ಜೀವ ಸೃಷ್ಟಿ ಯಾಕಾಯಿತೋ.., kuchangiprasanna
ಜೀವ ಸೃಷ್ಟಿ ಯಾಕಾಯಿತೋ.., kuchangiprasanna
ಜೀವ ಸೃಷ್ಟಿ ಯಾಕಾಯಿತೋ..,
kuchangiprasanna
ಈ ಭೂಮಿ ಯಾಕಾಗಿ ಸೃಷ್ಟಿಯಾಗಿದೆಯೋ ಗೊತ್ತಿಲ್ಲ, ಸದ್ಯಕ್ಕಂತೂ ಮನುಷ್ಯ ಪ್ರಾಣಿಯ ಕೈವಶದಲ್ಲಿ ನರಳುತ್ತಿದೆ. ತನ್ನೊಡಲಾಳದಲ್ಲಿ ಕೊತ ಕೊತ ಕುದಿಯುತ್ತಿರುವ ದ್ರವರೂಪಿ ಲಾವಾರಸ, ಮತ್ತದನ್ನು ಆವರಿಸಿರುವ ಕಲ್ಲು,ಮಣ್ಣು, ನೀರು, ಗಾಳಿಯ ಆವರಣವು ಬರಿಗಣ್ಣಿಗೆ ಕಾಣದ ಕೊರೊನಾ ವೈರಸ್ ಸೇರಿದಂತೆ ಕೋಟಿಗಟ್ಟಲೆ ಸಣ್ಣ, ಅತಿ ಸಣ್ಣ, ದೊಡ್ಡ, ಅತಿ ದೊಡ್ಡ ಮತ್ತು ಬೃಹತ್ ಗಾತ್ರದ ಜೀವಿಗಳನ್ನು, ಅಗಣಿತ ಸಸ್ಯ ಸಂಕುಲವನ್ನು ನೆಲದ ಮೇಲೆ, ನೆಲದೊಳಗೆ, ನೀರಿನ ಮೇಲೆ, ನೀರಿನ ಒಳಗೂ ಅಲ್ಲದೇ ಮೊರೆಯುವ ವಾಯುವಿನಲ್ಲೂ ಪೊರೆಯುತ್ತಿರುವುದಾದರೂ ಯಾರಿಗಾಗಿ,
ಯಾರು ಎಲ್ಲಿಂದಲೋ ಬೀಸಿ ಒಗೆದ ಬೃಹತ್ ಗಾತ್ರದ ಚೆಂಡು ಎಂಬAತೆ ಇದು ಸದಾ ನಿಂತಲ್ಲಿ ನಿಲ್ಲದೆ ತನ್ನ ಸುತ್ತ ಭ್ರಮಿಸುತ್ತಲೇ ಸರ‍್ಯನನ್ನು ಪರಿಭ್ರಮಿಸುತ್ತಿರುವುದಾದರೂ ಏತಕ್ಕಾಗಿ. ಈ ಭೂಮಿಯಂಥ ಏಳೆಂಟು ಗ್ರಹಗಳು, ಅವುಗಳ ಒಂದಷ್ಟು ಉಪಗ್ರಹಗಳು ನಿಂತಲ್ಲಿ ನಿಲ್ಲದೇ ಸರ‍್ಯನನ್ನು ಸುತ್ತುವಂತೆ ಮಾಡಿರುವುದಾದರೂ ಯಾರು ಮತ್ತು ಏತಕ್ಕಾಗಿ?
ಅಲ್ಲಾ, ಇಂತದ್ದೊಂದು ಭೂಮಿಯ ಮೇಲೆ ಹಗಲು ಇರುಳುಗಳನ್ನು ಸೃಷ್ಟಿಸುವ ಸಲುವಾಗಿಯೇ ಸದಾ ಉರಿಯುತ್ತಲೇ ಇರುವ ಹೀಗೆ ಉರಿದು ಮುಂದೆಂದೋ ಒಂದು ದಿನ ಅಡಿಗೆ ಮನೆಯ ಗ್ಯಾಸ್ ಸಿಲಿಂಡರ್‌ನಂತೆ ಖಾಲಿ ಅಗಿಬಿಡಬಹುದಾದ ಸರ‍್ಯನನ್ನು ಕಕ್ಷೆಯಲ್ಲಿ ತಂದು ಬಿಡಲಾಗಿದೆ ಎನ್ನುತ್ತೀರಾ?
