ಸಿದ್ದರಾಮಯ್ಯ ವಯಸ್ಸಿನ ಕಾರಣಕ್ಕೆ ಅಧಿಕಾರ ರಾಜಕೀಯ ತೊರೆಯಬೇಕೆ?

ondu galige, siddaramaiah

ಸಿದ್ದರಾಮಯ್ಯ ವಯಸ್ಸಿನ ಕಾರಣಕ್ಕೆ  ಅಧಿಕಾರ ರಾಜಕೀಯ ತೊರೆಯಬೇಕೆ?

 

ಸಿದ್ದರಾಮಯ್ಯ ವಯಸ್ಸಿನ ಕಾರಣಕ್ಕೆ

ಅಧಿಕಾರ ರಾಜಕೀಯ ತೊರೆಯಬೇಕೆ?

ಒಂದು ಗಳಿಗೆ

                    ಕುಚ್ಚಂಗಿ ಪ್ರಸನ್ನ

“ಸಿದ್ದರಾಮಯ್ಯ ಅವರು ಅಧಿಕಾರ ರಾಜಕೀಯಕ್ಕೆ ನಿವೃತ್ತಿ ಘೋಷಿಸಲಿ” - ಮೈಸೂರಿನ ಗೆಳೆಯ ರಾಜೇಶ್ ಅವರ ಫೇಸ್ ಬುಕ್ ಪೋಸ್ಟ್‍ನಲ್ಲಿ ನಿನ್ನೆ ಸಂಜೆ ಕಾಣಿಸಿಕೊಂಡ ಘೋಷಣೆ ಇದು.

ಜಾಹಿರಾತು, ನಾಟಕ, ಸಿನಿಮಾ, ಸಾಹಿತ್ಯ ಚಟುವಟಿಕೆಗಳ ಜೊತೆಗೆ ನಾಟಕಕಾರ ಪ್ರಸನ್ನ ಅವರ ಬೇಷರತ್ ಬೆಂಬಲಿಗರಾಗಿರುವ ಚಾಮರಾಜನಗರ ಮೂಲದ ಸಮಾಜವಾದಿ ಅಧ್ಯಯನ ಕೇಂದ್ರದ ರಾಜೇಶ್ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಒಂದು ಫಿನಿಶಿಂಗ್ ಕೊಡುವ ಕೆಲಸಕ್ಕೆ ಯಾಕಪ್ಪಾ ಕೈ ಹಾಕಿದರು ಅಂತ ಕುತೂಹಲಗೊಂಡೆ.ಅವರ ಪೋಸ್ಟ್ ನೋಡಿದ ಒಂದು ಕ್ಷಣವೂ ಸುಮ್ಮನೇ ಇರಲಾಗದೇ ನೇರ ಅವರಿಗೇ ಕರೆ ಮಾಡಿದೆ, “ ಸಿದ್ದರಾಮಯ್ಯನವರು ಅಧಿಕಾರ ರಾಜಕೀಯದಿಂದ ನಿವೃತ್ತಿಯಾಗಬೇಕೆಂಬ ನಿಮ್ಮ ಒಂದು ಸಾಲಿನ ಘೋಷಣೆಗೆ ಒಂದು ಪದದ ಕಾರಣ ಕೊಡಬಲ್ಲಿರಾ” ಅಂತ ಕೇಳಿದೆ.

“ವಯಸ್ಸಾಯ್ತಲ್ಲ ಸಾರ್” ಅಂತ ಅಂದರು ರಾಜೇಶ್.

“ ಸರಿ, ವಯಸ್ಸನ್ನು ಮಾನದಂಡ ಮಾಡಿಕೊಳ್ಳೋದಾದರೇ ಇಂಡಿಯಾದ ಎಲ್ಲ ವಯಸ್ಸಾದ ರಾಜಕಾರಣಿಗಳು ಅಧಿಕಾರ ರಾಜಕೀಯದಿಂದ ನಿವೃತ್ತಿ ಹೊಂದಲಿ” ಅಂತ ಯಾಕೆ ಹೇಳಬಾರದು ನೀವು” ಅಂತಂದೆ.

