ಗುತ್ತಿಗೆ ಕಾರ್ಮಿಕರ ಸೇವೆ ಖಾಯಮಾತಿಗೆ ಆಗ್ರಹ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಲು ಒತ್ತಾಯ

ಗುತ್ತಿಗೆ ಕಾರ್ಮಿಕರ ಸೇವೆ ಖಾಯಮಾತಿಗೆ ಆಗ್ರಹ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಲು ಒತ್ತಾಯ

ಗುತ್ತಿಗೆ ಕಾರ್ಮಿಕರ ಸೇವೆ ಖಾಯಮಾತಿಗೆ ಆಗ್ರಹ
ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಲು ಒತ್ತಾಯ

ತುಮಕೂರು: ರಾಜ್ಯದ ನಗರ ಸ್ಥಳಿಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರ ಪಾಲಿಕೆಗಳಲ್ಲಿ ಗುತ್ತಿಗೆ, ಹೊರ ಗುತ್ತಿಗೆ, ನೇರಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ  ದುಡಿಯುತ್ತಿರುವ ಎಲ್ಲ ಕಾರ್ಮಿಕರಿಗೆ ದೊರೆಯಬೇಕಾದ ವೇತನ ಸೇರಿದಂತೆ ಹಲವು ಸವಲತ್ತುಗಳ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೇರಿದ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು. ನಂತರ ಕೆಲಕಾಲ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದರು.
ಧರಣಿನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸೈಯದ್ ಮುಜೀಬ್, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲೂ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್, ಸೀಲ್‌ಡೌನ್‌ಗಳ ನಡುವೆಯೂ ಕೆಲಸ ನಿಂತಿಲ್ಲ. ಸುಮಾರು ೬೦-೭೦ ಕ್ಕೂ ಹೆಚ್ಚು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದರು.
ಈ ಎಲ್ಲಾ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು. ಎಲ್ಲಾ ಮುನಿಸಿಪಾಲ್ ಕಾರ್ಮಿಕರನ್ನು ಕರೊನ ವಾರಿಯರ್ಸ್ ಎಂದು ಪರಿಗಣಿಸಿ ೫೦ ಲಕ್ಷ ರೂ. ವಿಮಾ ಸೌಲಭ್ಯ ನೀಡಬೇಕು. ಸೇವೆಯಲ್ಲಿ ಇರುವಾಗಲೇ ಮರಣ ಹೊಂದಿರುವ ಎಲ್ಲಾ ಮುನಿಸಿಪಾಲ್ ಕಾರ್ಮಿಕ ಅವಲಂಬಿತರಿಗೆ ಮಾನವೀಯತೆಯ ನೆಲೆಯಲ್ಲಿ ಕೆಲಸ ನೀಡಬೇಕು. ಖಾಯಂಗೊಳಿಸುವವರೆಗೆ ಎಲ್ಲಾ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕೆಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟಿನ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸಮವಸ್ತç, ಸುರಕ್ಷತಾ ಸಲಕರಣೆಗಳನ್ನು ಕಡ್ಡಾಯವಾಗಿ ನೀಡಬೇಕು. ಗುತ್ತಿಗೆದಾರರು ಕಾರ್ಮಿಕರಿಂದ ಕಡಿತಗೊಳಿಸಿರುವ ಪಿ.ಎಫ್. ಹಾಗು ಇ.ಎಸ್.ಐ. ವಂತಿಗೆ ಹಣವನ್ನು ಸರಿಯಾಗಿ ಪಾವತಿಸದೆ ಹಲವೆಡೆ ಹಗರಣಗಳು ನಡೆದಿವೆ. ಇದನ್ನು ತಡೆಯಲು ಮೂಲ ಮಾಲೀಕರಾದ ಸ್ಥಳೀಯ ಸಂಸ್ಥೆಗಳೇ ಇದನ್ನು ನಿರ್ವಹಿಸುವಂತೆ ಒತ್ತಾಯಿಸಿದರು.
ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರು, ಲೋಡರ್‌ಗಳು, ವಾಟರ್ ಮ್ಯಾನ್‌ಗಳು, ಕಸದ ಅಟೋ ಚಾಲಕರು, ಸಹಾಯಕರು, ಕಂಪ್ಯೂಟರ್ ಅಪರೇಟರುಗಳು, ಯು.ಜಿ.ಡಿ ಕಾರ್ಮಿಕರು, ಕಛೇರಿ ಸಹಾಯಕರ ಸೇವೆ ಅತ್ಯಗತ್ಯವಾದುದು. ಚಿಕನ್‌ಗುನ್ಯಾ, ಕರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಸಹ ನಾಗರಿಕರಿಗೆ ಮೂಲಭೂತ ಸೌಕರ್ಯಗಳ ಈ ಸೇವೆಗಳನ್ನು ನೀಡಲು ಮೇಲಿನ ಎಲ್ಲಾ ಕಾರ್ಮಿಕರು ತಮ್ಮ  ಜೀವದ ಹಂಗುತೊರೆದು ಸೇವೆ ಸಲ್ಲಿಸುತ್ತಿದ್ದಾರೆ.
ಇಂತಹವರ ಸಂರಕ್ಷಣೆಗೆ ಸರ್ಕಾರ ಮಾದರಿ ಮಾಲೀಕನಾಗಿ ಇರಬೇಕು. ಆದರೆ ಸರ್ಕಾರಿ ಸಂಸ್ಥೆಗಳು, ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳಾದ ಮುನಿಸಿಪಾಲಿಟಿಗಳು, ಅಸ್ಪತ್ರೆಗಳಲ್ಲಿ ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗುತ್ತಿದೆ. ಕಾನೂನಿನ ಪ್ರಕಾರ ಸವಲತ್ತು ಕೇಳುವ ಕಾರ್ಮಿಕರನ್ನು ಕೆಲಸದಿಂದ   ತೆಗೆಯಲಾಗುತ್ತಿದೆ ಎಂದು ಅರೋಪಿಸಿದರು.
ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸದೆ ಈ ಶೋಷಣೆ ನಿಲ್ಲದು ಎಂದ ಮುಜೀಬ್, ನಿರಂತರ ಸ್ವರೂಪದ ಕೆಲಸಗಳಲ್ಲಿ ಇರುವ ಕಾರ್ಮಿಕರ ಸೇವೆಗಳನ್ನು ಸರ್ಕಾರ ಖಾಯಂಗೊಳಿಸಬೇಕೆAದು ಆಗ್ರಹಿಸಿದರು.
ರಾಜ್ಯ ಖಜಾಂಚಿ ಸಿ. ವೆಂಕಟೇಶ್, ಪೌರಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕೆ. ಸುಬ್ರಹ್ಮಣ್ಯ, ಸಹಕಾರ್ಯದರ್ಶಿ ನಾಗರಾಜು, ತುಮಕೂರು ಮಹಾನಗರ ಪಾಲಿಕೆ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜು, ತುಮಕೂರು  ಜಿಲ್ಲಾ  ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದರು.
ಅಪರ ಜಿಲ್ಲಾಧಿಕಾರಿಗಳಾದ ಚನ್ನಬಸಪ್ಪನವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಪತ್ರ ಸ್ವಿಕರಿಸಿದ  ಚನ್ನಬಸಪ್ಪನವರು ಮಾತನಾಡಿ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ  ಹೇಳಿದರು.
ಈ ಸಂದರ್ಭದಲ್ಲಿ ತುಮಕೂರು ಪೌರ ಕಾರ್ಮಿಕರ ಸಂಘ ಖಚಾಂಜಿ ಕೆಂಪರಾಜು, ತುಮಕೂರು ಮಹಾ ನಗರಪಾಲಿಕೆ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘದ ಉಪಾಧ್ಯಕ್ಷ ಆಂಜನಪ್ಪ, ಚಂದ್ರಣ್ಣ        ಖಚಾಂಜಿ ಮಂಜುನಾಥ್, ಸಹ ಕಾರ್ಯದರ್ಶಿ ಇರ್ಫಾನ್, ಶ್ರೀನಿವಾಸ್, ಸಾದಿಕ್‌ಪಾಷ, ತುಮಕೂರು  ಜಿಲ್ಲಾ ನೀರು ಸರಬರಾಜು ನೌರಕರರ ಸಂಘದ ಉಪಾಧ್ಯಕ್ಷ ಸುರೇಶ್, ನಟರಾಜು ಖಚಾಂಜಿ ಚಂದ್ರಪ್ಪ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.