ಸಾಮೂಹಿಕ ಶಿಕ್ಷೆಗೊಳಪಡಿಸುವ ಧ್ವಂಸ ಕಾರ್ಯಾಚರಣೆ ಸಂವಿಧಾನಬದ್ಧವಲ್ಲ ವರ್ತಮಾನ -   ನಾ ದಿವಾಕರ  

ಸಾಮೂಹಿಕ ಶಿಕ್ಷೆಗೊಳಪಡಿಸುವ ಧ್ವಂಸ ಕಾರ್ಯಾಚರಣೆ ಸಂವಿಧಾನಬದ್ಧವಲ್ಲ ವರ್ತಮಾನ -   ನಾ ದಿವಾಕರ  

ಸಾಮೂಹಿಕ ಶಿಕ್ಷೆಗೊಳಪಡಿಸುವ ಧ್ವಂಸ ಕಾರ್ಯಾಚರಣೆ ಸಂವಿಧಾನಬದ್ಧವಲ್ಲ  ವರ್ತಮಾನ -   ನಾ ದಿವಾಕರ   

  

ಸಾಮೂಹಿಕ ಶಿಕ್ಷೆಗೊಳಪಡಿಸುವ ಧ್ವಂಸ ಕಾರ್ಯಾಚರಣೆ ಸಂವಿಧಾನಬದ್ಧವಲ್ಲ

ವರ್ತಮಾನ -   ನಾ ದಿವಾಕರ

 

ಈ ವರ್ಷದ ರಾಮನವಮಿ ಆಚರಣೆಯ ಮೆರವಣಿಗೆಗಳ ಸಂದರ್ಭದಲ್ಲಿ ಮಧ್ಯಪ್ರದೇಶದ ಕರ್ಗೋನ್‌ ಸೇರಿದಂತೆ ದೇಶದ ಹಲವೆಡೆ ಕೋಮು ಸಂಘರ್ಷ ಏರ್ಪಟ್ಟಿತ್ತು.  ಮಧ್ಯಪ್ರದೇಶ ಸರ್ಕಾರವು ಈ ಗಲಭೆಗಳಲ್ಲಿ ಪಾಲ್ಗೊಂಡಿದ್ದವರ ಮನೆಗಳನ್ನು ಧ್ವಂಸ ಮಾಡುವಂತೆ ಅಧಿಕೃತವಾಗಿ ಆದೇಶ ಹೊರಡಿಸಿತ್ತು . ಈ ಕಟ್ಟಡ ಧ್ವಂಸ ಕಾರ್ಯಾಚರಣೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ವಿರುದ್ಧ ನಡೆಸಲಾಯಿತು ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ.  ಆದರೆ ಈ ಧ್ವಂಸ ಕಾರ್ಯಾಚರಣೆಯನ್ನು ಕೋಮು ದಂಗೆಗಳ ತರುವಾಯ ಒಂದು ನಿರ್ದಿಷ್ಟ ಕೋಮಿಗೆ ಸೇರಿದ ದಂಗೆಕೋರರ ವಿರುದ್ಧ, ಸ್ವೇಚ್ಚಾನುಸಾರ ಕೈಗೊಳ್ಳಲಾಗಿರುವುದನ್ನು ಗಮನಿಸಿದರೆ, ಈ ಕಾರ್ಯಾಚರಣೆಯ ಉದ್ದೇಶ ಸಾಮೂಹಿಕ ಶಿಕ್ಷೆಗೊಳಪಡಿಸುವುದೇ ಆಗಿದೆ ಎನ್ನುವುದು ಸ್ಪಷ್ಟ.

 

