ಕಡೆಗೂ ಕಾಂಗ್ರೆಸ್ ತ್ಯಜಿಸಿದ ಮುದ್ದಹನುಮೇಗೌಡರು

ಕಡೆಗೂ ಕಾಂಗ್ರೆಸ್ ತ್ಯಜಿಸಿದ ಮುದ್ದಹನುಮೇಗೌಡರು

ಕಡೆಗೂ ಕಾಂಗ್ರೆಸ್ ತ್ಯಜಿಸಿದ ಮುದ್ದಹನುಮೇಗೌಡರು

 

ಕಡೆಗೂ ಕಾಂಗ್ರೆಸ್ ತ್ಯಜಿಸಿದ ಮುದ್ದಹನುಮೇಗೌಡರು

ತುಮಕೂರು: ಜಿಲ್ಲೆಯ ಬೆರಳೆಣಿಕೆಯಷ್ಟು ಗಟ್ಟಿ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್.ಪಿ.ಮುದ್ದಹನುಮೇಗೌಡರು ಇವತ್ತು ಅಧಿಕೃತವಾಗಿ ಕಾಂಗ್ರೆಸ್ಸನ್ನು ಎರಡನೇ ಸಲ ತೊರೆದಿದ್ದಾರೆ.

ಮುದ್ದಹನುಮೇಗೌಡರು ಸೆ.01ರ ಗುರುವಾರ ರಾಜಧಾನಿಯಲ್ಲಿ ಕ್ರಮವಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪಕ್ಷ ತೊರೆಯುತ್ತಿರುವ ನಿರ್ಧಾರವನ್ನು ಖುದ್ದು ತಿಳಿಸಿದ್ದಾರೆ. ಈ ಸಂಜೆ ಪಕ್ಷ ತ್ಯಜಿಸುವ ಪತ್ರ ಕಳಿಸುತ್ತೇನೆ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೋರಿದ್ದಾರೆ.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ತ್ಯಜಿಸುವ ಹಾಗೂ 2023ರ ವಿಧಾನ ಸಭಾ ಚುನಾವಣೆಯಲ್ಲಿ ಅವರ ಗುಡ್ ಓಲ್ಡ್ ಕುಣಿಗಲ್‍ ನಿಂದ ಕಣಕ್ಕಿಳಿಯುವ ತೀರ್ಮಾನ ತಿಳಿಸಿದ್ದಾರೆ.

‘ಪಕ್ಷ ತೊರೆಯುವ ನಿರ್ಧಾರ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರಂತೆ,  ಆದರೆ, ‘ಪಕ್ಷ ಬಿಡಬೇಕಾದರೆ ನನ್ನ ಕಾರಣ ಇರಬೇಕು ಇಲ್ಲವೇ ಪಕ್ಷದಿಂದ ಆಗಿರಬೇಕು. ಅದು ನನ್ನ ಕಡೆಯಿಂದ ಆಗಿದ್ದರೆ ಪಕ್ಷ ಸ್ಪಷ್ಟವಾಗಿ ಹೇಳಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ? ನಾಯಕರನ್ನ ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ’ ‘ರಾಜ್ಯಸಭಾ ಚುನಾವಣೆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ದೂರವಾಣಿ ಕರೆ ಮಾಡಿ ಪಕ್ಷದಲ್ಲೇ ಇರುವಂತೆ ಹೇಳಿದ್ದರು. ಬಳಿಕ ಏನನ್ನೂ ಮಾತನಾಡಿಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲು ಬಯಸುವುದಿಲ್ಲ. ಪಕ್ಷವನ್ನು ಬ್ಲಾಕ್ ಮೇಲ್ ಮಾಡಲು ಹೀಗೆ ಮಾಡುತ್ತಿಲ್ಲ‘

‘ಇಷ್ಟು ವರ್ಷ ನಡೆದ ರಾಜಕೀಯ ಧೋರಣೆಗಳು ಈಗಿನ ಪರಿಸ್ಥಿತಿಗೆ ಕಾರಣ’ ,1989ರಲ್ಲಿ ಕಾಂಗ್ರೆಸ್ ‘ಬಿ’ ಪಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟಿದ್ದರು. ನಂತರ 2019ರಲ್ಲಿ ಹಾಲಿ ಸಂಸದನಾಗಿದ್ದರೂ ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ನಾನು ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ. ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ’ ಎಂದಿದ್ದಾರೆ.

