ವಿಜಯನಗರ ಸಾಮ್ರಾಜ್ಯದ ಕೃಷಿ ನೋಟಗಳು 

ಪೋರ್ಚುಗಲ್ ನ ಡೋಮಿಂಗೋ ಫಯಾಸ್ ಕ್ರಿ.ಶ. 1520ರಲ್ಲಿ ವಿಜಯನಗರಕ್ಕೆ ಭೇಟಿ ನೀಡುತ್ತಾನೆ. ಅದು ಶ್ರೀಕೃಷ್ಣದೇವರಾಯನ ಆಡಳಿತದ ಕಾಲ. ಈತ ವಿಜಯನಗರದಲ್ಲಿ ಭತ್ತ, ಹತ್ತಿ, ಹುರುಳಿ, ಗೋಧಿ, ಕಿತ್ತಳೆ, ನಿಂಬೆ, ಸಿಭಾನ್, ಕೆಂಪು ಮೂಲಂಗಿ ಬೆಳೆಯಲ್ಪಡುತ್ತಿತ್ತು ಎಂದು ದಾಖಲಿಸಿದ್ದಾನೆ.

ವಿಜಯನಗರ ಸಾಮ್ರಾಜ್ಯದ ಕೃಷಿ ನೋಟಗಳು 

 

ಕೃಷಿ ಪರಂಪರೆ

ಮಲ್ಲಿಕಾರ್ಜುನ 
ಹೊಸಪಾಳ್ಯ


      ವಿಜಯನಗರ ಕಾಲುವೆಗಳ ನಿರ್ಮಾಣ ಕಲೆ, ಜಾಣ್ಮೆ, ಸ್ಥಳ ಆಯ್ಕೆ ಇತ್ಯಾದಿಗಳ ಬಗ್ಗೆ ತಿಳಿಯಲು ಇತಿಹಾಸದ ಪುಸ್ತಕಗಳನ್ನು ಓದುತ್ತಿದ್ದಾಗ 600 ವರ್ಷ ಹಿಂದಿನ ಕೃಷಿ ವಿಚಾರಗಳೂ ಗಮನಕ್ಕೆ ಬಂದವು. ಆ ಮಾಹಿತಿ ಪ್ರಕಾರ ವಿಜಯನಗರ ಅರಸರ ಕಾಲದಲ್ಲಿ ಭತ್ತ, ಬಾಳೆ, ನಿಂಬೆ, ಹತ್ತಿ, ಮಾವು ಮುಂತಾದ ಬೆಳೆಗಳು ಸಮೃದ್ದವಾಗಿದ್ದವು. ಭತ್ತದಲ್ಲಿ ಜೀರ ಸಾಲ್, ಚೆಂಬಾ ಸಾಲ್, ಮಸ್ಕತಿ ಮುಂತಾದ ದೇಸಿ ತಳಿಗಳನ್ನು ಬೆಳೆದು ಪೋರ್ಚುಗೀಸರಿಗೆ ಹಾಗೂ ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದ ಬಗ್ಗೆ ಹಲವು ಪ್ರವಾಸಿಗರು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಇಲ್ಲಿನ ಹಲವು ಹಳ್ಳಿಗಳಲ್ಲಿ ಬಂಗಾರಕಡ್ಡಿ ಎಂಬ ಭತ್ತದ ತಳಿಯನ್ನು ಹಿಂದೆ ವ್ಯಾಪಕವಾಗಿ ಬೆಳೆಯುತ್ತಿದ್ದ ಬಗ್ಗೆಯೂ ನೆನಪು ಮಾಡಿಕೊಳ್ಳುತ್ತಾರೆ.

     ವಿಜಯನಗರ ಸಾಮ್ರಾಜ್ಯದ ಆರ್ಥಿಕತೆಯು ಹೆಚ್ಚಾಗಿ ಕೃಷಿಯ ಮೇಲೆ ಅವಲಂಬಿತವಾಗಿತ್ತು. ಗೋಧಿ, ಜೋಳ, ಹತ್ತಿ ಮತ್ತು ದ್ವಿದಳ ಧಾನ್ಯಗಳು ಅರೆನೀರಾವರಿ ಪ್ರದೇಶಗಳಲ್ಲಿ ಬೆಳೆಯುತ್ತಿದ್ದರೆ, ನೀರಾವರಿ ಪ್ರದೇಶಗಳಲ್ಲಿ ಕಬ್ಬು ಮತ್ತು ಭತ್ತ ಹೆಚ್ಚಾಗಿತ್ತು. 

