ಅಂಬೇಡ್ಕರ್‌ : ಚಿಂತನೆ-ಆಚರಣೆಗಳ ನಡುವೆ  ಬೌದ್ಧಿಕ ಕಂದರ

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರು ಮುನ್ನಡೆಸುವ ಬೌದ್ಧಿಕ ರಥವನ್ನು ಸಂವಿಧಾನದ ಸಾರಥ್ಯದಲ್ಲಿ ಚಲನೆಯಲ್ಲಿರಿಸಲು, ಮಾರ್ಕ್ಸ್‌, ಗಾಂಧಿ, ಲೋಹಿಯಾ, ಪೆರಿಯಾರ್‌, ಠಾಗೋರ್‌, ವಿವೇಕಾನಂದ ಇನ್ನಿತರ ಸೈದ್ಧಾಂತಿಕ ಆಲೋಚನೆಗಳು ಗಾಲಿಗಳಂತೆ ನೆರವಾಗುತ್ತವೆ. ಈ ಗಾಲಿಗಳನ್ನು ತಾತ್ವಿಕ ಕಾರಣಗಳಿಗಾಗಿ ನಿರಾಕರಿಸಿದಷ್ಟೂ, ರಥದ ಚಲನೆ ನಿಧಾನವಾಗುತ್ತದೆ. ಕೊನೆಗೊಂದು ದಿನ ಸ್ಥಗಿತಗೊಳ್ಳುತ್ತದೆ ಅಥವಾ ಪಲ್ಲಟಗೊಳ್ಳುತ್ತದೆ. ಈ ವಿಶಾಲ ಹಂದರದ  ಆಲೋಚನೆಯೊಂದಿಗೆ ಅಂಬೇಡ್ಕರ್‌ ಪರಿನಿಬ್ಬಾಣ ದಿನವನ್ನು ನಾವು ಆಚರಿಸಬೇಕಿದೆ. ಇಲ್ಲವಾದರೆ ನಾವು ಚರಿತ್ರೆಯನ್ನೇ ಸಂಭ್ರಮಿಸುತ್ತಾ, ಅಂಬೇಡ್ಕರ್‌ ಕಟ್ಟಿದ ಕನಸುಗಳನ್ನು ನಿರ್ಲಕ್ಷಿಸುತ್ತಲೇ ಹೋಗುತ್ತೇವೆ. ಸಂಘಪರಿವಾರ-ಬಲಪಂಥೀಯ ರಾಜಕಾರಣದ ಮಿಥ್ಯೆಗಳು, ಕನಸುಗಳು ಚಿಗುರುತ್ತಾ ಹೆಮ್ಮರವಾಗುತ್ತವೆ.

ಅಂಬೇಡ್ಕರ್‌ : ಚಿಂತನೆ-ಆಚರಣೆಗಳ ನಡುವೆ  ಬೌದ್ಧಿಕ ಕಂದರ

ಸಾಂದರ್ಭಿಕ

 

ನಾ ದಿವಾಕರ

 

 

ಡಾ ಅಂಬೇಡ್ಕರ್‌ ನಮ್ಮಿಂದ ಲೌಕಿಕವಾಗಿ ಅಗಲಿ 70ನೆಯ ವರ್ಷಕ್ಕೆ ಕಾಲಿಡುತ್ತಿದ್ದೇವೆ.     

                     ʼ ಪರಿನಿಬ್ಬಾನ ʼ ದಿನ ಎಂದು ಸಮಸ್ತ ಶೋಷಿತ ಜನತೆ ತನ್ಮಯತೆಯಿಂದ ಆಚರಿಸುವ ಈ ದಿನದಂದು ಬಾಬಾ ಸಾಹೇಬರನ್ನು ಸ್ಮರಿಸುವುದು ಹಾಗೂ ಅವರ ಬೋಧನೆಗಳನ್ನು ಮರು ಚಿಂತನೆಗೆ ಒಳಪಡಿಸುವುದು ಕಳೆದ ಏಳು ದಶಕಗಳ ಒಂದು ಪರಂಪರೆ. ಇದೇ ದಿನದಂದೇ, ಡಿಸೆಂಬರ್‌ 6ರಂದೇ, ಬಾಬ್ರಿ ಮಸೀದಿಯನ್ನು ಕೆಡವುವ ಮೂಲಕ ಭಾರತದ ಬಲಪಂಥೀಯ ಸಾಂಸ್ಕೃತಿಕ ರಾಜಕಾರಣವು ಈ ಚಿಂತನ-ಮಂಥನ ಪ್ರಕ್ರಿಯೆಯಿಂದ ಒಂದು ಬೃಹತ್‌ ಸಂಖ್ಯೆಯ ಸಮಾಜವನ್ನು ದೂರ ಸರಿಸಿರುವುದು ಸ್ವತಂತ್ರ ಭಾರತದ ವಿಡಂಬನೆಯೂ ಹೌದು, ದುರಂತವೂ ಹೌದು. ಕೆಡವುವ ಪ್ರಕ್ರಿಯೆಯಾದರೂ ಈ ದಿನಕ್ಕೆ ʼಶೌರ್ಯದಿನʼ ಎಂಬ ನಾಮವಿಶೇಷವನ್ನು ಅಂಟಿಸುವ ಮೂಲಕ, ಡಾ. ಅಂಬೇಡ್ಕರ್‌ ನಿರ್ವಚಿಸಿದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ತತ್ವಗಳನ್ನು ತಾತ್ವಿಕ ನೆಲೆಯಲ್ಲಿ ದುರ್ಬಲಗೊಳಿಸಿರುವುದು, ಸಮಕಾಲೀನ ಭಾರತದ ಅತಿ ದೊಡ್ಡ ದುರಂತ.

