ಟ್ರಂಪ್‌ ಆರ್ಥಿಕ ನೀತಿ- ಅಮೆರಿಕನ್‌ ಸಾಮ್ರಾಜ್ಯದ ಅಂತ್ಯದ ಮುನ್ನುಡಿ

ಅಮೆರಿಕದ ನಾಗರಿಕರಲ್ಲಿ 60-70% ನಾಗರಿಕರು ಶೇರು ಮಾರುಕಟ್ಟೆಯ ಪಾಲುದಾರರಾಗಿದ್ದಾರೆ. ಅವರು ಅಲ್ಲಿನ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಹೂಡಿರುವ ಕಷ್ಟ ಪಟ್ಟು ದುಡಿದ ಉಳಿತಾಯದ ಹೂಡಿಕೆ ಹಣ ಆವಿಯಾಗುತ್ತಿರುವುದನ್ನು ಕಂಡು ಸುಮ್ಮನಿರಲಾದೀತೇ. ಅಮೆರಿಕದ ಎಲ್ಲ ಪ್ರಮುಖ ನಗರದಲ್ಲಿ ಜನರು ಬೀದಿಗಳಿದು ಪ್ರತಿಭಟಿಸತೊಡಗಿದರು.

ಟ್ರಂಪ್‌ ಆರ್ಥಿಕ ನೀತಿ- ಅಮೆರಿಕನ್‌ ಸಾಮ್ರಾಜ್ಯದ ಅಂತ್ಯದ ಮುನ್ನುಡಿ

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

    ʼಕೋತಿ ತಾನು ಕೆಡೋದಲ್ಲದೇ ಏಳು ವನಾನೆಲ್ಲ ಕೆಡಿಸಿತುʼ ಅನ್ನೋ ಗಾದೆಗೆ ಇವತ್ತಿನ ಮಟ್ಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೆಟ್‌ ಆಗ್ತಾನೆ. ಈತ ಅಮೆರಿಕ ಅಧ್ಯಕ್ಷನಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ದಿನದಿಂದಲೇ ತಾರೀಫ್‌ ಮತ್ತು ರೆಸಿಪ್ರೊಕಲ್‌ ತಾರೀಫ್‌ ಎಂಬ ಈತನ ಎರಡು ಪದಗಳು ಜಗತ್ತಿನ ಮಾಧ್ಯಮಗಳ ಬಾಯಿ ತುಂಬಿ ತುಳುಕತೊಡಗಿವೆ. ಪದ ಬಳಕೆ ಏನೇ ಇದ್ದರೂ ಅವುಗಳ ಅರ್ಥ ಮಾತ್ರ ಒಂದೇ ಅದು ʼಆಮದು ಸುಂಕʼ ಅಥವಾ ʼಆಮದು ತೆರಿಗೆʼ ಅಂತ. ʼಸುಂಕದವನ ಮುಂದೆ ಸುಖ ದುಕ್ಕ ಹೇಳಿಕೊಂಡಂಗೆʼ ಎನ್ನುವುದು ಮತ್ತೊಂದು ಗಾದೆ.

   ತಾರೀಫ್‌ ಮತ್ತು ರೆಸಿಪ್ರೊಕಲ್‌ ತಾರೀಫ್‌ ಎನ್ನುವುದು ಅಮೆರಿಕದ ಆರ್ಥಿಕ ಇತಿಹಾಸದಲ್ಲಿ ಹೊಸ ವಿದ್ಯಮಾನವೇನೂ ಅಲ್ಲ. ಅಮೆರಿಕ ತನ್ನ ವರಮಾನ ಹೆಚ್ಚಿಸುವ ಹಾಗೂ ವ್ಯಾಪಾರವನ್ನು ರಕ್ಷಿಸಿಕೊಳ್ಳುವ ಸಾಧನವನ್ನಾಗಿ ಈ ತಾರೀಫ್‌ ಅನ್ನು 17-18ನೇ ಶತಮಾನಗಳಿಂದಲೇ ಬಳಸಿಕೊಳ್ಳುತ್ತ ಬಂದಿದೆ. ಬ್ರಿಟಿಷ್‌ ವ್ಯಾಪಾರ ವಹಿವಾಟಿನ ಅವಲಂಬನೆಯನ್ನು ತಗ್ಗಿಸಲು ಹಾಗೂ ಅಮೆರಿಕದ ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸಲು ತಾರೀಫ್‌ ಹೆಚ್ಚಿಸುವಂತೆ ಅನ್ನು ಅಮೆರಿಕದ ಮೊದಲ ಖಜಾನೆ ಕಾರ್ಯದರ್ಶಿ ಅಲೆಕ್ಸಾಂಡರ್‌ ಹ್ಯಾಮಿಲ್ಟನ್‌ ಸಲಹೆ ಮಾಡುತ್ತಾನೆ. 1789ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ತಾರೀಫ್‌ ಕಾಯ್ದೆಗೆ ಸಹಿ ಮಾಡುತ್ತಾನೆ ಮತ್ತು ಆಗ ಅಮೆರಿಕ ಆಮದು ಮಾಡಿಕೊಳ್ಳುವ ಎಲ್ಲ ಪದಾರ್ಥಗಳಿಗೆ 5% ಆಮದು ಸುಂಕವನ್ನು ವಿಧಿಸಲಾಗುತ್ತದೆ. 

