ನನ್ನ ಜೀವನೇ ವೇಸ್ಟ್ ಅನ್ನಿಸಿದ ದಿನಗಳವು…, ನೇತ್ರಾವತಿ.ಕೆ.ಬಿ
ಎಂ.ಇ ನಲ್ಲಿ ಓದಿ ಚೆನ್ನಾಗಿ ಅಂಕ ತೆಗೆಯಬೇಕು ಅಂತ ತೀರ್ಮಾನಿಸಿದೆ. ಅದನ್ನು ಅಮೆರಿಕಾದಲ್ಲಿ ಮಾಡುವ ಅಂತ ತೀರ್ಮಾನಿಸಿ ಅಪ್ಪ ದುಡ್ಡು ಕೊಡುವ ಬಗ್ಗೆ ಭರವಸೆ ನೀಡಿತ್ತು, ಅದಕ್ಕಾಗಿ ಜಿ.ಆರ್.ಇ ಮತ್ತು ಟೋಫೆಲ್ ಬರೆಯಲು ಓದಲು ಅಭ್ಯಾಸದಲ್ಲಿ ತೊಡಗಿದೆ. ನನಗೆ ನೆನಪಿರುವಂತೆ ಆಗ ಈ ಪರೀಕ್ಷೆಗಳನ್ನು ಚೆನ್ನೈ ಸೆಂಟರ್ ನಲ್ಲಿ ಬರೆಯಬೇಕಿತ್ತು. ಆದರೆ ಮುಂದೆ ನಡೆದ ಘಟನೆಗಳು ನನಗೆ ಅದ್ಯಾವುದನ್ನೂ ಸಾಧಿಸಲು ಬಿಡಲಿಲ್ಲ .

ಜೀವದ ಕತೆ
ಕೆ.ಬಿ.ನೇತ್ರಾವತಿ
ದಾವಣಗೆರೆಯಲ್ಲಿ ನಾನು ಇಂಜಿನಿಯರಿಂಗ್ ಓದಲು ಸೇರಿದಾಗ ನಮ್ಮ ಬಿಡಿಟಿ ಕಾಲೇಜಿಗೆ ಅಂತ ಲೇಡೀಸ್ ಹಾಸ್ಟೆಲ್ ಇರಲಿಲ್ಲ. ಕಾರಣ ಬೆರಳೆಣಿಕೆಯಷ್ಟು ಹುಡುಗಿಯರಿಗಾಗಿ ಹಾಸ್ಟೆಲ್ ಮಾಡುವ ಬಗ್ಗೆ ಸರ್ಕಾರ ಯೋಚಿಸಿರಲಿಲ್ಲ, ದಿನ ಕಳೆದಂತೆ ಹುಡುಗಿಯರ ಸಂಖ್ಯೆ ಹೆಚ್ಚಾದಂತೆ ಮೂರು ಕಡೆ ಮನೆಗಳನ್ನು ಬಾಡಿಗೆಗೆ ಪಡೆದು ಹಾಸ್ಟೆಲ್ ನಡೆಸುತ್ತಿದ್ದರು, ಮೊದಲನೆ ವರ್ಷದವರಿಗೆ ʼಸೋಮಣ್ಣ ಹಾಸ್ಟೆಲ್” ಇದು ಪ್ರೈವೇಟ್ ಹಾಸ್ಟೆಲ್ ಇಲ್ಲಿ ಬೇರೆ ಉದ್ಯೋಗಿಗಳಿಗೂ ಅವಕಾಶ ಇತ್ತು, ಆದರೆ ಮೊದಲನೇ ವರ್ಷದ ಎಲ್ಲ ವಿದ್ಯಾರ್ಥಿನಿಯರಿಗೂ ಸೀಟು ಕೊಟ್ಟ ಮೇಲೆ.
ಎರಡು ಮತ್ತು ಮೂರನೇ ವರ್ಷದವರಿಗೆ ʼಪಾರ್ಕ್ ಹಾಸ್ಟೆಲ್ʼ ಕೊನೆ ವರ್ಷದವರಿಗೆ ʼಕೆಗ್ಗೆರೆ ಹಾಸ್ಟೆಲ್ʼ. (ಮುಂದೆ ಈ ಷರತ್ತು ಸಡಿಲಿಸಲಾಗಿತ್ತು) ಮೆಸ್ ಕಾಲೇಜಿನ ಹತ್ತಿರದ ಕ್ವಾರ್ಟಸ್‌ನ ಒಂದು ಮನೆಯಲ್ಲಿ ಇತ್ತು, ಅಲ್ಲಿ ಹೋಗಿ ತಿಂಡಿ ತಿಂದುಕೊಂಡು ಕಾಲೇಜಿಗೆ ಹೋಗಬೇಕಿತ್ತು, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನ ಒಂದು ಹೆಂಗಸು ಕ್ಯಾರಿಯರ್‌ಗಳಲ್ಲಿ ತಳ್ಳೋ ಗಾಡಿಯಲ್ಲಿ ಇಟ್ಟುಕೊಂಡು ಹಾಸ್ಟೆಲ್‌ಗಳಿಗೆ ತಂದು ಕೊಡುತ್ತಿತ್ತು.
