ಬೈರಗೊಂಡ್ಲು ಪರಿಹಾರ: ಮಾಧುಸ್ವಾಮಿಯವರು ಕೊಡಲಿಲ್ಲ- ಪರಮೇಶ್ವರ ಬಿಡಲಿಲ್ಲ!

ಬೈರಗೊಂಡ್ಲು ಪರಿಹಾರ: ಮಾಧುಸ್ವಾಮಿಯವರು ಕೊಡಲಿಲ್ಲ- ಪರಮೇಶ್ವರ ಬಿಡಲಿಲ್ಲ!

 

ಬೈರಗೊಂಡ್ಲು ಪರಿಹಾರ: ಮಾಧುಸ್ವಾಮಿಯವರು ಕೊಡಲಿಲ್ಲ- ಪರಮೇಶ್ವರ ಬಿಡಲಿಲ್ಲ!

ಸುದ್ದಿ ವಿಶ್ಲೇಷಣೆ

ಕುಚ್ಚಂಗಿ ಪ್ರಸನ್ನ

ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ ಮಂಗಳವಾರ ವಿಧಾನ ಸಭೆಯಲ್ಲಿ ಬಹಳ ಸದ್ದು ಮಾಡಿದೆ. ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಜಲಾಶಯಕ್ಕೆ ಭೂಸ್ವಾಧೀನ ಪಡಿಸಿಕೊಳ್ಳುವ ರೈತರ ಜಮೀನಿಗೆ ಪಕ್ಕದ ದೊಡ್ಡಬಳ್ಳಾಪುರದಲ್ಲಿ ಜಮೀನು ನೀಡುವ ರೈತರಿಗೆ ನೀಡುವಷ್ಟೇ ಮೊತ್ತದ ಪರಿಹಾರ ನೀಡಲೇಬೇಕೆಂದು ಆ ತಾಲೂಕಿನ ಶಾಸಕರೂ ಆಗಿರುವ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಪಟ್ಟು ಹಿಡಿದರು. ಸರ್ಕಾರದ ಹಾಲಿ ಭೂಸ್ವಾಧೀನ ಹಾಗೂ ಪರಿಹಾರ ನಿಯಮಗಳಲ್ಲಿ ಇಷ್ಟು ದೊಡ್ಡ ಮೊತ್ತ ಕೊಡಲು ಅವಕಾಶವಿಲ್ಲ ಎಂದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ಎಂದಿನ ಮೊನಚು ಶೈಲಿಯಲ್ಲಿ ಹೇಳಿದಾಗ ವಿಧಾನ ಸಭೆಯಲ್ಲಿ ಎಂದೂ ದೊಡ್ಡ ದನಿಯಲ್ಲಿ ಕೂಗಾಡದೇ ಇದ್ದ ಸೌಮ್ಯ ಸ್ವಭಾವದ ಪರಮೇಶ್ವರ ಅವರೂ ಕೂಗಾಡುವಂತಾಗಿಬಿಟ್ಟಿತು.

“ ನೀವೇ ಅಧಿಕಾರದಲ್ಲಿ ಇದ್ರಲ್ಲ, ನೀವೇ ಎಲ್ಲ ಮಾಡಿ ಮುಗಿಸಬಹುದಿತ್ತು, ಯಾಕೆ ಬಾಕಿ ಇಟ್ರಿ” ಅಂತ ಮಾಧುಸ್ವಾಮಿಯವರು ಪರಮೇಶ್ವರ ಅವರನ್ನು ಪ್ರಶ್ನಿಸಿದರು. ನೀವು ಸಚಿವ ಸಂಪುಟ ಉಪಸಮಿತಿಯಲ್ಲಿದ್ದುಕೊಂಡು ಸಭೆಗಳನ್ನು ನಡೆಸಿ, ನಡವಳಿಗಳನ್ನು ದಾಖಲು ಮಾಡಿದಿರೇ ಹೊರತು ಯಾವುದೇ ಆದೇಶ ಹೊರಡಿಸಿಲ್ಲ. ಹಾಗಾಗಿ ಇವತ್ತಿಗೂ ಇದು ಇತ್ಯರ್ಥವಾಗದ ಸಮಸ್ಯೆಯೇ ಆಗಿಬಿಟ್ಟಿದೆ ಎಂದರು ಸಚಿವರು.ಈ ಪ್ರಶ್ನೆ ಜಿಲ್ಲೆಯ ಎಲ್ಲರನ್ನೂ ಕಾಡುತ್ತಿದೆ.

