ಸ್ತ್ರೀ ಅಪಹರಣದ ನೆರಳಲ್ಲಿ ಒಡಮೂಡಿದ "ಚಂಡಶಾಸನ"

ಸಾಮಾನ್ಯವಾಗಿ ನಾವು ಗಂಡ ಸತ್ತಾಗ ಅವನೊಡನೆ ಹೆಂಡತಿಯು ಸಹಗಮನ ಮಾಡುವುದನ್ನು ಕೇಳಿದ್ದೇವೆ. ಆದರೆ ಸುನಂದೆ ಪರಸ್ತ್ರೀ,ಅವಳೊಂದಿಗೆ ಬೆಂಕಿಗೆ ಬೀಳುವ ಚಂಡಶಾಸನನ ಪ್ರೀತಿಗೆ ನಾವು ಏನು ಹೇಳೋಣ!?

ಸ್ತ್ರೀ ಅಪಹರಣದ ನೆರಳಲ್ಲಿ ಒಡಮೂಡಿದ "ಚಂಡಶಾಸನ"

ದಯಾ ಗಂಗನಘಟ್ಟ

     ಪ್ರೀತಿ,ಪ್ರೇಮ,ಪ್ರಣಯ ಮಾನವನ ಜೀವನದಲ್ಲಿ ಹಾದುಹೋಗುವ ಬಹಳ ಚಂದನೆಯ ಅಂಕಗಳು,ಅವು ಪರಸ್ಪರ ಒಪ್ಪಿತವಾಗಿದ್ದಾಗ ಬಾಳನ್ನು ಚಂದನೆಯ ಹಾದಿಯಲ್ಲಿ ನಡೆಸುತ್ತವೆ. ಅದೇ ಪ್ರೇಮ,ಪ್ರಣಯವು ಒಲ್ಲದ,ಬಲವಂತದ,ಏಕಮುಖದ ಹರಿವಾದರೆ ಒಂದಿಡೀ ಕುಟುಂಬವನ್ನೂ,ಜೊತೆಜೊತೆಗೇ ಒಂದಿಡೀ ರಾಜ್ಯವನ್ನೂ ನಾಶಪಡಿಸುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳು ನಮಗೆ ದೊರೆಯುತ್ತವೆ.

    'ಹೋಮರ್' ನ 'ಈಲಿಯಡ್',ಕೃತಿಯಲ್ಲಿ ಹೆಲನ್ ಳ ಅಪಹರಣ, ನಮ್ಮ ರಾಮಾಯಣದ ಸೀತಾಪಹರಣ, 'ಮಲಿಕ್ ಮೊಹಮದ್ ಜೈಸಿ' ಯ 'ಪದ್ಮಾವತಿ' ಕತೆಯಲ್ಲಿನ ರಾಣಿಯ ಅಪಹರಣ ಇತ್ಯಾದಿಗಳನ್ನು ಗಮನಿಸಬಹುದು.

    ಇಬ್ಬರು ಅನುರೂಪ ದಂಪತಿಗಳ ನಡುವೆ ಬರುವ ಗೆಳೆಯನೋರ್ವ ಮೋಹ ಮತ್ತು ಪ್ರೀತಿಯ ಬಲೆಯಲ್ಲಿ ಬಿದ್ದು ತನ್ನನ್ನೂ ಸೇರಿದಂತೆ ಮೂವರ ಬದುಕನ್ನೂ ದುರಂತಕ್ಕೆ ಈಡು ಮಾಡಿ ಮೂರಾಬಟ್ಟೆ ಮಾಡುವ ದುರಂತ ಕತೆಯಿದು. ವಸುಷೇಣ,ಸುನಂದೆ ಮತ್ತು ಚಂಡಶಾಸನ ರ ಈ ಕತೆಯು ಎಂದೆಂದಿಗೂ ಕನ್ನಡ ಕಾವ್ಯಗಳಲ್ಲಿ ವಿಭಿನ್ನ ಅಸಾಂಪ್ರದಾಯಿಕ ಎನಿಸಿ ಸದಾ ಕಾವ್ಯಾಸಕ್ತರಲ್ಲಿ ಚರ್ಚೆಗೆ ವಸ್ತುವಾಗಿರುವ ವಿಷಯವಾಗಿದೆ.

    ಜನ್ನ ’ಅನಂತನಾಥ ಪುರಾಣ’ದಲ್ಲಿ ಒಲ್ಲದ ಪ್ರಣಯದ ವಿರುದ್ಧ ದಿಕ್ಕುಗಳನ್ನು ಬದುಕಿನ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಚಿತ್ರಿಸಿದ್ದಾನೆ, ಸೋಜಿಗವೆಂದರೆ ಜನ್ನ ಅಂದು ಕನ್ನಡಿ ಹಿಡಿದ ಪಾತ್ರಗಳು ಮತ್ತು ಅವನು ಎತ್ತುವ ಸಮಸ್ಯೆಗಳು ಇಂದಿಗೂ ಸಾಮಾಜಿಕವಾಗಿ ಜೀವಂತವಾಗಿವೆ.

    ಭರತಖಂಡದ ಪೌದನಪುರದ ಅರಸ ವಸುಷೇಣ. ಅವನ ಹೆಂಡತಿ ಸುನಂದೆ. ಆದರ್ಶ ಗಂಡಹೆಂಡತಿ ಬಹು ಪ್ರೇಮದಿಂದ, ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಹೀಗಿರಲು ಒಂದು ದಿನ ವಸುಷೇಣನ ಬಾಲ್ಯಸ್ನೇಹಿತನೂ,ರಾಜನೂ ಆದ ಚಂಡಶಾಸನನು ವಸುಷೇಣನನ್ನು ಕಾಣಲು ಬರುತ್ತಾನೆ, ವಸುಷೇಣನಿಗೆ ಬಹಳ ಸಂತೋಷವಾಗುತ್ತದೆ. ಮಹೋತ್ಸಾಹದಿಂದ ಸ್ನೇಹಿತನನ್ನು ಬರಮಾಡಿಕೊಳ್ಳುತ್ತಾನೆ. ತನ್ನ ಪಟ್ಟದಾನೆಯ ಮೇಲೆ ಕೂಡಿಸಿಕೊಂಡು ರಾಜಬೀದಿಯಲ್ಲಿ ಮೆರವಣಿಗೆಯಿಂದ ಅರಮನೆಗೆ ಕರೆತರುತ್ತಾನೆ. ಗೆಳೆಯನ ಮನಸ್ಸಿನ ಉಲ್ಲಾಸಕ್ಕಾಗಿ ಕಾವ್ಯ ಗೋಷ್ಠಿಗಳನ್ನೂ ಗೀತವಾದ್ಯಗಳನ್ನೂ ನಾಟನೃತ್ಯಗಳನ್ನೂ ಜಟ್ಟಿಕಾಳಗಗಳನ್ನೂ ವಸುಷೇಣನು ಏರ್ಪಡಿಸುತ್ತಾನೆ. ಹೀಗೆ ಹಲವು ದಿವಸಗಳನ್ನು ಗೆಳೆಯರಿಬ್ಬರೂ ಸಂತೋಷದಲ್ಲಿಯೇ ಕಳೆಯುತ್ತಾರೆ.

    ಇಂತಹ ಗೆಳೆತನದ ಮೇಲೆ ಅದಾವ ಮಾರಿಯ ಕಣ್ಣು ಬೀಳುತ್ತದೋ. ವಸುಷೇಣನ ರಾಣಿ ಸುನಂದಾದೇವಿಯ ಮೇಲೆ ಚಂಡಶಾಸನನಿಗೆ ಪ್ರೀತಿ ಅಂಕುರವಾಗಿಬಿಡುತ್ತದೆ.

"ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯೆಂಬರ ಹಾವಭಾವಮುಂ

ಪುರ್ವಿನ ಕೊಂಕು ಕಣ್ ಮಲರ ಕಾಂತಿ ಕದಂಪಿನ ತೆಳ್ಪು ಸಾಲ್ವುದಾ

ರೊರ್ವರೆ ಗೆಲ್ವುದಕ್ಕೆನಿಪ ರಾಣಿಯ "

   ಕಂಡ ಇವನು ಆಕೆ ತನ್ನ ಆತ್ಮೀಯ ಗೆಳೆಯನ ಪತ್ನಿ ಎಂಬುದನ್ನೂ ಮರೆಯುತ್ತಾನೆ. ತನ್ನನ್ನು ಸ್ನೇಹದಿಂದ, ಅಂತಃಕರಣದಿಂದ,ಆದರಾತಿಥ್ಯದಿಂದ ಕಂಡ ತನ್ನ ಸ್ನೇಹಿತನಿಗೆ ತಾನು ದ್ರೋಹ ಬಗೆಯುತ್ತಿದ್ದೇನೆ ಎನ್ನುವ ವಿವೇಚನೆಯೂ ಅವನಿಂದ ದೂರ ಸರಿಯುತ್ತದೆ.

   ಚಂಡಶಾಸನನಿಗೆ ಸುನಂದೆಯ ರೂಪು ‘ಕಾಮದೇವನ ಕರವಾಳ’ ದಂತೆ ಭಾಸವಾಗಿ ಅವಳಲ್ಲಿ ಅನುರಕ್ತನಾಗುತ್ತಾನೆ.

"ಪಕ್ಕಾಗದೆ ನಿಂದ ಪಲ್ಲವಕನಂಗಕ್ಕಾಯ್ತು ಅನಂಗಜ್ವರ"

   ಚಂಡಶಾಸನನ ಕಣ್ಣುಗಳು ಅವಳನ್ನು ದೃಷ್ಟಿಯಲ್ಲೇ ಸೇರಿದವು, ಅವಳ ಮಾತುಗಳ ಇಂಪನ್ನು ಕಿವಿಯು ಅನುಭವಿಸಿತು, ಅವಳು ಸುಳಿದೆಡೆ ಸುಳಿಯುವ ಕಂಪು ಅವನ ಮೂಗನ್ನು ಆಹ್ಲಾದಗೊಳಿಸಿತು, ಅವಳು ಬಡಿಸಿದ ಮೃಷ್ಟಾನ್ನವು ನಾಲಗೆಗೆ ರುಚಿಯನ್ನಿತ್ತಿತು, ಆದರೆ ಅವಳನ್ನು ಸೋಕುವ ಆಸೆಯು ಫಲಿಸದೆ ಅವನ ದೇಹಕ್ಕೆ ಮೋಹಜ್ವರವುಂಟಾಗುತ್ತದೆ,ಹೇಗಾದರೂ ಸುನಂದೆಯನ್ನು ತಾನು ಪಡೆಯಬೇಕು ಎಂಬುದಷ್ಟೇ ಅವನ ಗುರಿಯಾಗುತ್ತದೆ.