ಪ್ರಭುತ್ವದ ಕ್ರೂರ ಬಲದ ಸಂಕೇತವೇ ಆಗಿರುವ ಈ ಧ್ವಂಸ ಮಾಡುವ ಯಂತ್ರಗಳು ಕೇವಲ ಮನೆಗಳನ್ನು, ಕಟ್ಟಡಗಳನ್ನು ಮಾತ್ರವೇ ಧ್ವಂಸ ಮಾಡುತ್ತಿಲ್ಲ, ಬದಲಾಗಿ ಸಾಂವಿಧಾನಿಕ ನಿಯಮಗಳನ್ನೂ, ಕಾನೂನು ಕಟ್ಟಳೆಗಳನ್ನೂ ಧ್ವಂಸ ಮಾಡುತ್ತಿವೆ.  ಕ್ಷಿಪ್ರಗತಿಯಲ್ಲಿ ನ್ಯಾಯ ವಿತರಣೆ ಮಾಡುವ ಈ ಕ್ರೂರ ಪದ್ಧತಿ ಆರಂಭವಾದದ್ದು ಉತ್ತರಪ್ರದೇಶದಲ್ಲಿ.  2019ರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು ಯಾವುದೇ ಸಮೂಹ ಗಲಭೆಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾದರೆ ಅದರ ನಷ್ಟವನ್ನು ದಂಗೆಕೋರರಿಂದಲೇ ವಸೂಲಿ ಮಾಡುವ ಆದೇಶವೊಂದನ್ನು ಹೊರಡಿಸಿತ್ತು ಈ ನಿಯಮವನ್ನು ಸಾಂಸ್ಥೀಕರಿಸುವ ಸಲುವಾಗಿಯೇ ಉತ್ತರಪ್ರದೇಶ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ವಸೂಲಾತಿ ಕಾಯ್ದೆ 2020ನ್ನು ಜಾರಿಗೊಳಿಸಲಾಯಿತು.  ಈ ರೀತಿಯ ಪ್ರಭುತ್ವದ ಕ್ರೂರ ಬಲ ಪ್ರಯೋಗವು ಅನೇಕ ಸ್ಥಳೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎಂದು ಈಗಾಗಲೇ ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.  ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ, ಕಾನೂನು ಸಮ್ಮತಿ ಪಡೆಯದೆ,  ಈ ರೀತಿ ಮನೆಗಳನ್ನು ಧ್ವಂಸ ಮಾಡುವುದು ಭಾರತವು ಒಪ್ಪಿರುವಂತಹ ಹಲವು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎನ್ನುವುದನ್ನು ಗಮನಿಸಬೇಕಿದೆ.

 

ಸಮರ್ಪಕ ವಸತಿಯ ಹಕ್ಕು

 

ವಸತಿ ಅಥವಾ ಸೂರಿನ ಹಕ್ಕು ಭಾರತೀಯ ಸಂವಿಧಾನದ ಅನುಚ್ಚೇದ 21ರ ಅನ್ವಯ ಮೂಲಭೂತ ಹಕ್ಕು ಎಂದೇ ಪರಿಗಣಿಸಲ್ಪಟ್ಟಿದ್ದು, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಚೌಕಟ್ಟಿನಲ್ಲೂ ಸಹ ಇದನ್ನು ಮೂಲಭೂತ ಹಕ್ಕು ಎಂದೇ ಪರಿಗಣಿಸಲಾಗುತ್ತದೆ. ಈ ಅಂತರರಾಷ್ಟ್ರೀಯ ಕಾನೂನು ನಿಯಮಗಳಿಗೆ ಭಾರತವೂ ಒಳಪಟ್ಟಿರುತ್ತದೆ. ಉದಾಹರಣೆಗೆ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (ಯುಡಿಹೆಚ್‌ಆರ್)‌ಯ ಅನುಚ್ಚೇದ 25ರ ಅನ್ವಯ “ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಕುಟುಂಬದೊಡನೆ, ಸಮರ್ಪಕ ಆಹಾರ, ವಸ್ತ್ರ ವಸತಿ ಮತ್ತು ಆರೋಗ್ಯ ಸೇವೆಯನ್ನೊಳಗೊಂಡಂತೆ ಆರೋಗ್ಯಕರವಾದ, ಯೋಗಕ್ಷೇಮದ ಜೀವನಮಟ್ಟವನ್ನು ಕಾಪಾಡಿಕೊಳ್ಳುವ ಹಕ್ಕು ಇರುತ್ತದೆ ”

 

