ಹೇಮಾವತಿ ಸಂಪರ್ಕ ಕಾಲುವೆ: ರೈತರಿಗೆ ಅನ್ಯಾಯವಾಗಲ್ಲ - ಡಿಸಿಎಂ ತಾಂತ್ರಿಕ ಸಲಹೆಗಾರ ಕೆ. ಜೈ ಪ್ರಕಾಶ್ ಸ್ಪಷ್ಟನೆ 

"ತುಮಕೂರು ಶಾಖಾ ನಾಲೆಯ ಮೂಲಕ ಕಳೆದ 10 ವರ‍್ಷಗಳಿಂದ ಕುಣಿಗಲ್ ಭಾಗಕ್ಕೆ ನಿಗದಿಪಡಿಸಿದ 3.676 ಟಿಎಂಸಿ ನೀರಿನಲ್ಲಿ ಇದುವರೆಗೂ ಕೇವಲ ಶೇ. 10.73 ರಷ್ಟು ನೀರು ಮಾತ್ರ ಹರಿದಿದ್ದು, ಆ ಭಾಗಕ್ಕೆ ಶೇ. 89.27 ರಷ್ಟು ನೀರಿನ ಕೊರತೆ ಉಂಟಾಗಿದೆ. ನಿಗದಿಯಾದ ನೀರು ಕಾಲುವೆ ಕೊನೆ ಭಾಗಕ್ಕೆ ತಲುಪುತ್ತಿಲ್ಲ" ಎಂದರು.

ಹೇಮಾವತಿ ಸಂಪರ್ಕ ಕಾಲುವೆ: ರೈತರಿಗೆ ಅನ್ಯಾಯವಾಗಲ್ಲ - ಡಿಸಿಎಂ ತಾಂತ್ರಿಕ ಸಲಹೆಗಾರ ಕೆ. ಜೈ ಪ್ರಕಾಶ್ ಸ್ಪಷ್ಟನೆ 



ಬೆಂಗಳೂರು: "ಶ್ರೀರಂಗ ಕುಡಿಯುವ ನೀರು (ಕುಣಿಗಲ್ ಎಕ್ಸ್ ಪ್ರೆಸ್ ಲಿಂಕ್ ಕಾಲುವೆ) ಗುರುತ್ವ ಪೈಪ್ ಲೈನ್ ಯೋಜನೆ ಮೂಲಕ ಕುಣಿಗಲ್ ಭಾಗಕ್ಕೆ ಹೇಮಾವತಿ ನೀರನ್ನು ಹರಿಸುವುದರಿಂದ ತುಮಕೂರು ಭಾಗಕ್ಕೆ ನಿಗದಿಯಾಗಿರುವ ನೀರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಯಾರ ಪಾಲಿನ ನೀರನ್ನೂ ಈ ಯೋಜನೆಯಿಂದ ಕಡಿತಗೊಳಿಸುವುದಿಲ್ಲ" ಎಂದು ಉಪ ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾದ ಕೆ. ಜೈ ಪ್ರಕಾಶ್ ಅವರು ಹೇಳಿದರು.


ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ನಗರದ ಕಾವೇರಿ ನೀರಾವರಿ ನಿಗಮ ನಿಯಮಿತ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, "ಕುಣಿಗಲ್ ಭಾಗಕ್ಕೆ ಅವಶ್ಯಕ ನೀರನ್ನು ಹರಿಸುವ ಗುರುತ್ವ ಪೈಪ್ ಲೈನ್ ಕಾಮಗಾರಿಯಿoದಾಗಿ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ತುಮಕೂರು ಸೇರಿ ಮೇಲಿನ ಭಾಗದ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ" ಎಂದು ಸ್ಪಷ್ಟವಾಗಿ ತಿಳಿಸಿದರು.


"ಕಾಲುವೆಯ ಕಿ.ಮೀ. 70.00 ರಿಂದ ಕೊನೆಯ ಭಾಗದ ಕಿ.ಮೀ. 228.00 ರವರೆಗೆ ಅಂದರೆ ಮೇಲ್ಬಾಗ, ಮಧ್ಯ ಭಾಗ, ಕೆಳಭಾಗದ ಎಲ್ಲರಿಗೂ ನ್ಯಾಯಸಮ್ಮತ ನೀರಿನ ಹಂಚಿಕೆಯೇ ಈ ಯೋಜನೆಯ ಉದ್ದೇಶ" ಎಂದು ಹೇಳಿದರು.