   ಮತ್ತೆ 1828ರಲ್ಲಿ ಅಮೆರಿಕದ ಉತ್ತರ ಹಾಗೂ ಪೂರ್ವ ಭಾಗದ ರೈತರನ್ನು ರಕ್ಷಿಸುವ ಸಲುವಾಗಿ ಹಾಗೂ ಕೃಷಿ ಉತ್ಪನ್ನಗಳ ಹೆಚ್ಚಿನ ಆಮದು ತಡೆಯಲು 50%ಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಮದು ಸುಂಕವನ್ನು ಹೆಚ್ಚಿಸಲಾಯಿತು. 1842ರಲ್ಲಿ ಕಪ್ಪು ತಾರೀಫ್‌ ಕೂಡಾ ಇದೇ ಉದ್ದೇಶಕ್ಕೆ ಜಾರಿ ಆಯಿತು. ಆದರೆ ದಕ್ಷಿಣದವರಿಗೆ ಧಾರಣೆ ಹೊರೆಯಾಗಿ ಆರಂಭವಾದ ಪ್ರತಿಭಟನೆಗಳು ಸಿವಿಲ್‌ ವಾರ್‌ ಸ್ವರೂಪ ತಾಳಿದ್ದರಿಂದ  ಎರಡೂ ಕಾನೂನುಗಳನ್ನು ವಾಪಸ್‌ ತೆಗೆದುಕೊಳ್ಳಲಾಯಿತು.

   ಮೊದಲ ಮಹಾ ಯುದ್ಧದ ಕಾಲದಲ್ಲೂ ಅಷ್ಟೇ, ಅಮೆರಿಕದ ರೈತರು ಹಾಗೂ ಕೈಗಾರಿಕೆಗಳ ಉದ್ಯಮಿಗಳನ್ನು ವಿದೇಶೀ ವ್ಯಾಪಾರ ಸ್ಪರ್ಧೆಯಿಂದ ಬಚಾವು ಮಾಡಲು ತಾರೀಫ್‌ಗಳನ್ನು ಹೆಚ್ಚು ಮಾಡಲಾಗಿದೆ. ಆದರೆ 1939ರಿಂದ 1945 ಎರಡನೇ ಮಹಾ ಯುದ್ಧದ ಕಾಲ, ಅಷ್ಟೊತ್ತಿಗೆ ಹೆಚ್ಚಿನ ಪ್ರಮಾಣದ ಆಮದು ಸುಂಕಗಳನ್ನು ವಿಧಿಸಿ ಜನರಿಂದ ದೂಷಣೆಗೊಳಗಾದ ಅಮೆರಿಕ (ಗ್ಯಾಟ್‌ ಮತ್ತು ಅದರ ಉತ್ತರಾಧಿಕಾರಿ ಡಬ್ಲ್ಯು ಟಿ ಓ ( ವಿಶ್ವ ವ್ಯಾಪಾರ ಸಂಸ್ಥೆ) ಮುಖಾಂತರ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತ ಆಮದು ಸುಂಕದ ಪ್ರಮಾಣವನ್ನು ಗಣನೀಯವಾಗಿ ಇಳಿಸಿತು. ಆದರೆ ಈಗ ಟ್ರಂಪ್‌ನ ಆರ್ಥಿಕ ಸುಧಾರಣೆಗಳನ್ನು ಕಂಡವರು, ಅಮೆರಿಕ ಕಳೆದ ಐವತ್ತು ವರ್ಷಗಳ ಮುಕ್ತ ವ್ಯಾಪಾರ ನೀತಿಗೆ ಎಳ್ಳು ನೀರು ಬಿಟ್ಟಿದೆ. ಅಂತಾರಾಷ್ಟ್ರೀಯ ವ್ಯಾಪಾರ ಒಡಂಬಡಿಕೆಗಳನ್ನೆಲ್ಲ ಗಾಳಿಗೆ ತೂರಿದೆ ಎನ್ನುತ್ತಿದ್ದಾರೆ. ಇದು ಅಮೆರಿಕ ಸಾಮ್ರಾಜ್ಯದ  ಅಂತ್ಯದ ಆರಂಭ ಎಂದು ಆ ದೇಶದ ಆರ್ಥಿಕ ತಜ್ಞರೇ ಹೇಳತೊಡಗಿದ್ದಾರೆ.

