“ಅವಳು ಅಲ್ಲೇ ಬಿದ್ದಿರಲಿ, ಸಾಯಲಿ ಬಾ…!?
“ಅಯ್ಯೋ ನನ್ನ ವಂಶದ ಕುಡಿ, ಅವನಿಗೆ ಹಿಂಗೆ ಮಾಡಿಬಿಟ್ಯಾ, ಅವನಿಗೆ ಏನಾದ್ರು ಆದ್ರೆ ಏನು ಗತಿ, ನೀನು ಬದುಕಿದ್ದರೆಷ್ಟು ಸತ್ತರೆಷ್ಟು”

ಜೀವದ ಕತೆ
ಕೆ.ಬಿ.ನೇತ್ರಾವತಿ
( ಹಿಂದಿನ ʼ ಕಿನ್ನರಿʼಯಿಂದ)
ನಾವು ಕಾಡೇನಹಳ್ಳಿಯ ತೋಟದಲ್ಲಿದ್ದಾಗ ನಾನು ಇನ್ನೂ ಒಂದನೇ ತರಗತಿ. ನಮ್ಮ ಮನೆಗೆಂದೇ ಬರುತ್ತಿದ್ದ ನೆಂಟರು ಅಂದರೆ ನಮ್ಮ ಮುತ್ತಜ್ಜಿ . ನಮ್ಮ ಅಜ್ಜಿಯ ಅಮ್ಮ. ಅವರ ಊರು ದಂಡಿನಶಿವರ, ಮುತ್ತಜ್ಜಿಗೆ ನಮ್ಮನ್ನ ಕಂಡರೆ ಅದೇನೋ ಪ್ರೀತಿ, ಹಾಗೊಮ್ಮೆ ತೋಟಕ್ಕೆ ಬಂದಾಗ, ಮೂರು ದಿನ ಇದ್ದು ಊರಿಗೆ ಹೊರಟು ನಿಂತಾಗ ನಮ್ಮ ಅಂಗೈ ಹಿಡಿಸುವಷ್ಟು ಕಾಸನ್ನು ತನ್ನ ಅಡಿಕೆಲೆ ಚೀಲದಿಂದ ತೆಗೆದು ನನ್ನ ಕೈಗಷ್ಟು ನನ್ನ ತಮ್ಮನ ಕೈಗಷ್ಟು ಕೊಟ್ಟಿತು.
ಅಜ್ಜಿ ಬಸ್ಸು ಹತ್ತಿದ ನಂತರ , ಆಗಲೇ ಮುಸ್ಸಂಜೆ ಹೊತ್ತು, ಕಾಸನ್ನು ಎಣಿಸಿದೆ ನನ್ನ ಕೈಯಲ್ಲಿ ಜಾಸ್ತಿ ಕಾಸು ಇತ್ತು, ಅಂದರೆ ಹತ್ತು ಪೈಸೆ ಐದು ಪೈಸೆ ನಾಣ್ಯಗಳು, ಬಹುಶಃ ನನ್ನ ತಮ್ಮನ ಕೈಗಿಂತ ನನ್ನ ಕೈ ದೊಡ್ಡದ್ದು ಇದ್ದ ಕಾರಣ ಇರಬಹುದು. ಕೈ ತುಂಬ ಇದ್ದ ಕಾಸನ್ನು ಕಂಡ ನನ್ನ ತಮ್ಮ “ಕೊಡು ನೋಡಿ ಕೊಡುತ್ತೇನೆ” ಎಂದ. “ ಇಲ್ಲ ನಾ ಕೊಡಲ್ಲ” ಅಂದೆ. “ ಇಲ್ಲ ಹಿಂಗೆ ನೋಡಿ ಕೊಟ್ಟು ಬಿಡುತ್ತೀನಿ” ಅಂದ. ಸರಿ ಅಂತ ನನ್ನ ಅಷ್ಟೂ ಕಾಸುಗಳನ್ನು ಅವನಿಗೆ ಕೊಟ್ಟೆ, ಅಷ್ಟೊತ್ತಿಗಾಗಲೇ ಅವನಿಗೆ ಅಜ್ಜಿ ಕೊಟ್ಟಿದ್ದ ಕಾಸನ್ನು ಜೋಬಿಗೆ ಹಾಕಿಕೊಂಡಿದ್ದ ಅವನು, ನನ್ನ ಕಾಸನ್ನು ಕೈಯಲ್ಲಿ ಹಿಡಿದು ನೋಡಿದಂತೆ ಮಾಡಿ ಜೋಬಿಗೆ ಹಾಕಿಕೊಳ್ಳಲು