    ಹಂಪಿಯ ಪ್ರದೇಶದಲ್ಲಿರುವ ಕೆರೆ, ಪುಷ್ಕರಣಿ, ಬಾವಿಗಳು, ತುಂಗಭದ್ರಾ ನದಿಗೆ ಕಟ್ಟಿರುವ ಅಣೆಕಟ್ಟು ಮತ್ತು ನೀರಾವರಿ ಕಾಲುವೆಗಳು ವಿಜಯನಗರ ಸಾಮ್ರಾಜ್ಯದಲ್ಲಿ ಕೃಷಿಗೆ ಹಾಗೂ ನೀರಾವರಿಗೆ ನೀಡಿದ ಆದ್ಯತೆಯನ್ನು ತೋರಿಸುತ್ತವೆ. ಇದಕ್ಕೆ ಪೂರಕವಾಗಿ ಹಲವು ಶಾಸನಗಳು ಮತ್ತು ವಿದೇಶಿ ಪ್ರವಾಸಿಗರ ದಾಖಲೆಗಳ ಮಾಹಿತಿಯನ್ನು ನೋಡಬಹುದು. 

    ವಿಜಯನಗರದ ಅಚ್ಯುತದೇವರಾಯನ ಕಾಲದ (ಕ್ರಿ.ಶ.1539) ಶಾಸನವೊಂದರಲ್ಲಿ ಕೃಷಿ ಕುರಿತು ಉಲ್ಲೇಖವಾಗಿದ್ದು, ತೆಂಗು, ಹಲಸು, ಎಲೆ ಬಳ್ಳಿ, ಹುಣಿಸಿ, ನಿಂಬೆ, ಮಾದಳ ಮೊದಲಾದವುಗಳನ್ನು ಬೆಳೆಯುತ್ತಿದ್ದರು ಎಂದು ಇದರಿಂದ ತಿಳಿಯುತ್ತದೆ. ಇದೇ ಅರಸನ ಮತ್ತೊಂದು ಶಾಸನವು ಈ ಭಾಗದಲ್ಲಿ ಸೆಣಬು ಬೆಳೆಯುತ್ತಿದ್ದ ಕುರಿತು ತಿಳಿಸುತ್ತದೆ. ಅಂದರೆ ಮಣ್ಣಿನ ಫಲವತ್ತತೆಯ ಬಗ್ಗೆ ಆಗಿನ ಕಾಲಕ್ಕೇ ಜನರಿಗೆ ಅರಿವಿತ್ತು ಎಂಬುದು ಇದರಿಂದ ಮನವರಿಕೆಯಾಗುತ್ತದೆ.

     ಹಲವು ಶಾಸನಗಳಲ್ಲಿ ವಿಜಯನಗರದ ವಿವಿಧ ದೇವಾಲಯಗಳಿಗೆ ದಾನ, ದತ್ತಿಯಾಗಿ ಹಲವು ಗ್ರಾಮಗಳ ಮಾಗಣೆಗಳನ್ನು ಬಿಟ್ಟರುವ ಬಗ್ಗೆ ತಿಳಿದುಬರುತ್ತದೆ. ಮಾಗಣೆ ಎಂದರೆ ನೀರಾವರಿ ಪ್ರದೇಶವಾಗಿದ್ದು ಭತ್ತ ಅಲ್ಲಿನ ಮುಖ್ಯ ಬೆಳೆ. ಈಗಲೂ ಸಹ ಹಂಪಿ ಸುತ್ತ-ಮುತ್ತ ಮಾಗಣೆ ಎಂಬ ಪದ ಬಳಕೆಯಲ್ಲಿದೆ. ತಿಪ್ಪೆಗಳಿಗೆ ಸುಂಕ ವಿಧಿಸುತ್ತಿದ್ದ ಬಗ್ಗೆಯೂ ಕೆಲವು ಶಾಸನಗಳಲ್ಲಿ ದಾಖಲಾಗಿದೆ. ಅಂದರೆ ಹೆಚ್ಚು ಜಾನುವಾರುಗಳನ್ನು ಹೊಂದಿದವರು ಸುಂಕ ಕೊಡಬೇಕಿತ್ತು. ಇದೂ ಸಹ ಆ ಕಾಲದಲ್ಲಿ ಪಶುಸಂಗೋಪನೆ ಮುಖ್ಯ ಉದ್ಯೋಗವಾಗಿದ್ದರ ದ್ಯೋತಕ.