ಸರಿಯಪ್ಪ, ರಾತ್ರಿ ಹೊತ್ತು ಆಕಾಶದ ತುಂಬೆಲ್ಲ ಹರಡಿಕೊಂಡಿರುವ ಅಗಣಿತ ನಕ್ಷತ್ರಗಳೆಲ್ಲ ಇಂತಾ ಸರ‍್ಯಗಳೇ ಎನ್ನುತ್ತೀರಲ್ಲ, ಒಂದು ಸರ‍್ಯನಿಗೆ ಹತ್ತಾರು ಗ್ರಹಗಳು, ಉಪಗ್ರಹಗಳು ಹಾಗೂ ಅವುಗಳಲ್ಲಿ ಒಂದು ಗ್ರಹದಲ್ಲಿ ಗಾಳಿ,ನೀರು, ಜೀವಿಗಳಿವೆಯಲ್ಲ, ಹಾಗಾದರೆ ಆಕಾಶದಲ್ಲಿ ಕಾಣುವ ಈ ಅಗಣಿತ ಅಸಂಖ್ಯಾತ ನಕ್ಷತ್ರಗಳ ಸುತ್ತಲೂ ಇನ್ನು ಅದೆಷ್ಟೊಂದು ಗ್ರಹಗಳು, ಉಪಗ್ರಹಗಳು ಮತ್ತು ಅವುಗಳಲ್ಲಿ ಯಾವುದಾದರೂ ಒಂದೋ ಎರಡೋ ಗ್ರಹಗಳಲ್ಲಿ ಇಲ್ಲಿ ಈ ಭೂಮಿಯ ಮೇಲೇ ಇರುವಂತೆ ಜೀವಿಗಳೂ ಇರಬಹುದಲ್ಲವೇ? ಇಲ್ಲಾ ಅಂತ ಹೇಳಿದವರು ಯಾರು, ನಮಗೆ ಗೊತ್ತಿಲ್ಲ ಅಷ್ಟೇ ಅನ್ನುತ್ತೀರಾ ಅಲ್ವಾ.
ಇಂಥ ಪ್ರಶ್ನೆಗಳು ನನ್ನೊಬ್ಬನಲ್ಲಿ ಮಾತ್ರವಲ್ಲ ಬಹುಪಾಲು ಎಲ್ಲರೊಳಗೂ ಆಗಾಗ ಹುಟ್ಟಿ ಸಾಯುತ್ತಲೇ ಇರುತ್ತವೆ. ಆಧುನಿಕ ವಿಜ್ಞಾನದ ಸಂಶೋಧನೆ, ಪರಿಶೋಧನೆಗಳು ಈ ವಿಶ್ವದ ಯಾವುದೇ ಪ್ರಶ್ನೆಗಳಿಗೆ ಹೇಗೆ ಎಂಬ ಸಂಗತಿಗೆ ಸಮಾಧಾನ ನೀಡಬಲ್ಲ ಉತ್ತರಗಳನ್ನು ನೀಡಿವೆಯಾದರೂ ಯಾಕೆ ಎಂಬ ಪ್ರಶ್ನೆ ಎತ್ತುತ್ತಲೇ ಸುಮ್ಮನಾಗಿ ತಲೆಕೆರೆದುಕೊಳ್ಳತೊಡಗುತ್ತವೆ.
ಒಂದು ಜೀವಿಯ ಸೃಷ್ಟಿ ಹೇಗೆ ಎಂಬುದನ್ನು ಏಕಕೋಶ ಜೀವಿಗಳಿಂದ ಹಿಡಿದು ಮನುಷ್ಯನವರೆಗೆ ಸವಿವರವಾಗಿ ಅಣುಅಣುವಾಗಿ ವಿಶ್ಲೇಷಿಸಿ, ಲೋಡುಗಟ್ಟಲೆ ಮಾಹಿತಿಯನ್ನು ದಾಖಲಿಸಿ ಇಡಲಾಗಿದೆ. ಆದರೆ ಈ ಯಾವ ಮಾಹಿತಿಯೂ ಈ ಜೀವಿಯ ಸೃಷ್ಟಿ ಆದದ್ದಾದರೂ ಏಕೆ ಎಂಬ ಮುಗ್ದ ಮಗುವಿನ ಪ್ರಶ್ನೆಗೆ ಉತ್ತರ ನೀಡಲಾಗಿಲ್ಲ.