ಇದೇ ರೀತಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರರಾಷ್ಟ್ರೀಯ ಒಡಂಬಡಿಕೆ(ಐಸಿಇಎಸ್‌ಸಿಆರ್)‌ ಅನುಚ್ಚೇದ 11.1ರಲ್ಲಿ “ ಪ್ರತಿಯೊಬ್ಬ ವ್ಯಕ್ತಿಯೂ ತನಗಾಗಿ ಮತ್ತು ತನ್ನ ಕುಟುಂಬದವರಿಗಾಗಿ ಸಮರ್ಪಕವಾದ ಆಹಾರ, ಆರೋಗ್ಯ, ವಸ್ತ್ರ ಮತ್ತು ವಸತಿ ಸೌಲಭ್ಯಗಳನ್ನು ಹೊಂದಿರುವ ಜೀವನಮಟ್ಟವನ್ನು ಕಾಪಾಡಿಕೊಳ್ಳುವ ಹಕ್ಕು ಇರುವುದೇ ಅಲ್ಲದೆ, ತನ್ನ ಜೀವನಮಟ್ಟವನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುವ ಹಕ್ಕು ಸಹ ಇರುತ್ತದೆ ” ಎಂದು ಹೇಳಲಾಗಿದೆ. ಇದೇ ಅನುಚ್ಚೇದದ ಅಡಿಯಲ್ಲಿ ಪ್ರತಿಯೊಂದು ದೇಶವೂ “ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ” ಎಂದೂ ಹೇಳಲಾಗಿದ್ದು, ಸಮರ್ಪಕ ವಸತಿ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವ್ಯಕ್ತಿಗಳ ಹಕ್ಕುಗಳನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.

 

ಅನುಚ್ಚೇದ 4ರ ಅನ್ವಯ, ಐಸಿಇಎಸ್‌ಸಿಆರ್‌ ಒಡಂಬಡಿಕೆಯಲ್ಲಿ ಮಾನ್ಯ ಮಾಡಲಾಗಿರುವ ಹಕ್ಕುಗಳನ್ನು ಯಾವುದೇ ದೇಶದ ಸರ್ಕಾರಗಳು ಅಮಾನ್ಯ ಮಾಡಬೇಕಾದಲ್ಲಿ, ಸರ್ಕಾರಗಳು ವಿಧಿಸುವ ನಿರ್ಬಂಧಗಳು ಈ ಹಕ್ಕುಗಳ ಮೂಲ ಲಕ್ಷಣಗಳಿಗೆ ಪೂರಕವಾಗಿರಬೇಕಾಗುತ್ತದೆ ಮತ್ತು ಸಮಾಜದ ಸಮಗ್ರ ಒಳಿತಿನ ಉದ್ದೇಶವನ್ನು ಹೊಂದಿರಬೇಕಾಗುತ್ತದೆ. ಆದಾಗ್ಯೂ ಈ ಒಡಂಬಡಿಕೆಯಲ್ಲಿ ಸ್ವೀಕೃತವಾಗಿರುವ ಯಾವುದೇ ಹಕ್ಕುಗಳಿಗೆ ನಿರ್ಬಂಧ ಹೇರುವುದು, ಅದರಲ್ಲೂ ವಸತಿ ಹಕ್ಕಿನ ಮೇಲೆ ನಿರ್ಬಂಧ ಹೇರುವುದು, ಮೂಲತಃ ಈ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ.  ಈ ಅಂಶವನ್ನು ಒಡಂಬಡಿಕೆಯ ಅನುಚ್ಚೇದ 5ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

 