ಕುಣಿಗಲ್ ಭಾಗಕ್ಕೆ ಶೇ 89.27 ರಷ್ಟು ನೀರಿನ ಕೊರತೆ


     "ತುಮಕೂರು ಶಾಖಾ ನಾಲೆಯ ಮೂಲಕ ಕಳೆದ 10 ವರ‍್ಷಗಳಿಂದ ಕುಣಿಗಲ್ ಭಾಗಕ್ಕೆ ನಿಗದಿಪಡಿಸಿದ 3.676 ಟಿಎಂಸಿ ನೀರಿನಲ್ಲಿ ಇದುವರೆಗೂ ಕೇವಲ ಶೇ. 10.73 ರಷ್ಟು ನೀರು ಮಾತ್ರ ಹರಿದಿದ್ದು, ಆ ಭಾಗಕ್ಕೆ ಶೇ. 89.27 ರಷ್ಟು ನೀರಿನ ಕೊರತೆ ಉಂಟಾಗಿದೆ. ನಿಗದಿಯಾದ ನೀರು ಕಾಲುವೆ ಕೊನೆ ಭಾಗಕ್ಕೆ ತಲುಪುತ್ತಿಲ್ಲ" ಎಂದರು.

"ಈ ಲಿಂಕ್ ಎಕ್ಸ್ ಪ್ರೆಸ್ ಕಾಲುವೆ ನಿರ‍್ಮಾಣದಿಂದ ತುಮಕೂರು ಹೇಮಾವತಿ ಶಾಖಾ ನಾಲೆಯ ಮೇಲ್ಬಾಗದವರ ಹಂಚಿಕೆ ನೀರಿನ ಪ್ರಮಾಣವನ್ನು ಕಡಿತಗೊಳಿಸುವುದಿಲ್ಲ. ಕಾಲುವೆ ಕೊನೆಭಾಗಕ್ಕೆ ನೀರು ನೀಡುವ ಖಾತರಿಗಾಗಿ ಆ ಭಾಗದ ಜನರ ಪಾಲಿನ ನೀರನ್ನು ಅವರಿಗೆ ನೀಡಲಾಗುತ್ತಿದೆ" ಎಂದು ಹೇಳಿದರು.


"ಕುಣಿಗಲ್ ಭಾಗ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತಿದ್ದರೂ ಕಳೆದ 10 ವರ‍್ಷಗಳಿಂದ ಕಾಲುವೆಯ ಕೊನೆ ಭಾಗ ಸಂಪರ್ಕ  ನೀರನ್ನು ಪಡೆಯುತ್ತಿಲ್ಲ. ಕುಡಿಯುವ ನೀರಿಗಾಗಿ ಕಾಲುವೆಯ ಮೇಲ್ಭಾಗದಲ್ಲಿರುವ ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ಯಾವುದೇ ಅಡೆತಡೆಯಿಲ್ಲದೆ ನೀರನ್ನು ಪಡೆಯುತ್ತಿವೆ" ಎಂದು ಹೇಳಿದರು.


"ಪ್ರಸ್ತುತ ಇರುವ ಕಾಲುವೆ ಮೂಲಕ ನೀರು ಸುತ್ತುಬಳಸಿಕೊಂಡು ಕುಣಿಗಲ್ ಭಾಗಕ್ಕೆ ಹೋಗುತ್ತಿದೆ. ಬಾಗೂರು- ನವಿಲೇ ಸುರಂಗ ಕಾಲುವೆ ಅಂತ್ಯಗೊಂಡ ನಂತರ ಕಾಲುವೆಯ 70. 00 ಕಿಮೀ ಬಳಿ ಪೈಪ್ ಲೈನ್ ಅಳವಡಿಸಲಾಗುವುದು. ಇದನ್ನು ಕಾಲುವೆಯ ಇನ್ನೊಂದು ತುದಿ ಅಂದರೆ 166.90 ಕಿಮೀ ಬಳಿ ಮತ್ತೆ ಜೋಡಿಸಲಾಗುವುದು. ಈ ಪೈಪ್ ಲೈನ್ ಉದ್ದ 34.54 ಕಿಮೀ ಇರಲಿದ್ದು, ಇದರ ಮುಖಾಂತರ 388 ಕ್ಯೂಸೆಕ್ಸ್ ನೀರು ಹರಿಸಬಹುದು" ಎಂದು ಹೇಳಿದರು.