 

2014ರ ಲೋಕಸಭೆಯಲ್ಲಿ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿ ಚುನಾಯಿತರಾಗಿದ್ದ ಮುದ್ದಹನುಮೇಗೌಡರಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣಕ್ಕಿಳಿಸುವ ಕಾರಣ ನೀಡಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಆ ಚುನಾವಣೆಯಲ್ಲಿ ದೇವೇಗೌಡರು ಸೋತರು, ಒಂದು ವೇಳೆ ಸಿಟ್ಟಿಂಗ್ ಎಂಪಿ ಮುದ್ದಹನುಮೇಗೌಡರಿಗೇ ಟಿಕೆಟ್ ಕೊಟ್ಟಿದ್ದರು ಅವರು ಖಂಡಿತಾ ಗೆಲ್ಲುತ್ತಿದ್ದರು ಎಂಬುದು ಇಡೀ ಜಿಲ್ಲೆಗೆ ಗೊತ್ತಿತ್ತು.

ಹಾಗೆ ಟಿಕೆಟ್ ತಪ್ಪಿಸುವಾಗ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಮುದ್ದಹನುಮೇಗೌಡರಿಗೆ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಭರವಸೆ ನೀಡಿತ್ತಂತೆ. 2019ರಿಂದ ಈವರೆಗೆ ಎರಡು ರಾಜ್ಯಸಭಾ ಚುನಾವಣೆಗಳು ನಡೆದವು, ಜೊತೆಗೆ ಎರಡು ವಿಧಾನ ಪರಿಷತ್ ಚುನಾವಣೆಗಳೂ ಬಂದು ಹೋದವು. ಆದರೆ 137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಗೆ ಮುದ್ದಹನುಮೇಗೌಡರಂಥ ತತ್ವಬದ್ಧ ಪಾರ್ಲಿಮೆಂಟೇರಿಯನ್ ಮುಖ್ಯವಾಗಲಿಲ್ಲ. ಹಾಗಾಗಿ ಪರಿಣಾಮ ಮೂರು ವರ್ಷ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಅನುಭವೀ ನ್ಯಾಯವಾದಿ ಮೂರೂಕಾಲು ವರ್ಷ ಹೆಬ್ಬೂರಿನ ತೋಟದಲ್ಲಿ ಅಡ್ಡಾಡುತ್ತ,ಅವರ ಹಳೆಯ ವಿಧಾನಸಭಾ ಕ್ಷೇತ್ರ ಕುಣಿಗಲ್‍ನ ಅಭಿಮಾನಿಗಳೊಂದಿಗೆ ಒಡನಾಡುತ್ತ, ಆಗಾಗ ಮಾಧ್ಯಮಗಳಲ್ಲಿ ಜ್ವಾಲಾಮುಖಿಯಂತೆ ಸಾತ್ವಿಕ ಸಿಟ್ಟನ್ನು ಹೊರಹಾಕುತ್ತ, ಅಳೆದೂ ತೂಗಿ ಗಟ್ಟಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಈಗಾಗಲೇ ಜೆಡಿಎಸ್‍ನಲ್ಲಿ ಒಂದು ಸಲ ವಿಧಾನಸಭೆ ಹಾಗೂ ಒಂದು ಸಲ ಲೋಕಸಭೆಗೆ ಸ್ಪರ್ಧಿಸಿ ಸೋತಿರುವ ಗೌಡರು ಮತ್ತೊಮ್ಮೆ ತೆನೆ ಹೊರುವ ಸಾಹಸ ಮಾಡಲಾರರು. ಮತ್ತು ಮುದ್ದಹನುಮೇಗೌಡರ ಮುಂದಿನ ನಡೆ ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ಆದರೆ ಮುದ್ದಹನುಮೇಗೌಡರು ‘ಕೈ’ ಚಾಚಿರುವ ಕೆಸರಿನ ‘ಕಮಲ’ಕ್ಕೆ ಅವರ ರಾಜಕೀಯ ಬದುಕಿನ ಮತ್ತೊಂದು ದುಸ್ಸಾಹಸವಾಗದಿರಲಿ ಎಂದು ಆಶಿಸೋಣ.

 

ಮುದ್ದಹನುಮೇಗೌಡರ ಹಿನ್ನೋಟ

ಸೊಬಗನಹಳ್ಳಿ ಪಾಪೇಗೌಡ(ಕರಿಗೌಡ) ಮುದ್ದಹನುಮೇಗೌಡರು ತುಮಕೂರು ಜಿಲ್ಲೆಯ ಸಜ್ಜನ, ಸಭ್ಯ , ಸುಸಂಸ್ಕೃತ ರಾಜಕಾರಣಿ ಎಂದು ಹೆಸರಾದವರು.