    ಒಂದು ದಿನ ವಸುಷೇಣ ಹಾಗೂ ಚಂಡಶಾಸನ ಇಬ್ಬರೂ ಬೇಟೆಗೆ ಹೊರಡುತ್ತಾರೆ. ಬೇಟೆಯಲ್ಲಿ ಗೆಳೆಯರಿಬ್ಬರೂ ಬೇರೆಬೇರೆಯಾಗುತ್ತಾರೆ. ಇತ್ತ ವಸುಷೇಣನ ಅಪ್ಪಣೆಯಂತೆ ತಯಾರಿಸಿದ ಭಕ್ಷ್ಯಭೋಜ್ಯಗಳನ್ನು, ಸುನಂದೆ ತನ್ನ ಗೆಳತಿಯರಿಂದ ತೆಗೆಸಿಕೊಂಡು ಪಲ್ಲಕ್ಕಿಯಲ್ಲಿ ಬರುತ್ತಿರುತ್ತಾಳೆ. ಹೊಂಚು ಹಾಕುತ್ತಿದ್ದ ಚಂಡಶಾಸನನಿಗೆ ಒಳ್ಳೆಯ ಸಮಯ ಸಿಕ್ಕುತ್ತದೆ. ಒಡನೆಯೆ ಪಲ್ಲಕ್ಕಿಯ ಮೇಲೆ ಹಾರಿ ಭರದಿಂದ ಸುನಂದೆಯನ್ನು ರಥದಲ್ಲಿ ಹಾಕಿಕೊಂಡು ವೇಗವಾಗಿ ಹೊರಟುಹೋಗುತ್ತಾನೆ. ಇದಾವುದರ ಕಲ್ಪನೆಯೂ ಇಲ್ಲದೆ ಉಲ್ಲಾಸದಿಂದ ಬರುತ್ತಿದ್ದ ಸುನಂದೆಗೆ, ಚಂಡಶಾಸನ ಮೇಲೆ ಬೀಳುತ್ತಿದ್ದಂತೆಯೇ, ಸಿಡಿಲುಬಡಿದಂತಾಗಿ ಮೂರ್ಛೆ ಹೋಗುತ್ತಾಳೆ. ಮೂರ್ಛೆ ತಿಳಿದು ಎಚ್ಚರಗೊಂಡ ಆಕೆ ಹೌಹಾರುತ್ತಾಳೆ, ಪಾಪ, ಅವಳು ವಸುಷೇಣದಲ್ಲಿ ನಂಬಿಕೆ ಇಟ್ಟುಕೊಂಡಿದ್ದಳು. ಗಂಡನ ಸ್ನೇಹಿತ, ಇಬ್ಬರೂ ಬಾಲ್ಯದಲ್ಲಿ ಒಟ್ಟಿಗೆ ಆಡಿ ಬೆಳೆದವರು ಎಂದು ಅವನನ್ನು ವಿಶ್ವಾಸದಿಂದ ಕಾಣುತ್ತಿದ್ದಳು. ಅವನು ಇಂತಹ ವಿಶ್ವಾಸದ್ರೋಹ ಮಾಡುತ್ತಾನೆ ಎಂಬ ಅನುಮಾನವೇ ಅವಳಿಗಿರಲಿಲ್ಲ. ವಿಶ್ವಾಸಘಾತಕನಾದ ಚಂಡಶಾಸನ ತನ್ನನ್ನು ಹೊತ್ತುಕೊಂಡು ಹೋಗುತ್ತಿರುವುದು ತಿಳಿದು ಅಳುತ್ತಾಳೆ, ಮೊರೆಯಿಡುತ್ತಾಳೆ. ’ಹಾಳು ಮನೆಯಲ್ಲಿ ನಾಯಿ ತುಪ್ಪದ ಪಾತ್ರೆಯನ್ನು ಕದ್ದು ತರುವಂತೆ, ಗಂಡನಿಲ್ಲದಾಗ ಹೆಣ್ಣನ್ನು ಕದ್ದು ತರುವುದು ವೀರನ ರೀತಿಯೇ?’ ಎಂದು ಮೂದಲಿಸುತ್ತಾಳೆ. ಆದರೆ ಪ್ರಯೋಜನವಾಗುವುದಿಲ್ಲ. ’ತಲೆಗಾಯಿರಿ ಈ ಭಟನನ್ನು, ಹೊಡೆದಿಕ್ಕಿರಿ ಈ ದ್ರೋಹಿಯನ್ನು’ ಎಂದು ದೇವದೇವತೆಯರಿಗೆಲ್ಲಾ ಸುನಂದೆ ಮೊರೆಯಿಡುತ್ತಾಳೆ. ಆದರೆ ಚಂಡಶಾಸನ ಸುನಂದೆಯನ್ನು ತನ್ನ ದುರ್ಗಕ್ಕೆ ಕೊಂಡೊಯ್ದು ಸೆರೆಯಲ್ಲಿಡುತ್ತಾನೆ.