ನಾನು ಮೂರು, ನಾಲ್ಕು, ಐದು ಮತ್ತು ಆರನೇ ಸೆಮಿಸ್ಟರ್‌ನಲ್ಲಿ ಇದ್ದಾಗ ನಾನಿದ್ದದ್ದು ʼಪಾರ್ಕ್ ಹಾಸ್ಟೆಲ್ʼ ನಲ್ಲಿ ಸ್ನಾನಕ್ಕೆ ತಣ್ಣೀರು!, ಕುಡಿಯಲು ನೀರನ್ನು ಬೋರ್‌ವೆಲ್ನಿಂದ ತಂದು ಕುಡಿಯಬೇಕು. ಒಮ್ಮೊಮ್ಮೆ ವಾರವಾದರೂ ನೀರು ಬರುತ್ತಿರಲಿಲ್ಲ. ಆಗೆಲ್ಲಾ ಪಾರ್ಕ್ ಒಳಗಿದ್ದ ಬೋರ್‌ವೆಲ್ ನಿಂದ ನೀರು ತಂದು ಒಂದು ಬಕೆಟ್ ನೀರಿನಲ್ಲಿ ಸ್ನಾನಕ್ಕೆ, ಮತ್ತೊಂದು ಬಕೆಟ್ ತಂದು ಟಾಯ್ಲೆಟ್‌ಗೆ ಬಳಸುತ್ತಿದ್ದೆ, ನಂತರ ಕಾಲೇಜಿಗೆ ಹೋಗಿ ಬಂದ ನಂತರ ಇನ್ನೆರಡು ಬಕೆಟ್ ಅಥವಾ ಬಿಂದಿಗೆ ನೀರು ತಂದು ಉಪಯೋಗಿಸುತ್ತಿದ್ದೆ, ಈ ರೀತಿ ಚಳಿಗಾಲದಲ್ಲಿ ಆದಾಗ ಬೆಳಗ್ಗೆ 6ಕ್ಕೆ ಎದ್ದು ರೆಡಿಯಾಗಿ 7ಕ್ಕೆ ಹಾಸ್ಟೆಲ್ ಬಿಟ್ಟು, ಮೆಸ್ ಹತ್ತಿರ ಹೋಗಿ ತಿಂಡಿ ತಿಂದು, (ಬೇಗ ಹೋಗದಿದ್ದರೆ ರಷ್) ಮತ್ತೆ ಕಾಲೇಜಿಗೆ ಹೋಗಬೇಕು, ಕೊರೆಯುವ ಚಳಿಗಾಲದಲ್ಲಿ ಕೆಲವೊಮ್ಮೆ ತಣ್ಣಿರನ್ನು ಮೈಮೇಲೆ ಹಾಕಿಕೊಳ್ಳಲು ಭಯವಾಗಿ ಮುಖ ತೊಳೆದು ಕಾಲೇಜಿಗೆ ತೆರಳಿದ್ದಿದೆ, ಬಂದ ನಂತರ ಸ್ನಾನ. ನನ್ನ ಸ್ನೇಹಿತೆಯೊಬ್ಬಳು ಅಂದು ಕಾಲೇಜಿನಲ್ಲಿ ತಮಾಷೆ, ನಿಮಗೆ ಗೊತ್ತಾ ಇವತ್ತು ನಾನು ಒಂದೇ ಒಂದು ಚೊಂಬು ನೀರಲ್ಲಿ ಹಲ್ಲುಜ್ಜಿ ಮುಖ ತೊಳೆದು ಕೈಕಾಲು ತೊಳೆದುಕೊಂಡೆ ಎಂದು ಅವಳು ಸ್ವಲ್ಪ ಸೋಬೇರಿ ಅಷ್ಟು ದೂರದಿಂದ ನೀರು ತರಲು ಸಾಧ್ಯವಾಗದೆ ಬೇರೆಯವರು ತಂದ ನೀರನ್ನೆ ಎರವಲು ಪಡೆಯುತ್ತಿದ್ದಳು.