 

     ಡಾ ಅಂಬೇಡ್ಕರ್‌ ಅವರ ಅಕಾಲಿಕ ನಿರ್ಗಮನದಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಸಂವಿಧಾನದ ಅನುಸರಣೆಗೆ ಆಗಿರುವ ಹಾನಿ ಹಾಗೂ ಒದಗಿರುವ ಅಪಾಯಗಳನ್ನು ಸೂಕ್ಷ್ಮವಾಗಿ ಗಮನಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ಏಕೆಂದರೆ ಅವರು ರೂಪಿಸಿದ ಸಾಂವಿಧಾನಿಕ ಮೂಲ ತತ್ವಗಳು ಇನ್ನು ಕೆಲವೇ ವರ್ಷಗಳಲ್ಲಿ ಗ್ರಾಂಥಿಕವಾಗಿಯೇ ಉಳಿದುಬಿಡುವ ಅಪಾಯ ಸ್ಪಷ್ಟವಾಗಿ ಕಾಣುತ್ತಿದೆ. ಸಂವಿಧಾನವನ್ನು ಬದಲಾಯಿಸುವ ಸಲುವಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಕೆಲವು ಬಿಜೆಪಿ ನಾಯಕರ ಹೇಳಿಕೆಗಳನ್ನು ಬದಿಗಿಟ್ಟು ನೋಡಿದರೂ, ಗ್ರಾಂಥಿಕವಾಗಿ ಭಾರತದ ಆಡಳಿತ ವ್ಯವಸ್ಥೆ ಸಂವಿಧಾನದ ಅಡಿಪಾಯದ ಮೇಲೆಯೇ ನಿರ್ವಹಿಸಲ್ಪಡುತ್ತಿದ್ದರೂ, ಸೈದ್ಧಾಂತಿಕವಾಗಿ ಹಾಗೂ ತಾತ್ವಿಕ ನೆಲೆಯಲ್ಲಿ ಆಳುವ ವರ್ಗಗಳು ರೂಪಿಸುವ ಸಾಮಾಜಿಕ-ಆರ್ಥಿಕ ನೀತಿಗಳು ಮತ್ತು ಸಾಂಸ್ಕೃತಿಕ ನಿರೂಪಣೆಗಳು  ಭಾರತವನ್ನು ಭಿನ್ನ ಹಾದಿಯಲ್ಲಿ ಕರೆದೊಯ್ಯುತ್ತಿವೆ.

 

ಪ್ರಜಾಸತ್ತೆಯ ರಕ್ಷಣೆಯ ದಿಕ್ಕಿನಲ್ಲಿ

 

      ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ʼ ಸಂವಿಧಾನ ಬದಲಾವಣೆ ʼ ಅಗತ್ಯವೇ ಇಲ್ಲ ಎನ್ನುವುದನ್ನು ಇಂದಿರಾಗಾಂಧಿಯ ತುರ್ತುಪರಿಸ್ಥಿತಿ ಸ್ಪಷ್ಟವಾಗಿ ನಿರೂಪಿಸಿತ್ತು. ಇಂದು ಬದಲಾದ ಭಾರತದಲ್ಲಿ ಈ ತಪ್ಪು ಹೆಜ್ಜೆ ಇಡದಿದ್ದರೂ ಸಹ, ಕಾಯ್ದೆ ಕಾನೂನುಗಳ ಮೂಲಕ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯ ಮೂಲಕ ಹಾಗೂ ಅಧಿಕಾರ ರಾಜಕಾರಣದ ಅಪಮೌಲ್ಯೀಕರಣದ ಮುಖಾಂತರ ಮೌಲಿಕ ನೆಲೆಯಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಹುದು ಎಂದು ನಿರೂಪಿಸಲಾಗುತ್ತಿದೆ. ಈ ಹೊಸ ನಿರೂಪಣೆ ಹಾಗೂ ಮನ್ವಂತರ ಪ್ರಕ್ರಿಯೆಗೆ ಅಗತ್ಯವಾದ ತಳಸಮುದಾಯಗಳ, ಶೋಷಿತರ ರಾಜಕೀಯ ಬೆಂಬಲ, ತಾತ್ವಿಕ ಮನ್ನಣೆ ಹಾಗೂ ಸಾಮಾಜಿಕ ಸ್ವೀಕೃತಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು ಇದೇ ಡಿಸೆಂಬರ್‌ 6, 1992ರಂದು.