    ಇತ್ತ ವಸುಷೇಣನು ಬೇಟೆಯಿಂದ ಹಿಂತಿರುಗಿ ಬರುತ್ತಾನೆ. “ದೇವಿ ಬಂದಳೇ? ಭೋಜನಕ್ಕೆ ಸಿದ್ಧ ಮಾಡಿರುವಳೇ? ಚಂಡಶಾಸನ ಎಲ್ಲಿ?” ಎಂದು ಕೇಳುತ್ತಾನೆ. ಸುನಂದೆಯ ಸಖೀ ಜನರು ಅಳುತ್ತಾ ನಡೆದ ಸಂಗತಿಯನ್ನು ವಿವರಿಸುತ್ತಾರೆ. ಅದನ್ನು ಕೇಳಿ ವಸುಷೇಣನು ದುಃಖದಿಂದ ಒಂದು ಕ್ಷಣ ಮೂರ್ಛೆಹೋಗುತ್ತಾನೆ. ಆಮೇಲೆ ಎಚ್ಚೆತ್ತು, ತನ್ನ ಹೆಂಡತಿಯಿಲ್ಲದೆ ಪಟ್ಟಣವನ್ನು ಪ್ರವೇಶಿಸುವುದಿಲ್ಲ, ಮೊದಲು ತನ್ನ ಕತ್ತಿಗೆ ಚಂಡಶಾಸನನ ಶಿರವನ್ನು ಊಟ ಮಾಡಿಸಿ, ಅನಂತರ ತಾನು ಊಟ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿ, ಚಂಡಶಾಸನನ ಮೇಲೆ ದಂಡೆತ್ತಿ ನಡೆಯುತ್ತಾನೆ. ಹಗಲು ಹೊತ್ತಿನಲ್ಲಿ ಎರಡು ಕಡೆಯ ಸೈನ್ಯಕ್ಕೂ ಹೋರಾಟ ನಡೆಯುತ್ತದೆ.

     ಚಂಡಶಾಸನ ಹಗಲಿನಲ್ಲಿ ಯುದ್ಧರಂಗದಲ್ಲಿದ್ದು, ರಾತ್ರಿ ಯುದ್ಧ ನಿಂತ ನಂತರ ಸುನಂದೆಯ ಬಳಿ ಬಂದು, ನಯವಾಗಿ ಅನೇಕ ವಿಧಗಳಿಂದ ಆಕೆಯ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಾನೆ. ಆದರೆ ತುಪ್ಪ ಸುರಿದ ಬೆಂಕಿ ಜ್ವಾಲೆಯಂತೆ ಸುನಂದೆಯ ಕೋಪ, ರೋಷ ಹೆಚ್ಚುತ್ತದೆ. ಸುನಂದೆಯ ನಿರ್ಧಾರದ ಮುಂದೆ ಅವನ ಪ್ರಯತ್ನಗಳೆಲ್ಲ ವಿಫಲವಾಗುತ್ತದೆ. “ನೀನು ಮಾಡಿದುದು ಕೆಟ್ಟ ಕೆಲಸ. ಅದಕ್ಕಾಗಿ ನಿನಗೆ ಶಿಕ್ಷೆ ಕಟ್ಟಿಟ್ಟಿದೆ. ನಾಳೆ ಬೆಳಿಗ್ಗೆ ನಿನ್ನ ತಲೆಯನ್ನು ಕಾರಾಗೃಹದ ಬಾಗಿಲಲ್ಲಿ ಕಟ್ಟುತ್ತಾರೆ” ಎಂದು ಕೋಪದಿಂದ ಹೇಳುತ್ತಾಳೆ. ಆದರೂ ಚಂಡಶಾಸನನಿಗೆ ಅವಳಲ್ಲಿದ್ದ ಅನುರಾಗ ಹೆಚ್ಚಾಗುತ್ತಲೇ ಹೋಗುತ್ತದೆ. ಅವನು ಸುನಂದೆಗೆ, “ನಾನು ನಿನ್ನನ್ನು ಬಿಡುವುದಿಲ್ಲ. ನೀನು ಸತ್ತರೆ ನಾನೂ ಸಾಯುತ್ತೇನೆ, ಉಳಿಯುವವನಲ್ಲ, ರಣರಂಗದಲ್ಲಿ ಆಗುವುದು ಆಗಲಿ” ಎಂದು ತನ್ನ ನಿರ್ಧಾರವನ್ನು ತಿಳಿಸಿ ಹೋಗುವನು.

