ತಬ್ಬಲಿಯಾದ ಆಡಳಿತ ವಿಕೇಂದ್ರಿಕರಣ
ಪ್ರಸ್ತುತ ನಮ್ಮ ರಾಜ್ಯದಲ್ಲಿ 50 ವರ್ಷಗಳ ಹಿಂದೆ ನಡೆದಂತಹ ರಾಜಕೀಯ ಪ್ರಯೋಗಗಳು ನಡೆಯದಿರುವುದು ರಾಜಕೀಯ ಜಡತ್ವಕ್ಕೆ ಕಾರಣವಾಗಿದೆ. ಚಳವಳಿಗಳು ತಣ್ಣಗಾಗಿವೆ. ರಾಜಕಾರಣಿಗಳು ತಮ್ಮ ಕುಟುಂಬದ ಸದಸ್ಯರ ರಾಜಕೀಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ ರಾಜಕೀಯ ನಾಯಕತ್ವ ನಿರ್ಮಾಣವೆಂಬ ಪ್ರಕ್ರಿಯೆ ಸ್ಥಗಿತವಾಗುವ ಹಂತಕ್ಕೆ ಜಾರುತ್ತಿದೆ. ಜನರು ಜನಪ್ರತಿನಿಧಿಗಳನ್ನು ಹೊಸ ದೊರೆಗಳಂತೆ ಆರಾಧಿಸುವ ಮನಸ್ಥಿತಿ ಬೆಳೆಸಿಕೊಳ್ಳುತ್ತಿದ್ದಾರೆ. ಇದಕ್ಕೆ ಇಂದಿನ ಮಾಧ್ಯಮಗಳು ತಮ್ಮದೇ ಆದ ಕಾಣಿಕೆ ನೀಡುತ್ತಿವೆ.

ಕರ್ನಾಟಕದಲ್ಲಿ ನಿಜ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದವರಲ್ಲಿ ಅರಸು 'ಮುಂಗೋಳಿ'ಯಾಗಿ ಕಾಣುತ್ತಾರೆ. ಅದಕ್ಕೆ ನಿದರ್ಶನ 1972 ಮತ್ತು 1978ರ ಸಂದರ್ಭದಲ್ಲಿ ನಡೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸಂಸತ್ತು ಪ್ರವೇಶಿಸಿದ ಹಾಗೂ ಕರ್ನಾಟಕ ರಾಜ್ಯ ವಿಧಾನಸಭೆ ಪ್ರವೇಶಿಸಿದವರ ಪಟ್ಟಿ.
ರಘು ಗಂಕಾರನಹಳ್ಳಿ
"ಕರ್ನಾಟಕ" ಎಂಬ ಹೆಸರಿನೊಂದಿಗೆ ನಮ್ಮ ರಾಜ್ಯ ಸುವರ್ಣ ಮಹೋತ್ಸವವನ್ನು ಆಚರಿಸಿ ಮುಂದುವರೆಯುತ್ತಿರುವ ಈ ಹೊತ್ತಿನಲ್ಲಿ ನಮ್ಮ ನಾಡಿನಲ್ಲಿ ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳು, ಚಳವಳಿಗಳು, ಹೊಸ ಹೆಜ್ಜೆಗಳು ರಾಜಕೀಯ ವಲಯದಲ್ಲಿ ಘಟಿಸಿವೆ. ಈ ವಲಯದಲ್ಲಿ ಹಲವು ಗುರುತರ ಬದಲಾವಣೆಗಳು ನಡೆದಿವೆ ಎನ್ನುವಾಗಲೇ ಹಿಂದಕ್ಕೆ ಜಗ್ಗುವ ಕೆಲಸಗಳು ಕೂಡ ನಡೆದಿವೆ. ಅದರಲ್ಲೂ 21ನೇ ಶತಮಾನದ ಕಾಲು ಭಾಗ ಪೂರೈಸಿರುವ ಈ ಹೊತ್ತಿನಲ್ಲಿ ನಾಡಿನ ರಾಜಕೀಯ ವಲಯವು ಸೊರಗಿದಂತೆ ಕಾಣುತ್ತಿದೆ. ರಾಜಪ್ರಭುತ್ವ ಹಾಗೂ ವಸಾಹತುಶಾಹಿ ವ್ಯವಸ್ಥೆಗಳನ್ನು ತಿರಸ್ಕರಿಸಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ನಾವು