ಹೋದ, ನಾನು ಕೂಡಲೇ ಅವನ ಕೈ ಹಿಡಿದು, “ಕೊಡೋ ಅದು ಅಜ್ಜಿ ನನಗೆ ಕೊಟ್ಟದ್ದು” ಅಂತ ಕಿತ್ತುಕೊಳ್ಳಲು ಹೋದೆ, “ಇಲ್ಲ ನಾ ಕೊಡಲ್ಲ” ಅಂತ ಕೈ ಕಿತ್ತುಕೊಳ್ಳಲು ಹೋದ, ನಾನೂ ರಭಸವಾಗಿ ಕೈ ಮುಷ್ಟಿ ಬಿಡಿಸಿ ಕಾಸು ಕಿತ್ತುಕೊಳ್ಳುವ ರಭಸದಲ್ಲಿ ಅವನು ಕೈ ಕಿತ್ತುಕೊಂಡ ರಭಸಕ್ಕೆ ಹಿಂದಕ್ಕೆ ಬಿದ್ದ, ನಾನೂ ಬಿದ್ದೆ. ಬಿದ್ದ ರಭಸಕ್ಕೆ ಅವನ ತಲೆ ಕಲ್ಲಿಗೆ ಬಡಿದು ತಲೆಯ ಹಿಂಭಾಗ ರಕ್ತ ಹರಿಯಲು ಶುರುವಾಯಿತು. ಅವನ ಅಳು ಕಿರುಚಾಟಕ್ಕೆ ಹೊರ ಬಂದ ಅಮ್ಮ “ಏನಾಯ್ತು” ಅಂತ ಗಾಬರಿ , ಆತಂಕದಿಂದ ಕೇಳಿತು. ಅವನ ಕಡೆ ತೋರಿಸಿ “ಬಿದ್ದ” ಅಂದೆ. ತಮ್ಮನನ್ನು ಎತ್ತಿ ಹಿಡಿದ ಅಮ್ಮನ ಕೈಗೆ ರಕ್ತ ಅಂಟಿತು. ರಕ್ತ ನೋಡಿ ಹೌಹಾರಿದ ಅಮ್ಮ ಅವನನ್ನು ಮನೆಯೊಳಕ್ಕೆ ಕರೆದೊಯ್ದು ಬೆಳಕು ಹಾಕಿ ನೋಡಿ ಸುರಿಯುತ್ತಿದ್ದ ರಕ್ತ ಕಂಡು “ಯಾಕೆ ಗಲಾಟೆ ಮಾಡಿಕೊಂಡ್ರಿ” ಅಂತ ವಿಷಯ ತಿಳಿದು ನನ್ನನ್ನೆ ಬೈಯ್ತು, “ಅವನ ಕೈಗೆ ದುಡ್ಡು ಕೊಟ್ರೆ ಏನಾಗುತ್ತಿತ್ತು, ಈಗ ನೋಡು ಇಷ್ಟು ಹೊತ್ತಲ್ಲಿ ನಾ ಯಾವ ಡಾಕ್ಟರರ ಹತ್ತಿರ ಕರೆದುಕೊಂಡು ಹೋಗಲಿ” ಅಂತ ಅವನ ರಮಿಸಿ ಅರಿಸಿನ ಹಾಕಿ ಮಕಾಡೆ ಮಲಗಿಸಿತು. ಅವನು ಅಳುತ್ತಾ ಅಳುತ್ತಾ ನಿದ್ದೆಗೆ ಜಾರಿದ. ನಿದ್ದೆಯಲ್ಲೂ ಬಿಕ್ಕಳಿಸುತ್ತಲೇ ಇದ್ದ, ನಾನು ಅದನ್ನು ಊಹಿಸಿರಲಿಲ್ಲ, ನನಗೂ ಬೇಜಾರು ಆಗಿತ್ತು, ಅಳು ಕೂಡ ಬಂತು ಚಾಪೆ ಮೇಲೆ ಕೂತು ಅಳುತ್ತಾ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾ ಕುಳಿತಿದ್ದೆ. ಅಕ್ಕ ಯಾರ ಪರವೂ ವಹಿಸದೆ ಇದಕ್ಕೂ ತನಗೂ ಸಂಬಂಧವಿಲ್ಲವೆಂಬಂತೆ ಸುಮ್ಮನೆ ನೋಡುತ್ತಿದ್ದಳು .