ಮೊದಲು ಸಂಕ್ಷಿಪ್ತವಾಗಿ ಯೋಜನೆ ಕುರಿತು ತಿಳಿಯೋಣ: ಎತ್ತಿನ ಹೊಳೆ ಯೋಜನೆಯ ರೂವಾರಿ ಬಿಜೆಪಿ ಎನ್ನಲಾಗುತ್ತಿದೆ, ೨೦೦೮ರಲ್ಲಿ ರೂ.೮೦೦೦ ಕೋಟಿ ಮೊತ್ತದ ಯೋಜನೆ ರೂಪುಗೊಂಡಿತು. ಆದರೆ ಅದಕ್ಕೂ ಮೊದಲು ಚಿಕ್ಕಬಳ್ಳಾಪುರ ಸಂಸದರಾಗಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಸ್ವಕ್ಷೇತ್ರಕ್ಕೆ ನೀರು ಒದಗಿಸಲು ಈ ಕುರಿತು ಸಮೀಕ್ಷೆ ಮಾಡಿಸಿದ್ದರೆಂದೂ ಹೇಳಲಾಗಿದೆ. ಆದರೆ ಬಿಜೆಪಿ ಸರ್ಕಾರ ಒಂದು ರೂಪಾಯಿಯನ್ನೂ ಯೋಜನೆಗೆ ಕೊಡಲಿಲ್ಲ.ನಂತರ ಬಂದ ಸಿದ್ಧರಾಮಯ್ಯ ನಾಯಕತ್ವದ ಕಾಂಗ್ರೆಸ್ ಸರ್ಕಾರ ಕಾಲಾನಂತರದಲ್ಲಿ ಹೆಚ್ಚಿನ ನಿರ್ಮಾಣ ವೆಚ್ಚದ ಲೆಕ್ಕದಲ್ಲಿ ರೂ.೧೨,೯೩೧ ಕೋಟಿ ಮಂಜೂರು ಮಾಡಿತು, ಕೆಲಸ ಶುರುವಾಯಿತು. ಇದೀಗ ಯೋಜನಾ ವೆಚ್ಚ ೨೪,೦೦೦ ಕೋಟಿ ರೂ. ತಲುಪಿದೆ. ಆದರೆ ವಾಸ್ತವದಲ್ಲಿ ಇದುವರೆಗೂ ಬಿಡುಗಡೆ ಆಗಿರುವುದು ರೂ.೮೦೦೦ ಕೋಟಿ ಹಾಗೂ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿರುವುದು ಒಟ್ಟು ೨೭೪ ಕಿಮೀ ಉದ್ದದ ಮುಖ್ಯ ಕಾಲುವೆಯಲ್ಲಿ ಆರಂಭದ ೩೩ ಕಿಮೀ ಮಾತ್ರ . ಉಳಿದಂತೆ ಅಲ್ಲಲ್ಲಿ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ ಇರುವ ಕಡೆ ಕಾಲುವೆ ತೆಗೆಯಲಾಗುತ್ತಿದೆ. ರೈತರ ಭೂಮಿ ಸ್ವಾಧೀನ ಪ್ರಕ್ರಿಯೆ ಮಾತ್ರ ಪ್ರಗತಿ ಕಂಡಿಲ್ಲ.

ಹಾಸನ ಜಿಲ್ಲೆಯ ಪಶ್ಚಿಮ ಘಟ್ಟ ವ್ಯಾಪ್ತಿಯ ಸಕಲೇಶಪುರ ತಾಲೂಕಿನಲ್ಲಿ ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೆರೆ ಹೊಳೆ, ಹೊಂಗದಹಳ್ಳ ಪ್ರದೇಶದಲ್ಲಿ ಮಳೆಗಾಲದ ಅವಧಿಯಲ್ಲಿ ಸುರಿವ ಮಳೆ ನೀರನ್ನು ೭-೮ ಮಧ್ಯಮ ಪ್ರಮಾಣದ ಬ್ಯಾರೇಜುಗಳ ಮುಖಾಂತರ ತಡೆದು ಚಿಕ್ಕಮಗಳೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಆಯ್ದ ೫೭೪ ಕೆರೆಗಳಿಗೆ ಹರಿಸುವ ೧೦೦% ಕುಡಿಯುವ ನೀರಿನ ಯೋಜನೆ ಇದು.  ೨೭೪ ಕಿಮೀಗಳ ಕಾಲುವೆ ಉದ್ದದಲ್ಲಿ ಸುಮಾರು ೧೩೦ ಕಿಮೀ ಬೃಹತ್ ಕೊಳವೆಗಳಲ್ಲಿ ನೀರು ಸಾಗುತ್ತದೆ. ಪೈಪುಗಳನ್ನು ಭೂಮಿಯಲ್ಲಿ ಹುಗಿಯುವ ಕರ‍್ಯಕ್ಕೇನೂ ತೊಂದರೆಯಾಗಿಲ್ಲ. ಆದೇ ರೀತಿ ಗುಬ್ಬಿ ತಾಲೂಕಿನ ಚೇಳೂರು ಸಮೀಪ ೧೨.೫೫ ಕಿಮೀ ಉದ್ದದ ಮೇಲ್ಗಾಲುವೆ ಕೂಡಾ ಮುಗಿಯುತ್ತ ಬಂದಿದೆ.