ಮುನ್ನಡೆ ಕಂಡುಕೊಂಡು ಮತ್ತೆ ಮಾನಸಿಕವಾಗಿ ರಾಜಪ್ರಭುತ್ವೀಕರಣದತ್ತ ಹಿಮ್ಮುಖವಾಗಿ ಹೆಜ್ಜೆ ಹಾಕುತ್ತಿದ್ದೇವೆ. ಇದಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಕಾಣಬಹುದಾಗಿದೆ. ಮೊದಲನೆಯದು, ನಾಡು ಕಟ್ಟುವ ಮೊದಲ ತಲೆಮಾರಿನ ನಾಯಕರ ಕೊರತೆ, ಎರಡನೇಯದು ರಾಜಕೀಯ ವಲಯದಲ್ಲಿ ನಿಂತ ನೀರಾಗಿರುವ ಪ್ರಯೋಗಗಳು, ಕಡೆಯದಾಗಿ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆಗಳು ನಡೆಯದಿರುವುದು. ಇವುಗಳೆಲ್ಲದರ ಜೊತೆಗೆ ಈಗಿರುವ ಬಹುತೇಕ ಯುವ ನಾಯಕರು ಎರಡನೇ, ಮೂರನೇ ತಲೆಮಾರಿಗೆ ಸೇರಿದವರಾಗಿದ್ದು ಅವರನ್ನು ಜನರು ಜನಪ್ರತಿನಿಧಿಗಳಂತೆ ನೋಡದೆ ಅವರನ್ನು ಯುವರಾಜರಂತೆ ಬಿಂಬಿಸುತ್ತಾ, ಅವರು ಪ್ರತಿನಿಧಿಸುವ ಕ್ಷೇತ್ರಗಳ ಜಹಗೀರು ಪಡೆದವರಂತೆ ವರ್ತಿಸುತ್ತಿರುವ ನಾಯಕರನ್ನು ಶ್ರೀಸಾಮಾನ್ಯರು ಒಪ್ಪಿಕೊಂಡಂತೆ ಕಾಣುತ್ತಿದೆ.
ಈ ಮೇಲಿನ ಕಾರಣಗಳನ್ನು ಒಂದೊಂದಾಗಿ ನೋಡಿದರೆ, ಯಾವುದೇ ನಾಡಿನಲ್ಲಿ ಚಳವಳಿಗಳ, ಹೋರಾಟಗಳ ಕಾರಣದಿಂದ ನಾಯಕರು ಉದಯವಾಗುತ್ತಾರೆ. ನಮ್ಮ ರಾಜ್ಯದಲ್ಲಿ ಸ್ವಾತಂತ್ರ್ಯ ಚಳುವಳಿ, ಅರಮನೆ ಸತ್ಯಾಗ್ರಹ, ಏಕೀಕರಣ ಚಳುವಳಿ, ರೈತ ಚಳುವಳಿಗಳು, ದಲಿತ - ಬಂಡಾಯ ಚಳುವಳಿ, ಭಾಷಾ ಚಳುವಳಿಗಳ ಕಾರಣದಿಂದಾಗಿ ಅನೇಕ ನಾಯಕರು ರೂಪುಗೊಂಡಿದ್ದಾರೆ. ಈ ಚಳುವಳಿಗಳು ಹುಟ್ಟಲು ಹಲವು ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ಕಾರಣವಾಗುತ್ತಿದ್ದವು. ಆದರೆ ಈಗ ಅಂತಹ ಯಾವುದೇ ವಾತಾವರಣವಿರದೆ ರಾಜ್ಯವು ತಟಸ್ಥ ಸ್ಥಿತಿಗೆ ತಲುಪಿದೆ. ಈ ತಟಸ್ಥ ಸ್ಥಿತಿ ಈ ಹಿಂದೆಯೂ ಇತ್ತು. ಅದಕ್ಕೆ ಕಾರಣ ನಮ್ಮ ಸಮಾಜದಲ್ಲಿ ರಾಜರಿಗೆ, ರಾಜ ಗುರುಗಳೆನಿಸಿಕೊಂಡವರಿಗೆ ಹೆಚ್ಚಿನ ಸ್ಥಾನಮಾನವಿತ್ತು. ಉನ್ನತ ಸ್ತರದಲ್ಲಿದ್ದವರೂ ಜನರಿಗೆ ರಾಜರಂತೆಯೇ ಕಾಣುತ್ತಿದ್ದರು. ಆದ್ದರಿಂದಲೇ ನಮ್ಮ ಜನ ಬ್ರಿಟಿಷ್ ಅಧಿಕಾರಿಗಳನ್ನೂ ಸಹ ' ಬಿಳಿಯ ದೊರೆ 'ಗಳೆಂದು ಸಂಭೋಧಿಸುತ್ತಿದ್ದರು. ಈ ಕಾರಣದಿಂದಲೇ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬ್ರಿಟಿಷ್ ಸಾಮಂತರಾಗಿದ್ದ ರಾಜರುಗಳೆಲ್ಲ ದೇಶ ಸ್ವಾತಂತ್ರ್ಯಗೊಂಡ ಕೂಡಲೇ ರಾಜಕೀಯ ಪಕ್ಷಗಳನ್ನು ಸೇರಿ, ಚುನಾವಣೆಗಳಲ್ಲಿ ನಿಂತು ವಂಶದ ಪ್ರಭಾವಳಿ ಆಧಾರದಲ್ಲಿ ಶಾಸಕ - ಸಂಸದರಾಗಿ ಚುನಾಯಿತರಾದರು; ಮತ್ತು ಉನ್ನತ ಅಧಿಕಾರಗಳನ್ನು ಪಡೆದರು. ಉದಾಹರಣೆಗೆ ಮೈಸೂರಿನ ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ರಾಜ್ಯಪಾಲರಾಗಿ ನಿಯುಕ್ತಿಗೊಡರು. ವಿಪರ್ಯಾಸವೆಂದರೆ ಈಗಲೂ ಈ ಲೆಗಸಿಯ ಆಧಾರದಲ್ಲಿ ಹಲವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ ಅವರಲ್ಲಿ ಮೈಸೂರಿನ ಈಗಿನ ಸಂಸದರಾದ ಯದುವೀರ್ ಒಡೆಯರ್, ಪ್ರಸ್ತುತ ಕೇಂದ್ರದ ಟೆಲಿಕಾಂ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ತಾಜಾ ಉದಾಹರಣೆಗಳಾಗಿದ್ದಾರೆ.
ಈ ರಾಜ ಪ್ರಮುಖರ ಜೊತೆಗೆ ಜಮೀನ್ದಾರರು, ಭೂ ಮಾಲೀಕರು ಹಾಗೂ ಮೇಲ್ವರ್ಗದವರನ್ನು ಜನರು ಅನಾಮತ್ತಾಗಿ ತಮ್ಮ ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತಾರೆ. ಇದಕ್ಕೆ ಕಾರಣ ನಮ್ಮ ಒಡಲಲ್ಲಿನ ಹಳೆಯ ರಾಜಪ್ರಭುತ್ವದ ನೆನಪುಗಳಾಗಿವೆ. ಸ್ವತಂತ್ರ ಭಾರತದಲ್ಲಿ ಜನರು ಸಂವಿಧಾನದಡಿ ತಮ್ಮ ಜೀವನವನ್ನು ಆರಂಭಿಸಿದರು ಸಹ ಶ್ರೀಸಾಮಾನ್ಯನನ್ನು ನಾಯಕನನ್ನಾಗಿ, ಜನನಾಯಕನೂ ಸಹ ನಮ್ಮ ಹಾಗೆ ಶ್ರೀಸಾಮಾನ್ಯನೆಂಬ ಮನಸ್ಥಿತಿ ಮೂಡದಿರುವುದಾಗಿದೆ. ಕೆಲವು ವರ್ಷಗಳ ಕಾಲ ಈ ಮನಸ್ಥಿತಿ ಮರೆಯಾದರೂ ಈಗ ನಾವೆಲ್ಲರೂ ಮತ್ತೆ ಅತ್ತ ಕಡೆ ಸಾಗುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಈ ಮನಸ್ಥಿತಿಯನ್ನು ಮೊದಲಿಗೆ ಮುರಿದವರು ಮೈಸೂರು ಅರಸು ಮನೆತನಕ್ಕೆ ಸಂಬಂಧಿಕರಾಗಿದ್ದ ಡಿ. ದೇವರಾಜ ಅರಸು.