 

    ಈ ಮನ್ವಂತರದ ಪೂರ್ವಸಿದ್ಧತೆಗಳು ಸೈದ್ಧಾಂತಿಕ ನೆಲೆಯಲ್ಲಿ ದಶಕಗಳ ಹಿಂದೆಯೇ ಚಾಲನೆ ಪಡೆದಿದ್ದರೂ, ತಳಸಮಾಜದಲ್ಲಿ ಬದುಕುವ ಹಕ್ಕು ಮತ್ತು ಘನತೆಗಾಗಿ ನಿರಂತರ ಹೋರಾಡುತ್ತಲೇ ಬಂದಿದ್ದ ಸಮಾಜಗಳನ್ನು ಹಾಗೂ ಸಮುದಾಯಗಳನ್ನು ಭಿನ್ನ ಸೈದ್ಧಾಂತಿಕ ಮಾದರಿಗಳ ಮೂಲಕ ಸೆಳೆದುಕೊಳ್ಳುವ ಅವಕಾಶ ಒದಗಿದ್ದು 1980ರ ದಶಕದ ನವ ಉದಾರವಾದಿ ಆರ್ಥಿಕ ನೀತಿಗಳು, ಮಂಡಲ-ಕಮಂಡಲ ಸಂಘರ್ಷ, ರಾಮಮಂದಿರ ವಿವಾದ ಹಾಗೂ 1991ರಲ್ಲಿ ಭಾರತ ಅಪ್ಪಿಕೊಂಡ ಜಾಗತೀಕರಣದ ನೀತಿಗಳ ಪರಿಣಾಮವಾಗಿ. ಈ ಮನ್ವಂತರದ ಫಲಾನುಭವಿಗಳನ್ನು ರಾಜಕೀಯವಾಗಿ ಬಿಜೆಪಿಯಲ್ಲಿ, ಸಾಂಸ್ಕೃತಿಕವಾಗಿ ಸಂಘಪರಿವಾರದಲ್ಲಿ ಹಾಗೂ ಆರ್ಥಿಕವಾಗಿ ಕಾರ್ಪೋರೇಟ್‌ ಔದ್ಯಮಿಕ ಜಗತ್ತಿನಲ್ಲಿ ಗುರುತಿಸಬಹುದು. ಡಿಸೆಂಬರ್‌ 6ರಂದು ಅಂಬೇಡ್ಕರ್‌ ಪರಿನಿಬ್ಬಾಣ ದಿನವನ್ನು ವೈಭವಯುತವಾಗಿ ಆಚರಿಸುವ, ಶ್ರದ್ಧಾಭಕ್ತಿಗಳಿಂದ ಸ್ಮರಿಸುವ ಭಾರತದ ದಲಿತ ಸಮುದಾಯ, ಈ ಮನ್ವಂತರದ ನಡುವೆ ಅಂಬೇಡ್ಕರ್‌ ಅವರ ಮೂಲ ತತ್ವಗಳನ್ನು ಹೇಗೆ ವ್ಯಾಖ್ಯಾನಿಸಿದೆ, ಹೇಗೆ ಅನುಸರಿಸುತ್ತಿದೆ, ಹೇಗೆ ಅಳವಡಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.

 

ಸಂವಿಧಾನದ ಮರುಶೋಧ

 

