ದಿಲ್ಲಿ ಅತಿಕ್ರಮಿಸಲು ಕಾಲು ಶತಮಾನ ತಿಣುಕಿದ ಬಿಜೆಪಿ !
ಆಮ್ ಆದ್ಮಿ ಸರ್ಕಾರದ ಆಡಳಿತ ವಿರೋಧಿ ಅಲೆಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಳತೆಗೋಲು ದಿಲ್ಲಿ ಚುನಾವಣಾ ಫಲಿತಾಂಶ ಎಂದು ಆ ಪಕ್ಷದ ಟಾಪ್ ಲೀಡರ್‌ಗಳು ಹೇಳಿಕೊಳ್ಳುತ್ತಿದ್ದಾರೆ. ಮೋದಿ ಜನಪ್ರಿಯತೆಯನ್ನು ಅರ್ಥ ಮಾಡಿಕೊಳ್ಳಲು ದಿಲ್ಲಿ ಮತದಾರರಿಗೆ ಇಷ್ಟು ದೀರ್ಘ ಕಾಲ ಬೇಕಾಯಿತೇ ಅಂತ ಮಾತ್ರ ಕೇಳಬೇಡಿ.

ಫಲಿತಾಂಶ ವಿಶ್ಲೇಷಣೆ
ಕುಚ್ಚಂಗಿ ಪ್ರಸನ್ನ
ಎಂಟನೇ ಶತಮಾನದಿಂದ ರಾಜರು, ಸುಲ್ತಾನರು, ಮೊಗಲರು ಹಾಗೂ ಬ್ರಿಟಿಷರ ಆಡಳಿತದಲ್ಲಿದ್ದ ಇಡೀ ಇಂಡಿಯಾದ ರಾಜಕೀಯ ಭೂಕಂಪನದ ಕೇಂದ್ರ ಬಿಂದುವಾಗಿರುವ ದಿಲ್ಲಿ ಇವತ್ತು 27 ವರ್ಷಗಳ ನಂತರ ಮತ್ತೆ ಬಿಜೆಪಿ ಕೈ ವಶವಾಗಿದೆ. ನಿವೃತ್ತ ಐಆರ್‌ಎಸ್ ಅಧಿಕಾರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ 10 ವರ್ಷಗಳ ಆಡಳಿತ ಅಂತ್ಯ ಕಂಡಿದೆ. ಸರಳ ಬಹುಮತದ 36 ಸೀಟು ಗೆದ್ದು ಇನ್ನೂ 10-12 ಸೀಟುಗಳನ್ನು ಗೆಲ್ಲುವುದು ಖಚಿತಗೊಳ್ಳುತ್ತಿದ್ದಂತೆ ದಿಲ್ಲಿ ಸಚಿವಾಲಯವನ್ನು ಅಮಿತ್ ಶಾ ಸೀಜ್ ಮಾಡಿಸಿದ್ದಾರೆ. ಮಹತ್ವದ ದಾಖಲೆಗಳೇನಾದರೂ ನಾಪತ್ತೆಯಾಗಿಬಿಟ್ಟರೆ ಎಂಬ ಅತಂಕವಂತೆ ಬಿಜೆಪಿಗೆ, ಪ್ರಜಾಪ್ರಭುತ್ವವನ್ನು ಅಣಕಿಸುವ ಇದೆಂಥ ಕೆಟ್ಟ ಪದ್ದತಿಗೆ ಬಿಜೆಪಿ ನಾಂದಿ ಹಾಡಿದೆ ನೋಡಿ.
ದಿಲ್ಲಿ ಪರಿಪೂರ್ಣ ರಾಜ್ಯವಲ್ಲ, ಇತ್ತ ಕೇವಲ ಮಹಾನಗರಪಾಲಿಕೆಯೂ ಅಲ್ಲ, ಇಲ್ಲಿ ಆಡಳಿತ ನಡೆಸುವ ಸರ್ಕಾರಗಳಿಗೆ ಅಲ್ಲಿನ ಪೊಲೀಸ್ ಹಾಗೂ ಭೂಮಿಯ ಮೇಲೆ ಅಧಿಕಾರವಿಲ್ಲ . ರಾಷ್ಟ್ರ ರಾಜಧಾನಿಯ ಒಂದು ಆಡಳಿತಾತ್ಮಕ ಅಂಗವಷ್ಟೇ ಅಲ್ಲಿನ ವಿಧಾನ ಸಭೆ. ಚುನಾಯಿತ ಸರ್ಕಾರದ ಮೇಲೆ ಲೆಪ್ಟಿನೆಂಟ್ ಗವರ್ನರ್ ದಬ್ಬಾಳಿಕೆ ನಡೆಸಲು ಸಾಕಷ್ಟು ಅವಕಾಶವಿದೆ ಹಾಗೂ ಕಳೆದ ಎರಡು ವರ್ಷಗಳಲ್ಲಿ ಅದೇ ದಿಲ್ಲಿಯ ಪಾರ್ಲಿಮೆಂಟಿನಲ್ಲಿ ಕುಳಿತ ಬಿಜೆಪಿ ಮಾಡಿದ್ದೂ ಅದೇ.
ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ 1952ರಲ್ಲಿ ಒಂದು ಅವಧಿಗೆ ಮಾತ್ರ ದಿಲ್ಲಿ ವಿಧಾನ ಸಭೆಗೆ ಚುನಾವಣೆ ನಡೆದಿತ್ತು. ಆಗ ಇದ್ದದ್ದು ಕೇವಲ ಎಂಟು ಅಸೆಂಬ್ಲಿ ಕ್ಷೇತ್ರಗಳು ಮಾತ್ರ. ಆನಂತರ ದಿಲ್ಲಿ ವಿಧಾನ ಸಭೆಯನ್ನು ರದ್ದು ಮಾಡಲಾಯಿತು. ಅಲ್ಲಿಂದ 1993ರವರೆಗೆ ದಿಲ್ಲಿಯನ್ನು ಕೇಂದ್ರ ಸರ್ಕಾರವೇ ಆಳಿತು ಜೊತೆಗೆ ಎಂಡಿಸಿ ಎಂದು ಕರೆಯಲಾಗುವ ಮಹಾನಗರಪಾಲಿಕೆ ಆಡಳಿತ ನಡೆಸಿತು. ಮತ್ತೆ 1993ರಲ್ಲಿ ದಿಲ್ಲಿಗೆ ವಿಧಾನ ಸಭೆಯ ಸ್ಥಾನ ಮಾನ ನೀಡಲಾಯಿತು. 70 ವಿಧಾನ ಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದವು.
1993ರಲ್ಲಿ ಬಿಜೆಪಿ ದಿಲ್ಲಿಯಲ್ಲಿಅಧಿಕಾರಕ್ಕೆ ಬಂತು, ಮದನಲಾಲ್ ಖುರಾನಾ ಮೊದಲ ಮೂರು ವರ್ಷ, ಸಾಹಿಬ್ ಸಿಂಗ್ ವರ್ಮಾ ನಂತರದ ಎರಡು ವರ್ಷ ಮುಖ್ಯಮಂತ್ರಿಗಳಾದರು, ಕಡೆಗೆ ಸುಷ್ಮಾ ಸ್ವರಾಜ್ ಕೂಡಾ ದಿಲ್ಲಿಯಲ್ಲಿ ಕೆಲ ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಐದು ವರ್ಷಗಳ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಿಸಿದ ಬಿಜೆಪಿ ದಿಲ್ಲಿಯಲ್ಲಿ ಅತ್ಯಂತ ಕೆಟ್ಟ ಆಡಳಿತ ನೀಡಿತು. ದಿನಕ್ಕೆ ಹತ್ತು ಗಂಟೆ ಕಾಲ ವಿದ್ಯುತ್ ಇರುತ್ತಿರಲಿಲ್ಲ , 1998ರ ವಿಧಾನ ಸಭಾ ಚುನಾವಣೆಯಲ್ಲಿ ವಿದ್ಯುತ್ ಬಿಲ್‌ನಲ್ಲಿ 30 % ರಿಯಾಯಿತಿ ಕೊಡುವುದಾಗಿ ಬಿಜೆಪಿ ಮತದಾರರಿಗೆ ಆಮಿಷ ಒಡ್ಡಿತಾದರೂ ಕಾಂಗ್ರೆಸ್ ಬಹುಮತ ಪಡೆಯಿತು. 1998ರಿಂದ 2013ರವರೆಗೆ ಮೂರು ಅವಧಿ ಕಾಂಗ್ರೆಸ್ ಪಾಲಿಗೆ ದಕ್ಕಿತು. ಉಕ್ಕಿನ ಮಹಿಳೆ ಎಂದು ಹೆಸರಾದ ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿ ಹೆಸರು ಮಾಡಿದರು.