ಪೂರ್ಣ ಚಂದ್ರ ತೇಜಸ್ವಿ ಅವರು ಮಂಡಿಸಿದ್ದ ಸಂಶೋಧನಾ ಪ್ರಬಂಧ “ ವ್ಯಕ್ತಿ, ವಿಶಿಷ್ಟವಾದಿ ಸಿದ್ಧಾಂತ”ದ ಪ್ರತಿಯನ್ನು ವರ್ಷಗಳ ಹಿಂದೆ ಓದಿದ್ದ ನೆನಪು. ಆ ಪ್ರಬಂಧದಲ್ಲಿ ತೇಜಸ್ವಿ ಅಮೀಬಾ ಎಂಬ ಬರಿಗಣ್ಣಿಗೆ ಕಾಣದ, ನೀರಿನಲ್ಲಿರುವ ಆಕಾರ ರಹಿತ ಏಕ ಕೋಶ ಜೀವಿಯ ಕುರಿತು ವ್ಯಾಖ್ಯಾನಿಸಿದ್ದಾರೆ. ಈ ಅಮೀಬಾ ಸಂತಾನೋತ್ಪತ್ತಿ ಬಹಳ ಸರಳ, ಅದರೊಳಗಿನ ಏಕ ಕೋಶವು ಎರಡಾಗುತ್ತಲೇ ಅದನ್ನು ಆವರಿಸಿಕೊಂಡ ಆಕಾರ ರಹಿತ ದೇಹವೂ ಎರಡಾಗಿ ವಿಭಾಗವಾಗುತ್ತದೆ. ಇದನ್ನು ಕೋಶ ವಿಭಜನೆ ಎನ್ನಬಹುದು. ಈಗ ನೋಡ ನೋಡುತ್ತಲೇ ಎರಡು ಅಮೀಬಾಗಳು ಸೃಷ್ಟಿಯಾಗಿಬಿಟ್ಟವು. ಈ ಎರಡು ಅಮೀಬಾಗಳಲ್ಲಿ ತಾಯಿ ಯಾರು, ಮಗು ಯಾರು ಹೇಳಿ ನೋಡೋಣ ಎನ್ನುತ್ತಾರೆ. ಅಷ್ಟೇ ಅಲ್ಲದೇ ಇಲ್ಲಿ ಕೇವಲ ಸೃಷ್ಟಿಕ್ರಿಯೆ ನಡೆಯುತ್ತಿದೆಯೇ ಹೊರತು ಸಾವೆಂಬುದು ಇಲ್ಲವೇ ಇಲ್ಲವಲ್ಲ ಎಂದೆನಿಸಿಬಿಡುತ್ತದೆ. ಹೀಗೆ ಜೀವ ಸೃಷ್ಟಿಯ ಆರಂಭದಲ್ಲಿ ಸಾವಿನ ಪರಿಕಲ್ಪನೆ ಇರಲಿಲ್ಲವೇ ಎಂಬ ಪ್ರಶ್ನೆಯನ್ನೂ ಈ ವಿವರಣೆ ಹುಟ್ಟುಹಾಕುತ್ತದೆ. ಇಂಥ ಹಲವು ವಿಸ್ಮಯಗಳನ್ನು ತೇಜಸ್ವಿ ಅವರ ಜೀವನವಿಡೀ ನಮಗೆ ಸೃಜಿಸಿಕೊಟ್ಟರು.
ಉಡುವ, ಉಣ್ಣುವ ದರದಿನಲ್ಲೇ ಜೀವನವೆಂಬುದು ಕರ್ಪೂರದಂತೆ ಉರಿದು, ಉರಿದ ಪದಾರ್ಥದ ಕುರುಹೂ ಇಲ್ಲದಂತಾಗಿಬಿಡುವ ಈ ಕೊರೊನಾ ಬಿಕ್ಕಟ್ಟಿನ ದಿನಗಳಲ್ಲಿ ಹೀಗೆ ಇಡೀ ಸೃಷ್ಟಿ ಆದದ್ದಾರೂ ಯಾತಕ್ಕಾಗಿ, ಯಾರಿಗಾಗಿ, ಯಾರಿಂದ ಎಂದೆಲ್ಲ ಜಿಜ್ಞಾಸೆ ಮಾಡುತ್ತ ಕೂರಲು ಯಾರಿಗೆ ತಾನೇ ಪುರಸೊತ್ತಿದೆ ಎನ್ನಬೇಡಿ.