    ಪ್ರಚಾರ ಪ್ರಿಯತೆಯಲ್ಲಿ ಹಾಗೂ ಮನಬಂದಂತೆ ಘೋಷಣೆಗಳನ್ನು ಹೊರಡಿಸುವಲ್ಲಿ ಈ ಟ್ರಂಪ್‌ ಮೋದಿಯನ್ನು ಮೀರಿಸುತ್ತಾನೆ. 2014ರ ನಂತರ ಇಂಡಿಯಾದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಪ್ರಗತಿಪರರು ಗೊಣಗುತ್ತಿರುವಾಗಲೇ ಟ್ರಂಪ್‌ ಅಮೆರಿಕದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾಗಿದೆ. ಏಪ್ರಿಲ್‌ 2ರಂದೇ ಅಮೆರಿಕ ಅಧ್ಯಕ್ಷರ ಅಧಿಕೃತ ಕಚೇರಿ ವೈಟ್‌ ಹೌಸ್‌ ದಾಖಲೆಯೊಂದನ್ನು ಹೊರಡಿಸಿ, ದೇಶದ ಸ್ಪರ್ಧಾತ್ಮಕತೆ, ಸಾರ್ವಭೌಮತ್ವದ ರಕ್ಷಣೆ ಹಾಗೂ ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತೆಯನ್ನು ಸಂರಕ್ಷಿಸು ಸಲುವಾಗಿ ಅಧ್ಯಕ್ಷ ಡೊನಾಲ್ಡ್‌ ಜೆ ಟ್ರಂಪ್‌ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ ಎಂದು ಹೇಳಿತು. ಈ ತುರ್ತು ಪರಿಸ್ಥಿತಿಯು ನೀಡಿರುವ ಅವಕಾಶವನ್ನು ಬಳಸಿಕೊಂಡೇ ಟ್ರಂಪ್‌ ಏಪ್ರಿಲ್‌ 5ರಿಂದ ಆಮದು ಸುಂಕವನ್ನು ಹೆಚ್ಚಳ ಮಾಡಿದ್ದು. ವಿದೇಶಿ ವ್ಯಾಪಾರ ಮತ್ತು ಆರ್ಥಿಕ ಪದ್ಧತಿಗಳೇ ಅಮೆರಿಕವನ್ನು ತುರ್ತು ಪರಿಸ್ಥಿತಿಯತ್ತ ನೂಕಿದ್ದು, ಅಮೆರಿಕದ ಕಂಪನಿಗಳು ವರ್ಷಕ್ಕೆ ಸುಮಾರು 200 ಬಿಲಿಯನ್‌ ಡಾಲರ್‌ಗಳಷ್ಟು ಮೌಲ್ಯ ವರ್ಧಿತ ತೆರಿಗೆ( ವ್ಯಾಟ್‌) ಅನ್ನು ಅನ್ಯ ದೇಶಗಳಿಗೆ ತೆರುತ್ತಿವೆ. ನಕಲಿ ಪದಾರ್ಥಗಳು, ಸಾಫ್ಟ್ ವೇರ್‌ ಪೈರಸಿ ಹಾಗೂ ವ್ಯಾಪಾರ ರಹಸ್ಯ ಕದಿಯುವ ಮೂಲಕ ಸುಮಾರು 225ರಿಂದ 600 ಬಿಲಿಯನ್‌ ಡಾಲರ್‌ಗಳಷ್ಟು ನಷ್ಟವಾಗುತ್ತಿದೆ. ಯೂರೋಪಿನ ಕಂಪನಿಗಳು ಅಮೆರಿಕಕ್ಕೆ ಮಾಡುವ ರಫ್ತಿನಿಂದ ಪಡೆಯುವ ಲಾಭಕ್ಕೆ ನಯಾಪೈಸೆ ತೆರಿಗೆ ಕೊಡುತ್ತಿಲ್ಲ. 2024ರಲ್ಲಿ ಅಮೆರಿಕದ ವ್ಯಾಪಾರ ಖೋತಾ ಸುಮಾರು 1.2 ಟ್ರಿಲಿಯನ್‌ ಡಾಲರ್‌ ಆಗಿದೆ. ಈ ತುರ್ತು ಪರಿಸ್ಥಿತಿಯು ದೇಶದ ನ್ಯಾಯಸಮ್ಮತ ವ್ಯಾಪಾರ ಹಾಗೂ ಕಾರ್ಮಿಕರನ್ನು ಕಾಪಾಡುತ್ತದೆ ಎಂಬುದು ಟ್ರಂಪ್‌ ವಾದ.