2013ರಲ್ಲಿ ಬಿಜೆಪಿ 31 ಸೀಟುಗಳಲ್ಲಿ ಗೆದ್ದರೂ ಸರಳ ಬಹುಮತ ಬರಲಿಲ್ಲ . ಮೂರು ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಕೇವಲ ಎಂಟು ಸೀಟುಗಳಿಗೆ ಇಳಿಯಿತು. ಅರವಿಂದ ಕೇಜ್ರಿವಾಲ್ ನಾಯಕತ್ವದಲ್ಲಿ 28 ಸೀಟು ಗೆದ್ದಿದ್ದ ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಜೊತೆ ಮೈತ್ರಿ ಸಾಧಿಸಿ 49 ದಿನಗಳ ಅಲ್ಪಾಯುಷಿ ಸರ್ಕಾರ ರಚಿಸಿತು. ನಂತರ ಎರಡು ವರ್ಷ ಪ್ರೆಸಿಡೆಂಟ್ ರೂಲ್ ಹೆಸರಲ್ಲಿ ಬಿಜೆಪಿಯೇ ಆಡಳಿತ ನಡೆಸಿತು.
ಮತ್ತೆ 2015ರ ಚುನಾವಣೆಯಲ್ಲಿ ಆಪ್ 70ರಲ್ಲಿ 67 ಸೀಟುಗಳನ್ನು ಗೆದ್ದು ದಿಲ್ಲಿಯನ್ನು ತನ್ನ ಗುರುತು ಕಸಬರಿಕೆಯಲ್ಲಿ ಗುಡಿಸಿಹಾಕಿಬಿಟ್ಟಿತು. 2020ರ ಚುನಾವಣೆಯಲ್ಲಿ ಬಿಜೆಪಿ ಎಂಟು ಕ್ಷೇತ್ರಗಳನ್ನು ಗೆದ್ದಿತು. ಕಾಂಗ್ರೆಸ್ ಈ ಸಲದಂತೆಯೇ ಶೂನ್ಯ ಸಂಪಾದನೆಗೆ ಸಮಾಧಾನ ಪಟ್ಟುಕೊಂಡಿತು.
ಚುನಾವಣೆಯನ್ನು ಗೆಲ್ಲುವುದನ್ನೇ ವರ್ಷದ 365 ದಿನವೂ ಕಾಯಕವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಈ ಸಲ ದಿಲ್ಲಿಯನ್ನು ಹೇಗಾದರೂ ಗೆದ್ದೇ ತೀರಬೇಕು ಎಂದು ಪಣ ತೊಟ್ಟಂತೆ ವರ್ತಿಸತೊಡಗಿತು. ಇಡಿಯನ್ನು ದುರ್ಬಳಕೆ ಮಾಡಿಕೊಂಡು ಆಮ್ ಆದ್ಮಿ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆಪಾದನೆಗಳನ್ನು ಹೊರಿಸಿ ಒಬ್ಬೊಬ್ಬರನ್ನೇ ಜೈಲಿಗಟ್ಟತೊಡಗಿತು. ಕಡೆಗೆ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡಾ ಜೈಲು ಪಾಲಾದರು.