₹207.38 ಕೋಟಿ ಆಥಿಕ ಪ್ರಗತಿ:


"ಶ್ರೀರಂಗ ಕುಡಿಯುವ ನೀರಿನ ಯೋಜನೆ ಸಂಬಂಧ 03.02.2024 ರಂದು ಟೆಂಡರ್ ಆಹ್ವಾನಿಸಿ, ಪ್ರಕ್ರಿಯೆ ಮುಗಿಸಲಾಗಿದೆ. ಈ ಯೋಜನೆಯ ಗುತ್ತಿಗೆ ಮೊತ್ತ ₹918.43 ಕೋಟಿ ರೂಪಾಯಿ. ಯೋಜನೆಯು ಈಗಾಗಲೇ ಶೇ. 22.57 ರಷ್ಟು ಆರ‍್ಥಿಕ ಪ್ರಗತಿಯಾಗಿದೆ " ಎಂದು ಮಾಹಿತಿ ನೀಡಿದರು.


"ಈ ಕಾಲುವೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ತುಮಕೂರು ಭಾಗದ ಜನಪ್ರತಿನಿಧಿಗಳು, ಸ್ಥಳೀಯ ನಾಯಕರು, ರೈತರು, ಸಂಘ- ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದರು. ಕೆಡಿಪಿ ಸಭೆಯಲ್ಲಿಯೂ ಕೆಲವು ಶಾಸಕರು ಅಸಮಾಧಾನ ವ್ಯಕ್ತವಾದ ಕಾರಣಕ್ಕೆ, ಈ ಯೋಜನೆ ಕುರಿತಾಗಿ ತಾಂತ್ರಿಕ ಸಮಿತಿ ರಚಿಸಿ, ವರದಿ ನೀಡುವಂತೆ ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಾದ ಡಿ. ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದರು. ನಿವೃತ್ತ ಮುಖ್ಯ ಇಂಜಿನಿಯರ್ ಗಳು ಹಾಗೂ ಒಬ್ಬ ಅಧೀಕ್ಷಕ ಇಂಜಿನಿಯರ್ ಸೇರಿ ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿಯು ಅಧ್ಯಯನ ನಡೆಸಿ ವರದಿ ನೀಡಿದೆ" ಎಂದು ಹೇಳಿದರು.


ವರದಿಯ ಪ್ರಮುಖ ಅಂಶಗಳು:


"ತುಮಕೂರು ಶಾಖಾ ನಾಲೆಯ ಸರಪಳಿಯ 70 ಕಿಮೀ ಬಳಿ ಗುರುತ್ವ ಪೈಪ್ ಲೈನ್ ಮೂಲಕ ಶ್ರೀರಂಗ ಕೆರೆ ತುಂಬುವ ಯೋಜನೆಗೆ ನೀರು ಸರಬರಾಜು ಮಾಡುವ ಯೋಜನೆಯನ್ನು Supervisory Control and Data Acquisition (SCADA) ವ್ಯವಸ್ಥೆ ಅಳವಡಿಸಿಕೊಂಡು, ನೀರನ್ನು ಹರಿಸಬಹುದು."


"ಈ ವ್ಯವಸ್ಥೆ ಮೂಲಕ 3.676 ಟಿಎಂಸಿ ನೀರು ಹರಿದು ಹೋಗುವಂತೆ ವಿನ್ಯಾಸಗೊಳಿಸಬಹುದು. ಜೊತೆಗೆ ಕರ್ನಾಟಕ ನೀರಾವರಿ ಕಾಯ್ದೆ 1965 ಗೆ 16.08.2024 ರಲ್ಲಿ ಮಾಡಿದ ತಿದ್ದುಪಡಿಯಂತೆ ಅನಧಿಕೃತ ನೀರಿನ ಬಳಕೆಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದು."


"ತುಮಕೂರು ಶಾಖಾ ನಾಲೆಯಲ್ಲಿ ನೀರು ನಿರ‍್ವಹಣೆಗೆ ON and OFF  ವ್ಯವಸ್ಥೆ ಅಳವಡಿಸಿಕೊಂಡು ಕಾರ್ಯ  ನಿರ್ವಹಣೆ ಮಾಡಬೇಕು" ಎಂದು ಸಮಿತಿ ಮಾಡಿದ ಶಿಫಾರಸ್ಸುಗಳ ಸಾರಾಂಶದ ಮಾಹಿತಿ ನೀಡಿದರು.