ಏಕೀಕರಣೋತ್ತರ ಕರ್ನಾಟಕದಲ್ಲಿ ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ 1973ರ ನವೆಂಬರ್ ತಿಂಗಳು ಮಹತ್ವದ ಕಾರಣಕ್ಕೆ ಸಾಕ್ಷಿಯಾಯಿತು. 1950ರಲ್ಲಿ ಸಂವಿಧಾನ ಜಾರಿಗೆ ಬಂದು, ನಂತರ ಭಾಷಾವಾರು ರಾಜ್ಯಗಳ ರಚನೆಯಾಗಿ ದೇಶದೆಲ್ಲೆಡೆ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೂ ಕನ್ನಡಿಗರು ಅರಸೊತ್ತಿಗೆ ಕುರುಹಾದ 'ಮೈಸೂರು ರಾಜ್ಯ' ಎಂಬ ಹೆಸರಿನ ಭಾಗವಾಗಿದ್ದರು. ಅರಸೊತ್ತಿಗೆಯ ಕುರುಹನ್ನ ನವಂಬರ್ 1, 'ಕರ್ನಾಟಕ' ಎಂಬ ಮರುನಾಮಕರಣ ಮಾಡುವ ಮೂಲಕ ನಮ್ಮ ನಾಡಿಗೆ 'ಕರ್ನಾಟಕ' ಎಂಬ ಹೆಸರಿಗೆ ರಾಜಕೀಯ ಅಸ್ಮಿತೆಯ ಆಯಾಮವನ್ನು ಒದಗಿಸಿದರು. ಕೇವಲ ಈ ಕಾರಣಕ್ಕಾಗಿ ನಾವು ದೇವರಾಜ ಅರಸುರವರನ್ನು ನೆನೆಯಬೇಕಾಗಿಲ್ಲ. ಕರ್ನಾಟಕದಲ್ಲಿ ನಿಜ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದವರಲ್ಲಿ ಅರಸು 'ಮುಂಗೋಳಿ'ಯಾಗಿ ಕಾಣುತ್ತಾರೆ. ಅದಕ್ಕೆ ನಿದರ್ಶನ 1972 ಮತ್ತು 1978ರ ಸಂದರ್ಭದಲ್ಲಿ ನಡೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸಂಸತ್ತು ಪ್ರವೇಶಿಸಿದ ಹಾಗೂ ಕರ್ನಾಟಕ ರಾಜ್ಯ ವಿಧಾನಸಭೆ ಪ್ರವೇಶಿಸಿದವರ ಪಟ್ಟಿ.