   ಈ ಏಪ್ರಿಲ್‌ 2ನ್ನು ಅಮೆರಿಕದ ʼ ಬಿಡುಗಡೆಯ ದಿನʼ ಎಂದು ಘೋಷಿಸಿದ ಟ್ರಂಪ್‌ ಆ ನಂತರದ ಕೆಲವೇ ದಿನಗಳಲ್ಲಿ ದೇಶದ ಹಾಗೂ ಅನ್ಯ ದೇಶಗಳ ಶೇರು ಮಾರುಕಟ್ಟೆಯ ಅತೀವ ಕುಸಿತ ಕಂಡು ಕಂಗಾಲಾಗಿದ್ದಂತೂ ಸತ್ಯ. ಅಮೆರಿಕದ ನಾಗರಿಕರಲ್ಲಿ 60-70% ನಾಗರಿಕರು ಶೇರು ಮಾರುಕಟ್ಟೆಯ ಪಾಲುದಾರರಾಗಿದ್ದಾರೆ. ಅವರು ಅಲ್ಲಿನ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಹೂಡಿರುವ ಕಷ್ಟ ಪಟ್ಟು ದುಡಿದ ಉಳಿತಾಯದ ಹೂಡಿಕೆ ಹಣ ಆವಿಯಾಗುತ್ತಿರುವುದನ್ನು ಕಂಡು ಸುಮ್ಮನಿರಲಾದೀತೇ. ಅಮೆರಿಕದ ಎಲ್ಲ ಪ್ರಮುಖ ನಗರದಲ್ಲಿ ಜನರು ಬೀದಿಗಳಿದು ಪ್ರತಿಭಟಿಸತೊಡಗಿದರು. ಜಗತ್ತಿನ ಎಲ್ಲ ದೇಶಗಳ ಆಮದು, ರಫ್ತುಗಳ ಮೇಲೂ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಹೆಚ್ಚಿಸಿದ ಡೊನಾಲ್ಡ್‌ ಜಾನ್‌ ಟ್ರಂಪ್‌ ತನ್ನ ತಾರೀಫ್‌ ಆದೇಶವನ್ನು ಮೂರು ತಿಂಗಳ ಅವಧಿಗೆ ರದ್ದು ಪಡಿಸಿದ್ದಾನೆ. ಟ್ರಂಪ್‌ನ ಕೋಡಂಗಿ ಆಟ ಕಂಡ ಜನರು ಇನ್ನು ಇಲ್ಲಿಗೆ ಈ ತಾರೀಫ್‌ ಕತೆಗೆ ಮಂಗಳ ಹಾಡಿದಂತೇ ಎನ್ನತೊಡಗಿದ್ದಾರೆ.

