ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ:  ಜನ ಮತ್ತು ಕನಸುಗಳ ಸಂಗಮ

  ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ:  ಜನ ಮತ್ತು ಕನಸುಗಳ ಸಂಗಮ

ಪತ್ರಿಕಾ ಛಾಯಾಗ್ರಾಹಕ ಕೆ. ವೆಂಕಟೇಶ್

      ಜಗತ್ತಿನಾದ್ಯಂತ ಕಡಲೆ ಕಾಯಿ  ಹಲವು ಹೆಸರಿನಿಂದ ಚಿರಪರಿಚಿತ. ಮಾಣಿ (ಲ್ಯಾಟಿನ್ ಅಮೆರಿಕಾದಲ್ಲಿ ಕರೆಯಲ್ಪಡುತ್ತದೆ. ಇಂಕಾ ನಾಗರಿಕತೆಯ ಈ ಸಸ್ಯವನ್ನು ಕ್ರಿ.ಶ. 1400 ರಿಂದ 1533 ನಡುವಿನ ಕಾಲಘಟ್ಟದಲ್ಲಿ ಜಗತ್ತಿನಲ್ಲಿ ಮೊಟ್ಟಮೊದಲು ಬೆಳೆದಿರುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಈಗ ಬಳಕೆಯಲ್ಲಿರುವ ಮಾಣಿ ಸ್ಪ್ಯಾನಿಷ್ ಪದ), ಅಮೇಂಡೋಯೀಂ (ಪೋರ್ಚುಗೀಸ್), ಪಿಸ್ತಾಶೆ ದೆ ತೆರ್ರೆ (ಫ್ರೆಂಚ್), ಇಂಗ್ಲೀಷ್ ನಲ್ಲಿ ಇದಕ್ಕೆ ಹಲವಾರು ನಾಮಧೇಯಗಳಾದ  ಅರ್ಥ್ನಟ್, ಮಂಕೀನಟ್ ಮತ್ತು ಗೂಬರ್ ಎಂದು ಕರೆಯಲಾಗುತ್ತದೆ. ಇದು ಗಾತ್ರದಲ್ಲಿ ಕಿರಿದಾದರೂ ಪಾತ್ರದಲ್ಲಿ ಹಿರಿದು.

    ಇಂಕಾ ನಾಗರಿಕತೆಯ ಜನ  ಇದನ್ನು [ಙಟ್ಹಿಛಿhiಛಿ] ಯ್ನೀಚಿಕ್  ಎಂದು ಕರೆಯುತ್ತಿದ್ದರು. ಪೆರುವಿನ ನದಿ ಪಾತ್ರಗಳಲ್ಲಿ ಮತ್ತು ಆಂಡೀಸ್ ಬೆಟ್ಟದಲ್ಲಿ ಇದನ್ನು ಬೆಳೆಯಲಾಗುತ್ತಿತ್ತು.  ಆಹಾರಕ್ಕಾಗಿ ಮಾತ್ರವಲ್ಲ, ಧಾರ್ಮಿಕವಾಗಿಯೂ ಇದನ್ನು ಬಳಸಲಾಗುತ್ತಿತ್ತು. ಸಮಾಧಿಗಳಲ್ಲಿ ಪಿತೃಗಳಿಗೆ ಕಡಲೆಕಾಯಿಯನ್ನು ನೇವೇದ್ಯವಿಡುತ್ತಿದ್ದರು. ಸ್ಪೇನ್ ಆಕ್ರಮಣದ ನಂತರ ಹಾಗೂ ಲ್ಯಾಟಿನ್ ಅಮೆರಿಕಾದಾದ್ಯಂತ ಕಡಲೆಕಾಯಿಯನ್ನು ಇಂದಿಗೂ ಮಾಣಿ ಎಂದೇ ಹೆಸರುವಾಸಿ.  


 
     ಕಡಲೆಕಾಯಿ ಸಾಮಾನ್ಯ ಸಸ್ಯವಲ್ಲ. ಇದು ಜಗತ್ತಿನ ಮೂರನೇ ಅತಿ ಹೆಚ್ಚು ಪೋಷಕಾಂಶವುಳ್ಳ ಸಸ್ಯ, ಹದಿಮೂರನೇ ಮುಖ್ಯ ಆಹಾರ ಬೆಳೆ, ನಾಲ್ಕನೇ ಪ್ರಮುಖ ಎಣ್ಣೆ ಬೀಜ. ಸಣ್ಣ ಕೋಶದಲ್ಲಿರುವ ಈ ದೈತ್ಯ ಬೀಜದ ಕಥೆ ವರ್ಣನಾತೀತ.  