ಇಷ್ಟೆಲ್ಲ ಕಷ್ಟ ಇದ್ದರೂ ವಾರ್ಡನ್ ಅವರನ್ನ ಬಿಸಿನೀರು ಬೇಕೆಂದು ಕೇಳಿದರೆ “ನೋ ನೋ ನೀವು ಬಾಯ್ಲರ್ ಉಪಯೋಗಿಸಕೂಡದು, ಅದು ಹಳೆ ಮಾಡೆಲ್, ಜಾಸ್ತಿ ಬಿಲ್ ಬರುತ್ತೆ ನೀವು ಉಪಯೋಗಿಸಿದರೆ ನಮಗೆ ಬಿಲ್ ನಿಂದ ತಿಳಿಯುತ್ತೆ” ಅಂತ ತಾಕೀತು. ಬೇರೆ ಹಾಸ್ಟೆಲ್ ನಲ್ಲಿ ಬಿಸಿ ನೀರಿನ ಸೌಲಭ್ಯ ಇದೆಯಲ್ಲ ಹೊಸ ಬಾಯ್ಲರ್ ಹಾಕಿಸಿ ಅಂದರೆ “ಹೇಳಿದಷ್ಟು ಕೇಳಬೇಕಷ್ಟೇ, ಅದನ್ನೆಲ್ಲ ನೀವು ಹೇಳುವ ಹಾಗಿಲ್ಲ” ಅಂತ ಜೋರು ಮಾಡಿದ. ನಾವು ವಿಧಿಯಿಲ್ಲದೆ ಒಂದೈದು ಜನ ಬಕೆಟ್‌ಗೆ ಹಾಕುವ ಕಾಯಿಲ್ ತಂದು ನೀರು ಕಾಯಿಸಿಕೊಳ್ಳಲು ಶುರು ಮಾಡಿದೆವು. ಅದನ್ನೆ ಹಲವರು ಎರವಲು ಪಡೆಯುತ್ತಿದ್ರು. ಅಂದಿನ ತಿಂಗಳ ಬಿಲ್ ಜಾಸ್ತಿ ಬಂದಾಗ ವಾರ್ಡನ್ ಬಂದು ಕೇಳಿದ ಯಾರಾದ್ರು ಬಾಯ್ಲರ್ ಉಪಯೋಗಿಸಿದ್ರಾ ಬಿಲ್ ಜಾಸ್ತಿ ಬಂದಿದೆ ಎಲ್ಲರೂ ಮೌನವಾಗಿದ್ದರು ಯಾರೂ ಮಾತಾಡಲ್ವ, ನಿಜ ಹೇಳಿ ಆಮೇಲೆ ಗೊತ್ತಾದ್ರೆ ಹಾಸ್ಟೆಲ್‌ನಿಂದ ಹೊರಗೆ ಹಾಕ್ತೀನಿ” ಅಂತ ಜೋರು ಮಾಡಿದ. “ಇಲ್ಲ ಸರ್ ಕೆಲವರು ಕಾಯಿಲ್ ಉಪಯೋಗಿಸುತ್ತಾರೆ” ಅಂತ ಒಬ್ಬ ಹುಡುಗಿ ಹೇಳಿದಳು ಯಾರು ಅದು ಅಂದಾಗ ಸುಮ್ಮನೆ ನಿಂತಳು ಆತ “ಇದೇ ಕೊನೆ ಮುಂದಿನ ತಿಂಗಳು ಏನಾದ್ರು ಬಿಲ್ ಜಾಸ್ತಿ ಬರಲಿ, ಆಗ ಇದೆ ನಿಮಗೆ ಇನ್ನು ಮುಂದೆ ನೀವು ಕಾಯಿಲ್ ಕೂಡ ಉಪಯೋಗಿಸುವಂತಿಲ್ಲ” ಅಂತ ಹೆದರಿಸಿ ಹೋದ. ಹಾಗಂತ ನಮ್ಮದು ಫ್ರೀ ಹಾಸ್ಟೆಲ್ ಏನಲ್ಲ ಎಲ್ಲಕ್ಕೂ ದುಡ್ಡು ಕಟ್ಟುತ್ತಿದ್ದೆವು ಆದರೆ ಈ ತಾರತಮ್ಯ ಏಕೆ ಎಂದು ನಮಗೆ ತಿಳಿದಿರಲಿಲ್ಲ.