   ಇನ್ನು, ವಿಜಯನಗರ ಕಾಲದಲ್ಲಿ ಹಲವಾರು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಭೇಟಿಯಲ್ಲಿ ಅವರು ಇಲ್ಲಿ ಈ ಭಾಗದಲ್ಲಿ ಬೆಳೆಯುತ್ತಿದ್ದ ಕೃಷಿ ಬೆಳೆ ವೈವಿಧ್ಯವನ್ನು ದಾಖಲಿಸಿರುವುದು ಗಮನಾರ್ಹ. 

     ಪರ್ಶಿಯಾದ ಅಬ್ದುಲ್ ರಜಾಕ್ 2ನೇ ದೇವರಾಯನ ಆಡಳಿತಸಮಯದಲ್ಲಿ (ಕ್ರಿ.ಶ 1443) ಭೇಟಿ ನೀಡಿದ್ದನು. “ಇಡೀ ಪ್ರಪಂಚದಲ್ಲಿ ಇಂತಹ ಪಟ್ಟಣ ಮತ್ತೊಂದು ಇರುವುದನ್ನು ಯಾರು ಕಣ್ಣಿಂದ ನೋಡಲಾರರು, ಕಿವಿಯಿಂದ ಕೇಳಲಾರರು. ಇಲ್ಲಿ ಸಂಪತ್ತಿನ ಹೊಳೆಯೇ ಹರಿಯುತ್ತಿದೆ. ನಗರವು ಉದ್ಯಾನವನ, ವಿಶಾಲ ಬೀದಿಗಳಿಂದ ಕಂಗೊಳಿಸುತ್ತಿದೆ, ರತ್ನ, ವಜ್ರ, ವೈಢೂರ್ಯಗಳನ್ನು ಇಲ್ಲಿಯ ನಗರ ಬೀದಿಗಳಲ್ಲಿ ಯಾವುದೇ ಭೀತಿಯೂ ಇಲ್ಲದೆ ಬಹಿರಂಗವಾಗಿ ಮಾರುತ್ತಾರೆ” ಎಂದು ವಿವರಿಸಿದ ಮೊದಲ ಪ್ರವಾಸಿ ಈತನೇ. ಹಲವು ವರ್ಷ ವಿಜಯನಗರ ರಾಜಧಾನಿಯಲ್ಲಿದ್ದ ಈತನಿಗೆ ರಾಜನು ವಾರಕ್ಕೊಮ್ಮೆ ಒಂದು ಪಿಂಡಿ ವೀಳ್ಯದೆಲೆ ಕೊಡುತ್ತಿದ್ದನೆಂದು ಪ್ರಸ್ತಾಪ ಮಾಡುತ್ತಾನೆ. ಅಲ್ಲದೆ ಗುಲಾಬಿ ಹೂಗಳ ಮಾರಾಟ ಇಲ್ಲಿ ವಿಶೇಷ, ಇಲ್ಲಿನ ಜನ ಗುಲಾಬಿ ಪ್ರಿಯರು. ಇವರಿಗೆ ಆಹಾರದಷ್ಟೇ ಅವಶ್ಯವೆಂದು ತೋರುತ್ತದೆ ಎಂಬ ಮಾಹಿತಿಯನ್ನೂ ದಾಖಲಿಸುತ್ತಾನೆ.


    ಪೋರ್ಚುಗೀಸ್ ದೇಶದ ಬರಹಗಾರ ಬಾರ್ಬೊಸಾ ಕ್ರಿ.ಶ. 1515–1516ರವರೆಗೆ -ಅಂದರೆ ಕೃಷ್ಣದೇವರಾಯನ ಆಳ್ವಿಕೆಯಲ್ಲಿ (ಕ್ರಿ.ಶ.1509-1529) ಭೇಟಿ ನೀಡಿದ್ದ. ಇವನು ವಿಜಯನಗರದಲ್ಲಿ ವೀಳ್ಯದೆಲೆ, ಭತ್ತ, ರಾಗಿ, ಜೋಳ ಬೆಳೆಯುತ್ತಿದ್ದ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ವಿಶೇಷವಾಗಿ ಸಕ್ಕರೆ ಮತ್ತು ಬೆಲ್ಲ ತಯಾರಿಕೆ, ತೆಂಗಿನ ಎಣ್ಣೆ ತೆಗೆಯುವುದು, ಗಾಣ, ರಸ ತೆಗೆಯುವುದರ ಬಗ್ಗೆಯೂ ವಿವರಿಸುತ್ತಾನೆ. ಅಲ್ಲದೆ ಉಳುಮೆಗೆ ನೇಗಿಲು ಬಳಕೆ ಮಾಡುತ್ತಿದ್ದರು ಹಾಗೂ ಕೋಣಗಳು ಮತ್ತು ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತು ಎಂದು ದಾಖಲಿಸಿದ್ದಾನೆ. 


