ಅಲ್ಲುಗ ಕೇಬಿಯು ನೆಗಾಡ್ತಾ.., 

ನಾವು ರೈತ ವಿದ್ಯಾರ್ಥಿ ಒಕ್ಕೂಟದಿಂದ ಹಳ್ಳಿ ವಿದ್ಯಾರ್ಥಿಗಳಿಗೆಂದೇ ಏರ್ಪಡಿಸುತ್ತಿದ್ದ ಇಂಗ್ಲಿಷ್ ಗ್ರಾಮರ್ ವಿಶೇಷ ಕೋಚಿಂಗ್ ತರಗತಿಗಳಲ್ಲಿ ಮಾತ್ರ ಅದ್ಭುತವಾಗಿ ಗ್ರಾಮರ್ ಹೇಳಿಕೊಡುತ್ತಿದ್ರು ಕೇಬಿ. ಕಿರಿಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಸ್ತಕದ ಪಾಠ ಮಾಡದೇ ಇದ್ದರೇನು ಇಡೀ ಜಗತ್ತಿಗೆ ಅರ್ಥವಾಗುವಂತ ಪಾಠವನ್ನು ಕೇಬಿ ಮಾಡುತ್ತಿದ್ದರು ಅಂತ ಈಗ ಎಲ್ಲರಿಗೂ ಅರ್ಥವಾಗುತ್ತಿದೆ.

ಅಲ್ಲುಗ ಕೇಬಿಯು ನೆಗಾಡ್ತಾ.., 

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

 

1980-81, ಮೊದಲ ಪಿಯುನಲ್ಲಿ, ನಮಗೆ ಇಂಗ್ಲಿಷ್ ಸಬ್ಜೆಕ್ಟ್ ನಲ್ಲಿ “ಟೇಮಿಂಗ್ ಆಫ್ ದ ಶ್ರೂ” (ಗಯ್ಯಾಳಿಯನ್ನು ಪಳಗಿಸುವುದು ) ಅಂತ ಒಂದು ಪಾಠ ಇತ್ತು. ಕನ್ನಡದಲ್ಲಿ ಚಂಡಿ ಕತೆ ಅಂತೀವಲ್ಲ ಅಂತಾದ್ದು ಅದು, ನಮಗೆ ಆ ಪಾಠ ಮಾಡಿದ್ದು ಕೇಬಿ, ಕೇಬಿ ಅಂದರೆ ಕೆ.ಬಿ.ಸಿದ್ಧಯ್ಯನವರು. ಅದು ಎಷ್ಟು ಚೆನ್ನಾಗಿ ಪದಕ್ಕೆ ಪದ ಇಂಗ್ಲಿಷನ್ನು ಕನ್ನಡದಲ್ಲಿ ಅರ್ಥ ಮಾಡಿಸಿದ್ರು ಅಂದ್ರೆ ಇವತ್ತಿಗೂ ನಾನು ಅವರ ಆ ಪಾಠ ಮಾಡುವ ಶೈಲಿಯನ್ನು ಮರೆತಿಲ್ಲ.

    ಆಗಿನ್ನೂ ಕೇಬಿ ಗಡ್ಡದಲ್ಲಿ ಅಲ್ಲೋ ಇಲ್ಲೋ ಒಂದು ಬಿಳಿ ಕೂದಲು ಇಣುಕುತ್ತಿತ್ತು ಅಷ್ಟೇ, ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅರೆಕಾಲಿಕ ಲೆಕ್ಚರರ್ ಅಗಿದ್ದರು ಅಂತ ಕಾಣುತ್ತೆ, ಸ್ಟಾಂಡ್ ಇಲ್ಲದ , ಕ್ಯಾರಿಯರ್ ಇಲ್ಲದ ಒಂದು ಬೈಸಿಕಲ್ ಹತ್ತಿ ಬರುತ್ತಿದ್ದರು, ಅಲ್ಲೇ ಕಾಲೇಜು ಗೋಡೆಗೆ ಒರಗಿಸಿಬಿಡುತ್ತಿದ್ದರು. ಆಮೇಲೆ ಸಿದ್ದಾರ್ಥ ಕಿರಿಯ ಕಾಲೇಜು ಸೇರಿದರು, ಅಲ್ಲಿ ಇಡೀ ಸೇವೆ ಪೂರ್ತಿ ಪಾಠ ಮಾಡಲೇ ಇಲ್ಲ ಅಂತ ಎಲ್ಲಾರೂ ಹೇಳುತ್ತಿದ್ರು,.