ಕೆಗ್ಗೆರೆ ಹಾಸ್ಟೆಲ್ ನಲ್ಲಿ ಎಲ್ಲಾ ಸೌಲಭ್ಯ ಇತ್ತು ಈ ʼಪಾರ್ಕ್ ಹಾಸ್ಟೆಲ್ʼ ನಲ್ಲಿ ಇದ್ದವರಿಗೆ ಮಾತ್ರ ಈ ತಾರತಮ್ಯ ಇತ್ತು ಎಲ್ಲರೂ ಎಷ್ಟು ಹೊತ್ತಿಗೆ ನಾವೂ ಕೂಡ 7ನೇ ಸೆಮಿಸ್ಟರ್ ಗೆ ಬಂದು ಕೆಗ್ಗೆರೆ ರೆ ಹಾಸ್ಟೆಲ್‌ಗೆ ತೆರಳುತ್ತೇವೆ ಅಂತ ತುದಿಗಾಲಲ್ಲಿ ನಿಂತಿದ್ದರು ನನ್ನನ್ನೂ ಸೇರಿಸಿ.
ಹೀಗಿದ್ದಾಗ 3ನೇ ವರ್ಷ, 5ನೇ ಸೆಮಿಸ್ಟರ್, ಒಂದು ದಿನ ನನಗೆ ಬೇಧಿ ಶುರುವಾಯಿತು. ಏನೋ ಊಟದಲ್ಲಿ ವ್ಯತ್ಯಾಸವಾಗಿರಬೇಕು ಎಂದು ಮಾತ್ರೆ ತೆಗೆದುಕೊಂಡೆ, ಕಾಲೇಜಿಗೆ ಹೋದೆ, ಹೊಟ್ಟೆ ನುಲಿ ತಾಳಲಾಗುತ್ತಿಲ್ಲ. ಒಂದು ಹೆಜ್ಜೆ ಎತ್ತಿ ಇಟ್ಟರೆ, ಬೇಧಿಗೆ ಹೋಗಬೇಕು ಅನ್ನಿಸುತ್ತಿತ್ತು, ಪದೇ ಪದೇ ಟಾಯ್ಲೆಟ್ ಗೆ ತೆರಳಿ ಕಡೆಗೆ ಊಟ ಏನನ್ನೂ ಮಾಡಲಿಲ್ಲ. ಮನೆಗೆ ಪತ್ರ ಬರೆದೆ ನನಗೆ ಹುಶಾರಿಲ್ಲ ಯಾರಾದ್ರು ಬಂದರೆ ಜೊತೆಯಲ್ಲಿ ಬರುತ್ತೇನೆ ಈ ರೀತಿ ಭೇದಿಯಾಗುವಾಗ ಒಬ್ಬಳೆ ಬರಲಾಗದು ಎಂದು, ಮತ್ತೆ ಹಾಸ್ಟೆಲ್‌ಗೆ ಬರುವಾಗ ದಾಳಿಂಬೆ ಹಣ್ಣು ತಂದು ತಿಂದೆ, ಟೀ ಕುಡಿದೆ, ಸ್ನೇಹಿತೆ ಹೇಳಿದಳು ದಾಳಿಂಬೆ ಸಿಪ್ಪೆಯ ಕಷಾಯ ಮಾಡಿ ಕುಡಿ ಅಂದರು ಅದೂ ಮಾಡಿದೆ., 2ನೇ ದಿನ ವಿಪರೀತ ಸುಸ್ತು ಸರಿ ಸ್ನೇಹಿತೆ ಒಟ್ಟಿಗೆ ಡಾಕ್ಟರರ ಬಳಿ ಹೋದೆ. ಅವರು ಹೇಳಿದರು “ನೀರಿನ ಇನ್‌ಫೆಕ್ಷನ್ ಕಾಯಿಸಿದ ನೀರು ಕುಡಿ ಬಿಸಿಯಾದ ಮೃದುವಾದ ಊಟ ಮಾಡಬೇಕು ಜೂಸ್ ಜಾಸ್ತಿ ಕುಡಿಯಬೇಕು, ಸ್ವಲ್ಪ ರೆಸ್ಟ್ ಬೇಕು” ಎಂದು, ಒಂದು ಇಂಜೆಕ್ಷನ್ ನೀಡಿ ಮತ್ತೆ ಮಾರನೆ ದಿನ ಬಂದು ಮತ್ತೊಂದು ಡೋಸೇಜ್ ತೆಗೆದುಕೊಳ್ಳುವಂತೆ ಹೇಳಿ ಕಳಿಸಿದರು, ಬಂದ ತಕ್ಷಣ ಏಕೋ ತುಂಬಾ ನಿತ್ರಾಣವೆನಿಸುತ್ತಿತ್ತು, ಏನನ್ನೂ ತಿನ್ನ ಬೇಕಿನಿಸುತ್ತಿರಲಿಲ್ಲ. ಬಿಸಿ ನೀರು, ಬಿಸಿ ಊಟ, ಜೂಸ್ ಎಲ್ಲಿ ತರುವುದು 2 ಮೈಲಿ ದೂರದ ಮೆಸ್ ಗೆ ತೆರಳಬೇಕು ಇಲ್ಲ ಹೋಟೆಲ್ ನಲ್ಲಿ ಊಟ ಮಾಡಬೇಕು, ಬಿಸಿ ಊಟ ವೆಂದರೆ, ಸರಿ ಹೇಗೋ ಇದ್ದ ಶಕ್ತಿ ಒಗೂಡಿಸಿ ಮನೆಗೆ ಹೋಗಲೇಬೇಕು ಎಂದು ತೀರ್ಮಾನಿಸಿ ಹತ್ತಿರದಲ್ಲೆ ಇದ್ದ ಪೋಸ್ಟ್ ಅಂಡ್ ಟೆಲಿಗ್ರಾಫ್ ಆಫೀಸಿನ ಹತ್ತಿರ ತೆರಳಿ ಟೆಲಿಗ್ರಾಂ ಕೊಟ್ಟೆ . ಆಗ ಅದರಲ್ಲಿ ಇದ್ದ ಆಫ್ಷನ್ ಪ್ರಕಾರ ʼstart immediately’ ಎಂದು
ಇತ್ತ ತಿಪಟೂರಿನಲ್ಲಿ ನನ್ನ ಪತ್ರ ಮತ್ತು ಟೆಲಿಗ್ರಾಂ ಒಂದೇ ಸಲಕ್ಕೆ ಸಿಕ್ಕಿದೆ, ಅಮ್ಮ ನನಗೇನೋ ಆಗಿದೆ ಅವಳು ಇನ್ನು ಬದುಕಿಲ್ಲ ಅದಕ್ಕೇ ಹುಶಾರಿಲ್ಲ ಅಂತ ಪತ್ರ ಬಂದ ನಂತರ ಕೂಡಲೇ ಬನ್ನಿ ಎಂಬ ಸಂದೇಶ ಬಂದಿದೆ , ಅಂತ ಊಹಿಸಿ ಅಳುತ್ತಾ ಗಾಬರಿಯಿಂದ ವೆಹಿಕಲ್ ಮಾಡಿಕೊಂಡು ದಾವಣಗೆರೆಗೆ ಬಂದಾಗ ಸುಮಾರು ಸಂಜೆಯಾಗುತ್ತಿತ್ತು ಅವರು ಬಂದಾಗ, ನನ್ನ ಸ್ನೇಹಿತೆಯರು ಹೇಳಿದರು “ನೋಡು ನಿಮ್ಮ ಮನೆಯವರೆಲ್ಲ ಬಂದಿದಾರೆ ಎದ್ದೇಳು” ಅಂತ ಎಲ್ಲ ಶಕ್ತಿ ಮೈಗೆ ನುಗ್ಗಿ ಬಂದಂತಾಗಿ ಎದ್ದು ಆಚೆ ಓಡಿದೆ. ನನ್ನನ್ನ ನೋಡಿದ ಎಲ್ಲರಿಗೂ ಸಂತಸ ನನಗೆ ಕಾರಣ ತಿಳಿಯದೆ ಯಾಕೆ ವೆಹಿಕಲ್ ಮಾಡಿಕೊಂಡು ಬಂದಿದಾರೆ, ಯಾಕೆ ಅಮ್ಮನ ಮುಖ ಊದಿಕೊಂಡಿದೆ ಹಲವಾರು ಪ್ರಶ್ನೆ, ಯಾರೂ ಹೆಚ್ಚು ಬೈಯಲಿಲ್ಲ. ಸರಿ ವಿಷಯ ತಿಳಿದು ನಡಿ ಬಟ್ಟೆ ತಗೋ ಹೇಗೂ ಗಾಡಿ ಇದೆ ಊರಲ್ಲಿದ್ದು ಸುಧಾರಿಸಿಕೊಂಡು ಬರುವೆಯಂತೆ, ತಕ್ಷಣವೇ ಬಟ್ಟೆ ಬ್ಯಾಗಲ್ಲಿ ತುರುಕಿ ಹೊರಟು ಬಿಟ್ಟೆ,
ತಿಪಟೂರಿನ ಡಾಕ್ಟರ್‌ಗೆ ದಾವಣಗೆರೆ ಡಾಕ್ಟರ್ ಕೊಟ್ಟಿದ್ದ ಇಂಜೆಕ್ಷನ್ ಹೆಸರು ಹೇಳಿದೆ ನನ್ನ ಟೆಸ್ಟ್ ಮಾಡಿ “ಆ ಇಂಜೆಕ್ಷನ್ ನಿನಗೆ ಆ ದಿನ ಸಿಗದೇ ಹೋಗಿದ್ದರೆ ನೀನು ಶಿವನ ಪಾದ ಸೇರುತ್ತಿದ್ದೆ ನಿನಗೆ ಆಯುಸ್ಸು ಇದೆ ಅದಕ್ಕೇ ಏನೂ ಆಗಿಲ್ಲ ಈ ಇನ್ ಫೆಕ್ಷನ್ ಆದವರು ಇಮ್ಮಿಡಿಯೇಟ್ ಔಷಧಿ ಸಿಗದೇ ಹೋಗಿ ಸತ್ತವರೇ ಜಾಸ್ತಿ. ಡೋಸೇಜ್ ತಪ್ಪಿಸದೆ 5 ಇಂಜೆಕ್ಷನ್ ತಗೋ” ಎಂದು ಹೇಳಿ ಕೊಟ್ಟು ಪಥ್ಯ ಹೇಳಿ ಕಳಿಸಿದರು.