     ಪೋರ್ಚುಗಲ್ ನ ಡೋಮಿಂಗೋ ಫಯಾಸ್ ಕ್ರಿ.ಶ. 1520ರಲ್ಲಿ ವಿಜಯನಗರಕ್ಕೆ ಭೇಟಿ ನೀಡುತ್ತಾನೆ. ಅದು ಶ್ರೀಕೃಷ್ಣದೇವರಾಯನ ಆಡಳಿತದ ಕಾಲ. ಈತ ವಿಜಯನಗರದಲ್ಲಿ ಭತ್ತ, ಹತ್ತಿ, ಹುರುಳಿ, ಗೋಧಿ, ಕಿತ್ತಳೆ, ನಿಂಬೆ, ಸಿಭಾನ್, ಕೆಂಪು ಮೂಲಂಗಿ ಬೆಳೆಯಲ್ಪಡುತ್ತಿತ್ತು ಎಂದು ದಾಖಲಿಸಿದ್ದಾನೆ.

     ಪೋರ್ಚುಗೀಸ್ ದೇಶದ ಪ್ರವಾಸಿ ಹಾಗೂ ವ್ಯಾಪಾರಿಯಾದ ಫೆರ್ನಾವೋ ನ್ಯೂನಿಜ್ ಕ್ರಿ.ಶ. 1534ರಿಂದ 1537ರವರೆಗೆ ಅಚ್ಯುತರಾಯನ ಆಳ್ವಿಕೆ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ನೀಡುತ್ತಾನೆ. ವಿಜಯನಗರದ ಇತಿಹಾಸವನ್ನು ವಿವರವಾಗಿ ದಾಖಲಿಸುವ ಈತ ಗೋಧಿ, ಕಾಳುಗಳು, ಭತ್ತ, ಜೋಳ, ವೀಳ್ಯದೆಲೆ, ಅಡಿಕೆ ಬೆಳೆಗಳು ಇದ್ದವೆಂದು ತಿಳಿಸುವುದು ವಿಶೇಷ.

     ಮೇಲಿನ ವಿವರಣೆಗಳನ್ನು ಗಮನಿಸಿದರೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಅಪಾರ ಬೆಳೆ ವೈವಿಧ್ಯ ಇತ್ತು ಎಂದು ಖಚಿತವಾಗಿ ತಿಳಿಯಬಹುದು. ಈ ವೈವಿಧ್ಯತೆ ನಾಶವಾಗುತ್ತಾ ಬಂದು ಪ್ರಸ್ತುತ ಕೇವಲ ಬಾಳೆ, ಕಬ್ಬು, ಭತ್ತ, ತೆಂಗು ಮಾತ್ರ ಈ ಭಾಗದ ಪ್ರಧಾನ ಬೆಳೆಯಾಗಿವೆ. ಈ ಕಾರಣದಿಂದಲೇ ಇಂದು ಮಣ್ಣಿನ ಫಲವತ್ತತೆ ನಾಶವಾಗುತ್ತಾ ಕರಲು ಮತ್ತು ಚೌಳು ಮಣ್ಣಿನ ವ್ಯಾಪ್ತಿ ಹೆಚ್ಚುತ್ತಿದೆ. ಕೃಷಿಯಲ್ಲಿ ಸುಸ್ಥಿರತೆಗೆ ಬದಲಾಗಿ ಅವಲಂಬನೆ ಅಧಿಕವಾಗುತ್ತಿದೆ. ಈ ಎಲ್ಲ ಕೃಷಿ ಸಂಕಷ್ಟಗಳಿಂದ ಹೊರಬರಲು ವಿಜಯನಗರ ಅರಸರು ಅನುಸರಿಸುತ್ತಿದ್ದ ಕೃಷಿ ಪದ್ಧತಿಗಳತ್ತ ಗಮನಹರಿಸಬೇಕಿದೆ.