ಉದಾಹರಣೆಗೆ, ಕಾರ್ಮಿಕ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ವಕೀಲ ವೃತ್ತಿ ಮಾಡುತ್ತಿದ್ದ, ಯಾವುದೇ ಜಾತಿಬಲವಿರದ ಧರ್ಮಸಿಂಗ್, ವಕೀಲಿ ವೃತ್ತಿ ಹಾಗೂ ವಿಮಾ ಏಜೆಂಟ್ ಆಗಿದ್ದ ವೀರಪ್ಪ ಮೊಯ್ಲಿ, ಕಾರು - ಆಟೋಗಳಿಗೆ ಮೀಟರ್ ಜೋಡಿಸುತ್ತಿದ್ದ ಜಾಫರ್ ಷರೀಫ್ ಇತ್ಯಾದಿ. ಇವರೆಲ್ಲರೂ ಅರಸುರವರ ಡೆಮಾಕ್ರೆಟಿಕ್- ಸೋಶಿಯಲ್ ಇಂಜಿನಿಯರಿಂಗ್ ಪ್ರಾಡಕ್ಟ್ ಗಳಾಗಿದ್ದವು. ಅರಸು ಮಾಡಿದ ಈ ರಾಜಕೀಯ ಪ್ರಯೋಗದಲ್ಲಿ ಅವರ ಸಿದ್ಧಾಂತ ವಿಫಲವಾದರೂ ಅಧಿಕಾರ ಪಡೆದವರೆಲ್ಲರೂ ಮುಂದೆ ಸಮರ್ಥರಾಗಿ ರೂಪುಗೊಂಡರು. ರಾಜ್ಯ ಹಾಗೂ ಕೇಂದ್ರದಲ್ಲಿ ಆಯಕಟ್ಟಿನ ಜಾಗದಲ್ಲಿ ಕೂತು ಆಡಳಿತ ನಡೆಸಿದರು. ಒಟ್ಟಾರೆಯಾಗಿ ಅರಸು ಕರ್ನಾಟಕ ರಾಜಕೀಯ ವಲಯಕ್ಕೆ ಪರಿಚಯಿಸಿದವರಲ್ಲಿ ಬಹಳಷ್ಟು ಮಂದಿ ಯಾವುದೇ ಜಾತಿ ಬಲವಿಲ್ಲದ, ವಂಶಾವಳಿಯ ಪ್ರಭಾವ ಹೊಂದಿರದ, ಹಣವಿಲ್ಲದ ಸಾಮಾನ್ಯ ಕಾರ್ಯಕರ್ತರಾಗಿದ್ದರು.
ಪ್ರಸ್ತುತ ನಮ್ಮ ರಾಜ್ಯದಲ್ಲಿ 50 ವರ್ಷಗಳ ಹಿಂದೆ ನಡೆದಂತಹ ರಾಜಕೀಯ ಪ್ರಯೋಗಗಳು ನಡೆಯದಿರುವುದು ರಾಜಕೀಯ ಜಡತ್ವಕ್ಕೆ ಕಾರಣವಾಗಿದೆ. ಚಳವಳಿಗಳು ತಣ್ಣಗಾಗಿವೆ. ರಾಜಕಾರಣಿಗಳು ತಮ್ಮ ಕುಟುಂಬದ ಸದಸ್ಯರ ರಾಜಕೀಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ ರಾಜಕೀಯ ನಾಯಕತ್ವ ನಿರ್ಮಾಣವೆಂಬ ಪ್ರಕ್ರಿಯೆ ಸ್ಥಗಿತವಾಗುವ ಹಂತಕ್ಕೆ ಜಾರುತ್ತಿದೆ. ಜನರು ಜನಪ್ರತಿನಿಧಿಗಳನ್ನು ಹೊಸ ದೊರೆಗಳಂತೆ ಆರಾಧಿಸುವ ಮನಸ್ಥಿತಿ ಬೆಳೆಸಿಕೊಳ್ಳುತ್ತಿದ್ದಾರೆ. ಇದಕ್ಕೆ ಇಂದಿನ ಮಾಧ್ಯಮಗಳು ತಮ್ಮದೇ ಆದ ಕಾಣಿಕೆ ನೀಡುತ್ತಿವೆ. ಇಂದಿನ ಮಾಧ್ಯಮಗಳು ಜನರ ಕಷ್ಟವನ್ನು ಜನಪ್ರತಿನಿಧಿಗಳಿಗೆ ತೋರಿಸುವುದಕ್ಕಿಂತ ಹೆಚ್ಚು ಅವರ ಮನೆಯ ಶುಭ ಸಮಾರಂಭಗಳನ್ನು, ವೈಯಕ್ತಿಕ ವಿಷಯಗಳನ್ನು ಜನಸಾಮಾನ್ಯರಿಗೆ ಬಿತ್ತರಿಸುತ್ತಾ ಜನಪ್ರತಿನಿಧಿಗಳನ್ನು ಹೊಸ ನಾಡಪ್ರಭುಗಳೆಂಬಂತೆ ಬಿಂಬಿಸುತ್ತಿದ್ದಾರೆ. ಇದರಿಂದಾಗಿ ನಾಗರಿಕರು ಜನಪ್ರತಿನಿಧಿಗಳು ತೆಗೆದುಕೊಳ್ಳುವ ಒಳ್ಳೆಯ, ಕೆಟ್ಟ, ನಿಷ್ಪ್ರಯೋಜಕ, ಅಪಾಯಕಾರಿ ನಿರ್ಧಾರಗಳನ್ನು ಪ್ರಶ್ನಿಸದೆ ಸುಮ್ಮನಿರುವ ಮನಸ್ಥಿತಿ ರೂಢಿಸಿಕೊಳ್ಳುತ್ತಿದ್ದಾರೆ.