ಆಗ ಆಟೋದಲ್ಲಿ ಮನೆಗೆ ಬಂದೆವು ಬಂದರೆ ಎದ್ದು ಓಡಾಡಲು ಕಷ್ಟ ಸುಮ್ಮನೇ ಮನಗಿರಬೇಕು ಎಂದು ಅನ್ನಿಸುವ ಭಾವನೆ. ಬೇಧಿ ಸುಮಾರಿಗೆ ಕಂಟ್ರೋಲಿಗೆ ಬಂದಿತ್ತು , 2 ದಿನದೊಳಗೆ ಬೇಧಿ ನಿಂತಿತು, ಆದ್ರೆ ಮೈಯೆಲ್ಲಾ ನಿಶ್ಯಕ್ತಿಯಿಂದ ನಡೆಯಲೂ ಆಗದ ಸ್ಥಿತಿ ಮನೆಯಲ್ಲಿ ಹೇಳಿದರೆ ಗೇಲಿ ಮಾಡಿದರು. ನೋಡಕ್ಕೆ ಆರಾಮವಾಗಿದ್ದೀಯಾ ಚೆನ್ನಾಗಿ ಊಟ ಮಾಡು ಶಕ್ತಿ ಬರುತ್ತೆ ಅಂತ, ಆದರೆ ನನಗೆ ಒಳಗೆ ಆಗುತ್ತಿದ್ದ ಅನುಭವವೇ ಬೇರೆ ಅವರು ಎಷ್ಟೇ ಬೈದರೂ ಹೀಯಾಳಿಸಿದರೂ, ಎದ್ದು ಓಡಾಡಲು ಮನಸ್ಸು ಒಪ್ಪುತ್ತಿರಲಿಲ್ಲ. ದಿನಗಳೆದಂತೆ ಒಂದಷ್ಟು ದೂರ ನಡೆಯುವ ಶಕ್ತಿ ಬಂದಿತಾದರೂ ದೂರ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕುಸಿದು ಬೀಳುವ ಹಾಗಾಗುತ್ತಿತ್ತು. ದಾವಣಗೆರೆಯಲ್ಲಿ ನಾನು ಹಾಸ್ಟೆಲ್‌ನಿಂದ ಮೆಸ್ ಮೆಸ್ ನಿಂದ ಕಾಲೇಜು ಮತ್ತೆ ಕಾಲೇಜಿನಿಂದ ಹಾಸ್ಟೆಲ್, ನಡೆಯಬೇಕಿತ್ತು, ಇದಕ್ಕೆಲ್ಲಾ ಆಟೋಗೆ ದುಡ್ಡು ಹಾಕಿದರೆ ಹೇಗೆ ಅಪ್ಪ ಹೇಳಿದರು ಈಗಾಗಲೇ 20 ದಿನ ಕಳೀತು, ಇನ್ನೆಷ್ಟು ದಿನ ಮನೇಲಿರುತ್ತಿ, ಹೋಗು ಆಟೋದಲ್ಲೆ ಓಡಾಡು ಅಂದರು ನನಗೇಕೋ ಲೆಕ್ಚರರ್ ಇಲ್ಲದ ಆ ಕಾಲೇಜಿನಲ್ಲಿ ಇನ್ನು ಓದು ಮುಂದುವರಿಸಿದರೆ ಏನೂ ಪ್ರಯೋಜನವಿಲ್ಲವೆಂದೆನಿಸಿತ್ತು. ಸುಮ್ಮನೇ ಸಮಯ ಹಣ ವೇಸ್ಟ್ ಅಂತ ಅಪ್ಪನಿಗೆ ಹೇಳಿದೆ. “ನನಗೆ ಆ ಕಾಲೇಜು ಬೇಡ ಅಲ್ಲಿ ಲೆಕ್ಚರರ್ ಇಲ್ಲದೆ ಓದಲು ತುಂಬಾ ಕಷ್ಟವಾಗುತ್ತಿದೆ. ಸುಮ್ಮನೇ ಫೇಲ್ ಆಗಬೇಕು ಅಷ್ಟೆ ನೀನೇ ಬಂದು ಕಾಲೇಜಿನ ಅಡ್ಮಿಷನ್ ಮಾಡಿಸಿದ್ದರೆ ಕಾಲೇಜು ಛೇಂಜ್‌ಗೆ ಬರೆದುಕೊಡಬಹುದಿತ್ತು. ನೀನು ಹಾಗೆ ಮಾಡಲಿಲ್ಲ. ಮಾಮ ನನಗೆ ಛೇಂಜ್ ಬೇಕು ಅಂತ ಬರೆದು ಕೊಡಲು ಬಿಡಲಿಲ್ಲ. ಮತ್ತೆ ಮೂರನೇ ಸೆಮಿಸ್ಟರ್‌ನಲ್ಲಿ ಮೈಸೂರಿಗೆ ಛೇಂಜ್ ಕೊಡಿಸು. ಅಂದರೆ 15 ಸಾವಿರ ದುಡ್ಡು ಬೇಕು” ಅಂದರೆ ಅದಕ್ಯಾಕೆ ಅಷ್ಟು ದುಡ್ಡು ಅದೇ ಕಾಲೇಜಲ್ಲೆ ಓದು ಅಂದೆ ಈಗ ನೋಡು ನನಗೆ ಅಲ್ಲಿ ಓದಲು ಸಾಧ್ಯವಿಲ್ಲ” ಎಂದೆ. ಕೋಪದಿಂದ ಕೂಗಾಡಿದರೂ, ನೀನು ಈಗಲ್ಲದಿದ್ದರೆ ಇನ್ನೊಂದು ಸೆಮಿಸ್ಟರ್‌ಗಾದರೂ ಹೋಗಿ ಎಕ್ಸಾಮ್ ಬರೆಯಲೇಬೇಕು, ಒಂದು ವರ್ಷ ಕಳೆದ ಮೇಲೆ ಬೇರೆ ಏನು ಓದುತ್ತೀಯಾ, ಸುಮ್ಮನೆ ಇಂಜನಿಯರಿಂಗ್ ಮುಗಿಸಿಕೊಂಡು ಬರಬೇಕು” ಅಂತ ಕೂಗಾಡಿ ಆಚೆ ಹೋದರು, ದುಃಖ ಉಮ್ಮಳಿಸಿ ಬಂತು ಏನೆಲ್ಲಾ ಆಸೆ ಇಟ್ಟುಕೊಂಡಿದ್ದೆ, ಐಎಎಸ್ ಆಗಬೇಕು, ಇಂಜಿನಿಯರ್/ಡಾಕ್ಟರ್ ಆಗಬೇಕು ಅಂತ ಎರಡೂ ಆಗಲಿಲ್ಲ . ಈಗ ಇಂಜಿನಿಯರ್ ಆಗಬೇಕು ಅಂತ ಅದೂ ವೇಸ್ಟ್ ಆಯಿತು ಅನಿಸಿತು, ನನ್ನ ಜೀವನೇ ವೇಸ್ಟ್ ಅನ್ನಿಸಿತು. ನನ್ನ ದುಃಖ ಕಂಡ ಅಕ್ಕ ಹೇಳಿದಳು. ಸುಮ್ಮನಿರು ನಿನಗೆ ಏನು ಆಗುತ್ತೋ ಅದನ್ನು ಓದು ಮುಗಿಸಿ ಮನೆಗೆ ಬಾ ಅಂದರೆ ಕೋರ್ಸ್ ಮುಗಿಸಿ ಮನೆಗೆಬಾ ನಾನಿದ್ದೀನಿ ನಿಮ್ಮನ್ನೆಲ್ಲ ನೋಡಿಕೊಳ್ತೇನೆ ಅಂತ ವಾಗ್ದಾನ ಮಾಡಿದಳು ಅಮ್ಮ ಕೂಡ ದನಿಗೂಡಿಸಿತು, ಇಂಥ ಅಪ್ಪನ ಹತ್ತಿರ ಅವಳು ಈ ಮನೇನ ನಡೆಸಿಕೊಂಡು ಬಂದಿದಾಳೆ ಮುಂದೆ ಕೂಡ ನಡೆಸುತ್ತಾಳೆ ಹೇಗೂ ಡಿಗ್ರಿ ಓದುತ್ತಿದ್ದಾಳೆ ನಂತರ ಎಂಎಸ್ಸಿ ಮಾಡಿ ಲೆಕ್ಚರರ್ ಆಗುತ್ತಾಳೆ ಅಂತ ಹುಮ್ಮಸ್ಸು ತುಂಬಿ ಬೇಕಾದ್ರೆ ಈ ಸೆಮಿಸ್ಟರ್ ಬಿಟ್ಟು ಬಿಡು ಮನೇೆಲಿ ರೆಸ್ಟ್ ತಗೋ, ಮುಂದಿನ ಸೆಮಿಸ್ಟರ್ ಗೆ ಹೋಗಿ ಕೋರ್ಸ್ ಮುಗಿಸಿಕೊಂಡು ಬಾ ಅಂದರು, ಆ ಕ್ಷಣಕ್ಕೆ ಅವರ ಮಾತು ಹಿತವೆನಿಸಿತು, ಆದರೂ ವಿವೇಕ ಹೇಳಿತು ಬೇಡ, ಒಂದು ದು ಸೆಮಿಸ್ಟರ್ ಹಾಳು ಮಾಡಿಕೊಳ್ಳುವುದು ಬೇಡ ಎಂದು. ನಾ ಹೇಳಿದೆ ಹೇಗೂ ಓದಲೇ ಬೇಕು ಅನ್ನುವದು ನಿಮ್ಮ ಇಷ್ಟ ಅಂದರೆ ಈಗಲೇ ಹೋಗುತ್ತೇನೆ ಅಂದೆ ಮನಸ್ಸಿನ ತುಂಬಾ ದುಗುಡ ತುಂಬಿತ್ತು. ಮತ್ತೆ ಇನ್ನೆರಡು ದಿನ ಬಿಟ್ಟು ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ದಾವಣಗೆರೆಗೆ ಹೊರಟು ಬಂದೆ.
ಅದರ ಪ್ರತಿಫಲ ನಾನು ಇಂಜಿನಿಯರಿಂಗ್ ಮುಗಿಸಿಕೊಂಡು ಬಂದೆ, ಆದರೆ ರಿಸಲ್ಟ್ ಸೆಕೆಂಡ್ ಕ್ಲಾಸ್ 58.6 %, ಅಗ್ರಿಗೇಟ್ 57 % ಇತ್ತು. ಫಸ್ಟ್ ಕ್ಲಾಸ್ ಗೆ 1.4% ಕಡಿಮೆ, ಅಷ್ಟಕ್ಕೂ ನಮ್ಮ ಕಾಲೇಜಲ್ಲಿ ಎಲ್ಲಾ ಸರಿಯಾಗಿ ಬರೆದರೂ ಕೂಡ ಇಂಟರ್ನಲ್ಸ್ ನಲ್ಲಿ ಕೈ ಬಿಚ್ಚಿ ಅಂಕ ಕೊಡುತ್ತಿರಲಿಲ್ಲ. ಇದರಿಂದ ನನಗೆ ಹಲವು ಉತ್ತಮ ಸಂಸ್ಥೆಗಳಲ್ಲಿ ಕೆಲಸ ಸಿಗುವುದು ಕಷ್ಟ ಇತ್ತು, ಆದರೂ ಹಲವು ಪಿಎಸ್‌ಯು ಗಳಿಗೆ ಪರೀಕ್ಷೆ ಬರೆದು ಹಾಗೇ ಎಂ.ಇ ನಲ್ಲಿ ಓದಿ ಚೆನ್ನಾಗಿ ಅಂಕ ತೆಗೆಯಬೇಕು ಅಂತ ತೀರ್ಮಾನಿಸಿದೆ. ಅದನ್ನು ಅಮೆರಿಕಾದಲ್ಲಿ ಮಾಡುವ ಅಂತ ತೀರ್ಮಾನಿಸಿ ಅಪ್ಪ ದುಡ್ಡು ಕೊಡುವ ಬಗ್ಗೆ ಭರವಸೆ ನೀಡಿತ್ತು, ಅದಕ್ಕಾಗಿ ಜಿ.ಆರ್.ಇ ಮತ್ತು ಟೋಫೆಲ್ ಬರೆಯಲು ಓದಲು ಅಭ್ಯಾಸದಲ್ಲಿ ತೊಡಗಿದೆ. ನನಗೆ ನೆನಪಿರುವಂತೆ ಆಗ ಈ ಪರೀಕ್ಷೆಗಳನ್ನು ಚೆನ್ನೈ ಸೆಂಟರ್ ನಲ್ಲಿ ಬರೆಯಬೇಕಿತ್ತು. ಆದರೆ ಮುಂದೆ ನಡೆದ ಘಟನೆಗಳು ನನಗೆ ಅದ್ಯಾವುದನ್ನೂ ಸಾಧಿಸಲು ಬಿಡಲಿಲ್ಲ .