     ಈ ಉತ್ತರಗಳು ಸಂವಿಧಾನದಲ್ಲಿ ದೊರೆಯುವುದಿಲ್ಲ. ಅಥವಾ ವರ್ತಮಾನ ಭಾರತದ ಪಕ್ಷ ರಾಜಕಾರಣದ ಅಂಗಳದಲ್ಲಿ ಲಭ್ಯವಾಗುವುದಿಲ್ಲ. ಏಕೆಂದರೆ ಡಿಸೆಂಬರ್‌ 6ರಂದು ಎಲ್ಲ ರಾಜಕೀಯ ಪಕ್ಷಗಳೂ ಅತ್ಯಂತ ಶ್ರದ್ದಾಭಕ್ತಿಯಿಂದ ಅಂಬೇಡ್ಕರ್‌ ಅವರನ್ನು ಸ್ಮರಿಸುತ್ತವೆ. ಅನುಕರಣೆಗೂ ಆಚರಣೆಗೂ ಸಂಬಂಧ ಇರಬೇಕು ಎಂಬ ಔದಾತ್ಯವನ್ನು ಎಂದೋ ಮರೆತುಹೋಗಿರುವ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಇದು ಅಸಂಭವ ಎನಿಸುವುದಿಲ್ಲ. ನವಂಬರ್‌ 26ರ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಮಾಡಲಾಗಿರುವ ರಾಜಕೀಯ ಭಾಷಣಗಳಲ್ಲಿ , ಅಂಬೇಡ್ಕರ್‌ ಬಲವಾಗಿ ಪ್ರತಿಪಾದಿಸಿದ್ದ ʼಸಾಂವಿಧಾನಿಕ ನೈತಿಕತೆʼ ಎಷ್ಟು ನಾಯಕರಿಂದ ಪ್ರಸ್ತಾಪವಾಗಿದೆ ಎಂದು ಗಮನಿಸಿದರೆ, ಈ ಸೂಕ್ಷ್ಮ ಅರಿವಾಗುತ್ತದೆ. ಆಚರಣೆಯ ಸಂಭ್ರಮದಲ್ಲಿ ದಲಿತ ನಾಯಕರೂ ಸಹ ಪ್ರಮಾದ ಮಾಡಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

 

    ಏಕೆಂದರೆ 1992ರ ನಂತರದಲ್ಲಿ ರಾಜಕೀಯವಾಗಿ ಬಲಪಂಥೀಯತೆಯ ಕಡೆಗೆ ವಾಲಿರುವ ಬೃಹತ್‌ ದಲಿತ ಸಮುದಾಯ, ತಾತ್ವಿಕವಾಗಿ ಇಂದಿಗೂ ಅಂಬೇಡ್ಕರ್‌ ಅವರನ್ನು ಆರಾಧಿಸುತ್ತಲೇ ಬಂದಿದೆ. ಎರಡು ದೋಣಿಯಲ್ಲಿ ಕಾಲಿಟ್ಟು ಚಲಿಸುವ ಈ ಮಾದರಿ ಒಂದೆಡೆ ತಳಮಟ್ಟದ ಸಮಾಜದಲ್ಲಿ ಶೋಷಿತರ ನಡುವೆಯೇ ಬೇಲಿಗಳನ್ನು ನಿರ್ಮಿಸಿದ್ದರೆ ಮತ್ತೊಂದೆಡೆ ಅಂಬೇಡ್ಕರ್‌ ಅವರನ್ನು ಉತ್ಸವ ಮೂರ್ತಿಯಂತೆ ಆರಾಧಿಸುವ, ಭಜಿಸುವ ಹಾಗೂ Romanticise ಮಾಡುವ ಅವರ ಸೈದ್ಧಾಂತಿಕ ನೆಲೆಗಳನ್ನು ದುರ್ಬಲಗೊಳಿಸುವ ಹಾದಿಯಲ್ಲಿದೆ. ಭಾರತದ ಶೋಷಿತ ಜನತೆಗೆ, ಮಹಿಳೆಯರಿಗೆ ಹಾಗೂ ದುರ್ಬಲ ವರ್ಗಗಳಿಗೆ ಅಂಬೇಡ್ಕರರ ಪ್ರತಿಮೆ ಘನತೆಯ ಪ್ರತೀಕವಾಗಿ, ಸ್ವಾಭಿಮಾನದ ಸಂಕೇತವಾಗಿ  ಕಾಣುತ್ತದೆ.  ಆದರೆ ದಲಿತ ಚಳುವಳಿಗಳು ಹಾಗೂ ಬೌದ್ಧಿಕ ವಲಯಗಳು, ಈ ಸ್ಥಾವರಗಳಿಂದಾಚೆ ಇರುವ ವಾಸ್ತವಗಳತ್ತ ಗಮನಹರಿಸದೆ ಹೋದರೆ, ಅಂಬೇಡ್ಕರ್‌ ಅಂತಿಮವಾಗಿ ರಥಾರೂಢ ನಾಯಕರಾಗಿಯೇ ಉಳಿದುಬಿಡುವ ಅಪಾಯ ನಮ್ಮೆದುರಿದೆ.