ಈ ಪರಿಸ್ಥಿತಿ ನಿರ್ಮಾಣಕ್ಕೆ ಮತ್ತೊಂದು ಕಾರಣ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಕಾಲಕ್ಕೆ ಸರಿಯಾಗಿ ಚುನಾವಣೆಗಳು ನಡೆಯದಿರುವುದು. ಕರ್ನಾಟಕದಲ್ಲಿ ಒಟ್ಟು 31 ಜಿಲ್ಲಾ ಪಂಚಾಯತಿಗಳು, 2ಕ್ಕೂ ಹೆಚ್ಚು ತಾಲೂಕು ಪಂಚಾಯಿತಿಗಳು, ಬಿಬಿಎಂಪಿ ಸೇರಿ 11 ಮಹಾನಗರ ಪಾಲಿಕೆಗಳು, 59 ನಗರ ಸಭೆಗಳು, 116 ಪುರಸಭೆಗಳು, 97 ಪಟ್ಟಣ ಪಂಚಾಯಿತಿಗಳಿವೆ. ಇವುಗಳಿಗೆ ಕಾಲಕ್ಕೆ ಸರಿಯಾಗಿ ಚುನಾವಣೆ ನಡೆದದ್ದು ಬಹಳ ಕಡಿಮೆ. ಪ್ರಸ್ತುತ ಇರುವ ಗ್ರಾಮ ಪಂಚಾಯತಿ ಸದಸ್ಯರ ಚುನಾವಣೆ ನಡೆದದ್ದು 8 ತಿಂಗಳು ತಡವಾಗಿ; ಅದು ಕೋರ್ಟ್ ನಲ್ಲಿ ದಾವೆ ಹೂಡಿ ತೀರ್ಪು ಬಂದಿದ್ದರಿಂದ. ಆಗ ದಾವೆ ಹೂಡಲು ಸಹಕರಿಸಿದ್ದ ಆಗಿನ ವಿರೋಧ ಪಕ್ಷವು ಈಗ ಆಡಳಿತ ಪಕ್ಷದ ಸ್ಥಾನದಲ್ಲಿ ಕುಳಿತು ಇಪ್ಪತ್ತು ತಿಂಗಳು ಕಳೆದರೂ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳನ್ನು ಒಡ್ಡಿ ಚುನಾವಣೆ ಮುಂದೂಡುತ್ತಿರುವುದು ನಾಯಕತ್ವ ಸೃಷ್ಟಿಗೆ ದೊಡ್ಡ ತೊಡಕಾಗಿದೆ. ಅಧಿಕಾರ ವಿಕೇಂದ್ರಿಕರಣ ತಬ್ಬಲಿಯಾಗಿದೆ.