ನಾವು ಉಸಿರಾಡುವ ಗಾಳಿಯನ್ನೇ ತೆಗೆದುಕೊಳ್ಳಿ, ನಾವು ಮನುಷ್ಯರು ಮತ್ತು ನಮ್ಮಂಥ ಇತರ ಪ್ರಾಣಿಗಳು ಆಕ್ಸಿಜೆನ್ ಅಥವಾ ಅಮ್ಲಜನಕವನ್ನು ನಮ್ಮಮೂಗಿನಿಂದ ಶ್ವಾಸಕೋಶದ ಒಳಕ್ಕೆ ಎಳೆದುಕೊಂಡು, ಅಷ್ಟೇ ಪ್ರಮಾಣದ ಕಾರ್ಬನ್ ಡೈ ಆಕ್ಸೆಐಡ್ ಅಥವಾ ಇಂಗಾಲವನ್ನು ಹೊರಬಿಡುತ್ತೇವೆ. ಈ ಸಸ್ಯಗಳು ಮತ್ತು ಮರಗಳ ಎಲೆಗಳೋ ನಾವು ಹೊರಸೂಸುವ ಇಂಗಾಲವನ್ನು ಕುಡಿದು, ನಮಗೆ ಬೇಕಿರುವ ಆಮ್ಲಜನಕವನ್ನು ಹೊರಹಾಕುತ್ತವೆ. ನಮ್ಮ ಪುಪ್ಪುಸಗಳ ಒಳಗೆ ಸಾಗುವ ಗಾಳಿಯಲ್ಲಿ ಸೇರಿರುವ ಆಮ್ಲಜನಕವನ್ನು ರಕ್ತದ ಕಣಗಳು ಹೀರಿಕೊಳ್ಳುತ್ತವೆ ಅಂತ ವೈದ್ಯ ವಿಜ್ಞಾನ ವಿವರಿಸುತ್ತದೆ. ಒಂದೊಮ್ಮೆ ಅಪಘಾತದಲ್ಲಿ ಗಾಯಗೊಳ್ಳುವ ನಮ್ಮ ಮೆದುಳು ನಿಷ್ಕಿçಯವಾದರೂ ನಾವು ಬದುಕಿರುತ್ತೇವೆ, ಅದನ್ನು ಬ್ರೇನ್ ಡೆಡ್ ಅಥವಾ ಕೋಮಾ ಎನ್ನುತ್ತಾರೆ. ಆದರೆ ನಮ್ಮ ಉಸಿರು ನಿಂತ ಮರುಗಳಿಗೆಯೇ ಜೀವಿಗಳಾದ ನಮ್ಮನ್ನು ಸತ್ತರು ಅಂತ ಘೋಷಿಸಿಬಿಡುತ್ತಾರೆ.
ಇನ್ನೂ ಮಹತ್ವದ ಸಂಗತಿ ಏನೆಂದರೆ, ಕಾರ್ಬನ್, ನೈಟ್ರೊಜೆನ್, ಹೈಡ್ರೊಜೆನ್ ಹಾಗೂ ಆಕ್ಸಿಜೆನ್‌ಗಳೆಂಬ ನಾಲ್ಕು ಬರಿಗಣ್ಣಿಗೆ ಕಾಣದ ಅಣುಗಳ ಸಂಯೋಜನೆಯಿAದಲೇ ಈ ಭೂಮಿಯ ಮೇಲಿನ ಮತ್ತು ಇಡೀ ಅಂತರಿಕ್ಷ ಮತ್ತು ವಿಶ್ವದ ಎಲ್ಲ ಪದಾರ್ಥಗಳು ಮತ್ತು ಜೀವಿಗಳು ಸೃಷ್ಟಿಯಾಗಿವೆ ಎಂದು ಪರಿಶೋಧಿಸಲಾಗಿದೆ ನೋಡಿ.