ಅಪ್ಪ ಮನೆಗೆ ಬರುವ ಹೊತ್ತಿಗೆ ತುಂಬಾ ಕತ್ತಲಾಗಿತ್ತು, ಬಂದ ತಕ್ಷಣವೇ ಮಲಗಿದ್ದ ಮಗನನ್ನು ಕಂಡು, “ಅವನನ್ಯಾಕೆ ಮಕಾಡೆ ಮಲಗಿಸಿದ್ದೀಯ” ಅಂತು. ಅಮ್ಮ ನಡೆದ ವಿಷಯ ತಿಳಿಸಿತು. ಅಪ್ಪನಿಗೆ ಎಲ್ಲಿತ್ತೋ ಕೋಪ, “ಅಯ್ಯೋ ನನ್ನ ವಂಶದ ಕುಡಿ, ಅವನಿಗೆ ಹಿಂಗೆ ಮಾಡಿಬಿಟ್ಯಾ, ಅವನಿಗೆ ಏನಾದ್ರು ಆದ್ರೆ ಏನು ಗತಿ, ನೀನು ಬದುಕಿದ್ದರೆಷ್ಟು ಸತ್ತರೆಷ್ಟು” ಅಂತ ಬೈಯುತ್ತಾ ನನ್ನ ಒಂದು ಕೈ ಒಂದು ಕಾಲು ಹಿಡಿದು ಅನಾಮತ್ತಾಗಿ ಎತ್ತಿ ತೆರೆದಿದ್ದ ಬಾಗಿಲಿಂದ ನನ್ನನ್ನ ರೊಯ್ಯನೆ ಆಚೆಗೆ ಎಸೆದುಬಿಟ್ಟಿತು!!
ಏನಾಗುತ್ತಿದೆ ಅಂತ ನನಗೆ ಅರ್ಥ ಆಗುವಷ್ಟರಲ್ಲಿ ನಾನು ಆಚೆ ಬಿದ್ದಿದ್ದೆ, ಅಪ್ಪ ನನ್ನನ್ನು ರೊಯ್ಯನೆ ಗೊಂಬೆಯಂತೆ ಬಾಗಿಲಿಂದಾಚೆಗೆ ಎಸೆದಾಗ, ನಾನು ಆಚೆ ಇದ್ದ ಹುಲ್ಲಿನ ಮೆದೆ ಹತ್ತಿರ ಹೋಗಿ ಬಿದ್ದಿದ್ದೆ. ಹುಲ್ಲಿನ ಮೆದೆ ಬದಲು ಕಲ್ಲಿನ ಮೇಲೂ ಗಟ್ಟಿ ನೆಲದ ಮೇಲೋ ಬಿದ್ದಿದ್ದರೆ ಈಗ ಹೀಗೆ ನಿಮ್ಮೆದುರು ಕೂತು ನನ್ನ ಜೀವನ ಚಿತ್ರವನ್ನು ಬರೆದು ಮಂಡಿಸಲು ನಾನೆಂಬ ನಾನು ಇರುತ್ತಲೇ ಇರಲಿಲ್ಲ .
ಹುಲ್ಲಿನ ಮೇಲೆ ಬಿದ್ದ ಕಾರಣಕ್ಕೆ ಏನೂ ಏಟು ಆಗಲಿಲ್ಲ, ಆದರೆ ಮನಸ್ಸಿಗೆ ಆದ ಆಘಾತ ಊಹಿಸಲು ಅಸಾಧ್ಯ, “ಅಯ್ಯೋ ಎಂದು ನನ್ನ ಮನಸ್ಸು ಚೀರಿತು, ಮಗನ ತಲೆಯಲ್ಲಿ ರಕ್ತ ಕಂಡ ಕೂಡಲೇ ಮಗನ ಬಗ್ಗೆ ಇಷ್ಟು ಕಾಳಜಿ ಮಾಡುವ ಅಪ್ಪನಿಗೆ, ಅದೇ ಅಪ್ಪನ ಮಗಳಾದ ನಾನು ಆ ಅಪ್ಪನಿಗೆ ಬೇಡವೇ ಬೇಡ ಅಂತ ಅನಿಸಿ ಹೀಗೆ ನನ್ನನ್ನು ರೊಯ್ಯನೆ ಕಸವನ್ನು ತಿಪ್ಪೆಗೆ ಎಸೆದಂತೆ ಎಸೆದು ಬಿಟ್ಟಿತೇ. ಅಮ್ಮನಿಗಂತೂ ತನ್ನಂತೆಯೇ ಬೆಳ್ಳಗೆ ಹುಟ್ಟಿದ್ದ ಅಕ್ಕನನ್ನು ಕಂಡರೆ ಜಾಸ್ತಿ ಪ್ರೀತಿ, ಅಪ್ಪನಂತೆಯೇ ಕಪ್ಪಗೆ ಇದ್ದ ನನ್ನನು ಕಂಡೆರೆ ಅಪ್ಪನಿಗಾದರೂ ಪ್ರೀತಿ ಇರಬಹುದು ಅಂತ ಅಂದುಕೊಂಡಿದ್ದೆ. ಆದರೆ ಅದೂ ಕೂಡ ಸುಳ್ಳೇ, ಛೇ ನಾನು ಸಾಯಬೇಕಿತ್ತು ಅಂತ ಅನ್ನಿಸಿ ಅಳು ಬಂತು, ಅಂದು ಹುಲ್ಲಿನ ಮೆದೆ ಇಲ್ಲದಿದ್ದರೆ ಖಂಡಿತಾ ನಾನು ಸತ್ತುಹೋಗುತ್ತಿದ್ದೆ.