 
ಜಾಗತಿಕ ವಾಣಿಜ್ಯ ಮಾರ್ಗಗಳು ನಿರ್ಮಾಣವಾಗುವುದಕ್ಕೂ ಹಿಂದಿನಿಂದಲೇ ಈ ಭವ್ಯ ಬೀಜದ ಯಾನ ಇತ್ತು. ಪೆರು ಮತ್ತು ಪೆರುಗ್ವೆಯ ಫಲವತ್ತಾದ ಮಣ್ಣಿನಲ್ಲಿ ಕಡಲೆಕಾಯಿ ವಿಕಸನಗೊಂಡಿತು.  ಹಲವು ಶತಮಾನಗಳ ನಂತರ, ಜೆಸ್ಯೂಟ್ ಪ್ರವಾಸಿಗರು ಈ ಪ್ರಭಾವಿ ಬೀಜವನ್ನು ದಕ್ಷಿಣ ಭಾರತದ ಮಲಬಾರ್ ಕರಾವಳಿಗೆ ತಂದರು. ಮಲಯಾಳದಲ್ಲಿ ಇದನ್ನು ಕಪ್ಪಲಂದಿ?“ಶಿಪ್ ನಟ್” ಎಂದು ಕರೆಯಲಾಗುತ್ತದೆ. ಪೋಚುಗೀಸ್ ಹಡಗುಗಳ ಮೂಲಕ ಸಮುದ್ರ ದಾಟಿ, ಸಾಗಿ ಬಂದ ಕಡಲೆಕಾಯಿಯ ಪಯಣ ರೋಚಕ.


 
    1500 ರ ವೇಳೆಗೆ, ಕಡಲೆ ಕಾಯಿ ಭಾರತೀಯ ಮಣ್ಣಿನಲ್ಲಿ ಬೇರು ಬಿಟ್ಟಿತ್ತು. 1800 ರ ವೇಳೆಗಾಗಲೇ ಮೈಸೂರು ಪ್ರಾಂತ್ಯದಲ್ಲಿ ರೈತರು ಹೆಚ್ಚಾಗಿ ಬೆಳೆಯಲಾರಂಭಿಸಿದರು. ಫ್ರಾನ್ಸಿಸ್ ಬುಕಾನನ್ (ನಂತರ ಹ್ಯಾಮಿಲ್ಟನ್)  ಅವರ A Journey from Madras Through the Countries of Mysore, Canara, and Malabar (1800-1801)  ಎಂಬ ತಮ್ಮ ಪ್ರವಾಸ ಕಥನದಲ್ಲಿ ಅರಿಶಿನದೊಡನೆ ಕಡಲೆಕಾಯಿ ಬೆಳೆಯಲಾಗುತ್ತಿತ್ತು ಎಂದು ದಾಖಲಿಸಿದ್ದಾರೆ. ದಕ್ಷಿಣ ಆರ್ಕಾಟ್, ತಮಿಳುನಾಡಿನಲ್ಲಿ ಇದನ್ನು ಮಣಿಲಕೋಟೈ?“ಮನಿಲಾ ನಟ್” ಎಂದೇ ಕರೆಯುತ್ತಾರೆ. ಜಲ ಮಾರ್ಗಗಳಲ್ಲಿ ಇದನ್ನು ವಿನಿಮಯದ ಸರಕಾಗಿ ಪರಿಚಯಿಸಲಾಯಿತು.


 
     ಭಾರತದಲ್ಲೀಗ ಕಡಲೆಕಾಯಿ ಬೆಳೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿದೆ. ದೇಶಕ್ಕೆ ಬಹುದೊಡ್ಡ ಪ್ರಮಾಣದ ಕಡಲೆಕಾಯಿ ಬೀಜ ಇಲ್ಲಿಂದಲೇ ಪೂರೈಕೆಯಾಗುತ್ತದೆ.