ಚಾರ್ಲ್ಸ್ ಡಾರ್ವಿನ್‌ನ 1859ರ ಜೀವಿಗಳ ಉಗಮ ಕೃತಿ ಮತ್ತು ವಿಕಾಸವಾದವು ಭೂಮಿಯ ಮೇಲೆ ಜೀವಿಯ ಸೃಷ್ಟಿ ಹೇಗಾಯಿತು ಎಂಬುದರ ಕುರಿತು ತುಸು ಸಮಾಧಾನ ಕೊಡುತ್ತದೆಯಾದರೂ ನಿಜವಾಗಿಯೂ ಜೀವಿಗಳ ಉಗಮ ಹೇಗಾಯಿತು ಎಂಬುದನ್ನು ಖರಾರುವಕ್ಕಾಗಿ ವಿವರಿಸಲು ಅದಕ್ಕೆ ಸಾಧ್ಯವಾಗಿಲ್ಲ. ಇದು ಇಂದಿಗೂ ಒಂದು ಬಿಡಿಸಲಾಗದ ಒಗಟೇ ಆಗಿ ಉಳಿದಿದೆ. ಆದರೆ ಈ ಮನುಷ್ಯರು, ಈ ಭೂಮಿಯ ವಿವಿಧ ದೇಶ ಮತ್ತು ಪ್ರದೇಶಗಳಲ್ಲಿ ಅವರವರ ಭಾವನೆ ಮತ್ತು ಕಲ್ಪನೆಗಳಿಗೆ ಅನುಗುಣವಾಗಿ ಸೃಷ್ಟಿಕರ್ತನನ್ನು ಸೃಷ್ಟಿಸಿಬಿಟ್ಟಿದ್ದಾರೆ. ಇಂದ್ರ ಲೋಕ, ಸ್ವರ್ಗ, ನರಕ, ಪಾತಾಳಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ, ನೂರಾರು ವರ್ಷಗಳಲ್ಲಿ ಅದೇ ನಿಜ ಎಂದು ಪೀಳಿಗೆಗಳನ್ನು ನಂಬಿಸಿಬಿಟ್ಟಿದ್ದಾರೆ.
ಬ್ಲೂ ಗ್ರೀನ್ ಆಲ್ಗೇ ಎಂಬ ಸ್ಟೊçಮಾಟೋ ಬ್ಯಾಕ್ಟೀರಿಯಾಗಳು ಈ ಭೂಮಿಯ ಮೇಲೆ ಕಂಡು ಬಂದಿರುವ ಮತ್ತು ಹಾಲಿ ನಮಗೆ ತಿಳಿದಿರುವ ಅತ್ಯಂತ ಪುರಾತನ ಜೀವಿಯಾಗಿದೆ. ಈ ಬ್ಯಾಕ್ಟೀರಿಯಾಗಳ ಕಾಲವನ್ನು ಮೂರೂವರೆ ಬಿಲಿಯನ್ ವರ್ಷ (ಒಂದು ಬಿಲಿಯನ್ ಅಂದರೆ ನಮ್ಮ ಲೆಕ್ಕದಲ್ಲಿ 100ಕೋಟಿ) ಎಂದು ಲೆಕ್ಕ ಹಾಕಲಾಗಿದೆ.
ಎಲ್ಲ ವಿಜ್ಞಾನಿಗಳೂ ಕೇವಲ ಸೃಷ್ಟಿ ಹೇಗಾಯಿತು ಎನ್ನುವುದನ್ನು ಹೇಳುತ್ತಿದ್ದರೆ ಫಿನ್ಲೆಂಡ್ ದೇಶದ ಹೆಲ್ಸಿಂಕಿ ವಿವಿಯ ವಿಜ್ಞಾನಿ ರ‍್ಟೊ ಅನ್ನಿಲಾ ಮತ್ತು ಅವರ ಮಗ ಅಲ್ಲಿನ ಅರಣ್ಯ ಸಂಶೋಧನಾ ಸಂಸ್ಥೆಯ ಸಂಶೋಧಕ ರ‍್ಕಿ ಅನ್ನಿಲಾ “ ಜೀವ ಏಕೆ ಸೃಷ್ಟಿಯಾಯಿತು ಮತ್ತು ಏಕೆ ಮುಂದುವರೆದಿದೆ ” ಎಂಬ ಕುರಿತು ಸಂಶೋಧನೆ ನಡೆಸಿ ಒಳನೋಟಗಳನ್ನು ನೀಡಿದ್ದಾರೆ.