      

ಆತ್ನವಿಮರ್ಶೆಯ ಅಗತ್ಯತೆ

 

     ಸಾಮಾನ್ಯ ಜನತೆಯನ್ನು ವಿಭಜಿಸಿ ಆಳುವ ಹಾಗೂ ಸಾಂಘಿಕವಾಗಿ ವಿಘಟನೆಗೊಳಪಡಿಸಿ ಯಜಮಾನಿಕೆಯನ್ನು ಸ್ಥಾಪಿಸುವ ರಾಜಕೀಯ ಪರಂಪರೆಯ ನಡುವೆ ನಾವು, ಅಂಬೇಡ್ಕರರನ್ನು ಆತ್ಮವಿಮರ್ಶಾತ್ಮಕ ನೆಲೆಯಲ್ಲಿ ನೋಡಬೇಕಿದೆ. ಇತ್ತೀಚಿನ ಬೆಳವಣಿಗೆಗಳಲ್ಲಿ ಜಾತಿ ಸಮೀಕ್ಷೆಯ ಸುತ್ತ ಉತ್ಪಾದಿಸಲಾಗಿರುವ ನಿರೂಪಣೆಗಳು ಹಾಗೂ ಒಳಮೀಸಲಾತಿಯ ಸುತ್ತ ನಿರ್ಮಿಸಲಾಗಿರುವ ಅಡ್ಡಗೋಡೆಗಳು, ದಲಿತ ಚಳುವಳಿಗೆ ಹಾಗೂ ಚಿಂತಕರಿಗೆ ಸವಾಲಾಗಿ ಪರಿಣಮಿಸಿರುವುದು ವಾಸ್ತವ. ಈ ಪ್ರಕ್ರಿಯೆಗಳು ಮೇಲ್ಜಾತಿಗಳಲ್ಲಿ ಸೃಷ್ಟಿಸಿರುವ ಆತಂಕಗಳನ್ನು ಹಾಗೂ ಮಾರುಕಟ್ಟೆ ಆರ್ಥಿಕತೆಯಲ್ಲಿ ಉಂಟುಮಾಡಿರುವ ತಲ್ಲಣಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾವು ಅಂಬೇಡ್ಕರ್‌ ಅವರನ್ನು ಅನಿವಾರ್ಯವಾಗಿ, ತಾತ್ವಿಕವಾಗಿ ಒಳಗಿಳಿಸಿಕೊಳ್ಳಬೇಕಾಗುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಈ ತ್ರಿವಳಿ ಸಾಧನಗಳನ್ನೂ ಔದ್ಯಮಿಕ ಮಾರುಕಟ್ಟೆಯ ಅಧೀನಕ್ಕೆ ಒಳಪಡಿಸಲಾಗುತ್ತಿರುವ ಸಂದರ್ಭದಲ್ಲಿ, ಅಂಬೇಡ್ಕರ್‌ ವ್ಯಾಖ್ಯಾನಿಸಿದ ಸಾಂವಿಧಾನಿಕ ಆಳ್ವಿಕೆಯ ಮಾದರಿಯು ಕ್ರಮೇಣ ಶಿಥಿಲವಾಗುತ್ತಿರುವ ಅಪಾಯವನ್ನೂ ನಾವು ಗ್ರಹಿಸಬೇಕಿದೆ.

 

     ಈ ವಿಷಮ ವಾತಾವರಣದಲ್ಲಿ ನಾವು ʼ ವಿಕಸಿತ ʼ ಆಗುವತ್ತ ಸಾಗುತ್ತಿರುವ ನವ ಭಾರತದ ಮಿಲೆನಿಯಂ ಯುವ ಸಮಾಜದ ಕಡೆಗೆ ದೃಷ್ಟಿ ಹಾಯಿಸಿದಾಗ, ನಮ್ಮ ಆತಂಕಗಳು ಸಹಜವಾಗಿಯೇ ಹೆಚ್ಚಾಗುತ್ತವೆ. ಏಕೆಂದರೆ 1980-90ರ ರಾಜಕೀಯ ಬೆಳವಣಿಗೆಗಳು-ಸಾಂಸ್ಕೃತಿಕ ಪಲ್ಲಟಗಳು-ಆರ್ಥಿಕ ನೀತಿಗಳಿಂದ ಪ್ರಭಾವಿತವಾಗಿರುವ ಯುವ ಸಮಾಜದ ಒಂದು ದೊಡ್ಡ ಭಾಗ ರಾಜಕೀಯವಾಗಿ ಬಿಜೆಪಿ ನೇತೃತ್ವದ ಬಲಪಂಥೀಯತೆಯೆಡೆಗೆ ವಾಲಿದ್ದರೆ, ಸಾಂಸ್ಕೃತಿಕವಾಗಿ ಸಂಘಪರಿವಾರದ ಅನುಯಾಯಿಗಳಾಗಿ, ತುಡುಗು ಪಡೆಗಳಾಗಿ (Fringe Elementş) , ಪದಾತಿ ದಳದ ಭಾಗವಾಗಿ ಮನ್ವಂತರದ ಹಾದಿಯಲ್ಲಿದೆ. ಈ ಸಮಾಜವನ್ನು ಅಂಬೇಡ್ಕರ್‌ವಾದದ ಕಡೆಗೆ ಕರೆತರುವ ನೈತಿಕ ಜವಾಬ್ದಾರಿ ಯಾರದು ? ದಲಿತ ರಾಜಕಾರಣದ ವಾರಸುದಾರರದೋ, ಸಂವಿಧಾನ ರಕ್ಷಣೆಗಾಗಿ ನಿರಂತರ ಹೋರಾಡುತ್ತಿರುವ ಸಂಘಟನೆಗಳದ್ದೋ ಅಥವಾ ದಲಿತ ಚಳುವಳಿಗಳದೋ ?