   ನಮ್ಮಲ್ಲಿ ಯಾರಾದರೂ ವಿವೇಚನೆಯಿಲ್ಲದ ಅಡಳಿತ ಮಾಡತೊಡಗಿದರೆ ತುಘಲಕ್‌ ಆಡಳಿತ ಎಂದು ಟೀಕಿಸುತ್ತೇವೆ. ಹೋದ ತಿಂಗಳು ತಮ್ಮ ಪತ್ನಿಯನ್ನು ತುಮುಲ್‌ ಅಧ್ಯಕ್ಷರನ್ನಾಗಿ ಮಾಡಲಿಲ್ಲವೆಂಬ ಆಕ್ರೋಶಕ್ಕೆ ಗುಬ್ಬಿ ಶಾಸಕರು ತುಮಕೂರು ಜಿಲ್ಲೆಯ ಮಂತ್ರಿಗಳು ತುಘಲಕ್‌ ಆಡಳಿತ ಮಾಡುತ್ತಿದ್ದಾರೆಂದು ಟೀಕಿಸಲಿಲ್ವಾ ಹಂಗೆ ಗಂಟೆಗೊಂದು ಗಳಿಗೆಗೊಂದು ಘೋಷಣೆಗಳನ್ನು ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ನ  ಆಡಳಿತ ಮಾದರಿಯನ್ನು ಮುಂದೊಂದು ದಿನ ʼ ಟ್ರಂಪಾಟʼ ಅಂತ ಬ್ರಾಂಡ್‌ ಮಾಡಿದರೂ ಆಚ್ಚರಿ ಪಡುವಂತಿಲ್ಲ .

    ಎಕನಾಮಿಕ್ಸ್‌ ಪದವೀಧರನೂ ಆಗಿರುವ ಟ್ರಂಪ್‌ ತನ್ನ ಎರಡನೇ ಅವಧಿಯಲ್ಲಿ ಕೇವಲ ಆರ್ಥಿಕ ಸುಧಾರಣೆಗಳನ್ನು ಮಾಡುತ್ತಿದ್ದಾನೆಂದು ಭಾವಿಸಿದರೆ ತಪ್ಪಾಗುತ್ತದೆ. ಆತ ತನ್ನ ಆಡಳಿತಾತ್ಮಕ ತೀರ್ಮಾನಗಳನ್ನು ಯಾರಾದರೂ ಟೀಕಿಸುವುದನ್ನು ಸಹಿಸುತ್ತಿಲ್ಲ. ವೈಟ್‌ ಹೌಸನಲ್ಲಿ ದಿನವೂ ಅಗತ್ಯ ಎನಿಸಿದಾಗಲೆಲ್ಲ ಓವಲ್‌ ಆಫೀಸಿನಲ್ಲಿ ನಿಂತು ಗಂಟೆಗಟ್ಟಲೆ ಸುದ್ದಿಗಾರರ ಎದುರು ಘೋಷಣೆಗಳನ್ನು ಮಾಡುವ ಟ್ರಂಪ್‌ ಪತ್ರಕರ್ತರಿಗೂ ಎದುರಾ ಎದುರು ವ್ಯಂಗ್ಯವಾಗಿ ಪ್ರತಿ ಟೀಕೆ ಮಾಡುತ್ತಾನೆ. ಸಿಎನ್‌ಎನ್‌ ಸೇರಿದಂತೆ ಟ್ರಂಪ್‌ ಆಡಳಿತ ವಿಧಾನವನ್ನು ಟೀಕಿಸುವ ಎಲ್ಲ ಮಾಧ್ಯಮ ಸಂಸ್ಥೆಗಳ ಮೇಲೆ ಟ್ರಂಪ್‌ ಮುಗಿಬಿದ್ದಿದ್ದಾನೆ. ದೇಶದ ಹಲವಾರು ಪ್ರಾತಿನಿಧಿಕ ಸಂಸ್ಖೃತಿ ಸಂಸ್ಥೆಗಳನ್ನೂ ತನ್ನ ಹತೋಟಿಗೆ ತೆಗೆದುಕೊಂಡಿದ್ದಾನೆ. ಟ್ರಂಪ್‌ ಪತ್ರಕರ್ತರನ್ನು ತುಳಿಯುತ್ತಿರುವ ವೇಗವನ್ನು ನೋಡಿದರೆ, ಈತನ ಮುಂದೆ ಮೋದಿ ಏನೇನೂ ಅಲ್ಲ ಎನ್ನಿಸಿಬಿಡುವ ದಿನಗಳೂ ದೂರವಿಲ್ಲ.