ಸುದ್ದಿಯಾಗದ ಸುದ್ದಿ -  ಆಲ್ಮೇಡಾ ಗ್ಲಾಡ್ ಸನ್

ಸುದ್ದಿಯಾಗದ ಸುದ್ದಿ -  ಆಲ್ಮೇಡಾ ಗ್ಲಾಡ್ ಸನ್ -reliance

ಸುದ್ದಿಯಾಗದ ಸುದ್ದಿ -  ಆಲ್ಮೇಡಾ ಗ್ಲಾಡ್ ಸನ್

 

ಸುದ್ದಿಯಾಗದ ಸುದ್ದಿ -  ಆಲ್ಮೇಡಾ ಗ್ಲಾಡ್ ಸನ್

 

ಫ್ಯೂಚರ್ ಗ್ರೂಪ್ ಒಡೆತನದ ಬಿಗ್‍‍ ಬಜಾರ್ ಅಂಬಾನಿಯ ತೆಕ್ಕೆಗೆ ಬಿದ್ದಿದೆ. ಬಿದ್ದಿಗೆ ಅನ್ನುವುದಕ್ಕಿಂತಲೂ ಅಂಬಾನಿ ಅದನ್ನು ವಶಪಡಿಸಿಕೊಂಡಿದ್ದಾರೆಂದು ಹೇಳಬಹುದು. ಆಗಸ್ಟ್ 2020 ರಲ್ಲಿ ಫ್ಯೂಚರ್ ಗ್ರೂಪ್ ತನ್ನೆಲ್ಲಾ ಸೊತ್ತನ್ನು ಅಂಬಾನಿಯ ರಿಲಾಯನ್ಸ್ ಗೆ 24,000 ಕೋಟಿಗಳಿಗೆ ಮಾರುವುದಾಗಿ ಘೋಷಿಸಿತ್ತು. ಆದರೆ ಫ್ಯೂಚರ್ ಗ್ರೂಪ್‍ನ ಸಹಭಾಗಿದಾರರಾದ ಅಮೇಜಾನ್ ಇದಕ್ಕೆ ತಡೆಯೊಡ್ಡಿ ಕೋರ್ಟ್ ಮೆಟ್ಟಲೇರಿತು. ಕಳೆದ ಎರಡು ವರುಷಗಳಲ್ಲಿ ಅಮೇಜಾನ್ ಫ್ಯೂಚರ್ ಗ್ರೂಪ್ ವಿರುದ್ಧ ತಾನು ಹೂಡಿದ ಬಹುತೇಕ ಪ್ರಕರಣಗಳಲ್ಲಿ ವಿಜಯ ಸಾಧಿಸಿದೆ. ಹಾಗಾಗಿ ಇನ್ನೇನು ರಿಲಾಯನ್ಸ್ ಜೊತೆಗೆ ಫ್ಯೂಚರ್ ಗ್ರೂಪ್ ಮಾಡಿದ ಡೀಲ್ ಮುರಿದು ಹೋಗಿ ಫ್ಯೂಚರ್ ಗ್ರೂಪ್, ಅದರಲ್ಲೂ ದೇಶಾದಾದ್ಯಂತ ಇರುವ ಬಿಜ್ ಬಜಾರ್ ಮಳಿಗೆಗಳು, ಫುಡ್‍ಮಾಲ್ ಎಲ್ಲ ಅಮೇಜಾನ್‍ ಕೊಂಡುಕೊಳ್ಳಲಿದೆ ಎನ್ನುವಾಗ ಎರಡು ತಿಂಗಳ ಹಿಂದೆ ರಿಲಾಯನ್ಸ್ ತೀರಾ ನೀಚ ಆಟವೊಂದನ್ನು ಆಡಿತು.