ಅಮ್ಮ ಆಚೆ ಓಡಿ ಬಂತು. “ಅಯ್ಯೋ ಸದ್ಯ ಏನೂ ಆಗಲಿಲ್ಲವಾ” ಅಂತ ನನ್ನ ಸಮಾಧಾನ ಮಾಡಲು ಬಂದರೆ ಅಪ್ಪ ಅಮ್ಮನನ್ನ ಗದರಿ “ಅವಳು ಅಲ್ಲೇ ಬಿದ್ದಿರಲಿ, ಸಾಯಲಿ ಬಾ, ಅವಳನ್ನ ಒಳಗೆ ಕರೆದರೆ ನೋಡು, ಬಾ ” ಅಂತು. ಅಪ್ಪನ ಕೋಪಕ್ಕೆ ಹೆದರಿ ಅಮ್ಮ ಮನೆಯೊಳಕ್ಕೆ ವಾಪಸ್ಸು ಹೋಯ್ತು, ನನ್ನ ತಮ್ಮನನ್ನ ಅಪ್ಪ ಜತನದಿಂದ ಎಬ್ಬಿಸಿ ಮಾತನಾಡಿಸಿ ಸರಿಯಾಗಿ ಪಕ್ಕಕ್ಕೆ ತಿರುಗಿಸಿ ಮಲಗಿಸಿತು, ಅಕ್ಕ ಎಲ್ಲದಕ್ಕೂ ಮೂಕ ಪ್ರೇಕ್ಷಕಿ ಯಾರ ಪರ ವಹಿಸುತ್ತಿರಲಿಲ್ಲ. ಅಮ್ಮ ಅಪ್ಪನ ಕೋಪ ತಣ್ಣಗಾಗುವವರೆಗೆ ಕಾದಿದ್ದು ನಂತರ ಸುಮಾರು ರಾತ್ರಿ ಹೊತ್ತಿಗೆ ಒಳಗೆ ಕರೆಯಲು ಬಂತು, ಆದರೆ ನಾನು ಬರಲ್ಲ ಅಂತ ಹಠ ಹಿಡಿದೆ. ಅಮ್ಮ ಎರಡೇಟು ಕೊಟ್ಟು ಒಳಗೆ ಕರೆದೊಯ್ತು, ಆ ಕತ್ತಲಲ್ಲಿ ಎಲ್ಲಾದ್ರೂ ಹೋಗಿಬಿಡಬೇಕು ಅನ್ನುವ ಕೋಪ, ಹಠ ಬೇಸರ ನನಗೆ, ಆದರೆ ಧೈರ್ಯ ಸಾಲದು. ಈ ಘಟನೆ ನನ್ನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಇವರಾರಿಗೂ ನಾನು ಬೇಡ, ನಾನು ನನಗೋಸ್ಕರ ಜೀವಿಸಬೇಕಷ್ಟೆ. ಹಾಗಾಗಿ ನಾನು ನನ್ನ ಇಷ್ಟ ಬಂದ ಹಾಗೆ ಜೀವಿಸಬೇಕು, ಇಲ್ಲದಿದ್ದರೆ ಸಾಯಬೇಕು!, ಓಹ್ ಸಾಯಲು ಧೈರ್ಯ ಸಾಲದು ಆದ್ದರಿಂದ ನನಗಿಷ್ಟ ಬಂದ ಹಾಗೆ ನನಗೋಸ್ಕರ ಬದುಕುವಾ ಅಂತ ಮನಸ್ಸು ಹೇಳಿತು. ಆದರೆ ಹಾಗೆ ನಿಜಕ್ಕೂ ಬದುಕುತ್ತಿದ್ದೀಯಾ ಎನ್ನುವ ಪ್ರಶ್ನೆ ಹಾಕಬೇಡಿ.