    ಇಷ್ಟೆಲ್ಲಾ ಪ್ರಯತ್ನಗಳ ನಂತರವೂ ಸುನಂದೆ ಪ್ರೀತಿಸುವುದು ತನ್ನ ಗಂಡನನ್ನು ಮಾತ್ರ, ಅವಳ ಗಂಡ ಬದುಕಿರುವವರೆಗೂ ಆಕೆ ತನ್ನನ್ನು ವರಿಸುವುದಿಲ್ಲ ಎಂದು ಚಂಡಶಾಸನ ತೀರ್ಮಾನಿಸುತ್ತಾನೆ. ಅವಳ ಗಂಡ ಸತ್ತ ಎಂದು ಅವಳಿಗೆ ಅನ್ನಿಸಬೇಕು. ಆಗ ತನಗೆ ಬೇರೆ ಯಾರೂ ದಿಕ್ಕಿಲ್ಲ ಎಂದು ತನ್ನನ್ನೆ ವರಿಸುತ್ತಾಳೆ. ಆದರೆ ಗಂಡ ವಸುಷೇಣ ಸತ್ತ ಎಂದು ಅವಳಿಗೆ ಅನ್ನಿಸುವಂತೆ ಮಾಡುವುದು ಹೇಗೆ? ಅದಕ್ಕಾಗಿ ಒಂದು ಉಪಾಯ ಹೂಡುತ್ತಾನೆ. ಇಂದ್ರಜಾಲಿಗನಿಂದ ರಕ್ತ ಸೋರುತ್ತಿರುವ ವಸುಷೇಣನ ಮಾಯಾತಲೆಯನ್ನು ಮಾಡಿಸಿ ತರುತ್ತಾನೆ. ಅದನ್ನು ಸುನಂದೆಯ ಮುಂದೆ ಎಸೆಯುತ್ತಾನೆ. “ತೆಗೆದುಕೋ ನಿನ್ನ ಗಂಡನ ತಲೆಯನ್ನು!” ಎನ್ನುತ್ತಾನೆ.

   ಅದನ್ನು ಸುನಂದೆ ನಿಜವೆಂದೇ ನಂಬುತ್ತಾಳೆ. ಪಾಪ, ಸುನಂದೆಗೆ ದಿಗ್ಭ್ರಮೆ. ಆಕಾಶವೇ ಕಳಚಿಬಿದ್ದಂತೆ ಆಗುತ್ತದೆ. ದುಃಖವನ್ನು ಅವಳು ತಡೆಯಲಾರಳು. ಒಡನೆಯೇ ಅವಳ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ಪ್ರಾಣ ಹೋಗಿಬಿಡುತ್ತದೆ. ಇದನ್ನು ಕಂಡು ಚಂಡಶಾಸನಿಗೆ ದಿಗ್ಭ್ರಮೆ. ಹೀಗೆ ಆಗುತ್ತದೆ, ಗಂಡನ ತಲೆ ಎಂದು ಕಾಣುವ ಸುಳ್ಳು ತಲೆಯನ್ನು ನೋಡಿಯೇ ಸುನಂದೆ ಸಾಯುತ್ತಾಳೆ ಎಂದು ಅವನು ಯೋಚಿಸಿಯೇ ಇರಲಿಲ್ಲ. ಉಪಾಯದಿಂದ ಅವಳ ಮನಸ್ಸನ್ನು ಗೆಲ್ಲುತ್ತೇನೆ ಎಂದು ಮಾಡಿದ ಕೆಲಸ ಅವಳ ಪ್ರಾಣಕ್ಕೆ ಸಂಚಕಾರ ತಂದಿತು. ಅದರಿಂದ ಅವನೂ ಎದೆಬೆಂದು ಮೂರ್ಛೆಹೋಗುತ್ತಾನೆ.