ಪಶ್ಚಿಮ ಘಟ್ಟಗಳಲ್ಲಿ ಜೂನ್‌ನಿಂದ ನವೆಂಬರ್‌ವರೆಗೆ ಅಂದರೆ ಮಳೆಗಾಲದಲ್ಲಿ ೨೦೦೦ ಟಿಎಂಸಿಗೂ ಹೆಚ್ಚು ನೀರು ನದಿಗಳಲ್ಲಿ ಹರಿದು ಸಮುದ್ರ ಸೇರುತ್ತಿದೆ. ಅದರಲ್ಲಿ ಕೇವಲ ೨೪.೦೧ ಟಿಎಂಸಿಯನ್ನು ಬರಪೀಡಿತ ಮತ್ತು ಅಂತರ್ಜಲ ಬರಡಾಗಿರುವ ಮೇಲ್ಕಂಡ ಜಿಲ್ಲೆಗಳಿಗೆ ಹರಿಸುವ ವಿಶಿಷ್ಟ ಮತ್ತು ಮಹತ್ವದ ಯೋಜನೆ ಇದು. ಪರಿಸರನಾಶದ ಕೂಗನ್ನು ಬದಿಗಿರಿಸಿ ಯೋಜನೆ ಶುರು ಮಾಡಲಾಗಿದೆ. ೨೪.೦೧ ಟಿಎಂಸಿಯಲ್ಲಿ ೧೪ ಟಿಎಂಸಿ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳವರೆಗೆ ಬಳಕೆಯಾದರೆ, ೧೦ ಟಿಎಂಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪಾಲು.

ನೀರನ್ನು ಪಂಪಿAಗ್ ಮತ್ತು ಗುರುತ್ವಗಳೆರಡನ್ನೂ ಬಳಸಿ ಸಾಗಿಸಿ, ಕೋಳಾಲ ಸಮೀಪ ಬೈರಗೊಂಡ್ಲು ಬಳಿ ಎರಡು ಟಿಎಂಸಿ ಸಂಗ್ರಹ ಸಾಮರ್ಥ್ಯವುಳ್ಳ ಬ್ಯಾಲೆನ್ಸಿಂಗ್ ರಿಸವಾರ್ಯರ್ ಅರ್ಥಾತ್ ದೊಡ್ಡ ಕೆರೆ ನಿರ್ಮಿಸಿ ಅಲ್ಲಿ ನೀರು ಸಂಗ್ರಹಿಸಿ, ಅಲ್ಲಿಂದ ಕೋಲಾರ ಮತ್ತು

ಮಂಗಳವಾರ ಅಸೆಂಬ್ಲಿಯಲ್ಲಿ ಪರಮೇಶ್ವರ ಮತ್ತು ಮಾಧುಸ್ವಾಮಿ ನಡುವೆ ಬಬ್ರುವಾಹನ ಸಿನಿಮಾದ “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ...” ಎಂಬAತ ವಾಗ್ವಾದಕ್ಕೆ ಕಾರಣವಾಗಿರುವುದೂ ಇದೇ ಬೈರಗೊಂಡ್ಲು ಜಲಾಶಯವೇ. ಈ ಜಲಾಶಯಕ್ಕೆ ಕೊರಟಗೆರೆ ತಾಲೂಕಿನ ೨೬೮೧ ಎಕರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ೨೭೯೭ ಎಕರೆ ಭೂಮಿ ಸ್ವಾಧೀನ ಆಗಬೇಕು. ದೊಡ್ಡಬಳ್ಳಾಪುರ ಈಗಾಗಲೇ ಕೈಗಾರಿಕಾ ತಾಲೂಕು ಮತ್ತು ಬೆಂಗಳೂರು ಮಹಾನಗರದ ನೆರಳಲ್ಲಿರುವ ಕಾರಣ ಅಲ್ಲಿ ಎಕರೆಗೆ ಎಂಟು ಲಕ್ಷ ರೂ ಧಾರಣೆ ಮತ್ತು ಕೊರಟಗೆರೆಯಲ್ಲಿ ಕೇವಲ ಎರಡು ಲಕ್ಷ ರೂ. ಎನ್ನುವ ಲೆಕ್ಕಾಚಾರ ಮಾಡಿ, ೨೦೧೩ರ ಭೂಸ್ವಾಧೀನ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ರೀತಿಯಲ್ಲಿ ತಲಾ ನಾಲ್ಕು ಪಟ್ಟು ಹೆಚ್ಚುವರಿ ಪರಿಹಾರ ನೀಡುವ ಪ್ರಸ್ತಾವನೆಯನ್ನು ಇಲಾಖೆ ರೈತರ ಮುಂದಿಟ್ಟಿದೆ. ಆದರೆ ಕೊರಟಗೆರೆ ರೈತರು ಈ ಅಲ್ಪಮೊತ್ತ ಪಡೆಯಲು ತಯಾರಿಲ್ಲ. ಅಲ್ಲಿನ ಶಾಸಕರಾಗಿರುವ ಪರಮೇಶ್ವರ ಅವರ ನಿಲುವೂ ಅದೇ ಆಗಿದೆ. ಅವರು ಇತ್ತೀಚೆಗೆ ಕ್ಷೇತ್ರದಲ್ಲಿ ಭಾಗವಹಿಸುವ ಎಲ್ಲ ವೇದಿಕೆಗಳಲ್ಲೂ ಈ ಅಂಶವನ್ನೇ ಎತ್ತಿ ಹಿಡಿಯುತ್ತ ಬಂದಿದ್ದು, ಮಂಗಳವಾರ ವಿಧಾನ ಸಭೆಯಲ್ಲೂ ಈ ಕುರಿತ ಪ್ರಶ್ನೆಯನ್ನೇ ಕೇಳಿದ್ದರು.