“ ಅದು ಹಂಗಲ್ಲ ಸಾರ್, ಇದು ನನ್ನ ಲಾಸ್ಟ್ ಚುನಾವಣೆ ಅಂತ ಅವರೇ ಹೇಳಿಕೊಂಡಿದ್ದರಲ್ವ, ಮತ್ತೆ ಮತ್ತೆ ಯಾಕೆ ಚುನಾವಣೆಗೆ ನಿಲ್ತಾರೆ, ಅಲ್ಲಿ ಬಾದಾಮಿಗೆ ಹೋಗಿ ನಿಲ್ತಾರೆ, ಅಲ್ಲಿ ಒಂದು ಸೀಟ್ ನಷ್ಟ ಆಯಿತಲ್ವಾ, ಮತ್ತೆ ಅಧಿಕಾರಕ್ಕೆ ಬರೋ ಮಾತಾಡ್ತಾರೆ. ವಯಸ್ಸಾದ ಮೇಲೆ ಸುಮ್ಮನಿದ್ದರೆ ಆಗಲ್ವ” ಅಂತ ಅಂದರು ರಾಜೇಶ್.

“ ಒಂದು ಕೆಲಸ ಮಾಡಿ ರಾಜೇಶ್,ನೀವು ಹೆಂಗಿದ್ರೂ ಘೋಷಿತ ಸಮಾಜವಾದಿ, ಸಮಾಜವಾದಿ ಅಧ್ಯಯನ ಕೇಂದ್ರ ಅಂತ ಸಂಸ್ಥೆ ಕೂಡಾ ಮಾಡಿಕೊಂಡಿದ್ದೀರ, ಸಿದ್ದರಾಮಯ್ಯನವರು ಯಾಕೆ ಅಧಿಕಾರ ರಾಜಕೀಯದಿಂದ ದೂರ ಇರಬೇಕು ಅಥವಾ ನಿವೃತ್ತಿ ಪಡೆಯಬೇಕು ಅಂತ” ಒಂದು ಲೇಖನ ಬರೆದುಕಳಿಸಿ ಪ್ರಕಟಿಸುತ್ತೇನೆ, ಒಂದು ಸಾಲಿನ ಘೋಷಣೆ ಪರಿಣಾಮ ಬೀರಲ್ಲ.” ಅಂತಂದೆ.

ಒಂದು ದಿನ ಕಾದೆ, ರಾಜೇಶ್ ಕಡೆಯಿಂದ ಏನೂ ಬರಲಿಲ್ಲ, ಹಾಗಾಗಿ ಅವರ ಪೋಸ್ಟ್ ನ ಮತ್ತೊಮ್ಮೆ ನೋಡಿದೆ. ಅವರ ಒಂದಷ್ಟು ಫ್ರೆಂಡ್‍ಗಳು ಪ್ರತಿಕ್ರಿಯೆ ಹಾಕಿದ್ದರು. ಅವುಗಳಲ್ಲಿ ಮುಖ್ಯವಾದ ಕೆಲವು ಹೀಗಿವೆ,

ಗೋವಿಂದರಾಜ್: “ ಯಾಕೆ?”

ರಾಜೇಶ್: ವಯಸ್ಸಾಯ್ತಲ್ವ

ಗೋವಿಂದರಾಜ್: “ಓಹ್ ಹಂಗೆ”

*****

ವಿಷಕಂಠೇಗೌಡ: “ಟಗರು ಸುಮ್ಕಿರದೆ ಗುಮ್ ತದ ಮತ್ತೆ ಕೊಟ್ಟಿಗೆಲಿರೋ ಕುರಿಗಳೆಲ್ಲ ಎರಡು ಮೂರು ಗುಂಪಾಯ್ತವೆ. ತೋಳ ಬಂದು ಸಿಡೆ ಬಿದ್ದ ಕುರಿಗಳನ್ನ ಎತ್ತಾಕೊಂಡು ಹೋಯ್ತದ”