ತಾಂತ್ರಿಕ ವರದಿ ಅಂಗೀಕಾರ


"ಈ ತಾಂತ್ರಿಕ ವರದಿಯನ್ನು ಈಗಾಗಲೇ ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ ಅಂಗೀಕರಿಸಿದೆ. ಈ ಯೋಜನೆಯ ಅನುಷ್ಠಾನದ ವೇಳೆ ಸಮಿತಿಯ ಶಿಫಾರಸ್ಸುಗಳಂತೆ ಕಾಮಗಾರಿಯನ್ನು ನರ‍್ವಹಿಸಿ ,ನಿಗದಿತ ವೇಳೆಯಲ್ಲಿ ಪೂರ‍್ಣಗೊಳಿಸಬೇಕು ಎಂದು ದಿನಾಂಕ: 19.10.2024ರ ಸರ‍್ಕಾರದ ಪತ್ರದಲ್ಲಿ ಸೂಚನೆ ನೀಡಲಾಗಿದೆ" ಎಂದು ಹೇಳಿದರು.


ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಮೈಸೂರು ನೀರಾವರಿ (ದಕ್ಷಿಣ ವಲಯ) ಮುಖ್ಯ ಇಂಜಿನಿಯರ್ ವೆಂಕಟೇಶ್ ಆರ್. ಎಲ್. ತುಮಕೂರು ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಫಣಿರಾಜು ಇದ್ದರು.


ಎಕ್ಸ್‌ ಪ್ರೆಸ್ ಕಾಲುವೆ –ತಾಂತ್ರಿಕ ವಿವರ 


ತುಮಕೂರು, ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಂದ: ತುಮಕೂರು ಜಿಲ್ಲೆಯು ಹೇಮಾವತಿಯಿಂದ 19.95 ಟಿ.ಎಂ.ಸಿ, ಎತ್ತಿನಹೊಳೆಯಿಂದ 5.74 ಟಿ.ಎಂ.ಸಿ ಮತ್ತು ಭದ್ರ ಮೇಲ್ದಂಡೆಯಿಂದ 2.38 ಟಿ.ಎಂ.ಸಿ ಹೀಗೆ ಒಟ್ಟು 28.07 ಟಿ.ಎಂ.ಸಿ ನೀರನ್ನು ಪಡೆಯುತ್ತಿದೆ. ಈ ಯೋಜನೆಗೆ ಅಂದಾಜು ಮೊತ್ತದ ಒಟ್ಟು ರೂ 986 ಕೋಟಿ ರೂಗಳಿಗೆ 2024ನೇ ಜನವರಿ 12 ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ .ಇದೇ ಫೆಬ್ರವರಿ 03 ರಂದು ಟೆಂಡರ್ ಆಹ್ವಾನಿಸಿದ್ದು ಮಾರ್ಚ್ 05 ರಂದು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆ ಮೊತ್ತ ರೂ.918.43 ಕೋಟಿಗಳಿದ್ದು, 2026ನೇ ಮಾರ್ಚ್ 05ರ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಈಗಾಗಲೇ 2024ನೇ ಮಾರ್ಚ್ 06 ರಿಂದ ಕಾಮಗಾರಿಯನ್ನು ಗುತ್ತಿಗೆದಾರರು ಪ್ರಾರಂಭಿಸಿರುತ್ತಾರೆ. ಪ್ರತಿಭಟನೆ ನಡುವೆಯೂ ಕಾಮಗಾರಿಯ ಆರ್ಥಿಕ ಪ್ರಗತಿಯು 207.38 ಕೋಟಿ (22.57%) ರಷ್ಟಾಗಿದೆ.


ತಾಂತ್ರಿಕ ಸಮಿತಿಯಲ್ಲಿ ಯಾರಿದ್ದರು?


ಅದರಂತೆ 2024ನೇ ಜುಲೈ 03 ರಂದು ನಿವೃತ್ತ ಮುಖ್ಯ ಇಂಜಿನಿಯರ್ ಅರವಿಂದ ಡಿ. ಕಣಗಿಲೆ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ನಿವೃತ್ತ ಮುಖ್ಯ ಇಂಜಿನಿಯರ್‌ಗಳಾದ ಕೆ. ಬಾಲಕೃಷ್ಣ, ಶಂಕರೇಗೌಡ ಹಾಗೂ ಎಂ. ಜಿ. ಶಿವಕುಮಾರ್ ಅವರು ಸಮಿತಿಯ ಸದಸ್ಯರಾಗಿದ್ದು, ಅಧೀಕ್ಷಕ ಇಂಜಿನಿಯರ್ ಅವರು ಸದಸ್ಯ ಕಾರ್ಯದರ್ಶಿಗಳಾಗಿದ್ದರು.