    ಆದರೆ ನಾವು ರೈತ ವಿದ್ಯಾರ್ಥಿ ಒಕ್ಕೂಟದಿಂದ ಹಳ್ಳಿ ವಿದ್ಯಾರ್ಥಿಗಳಿಗೆಂದೇ ಏರ್ಪಡಿಸುತ್ತಿದ್ದ ಇಂಗ್ಲಿಷ್ ಗ್ರಾಮರ್ ವಿಶೇಷ ಕೋಚಿಂಗ್ ತರಗತಿಗಳಲ್ಲಿ ಮಾತ್ರ ಅದ್ಭುತವಾಗಿ ಗ್ರಾಮರ್ ಹೇಳಿಕೊಡುತ್ತಿದ್ರು ಕೇಬಿ. ಕಿರಿಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಸ್ತಕದ ಪಾಠ ಮಾಡದೇ ಇದ್ದರೇನು ಇಡೀ ಜಗತ್ತಿಗೆ ಅರ್ಥವಾಗುವಂತ ಪಾಠವನ್ನು ಕೇಬಿ ಮಾಡುತ್ತಿದ್ದರು ಅಂತ ಈಗ ಎಲ್ಲರಿಗೂ ಅರ್ಥವಾಗುತ್ತಿದೆ.

   ಏನನ್ನು ಹೇಳಬೇಕು ಅನಿಸುತ್ತಿತ್ತೋ ಅದನ್ನು ಹಂಗಂಗೇ ನೇರ ಹೇಳಿಬಿಡುತ್ತಿದ್ದ ಕಾರಣಕ್ಕೋ , ಗುಟ್ಟುಗಳನ್ನು ಹೆಚ್ಚಿಗೆ ಕಾಪಾಡಿಕೊಳ್ಳುತ್ತಿರಲಿಲ್ಲವೆನ್ನುವ ಕಾರಣಕ್ಕೋ ಏನೋ ಕೇಬಿ  “ಏನಯ್ಯಾ ಅವಿವೇಕಿ” ಅಂತಲೇ ನನ್ನನ್ನು ಮಾತನಾಡಿಸುತ್ತಿದ್ದುದು ಅಂತ ಅಂದುಕೊಂಡಿದ್ದೆ. ಅವರ ಆ ಮಾತು ನಿಜವೇ ಅಂತ ಅಂದುಕೊಂಡು ವಿವೇಕಿಯಾಗುವುದು ಹೇಗೆ ಅನ್ನುವ ಕಡೆ ನಾನು ತಲೆಕೆಡಿಸಿಕೊಳ್ಳಲೇ ಇಲ್ಲ, ಅವಿವೇಕಿಯಾಗಿರುವ ಜೊತೆಗೆ ಅವಿಧೇಯನೂ ಆಗಿರುವುದು ಈಗಲೂ ನನಗೆ ಬಹಳ ಇಷ್ಟ. ಆದರೆ ಕೆಲವರ ಎದುರು ವಿಧೇಯನಂತೆ ನಡೆದುಕೊಳ್ಳುತ್ತಿರುತ್ತೇನೆ ಅಷ್ಟೇ.