ಅಷ್ಟೇ ಅಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯ ಹಕ್ಕುಗಳಲ್ಲಿ ಸ್ವೇಚ್ಚಾನುಸಾರದಿಂದ ಹಸ್ತಕ್ಷೇಪ ಮಾಡುವುದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ. ಉದಾಹರಣೆಗೆ ಯುಡಿಹೆಚ್‌ಆರ್‌ ಒಡಂಬಡಿಕೆಯ ಅನುಚ್ಚೇದ 12ರಲ್ಲಿ “ ಯಾವುದೇ ವ್ಯಕ್ತಿಯ  ವ್ಯಕ್ತಿಗತ ಅಥವಾ ಕೌಟುಂಬಿಕ ಖಾಸಗಿತನ, ವಸತಿ ಅಥವಾ ಸಂವಹನ ಪ್ರಕ್ರಿಯೆಯಲ್ಲಿ ಸ್ವೇಚ್ಚಾನುಸಾರದ ಹಸ್ತಕ್ಷೇಪ ಮಾಡುವಂತಿಲ್ಲ  ಅಥವಾ ಆತನ/ಆಕೆಯ ಗೌರವ ಮತ್ತು ಘನತೆಯ ಮೇಲಿನ ದಾಳಿ ಮಾಡುವಂತಿಲ್ಲ” ಎಂದು ಹೇಳಲಾಗಿದೆ.  “ ಇಂತಹ  ಯಾವುದೇ ಹಸ್ತಕ್ಷೇಪದ ವಿರುದ್ಧ ಅಥವಾ ಆಕ್ರಮಣದ ವಿರುದ್ಧ ಕಾನೂನು ರಕ್ಷಣೆ ಪಡೆಯುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ ” ಎಂದು ಅನುಚ್ಚೇದ 12ರಲ್ಲಿ ಹೇಳಲಾಗಿದೆ.  ಇದೇ ಹಕ್ಕುಗಳನ್ನು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಡಂಬಡಿಕೆ (ಐಸಿಸಿಪಿಆರ್)‌ಯ ಅನುಚ್ಚೇದ 17ರಲ್ಲಿ ಮಾನ್ಯ ಮಾಡಲಾಗಿದ್ದು , ಈ ಅನುಚ್ಚೇದದ ಅನ್ವಯ ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕವಾಗಿ ಅಥವಾ ಇತರರ ಜೊತೆಗೂಡಿ ತನ್ನದೇ ಆದ ಆಸ್ತಿಯನ್ನು ಹೊಂದುವ ಹಕ್ಕು ಹೊಂದಿರುತ್ತಾನೆ ಹಾಗೂ ಯಾವುದೇ ವ್ಯಕ್ತಿಯ ಆಸ್ತಿಯ ಹಕ್ಕನ್ನು ಸ್ವೇಚ್ಚಾನುಸಾರದಿಂದ ಕಸಿದುಕೊಳ್ಳಲಾಗುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ವ್ಯಕ್ತಿಗಳ ಆಸ್ತಿಯ ಹಕ್ಕುಗಳಲ್ಲಿ ಸ್ವೇಚ್ಚಾನುಸಾರ ಹಸ್ತಕ್ಷೇಪ ಮಾಡುವುದು ಐಸಿಸಿಪಿಆರ್‌ ಒಡಂಬಡಿಕೆಯ ಉಲ್ಲಂಘನೆಯೇ ಆಗುತ್ತದೆ.

 

ಬಲಾತ್ಕಾರದ ಎತ್ತಂಗಡಿಗಳು

 

ಸಂಯುಕ್ತ ರಾಷ್ಟ್ರಗಳ ಮಾನವ ಹಕ್ಕುಗಳ ಕಚೇರಿ ಎಂದೇ ಪರಿಗಣಿಸಲ್ಪಡುವ ಮಾನವ ಹಕ್ಕುಗಳ ಉನ್ನತ ಆಯುಕ್ತರ ಕಚೇರಿ (ಓಹೆಚ್‌ಸಿಹೆಚ್‌ಆರ್)‌ ಅಂತರರಾಷ್ಟ್ರೀಯ ಕಾನೂನುಗಳ ಅನ್ವಯ ಒದಗಿಸಲಾಗುವ ಮಾನವ ಹಕ್ಕುಗಳನ್ನು ರಕ್ಷಿಸಲೆಂದೇ ಸ್ಥಾಪಿಸಲಾಗಿರುವ ಒಂದು ಸಂಸ್ಥೆ. ಈ ಸಂಸ್ಥೆಯು ಸಮರ್ಪಕ ವಸತಿ ಸೌಕರ್ಯದ ಬಗ್ಗೆ ಸೂಕ್ತವಾದ ನಿಯಮಗಳನ್ನು ಸಹ ರೂಪಿಸಿದೆ. ಸಂಯುಕ್ತ ರಾಷ್ಟ್ರಗಳ ಮಾನವ ಹಕ್ಕುಗಳ ಕಚೇರಿಯ ನಿಯಮಗಳ ಅನ್ವಯ, ಯಾವುದೇ ವ್ಯಕ್ತಿಯ ಸಮರ್ಪಕ ವಸತಿಯ ಹಕ್ಕು ರಕ್ಷಣೆ ಎಂದರೆ ಬಲಾತ್ಕಾರದ ಎತ್ತಂಗಡಿ ಅಥವಾ ಉಚ್ಚಾಟನೆಯಿಂದ ರಕ್ಷಣೆ ಪಡೆಯುವುದೇ ಆಗಿರುತ್ತದೆ.  ಐಸಿಇಎಸ್‌ಸಿಆರ್‌ ಒಡಂಬಡಿಕೆಯ ಅನುಚ್ಚೇದ 11.1ರಲ್ಲಿ “ ಬಲಾತ್ಕಾರದ ಎತ್ತಂಗಡಿ ಅಥವಾ ಉಚ್ಚಾಟನೆ ಎನ್ನುವುದು, ವ್ಯಕ್ತಿ, ಕುಟುಂಬ ಅಥವಾ ಸಮುದಾಯಗಳನ್ನು ಅವರು ನೆಲೆಸಿರುವ ಮನೆಗಳಿಂದ ಅಥವಾ ಭೂಮಿಯಿಂದ, ಯಾವುದೇ ಕಾನೂನು ರಕ್ಷಣೆ ಅಥವಾ ನೆರವು ಇಲ್ಲದೆಯೇ, ಶಾಶ್ವತವಾಗಿ ಬೇರ್ಪಡಿಸುವುದೇ ಆಗಿರುತ್ತದೆ ”. ಸಮರ್ಪಕ ವಸತಿಯ ಹಕ್ಕು ಎಂದರೆ ಯಾವುದೇ ವ್ಯಕ್ತಿಯ ವಸತಿ, ಖಾಸಗಿತನ, ಕುಟುಂಬದ ಹಕ್ಕುಗಳು ಸ್ವೇಚ್ಚಾನುಸಾರದ ಹಸ್ತಕ್ಷೇಪದಿಂದ ಮುಕ್ತವಾಗಿರುವುದು ಎಂದೇ ಪರಿಗಣಿಸಬೇಕಾಗುತ್ತದೆ.