*****

ಶಿವ ಮೈಸೂರು: ಅರಳು ಮರಳು ಅಗಿಲ್ವಲ್ಲ

*****

ಎಂ.ಜಿ.ಸಿದ್ಧರಾಮಯ್ಯ: ಮೋದಿಯವರು ರಾಜಕೀಯ ನಿವೃತ್ತಿ ಘೋಷಿಸಿದರೆ ಸಿದ್ಧರಾಮಯ್ಯನವರು ಘೋಷಿಸುತ್ತಾರೆ.

*****

ಶಿವನಂಜಯ್ಯ : ಹಂಗೆ ಹೇಳೋಕೆ ನಾವ್ಯಾರು”

*****

ವಿನಯಕೃಷ್ಣ: oh ಯಡಿಯೂರಪ್ಪna ವಾಪಸ್ bring back ಮಾಡೋ plan ah

******

ರಂಗೇಗೌಡ.ಟಿ: ಇದೇ ಕೊನೆ ಚುನಾವಣೆ

ರಾಜೇಶ್: ಇದೇ ಸಮಸ್ಯೆ. ಇವೆಲ್ಲ ಹೇಳದೆ ರಾಜಕೀಯ ಮಾಡೋಕಾಗಲ್ವಾ

ಬೆಳವಾಡಿ ನವೀನ ಕುಮಾರ್: 2013 ರಲ್ಲೆ ಇದೇ ಮಾತನ್ನ ಸಿದ್ದರಾಮಯ್ಯ ಅವರು ಹೇಳಿದ್ರು. ತುಂಬಾ ಖುಷಿ ಆಗಿತ್ತು ನನಗೆ. ದೇವೆಗೌಡರ ತರ ಇವರಲ್ಲ. ಹೊಸಬರನ್ನ ಬೆಳುಸ್ತಾರೆ ಅಂತ.

  • • • •

ಬೆಳವಾಡಿ ನವೀನ ಕುಮಾರ್: ಅವರ ಮಗ ಶಾಸಕರಾದರಲ್ಲ ಅವರು ಕುಟುಂಬ ರಾಜಕಾರಣ ದ ವಿರೋಧಿ,

*****

ಮೈಮ್ ರಮೇಶ್: ಇಲ್ಲಿವರೆಗೆ ಸಿದ್ದರಾಮಯ್ಯ ಅಂತ ಹೇಳಿ ತಕ್ಷಣ ಈ ಹೇಳಿಕೆ ನೀಡಿರುವ ಹಿನ್ನೆಲೆ ಏನು? ಯಾಕೆ? ನೀವು ಆ ಕಡೆ ಸೇರಿದಂತೆ ಕಾಣುತ್ತಿದೆ. ಕೈಗೆ ಏನಾದರು ಕೊಟ್ಟಿದ್ದಾರೆ ಅಂತ ಕಾಣುತ್ತದೆ ಎಂತಹ ವಿಪರ್ಯಾಸ,ನೀವು ಈ ರೀತಿ ಹೇಳಿಕೆ ಕೊಡಬಾರದು ರಾಜೇಶ್ ನೀವು ಒಂದು ಮಾಧ್ಯಮದಲ್ಲಿ ಇರುವವರು , ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ಹೇಳಿಕೆ ಕೊಡಬೇಕು ನಮಸ್ಕಾರ.

*****

ಅಬ್ರಹಾಂ ಡಿಸಿಲ್ವಾ: ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಇಲ್ಲದ್ದಿದ್ದರೆ ಏನಾಗ್ತಿತ್ತು?