ಫೆಬ್ರವರಿಯ ಮೊದಲ ವಾರದಲ್ಲಿ ಒಂದು ದಿನ ದೇಶದಾದ್ಯಂತ ಇರುವ ಫ್ಯೂಚರ್ ಗ್ರೂಪ್‍ನ 200 ರಷ್ಟು ಮಳಿಗೆಗಳಲ್ಲಿ ಏಕಾಏಕಿಯಾಗಿ ರಿಲಾಯನ್ಸ್ ನ ಸಿಬ್ಬಂದಿ, ಅಧಿಕಾರಿಗಳು ಬಂದರು. ಮುಂಬಯಿಯ ಫ್ಯೂಚರ್ ಗ್ರೂಪ್ ಮಳಿಗೆಯೊಂದರಲ್ಲಿ ದಿನದ ವ್ಯವಹಾರ ನಡೆಯುವಾಗಲೇ ಅಂದ ಅಂಬಾನಿ ಪಡೆ, ಮಳಿಗೆಯ ಮೇಲೆ ತನ್ನ ಅಧಿಕಾರಯಿದೆ ಎನ್ನುತ್ತಾ ಎಲ್ಲವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಆರಂಭಿಸಿದರು. ಹಿಂಬಾಗಿಲಿನಲ್ಲಿ ರಿಲಾಯನ್ಸ್ ಮಾರ್ಟ್ ನ ಕ್ರೇಟ್‍ಗಳಲ್ಲಿ ಹಣ್ಣು-ಹಂಪಲು, ತರಕಾರಿಗಳು ಬಿಗ್ ಬಜಾರೊಳಗೆ ಬರಲಾರಂಭಿಸಿದವು. ಇದೊಂದು ರೀತಿಯಲ್ಲಿ ಕ್ಷಿಪ್ರ ಕ್ರಾಂತಿ ನಡೆದು ಸರ್ಕಾರ ಬೀಳಿಸಿ, ಹೊಸ ಸರ್ಕಾರ ತನ್ನನ್ನೇ ತಾನು ಹೇರುವ ರೀತಿ. ಆದರೆ ಫ್ಯೂಚರ್ ಗ್ರೂಪ್‍ನ ಸಿಬ್ಬಂದಿಗಳಿಗೆ ಏನು ನಡೆಯುತ್ತಿದೆಯೆಂದೇ ತಿಳಿದಿದ್ದಿಲ್ಲ. ಅವರು ತಮ್ಮ ಹಿರಿಯ ಅಧಿಕಾರಿಗಳಿಗೆ ಫೋನ್‍ ಮಾಡಿದಾಗ ಅವರಿಗೂ ಏನು ನಡೆಯುತ್ತಿದೆಯೆನ್ನುವುದರ ಅರಿವಿದ್ದಿಲ್ಲ. ಗುಜರಾತ್‍ನ ವಡೋದರದಲ್ಲೂ ಹೀಗೆ ಆಯಿತು. ಕೊನೆಗೆ ಬಿಗ್ ಬಜಾರ್ ನ ಸಿಬ್ಬಂದಿ ಮಳಿಗೆಯಲ್ಲಿದ್ದ ಎಲ್ಲಾ ಗ್ರಾಹಕರನ್ನು ತಕ್ಷಣ ಖಾಲಿ ಮಾಡಿ ಮನೆಗೆ ಕಳುಹಿಸಿತು. ಅಲ್ಲಿ ಕೆಲಸಕ್ಕಿದ್ದವರನ್ನೂ ಮನೆಗೆ ಕಳುಹಿಸಲಾಯಿತು. ಗ್ರಾಹಕರು ಮನೆಗೆ ಹೋದ ನಂತರ ರಿಲಾಯನ್ಸ್ ಸಿಬ್ಬಂದಿ ಮಳಿಗೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.

ಇದು ಬರೀ ಮುಂಬಯಿ, ಗುಜರಾತ್ ನಲ್ಲಿ ಮಾತ್ರ ನಡೆಯಲಿಲ್ಲ. ದೇಶಾದಾದ್ಯಂತ ಫ್ಯೂಚರ್ ಗ್ರೂಪ್‍ನ ಸುಮಾರು ಇನ್ನೂರು ಬಿಗ್ ಬಜಾರ್ ಹಾಗೂ ಇತರ ಮಳಿಗೆಗಳು ರಾತ್ರೋ-ರಾತ್ರಿ ರಿಲಾಯನ್ಸ್ ಪಾಲಾದವು. ಅದೊಂಥರ ಪೋಲೀಸ್ ರೇಡ್ ಮಾಡಿ ಸೀಜ್ ಮಾಡಿದ ಹಾಗೆ ನಡೆಯಿತು. ಮರುದಿನದಿಂದ ಈ ಮಳಿಗೆಗಳ ಮೇಲೆ ರಿಲಾಯನ್ಸ್ ಫಲಕಗಳು ಬಂದವು.