 

ಮಧ್ಯಪ್ರದೇಶ ಸರ್ಕಾರವು ಆರೋಪಿತ ದಂಗೆಕೋರರ ಮನೆಗಳ ಮೇಲೆ ಧ್ವಂಸ ಕಾರ್ಯಾಚರಣೆ ನಡೆಸಿರುವುದು ಬಲಾತ್ಕಾರದ ಎತ್ತಂಗಡಿಯೇ ಆಗುತ್ತದೆ. ಹಾಗೆಯೇ ವ್ಯಕ್ತಿಯ ವಸತಿ ಹಕ್ಕುಗಳಲ್ಲಿ ಸ್ವೇಚ್ಚಾನುಸಾರದ ಹಸ್ತಕ್ಷೇಪ ಮಾಡಿದಂತಾಗುವುದರಿಂದ ಇದು ಐಸಿಇಎಸ್‌ಸಿಆರ್‌ ಒಡಂಬಡಿಕೆಯ ಅನುಚ್ಚೇದ 11.1ರ ಉಲ್ಲಂಘನೆಯೇ ಆಗುತ್ತದೆ.  ಈ ಎತ್ತಂಗಡಿಯ ಕಾರ್ಯಾಚರಣೆ ಕಾನೂನು ಪ್ರಕಾರ ಕೈಗೊಳ್ಳಲಾಗಿದೆ ಮತ್ತು ಮಾನವ ಹಕ್ಕು ಒಡಂಬಡಿಕೆಗಳ ಅನ್ವಯ ಕೈಗೊಳ್ಳಲಾಗಿದೆ ಎಂದು ನಿರೂಪಿಸಿದಲ್ಲಿ ಮಾತ್ರ ಈ ಧ್ವಂಸ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ಕಾನೂನುಗಳಡಿ ಸಮರ್ಥಿಸಿಕೊಳ್ಳಲು ಸಾಧ್ಯ. ಹಾಗೆಯೇ ರಾಜ್ಯ ಸರ್ಕಾರಗಳ ಈ ಕಾರ್ಯಾಚರಣೆ  ಅವಶ್ಯಕವಾಗಿತ್ತೇ ಮತ್ತು ಪರಿಸ್ಥಿತಿಗೆ ಪೂರಕವಾಗಿತ್ತೇ ಎನ್ನುವುದೂ ಮುಖ್ಯವಾಗುತ್ತದೆ.