ವಿಜ್ಞಾನದ ಅಧ್ಯಯನ ವಿಧಾನದಲ್ಲಿ ಥರ್ಮೊ ಡೈನಾಮಿಕ್ಸ್ ಎಂಬ ವಿಭಾಗವೊಂದಿದೆ. ಇದು ಉಷ್ಣತೆಯ ಆಯಾಮಗಳನ್ನು ಅರ್ಥ ಮಾಡಿಕೊಳ್ಳುವ ಅಧ್ಯಯನ ಶಿಸ್ತು. ಎಲ್ಲ ಜೀವಿಗಳೂ ನಾಲ್ಕು ಅಣುಗಳ ಸಂಯೋಜನೆಯಿಂದಲೇ ಸೃಷ್ಟಿಯಾಗಿವೆ ಎಂದು ಮೇಲೆ ಹೇಳಿರುವಂತೆಯೇ, ಭೂಮಿಯ ಮೇಲಿನ ತೀರಾ ಬಿಸಿಯಾಗಿರುವ ಪದಾರ್ಥವೊಂದು ತಣ್ಣಗಾಗುವ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಸರ‍್ಯನ ಉಷ್ಣತೆಯ ಪರಿಣಾಮವೂ ಸೇರಿ ವಿವಿಧ ಜೀವಿಗಳ ಸೃಷ್ಟಿಯನ್ನು ಸಾಧ್ಯವಾಗಿಸಿದೆ. ಚಲಿಸುವ ಮತ್ತು ಚಲನೆ ಇಲ್ಲದೆ ಜೀವಿಗಳು ಭಿನ್ನವೇನೂ ಅಲ್ಲ ಎನ್ನುತ್ತಾರೆ ಅವರು.
ಎಲ್ಲ ಜೀವಿಗಳಲ್ಲೂ ಅವುಗಳಲ್ಲಿನ ಜೀವಕೋಶದ ಪ್ರಮಾಣ ಮತ್ತು ಸಂಯೋಜನೆಗೆ ಅನುಗುಣವಾಗಿ ಶಕ್ತಿ ಸಂಚಯವಾಗಿರುತ್ತದೆ ಮತ್ತು ಈ ಶಕ್ತಿಯ ಬಳಕೆ ಹಾಗೂ ವಿಸರ್ಜನೆ ಪ್ರಕ್ರಿಯೆ ಸದಾ ನಡೆಯುತ್ತಲೇ ಇರುತ್ತದೆ. ಹಾಗಾಗಿ ಇಡೀ ಭೂಮಿಯ ಮೇಲೆ ಜೀವ ಸೃಷ್ಟಿಯಾದದ್ದು ಏಕೆ ಅಥವಾ ಜೀವ ಸೃಷ್ಟಿಯಾದ ಉದ್ದೇಶವೇ ಈ ಶಕ್ತಿಯ ಅನಿಯಮಿತ ಬಳಕೆ ಎಂದು ಹೇಳುತ್ತಾರೆ ಈ ವಿಜ್ಞಾನಿ. ಜೀವಿಗಳ ಸೃಷ್ಟಿ ಮಾತ್ರವಲ್ಲ ಅವುಗಳ ಮುಂದುವರಿಕೆಗೂ ಇದೇ ಪ್ರಕ್ರಿಯೆ ಕಾರಣ ಎನ್ನುತ್ತಾರೆ ಅನ್ನಿಲಾ.
ಇಷ್ಟೆಲ್ಲ ವಿವರಣೆ ನೀಡುವ ಅವರು, “ಜೀವ ಸೃಷ್ಟಿ ಮೊಟ್ಟ ಮೊದಲು ಎಲ್ಲಿ ಆಯಿತು, ಯಾವಾಗ ಆಯಿತು, ಹೇಗೆ ಆಯಿತು, ಏಕೆ ಆಯಿತು ಎನ್ನುವುದನ್ನೆಲ್ಲ ಪತ್ತೆ ಹಚ್ಚುವ ಕೆಲಸವೇ ತೀರಾ “ಕೆಲಸಕ್ಕೆ ಬಾರದ ಕೆಲಸ” ಎಂದು ಕೈ ಚೆಲ್ಲುತ್ತಾರೆ. ಜೀವ ಸೃಷ್ಟಿ ಕಾಲಾನುಕ್ರಮದಲ್ಲಿ ಎಲ್ಲೋ ಯಾವಾಗಲೋ ಆಗಿಬಿಡುವ, ಆಗುವ ಅತ್ಯಂತ ಪ್ರಕೃತಿದತ್ತವಾದ ಪ್ರಕ್ರಿಯೆ, ಥರ್ಮೊ ಡೈನಮಿಕ್ಸ್ನ ಎರಡನೇ ನಿಯಮದ ಪ್ರಕಾರ ಜೀವ ಸೃಷ್ಟಿಗೆ ನಿರ್ದಿಷ್ಟ ಆರಂಭ ಎನ್ನುವುದಿಲ್ಲ, ಜೀವ ಹೇಗೆ ಸೃಷ್ಟಿಯಾಯಿತು ಎಂಬ ಪ್ರಶ್ನೆಯನ್ನು ಕೇಳುವುದು, ಆ ಪುಟ್ಟ ಕೊಳದ ಮೇಲೆ ಗಾಳಿ ಮೊದಲ ಸಲ ಬೀಸಿದ್ದು ಯಾವಾಗ? ಎಂಬ ಪ್ರಶ್ನೆಗೆ ಸಮಾನವಾದದ್ದು ಎಂದು ಹೇಳಿಬಿಡುತ್ತಾರೆ ಅನ್ನಿಲಾ.