ಕುಣಿಗಲ್ ತಾಲೂಕಿನ ಸೊಬಗನಹಳ್ಳಿಯಲ್ಲಿ 4.3.1954ರಂದು ಜನಿಸಿದ ಮುದ್ದಹನುಮೇಗೌಡರು ಬೆಂಗಳೂರಿನ ಎಸ್‍ಜೆಆರ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ನ್ಯಾಯವಾದಿಯಾಗಿ ಪ್ರಾಕ್ಟೀಸ್ ಮಾಡಿದವರು, 1983ರಲ್ಲಿ ಮುನ್ಸೀಫ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಮೂರು ವರ್ಷ ಸೇವೆ ಸಲ್ಲಿಸಿದರು. ವೃತ್ತಿಯಲ್ಲಿ ವಕೀಲರಾಗಿ ಪ್ರವೃತ್ತಿಯಲ್ಲಿ ರೈತರಾಗಿರುವ ಮುದ್ದಹನುಮೇಗೌಡರಿಗೆ ನ್ಯಾಯಾಲಯದ ಬದಲು ರಾಜಕೀಯ ರಂಗದಲ್ಲಿ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ನ್ಯಾಯ ಒದಗಿಸಬಹುದು ಅಂಥ ಆಗ ಅನ್ನಿಸಿತ್ತೇನೋ ಗೊತ್ತಿಲ್ಲ.

ರಾಜಕಾರಣಕ್ಕಿಳಿದ ಮುದ್ದಹನುಮೇಗೌಡರು  ನೇರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 1989ರಲ್ಲಿ ಅವರ ನೇಟಿವ್ ವಿಧಾನ ಸಭಾ ಕ್ಷೇತ್ರವಾದ ಕುಣಿಗಲ್‍ನಿಂದ ವಿಧಾನಸಭೆಗೆ ಚುನಾಯಿತರಾಗಬಯಸಿದ್ದರಲ್ಲಿ ಅವರ ತಪ್ಪೇನೂ ಇರಲಿಲ್ಲ. ಕಾಂಗ್ರೆಸ್‍ನಿಂದ ‘ಬಿ’ ಫಾರಂ ಕೂಡಾ ಸಿಕ್ಕಿತ್ತು. ಕುಣಿಗಲ್‍ ನಿಂದ 1983 ಹಾಗೂ 1985ರಲ್ಲಿ ಎರಡು ಸಲ ಅತ್ಯಧಿಕ ಲೀಡಿಂಗ್‍ನಿಂದ ಗೆದ್ದಿದ್ದ ಸಚಿವರೂ ಆಗಿದ್ದ ದಿವಂಗತ ವೈ.ಕೆ.ರಾಮಯ್ಯನವರನ್ನು ಸೋಲಿಸಬಲ್ಲೆ ಎಂಬ ಯೌವ್ವನದ ಹುಮ್ಮಸ್ಸಿನಲ್ಲಿದ್ದ ಮುದ್ದಹನುಮೇಗೌಡರ ‘ಕೈ’ಯಲ್ಲಿದ್ದ ‘ಬಿ’ ಫಾರಂ ಅನ್ನು ಪಕ್ಷ ಕಸಿದುಕೊಂಡಿತು. ತುಮಕೂರು ಲೋಕಸಭೆಯಿಂದ 1978ರ ಇಂದಿರಾ ಎಮರ್ಜೆನ್ಸಿ ವಿರೋಧಿ ಅಲೆಯೂ ಸೇರಿ 1971ರಿಂದ ಮೂರು ಅವಧಿಗೆ ಗೆದ್ದು ಸಂಸದರಾಗಿದ್ದ ಹಳೇ ಪೈಲ್ವಾನ್ ಕೆ.ಲಕ್ಕಪ್ಪನವರ ಪಾಲಾಯಿತು ಕುಣಿಗಲ್ ನ ಕಾಂಗ್ರೆಸ್ ಟಿಕೆಟ್. ಕೊಂಡಾಪುರ ಲಕ್ಕಪ್ಪನವರು ಆ ಚುನಾವಣೆಯಲ್ಲಿ ವೈಕೆಆರ್ ವಿರುದ್ಧ ಗೆದ್ದೂಬಿಟ್ಟರು.