******

ಫೇಸ್ ಬುಕ್ ಎಂದರೆ ಎಕೋ ಚೇಂಬರ್ ಅಂತ ಯಾರೋ ಹೇಳಿದ್ದರು. ಅಲ್ಲಿ ನಾವು ಹಾಕಿದ್ದೇ ತಿರುಗಿ ನಮಗೆ ಕಾಣಿಸುತ್ತದೆ, ಫೇಸ್‍ಬುಕ್‍ನಲ್ಲಿ ನಮ್ಮೊಂದಿಗೆ ಇರುವವರೆಲ್ಲ ನಮ್ಮ ಗೆಳೆಯರು ಅಥವಾ ಸಮಾನ ಮನಸ್ಕರೇ ಆಗಿರುತ್ತಾರೆ. ಒಂದೇ ಒಂದು ಭಿನ್ನ ಧ್ವನಿ ಕೇಳಿಬಂದರೂ, ಆ ಕೂಡಲೇ ಅವರನ್ನು ಅನ್‍ಫ್ರೆಂಡ್ ಮಾಡುವುದೋ ಬ್ಲಾಕ್ ಮಾಡುವುದೋ ಮಾಡಿಬಿಡುತ್ತೇವೆ. ಹೀಗಾಗಿ ನಿಜ ಜಗತ್ತಿನ ಪ್ರತಿಕ್ರಿಯೆ ಏನೆಂಬುದು ನಮಗೆ ಎಂದಿಗೂ ಅರಿವಾಗುವುದೇ ಇಲ್ಲ. ಸುಮ್ಮನೆ ನಮ್ಮ ಇಗೋಗಳನ್ನು ತಣಿಸುವ ಮಾಧ್ಯಮವಾಗಿ ಫೇಸ್ ಬುಕ್ ಬಳಕೆಯಾಗುತ್ತಿದೆ.

ಯಡಿಯೂರಪ್ಪನವರ ನಂತರ ರಾಜ್ಯದ ಚುಕ್ಕಾಣಿ ಹಿಡಿದಿರುವ ಬಸವರಾಜ ಬೊಮ್ಮಾಯಿ ಅವರನ್ನೇ ಅವರ ಪಕ್ಷ ಪೂರ್ತಿ ಅವಧಿಗೆ ಇರಲು ಬಿಟ್ಟರೆ, 2023ರ ಮೇ ತಿಂಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುತ್ತದೆ. ಆದರೆ ಕೆಲವರಲ್ಲಿ ಈಗಲೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸೀಟುಗಳನ್ನು ಗೆಲ್ಲಬಹುದು, ಒಂದು ವೇಳೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿಬಿಡಬಹುದೆಂಬ ಆತಂಕ ಬಹಳಷ್ಟು ಜನರಲ್ಲಿ ಮನೆಮಾಡಿಬಿಟ್ಟಿದೆ. ಜಮೀರ್ , ಇಬ್ರಾಹಿಂ ತರದವರ ಸಾಮಾನ್ಯ ಹೇಳಿಕೆಗಳೂ ಮಾಧ್ಯಮಗಳಲ್ಲಿ ಹಾಗೂ ಪಕ್ಷದ ಅಂಗಳದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರವನ್ನು ಪಡೆದುಕೊಳ್ಳುತ್ತಿವೆ.

ಆದರೆ ಸಿದ್ದರಾಮಯ್ಯನವರೂ ಸೇರಿದಂತೆ ಕಾಂಗ್ರೆಸ್‍ನ ಬಹುಪಾಲು ಮುಖಂಡರು, ಯಡಿಯೂರಪ್ಪನವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಬಯಸಿದ್ದರು.ಅವರು ಬದಲಾಗುವ ಸ್ಪಷ್ಟ ಸೂಚನೆಗಳು ಕಾಣತೊಡಗಿದಾಗ ಸಿದ್ದಣ್ಣನವರೂ ಸೇರಿದಂತೆ “ಯಡಿಯೂರಪ್ಪನವರ ಬದಲಾವಣೆಗೆ ಕಾಂಗ್ರೆಸ್ ಬಯಸಿಲ್ಲ” ಎಂಬರ್ಥ ಬರುವ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ನೀಡಿದರು. ಯಡಿಯೂರಪ್ಪನವರೇ ಇದ್ದರೆ ಒಂಥರಾ ನಮಗೆ ಲಾಭವೇ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಸುದ್ದಿಗೋಷ್ಟಿಯಲ್ಲೇ ಇಂಗಿತ ವ್ಯಕ್ತಪಡಿಸಿದ್ದರು. ಈಗ ಅದೆಲ್ಲ ಮುಗಿದ ಕತೆ. ಹಾಗಾಗಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಸಿದ್ದುನೋ, ಡಿಕೆನೋ ಎಂಬ ಕಾಂಗ್ರೆಸ್‍ನೊಳಗಿನ ಚರ್ಚೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.

