ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರವೇ ಮಲ್ಲಿಕಾರ್ಜುನನಿಗೆ ಪಿಹೆಚ್.ಡಿ.!

ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವ ಎತ್ತಿ ಹಿಡಿಯುವ ಉದ್ದೇಶದಿಂದ ಸಂಶೋಧನಾ ಅಭ್ಯರ್ಥಿ ಮಲ್ಲಿಕಾರ್ಜುನ ಹಾಗೂ ಡಾ.ನಿತ್ಯಾನಂದಶೆಟ್ಟಿ ಅವರನ್ನು ಮುಂದಿನ ಸಿಂಡಿಕೇಟ್‌ ಸಭೆಯ ಮುಂದೆ ಹಾಜರು ಪಡಿಸಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಇಬ್ಬರಿಂದಲೂ ಲಿಖಿತ ರೂಪದಲ್ಲಿ ಮುಚ್ಚಳಿಕೆ ಬರೆಸಿಕೊಂಡು, ಮಲ್ಲಿಕಾರ್ಜುನನ ಸಂಶೋಧನೆಯನ್ನು ಮುಂದುವರೆಸಲು ಅವಕಾಶ ನೀಡಲು ಸಿಂಡಿಕೇಟ್‌ ಸಭೆ ತೀರ್ಮಾನಿಸಿದೆ.

ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರವೇ ಮಲ್ಲಿಕಾರ್ಜುನನಿಗೆ ಪಿಹೆಚ್.ಡಿ.!

ಡಾ. ನಿತ್ಯಾನಂದಶೆಟ್ಟಿ “ನೈತಿಕ ನ್ಯಾಯಾಲಯ”ಕ್ಕೆ ವಿವಿ -ಸಿಂಡಿಕೇಟ್ ಮಾನ್ಯತೆ

99% ಲೋಕಲ್‌

ಕುಚ್ಚಂಗಿ ಪ್ರಸನ್ನ

ತುಮಕೂರು: ಕನ್ನಡ ವಿಭಾಗದ ಅಧ್ಯಾಪಕರ ಸ್ವಯಂಪ್ರೇರಿತ ನೈತಿಕ ನ್ಯಾಯಾಲಯದ ತೀರ್ಪಿನಿಂದಾಗಿ ಪಿಹೆಚ್.ಡಿ ಸಂಶೋಧನೆಯಿಂದ ವಂಚಿತನಾಗಿದ್ದ ಪಾವಗಡದ ಮಲ್ಲಿಕಾರ್ಜುನನಿಗೆ ಸಂಶೋಧನೆ ಮುಂದುವರೆಸಲು ತುಮಕೂರು ವಿಶ್ವವಿದ್ಯಾನಿಲಯ ಒಪ್ಪಿಗೆ ನೀಡಿದೆ.

ಕನ್ನಡ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದ ಎನ್.ಮಲ್ಲಿಕಾರ್ಜುನನ ಪಿಹೆಚ್‌.ಡಿ. ಸಂಶೋಧನೆ ಮುಂದುವರೆಸುವ ಕುರಿತಂತೆ ವಿಚಾರಣಾ ಸಮಿತಿಯ ವರದಿಯನ್ನು ಸೆ.4ರ ವಿವಿ ಸಿಂಡಿಕೇಟ್‌ ಸಭೆಯಲ್ಲಿ ವಿಸಿ ಪ್ರೊ.ವೆಂಕಟೇಶ್ವರಲು ಅವರು ಸಭೆಯ ಮುಂದಿಟ್ಟ ಬಳಿಕ ಸಭೆಯಲ್ಲಿ ಹಾಜರಿದ್ದ ಸದಸ್ಯರು ಚರ್ಚೆ ನಡೆಸಿದ್ದಾರೆ.

ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವ ಎತ್ತಿ ಹಿಡಿಯುವ ಉದ್ದೇಶದಿಂದ ಸಂಶೋಧನಾ ಅಭ್ಯರ್ಥಿ ಮಲ್ಲಿಕಾರ್ಜುನ ಹಾಗೂ ಡಾ.ನಿತ್ಯಾನಂದಶೆಟ್ಟಿ ಅವರನ್ನು ಮುಂದಿನ ಸಿಂಡಿಕೇಟ್‌ ಸಭೆಯ ಮುಂದೆ ಹಾಜರು ಪಡಿಸಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಇಬ್ಬರಿಂದಲೂ ಲಿಖಿತ ರೂಪದಲ್ಲಿ ಮುಚ್ಚಳಿಕೆ ಬರೆಸಿಕೊಂಡು, ಮಲ್ಲಿಕಾರ್ಜುನನ ಸಂಶೋಧನೆಯನ್ನು ಮುಂದುವರೆಸಲು ಅವಕಾಶ ನೀಡಲು ಸಿಂಡಿಕೇಟ್‌ ಸಭೆ ತೀರ್ಮಾನಿಸಿದೆ.

ನಂತರವೂ ಈ ಪ್ರಕರಣವು ಮುಂದುವರೆದು ವಿಶ್ವವಿದ್ಯಾನಿಲಯದ ಘನತೆಗೆ ಚ್ಯುತಿ ಬರುವಂತ ಕಾರ್ಯವೆಸಗಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೂ ಸಭೆಯಲ್ಲಿ ತೀರ್ಮಾನಿಸಿತು ಎಂದು ಈ ದಿನ ವಿವಿ ವೆಬ್‌ ಸೈಟ್‌ನಲ್ಲಿ ಪ್ರಕಟವಾಗಿರುವ ಸಿಂಡಿಕೇಟ್‌ ಸಭಾ ನಡವಳಿಯಲ್ಲಿ ಐಟಂ ನಂ 28ರ ಎದುರಿಗೆ ನಮೂದಿಸಲಾಗಿದೆ.

ಏನಿದು ಪ್ರಕರಣ: ವಿವಿ ಕನ್ನಡ ವಿಭಾಗದಲ್ಲಿ ಸಂಶೋಧನಾ ಅಭ್ಯರ್ಥಿಯಾಗಿದ್ದ ಎನ್.ಮಲ್ಲಿಕಾರ್ಜುನ ಎಂಬಾತ ತಮ್ಮ ಅಪ್ರಾಪ್ತ ಮಗಳು ಗರ್ಭ ಧರಿಸಲು ಕಾರಣ ಎಂದು ದಿನಾಂಕ 01.12.2022ರಂದು ಮಹಿಳೆಯರ ಒಂದು ಗುಂಪು ಕನ್ನಡ ವಿಭಾಗದ ಅಧ್ಯಾಪಕ ಡಾ. ಬಿ.ನಿತ್ಯಾನಂದ ಶೆಟ್ಟಿ ಅವರ ಬಳಿ ಬಂದು ಮೌಖಿಕ ದೂರು ನೀಡುತ್ತದೆಯಂತೆ, ಅವರ ದೂರನ್ನು ಯಥಾವತ್ತಾಗಿ ನಂಬುವ ನಿತ್ಯಾನಂದಶೆಟ್ಟಿ ಮಲ್ಲಿಕಾರ್ಜುನನನ್ನು ತಕ್ಷಣ ತಮ್ಮ ವಿಭಾಗಕ್ಕೆ ಕರೆಸಿ ಕನ್ನಡ ವಿಭಾಗದ ಇತರ ಅಧ್ಯಾಪಕರ ಸಮಕ್ಷಮ ನ್ಯಾಯ ಮಾಡುತ್ತಾರೆ. ಆ ಯುವತಿ ಗರ್ಭ ಧರಿಸಲು ಈ ಮಲ್ಲಿಕಾರ್ಜುನನೇ ಕಾರಣ ಎಂದು ತೀರ್ಪನ್ನೂ ನೀಡಿ ಬಿಡುತ್ತಾರೆ, ಆಕೆಯನ್ನು ಮದುವೆ ಆಗುವಂತೆಯೂ ಒತ್ತಡ ಹೇರುತ್ತಾರೆ, ಆತನಿಂದ ರೂ.50 ಸಾವಿರ ಹಣವನ್ನೂ ಆಕೆಯ ಸಂಬಂಧಿಕರಿಗೆ ಕೊಡಿಸುತ್ತಾರೆ. ಜೊತೆಗೆ ತಾನಿನ್ನು ಸಂಶೋಧನೆಯನ್ನು ಮುಂದುವರೆಸುವುದಿಲ್ಲ ಎಂಬ ಪತ್ರವನ್ನೂ ಆತನಿಂದ ಬರೆಸಿ ವಿಸಿ ಅವರಿಗೆ ಸಲ್ಲಿಸಿಯೂ ಬಿಡುತ್ತಾರೆ. ಹೀಗಾಗಿ ಮಲ್ಲಿಕಾರ್ಜುನ ತನ್ನ ಪಿಹೆಚ್‌.ಡಿ. ಕಳೆದುಕೊಳ್ಳುತ್ತಾನೆ.