ನ್ಯಾಯಾಲಯದಲ್ಲಿ ಫ್ಯೂಚರ್ ಗ್ರೂಪ್ ಹಾಗೂ ಅಮೇಜಾನ್ ನಡುವೆ ಕೇಸ್ ನಡೆಯುತ್ತಿದ್ದಾಗಲೇ ಇದೆಲ್ಲಾ ಹೇಗೆ ನಡೆಯಿತು? ರಿಲಾಯನ್ಸ್ ಅದೇಗೆ ರಾತ್ರೋ-ರಾತ್ರಿ ಎಲ್ಲವನ್ನೂ ತನ್ನದಾಗಿಸಿಕೊಂಡಿತು? ಸಿಂಪಲ್. ಫ್ಯೂಚರ್ ಗ್ರೂಪ್ ಕಳೆದ ಕೆಲ ವರುಷಗಳಿಂದ ನಷ್ಟದಲ್ಲಿದ್ದು ತನ್ನ ಮಳಿಗೆಗಳ ಬಾಡಿಗೆ, ಲೀಸ್ ಹಣ ಪಾವತಿಸಿರಲಿಲ್ಲ. ಈ ಕಟ್ಟಡದ ಮ್ಹಾಲಿಕರಿಗೆ ಫ್ಯೂಚರ್ ಗ್ರೂಪ್ ಜೊತೆ ಈ ವಿಷಯದಲ್ಲಿ ತಕರಾರಿದ್ದು, ಕೆಲವೆಡೆ ಪ್ರಕರಣ ಕೋರ್ಟ್ ಮೆಟ್ಟಲೇರಿತ್ತು ಕೂಡಾ. ಅತ್ತಕಡೆ ಫ್ಯೂಚರ್-ಅಮೇಜಾನ್ ಪ್ರಕರಣಗಳಲ್ಲಿ ಅಮೇಜಾನ್ ಕೈಮೇಲಾಗುತ್ತಿದ್ದುದ್ದನ್ನು ಕಂಡ ರಿಲಾಯನ್ಸ್ ಒಂದು ನೀಚ ಕೆಲಸಕ್ಕೆ ಕೈಹಾಕಿತು. ಫ್ಯೂಚರ್ ಗ್ರೂಪ್‍ನ ಕೆಲ ಮಳಿಗೆಗಳಿರುವ ಕಟ್ಟಡಗಳ ಮೂಲ ಮ್ಹಾಲಕತ್ವ ರಿಲಾಯನ್ಸ್ ಕೈಯಲಿತ್ತು. ಅದನ್ನು ಅವರು ಸಬ್-ಲೀಸ್‍ಗೆ ಸ್ಥಳೀಯರಿಗೆ ಕೊಟ್ಟಿದ್ದರು. ಈ ಸಬ್-ಲೀಸ್ ಪಡೆದವರು ಈ ಕಟ್ಟಡಗಳಲ್ಲಿನ್ನು ಬಿಗ್ ಬಜಾರ್ ಹಾಗೂ ಫ್ಯೂಚರ್ ಗ್ರೂಪ್‍ನ ಇತರ ವ್ಯವಹಾರಗಳಿಗೆ ಬಾಡಿಗೆಗೆ ಕೊಟ್ಟಿದ್ದರು. ಯಾವಾಗ ಫ್ಯೂಚರ್ ನಿಂದ ಬಾಡಿಗೆ ಬರಲಿಲ್ಲವೋ, ರಿಲಾಯನ್ಸ್ ರಾತ್ರೋ-ರಾತ್ರಿ ಸಬ್-ಲೀಸ್‍ಗಳನ್ನು ರದ್ದುಪಡಿಸಿ ಕಟ್ಟಡಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅಲ್ಲಿದ್ದ ಬಿಗ್ ಬಜಾರ್ ಹಾಗೂ ಫ್ಯೂಚರ್ ಗ್ರೂಪ್‍ನ ಮಳಿಗೆಗಳ ಮೇಲೆ ತನ್ನ ರಿಲಾಯನ್ಸ್ ಬೋರ್ಡ್ ಅಂಟಿಸಿಬಿಟ್ಟಿತು. ಬಿಗ್ ಬಜಾರ್ ಗೆ ಒಂದು ನಯಾಪೈಸೆ ಕೊಡದೆ ಅವರು ಬಾಡಿಗೆಗಿದ್ದ ಕಟ್ಟಡಗಳ ಮೇಲೆ ತನ್ನ ಆಧಿಪತ್ಯ ನಡೆಸಿ, ಈ ನೀಚ take over ಮಾಡಿತು. ಈ ಮಳಿಗೆಗಳೇ ಹೋದ ನಂತರ ಅಮೇಜಾನ್ ಕೇಸ್ ಜಯಿಸಿದರೂ ಏನು ಉಪಯೋಗ?