ಅದ್ಸರಿ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಆಗುವುದೇ ಆದಲ್ಲಿ ತಪ್ಪೇನಿದೆ ಎಂದು ಕೇಳುವವರೂ ಇದ್ದಾರೆ. ಅವರ ಐದು ವರ್ಷಗಳ ಆಡಳಿತಾವಧಿಯಲ್ಲಿ ಯಾವುದೇ ಪ್ರಮಾದಗಳು ನಡೆದಿಲ್ಲ, ಹೇಳಿಕೊಳ್ಳುವಂತ ಭ್ರಷ್ಟಾಚಾರದ ಹಗರಣಗಳು ನಡೆದಿಲ್ಲ. ತೀರಾ ಕಳಪೆ ಆಡಳಿತವನ್ನೇನೂ ನೀಡಿಲ್ಲದೇ ಇರುವಾಗ, ಬಹುಪಾಲು ಜನೋಪಕಾರಿ ಹಾಗೂ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿರುವ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲು ಯಾವ ಅನರ್ಹತೆಗಳೂ ಅವರಿಗಿಲ್ಲ ಎನ್ನುತ್ತಾರೆ ಅವರ ಬೆಂಬಲಿಗರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಮೊದಲ ಸಲ ಅಸ್ತಿತ್ವಕ್ಕೆ ತಂದ ಕೀರ್ತಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಬೇಕು. 2006ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಮೈತ್ರಿ ಮುರಿದು ಬಿಜೆಪಿ ಜೊತೆ ಕೂಡಿಕೆ ಮಾಡಿಕೊಂಡ ಕುಮಾರಣ್ಣ 20/20 ಮ್ಯಾಚ್‍ನಲ್ಲಿ ಬ್ಯಾಟಿಂಗ್ ಬಿಟ್ಟು ಕೊಡದೇ “ವಚನ ಭ್ರಷ್ಟ”ರಾದ ಪರಿಣಾಮವದು. ಅವತ್ತಿನ ಮಟ್ಟಿಗೆ ದಳದ ಸರದಿ ಬಂದಾಗ ಮುಖ್ಯಮಂತ್ರಿ ಆಗಬೇಕಿದ್ದ ಅರ್ಹ ಮತ್ತು ಸೂಕ್ತ ಅಭ್ಯರ್ಥಿ ಸಿದ್ದರಾಮಯ್ಯನವರೇ ಆಗಿದ್ದರು. ಆಗಲೇ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದ ಸಿದ್ದರಾಮಯ್ಯನವರು ಅನಿವಾರ್ಯವಾಗಿ ದಳ ತೊರೆದು ಕಾಂಗ್ರೆಸ್ ಸೇರಬೇಕಾಗಿ ಬಂತು.

1983ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಾಗ ಅವರಿಗೆ ಕೇವಲ 35 ವರ್ಷ. ನಂತರ ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದರು. 1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಪಶುಸಂಗೋಪನೆ ಸಚಿವರಾಗಿ, ನಂತರ ರೇಶ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆಯಲ್ಲಿ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. 1992ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು. 1994ರ ಚುನಾವಣೆಯಲ್ಲಿ ಗೆದ್ದು ಜನತಾದಳ ಸರ್ಕಾರದಲ್ಲಿ ಹಣಕಾಸು ಸಚಿವರಾದರು.