ಪ್ರಕರಣ ಅಷ್ಟಕ್ಕೇ ಮುಗಿಯುವುದಿಲ್ಲ, ಮಲ್ಲಿಕಾರ್ಜುನನ ವಿರುದ್ಧ ಆ ಗರ್ಭಿಣಿ ಯುವತಿ ಪೊಲೀಸರಲ್ಲಿ ದೂರು ನೀಡುತ್ತಾರೆ. ಮಲ್ಲಿಕಾರ್ಜುನನನ್ನು ಬಂಧಿಸಿ ಪೊಕ್ಸೋ ಕಾಯ್ದೆಯಡಿ ಕೇಸು ಹಾಕಿ ಜೈಲಿಗೆಕಳಿಸಲಾಗುತ್ತದೆ. ಸುಮಾರು ಒಂದೂವರೆ ವರ್ಷ ಮಲ್ಲಿಕಾರ್ಜುನ ಜೈಲಿನಲ್ಲಿರುತ್ತಾನೆ. ಪ್ರಕರಣದ ವಿಚಾರಣೆ ನಡೆಯುವ ಸಮಯಕ್ಕೆ ಆಕೆಗೆ ಹೆರಿಗೆ ಆಗು ಮಗು ಜನಿಸಿರುತ್ತದೆ. ತಾಯಿ ಮಗು ಹಾಗೂ ಮಲ್ಲಿಕಾರ್ಜುನನ ಡಿಎನ್‌ಎ ಪರೀಕ್ಷೆ ನಡೆದು, ಈತ ಆ ಮಗುವಿನ ಜೈವಿಕ ತಂದೆ ಅಲ್ಲ ಎಂಬ ವರದಿ ಪ್ರಯೋಗಾಲಯದಿಂದ ಬರುತ್ತದೆ. ಪರಿಣಾಮ ಈತ ಖುಲಾಸೆಯಾಗಿ ಹೊರ ಜಗತ್ತಿಗೆ ಬರುತ್ತಾನೆ. ಅಷ್ಟು ಹೊತ್ತಿಗೆ ಆತನ ಪಿಹೆಚ್‌.ಡಿ. ರದ್ದಾಗಿದ್ದರಿಂದ  ಆತ ಈಗಲೂ ಪಾವಗಡದ ಹಳ್ಳಿಯಲ್ಲಿ ಕೂಲಿ ಮಾಡಿ ಜೀವಿಸುತ್ತಿದ್ದಾನೆ.

“ಮಲ್ಲಿಕಾರ್ಜುನನಿಗೆ ನ್ಯಾಯ ಕೊಡಿಸುವುದು ಹೇಗೆ ?” ಮತ್ತು “ ಮಲ್ಲಿಕಾರ್ಜುನನಿಗೆ ನಿಜಕ್ಕೂ ನ್ಯಾಯ ಸಿಗುವುದೇ ?” ಎಂಬ ಎರಡು ವಿವರವಾದ ವರದಿಗಳನ್ನು ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆ ಜುಲೈ ತಿಂಗಳಲ್ಲಿ ಪ್ರಕಟಿಸಿದ್ದನ್ನು ನೆನಪಿಸಿಕೊಳ್ಳಬಹುದು.

