ಆರ್ ಬಿಐನಿಂದ ರೆಪೋ ದರ ಕಡಿತ :ಸಾಲಕ್ಕೆ ಅನುಕೂಲ,ಹಿರಿಯರಿಗೆ ಆಘಾತ!

ಒಟ್ಟಾರೆ, ರೆಪೋ ದರ ಕಡಿತವು ರೂಪಾಯಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಡವಾಳ ಹರಿವು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ಆರ್ ಬಿಐನಿಂದ ರೆಪೋ ದರ ಕಡಿತ :ಸಾಲಕ್ಕೆ ಅನುಕೂಲ,ಹಿರಿಯರಿಗೆ ಆಘಾತ!

 

ಎಸ್.ಆರ್.ವೆಂಕಟೇಶ ಪ್ರಸಾದ್

     ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು 25 ಮೂಲಾಂಶ  (ಬಿಪಿಎಸ್) ಕಡಿತ ಮಾಡಿ ಶೇಕಡ 5.25ಕ್ಕೆ ನಿಗದಿ ಮಾಡಿದೆ.ಇದರಿಂದ ವಸತಿ,ವಾಹನ, ಮತ್ತು ವಾಣಿಜ್ಯ ಸಾಲಗಳು ತುಸು ಅಗ್ಗವಾಗಲಿವೆ.ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ದುಬಾರಿ ಬಡ್ಡಿ ದರದಿಂದ ಬಸವಳಿದಿರುವ ಸಾಲಗಾರರಲ್ಲಿ  ತುಸು ನಿರಾಳತೆ ಮೂಡಿಸಿದೆ.

       ಸಾಲಗಳು ಮತ್ತು ಠೇವಣಿಗಳ ಮೇಲಿನ ಬಡ್ಡಿ ದರವನ್ನು ನಿರ್ಧರಿಸುವ  ಪ್ರಸಕ್ತ ಹಣಕಾಸು ವರ್ಷದ ಕೊನೆಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯ ನಂತರ ಆರ್ ಬಿ ಐ ಗವರ್ನರ್ ಸಂಜಯ್ ಮಲ್ಹೋತ್ರಾ  ಇದನ್ನು ಪ್ರಕಟಿಸಿದರು.

     ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಕಳೆದ ಮೂರು ತಿಂಗಳುಗಳಿಂದ ಶೇಕಡಾ ಎರಡಕ್ಕಿಂತ ಕಡಿಮೆ ಆಗಿರುವುದರಿಂದ ದರ ಕಡಿತ ಮಾಡಲಾಗಿದೆ.

           2020 ರಲ್ಲಿ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರೆಪೋ ದರವನ್ನು ಶೇಕಡಾ 0.40 ರಷ್ಟು ಇಳಿಸಿದ್ದ  ರಿಸರ್ವ್ ಬ್ಯಾಂಕ್,2025 ರ ಫೆಬ್ರವರಿವರೆಗೆ ಸುಮಾರು ಐದು ವರ್ಷಗಳ ಕಾಲ ಬಡ್ಡಿ ದರವನ್ನು ಇಳಿಸದೆ ಯಥಾ ಸ್ಥಿತಿ ಕಾಯ್ದುಕೊಂಡಿತ್ತು.ಬದಲಿಗೆ,2022 ರಿಂದ 23 ರ ಮೇ ತಿಂಗಳವರೆಗೆ ಸತತವಾಗಿ  ಬಡ್ಡಿ ದರ ಏರಿಸಿತ್ತು.

     2025 ರ ಫೆಬ್ರವರಿ, ಏಪ್ರಿಲ್, ಮತ್ತು ಜೂನ್ ರ ವರೆಗಿನ ಮೂರು ಕಡಿತಗಳಲ್ಲಿ ರೆಪೋ ದರದಲ್ಲಿ ಒಟ್ಟು 100 ಮೂಲಾಂಶ ಕಡಿತ ಮಾಡಿ ಶೇಕಡಾ 5.5 ಕ್ಕೆ ಇಳಿಸಿಲಾಗಿತ್ತು.ಈಗ 25 ಮೂಲಾಂಶ ಇಳಿಸಿ ಶೇಕಡಾ 5.25 ಕ್ಕೆ ನಿಗದಿ ಮಾಡಿದೆ.ರೆಪೋ ಬಡ್ಡಿ ದರ ಕಡಿತವು  ಆರ್ಥಿಕತೆಯಲ್ಲಿ ಹಣದ ಹರಿವನ್ನು ಹೆಚ್ಚಿಸುತ್ತದೆ.ಇದರಿಂದ ವ್ಯಾಪಾರ,ಉದ್ಯಮ ಮತ್ತು ಬಳಕೆಗೆ ಉತ್ತೇಜನ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

     ಈ ರೆಪೋ ದರ ಕಡಿತ  ಆರ್ಥಿಕತೆ ಮತ್ತು ಜನಸಾಮಾನ್ಯರ ಮೇಲೆ ದ್ವಿಮುಖ ಪರಿಣಾಮಗಳನ್ನು ಉಂಟುಮಾಡುತ್ತದೆ .