   ಚಂಡಶಾಸನನಿಗೆ ಸುನಂದೆಯಲ್ಲಿ ಪ್ರೀತಿ ಬಹಳವಾಗಿತ್ತು. ಆದ್ದರಿಂದ ಆಕೆಯನ್ನು ಮುಂದಿನ ಜನ್ಮದಲ್ಲಾದರೂ ಪಡೆಯುವೆ, ಎಂದು ಹೇಳಿ ಅವಳ ಶವದ ಜೊತೆಯಲ್ಲೇ ಸಹಗಮನ ಮಾಡಿಬಿಡುತ್ತಾನೆ. ಆತನ ಇತರ ಪತ್ನಿಯರೂ ಗಂಡ ಚಂಡಶಾಸನನ ದಾರಿಯನ್ನೇ ಅನುಸರಿಸುತ್ತಾರೆ.ಹೀಗೆ ಚಂಡಶಾಸನನೂ ಅವನ ಎಲ್ಲ ಹೆಂಡತಿಯರೂ ಸಾಯುತ್ತಾರೆ.

    ಇತ್ತ ವಸುಷೇಣನು ಕೋಟೆಗೆ ಲಗ್ಗೆ ಇಟ್ಟಾಗ ಹೆಂಗಸರ ಗೋಳಿನ ಧ್ವನಿ ಕೇಳುತ್ತದೆ,ಸುನಂದೆಯ ಸಾವಿನ ಸುದ್ಧಿ ತಿಳಿಯುತ್ತದೆ. ’ನಾನು ಸತ್ತೆನೆಂದು ತಿಳಿದ ಒಡನೇ ಅವಳು ಸತ್ತಳು. ಅವಳು ಸತ್ತಮೇಲೆ ನಾನು ಉಳಿಯುವುದು ತರವಲ್ಲ, ಸುನಂದೆಯನ್ನು ಕಳೆದುಕೊಂಡು ನಾನು ಬದುಕಲಾರೆ’ ಎಂದು ವಸುಷೇಣ ನಿಶ್ಚಯಿಸಿಕೊಳ್ಳುತ್ತಾನೆ. ದುಃಖದಿಂದ ತನ್ನ ರಾಜಧಾನಿಗೆ ಹಿಂತಿರುಗುತ್ತಾನೆ ಮಗನಿಗೆ ಪಟ್ಟಕಟ್ಟುತ್ತಾನೆ. ಎಲ್ಲ ಭೋಗಗಳನ್ನು ತ್ಯಜಿಸಿ ತಪಸ್ಸಿಗೆ ಹೋಗುತ್ತಾನೆ.

ಇದು ಕಥಾ ಹಂದರ.

    ಸಾಮಾನ್ಯವಾಗಿ ನಾವು ಗಂಡ ಸತ್ತಾಗ ಅವನೊಡನೆ ಹೆಂಡತಿಯು ಸಹಗಮನ ಮಾಡುವುದನ್ನು ಕೇಳಿದ್ದೇವೆ. ಆದರೆ ಸುನಂದೆ ಪರಸ್ತ್ರೀ,ಅವಳೊಂದಿಗೆ ಬೆಂಕಿಗೆ ಬೀಳುವ ಚಂಡಶಾಸನನ ಪ್ರೀತಿಗೆ ನಾವು ಏನು ಹೇಳೋಣ!?