1999ರ ವಿಧಾನ ಸಭಾ ಚುನಾವಣೆಯ ಹೊತ್ತಿಗೆ ಜನತಾ ದಳ ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳದ ಅಧ್ಯಕ್ಷರಾದರು. ಆದರೆ ಆ ವರ್ಷ ಅವರು ಸೋತರು.

2004ರ ಹೊತ್ತಿಗಾಗಲೇ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದ ಸಿದ್ದರಾಮಯ್ಯನವರು ಜೆಡಿಎಸ್-ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಿದಾಗ 2 ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ಇಲ್ಲಿ ಕುಮಾರಸ್ವಾಮಿಯ ಕ್ಷಿಪ್ರ ಕ್ರಾಂತಿಗೆ ಸಿದ್ದು ರಾಜಕೀಯ ಭವಿಷ್ಯ ಮಸುಕಾಯಿತು.

ಅಹಿಂದ ನಾಯಕರಾಗಿ ರೂಪುಗೊಂಡು ನಂತರ ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಗಿ ಬಂದ ಗೆದ್ದ ಸಿದ್ಧರಾಮಯ್ಯ 2008ರಲ್ಲಿ ಶಾಸಕರಾದರು, 2013ರ ಚುನಾವಣೆಯ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದರು. 2013ರ ಮೇ 10 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ಮೂರು ದಿನಗಳ ಬಳಿಕ ಮೇ 13 ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದರು. ಅವರ ಆಡಳಿತಾವಧಿಯಲ್ಲಿ ಜಾರಿ ಮಾಡಿದ ಅನ್ನಭಾಗ್ಯ,ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‍ಗಳಂಥ ಜನಪರ ಯೋಜನೆಗಳು ಮತ್ತೆ ಸರ್ಕಾರ ರಚಿಸಲು ಅವರಿಗೆ ನೆರವಾಗಲಿಲ್ಲ.

ಜೆಡಿಎಸ್ ಜೊತೆ ಮಾಡಿಕೊಂಡ ಮೈತ್ರಿ ಸರ್ಕಾರ ಹೆಚ್ಚು ದಿನ ಬಾಳಲಿಲ್ಲ, ವಿರೋಧಪಕ್ಷದ ನಾಯಕರಾಗಿಯೂ ಉತ್ತಮ ಕಾರ್ಯನಿರ್ವಹಿಸುತ್ತಿರುವ ಸಿದ್ದರಾಮಯ್ಯ ವರ್ಸಸ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳೇ ಆಗಿದ್ದಾರೆ. ಜೊತೆಗೆ ದಲಿತ ಮುಖ್ಯಮಂತ್ರಿ ಆಗ್ರಹದ ಹಿಂದೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಜಿ.ಪರಮೇಶ್ವರ ಅವರನ್ನು ಅವರ ಸಮುದಾಯಗಳು ಅಪೇಕ್ಷಿಸುತ್ತಿವೆ.

ಇಷ್ಟೆಲ್ಲ ಮಾಡುವ ಹೊತ್ತಿಗೆ ಸಹಜವಾಗಿಯೇ ಸಿದ್ದರಾಮಯ್ಯನವರಿಗೆ 72 ವರ್ಷ ಪೂರೈಸಿದೆ. ಸರ್ಕಾರಿ ನೌಕರಿ ಹೊರತುಪಡಿಸಿ ಇನ್ನಾವುದೇ ವೃತ್ತಿ ಮತ್ತು ಪ್ರವೃತ್ತಿಗಳಿಗೆ ನಿವೃತ್ತಿ ಅಥವಾ ವಯೋನಿವೃತ್ತಿ ಎಂಬುದಿಲ್ಲ. ಅವರವರ ದೇಹ ಪ್ರಕೃತಿ ಹಾಗೂ ನಿರ್ವಹಣಾ ಸಾಮರ್ಥ್ಯವನ್ನು ಅವಲಂಬಿಸಿ ನಿರ್ವಹಿಸುವ ಸಾಧ್ಯತೆಗಳಿರುವಾಗ ನಿಮಗೆ ವಯಸ್ಸಾಯಿತು ಅಧಿಕಾರ ರಾಜಕಾರಣದಿಂದ ನಿವೃತ್ತರಾಗಿ ಎಂದು ಆಗ್ರಹಪಡಿಸುವುದರಲ್ಲಿ ಅರ್ಥವಿಲ್ಲ.