       ರೆಪೋ ದರ ಕಡಿತವನ್ನುವನ್ನು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಾಡಲಾಗುತ್ತದೆ. ಇದರಿಂದ ವ್ಯಾಪಾರ ಮತ್ತು ಉದ್ಯಮಿಗಳು ಪಡೆಯುವ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ. ಇದು ಹೊಸ ಯೋಜನೆಗಳಿಗೆ ಹೂಡಿಕೆಯನ್ನು ಉತ್ತೇಜಿಸುತ್ತದೆ.ಇದರಿಂದ ಉದ್ಯೋಗಾವಕಾಶ ಹೆಚ್ಚಬಹುದು. ಕಡಿಮೆ ಬಡ್ಡಿ ದರಗಳು  ಮನೆ ಖರೀದಿಯನ್ನು  ಕೈಗೆಟ್ಟುಕುವಂತೆ ಮಾಡುತ್ತದೆ. ಇದು ರಿಯಲ್ ಎಸ್ಟೇಟ್ ಮತ್ತು ಸಂಬಂಧಿತ ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ.

     ಫ್ಲೋಟಿಂಗ್ ರೇಟ್ ನಲ್ಲಿ ಸಾಲ ಪಡೆದು ಮನೆ ಮತ್ತು ಕಾರುಗಳನ್ನು ಖರೀದಿಸಿರುವವರ ಕಂತು (ಇಎಂಐ) ಹಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಸಾಲ ಪಡೆಯುವುದನ್ನು ಉತ್ತೇಜಿಸುತ್ತದೆ.ಆದರೆ, ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಹಣ ಇಟ್ಟು ಅದರಿಂದ ಬರುವ ಬಡ್ಡಿ ಹಣವನ್ನೇ ಬದುಕಿಗಾಗಿ ಆಶ್ರಯಿಸಿದ ಹಿರಿಯ ನಾಗರಿಕರಿಗೆ ಮತ್ತು ಉಳಿತಾಯ ಖಾತೆದಾರರಿಗೆ ಸಿಗುವ ಬಡ್ಡಿ ಹಣದ ಪ್ರಮಾಣ ಕಡಿಮೆಯಾಗುತ್ತದೆ.ಇದು ಅವರ ಪಾಲಿಗೆ ಆಘಾತ.

     

    ಇನ್ನೊಂದೆಡೆ, ಕಡಿಮೆ ಬಡ್ಡಿ ದರಗಳು ಸರಕು ಮತ್ತು ಸೇವೆಗಳ ಬೆಲೆಗಳನ್ನು ಕಡಿಮೆ ಮಾಡಬಹುದು. ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

    ವಿದೇಶಿಯರಿಗೆ ನಿರಾಸೆ: ರೆಪೋ ಬಡ್ಡಿ ದರದ ಕಡಿತ ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಬಯಸುವ ವಿದೇಶಿ ಹೂಡಿಕೆದಾರರಿಗೆ ನಿರಾಸೆಯನ್ನು ಉಂಟುಮಾಡುತ್ತದೆ. ಭಾರತೀಯ ಆಸ್ತಿಗಳಾದ ಬಾಂಡ್ ಮತ್ತು ಸ್ಥಿರ ಠೇವಣಿಗಳು ಆಕರ್ಷಣೆ ಕಳೆದುಕೊಳ್ಳುತ್ತವೆ.ಇದು ವಿದೇಶಿ ಹೂಡಿಕೆದಾರರು ತಮ್ಮ ಹಣವನ್ನು ಹೊರತೆಗೆಯಲು ಕಾರಣವಾಗಬಹುದು. ಈಗಾಗಲೇ ಈ ವರ್ಷ 17 ಬಿಲಿಯನ್ ಡಾಲರ್ ಭಾರತದಿಂದ ಹೊರತಗೆಲಾಗಿದೆ.

            ರೆಪೋ ದರ  ಕಡಿತವಾದಾಗಲೆಲ್ಲಾ ಸಾಮಾನ್ಯವಾಗಿ ರೂಪಾಯಿ ಮೌಲ್ಯ ಮತ್ತಷ್ಟು ಅಪಮೌಲ್ಯಗೊಂಡಿದೆ.ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಮಾರಾಟ ಮಾಡಿ ಹಣವನ್ನು ವಾಪಸ್ ಪಡೆಯುವಾಗ ರೂಪಾಯಿಯ ಮೌಲ್ಯದ ಮೇಲೆ ಒತ್ತಡ ಉಂಟಾಗಿ  ಅದರ ಮೌಲ್ಯ ಕುಸಿತಗೊಳ್ಳಲು ಕಾರಣವಾಗುತ್ತದೆ. ಈಗಾಗಲೇ ಅಮೆರಿಕದ ಡಾಲರ್ ಎದುರು  90 ರೂಪಾಯಿಗಳ ವಿನಿಮಯ ದರದ ಗಡಿ ದಾಟಿರುವ ರೂಪಾಯಿ     ಶುಕ್ರವಾರ (ಡಿ.5) ಕರೆನ್ಸಿ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ  89.98 ತಲುಪಿತ್ತು. ಮುಂದಿನ ಮೂರು ತಿಂಗಳ ಅವಧಿಯಲ್ಲಿ ರೂಪಾಯಿ ಡಾಲರ್ ಎದುರು ಮತ್ತಷ್ಟು ಅಪಮೌಲ್ಯಗೊಂಡು 91.50ಗಳ ಸುತ್ತ-ಮುತ್ತ ಜಾರಬಹುದು ಎಂದು ಅಂದಾಜಿಸಲಾಗಿದೆ.