ಪುರಾಣ - ಮನುಷ್ಯರ ನಡುವಿನ ಕೊಂಡಿ


     ಕಡಲೆಕಾಯಿ ಪರಿಷೆ  ಸುಮಾರು 500 ವರ್ಷಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿದೆ. ಪ್ರತಿ ಕಾರ್ತಿಕದಲ್ಲಿ, ಬೆಂಗಳೂರಿಗರ ಹೃದಯದ ನಾದ ಪುನರ್ಜೀವಿಸುತ್ತದೆ. ಕಳೆದ ಒಂಬತ್ತು ವರ್ಷಗಳಿಂದ ಕಾಡು ಮಲ್ಲೇಶ್ವರ ರಥಬೀದಿಯಲ್ಲಿ ಬಿ. ಕೆ. ಶಿವರಾಂ ಮಾರ್ಗದರ್ಶನದಲ್ಲಿ, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಕಡೆಲೆಕಾಯಿ ಪರಿಷೆಯನ್ನು ಆಯೋಜಿಸುತ್ತಿದೆ. ಪರಿಷೆ ಇದೀಗ ಭವ್ಯ ಪರಂಪರೆಯ ಸ್ವರೂಪ  ಪಡೆದುಕೊಳ್ಳುತ್ತಿದೆ. ಈ ವರ್ಷದ ಮಲ್ಲೇಶ್ವರ ಕಡಲೆಕಾಯಿ ಜಾತ್ರೆಯಲ್ಲಿ ಹುಣ್ಣಿಮೆ ಹಾಡು ಕಾರ್ಯಕ್ರಮ 225ನೇ ಸಂಚಿಕೆಗೆ ತಲುಪಿದೆ. ಸಾಂಸ್ಕೃತಿಕ ಕಾರ್ಯಕ್ರಮ?ಪರಿಷೆಯ ವಿಶೇಷ ಆಕರ್ಷಣೆಯೂ ಹೌದು.


    ಇತಿಹಾಸ - ಪುರಾಣಗಳ ಗರ್ಭದಲ್ಲಿ ಪರಿಷೆಯ ಬಗ್ಗೆ  ದಂತ ಕಥೆಗಳಿವೆ. ಸುಂಕೇನಹಳ್ಳಿ ಆಸುಪಾಸಿನಲ್ಲಿ ಎತ್ತೊಂದು ಕಡಲೆಕಾಯಿ ಹೊಲಗಳನ್ನು ನಾಶಮಾಡುತ್ತಿತ್ತಂತೆ. ಆಗ  ತೊಂದರೆಗೊಳಗಾದ ರೈತರು, ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ ಮೊರೆ ಹೋದರು. ಅವರು ಆಗ ಅಧಿಕಾರ ಬಲದಿಂದಲ್ಲ, ಭಕ್ತಿ ಮಾರ್ಗದಲ್ಲಿ ಇದಕ್ಕೆ ಪರಿಹಾರ ಸೂಚಿಸಿದರು. ದೈವಿಕ ಸ್ವರೂಪದ ನಂದಿ ಬಸವನಿಗೆ ಸಮರ್ಪಿತವಾದ  ದೇವಾಲಯ ನಿರ್ಮಿಸಿ ಸಮಸ್ಯೆಗೆ ಪರಿಹಾರ ರೂಪಿಸಿದರು. ಮತ್ತೊಂದು ಪುರಾಣದ ಪ್ರಕಾರ, ಆ ಎತ್ತು ಕಲ್ಲಾಗಿ ಮಾರ್ಪಟ್ಟಿತು. ಅದು ಬೆಳೆದಷ್ಟೇ ಬೆಳೆದಿದ್ದರಿಂದ ಶಿವನ ತ್ರಿಶೂಲವೇ ಅದರ ಬೆಳವಣಿಗೆಯನ್ನು ನಿಯಂತ್ರಿಸಿತೆಂದು ಈ ಕಥೆ ಹೇಳುತ್ತದೆ. ಆ ಕಥೆಗಳಿಂದ ದೊಡ್ಡ ಬಸವನಗುಡಿ ಹುಟ್ಟಕೊಂಡಿತು. ಅದರೊಂದಿಗೆ ಕಡಲೆಕಾಯಿ ಪರಿಷೆಯ ಶಾಶ್ವತ ಪರಂಪರೆಯೂ ಸ್ಥಾಪನೆಯಾಯಿತು.