ಹೆಚ್ಚಿನ ಮಾಹಿತಿಗೆ (Annila, Arto and Annila, Erkki. “Why did life emerge?” International Journal of Astrobiology 7 (3 & 4 ): 293-300 (2008). ) ಓದಿಕೊಳ್ಳಿ
ಗ್ರೀಕರು ಬಹಳ ಹಿಂದೆ ಈ ವಿಶ್ವದಲ್ಲಿರುವ ಎಲ್ಲ ಪದಾರ್ಥ ಸ್ಥಿರವಾಗಿವೆ ಎಂದು ಪ್ರತಿಪಾದಿಸಿದ್ದರು. ದಹನ ನಡೆಯಲು ಆಮ್ಲಜನಕ ಬೇಕೇ ಬೇಕು ಎಂದು ಪತ್ತೆ ಹಚ್ಚಿದ, 1778ರಲ್ಲಿ ಆಕ್ಸಿಜನ್ ಮತ್ತು 1783ರಲ್ಲಿ ಹೈಡ್ರೋಜನ್ ಅನ್ನು ಪರಿಶೋಧಿಸಿ ನಾಮಕಾರಣ ಮಾಡಿದ ಫ್ರಾನ್ಸ್ನ ಆಂಟೋನಿ ಲವೋಸೀಯರ್ ಎಂಬ ಭೌತವಿಜ್ಞಾನಿ ಮುಂದೆ 1789ರಲ್ಲಿ ಭೌತ ಶಾಸ್ತçದ ಪದಾರ್ಥ ಸಂರಕ್ಷಣೆಯ ತತ್ವಗಳನ್ನು (“ಲಾ ಆಫ್ ಕನ್ಸರ್ವೇಶನ್ ಆಫ್ ಮಾಸ್”) ವಿವರಿಸುತ್ತಾ, ಪದಾರ್ಥವೊಂದನ್ನು ಯಾವ ಸ್ಥಿತಿಗೆ ಮಾರ್ಪಡಿಸಿದರೂ ಅದರ ದ್ರವ್ಯರಾಶಿ ಸ್ಥಿರವಾಗೇ ಇರುತ್ತದೆ ಅಂದರೆ, “ಪದಾರ್ಥವನ್ನು ಸೃಷ್ಟಿಸಲಾಗುವುದಿಲ್ಲ ಮತ್ತು ನಾಶ ಮಾಡಲಾಗುವುದಿಲ್ಲ” ಎಂದು ಪ್ರತಿಪಾದಿಸುತ್ತಾನೆ.
ಪದಾರ್ಥದ ಅಸ್ತಿತ್ವ ಕುರಿತಂತೆ ಈ ಆಧುನಿಕ ವಿಜ್ಞಾನಿಗಳಿಗೂ ಮೊದಲು ಭಾರತೀಯ ನೆಲದಲ್ಲಿ ಆರನೇ ಶತಮಾನಕ್ಕೆ ಪೂರ್ವದಲ್ಲಿ ಮತ್ತು ಏಳನೇ ಶತಮಾನದಲ್ಲಿ ಎರಡು ವಿಭಿನ್ನ ಸಿದ್ಧಾಂತಗಳನ್ನು ಬೌದ್ಧರು ಮಂಡಿಸಿದ್ದರು. ಸರ್ವಾಸ್ತಿವಾದ-ವೈಭಾಷಿಕರು ಮತ್ತು ಸೌತ್ರಾಂತಿಕರು ಮೊದಲ ಬೌದ್ಧ ಅಣುವಾದಿ ತತ್ವದಲ್ಲಿ ಪದಾರ್ಥಗಳಿಗೆ ಅನುಗುಣವಾಗಿ ನಾಲ್ಕು ವಿಧದ ಅಣುಗಳಿವೆ, ಈ ಪದಾರ್ಥಗಳಿಗೆ ಚಲನೆಯೂ ಸೇರಿದಂತೆ ನಿರ್ದಿಷ್ಟ ಗುಣಗಳಿವೆ ಮತ್ತು ಸದಾ ಚಲನೆಯಲ್ಲಿರುವ ಇದ್ಯಾವುದೂ ಶಾಶ್ವತವಲ್ಲ ಎಂದು ತರ್ಕಬದ್ಧವಾಗಿ ವಿವರಿಸಿದ್ದರು.