          ಷೇರು ಪೇಟೆ ಸಕಾರಾತ್ಮಕ ಪ್ರತಿಕ್ರಿಯೆ: ರೆಪೋ ದರ ಕಡಿತ ಭಾರತೀಯ ಷೇರು ಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.ಶುಕ್ರವಾರ ಬಿಎಸ್ ಸಿ ಸೆನ್ಸೆಕ್ಸ್  447 ಅಂಕ ಏರಿಕೆ ಕಂಡು 85,712 ಅಂಶಕ್ಕೆ ಹಾಗೂ ನಿಫ್ಟಿ 153 ಅಂಶ ಏರಿಕೆ ಕಂಡು 26,186 ಅಂಶಕ್ಕೆ ತಲುಪಿವೆ.

    ರಫ್ತುದಾರರಿಗೆ ಅನುಕೂಲ: ದುರ್ಬಲ ರೂಪಾಯಿ ರಫ್ತುದಾರರಿಗೆ ಲಾಭ ತರುತ್ತದೆ.ಅವರ ಉತ್ಪನ್ನಗಳು ವಿದೇಶಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತವೆ. ಆದರೆ,ಆಮದುದಾರರು ಹೆಚ್ಚು ಡಾಲರ್ ಗಳನ್ನು ಪಾವತಿಸಬೇಕಾಗುವುದರಿಂದ ದುರ್ಬಲ ರೂಪಾಯಿ ಆಮದುದಾರರಿಗೆ ನಷ್ಟ ಉಂಟು ಮಾಡುತ್ತದೆ.ದುರ್ಬಲ ರೂಪಾಯಿ ಆಮದು ವಸ್ತುಗಳ ಬೆಲೆಯನ್ನು ಹೆಚ್ಚಿಸಬಹುದು, ಇದು ಹಣದುಬ್ಬರಕ್ಕೆ ದಾರಿ ಮಾಡಿ ಕೊಡಬಹುದು.

     ಒಟ್ಟಾರೆ, ರೆಪೋ ದರ ಕಡಿತವು ರೂಪಾಯಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಡವಾಳ ಹರಿವು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

 

ಆರ್ಥಿಕತೆಯ ಮೇಲೆ ಪರಿಣಾಮ

ಸಾಲಗಳು: ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗುವ ನಿರೀಕ್ಷೆಯಿದೆ.ಹೂಡಿಕೆಗಳು: ಕಡಿತವು ವ್ಯಾಪಾರ ಹೂಡಿಕೆಗಳನ್ನು ಹೆಚ್ಚಿಸಬಹುದು, ಏಕೆಂದರೆ ಕಂಪನಿಗಳಿಗೆ ಸಾಲ ಪಡೆಯುವುದು ಅಗ್ಗವಾಗುತ್ತದೆ.ಷೇರು ಮಾರುಕಟ್ಟೆ: ಕಡಿಮೆ ಬಡ್ಡಿದರಗಳು ಷೇರು ಮಾರುಕಟ್ಟೆಯನ್ನು ಉತ್ತೇಜಿಸಬಹುದು, ವಿಶೇಷವಾಗಿ ಬ್ಯಾಂಕಿಂಗ್, ಆಟೋ ಮತ್ತು ರಿಯಲ್ ಎಸ್ಟೇಟ್‌ನಂತಹ ದರ-ಸೂಕ್ಷ್ಮ ವಲಯಗಳಲ್ಲಿ.ಉಳಿತಾಯ: ಉಳಿತಾಯ ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗಬಹುದು, ಏಕೆಂದರೆ ಬ್ಯಾಂಕುಗಳು ಠೇವಣಿ ದರಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ.

 

 

ರೆಪೋ ದರ ಎಂದರೆ....

    ಭಾರತೀಯ ರಿಸರ್ವ್ ಬ್ಯಾಂಕ್, ವಾಣಿಜ್ಯ ಬ್ಯಾಂಕುಗಳಿಗೆ ಹಣದ ಕೊರತೆಯಾದಾಗ ಸರ್ಕಾರಿ ಭದ್ರತೆಗಳನ್ನು ಅಡಮಾನವಾಗಿ ಪಡೆದು ಸಾಲ ನೀಡುತ್ತದೆ.ಆ ಸಾಲಕ್ಕೆ ವಿಧಿಸುವ ಬಡ್ಡಿ ದರವನ್ನು ರೆಪೋ ದರ ಎನ್ನುವರು. ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಆರ್ಥಿಕತೆಯನ್ನು ಸ್ಥಿರಗೊಳಿಸಲು ಈ ದರವನ್ನು ಬಳಸಲಾಗುತ್ತದೆ.