ಕನ್ನಡಿಗರ ದುರಾದೃಷ್ಟವೆಂದರೆ ಈಗಿನ ವಿರೋಧ ಪಕ್ಷ ರಚನಾತ್ಮಕವಾಗಿ ಕಾರ್ಯನಿರ್ವಹಿಸದೆ ಆಂತರಿಕ ಕಲಹದಲ್ಲಿ ಮುಳುಗಿ ಹೋಗಿರುವುದು. ಒಟ್ಟಾರೆಯಾಗಿ ಸ್ಥಳೀಯ ರಾಜಕೀಯದ ಮೂಲಕ ರಾಜ್ಯಕ್ಕೆ ಬರುತ್ತಿದ್ದ ಕ್ರಿಯಾಶೀಲ ನಾಯಕರ ಕೊರತೆಯುಂಟಾಗಿದೆ. ಇಂದಿನ ವಿಪರ್ಯಾಸವೇನೆಂದರೆ ಸ್ಥಳೀಯ ಸರ್ಕಾರಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳೆಲ್ಲವೂ ಕೇಂದ್ರವನ್ನು ಅವಲಂಬಿಸುವಂತೆ, ರಾಜ್ಯಗಳನ್ನು ದೊಡ್ಡ ಕಾರ್ಪೊರೇಷನ್ ಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ.
ಇಂದು ರಾಜ್ಯದಲ್ಲಿನ ಹಲವು ನಾಯಕರ ತಮ್ಮ ರಾಜಕೀಯ ಆಡುಂಬೋಲ ಸ್ಥಳೀಯ ಸರ್ಕಾರಗಳೇ ಆಗಿದ್ದವು ಎಂಬುದು ಕಟು ಸತ್ಯ. ಉದಾಹರಣೆಗೆ ರಾಜ್ಯದ ಈಗಿನ ಮುಖ್ಯಮಂತ್ರಿಗಳು ತಾಲೂಕ್ ಬೋರ್ಡ್ ಸದಸ್ಯರಾಗಿ ತಮ್ಮ ರಾಜಕೀಯ ಪ್ರವೇಶ ಮಾಡಿರುವುದು; ಈಗಿನ ಉಪಮುಖ್ಯಮಂತ್ರಿಗಳು ಮೊದಲಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಮೊದಲ ಕ್ರೈಸ್ತ ಮಹಿಳೆ ವಿನ್ನಿಫ್ರೆಡ್ ಫರ್ನಾಂಡಿಸ್ ಕುಂದಾಪುರ ಪುರಸಭೆಯಲ್ಲಿ 17 ವರ್ಷಗಳ ಕಾಲ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ರಾಜಾಜಿನಗರದ ಈಗಿನ ಶಾಸಕರು ಮೊದಲು ಕಾರ್ಪೊರೇಟರ್ ಆಗಿದ್ದರು. 2013ರಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ ವ್ಯಕ್ತಿ ಅದೇ ತಾಲೂಕಿನ 3 ವಿವಿಧ ಹೋಬಳಿಗಳಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು ಎಂಬುದನ್ನು ತಿಳಿಯಬೇಕಾಗಿದೆ.