ಈ ಅಪಮಾನವನ್ನು ಸಹಿಸಿಕೊಂಡದ್ದಕ್ಕೆ ಮುದ್ದಹನುಮೇಗೌಡರಿಗೆ ನಷ್ಟವೇನೂ ಆಗಲಿಲ್ಲ, ಆನಂತರದ 1994ರ ಚುನಾವಣೆಯಲ್ಲಿ ಅದೇ ಕುಣಿಗಲ್ ಕ್ಷೇತ್ರದಿಂದ ಅದೇ ವೈ.ಕೆ.ರಾಮಯ್ಯನವರ ಎದುರು ಗೆದ್ದರು, ಮತ್ತೆ 1999ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್. ನಿಂಗಪ್ಪನವರನ್ನು ಸೋಲಿಸಿ ಮತ್ತೆ ವಿಧಾನಸಭೆಗೆ ನಡೆದರು. ಅಷ್ಟು ಹೊತ್ತಿಗೆ ಸಮಾಜವಾದಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ವೈ.ಕೆ.ರಾಮಯ್ಯನವರು ಹುಲಿಯೂರು ದುರ್ಗದಿಂದ ಚುನಾಯಿತರಾದರು. 2004ರ ಚುನಾವಣೆಯಲ್ಲಿ ಹೆಚ್. ನಿಂಗಪ್ಪನವರು ಗೆದ್ದ ಕಾರಣ ಮುದ್ದಹನುಮೇಗೌಡರು ಹ್ಯಾಟ್ರಿಕ್‍ ಗೆಲುವಿನಿಂದ ವಂಚಿತರಾದರು.

ಆದರೆ ಮುದ್ದಹನುಮೇಗೌಡರು ನಂಬಿ ನಡೆದಿದ್ದ ಕಾಂಗ್ರೆಸ್ 2008ರಲ್ಲಿ ಮತ್ತೆ ‘ಕೈ’ ಕೊಟ್ಟಿತು. ಬಿ.ಬಿ.ರಾಮಸ್ವಾಮಿ ಗೌಡರು ಕಾಂಗ್ರೆಸ್ ಟಿಕೆಟ್ ಪಡೆದರು. ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಹಠದಲ್ಲಿ ಜೆಡಿಎಸ್ ಸೇರಿದರೂ, ಆ ಪಕ್ಷವೂ 1989ರಲ್ಲಿ ಕಾಂಗ್ರೆಸ್ ಮಾಡಿದ್ದಂತೆ ‘ಬಿ’ ಫಾರಂನ್ನು ಕೊಟ್ಟು ಕಿತ್ತುಕೊಂಡಿತು. ಆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಟಿಕೆಟ್ ಪಡೆದ ಮಾಜಿ ಸಚಿವ ಡಿ.ನಾಗರಾಜಯ್ಯ ಹಾಗೂ ಬಿಜೆಪಿಯಿಂದ ಕಣಕ್ಕಿಳಿದಿದ್ದ ನಾಗರಾಜಯ್ಯನವರ ಸೋದರ ಡಿ.ಕೃಷ್ಣಕುಮಾರ್ ಇಬ್ಬರೂ ಕಾಂಗ್ರೆಸ್‍ನ ಬಿ.ಬಿ.ರಾಮಸ್ವಾಮಿಗೌಡರಿಗೆ ಶರಣಾದರು. ಅಲ್ಲಿಂದ ಇಲ್ಲಿವರೆಗೂ (ಅಂದರೆ 2013 ಹಾಗೂ 2018) ಕೃಷ್ಣಕುಮಾರ್ ರನ್ನರ್ ಅಪ್ ಆಗುತ್ತಲೇ ಬಂದಿದ್ದಾರೆ. ಇದೇ ಮುದ್ದಹನುಮೇಗೌಡರಿಂದಾಗಿ 2023ಕ್ಕೆ ಡಿ.ಕೃಷ್ಣಕುಮಾರ್ ಅವರಿಗೆ ಟಿಕೆಟ್ ಸಿಗುವ ಗ್ಯಾರಂಟಿಯೂ ಇಲ್ಲ ಎಂದರೆ ಇಬ್ಬರಿಗೂ ಸಿಟ್ಟು ಬರುತ್ತದೇನೋ?