ರಾಜ್ಯದ ಮಟ್ಟಿಗೆ ಪಕ್ಷದಲ್ಲಿ ಅಯಾ ರಾಜಕಾರಣಿಗೆ ಇರುವ ಜನಪ್ರಿಯತೆ ಮತ್ತು ಅವರು ಪಕ್ಷವನ್ನು ಅಧಿಕಾರದ ಗದ್ದುಗೆಯ ಸಮೀಪಕ್ಕೆ ಕೊಂಡೊಯ್ಯುವ ಸಾಮಥ್ರ್ಯವನ್ನು ಆಧರಿಸಿ ಆಯಾ ಹೈಕಮಾಂಡ್‍ಗಳು ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸುತ್ತವೆ. ಈಗ ಬಿಜೆಪಿಯ ಮೂಲ ನೆಲೆ ಎಂದು ಭಾವಿಸಿರುವ ಗುಜರಾತ್‍ನಲ್ಲೇ ನೋಡಿ ಒಂದು ಅವಧಿಗೆ ಮೂವರು ಮುಖ್ಯಮಂತ್ರಿಗಳು ರಾತ್ರೋರಾತ್ರಿ ಬದಲಾಗುತ್ತಾರೆ. ಒಮ್ಮೆ ಮಂತ್ರಿಯಾದವರಿಗೆ ಎರಡನೇ ಚಾನ್ಸ್ ಸಿಗುವುದೇ ಇಲ್ಲ. ಕರ್ನಾಟಕದಲ್ಲೂ ಬಿಜೆಪಿ ಮೊದಲ ಅವಧಿಯಲ್ಲಿ ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಹಾಗೂ ಎರಡನೇ ಅವಧಿಯಲ್ಲಿ ಯಡಿಯೂರಪ್ಪ ಈಗ ಬಸವರಾಜ ಬೊಮ್ಮಾಯಿ ಮ್ಯೂಸಿಕಲ್ ಚೇರ್ ಆಟ ನಡೆಯುತ್ತಲೇ ಇದೆ.

ಯಾರು ಹಿತವರು ನಿಮಗೆ ಈ ಮೂವರೊಳಗೆ ಎಂಬಂತೆ, ಕರ್ನಾಟಕದ ಮತದಾರನಿಗೆ ಬಿಜೆಪಿ,ಕಾಂಗ್ರೆಸ್ ಮತ್ತು ಜೆಡಿಎಸ್‍ಗಳಲ್ಲಿ ಯಾರನ್ನಾದರೂ ಒಬ್ಬರನ್ನು ನೇರಾನೇರಾ ಆಯ್ಕೆ ಮಾಡಿಕೊಳ್ಳದೇ ಹೋದಲ್ಲಿ, ಈಗ ಕಳೆದ ಮೂರು ವರ್ಷಗಳಿಂದ ಅನುಭವಿಸುತ್ತಿರುವುದನ್ನೇ ಮುಂದಕ್ಕೂ ಅನುಭವಿಸಬೇಕಾಗಿ ಬರುತ್ತದೆ. ಇಲ್ಲಿ ಸಿದ್ದರಾಮಯ್ಯ ಅಥವಾ ಇನ್ನಾವುದೇ ರಾಜಕೀಯ ನಾಯಕರ ವಯಸ್ಸು ಮುಖ್ಯವಾಗುವುದಿಲ್ಲ. ಅವರ ದೂರದರ್ಶಿತ್ವ, ಒಳನೋಟಗಳೇ ಮುಖ್ಯವಾಗುತ್ತವೆ.