ಕರ್ನಾಟಕದ ಜನಪ್ರಿಯ ಕಾಂಗ್ರೆಸ್ ಸರ್ಕಾರ 2023ರ ವಿಧಾನ ಸಭಾ ಚುನಾವಣೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿಯಾಗಿ ಬಿಜೆಪಿಯ ಎಲ್ಲ ನಾಯಕರು ತೀವ್ರವಾಗಿ ಗೇಲಿ ಮಾಡುತ್ತಲೇ ಅಲ್ಲಿ ದಿಲ್ಲಿ ವಿಧಾನ ಸಭಾ ಚುನಾವಣೆಗೂ ಅಂತದ್ದೇ ಗ್ಯಾರಂಟಿಗಳನ್ನು ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅಲ್ಲಿ ನಾಲ್ಕು ʼ ಮʼ ಕಾರಗಳ ಆಧಾರದ ಮೇಲೆಯೇ ಬಿಜೆಪಿ 48 ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಚುನಾವಣಾ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಒಂದು ಮಹಿಳೆ, ಎರಡು ಮಧ್ಯಮ ವರ್ಗ, ಮೂರು ಎಂಸಿಡಿ( ದಿಲ್ಲಿ ಮಹಾನಗರ ಪಾಲಿಕೆ) ನಾಲ್ಕು ಮಹಲ್( ಸಿಎಂ ಕೇಜ್ರಿವಾಲ್ ಅವರ ವೈಭವೋಪೇತ ಬಂಗಲೆ- ಇದನ್ನು ಅಮಿತ್‌ಶ ಶೀಶ್ ಮಹಲ್ ಅಂದರೆ ಗಾಜಿನ ಮನೆ ಅಂತ ವ್ಯಂಗ್ಯವಾಡ್ತಾರೆ) 2013ರಲ್ಲಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದಾಗ ಸಾಧಾರಣ ಮಾರುತಿ ಕಾರು ಹಾಗೂ ಪುಟ್ಟ ಮನೆಯಲ್ಲಿ ವಾಸವಿದ್ದ ಕೇಜ್ರಿವಾಲ್ ಕ್ರಮೇಣ ಸರ್ಕಾರದ ಖಜಾನೆಯಿಂದ ಭಾರೀ ಮೊತ್ತ ಖರ್ಚು ಮಾಡಿ ವೈಭವದ ಜೀವನ ನಡೆಸತೊಡಗಿದ್ದಾರೆ ಹಾಗೂ ಭ್ರಷ್ಟರಾಗಿದ್ದಾರೆ ಎಂಬುದು ಬಿಜೆಪಿ ಆಪಾದನೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರದಂತೆಯೇ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದಿಲ್ಲಿಯ ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ ಬರುವ ಮಹಿಳಾ ದಿನಂದಿಂದಲೇ ಪ್ರತಿ ತಿಂಗಳು ತಿಂಗಳಿಗೆ ರೂ. 2500/- ನೀಡುವುದು, ಗರ್ಭಿಣಿಯರಿಗೆ ರೂ. 21,000/- ಮೊತ್ತ ನೀಡುವುದಾಗಿ ಘೋಷಿಸಿಕೊಂಡಿತ್ತು. ಆಪ್ ಸರ್ಕಾರ ಕೂಡಾ ದಿಲ್ಲಿಯ ಎಲ್ಲ ಮಹಿಳೆಯರಿಗೆ ಎಲ್ಲ ಬಗೆಯ ಬಸ್ ಪ್ರಯಾಣ ಉಚಿತವಾಗಿ ನೀಡಿದೆ. ಇದೀಗ ಆಪ್ ಸರ್ಕಾರದ ನೀಡಿರುವ ಉಚಿತ ವಿದ್ಯುತ್, ಉಚಿತ ನೀರು, ಉಚಿತ ಬಸ್ ಪ್ರಯಾಣಗಳನ್ನೂ ಬಿಜೆಪಿಯ ಹೊಸ ಸರಕಾರ ಕೂಡಾ ಮುಂದುವರೆಸದೇ ಅನ್ಯ ಹಾದಿಯಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಪಾಪರ್ ಆಗಿರುವಂತೆ ದಿಲ್ಲಿಯಲ್ಲಿ ಬಿಜೆಪಿ ಸರ್ಕಾರ ಕೂಡಾ ದಿವಾಳಿ ಏಳುವುದಿಲ್ಲವೇ ಎಂಬ ಪ್ರಶ್ನೆಗೆ ನಡ್ಡಾ, ಅಮಿತ್ ಶಾ ಮತ್ತು ಮೋದಿಯೇ ಉತ್ತರಿಸಬೇಕು.
ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಚುನಾವಣಾ ಆಯೋಗವನ್ನು ತಾನು ದುರ್ಬಳಕೆ ಮಾಡಿಕೊಂಡಿಲ್ಲ ಅಂತ ಪ್ರಮಾಣ ಮಾಡಲು ಬಿಜೆಪಿಗೆ ಸಾಧ್ಯವಿಲ್ಲ. ಜೊತೆಗೆ ಆಮ್ ಆದ್ಮಿ ಪಾರ್ಟಿಗೆ ಖಾಯಂ ಓಟು ಹಾಕುವ ಸಾಧ್ಯತೆ ಇದ್ದ ಮತದಾರರ ಸಂಖ್ಯೆಯನ್ನು ಕಡಿತಗೊಳಿಸಿದ್ದು, ದಿಲ್ಲಿಯ ಹೊರಗಿನಿಂದ ನಕಲಿ ಮತದಾರರನ್ನು ಕಡೇ ದಿನದವರೆಗೂ ಅಕ್ರಮವಾಗಿ ಸೇರ್ಪಡೆ ಮಾಡಿದ್ದು, ಮತದಾನದ ಎಲ್ಲ ಮಾಹಿತಿ ಇರುವ ನಮೂನೆ 17 ಸಿ ಅನ್ನು ಪ್ರಕಟಿಸದೇ ಇರುವುದು, ಬಿಜೆಪಿ ಅಕ್ರಮವಾಗಿ ಹಣ ಹಾಗೂ ಅಪಾರ ಪ್ರಮಾಣದ ಉಡುಗೊರೆಗಳನ್ನು ಹಂಚಿದರೂ ತಡೆಯದೇ ಇದ್ದುದು, ಆಮ್ ಆದ್ಮಿ ಹಾಲಿ 62 ಶಾಸಕರಲ್ಲಿ 22 ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಟಿಕೆಟ್ ಕೊಟ್ಟದ್ದು, ಕಾಂಗ್ರೆಸ್ ತನ್ನ ಇಂಡಿಯಾ ಮೈತ್ರಿಕೂಟದ ಪಾಲುದಾರನಾಗಿರುವ ಆಪ್ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳದೆ ಪ್ರತ್ಯೇಕ ಸ್ಪರ್ಧೆಗೆ ಇಳಿದದ್ದೇ ಅಲ್ಲದೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಜ್ರಿವಾಲ್ ವಿರುದ್ದ ಬಿಜೆಪಿಗರಂತೆಯೇ ವೇದಿಕೆಗಳಲ್ಲಿ ನಿಂದಿಸಿದ ಅಂಶಗಳೆಲ್ಲವೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೆರವಾದವು. ದಿಲ್ಲಿಯಲ್ಲೇ ಹನ್ನೆರಡು ವರ್ಷಗಳಿಂದ ಇದ್ದರೂ ದಿಲ್ಲಿ ತನ್ನದಲ್ಲ ಎಂದು ಕೊರಗುತ್ತಿದ್ದ ಬಿಜೆಪಿ ಇನ್ನು ಐದು ವರ್ಷದಲ್ಲಿ ಏನೆಲ್ಲ ಮಾಡಿ ತೋರಿಸಲಿದೆ ಕಾದು ನೋಡದೇ ಅನ್ಯ ಹಾದಿಯಿಲ್ಲ.
ಆಮ್ ಆದ್ಮಿ ಸರ್ಕಾರದ ಆಡಳಿತ ವಿರೋಧಿ ಅಲೆಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಳತೆಗೋಲು ದಿಲ್ಲಿ ಚುನಾವಣಾ ಫಲಿತಾಂಶ ಎಂದು ಆ ಪಕ್ಷದ ಟಾಪ್ ಲೀಡರ್‌ಗಳು ಹೇಳಿಕೊಳ್ಳುತ್ತಿದ್ದಾರೆ. ಮೋದಿ ಜನಪ್ರಿಯತೆಯನ್ನು ಅರ್ಥ ಮಾಡಿಕೊಳ್ಳಲು ದಿಲ್ಲಿ ಮತದಾರರಿಗೆ ಇಷ್ಟು ದೀರ್ಘ ಕಾಲ ಬೇಕಾಯಿತೇ ಅಂತ ಮಾತ್ರ ಕೇಳಬೇಡಿ.