     ಹೀಗೆ ಕೇಬಿ ಯಾರು ಎನ್ನುವುದು ಗೊತ್ತೇ ಆಗಿರದ ದಿನದಲ್ಲಿ ನನಗೆ ನೇರ ಪಾಠ ಮಾಡಿದ ಗುರುವಾಗಿ ಪರಿಚಯವಾದ ಕೇಬಿ ಸಿದ್ದಯ್ಯನವರನ್ನು , ಎರಡು ಮೂರು ವರ್ಷಗಳ ನಂತರ ಐದಾರು ವರ್ಷ ವಿದ್ಯಾರ್ಥಿ ಅವಧಿಯಲ್ಲಿ ದಿನವೂ ಅವರ ಉಪ್ಪಾರಹಳ್ಳಿಯ ‘ಬಕಾಲ ಬಯಲು’ ಹೆಸರಿನ ಮನೆಯಲ್ಲಿ  ಭೇಟಿಯಾಗುವ ಅವಕಾಶ ದಕ್ಕಿತು. ಆಗ ಕವಿ ವೀಚಿ, ಕನ್ನಡ ಲೆಕ್ಚರರ್ ಕವಿ,ಲೇಖಕ ಜಿ.ವಿ.ಆನಂದಮೂರ್ತಿ ಕೇಬಿ ಈ ತ್ರಿಕೂಟ ಸಕ್ರಿಯವಾಗಿತ್ತು. ಆಜಾನ್ ಸುಮೆಧೋ ಅವರ ‘ನಾಲ್ಕು ಶ್ರೇಷ್ಟ ಸತ್ಯಗಳು’  ಪುಸ್ತಕವನ್ನು ಚಲನ ಪ್ರಕಾಶನ ಸಹಕಾರಿ ಹೆಸರಿನಲ್ಲಿ ಪ್ರಕಟಿಸಿದರು. ಬಕಾಲವೂ ಆಗಲೇ ಮುದ್ರಣಗೊಂಡಿದ್ದು.

   ಕುಸುಮಬಾಲೆಯ ಮೊದಲ ಓದಿಗೆ ಅಂತ ಬಂದ ದೇವನೂರು ಮಹದೇವ, ಜೊತೆಯಲ್ಲಿ ದಪ್ಪ ನಾಲಗೆಯಲ್ಲಿ ಪದ್ಯ ಓದುತ್ತಿದ್ದ ಆರಡಿ ಎತ್ತರದ ಗುಂಗುರ ಕೂದಲಿನ ಯುವಕ ಹೆಚ್.ಎಸ್.ಶಿವಪ್ರಕಾಶ್, ಕವಿ ರಾಮಚಂದ್ರ ಶರ್ಮರ ದತ್ತು ಪುತ್ರನಂತೆ ಕನ್ನಡವನ್ನು ಇಂಗ್ಲಿಷ್ ತರ ಮಾತಾಡುತ್ತಿದ್ದ ನಟರಾಜ ಹುಳಿಯಾರ್, “ ಅಯ್ಯೋ ಬಡ್ಡೆತ್ತವಾ, ಅದು ಹಂಗಲ್ರ ಕಣ್ರೋ ಅಂತಲೇ ಎಲ್ಲರನ್ನೂ ತಿದ್ದುತ್ತಿದ್ದ ಕೆ.ಎಂ.ಶಂಕರಪ್ಪನವರನ್ನೆಲ್ಲ ಮೊದಲು ಕಂಡದ್ದೇ ಕೇಬಿ ಮನೆ ಅಂಗಳದಲ್ಲಿ.

1985 ರಲ್ಲಿ ಕೇಬಿ ಜೊತೆ ʼ ಮೀಸಲಾತಿ’ ಕುರಿತ ವಿಚಾರ ಸಂಕಿರಣಕ್ಕೆಂದು ಮೈಸೂರಿಗೆ ಹೋಗಿದ್ದಾಗ, ಅವತ್ತು ರಾತ್ರಿ ದೇವನೂರ ಮಾದೇವರ ನವಿಲು ರಸ್ತೆಯ ಮನೆಯಲ್ಲಿ ಕವಿ ಹೆಚ್.ಗೋವಿಂದಯ್ಯನವರೂ ಕಂಡರು, ಕೇಬಿಯ ಇನಿಷಿಯಲ್ ಕೆ ಅಂದರೆ ಕೆಂಕರೆ, ಬಿ ಅಂದರೆ ಅವರ ಅಪ್ಪನ ಹೆಸರು ಬೈಲಯ್ಯ ಅಲ್ಲ ಕೇಬಿ ಅಂದರೆ ಕೊರಬಾಡು ಪ್ರಿಯ ಸಿದ್ದಯ್ಯ ಎಂಬ ಗುಟ್ಟು ಗೊತ್ತಾಗಿದ್ದೂ ಅವಾಗಲೇ.