ಒಟ್ಟಾರೆಯಾಗಿ ಸ್ಥಳೀಯ ಸರಕಾರಗಳು, ಸಹಕಾರ ಸಂಘಗಳಿಗೆ ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಯಬೇಕು. ಅವುಗಳಲ್ಲಿ ಸದಾ ಚುನಾಯಿತ ಪ್ರತಿನಿಧಿಗಳು ಇರಬೇಕು. ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರವಿರಬೇಕು. ಏಕೆಂದರೆ ಅವರಿಗೆ ತಮ್ಮ ಪ್ರದೇಶದ ಜನರ, ಪರಿಸರದ ಅಗತ್ಯಗಳು, ನ್ಯೂನ್ಯತೆಗಳ ಬಗ್ಗೆ ಸ್ಪಷ್ಟ ಅರಿವಿರುತ್ತದೆ. ಅಧಿಕಾರ ವಿಕೇಂದ್ರೀಕರಣ ಸಮರ್ಪಕವಾಗಿ ನಡೆದಾಗ ಖಂಡಿತವಾಗಿಯೂ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ, ಹಾಗೂ ಪ್ರಜಾಪ್ರಭುತ್ವದಲ್ಲಿ ಹೊಸ ನಾಯಕತ್ವ ಖಂಡಿತವಾಗಿಯೂ ಉಂಟಾಗುತ್ತದೆ. ಆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಇವುಗಳೆಲ್ಲದರ ಜೊತೆಗೆ ಸ್ಥಳೀಯ ಸರ್ಕಾರಗಳು ಸ್ತ್ರೀಯರ ಹಾಗೂ ಹಿಂದುಳಿದ ವರ್ಗದವರ ರಾಜಕೀಯ ಪ್ರಾತಿನಿಧ್ಯಕ್ಕೆ ದೀವಟಿಗೆಗಳಾಗಿವೆ. ಈ ವರ್ಗಗಳಿಗೆ ಸ್ಥಳೀಯ ಸರ್ಕಾರಗಳು ಇರದೇ ಹೋದರೆ ನೇರವಾಗಿ ರಾಜ್ಯ ವಿಧಾನಸಭೆ ಪ್ರವೇಶಿಸುವುದು ಕಷ್ಟವಾಗುತ್ತದೆ. ಸಹಜವಾಗಿಯೇ ಮೊದಲ ತಲೆಮಾರಿನ ನಾಯಕರಿಗೆ ತಮ್ಮ ಹೆಸರು ಇತಿಹಾಸದಲ್ಲಿ ದಾಖಲಾಗಬೇಕೆಂಬ ಮಹತ್ವಾಕಾಂಕ್ಷೆಯಿರುತ್ತದೆ. ನೈಸರ್ಗಿಕವಾಗಿ ಇವರು ತಳಮಟ್ಟದಿಂದ ಬಂದಿರುವ, ಸಮುದಾಯದೊಂದಿಗೆ ಬೆಸೆದುಕೊಳ್ಳುವ ಹಾಗೂ ನಾಡು ಕಟ್ಟುವ ರಾಜಕೀಯ ನೈಪುಣ್ಯತೆಯನ್ನು ಹಂತ ಹಂತವಾಗಿ ಗಳಿಸಿಕೊಂಡಿರುತ್ತಾರೆ. ಇವರು ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಜನರ ನಡುವೆ ಇರಲಿಚ್ಚಿಸುತ್ತಾರೆ. ಇವರಿಗೆ ವಿದ್ಯೆ ಕಡಿಮೆ ಇದ್ದರೂ ರಾಜಕೀಯ ಪಟ್ಟುಗಳ ಅರಿವು ಅನುಭವದಿಂದ ಲಭಿಸುತ್ತದೆ. ಆದರೆ ಎರಡನೇ, ಮೂರನೇ ತಲೆಮಾರಿಗೆ ಸೇರಿದ ನಾಯಕರು ಭಾಗಶಃ ಜನರಿಂದ ಅಂತರ ಕಾಯ್ದುಕೊಳ್ಳುತ್ತಾರೆ.
ಆದ್ದರಿಂದ ನಾವುಗಳೆಲ್ಲರೂ ನಿರಂಕುಶಮತಿಗಳಾಗಿ ಯೋಚಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನನಾಯಕರು ಜನರ ನಡುವೆ ಉದಯಿಸುತ್ತಾರೆ. ಜನನಾಯಕರು ಸಹ ನಮ್ಮ ಹಾಗೇ ಶ್ರೀಸಾಮಾನ್ಯನಾಗಿರುತ್ತಾನೆ. ಎಂಬ ರಾಜಕೀಯ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಳ್ಳಬೇಕು ಹಾಗೂ ನಮ್ಮ ನಡುವಿನ ಶ್ರೀಸಾಮಾನ್ಯರಲ್ಲಿರುವ ನಾಯಕತ್ವದ ಗುಣ, ಸೇವಾ ಮನೋಭಾವದ ಗುಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವ, ಅಂತಹವರನ್ನು ಪ್ರೋತ್ಸಾಹಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಆಗ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ನಾಡಿನಲ್ಲಿ ಯಶಸ್ವಿಯಾಗುತ್ತದೆ.
---*---