ಇದರ ಬಗ್ಗೆ ಕೋರ್ಟಿನಲ್ಲಿ ಪ್ರಸ್ತಾಪವಾದಾಗ ಫ್ಯೂಚರ್ ಗ್ರೂಪ್‍ನ ಒಡೆಯ ಕಿಶೋರ್ ಬಿಯಾನಿ ರಿಲಾಯನ್ಸ್ ಯಾವುದೇ ನೋಟೀಸ್ ಕೊಡದೆ, ಯಾವುದೇ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳದೆ ಏಕಾಏಕಿಯಾಗಿ ತಮ್ಮ ಮಳಿಗೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ವಿರುದ್ಧ ನಾನು ಕೋರ್ಟಿನಲ್ಲಿ ಕಾನೂನಾತ್ಮಕವಾಗಿ ಹೋರಾಡಲಿದ್ದೇನೆ ಎಂದು ಹೇಳಿದ್ದಾರೆ.

ರಿಲಾಯನ್ಸ್ ಈ ರೀತಿ ರಾತ್ರೋ-ರಾತ್ರಿ ದೇಶದೆಲ್ಲೆಡೆ ಸುಮಾರು ಇನ್ನೂರು ಬಿಗ್ ಬಜಾರ್ ಮಳಿಗೆಗಳನ್ನು ತನ್ನದಾಗಿಸಿಕೊಂಡಿದೆ. ಇದನ್ನು ಮಾಡಲು ಫ್ಯೂಚರ್ ಗ್ರೂಪ್‍ನ ಅನುಮತಿಯಿದ್ದಿಲ್ಲ, ಅದರ ಬಗ್ಗೆ ಕಾನೂನು ಪ್ರಕ್ರಿಯೆನೂ ನಡೆಸಿಲ್ಲವೆಂದಮೇಲೆ ಇದು ಬಲವಂತದಿಂದ ಇನ್ನೊಬ್ಬರ ಆಸ್ತಿಯನ್ನು ಲಪಾಟಾಯಿಸಿದಂತೆ ಅಲ್ವಾ? ಇದೊಂದು ಗಂಭೀರ ಕ್ರಿಮಿನಲ್ ಪ್ರಕರಣ. ಬಾಡಿಗೆ ತಕರಾರಿದ್ದರೂ ಲೀಸ್ ಒಪ್ಪಂದವನ್ನು ರದ್ದುಪಡಿಸಲು ಕಾನೂನಾತ್ಮಕ ಪ್ರಕ್ರಿಯೆಯಿದೆ. ಲೀಸ್ ಇರುವಾಗ ರಾತ್ರೋ-ರಾತ್ರಿ ಹೀಗೆ ಎಲ್ಲವನ್ನೂ ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ. ಇಂಥ ಬಲವಂತದ ಟೇಕ್‍ಓವರ್ ನಡೆಯುತ್ತಿರುವಾಗ ಎಲ್ಲೂ ಪೋಲೀಸರೂ ಕೂಡ ಮಧ್ಯಪ್ರವೇಶಿಸಲಿಲ್ಲ. ಅಲ್ಲಿದ್ದವರಿಗೆ ಏನಾಗುತ್ತಿದೆಯೆಂದೇ ತಿಳಿದಿದ್ದಿಲ್ಲ. ತಿಳಿಯುವಾಗ ಬಿಗ್ ಬಜಾಯ್ ಜಾಗದಲ್ಲಿ ರಿಲಾಯನ್ಸ್ ಬೋರ್ಡ್ ರಾರಾಜಿಸುತಿತ್ತು.