*****
ನನಗೆ ಸಾಯಲು ಹೆದರಿಕೆ ಆದ ಮತ್ತೊಂದು ಘಟನೆ ಹೀಗಿದೆ.
ನಮ್ಮ ತೋಟದಲ್ಲಿ ಬಾವಿ ತೋಡಿಸುವ ಮುನ್ನ ಜಮೀನನಲ್ಲೆ ಇದ್ದ ಹೊಂಡದ ನೀರು ಕುಡಿಯುತ್ತಿದ್ದೆವು, ಬಾವಿ ತೋಡಿಸಿದಾಗ ನೀರು ಜಿನುಗಲು ಶುರುವಾಗಿತ್ತು, ಬಾವಿಗೆ ಇಳಿಯಲು ಮೆಟ್ಟಿಲು ಕೂಡ ಇತ್ತು, ನಮಗೆ ಬಾವಿ ಹತ್ತಿರ ಹೋಗದಂತೆ ತಾಕೀತು ಮಾಡಿದ್ದರೂ, ಆಟ ಆಡಲೆಂದು ನಾನು ಮತ್ತು ಅಕ್ಕ ಅಲ್ಲಿಗೇ ಹೋದೆವು. ಹತ್ತಿ ಇಳಿದು ಆಟವಾಡುವಾಗ ನಾನು ಕಾಲು ಜಾರಿ ಬಾವಿ ಮಧ್ಯಕ್ಕೆ ಬಿದ್ದೆ. ನೀರು ಅದಾಗಲೇ ಸುಮಾರು ತುಂಬಿತ್ತು. ನಾನು ಏಳ ಹೋದರೆ ಮುಂದಕ್ಕೆ ಕಾಲು ಇಡಲಾಗದೇ ಜಾರಿ ಜಾರಿ ಆಳದ ಮಡುವಿಗೆ ಹೋಗುತ್ತಿದ್ದೆ, ಅಕ್ಕನಿಗೆ ಕೂಡ ಮತ್ತಷ್ಟು ಮುಂದೆ ಬಂದರೆ ಅವಳೂ ಜಾರಿ ನನ್ನ ಥರ ಆಳದ ಮಧ್ಯಕ್ಕೆ ಬಂದು ಬೀಳುವ ತೊಂದರೆ ಇತ್ತು. ಅಕ್ಕ ತನ್ನ ಕೈ ನೀಡಿದರೂ ನನಗೆ ಎಟಕುತ್ತಿಲ್ಲ, ಯಾರಾನ್ನಾದರೂ ಕರೆಯಲು ಹೋಗಲು ಅಕ್ಕನಿಗೆ ಭಯ, ಅವರು ಹೇಳಿದ ಮೇಲೂ ನಾವು ಅಲ್ಲಿ ಆಟ ಆಡಲು ಬಂದಿದ್ದು ಅಂತ ಬೈಸಿಕೊಳ್ಳುವ ಭಯ, ನೀರು ಜಿನುಗಿ ಮತ್ತಷ್ಟು ಜಾಸ್ತಿಯಾಗಿತ್ತು, ಆಕೆ ನಿರಂತರ ಪ್ರಯತ್ನ ಮಾಡಿದಳು, ನಾನೂ ಕೂಡ ಮಲಗಿ ಕಲ್ಲನ್ನು ಕೈನಿಂದ ಒತ್ತಿ ಹಿಡಿದು ದಡಕ್ಕೆ ಬರುವ ಪ್ರಯತ್ನ ಮಾಡಿದೆ. ಹೀಗೆ ನಿರಂತರ ಪ್ರಯತ್ನದಿಂದ ಕಡೆಗೆ ಅವಳ ಕೈಗೆ ಒಂದು ಚೂರು ಕೈ ತಾಗಿ ಅವಳ ಲಂಗ ಹಿಡಿದುಕೊಂಡೆ. ಅಂತೂ ನಾನು ಮೇಲಕ್ಕೆ ಬಂದೆ. ಜೀವ ಉಳಿಸಿಕೊಂಡೆ.
( ಮುಂದಿನ ʼಕಿನ್ನರಿʼಗೆ)