https://bevarahani.com/kuchchangi-prasanna-1157

https://bevarahani.com/kuchangi-prasanna-1162

ಸಿಂಡಿಕೇಟ್‌ ಸಭೆಯ ಮೇಲಿನ ನಿರ್ಣಯದ ಪ್ರಕಾರ ಮಲ್ಲಿಕಾರ್ಜುನನಿಗೆ ಪಿಹೆಚ್‌.ಡಿ ಸಂಶೋಧನೆ ಮುಂದುವರೆಸಲು ಅವಕಾಶ ನೀಡಲು ಮುಂದಿನ ಸಿಂಡಿಕೇಟ್‌ ಸಭೆಯಲ್ಲಿ ಆತನಿಂದ ಲಿಖಿತ ಮುಚ್ಚಳಿಕೆ ಬರೆಸಿಕೊಳ್ಳಬೇಕೆಂಬ ತೀರ್ಮಾನ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ನ್ಯಾಯಾಲಯವೇ ಆತನನ್ನು ದೋಷಮುಕ್ತಗೊಳಿಸಿರುವಾಗ, ಯಾರೋ ಕೆಲವರು ಬಂದು ನೋಡಿ ಈತನಿಂದಲೇ ನಮ್ಮ ಹುಡುಗಿ ಗರ್ಭಿಣಿ ಆದದ್ದು ಎಂದು ಮೌಖಿಕ ದೂರು ನೀಡಿದ ಕೂಡಲೇ ಅಧ್ಯಾಪಕ ಡಾ.ಬಿ.ನಿತ್ಯಾನದಶೆಟ್ಟಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ಪೂರ್ವಾಪರ ಯೋಚಿಸದೇ ಹಾಗೂ ವಿಚಾರವನ್ನೂ ಮಾಡದೇ ದೂರು ಹೇಳಿದವರ ಮಾತುಗಳನ್ನೇ ನಂಬಿ ಮಲ್ಲಿಕಾರ್ಜುನನ  ವಿರುದ್ಧ “ನೈತಿಕ ನ್ಯಾಯಾಲಯ” ನಡೆಸಿ, ತೀರ್ಪುನೀಡಿದ್ದರಿಂದ  ಮಲ್ಲಿಕಾರ್ಜುನ ಪಿಹೆಚ್‌.ಡಿ. ಕಳೆದುಕೊಂಡನೇ ಹೊರತು  ಪೊಲೀಸ್‌ ಕೇಸ್‌ ಅಥವಾ ನ್ಯಾಯಾಲಯವು 2024ರ ಜನವರಿ 27ರಂದು ನೀಡಿದ ತೀರ್ಪಿನ ಆಧಾರದ ಮೇಲೆ ಅಲ್ಲವಲ್ಲ.

ಈ ಹಿನ್ನೆಲೆಯನ್ನು ವಿಶ್ವವಿದ್ಯಾಲಯ ಪರಿಗಣನೆಗೆ ತೆಗೆದುಕೊಂಡು ಮಲ್ಲಿಕಾರ್ಜುನನಿಗೆ ಪಿಹೆಚ್‌.ಡಿ. ಮುಂದುವರೆಸಲು ಬೇಷರತ್‌ ಅನುಮತಿ ನೀಡಬೇಕು ಹಾಗೂ ತನ್ನ ʼಬೌದ್ಧಿಕ ಅಹಂʼ ನಿಂದ ಮೆರೆಯುತ್ತ ಉದ್ಧಟತನಾಗಿ ವಿವಿಯಲ್ಲಿ ನೈತಿಕ ಪೊಲೀಸ್‌ ಗಿರಿ ಹಾಗೂ ನ್ಯಾಯ ಪಂಚಾಯಿತಿ ನಡೆಸಿದ ಅಧ್ಯಾಪಕ ಡಾ.ಬಿ.ನಿತ್ಯಾನಂದ ಶೆಟ್ಟಿ ಹಾಗೂ ಆತನೊಂದಿಗೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರ ಎಲ್ಲರ ಮೇಲೂ  ಶಿಸ್ತು ಕ್ರಮ ಜರುಗಿಸಬೇಕಿದೆ. ಹಾಗೆ ಮಾಡಿದಲ್ಲಿ ಮಾತ್ರವೇ ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವ ಎತ್ತಿ ಹಿಡಿಯುವ ಸಿಂಡಿಕೇಟ್‌ ಸಭೆಯ ಉದ್ದೇಶ ಈಡೇರುತ್ತದೆ.

ಅದರ ಹೊರತಾಗಿ ಮುಂದಿನ ಸಿಂಡಿಕೇಟ್‌ ಸಭೆಯ ಮುಂದೆ “ ಈ ಇಬ್ಬರನ್ನೂ ಹಾಜರುಪಡಿಸಿ  ಇನ್ನುಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಲಿಖಿತ ಮುಚ್ಚಳಿಕೆ” ಬರೆಸಿಕೊಳ್ಳುವುದು ನಿತ್ಯಾನಂದ ಶೆಟ್ಟಿ ಮತ್ತು ಗ್ಯಾಂಗ್‌ ಮಾಡಿದ ತಪ್ಪನ್ನು ಮುಚ್ಚಿ ಹಾಕುವ ವಿಫಲ ಯತ್ನ ಎಂದಷ್ಟೇ ಹೇಳಬಹುದು.