ಫ್ಯೂಚರ್ ಗ್ರೂಪ್ ಹಾಗೂ ಅಮೇಜಾನ್‍ನಂತಹ ದೈತ್ಯರನ್ನು ರಿಲಾಯನ್ಸ್ ಈ ಪರಿ ವಂಚಿಸಬಹುದಾದರೆ ಕಾರ್ಪರೇಟ್ ಫಾರ್ಮಿಂಗ್ ಹೆಸರಿನಲ್ಲಿ ಮುಂದೆ ನಮ್ಮ ರೈತರನ್ನು ಹೇಗೆ ನಡೆಸಿಕೊಳ್ಳಬಹುದೆನ್ನುವುದರ ಅರಿವಾಗಬಹುದು ನಮಗೆ. ರೈತರ ಜೊತೆ ಒಪ್ಪಂದ ಮಾಡಿ, ಒಂದು ದಿನ ಬೆಳಗ್ಗೆ ಬಂದು ಅವರ ಹೊಲಗಳನ್ನೆಲ್ಲಾ ತಮ್ಮದಾಗಿಸಿಕೊಳ್ಳಲು ರಿಲಾಯನ್ಸ್ ಗೆ ಕಷ್ಟವಲ್ಲ. ಬಿಗ್ ಬಜಾರ್ ಮೇಲೆ ರಿಲಾಯನ್ಸ್ ಯಾವ ರೀತಿ ಆಧಿಪತ್ಯ ಪಡೆಯಿತು ಎನ್ನುವುದು ನಮಗೆ ಪಾಠವಾಗಬೇಕು. ಮುಂದೊಂದು ದಿನ ಈ ನೆಲದಲ್ಲಿ ಎಲ್ಲಾ ಸಣ್ಣಪುಟ್ಟ ಅಂಗಡಿಗಳೇ ಮಾಯವಾಗಿ ಎಲ್ಲೆಲ್ಲೂ ರಿಲಾಯನ್ಸ್ ಮಾರ್ಟ್, ಜಿಯೋ ಮಾರ್ಟ್‍ಗಳೇ ರಾರಾಜಿಸಲಿವೆ. ದೇಶದ ಅತೀ ದೊಡ್ಡ ವ್ಯಕ್ತಿಯೇ ರಿಲಾಯನ್ಸ್ ನ ಬ್ರಾಂಡ್ ಅಂಬಾಸಡರ್ ಆಗಿರುವಾಗ, ಅವರು ಯಾರಿಗಾದರೂ ಕೇರ್ ಮಾಡಿಯಾರು? ಕೋರ್ಟು, ಕೇಸು ಇವೆಲ್ಲಾ ಮಾಮೂಲಿ ಜನರಿಗೆ ಹೊರತು ಅಂಬಾನಿ, ಅದಾನಿಗಳಿಗಲ್ಲ.

ಅಂದಹಾಗೆ ರಿಲಾಯನ್ಸ್ ನ ಈ ನೀಚ ನಡೆಯನ್ನು ನಮ್ಮ ಯಾವೆಲ್ಲಾ ಮಾಧ್ಯಮಗಳು ವರದಿ ಮಾಡಿವೆ? ಹೇಗೆ ಮಾಡಿಯಾರು? ಅರ್ಧದಷ್ಟು ಮಾಧ್ಯಮ ಸಂಸ್ಥೆಗಳಲ್ಲಿ ರಿಲಾಯನ್ಸ್ ಹೂಡಿಕೆ ಇರುವಾಗ?