 

ಆದರೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿರುವ ಸಮಯವನ್ನು ಗಮನಿಸಿದರೆ  ಈ ಬಲಾತ್ಕಾರದ ಎತ್ತಂಗಡಿಯನ್ನು ಕಾನೂನಾತ್ಮಕವಾಗಿ ಸಮರ್ಥಿಸಿಕೊಳ್ಳಲಾಗುವುದಿಲ್ಲ.  ಒಂದು ವೇಳೆ ಈ ಧ್ವಂಸ ಕಾರ್ಯಾಚರಣೆಗೆ ಅಕ್ರಮ ಒತ್ತುವರಿಯೇ ಕಾರಣ ಎಂದಾದಲ್ಲಿ, ಕೋಮು ದಂಗೆಗಳು ಸಂಭವಿಸಿದ ದಿನದಂದು ಅಧಿಕಾರಿಗಳು ಮುನ್ಸೂಚನೆ ಅಥವಾ ನೋಟಿಸ್‌ ನೀಡಿದ್ದರೇ ಎಂದು ಗಮನಿಸಬೇಕಾಗುತ್ತದೆ. ಅಥವಾ ಮುಂಚಿತವಾಗಿಯೇ ಎತ್ತಂಗಡಿಯ ಆದೇಶವನ್ನು ಹೊಂದಿದ್ದರೇ ಎಂದು ಪ್ರಶ್ನಿಸಬೇಕಾಗುತ್ತದೆ.  ಅಥವಾ ದಂಗೆಗಳ ನಂತರವೇ ಈ ನಿರ್ಧಾರವನ್ನು ಕೈಗೊಳ್ಳಲಾಯಿತೇ ? ಈ ಎತ್ತಂಗಡಿಯ ಆದೇಶ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವೇ ಸೀಮಿತವಾಗಿದೆಯೇ ? ಈ ಪ್ರಶ್ನೆಗಳೂ ಉದ್ಭವಿಸುತ್ತವೆ.

 

ನ್ಯಾಯಾಂಗದ ನಿಯಮಗಳು

 

ಮೇಲಾಗಿ, ಮೇಲೆ ಉಲ್ಲೇಖಿಸಲಾದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಒಡಂಬಡಿಕೆಗಳನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲೂ ಅಳವಡಿಸಿದೆ. ಬಚ್ಚನ್‌ ಸಿಂಗ್‌ ಮತ್ತು ಪಂಜಾಬ್‌ ರಾಜ್ಯದ ಪ್ರಕರಣ, ವಿಶಾಖ ಮತ್ತು ರಾಜಸ್ತಾನ ಸರ್ಕಾರದ ಪ್ರಕರಣ ಮತ್ತು ಇತ್ತೀಚಿನ ಪುಟ್ಟಸ್ವಾಮಿ ಮತ್ತು ಒಕ್ಕೂಟ ಸರ್ಕಾರ ಪ್ರಕರಣಗಳ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ “ ಭಾರತದ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ವ್ಯಾಖ್ಯಾನ ಮಾಡುವ ಸಂದರ್ಭದಲ್ಲಿ ಈ ಹಕ್ಕುಗಳನ್ನು ಅಂತರರಾಷ್ಟ್ರೀಯ ಮಾನವ ಹಕ್ಕು ಕಾನೂನುಗಳ ವ್ಯಾಪ್ತಿಯೊಳಗೆ ಅಳವಡಿಸಿ ವ್ಯಾಖ್ಯಾನಕ್ಕೊಳಪಡಿಸಬೇಕು ” ಎಂದು ಹೇಳಿದೆ.

 

ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಹೊಂದಿರುವ ನ್ಯಾಯಾಂಗವು ಕಾರ್ಯಾಂಗ ಕೈಗೊಳ್ಳುತ್ತಿರುವ ಈ ಅನಿರ್ಬಂಧಿತ ಕಾರ್ಯಾಚರಣೆಯ ಮೇಲೆ ನಿರ್ಬಂಧಗಳನ್ನು ಹೇರಲು ಮುಂದಾಗಬೇಕಿದೆ. ರಾಷ್ಟ್ರೀಯವಾದಿ-ಜನಪ್ರಿಯ ರಾಜಕಾರಣದ ಸಂಕಥನಕ್ಕೆ ಪ್ರತಿಯಾಗಿ ನ್ಯಾಯಾಲಯಗಳು ಅಂತರರಾಷ್ಟ್ರೀಯ ಕಾನೂನುಗಳನ್ನು ಬಳಸಲು ಮುಂದಾಗಬೇಕಿದೆ.

ಮೂಲ : ಪ್ರಭಾಶ್‌ ರಂಜನ್‌ ಮತ್ತು ಅಮನ್‌ ಕುಮಾರ್‌ :

ದ ಹಿಂದೂ : 20-04-22