ಸರ್ಕಾರದ ಪರ ಜಲಸಂಪನ್ಮೂಲ ಸಚಿವರಿಗೆ ಉತ್ತರ ನೀಡಲು ಅವಕಾಶವೇ ದೊರಕಲಿಲ್ಲ. ಪ್ರಶ್ನೆಗೆ ಸಚಿವರು ಉತ್ತರ ನೀಡುವ ಮೊದಲು ಪರಮೇಶ್ವರ ಅವರು ದೀರ್ಘ ಪ್ರಸ್ತಾವನೆ ಮಾಡತೊಡಗಿದ್ದನ್ನು ಕಂಡು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾನೂನು ಸಚಿವ ಮಾಧುಸ್ವಾಮಿ ಅವರು ಎದ್ದು ನಿಂತು ವಿವರಣೆ ಕೊಟ್ಟುಬಿಟ್ಟರು. ಯೋಜನೆ ಕುರಿತ ತಮ್ಮ ಸರ್ಕಾರದ ಕಾಳಜಿ, ಕಳಕಳಿಯನ್ನು ಪ್ರಶ್ನಿಸಬೇಡಿ, ನಿಮ್ಮ ಅವಧಿಯಲ್ಲೇ ಕೊಟ್ಟು ಮುಗಿಸಬಹುದಿತ್ತಲ್ಲ ಎನ್ನುವುದು ಅವರ ವಾದವಾಗಿತ್ತು.

ಯೋಜನಾ ಮೊತ್ತವನ್ನು ೧೩ ಸಾವಿರದಿಂದ ೨೪ ಸಾವಿರ ಕೋಟಿಗೆ ತೆಗೆದುಕೊಂಡು ಹೋಗಿದ್ದೀರಿ, ಅದರಲ್ಲಿ ರೈತರು ಕೇಳುತ್ತಿರುವ ಪರಿಹಾರದ ಮೊತ್ತ ಕೇವಲ ೩೧೯ ಕೋಟಿ ರೂ.ಯಾಕೆ ಕೊಡಲ್ಲ ಅಂತ ಪರಮೇಶ್ವರ ಅವರ ಪ್ರತಿಪಾದನೆಯಾಗಿತ್ತು.

ಕಡೆಗೆ ,ಕಟ್ಟ ಕಡೆಗೆ ಈ ಮೊದಲು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ, ಹಣಕಾಸು ಇಲಾಖೆಯನ್ನೂ ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎದ್ದು, ಇಡೀ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊAಡು ಯೋಜನೆಯನ್ನು ಪೂರ್ಣಗೊಳಿಸುವ ಭರವಸೆ ನೀಡಿ ಸನ್ನಿವೇಶವನ್ನು ತಣಿಸಿದರು. ಎತ್ತಿನ ಹೊಳೆ ಎತ್ತ ಸಾಗಿದೆ ಎನ್ನುವ ಸಂಕ್ಷಿಪ್ತ ಮಾಹಿತಿ ಈಗ ನಿಮಗೆ ಸಿಕ್ಕಿರಬಹುದು ಅಲ್ವಾ.