    ದಕ್ಷಿಣ ರಾಜ್ಯಗಳಿಂದ ರೈತರು  ಕಡಲೆಕಾಯಿ ಚೀಲಗಳೊಂದಿಗೆ ಸಂಭ್ರಮದಿಂದ ಆಗಮಿಸುತ್ತಾರೆ. ಮೂರು ಬೀಜದ ಉದ್ದದ ಕಡಲೆಕಾಯಿ  ಇಡೀ ಪರಿಷೆಗೆ ಕಲಶಪ್ರಾಯ. ಗುಲಾಬಿ, ಕಂದು ಕಡಲೆ ಕಾಯಿ ಗಮನ ಸೆಳೆಯುತ್ತವೆ. ಕಚ್ಚಾ, ಹುರಿದ, ಬೇಯಿಸಿದ ರೂಪಗಳಲ್ಲಿ ಬೆಂಗಳೂರು ನಾಗರಿಕರ ನಾಲಿಗೆಯ ಮೇಲೆ ಕಡಲೆಕಾಯಿ ನಲಿದಾಡುತ್ತದೆ. ಚುರಿಮುರಿ, ಕಡಲೆಪುರಿ, ಬತ್ತಾಸು, ಪರಿಷೆಯ ವಿಶೇಷ ಸಿಹಿ ತಿನಿಸುಗಳು, ಸೆಣಬಿನ ಕರಕುಶಲ ವಸ್ತುಗಳು, ಸಿಂಗಾರ ಮಾಡಿದ ಮಡಿಕೆಗಳು, ಮರದ ಆಟಿಕೆಗಳು ಪರಿಷೆಯ ಮೆರಗು ಹೆಚ್ಚಿಸುತ್ತವೆ. ಕಲಾ ತಂಡಗಳು, ಕಲಾವಿದರ ಕುಣಿತ, ಪರಿಷೆಗೆ ಜೀವ ಕಳೆ ತುಂಬುತ್ತದೆ. ಬೆಳದಿಂಗಳ ರಾತ್ರಿಯಲ್ಲಿ  ಆಕಾಶದಲ್ಲಿನ ನಕ್ಷತ್ರಗಳು ಚಿಕ್ಕ ಗ್ಯಾಲಕ್ಸಿಗಳಂತೆ ಕಂಗೊಳಿಸುತ್ತವೆ.


      ಬಹುತೇಕ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಧರ್ಮಪುರಿ ಮತ್ತಿತರೆ ಭಾಗಗಳಿಂದ ತರುತ್ತಾರೆ.  ಬಸವನಗುಡಿ ಪರಿಷೆಯಲ್ಲಿ ಸುಮಾರು 4500 ಅಂಗಡಿಗಳಿಗೆ ಮಾಡಿಕೊಡಲಾಗಿದೆ. ಮಲ್ಲೇಶ್ವರದಲ್ಲಿ 600 ಮಳಿಗೆಗಳಿವೆ. ಸುಮಾರು ಹತ್ತು ಲಕ್ಷ ಮಂದಿ ಕಡೆಲೆಕಾಯಿ ಪರಿಷೆಯಲ್ಲಿ ಅಡ್ಡಾಡುತ್ತಾರೆ. ಬಹುತೇಕ ಮಂದಿ ಕಡಲೆಕಾಯಿ ರುಚಿ ನೋಡುತ್ತಾರೆ, ವ್ಯಾಪಾರಿಗಳೊಂದಿಗೆ ಚೌಕಾಸಿಗಿಳಿಯುತ್ತಾರೆ. ಪರಿಷೆಯ ಭವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಸಂಪ್ರದಾಯ ಸಿಂಗಾರದಲ್ಲಿ ಅಲಂಕೃತ ಎಮ್ಮೆ ಪರಿಷೆಯಲ್ಲಿ ಕಾವಲುಗಾರನಂತೆ ನಿಂತಿರುತ್ತದೆ. ಮುಜರಾಯಿ ಇಲಾಖೆ ವ್ಯಾಪಾರಿಗಳಿಗೆ ಉಚಿತವಾಗಿ ಅಂಗಡಿ       ಹಾಕಲು ಅವಕಾಶ ಮಾಡಿಕೊಟ್ಟಿದೆ. ಬೀದಿಗಳೆಲ್ಲೆಲ್ಲಾ ‘ಕಡಲೆಕಾಯಿ’ಗಳ ಸಾಲು?ಸಾಲು ಅಂಗಡಿಗಳು ನಗರದ ನಾಗರಿಕರನ್ನು ಸ್ವಾಗತಿಸುತ್ತದೆ.