    ಪಲ್ಲವಿ ಅದಾಗಲೇ ಹುಟ್ಟಿ ಯೂನಿಫಾರಂ ಹಾಕಿಕೊಂಡು ಸ್ಕೂಲಿಗೆ ಹೋಗುತ್ತಿದ್ದ ದಿನಗಳಲ್ಲಿ ಅನಿ, ಚೈತೂ ಒಬ್ಬರ ಹಿಂದೊಬ್ಬರು ಜನಿಸಿದ ವರ್ಷಗಳವು. ಮನೆಯಲ್ಲಿ ಅಡಿಗೆ ಮಾಡಲು ಕೇಬಿ ಚಿಗಪ್ಪ ಚಂದ್ರಿ ಮತ್ತು ಗಂಗರಾಜಕ್ಕ ನಮಗೆ ಊಟಕ್ಕೆ ಕೊಡಲು ಸಿದ್ದರಿದ್ರೂ ಕೇಬಿ ಮಾತ್ರ ಆಗ ಅಲ್ಲಿ ಸೇರಿದ್ದ ಬಾಲ, ಅರು, ಮೂಕಾಂಬಿಕಾ, ಮಾರುತಿ ಮತ್ತು ನಾನು ಈ ಇವರಲ್ಲಿ ಯಾರಿಗೆ ತುಮಕೂರಿನಲ್ಲಿ ಮನೆ ಇದೆಯೋ ಆವರಿಗೆ ಮುದ್ದೆ ಕೊಡಬೇಡ ಅಂತ ಗದರಿಕೊಂಡರೂ, ಊಟ ಕೊಡುವ ಹೊತ್ತಿಗೆ ಸದ್ದಿಲ್ಲದೇ ಅಲ್ಲಿಂದ ಹೊರಟು , ನಮಗೆಷ್ಟು ಬೇಕೋ ಅಷ್ಟು ಮುದ್ದೆ ನೀಡಿಸಿಕೊಂಡು ಒಂದೇ  ಗಂಗಳದಲ್ಲಿ ಉಣ್ಣುವ ಸ್ವಾತಂತ್ರ ಕೊಟ್ಟು ಬಿಡುತ್ತಿದ್ದ ತಾಯ್ತನದ ಕೇಬಿಯನ್ನು ಮರೆಯಲಾದೀತೇ.

   ಅರು ಬರೆದು ಮುಂದಿಡುತ್ತಿದ್ದ ಪದ್ಯಗಳನ್ನು ಓದಿದಂತೆ ಮಾಡಿ, ಅತ್ಯಂತ ಗಂಭೀರವಾಗಿ ಕುಂತು, “ಐ ಥಿಂಕ್ ಯೂ ಶಲ್ ರೀ ರೈಟ್ ದಿಸ್” ಅಂತ ಹೇಳಿ ವಾಪಸ್ ಕೊಟ್ಟೂ ಕೊಟ್ಟೂ ಕಡೆಗೆ ಅರು ಹತ್ತಾರು ವರ್ಷ ಪದ್ಯ ಬರೆದರೂ ಅವುಗಳನ್ನು ಹೊರಗೆ ಯಾರಿಗೂ ತೋರಿಸದಂತೆ ಮಾಡಿ ಬಿಟ್ಟದ್ದು ಇದೇ ಕೇಬಿಯೇ.

   ಹಿಂಗೆ ಹೇಳುತ್ತಾ ಹೋದರೆ ಮುಗಿಯದೇ ಇರುವಷ್ಟು ನಮ್ಮೊಳಗೆ ಸೇರಿಕೊಂಡಿರುವ ಕೇಬಿ ಏಕಾಏಕಿ ಅಕಾಲದಲ್ಲಿ ಮರೆಯಾದ ದುಕ್ಕ ಅವರ ಸಮಾಧಿಯ ಸುತ್ತ ಇರುವವರಲ್ಲಿ ಎಷ್ಟು ಇದೆಯೋ ಅವರಂತೆ ನಮ್ಮೆಲ್ಲರಲ್ಲೂ ಅಷ್ಟೇ ಪ್ರಮಾಣದಲ್ಲಿದೆ.