2008ರಲ್ಲಿ ವಿಧಾನ ಸಭೆಗೆ ಟಿಕೆಟ್ ಮಿಸ್ ಆದರೂ  ಮುದ್ದಹನುಮೇಗೌಡರಿಗೆ ಮರುವರ್ಷವೇ ಜೆಡಿಎಸ್ 2009ರ ಲೋಕಸಭಾ  ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ, ಲೋಕಸಭಾ ಕ್ಷೇತ್ರದಲ್ಲಿ ಗೌಡರ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ಅನುವುಮಾಡಿಕೊಟ್ಟಿತು. ಹಾಗಾಗಿ ಇವರಿಗೆ 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಜಿ.ಎಸ್.ಬಸವರಾಜು ಎದುರು ಗೆಲುವು ಸಾಧಿಸಲು ಸಾಧ್ಯವಾಯಿತು.

ಮುದ್ದಹನುಮೇಗೌಡರು ತುಮಕೂರು ಲೋಕ ಸಭಾ ಸದಸ್ಯರಾಗಿ ಗರಿಷ್ಟ ಪ್ರಮಾಣದಲ್ಲಿ ಲೋಕಸಭೆಯಲ್ಲಿ ಹಾಗೂ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಸಾಕಷ್ಟು  ಸಾಕ್ಷ್ಯಗಳಿವೆ. ಮುದ್ದಹನುಮೇಗೌಡರು ಸ್ಥಗಿತಗೊಂಡಿದ್ದ ಹೆಚ್ ಎಂ ಟಿ ನಿವೇಶನದಲ್ಲಿ ಇಸ್ರೋ ಶಾಖೆ ಸ್ಥಾಪಿಸುವಲ್ಲಿ ಯಶಸ್ವಿಯಾದರು, ಆದೇಕೋ ಏನೋ ಅವರ ನಂತರ ಸಂಸದರಾದವರು ಇಸ್ರೋ ಕುರಿತು ಎಲ್ಲೂ ಚಕಾರ ಎತ್ತುತ್ತಿಲ್ಲ. ಮೈತ್ರಿಯ ಹೆಸರಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸದೇ ಹೋಗಿದ್ದಲ್ಲಿ ಕರ್ನಾಟಕದಿಂದ ಡಿ.ಕೆ.ಸುರೇಶ್ ಜೊತೆಗೆ ಮುದ್ದಹನುಮೇಗೌಡರು ಕಾಂಗ್ರೆಸ್‍ನ್ನು ಪ್ರತಿನಿಧಿಸುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.

2018ರ ವಿಧಾನ ಸಭಾ ಚುನಾವಣೆಯಲ್ಲಿ ತುಮಕೂರು ಲೋಕ ಸಭಾ ಕ್ಷೇತ್ರಕ್ಕೆ ಸೇರಿರುವ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಶಿಫಾರಸು ಮಾಡುವ ಅಧಿಕಾರ ಆಗ ಸಂಸದರಾಗಿದ್ದ ಮುದ್ದಹನುಮೇಗೌಡರಿಗಿತ್ತು. ಆಗ ಗೌಡರು ಅವರಿಗೆ ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ನೆರವಾಗಿದ್ದವರ ರುಣ ತೀರಿಸಲು ಹೋದ ಪರಿಣಾಮ ಮುದ್ದಹನುಮೇಗೌಡರ ಜನಪ್ರಿಯತೆಗೆ ತುಸು ಧಕ್ಕೆ ಬಂದಿತ್ತಾದರೂ, ಅದು ಲೋಕಸಭೆಯಲ್ಲಿ ಅವರ ಗೆಲುವಿಗೆ ಅಡ್ಡಿ ಬರುವಷ್ಟು ದೊಡ್ಡ ಗಾತ್ರದ್ದಾಗಿರಲಿಲ್ಲ.

2019ರಲ್ಲಿ ಸಿಟ್ಟಿಂಗ್ ಎಂಪಿಯಾಗಿದ್ದರೂ “ನಾನು ಲೋಕಸಭೆಗೆ ಮತ್ತೆ ಕಾಲಿಡದಂತೆ ಮಾಡಲಾಯಿತು” ಎನ್ನುವ ಮುದ್ದಹನುಮೇಗೌಡರ ನೋವಿನ ನಿಗೂಢ ಮಾತಿನ ಅರ್ಥ ವಿವರಣೆಯನ್ನೂ ಮುಂದೊಮ್ಮೆ ಅವರೇ ಕೊಡಬಹುದು ಕಾದು ನೋಡಿ.