    ಸುನಂದೆಯನ್ನು ಕಾಡುತ್ತಾ ಬೇಡುತ್ತಿದ್ದ ‘ಗಂಡುದೊಳ್ತು’ ಕೊನೆಗೆ “ಬಿಡೆ ನಾಂ ನೀಂ ಸಯೆ ಸಾವೆನಲ್ಲದೆ ಉಳಿಯೆಂ ನೀನೊಲ್ದಡೇನ್ ಒಲ್ಲದಿರ್ದೊಡಮೇಂ ನಾನೆರಡಿಲ್ಲದೊಲ್ದೆಂ” ಎನ್ನುವ ದೃಢ ನಿರ್ಧಾರಕ್ಕೆ ಬರುವುದು, ಅದರಂತೆ ಆಕೆ ಸತ್ತಾಗ ಅವಳೊಡನೆ ಸಹಗಮನವನ್ನು ಮಾಡುವುದು ಇವೆಲ್ಲಾ ನಡೆಗಳೂ ನಮ್ಮನ್ನು ಚಕಿತಗೊಳಿಸುತ್ತವೆ. ದುರಂತದ ಸರಮಾಲೆಯನ್ನೇ ಸೃಷ್ಟಿಸುವ ಚಂಡಶಾಸನ ಮನುಷ್ಯನ ಮನಸ್ಸಿನ ಅಗಣಿತ ಸಾಧ್ಯತೆಗಳನ್ನು ಹೇಳುವ ಪಾತ್ರವಾಗಿ ಇಲ್ಲಿ ರೂಪುಗೊಂಡಿದ್ದಾನೆ.

    "ಮಾವಿಂಗೆ ಮಲ್ಲಿಗೆಗಳ್ ಕೂರ್ತಡೆ ಮಾವು ಕೂರ್ತುದು ವಸಂತಶ್ರೀಗೆ” ಎಂಬ ಸಮಸ್ಯೆಯನ್ನು ಇಲ್ಲಿ ಕವಿ ಪ್ರದರ್ಶಿಸಿ, ಮಾನವನ ಮೂಲಭೂತ ಅವಶ್ಯಕತೆಗಳಾದ ಪ್ರೇಮ ಮತ್ತು ಅದರದೇ ಕೊಂಡಿಯಾದ ಕಾಮ ಇವುಗಳು ಯಾರ ಹೃದಯದಲ್ಲಿ ಹೇಗೆ ಹುಟ್ಟತ್ತವೋ,ಹುಟ್ಟಿದ ನಂತರ ಎಷ್ಟೆಲ್ಲಾ ಕೋಲಾಹಲವನ್ನು ಸೃಷ್ಟಿಸುತ್ತವೋ, ಈ ತರದ ಸಂಬಂಧಗಳಲ್ಲಿ ಸರಿ- ತಪ್ಪು ಎಷ್ಟು? ಎಂಬ ಪ್ರಶ್ನೆಗಳನ್ನು ಎತ್ತುತ್ತಾನೆ ಮತ್ತು ಅವನ ಗೊಂದಲಗಳು ಇಂದಿಗೂ ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದಿವೆ.

    ಮಾನವ ಮನೋವಿಕಲ್ಪದ, ಮೈಮನಗಳ ಸುಳಿಯ, ಭಾವನಾ ಸಂಬಂಧಿ ಸೂಕ್ಷ್ಮ ಸಂವೇದನೆಯ ತಾಕಲಾಟಗಳನ್ನು ತನ್ನದೇ ಶೈಲಿಯಲ್ಲಿ ಹೇಳುತ್ತಾ ಸಾಗುವ ಜನ್ನ ನಮಗೆ ಇಷ್ಟವಾಗುವುದು ಇಂತಹುದೇ ಚರ್ಚಾಗೆ ಹಚ್ಚುವ ಸನ್ನಿವೇಶಗಳ ಕಾವ್ಯಸೃಷ್ಟಿಗಾಗಿ ಎನ್ನುವುದಂತೂ ನಿಜವೇ ಸರಿ. ಈ ನಿಟ್ಟಿನಲ್ಲಿ ಚಂಡಶಾಸನನ ಪ್ರಸಂಗವು ಆಧುನಿಕ ಕಾಲದ ಸಾಹಿತ್ಯ ದೃಷ್ಟಿಯಿಂದ ಒಂದು ಟಾರ್ಚ್ ಲೈಟ್ ಅಂತೆಯೇ ನನಗೆ ಕಂಡು ಬರುತ್ತದೆ ಮತ್ತು ನನ್ನನ್ನು ಮತ್ತೆ ಮತ್ತೆ ಓದಿನಲ್ಲಿ ತೊಡಗುವಂತೆ ಮಾಡುತ್ತದೆ.