 

     ಇದು ಸಾಧ್ಯವಾಗಬೇಕಾದರೆ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರನ್ನು ಆಚರಣಾತ್ಮಕ ಸಂಕೋಲೆಗಳಿಂದ ಬಿಡಿಸಬೇಕಿದೆ. ಏಳು ದಶಕಗಳಲ್ಲಿ ಸಂವಿಧಾನದ ಫಲಾನುಭವಿಗಳಾಗಿ, ಸುಭದ್ರ ನೆಲೆ ಕಂಡಿರುವ ಸಮಾಜಗಳು ಹಾಗೂ ಅದರೊಳಗಿನ ಮೇಲ್ಪದರದ ಸಮುದಾಯಗಳು ಈ ವಿಮೋಚನೆಯ ಹಾದಿಯಲ್ಲಿ ಮುಂಚೂಣಿಯಲ್ಲಿರಬೇಕಾಗುತ್ತದೆ. ಇದು ಕಾರ್ಯಗತವಾಗಬೇಕಾದರೆ, ಸೈದ್ಧಾಂತಿಕ ಸಮೀಪ ದೃಷ್ಟಿಯಿಂದ ಮುಕ್ತವಾಗುವುದು ಅನಿವಾರ್ಯ. ಏಕೆಂದರೆ ನವ ಉದಾರವಾದ ಸೃಷ್ಟಿ ಮಾಡುತ್ತಿರುವ ಶೋಷಣೆ ಮತ್ತು ಅಸಮಾನತೆಗಳನ್ನು ಎದುರಿಸಿ, ಪಾರು ಮಾಡುವ ಮಾರ್ಗದಲ್ಲಿ ಮಾರ್ಕ್ಸ್‌ವಾದದ ವರ್ಗ ಸಂಘರ್ಷದ ಆಲೋಚನೆಗಳು, ಗಾಂಧಿವಾದದ ಅಹಿಂಸಾತ್ಮಕ ಪ್ರತಿರೋಧದ ಮಾದರಿಗಳು ಹೋರಾಟದ ಅಸ್ತ್ರಗಳಾಗಿ ಪರಿಣಮಿಸುತ್ತವೆ. ಈ ತಾತ್ವಿಕ ವೈಶಾಲ್ಯವನ್ನು ಅಳವಡಿಸಿಕೊಳ್ಳುವುದು ವರ್ತಮಾನದ ತುರ್ತು ಎನ್ನುವುದನ್ನು ದಲಿತ ಚಳುವಳಿಗಳು ಅರ್ಥಮಾಡಿಕೊಳ್ಳಬೇಕಿದೆ.

 

ಭಿನ್ನ ವಿಚಾರಧಾರೆಗಳ ಒಳಗೊಳ್ಳುವಿಕೆ

 