   ಕೇಬಿ ಇಲ್ಲಿ ವಿನಾಯಕ ಆಸ್ಪತ್ರೆಯಲ್ಲಿದ್ದಾಗ, ನೋಡಲು ಹೋಗಿ ಸಪ್ಪಗೆ ಮುಖ ಮಾಡಿ ನಿಂತ ನನಗೆ , “ ಇಲ್ಲಾ ಕಣೋ ನನಗೇನೂ ಆಗಿಲ್ಲ” ಅಂತ ಅಂದ ಕೇಬಿ, ಅದಾದ ಕೆಲವೇ ದಿನಗಳಲ್ಲಿ ಅಲ್ಲಿ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಕಣ್ಣ ರೆಪ್ಪೆ ತೆರೆದು ನೋಡಿದರೂ ನೋಡದಂತೆ ನೋವಿನ ಮುಖ ಮಾಡಿದಾಗ ತೀರಾ ಅಯ್ಯೋ ಅನ್ನಿಸಿಬಿಟ್ಟಿತು.

    ಸಿದ್ಧರಾಮಯ್ಯನವರು ಸಿಎಂ ಆದ ಮೇಲೆ ೨೦೧೩-೧೮ರ ಅವಧಿಯಲ್ಲಿ ಹೆಚ್ಚು ಬೆಂಗಳೂರಿಗೆ ಬರುತ್ತಿದ್ದರು ಕೇಬಿ. ಮಲ್ಲೇಶ್ವರ ಎಂಟನೇ ಕ್ರಾಸ್ ಓಲ್ಡ್ ಚಂದೂಸ್‌ನಲ್ಲಿ  ಬೆಳಗಿನ ಹನ್ನೊಂದು ಗಂಟೆಯಿಂದ ಸಂಜೆವರೆಗೂ ದ್ರವ ಧ್ಯಾನದಲ್ಲಿ ಕೂತಿರುತ್ತಿದ್ದ ಕೇಬಿಯನ್ನು ಆಗಾಗ ನಾನು ಮಂಜ ಹೋಗಿ ಸೇರಿಕೊಳ್ಳುತ್ತಿದ್ದೆವು, ಅವರ ಗಲ್ಲೆ ಬಾನಿ ಮಂಜನ ಬಾಯಲ್ಲಿ ಬಂದಷ್ಟು ಚೆನ್ನಾಗಿ ಇನ್ನಾರ ಬಾಯಲ್ಲೂ ಕೇಳಲಾಗಲ್ಲ.

   

      ಐದು ವರ್ಷದ ಹಿಂದೆ ಇದೇ ದಿನ ಇಂತದ್ದೇ ಒಂದು ಶುಕ್ರವಾರ ಕೆಟ್ಟ ಸುದ್ದಿ ಬಂತು, ಶನಿವಾರ ಕೇಬಿಯನ್ನು ಮಣ್ಣು ಮಾಡಿದ ನೆಲದ ಮೇಲೆ ಇದೀಗ ಐದು ವರ್ಷದ ಬಳಿಕ ಒಂದು ಗದ್ದುಗೆಯನ್ನು ಕಟ್ಟಿ, ಹೂವಿಂದ ಅಲಂಕಾರ ಮಾಡಿರುವ ಫೋಟೋಗಳನ್ನು ಫೇಸ್ ಬುಕ್‌ನಲ್ಲಿ  ನೋಡಿದಾಗ, ಹೋದ ತಿಂಗಳು ನಾವು ಕಳೆದುಕೊಂಡ ಜಿಎಂಎಸ್, ಹಿಂಗೇ ನಾಲ್ಕು ವರ್ಷದ ಹಿಂದೆ ಕಳೆದು ಹೋದ ಸೋಮಣ್ಣ ಎಲ್ಲರೂ ನೆನಪಿಗೆ ಬರುತ್ತ ದುಕ್ಕ ಎನ್ನುವುದು ಅಕ್ಷರದಂತೆ ಹರಿದು ಹೋಗುತ್ತಿರುವಾಗ “ಅಲ್ಲುಗ ಕೇಬಿಯು ನೆಗಾಡ್ತಾ…,” “ಅಯ್ಯಾ ಅವಿವೇಕಿಗಳಿರಾ , ನಾನೆಲ್ಲೋ ಹೋಗಿದ್ದೀನಿ, ನಿಮ್ಮೆಲ್ಲರೊಳಗೆ ಇಲ್ವೇನ್ರೋ” ಅಂತ ಅಂದಂತಾಯಿತು.