ಕನಸು ಕೊಲ್ಲದೆ ಕಾಯುತ್ತಿರು ಹುಡುಗಿ

ಕನಸನು ಕೊಲ್ಲದೆ ಕಾಯುತ್ತಿರಬೇಕಲ್ಲವೆ ಲಂಗದ ಹುಡುಗಿ ನೀ ಲಂಗರು ಹಾಕಿ

ಕನಸು ಕೊಲ್ಲದೆ ಕಾಯುತ್ತಿರು ಹುಡುಗಿ

ಡಾ.ವೆಂಕಟೇಶ್ ನೆಲ್ಲುಕುಂಟೆ

ಲೋಹದ ಹಕ್ಕಿ
ಕೊಳ್ಳಿ ದೆವ್ವದ ಬಾಲದ ಚುಕ್ಕಿ

ತುಪ್ಪುಳ ಮಯ್ಯಿ
ಇದ್ದಿಲ ಹೃದಯ
ಹತ್ತೋದಿಲ್ಲ ಥಂಡಿ ಹಿಡಿದಿದೆ
ಎದೆ ಬೆಸೆಯೋದಿಲ್ಲ
ಮೆದೆಯೊಳಗೆಳೆ ಕಾಳೂ ಇಲ್ಲ
ಹಕ್ಕಿ ಹಾರುತಿದೆ ನೋಡಿದಿರಾ

ಹಂಡೇ ಅಂಡು
ದುಂಡಾ ಮುಂಡ
ಗರಗಸ ಕಣ್ಣು
ಮುಳ್ಳಿನ ಕಾಲು
ಹೂಸು ಬಿಟ್ಟರೆ 
ಮುಗಿಲು
ಉಸಿರು ಕಟ್ಟುತ್ತದೆ
ಹಕ್ಕಿ ಹಾರುತಿದೆ ನೋಡಿದಿರಾ

ತನ್ನ ಠೇಂಕಾರಕ್ಕೆ ತಾನೇ ಬೀಗಿ
ಬಣ್ಣದ ಮುಗಿಲು ತನಗೇ ಬಾಗಿ
ತಾನೇ ಲೋಕದ ದೇವರು ಎಂದು
ತನ್ನ ರೋಮಗಳೆ ಜೈ ಜೈ ಎಂದು
ಹಕ್ಕಿ ಹಾರುತಿದೆ ನೋಡಿದಿರಾ

ಬಾಂಬು ತುಂಬಿದ ಹೊಟ್ಟೆ
ದೀಪ ಹಚ್ಚುವುದುಂಟೆ?
ಅದು 
ಉಚ್ಚೆ ಹೊಯ್ದರೆ
ಗಂಗೆ ತುಕ್ಕು ಹಿಡಿಯುವುದುಂಟೆ?
ಕೇಳುವ ಮುದುಕಿಗೆ ಬುದ್ಧಿ ಮಂಕಾದ್ದುಂಟೆ?

ನಾಕ ತೋರುತ್ತಲೆ ನರಕ ಹುಟ್ಟಿಸಿದೆ
ತನ್ನ ಮೆದುಳನು ತಾನೇ ಕೊಂದು
ತನ್ನ ಎದೆಯನು ತಾನೇ ತಿಂದು
ದೆವ್ವದ ಜೊತೆ ಕೂಡಿದ್ದುಕೊಂಡು
ಹುಟ್ಟಿಸಿದೆ ಎಳೆ ಮಕ್ಕಳನು

ಅವು 
ಬೆಳೆಯೋದಿಲ್ಲ
ಬೆಳೆದವರ ಸಹಿಸೋದಿಲ್ಲ
ಕಣ್ಣುಗಳಲ್ಲಿ ತೈಲವೆ ಇಲ್ಲ
ದೀಪ ಕಂಡರೂ ಬದಕೋದಿಲ್ಲ
ಕತ್ತಲು ಬೇಕು
ಬೆತ್ತಲೆಯಾಡಲು
ಹಕ್ಕಿ ಹಾರುತಿದೆ ನೋಡಿದಿರಾ

ಇಂದೇ ತಾನೆ ಗರುಡ ಹುಟ್ಟಿದೆ
ಲೋಹದ ಹಕ್ಕಿಗೆ ಡಿಕ್ಕೀ ಹೊಡೆದು
ಬಣ್ಣದ ಹಕ್ಕಿಗೆ ದಾರಿ ತೋರಲಿದೆ
ಇಂದ್ರನ ಸೀಟನು
ನಚಿಕೇತನು ಕೇಳಿ
ದಾಂಗುಡಿಯಿಡುವನು
ನೋಡುತಿರಿ
ಚಿತ್ರ ಬರೆಯಿರಿ
ಚರಿತ್ರೆ ಬರೆಯಿರಿ
ಲೋಹದ ಹಕ್ಕಿಯ ವಿಷದ ಹೆಜ್ಜೆಗಳ
ಕಡಲಿನ ಬೆಂಕಿಯ ಕತೆಯ ಬರೆಯಿರಿ
ನೋಡಿ ಬೇಕಿದ್ದರೆ;

ಭೃಂಗ ಹಾರಲಿದೆ ದೇವದಾರುವಿಗೆ
ಮನೆ ಮನೆಯಲ್ಲೂ ಯುಗಾದಿ ಹೋಳಿಗೆ
ಸೂರ್ಯ ಸ್ವಪ್ನಕೆ ಹೊಸ ಕೊಂಬು ಮೂಡಲಿದೆ
ಬಾಂಬಿನ ಹೊಟ್ಟೆಗೆ ತುಡುವೆ ಕೂರಲಿದೆ
ಸರಲಿಗೆ ಸ್ವರ ಬರಲಿದೆ ನೋಡುತಿರಿ

ಅದುವರೆಗೆ;

ಕನಸನು ಕೊಲ್ಲದೆ
ಕಾಯುತ್ತಿರಬೇಕಲ್ಲವೆ
ಲಂಗದ ಹುಡುಗಿ
ನೀ
ಲಂಗರು ಹಾಕಿ
****