     ವಿಪರ್ಯಾಸವೆಂದರೆ ದಲಿತ ಸಮಾಜಗಳನ್ನು ಪ್ರತಿನಿಧಿಸುವ ಬಹುತೇಕ ಸಂಘಟನೆಗಳು ತಮ್ಮ ತಾತ್ವಿಕ ಚೌಕಟ್ಟುಗಳಿಗೆ ಅಭೇದ್ಯ ಗೋಡೆಗಳನ್ನು ನಿರ್ಮಿಸಿಕೊಂಡಿವೆ. ಈ ಗೋಡೆಗಳಿಂದಾಚೆಗೂ ಅಂಬೇಡ್ಕರ್‌ ಅವರನ್ನು ಮರುವ್ಯಾಖ್ಯಾನ ಮಾಡುವ ಅವಶ್ಯಕತೆ ಇಂದು ಹೆಚ್ಚಾಗಿದೆ. ವಿಶ್ವದ ಯಾವುದೇ ಸಮಾಜದಲ್ಲಿ ಚರಿತ್ರೆಯಲ್ಲಿ ಆಗಿಹೋದ ದಾರ್ಶಕನಿಕರ ಪುರೋಗಾಮಿ, ಜನಪರ, ಸಮಾಜುಮುಖಿ ಚಿಂತನೆಗಳನ್ನು ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಗಿಸಿ, ಪರಿಹಾರೋಪಾಯಗಳನ್ನು ಶೋಧಿಸುವಾಗ, ನಮ್ಮ ಆಲೋಚನಾ ವಿಧಾನಗಳು ಆದಷ್ಟೂ ಮುಕ್ತವಾಗಿರಬೇಕಾಗುತ್ತದೆ. 78 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತ ಸಾಗಿಬಂದಿರುವ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ನಮಗೆ ಗೋಚರಿಸುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಬೌದ್ಧಿಕ ಆಲೋಚನಾ ವಿಧಾನಗಳು ವೈವಿಧ್ಯತೆಯೊಂದಿಗೆ ಎದುರಾಗುತ್ತವೆ. ಇವೆಲ್ಲವನ್ನೂ ಎದುರಿಸಿ ಭವಿಷ್ಯದ ಯುವ ಜನತೆಗೆ ಒಂದು ಸುಂದರ ಸಮಾಜವನ್ನು ಕಟ್ಟಿಕೊಡಬೇಕಾದರೆ, ಸ್ವಾತಂತ್ರ್ಯಾಮುನ್ನ ತಮ್ಮ ಉದಾತ್ತ, ಉನ್ನತ ಚಿಂತನೆಗಳನ್ನು ಬೋಧಿಸಿ ನಿರ್ಗಮಿಸಿರುವ ಹಲವು ಚಿಂತಕರ ಆಲೋಚನೆಗಳನ್ನೂ ಮರುವ್ಯಾಖ್ಯಾನ ಮಾಡಬೇಕಾಗುತ್ತದೆ.

 

     ಚಾರಿತ್ರಿಕ ಕಾಲಘಟ್ಟದಲ್ಲಿ ಈ ದಾರ್ಶನಿಕರ ನಡುವೆ ಸಹಜವಾಗಿ ಇದ್ದಿರಬಹುದಾದ ತಾತ್ವಿಕ-ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ವರ್ತಮಾನದ ಸಂದರ್ಭದಲ್ಲಿ ಅನ್ವಯಿಸದೆ ಇರಬಹುದು. ಅಥವಾ ಅಂಬೇಡ್ಕರ್‌ ಒಬ್ಬರಲ್ಲೇ ಸಮಕಾಲೀನ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಿಕ್ಕುಗಳಿಗೆ ಪರಿಹಾರ ದೊರೆಯದೆ ಇರಬಹುದು. ಏಕೆಂದರೆ ಮೂರು ನಾಲ್ಕು ತಲೆಮಾರುಗಳನ್ನು ದಾಟಿ ಬಂದಿರುವ ನವ ಭರತ ಹೊಸ ಆಡಳಿತಾತ್ಮಕ ಮಾದರಿಗಳನ್ನು ಅಪೇಕ್ಷಿಸುತ್ತಿದೆ. ಈ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ರೂಪಿಸಲಾಗುವುದಿಲ್ಲ, ನಾವು ಬದುಕುತ್ತಿರುವ ಸಮಾಜದ ನಡುವೆಯೇ ನಿರ್ವಚಿಸಬೇಕು. ಡಾ. ಅಂಬೇಡ್ಕರ್‌ ಪದೇಪದೇ ಹೇಳುತ್ತಿದ್ದಂತೆ ಎಲ್ಲರನ್ನೊಳಗೊಳ್ಳುವ ಮಾದರಿಗಳನ್ನು ಕಟ್ಟಿಕೊಡಬೇಕು. ನೆಹರೂ ಆರ್ಥಿಕತೆಯಿಂದ ಡಿಜಿಟಲ್‌ ಆರ್ಥಿಕತೆಯವರೆಗೆ ಕ್ರಮಿಸಿರುವ ದಾರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಜಾತಿ ಕೇಂದ್ರಿತ ಸಾಮಾಜಿಕ ಹಾಗೂ ಆರ್ಥಿಕ ಶೋಷಣೆಗಳು ರೂಪಾಂತರಗೊಂಡು, ಹೊಸ ಸವಾಲುಗಳನ್ನು ಸೃಷ್ಟಿಸುತ್ತಿವೆ. ಬಲಪಂಥೀಯ ಸಾಂಸ್ಕೃತಿಕ ರಾಜಕಾರಣಕ್ಕೆ ತುತ್ತಾಗಿರುವ ಮಿಲೆನಿಯಂ ಸಮಾಜಕ್ಕೆ ಇತಿಹಾಸದ ಅರಿವು, ವರ್ತಮಾನದ ಪ್ರಜ್ಞೆ ಮತ್ತು ಭವಿಷ್ಯದ ಉದಾತ್ತ ಕಲ್ಪನೆಗಳನ್ನು ಪರಿಚಯಿಸಬೇಕಿದೆ.