ಕಾಣದ ಮುಖ


ಉತ್ಸವದ ಹಿಂದೆ ಇನ್ನೊಂದು ಮುಖವಿದೆ. ಅದು ಬಹುತೇಕರಿಗೆ ಕಾಣದು.  ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು, ವ್ಯಾಪಾರಿಗಳು ಸಂಭ್ರಮಕ್ಕಾಗಿ ಅಲ್ಲ, ಬದುಕು ಸಾಗಿಸಲು ಪರಿಷೆಗೆ ಆಗಮಿಸುತ್ತಾರೆ. ಪಾದಚಾರಿ ಮಾರ್ಗಗಳಲ್ಲಿ ಮಲಗಿ, ಬೆಳಗಿನ ಜಾವ ಎದ್ದು ತಮ್ಮ ಎಂದಿನ ಕಾಯಕದಲ್ಲಿ ತೊಡಗುತ್ತಾರೆ. ‘ಕಡಲೆಕಾಯಿ’ ಎನ್ನುವ ಈ ಸರಳ ಬೀಜದ ಮಾರಾಟದಿಂದ ಮಕ್ಕಳ ಶಾಲಾ ಶುಲ್ಕ, ಬಾಡಿಗೆ ಅಥವಾ ಇನ್ನೊಂದು ತಿಂಗಳ ನೆಮ್ಮದಿಯ ಬದುಕಿಗೆ ನಾಂದಿಯಾಗುತ್ತದೆ. ಭವಿಷ್ಯದ ಭರವಸೆಗೆ ನೆರವಾಗುತ್ತದೆ. ಪ್ರತಿ ಕಡಲೆಕಾಯಿ ಗುಡ್ಡೆಯಲ್ಲೂ ನೊಂದು, ಬೆಂದು, ಬಸವಳಿದ ರೈತರ ಬೆವರಿನ ವಾಸನೆ ಇರುತ್ತದೆ.  ಬಾಗಿದ ಬೆನ್ನು, ಆಯಾಸ, ಹಸಿವಿನ ಚಿತ್ರಣ ಕಣ್ಮುಂದೆ ಬರುತ್ತದೆ. ಮಳೆ ಅನಿಶ್ಚಿತತೆ ರೈತನ ಮೊಗದಲ್ಲಿ ಸದಾ ಇರುತ್ತದೆ. ನಾವು ಕಡಲೆಕಾಯಿ ತಿನ್ನುತ್ತೇವೆ; ಅವರು ಬದುಕು ನೋಡುತ್ತಾರೆ.


    ಕತ್ತಲಾಗುವಾಗ?  ಜನಸಂಚಾರ ಸ್ತಬ್ಧವಾದಾಗ  ದೀಪಗಳು ಮಸುಕಾಗುತ್ತವೆ. ಗಿಜಿಗುಡುತ್ತಿದ್ದ ಪರಿಷೆಯ ಮೈದಾನಗಳು ಮೌನವಾಗುತ್ತವೆ.  ವ್ಯಾಪಾರಿಗಳು ತಮ್ಮ ಚಿಕ್ಕ ಚೀಲಗಳನ್ನು ಮಡಚಿಕೊಂಡು ಮುಂದಿನ ಜಾತ್ರೆ ಕಡೆಗೆ ಸಾಗುತ್ತಾರೆ. ಮುಂದಿನ ಅವಕಾಶ, ಮುಂದಿನ ದಿನದ ಬಗ್ಗೆ ಚಿಂತಿಸುತ್ತಾರೆ.


ಪ್ರದರ್ಶನದ ಬಗ್ಗೆ


     ಕಡಲೆಕಾಯಿ ಪರಿಷೆ ನಿಮಗೆ ಕಡಲೆಕಾಯಿಯ ಅದ್ಭುತ ಯಾನವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಇದರ ಮೂಲ,  ಪುರಾಣ, ಹಬ್ಬಗಳು, ಮತ್ತು ಅದನ್ನು ದೈವಿಕವಾಗಿ ನಿಲ್ಲಿಸುವ ಅಜ್ಞಾತ ಕೈಗಳ ಬಗ್ಗೆ ಕೆ. ವಂಕಟೇಶ್ ಅವರ ಪ್ರತಿ ಛಾಯಾಚಿತ್ರ ಅನಾವರಣಗೊಳಿಸುತ್ತದೆ.


    ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.