ತರ ಗೊತ್ತಿದ್ದವರು ತಿಳಿಸಿ.