 

      ಡಾ. ಬಿ. ಆರ್.‌ ಅಂಬೇಡ್ಕರ್‌ ಈ ದೃಷ್ಟಿಯಿಂದ ಇಂದಿನ ಭಾರತಕ್ಕೆ ಹೆಚ್ಚು ಪ್ರಸ್ತುತ ಎನಿಸುತ್ತಾರೆ. ಆದರೆ ಏಕಾಂಗಿಯಾಗಿ ಅಲ್ಲ. ಅವರು ಮುನ್ನಡೆಸುವ ಬೌದ್ಧಿಕ ರಥವನ್ನು ಸಂವಿಧಾನದ ಸಾರಥ್ಯದಲ್ಲಿ ಚಲನೆಯಲ್ಲಿರಿಸಲು, ಮಾರ್ಕ್ಸ್‌, ಗಾಂಧಿ, ಲೋಹಿಯಾ, ಪೆರಿಯಾರ್‌, ಠಾಗೋರ್‌, ವಿವೇಕಾನಂದ ಇನ್ನಿತರ ಸೈದ್ಧಾಂತಿಕ ಆಲೋಚನೆಗಳು ಗಾಲಿಗಳಂತೆ ನೆರವಾಗುತ್ತವೆ. ಈ ಗಾಲಿಗಳನ್ನು ತಾತ್ವಿಕ ಕಾರಣಗಳಿಗಾಗಿ ನಿರಾಕರಿಸಿದಷ್ಟೂ, ರಥದ ಚಲನೆ ನಿಧಾನವಾಗುತ್ತದೆ. ಕೊನೆಗೊಂದು ದಿನ ಸ್ಥಗಿತಗೊಳ್ಳುತ್ತದೆ ಅಥವಾ ಪಲ್ಲಟಗೊಳ್ಳುತ್ತದೆ. ಈ ವಿಶಾಲ ಹಂದರದ  ಆಲೋಚನೆಯೊಂದಿಗೆ ಅಂಬೇಡ್ಕರ್‌ ಪರಿನಿಬ್ಬಾಣ ದಿನವನ್ನು ನಾವು ಆಚರಿಸಬೇಕಿದೆ. ಇಲ್ಲವಾದರೆ ನಾವು ಚರಿತ್ರೆಯನ್ನೇ ಸಂಭ್ರಮಿಸುತ್ತಾ, ಅಂಬೇಡ್ಕರ್‌ ಕಟ್ಟಿದ ಕನಸುಗಳನ್ನು ನಿರ್ಲಕ್ಷಿಸುತ್ತಲೇ ಹೋಗುತ್ತೇವೆ. ಸಂಘಪರಿವಾರ-ಬಲಪಂಥೀಯ ರಾಜಕಾರಣದ ಮಿಥ್ಯೆಗಳು, ಕನಸುಗಳು ಚಿಗುರುತ್ತಾ ಹೆಮ್ಮರವಾಗುತ್ತವೆ.

 

    ವರ್ತಮಾನದ ಭಾರತದಲ್ಲಿ ನಮ್ಮ ಬೌದ್ಧಿಕ ದಾರಿದ್ರ್ಯಗಳನ್ನು ತೊಡೆದುಹಾಕಿ, ಕೊರತೆಗಳನ್ನು ನೀಗಿಸಿಕೊಂಡು, ವಿಚಾರ ಬೇಲಿಗಳನ್ನು ಕಿತ್ತುಹಾಕಿ, ಸಮನ್ವಯದ ಸುಂದರ ತೋಟ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ನಿಭಾಯಿಸುವುದಾಗಿ, ಅಂಬೇಡ್ಕರ್‌ ಪರಿನಿಬ್ಬಾಣದ ದಿನ ಸಂಕಲ್ಪ ಮಾಡುವುದು, ಆ ದಾರ್ಶನಿಕನಿಗೆ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ ಆಗುತ್ತದೆ.  ಈ ಚಾರಿತ್ರಿಕ ಸಾಮಾಜಿಕ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಹೆಗಲುಗಳು ಕೂಡಬೇಕಿದೆ. ಕೈಗಳನ್ನು ಜೋಡಿಸಬೇಕಿದೆ. ಮನಸ್ಸುಗಳನ್ನು ಸಮೀಕರಿಸಬೇಕಿದೆ. ಆಗ ನಮಗೆ ಅಂಬೇಡ್ಕರ್‌ ಪ್ರತಿಮೆಯನ್ನು ದಾಟಿದ ಲೋಕ ದರ್ಶನವಾಗುತ್ತದೆ ಇದು ಸಮಕಾಲೀನ ಕರ್ತವ್ಯ, ಚಾರಿತ್ರಿಕ ಜವಾಬ್ದಾರಿ.

-೦-೦-೦-೦-೦-