ಆದರೆ ಏಳನೇ ಶತಮಾನದಲ್ಲಿ ಧರ್ಮಕೀರ್ತಿ ಮತ್ತು ದಿಗ್ನಾಗ ಎಂಬುವವರು ಮೊದಲಿನವರಿಗಿಂತ ವಿಭಿನ್ನವಾದ ಮತ್ತು ವಿರುದ್ಧವಾದ ಸಿದ್ಧಾಂತ ಮಂಡಿಸಿ, ಅಣುಗಳು ತೀರಾ ಸಣ್ಣಕ್ಕಿವೆ ಮತ್ತು ಶಕ್ತಿ ಸಂಚಯಗೊAಡಿವೆ ಎಂದು ವಿವರಿಸುತ್ತಾರೆ. ಅಂತಿಮವಾಗಿ ಸಾಂಖ್ಯರು ಮತ್ತು ಬೌದ್ಧರು ಅಣುಗಳಿಗೆ ಗುಣ(ಧರ್ಮ)ವಿದೆ ಎಂಬ ಮಾತಿಗೆ ಸಮ್ಮತಿ ನೀಡಿದ್ದರು ಎನ್ನುತ್ತದೆ ಇತಿಹಾಸ. ಇಷ್ಟು ಹೇಳಿದ ಕೂಡಲೇ ಭಾರತದಲ್ಲೇ ಎಲ್ಲ ವಿಜ್ಞಾನ ತಂತ್ರಜ್ಞಾನ ಆಧುನಿಕ ವಿಜ್ಞಾನಕ್ಕೆ ಮೊದಲೇ ಅಸ್ತಿತ್ವದಲ್ಲಿತ್ತು ಎಂದು ವಾದ ಮಾಡುವವರ ಸಂಖ್ಯೆ ಹೆಚ್ಚಾಗಿಬಿಡುತ್ತದೆ. ನೆನಪಿರಲಿ, ಜ್ಞಾನ ಬೇರೆ.ಮೊಂಡು ವಾದ ಬೇರೆ
ಮತ್ತೆ ಇವೆಲ್ಲ ವಿಚಾರಗಳನ್ನು ಅರಿತ ಮೇಲೂ ಇಷ್ಟೊಂದು ಬೃಹತ್ ಆದ ವಿಶ್ವ, ಅಸಂಖ್ಯ ಅಗಣಿತ ನಕ್ಷತ್ರಗಳು, ತಾರಾ ಮಂಡಲಗಳು, ಗ್ರಹ, ಉಪಗ್ರಹಗಳನ್ನು ಕೇವಲ ಕೇವಲ ಈ ಭೂಮಿಯ ಮೇಲಿರುವ ಮತ್ತು ತಾನಿರುವ ಭೂಮಿಯನ್ನೇ ಅಗೆದು, ದೊಗೆದು, ಸ್ಫೋಟಿಸುತ್ತಾ, ಸಿಕ್ಕ ಸಿಕ್ಕದ್ದನ್ನೆಲ್ಲ ಉರಿಸಿ ಆವಿಯಾಗಿಸುತ್ತಾ, ತನ್ನ ಮತ್ತ್ತು ತನ್ನಂತ ಇತರ ಜೀವಗಳಿಗೆ ಅನಿವರ‍್ಯವಾಗಿರುವ ಪ್ರಾಣ ವಾಯು ಮತ್ತು ಜಲವನ್ನು ಎಲ್ಲ ರೀತಿಯಲ್ಲೂ ಕಲುಷಿತಗೊಳಿಸುತ್ತಿರುವ ಮನುಷ್ಯನಿಗಾಗಿಯೇ ಸೃಷ್ಟಿಸಲಾಗಿದೆಯೇ ಎಂಬ ನನ್ನ ಮತ್ತು ಆಗಾಗ ನಿಮ್ಮದೂ ಆಗಿರಬಹುದಾದ ಪ್ರಶ್ನೆಗೆ ಉತ್ತರ ದೊರಕಲೇ ಇಲ್ಲ.